ವಿಧುರನ ಬದುಕು

 

ಡಾ. ತ್ರಿಯಂಬಕ ತಾಪಸ

 

 

 

ಅಳಿಸಲು ಕುಂಕುಮವಿಲ್ಲ

ಕಳಚಲು ಮಾಂಗಲ್ಯವಿಲ್ಲ

ಬಿಚ್ಚಲು ಬಳೆಗಳಿಲ್ಲ

ಇರಿಯುವ ಕತ್ತಲು

ಬಿಗಿದಪ್ಪಿದ ಒಂಟಿತನ

ಗುರಿ ತಪ್ಪಿಸುವ ದಾರಿ

ಇದು ವಿಧುರನ ಬದುಕು

ಮುಕ್ಕಾಲು ಸವೆದ ದಾರಿಯಲ್ಲಿ

ಮುರಿದು ನಿಂತ ಏಕ ಚಕ್ರದ ಬಂಡಿ

ಸುತ್ತಲೂ ಜಗದ ಗೌಜು

ಇಣುಕಿಣುಕಿ ಓಡುವ ಜನ

ಬೆಳಗು-ಬೈಗು, ಬೈಗು-ಬೆಳಗು

ಹೆಪ್ಪುಗಟ್ಟಿದ ನೋವು

ಇದು ವಿಧುರನ ಬದುಕು

ಅವ್ವ ಕೆಲವರಿಗೆ

ತಂಗಿ ಹಲವರಿಗೆ

ಅಕ್ಕ ಮಿಕ್ಕವರಿಗೆ

ಹೆಂಡತಿ ಒಬ್ಬನಿಗೆ

ಎಲ್ಲ ಕಡಿದು ಕಳಿಸಿ ಕೊಟ್ಟು

ಕಟ್ಟಿಕೊಂಡು ನಡೆಸುತ್ತಿದ್ದ

ಬಾಳು ನುಚ್ಚು ನೂರು

ಇದು ವಿಧುರನ ಬದುಕು

ನಡೆದ ಹಾದಿ ದೀರ್ಘ

ಉಳಿದುದದೋ ಚಿಕ್ಕದು

ಬಾಳ ನೆನಪ ಬುತ್ತಿ ತಿಂದು

ಎದ್ದು ಬಿದ್ದು, ಬಿದ್ದು ಎದ್ದು

ಕೊನೆಯ ಚಣವ ನಿರುಕಿಸುತ್ತ

ಸವೆಸುವದುಳಿದ ದಾರಿ

ಇದು ವಿಧುರನ ಬದುಕು

ಹಗಲು ರಾತ್ರಿ

ರಾತ್ರಿ ಹಗಲು

ಅದೇ ಧ್ಯಾನ

ಅದೇ ಗುಣಗಾನ

ಸಃಶ್ವಾಸವಿರುವನಕ ನನ್ನಲ್ಲಿ ಶಿವನು

ನಿಃಶ್ವಾಸನಾದೊಡನೆ ಶಿವನಲ್ಲಿ ನಾನು

ಇದೇ ವಿಧುರನ ಬದುಕು.

ಡಾ. ತ್ರಿಯಂಬಕ ತಾಪಸ

Leave a Reply

Your email address will not be published.