ವಿಭಿನ್ನ ಇತಿಹಾಸಕಾರ ಪ್ರೊ.ಷ.ಶೆಟ್ಟರ್

 

ವಿಭಿನ್ನ ಇತಿಹಾಸಕಾರ ಮತ್ತು ಬರಹಗಾರರಾದ ಪ್ರೊ.ಷ.ಶೆಟ್ಟರ್‍ರವರಿಗೆ ಶ್ರದ್ಧಾಂಜಲಿ ಅರ್ಪಿಸುವುದೆಂದರೆ ಅವರು ಒಬ್ಬ ಬರಹಗಾರರಾಗಿ ಮತ್ತು ದಕ್ಷಿಣ ಭಾರತದ ಕಲೆಯ ಇತಿಹಾಸ, ಅಭಿಜಾತ ಕನ್ನಡ ಭಾಷೆ ಮತ್ತು ಸಂಸ್ಕøತಿಯ ಸಂಶೋಧಕರಾಗಿ ರೂಪುಗೊಂಡ ಬಗೆಯನ್ನು ಪುನರ್‍ರಚಿಸುವುದೆಂದು ನಾವು ನಂಬುತ್ತೇವೆ. ಅವರ ಸಂಶೋಧನಾ ಆಸಕ್ತಿಯು ಚರಿತ್ರೆ, ಪ್ರಾಕ್ತನಶಾಸ್ತ್ರ, ಕಲೆಯ ಇತಿಹಾಸ, ದರ್ಶನ ಶಾಸ್ತ್ರ, ಜೈನ ಜೀವನ ಶೈಲಿ, ಶಾಸನಶಾಸ್ತ್ರ, ಅಭಿಜಾತ ಕನ್ನಡದಂತಹ ವಿವಿಧ ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿತ್ತು. ಈಗಾಗಲೇ ಪ್ರಕಟಗೊಂಡ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಮತ್ತು ನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನೊಳಗೊಂಡು ಅವರು ಕೈಗೆತ್ತಿಕೊಂಡ ಮತ್ತಿತರೆ ಅಪೂರ್ಣ ಅಧ್ಯಯನದ ಯೋಜನೆಗಳು ಭಾರತದಲ್ಲಿ ಚರಿತ್ರೆಯ ಅಧ್ಯಯನಕ್ಕೆ ಅವರು ಕೊಟ್ಟ ಕೊಡುಗೆಯನ್ನು ಪ್ರತಿಬಿಂಬಿಸುತ್ತವೆ. ಅವರ ಪ್ರತಿಭೆ ಮತ್ತು ಮಹತ್ವಾಕಾಂಕ್ಷಿ ಮನೋವೃತ್ತಿಯ ಜೊತೆಗೆ ಅವರ ಕಾಲದ ಬೌದ್ಧಿಕ ವಾತಾವರಣಲ್ಲಿ ಶೆಟ್ಟರ್ ಅವರು ತಮ್ಮ ಚಿಂತನಾ ಕ್ರಮವನ್ನು ಬೆಸುಗೆಗೊಳಿಸಿದ್ದರು. ಹಾಗಾಗಿ, ಬಾಲ್ಯಾವಸ್ಥೆಯಿಂದ ಹಿಡಿದು ಇತ್ತೀಚಿನ ವಿದ್ವತ್‍ಪೂರ್ಣ ಅನ್ವೇಷಣೆಗಳವರೆಗಿನ ಅವರ ಬೌದ್ಧಿಕ ಬೆಳವಣಿಗೆಯನ್ನು ಅದರಲ್ಲಿಯೂ ಮುಖ್ಯವಾಗಿ ಮೈಸೂರು ಮತ್ತು ಧಾರವಾಡದಲ್ಲಿನ ಅವರ ಬೌದ್ಧಿಕ ನಿರ್ಮಾಣವನ್ನು ಈ ಲೇಖನ ನಿರೂಪಿಸುತ್ತದೆ. ಓದು, ಅಧ್ಯಯನ ಮತ್ತು ಬರವಣಿಗೆ ಬಗೆಗೆ ಅವರಿಗಿದ್ದ ಉತ್ಸಾಹ ನಮಗೆ ಸ್ಫೂರ್ತಿ ನೀಡುತ್ತದೆ. ಸಂಶೋಧನೆಯ ಬಗ್ಗೆ ಅವರಿಗಿದ್ದ ಶ್ರದ್ಧೆ ನಾವು ಅನ್ವೇಷಕರಾಗುವಂತೆ ಪ್ರೇರೇಪಿಸುತ್ತದೆ. ಶೆಟ್ಟರ್ ಅವರೇ ಬಳಸಿದ ರೂಪಕದ ಭಾಷೆಯಲ್ಲಿ ಹೇಳುವುದಾದರೆ, ಸಂಶೋಧನೆ ಎನ್ನುವುದು ಅಲ್ಪ ವಿರಾಮ, ಪೂರ್ಣ ವಿರಾಮವಲ್ಲ. ಅಂದರೆ ಸಂಶೋಧನೆ ಎನ್ನುವುದು ಅಂತ್ಯವೇ ಇಲ್ಲದ ಅನ್ವೇಷಣೆಯಾಗಿದೆ.

ಇಂಗ್ಲಿಶ್ ಮೂಲ:

ಡಾ.ಎನ್.ಎಸ್.ಗುಂಡೂರ

ಪ್ರೊ. ರವಿ ಕೋರಿಶೆಟ್ಟರ

ಬೌದ್ಧಿಕ ವಲಯದಲ್ಲಿ ಷ.ಶೆಟ್ಟರ್ ಎಂದೇ ಹೆಸರಾಗಿರುವ ಷಡಕ್ಷರಿ ಶೆಟ್ಟರ್ (1935-2020) ಅವರು ಚರಿತ್ರೆಯ ಸಂಶೋಧನೆಗಳ ಜ್ಞಾನ ಭಂಡಾರವನ್ನು ಮತ್ತು ಮುಂದಿನ ಪೀಳಿಗೆಯ ಸಂಶೋಧಕರಿಗೆ ದೊಡ್ಡ ಸ್ಪೂರ್ತಿಯನ್ನು ಬಿಟ್ಟು, ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಬದ್ಧತೆಯ ಸಂಶೋಧಕ ಮತ್ತು ಬರಹಗಾರರಾದ ಪ್ರೊ. ಶೆಟ್ಟರ್‍ರವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ 1960 ರಿಂದ 1996ರವರೆಗೆ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದಿದ್ದಲ್ಲದೇ, ದಕ್ಷಿಣ ಭಾರತದ ಕಲೆ ಮತ್ತು ವಾಸ್ತುಶಿಲ್ಪ (ಹೊಯ್ಸಳ ದೇವಾಲಯಗಳನ್ನು ಅನುಲಕ್ಷಿಸಿ) ಕುರಿತು ಸಂಶೋಧನೆ ನಡೆಸಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಮತ್ತೊಂದು ಪಿ.ಎಚ್‍ಡಿ ಪದವಿ ಪಡೆದರು. ಅವರ ಸಂಶೋಧನಾ ಆಸಕ್ತಿಯು ಇತಿಹಾಸ, ಪ್ರಾಕ್ತನಶಾಸ್ತ್ರ, ಕಲೆಯ ಚರಿತ್ರೆ, ದರ್ಶನ ಶಾಸ್ತ್ರ, ಜೈನ ಜೀವನ ಶೈಲಿ, ಶಾಸನಶಾಸ್ತ್ರ, ಅಭಿಜಾತ ಕನ್ನಡದಂತಹ ವಿವಿಧ ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿತ್ತು. ಈಗಾಗಲೇ ಪ್ರಕಟಗೊಂಡ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳ ಮತ್ತು ನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳ ಜೊತೆಗೆ ಅವರು ಕೈಗೆತ್ತಿಕೊಂಡಿದ್ದ ಇತರೆ ಅಪೂರ್ಣ ಯೋಜನೆಗಳು ಭಾರತದಲ್ಲಿ ಐತಿಹಾಸಿಕ ಅಧ್ಯಯನಕ್ಕೆ ಅವರು ಕೊಟ್ಟ ಕೊಡುಗೆಯೆನ್ನು ಸಾರಿ ಹೇಳುತ್ತವೆ.

ಶೆಟ್ಟರ್‍ರವರು ಹಲವು ಶೈಕ್ಷಣಿಕ ಉನ್ನತ ಹುದ್ದೆಗಳನ್ನೂ ನಿಭಾಯಿಸಿದ್ದಾರೆ. ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್(ಐ.ಸಿ.ಎಚ್.ಆರ್) ಸೇರಿದಂತೆ ಇತರೆ ಶ್ರೇಷ್ಠ ಸಾರ್ವಜನಿಕ ಸಂಸ್ಥೆಗಳಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.  ಹೈಡಲ್‍ಬರ್ಗ್, ಶಿಕಾಗೊ, ಬರ್ಲಿನ್, ಹಾರ್ವರ್ಡ್‍ನಂತಹ ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಶೆಟ್ಟರ್ ಅವರು, ಮರಣ ಹೊಂದಿದ ಸಮಯದಲ್ಲಿ ಬೆಂಗಳೂರಿನ ನಿಯಾಸ್(ಎನ್‍ಐಎಎಸ್)ನಲ್ಲಿ ಡಾ.ಎಸ್.ರಾಧಾಕೃಷ್ಣನ್ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅವರ ವಿದ್ವತ್ ಮತ್ತು ಐತಿಹಾಸಿಕ ಸಂಶೋಧನೆಗಳನ್ನು ಗುರ್ತಿಸಿ ಇಪ್ಪತ್ತಕ್ಕೂ ಹೆಚ್ಚು ಪ್ರಶಸ್ತಿಗಳು ಅವರಿಗೆ ಸಂದಿವೆ.

ಸ್ವತಂತ್ರಪೂರ್ವ ಭಾರತದ ಕನ್ನಡ ಭಾಷಾ ಪ್ರಾಂತ್ಯದ ಮೂಲೆಯೊಂದರಿಂದ ಬಂದ ಹಳ್ಳಿಗಾಡಿನ ಹುಡುಗ ಷಡಕ್ಷರಿ ಮುಂದೆ ಒಬ್ಬ ಪ್ರಮುಖ ಇತಿಹಾಸಕಾರನಾಗಿ  ರೂಪುಗೊಂಡ ಕತೆ ಕುತೂಹಲಕಾರಿಯಾಗಿದೆ. ತಮ್ಮ ವೈಯಕ್ತಿಕ ಪ್ರತಿಭೆ ಹಾಗೂ ಮಹತ್ವಾಕಾಂಕ್ಷೆಯ ಜೊತೆ ಅವರ ಕಾಲದ ಒತ್ತಡಗಳು ಅವರನ್ನು ರೂಪಿಸಿದ್ದವು. ಈ ಲೇಖನದ ಮೂಲಕ ಪ್ರೊಫೆಸರ್ ಷ. ಶೆಟ್ಟರ್ ಅವರಿಗೆ ಗೌರವ ಸಮರ್ಪಣೆ ಮಾಡುವುದೆಂದರೆ ಅವರು ಒಬ್ಬ ಇತಿಹಾಸಕಾರರಾಗಿ, ಕನ್ನಡ ಭಾಷೆ ಮತ್ತು ಸಂಸ್ಕøತಿಯ ಸಂಶೋಧಕರಾಗಿ ರೂಪುಗೊಂಡ ಬಗೆಯನ್ನು ಪುನರ್ ಕಟ್ಟಿಕೊಡುವುದು ಎಂದು ನಾವು ಪರಿಭಾವಿಸುತ್ತೇವೆ. 

ಬಾಲ್ಯ ಮತ್ತು ಆರಂಭಿಕ ಶಿಕ್ಷಣ

ಶೆಟ್ಟರ್‍ರವರು ಅಂದಿನ ಮದ್ರಾಸ್ ಪ್ರಾಂತ್ಯದ, ಇಂದಿನ ಹೈದರಾಬಾದ್-ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹಂಪಸಾಗರ ಎಂಬ ಸಣ್ಣ ಗ್ರಾಮದಲ್ಲಿ ಡಿಸೆಂಬರ್ 11, 1935ರಲ್ಲಿ ಜನಿಸಿದರು. ನಂತರದಲ್ಲಿ ಈ ಗ್ರಾಮ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಯಿತು. ಲಿಂಗಾಯತ ಸಂಪ್ರದಾಯದ ಜಮೀನ್ದಾರ್ ಕುಟುಂಬದಲ್ಲಿ ಹುಟ್ಟಿದ ಶೆಟ್ಟರ್‍ರವರು, ತಮ್ಮ ತಂದೆಯವರು ವ್ಯಾಪಾರದಲ್ಲಿ ವಿಫಲರಾಗಿ, ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಾ ಹೊದಂತೆ ಕಷ್ಟಗಳನ್ನು ಎದುರಿಸಬೇಕಾಯಿತು. ಕನ್ನಡ ಸಂಸ್ಕøತಿ ವಿಮರ್ಶಕ ರಹಮತ್ ತರೀಕೆರೆಯವರಿಗೆ ನೀಡಿದ ಸಂದರ್ಶನವೊಂದರಲ್ಲಿ ಶೆಟ್ಟರ್‍ರವರು, ‘ತಮ್ಮ ಕುಟುಂಬ ಬಡತನ ಅನುಭವಿಸುತ್ತಿದ್ದರೂ ಶ್ರೀಮಂತ ಮನೆತನವೆಂದು ಗುರುತಿಸಿಕೊಂಡಿದ್ದನ್ನು, ಹಾಗೂ ಒಂದು ಕಾಲದಲ್ಲಿ ಸ್ವಂತ ಕುದುರೆಗಳು ಮತ್ತು ಆನೆಯನ್ನು ಹೊಂದಿದ್ದ ಕುಟುಂಬ ಕಡುಬಡತನವನ್ನು ಅನುಭವಿಸುತ್ತಿದ್ದರೂ  ಸಾರ್ವಜನಿಕರ ಅಭಿಪ್ರಾಯದಲ್ಲಿ ಅವರದು ಶ್ರೀಮಂತ ಜಮೀನ್ದಾರಿ ಕುಟುಂಬವೆಂಬ ಚಿತ್ರಣವನ್ನು ಕಳೆದುಕೊಳ್ಳÀಲಿಲ್ಲ’ ಎಂಬುದನ್ನು ಮೆಲುಕು ಹಾಕುತ್ತಾರೆ (ತರೀಕೆರೆ, 2011:272). ಊಳಿಗಮಾನ್ಯ ಮತ್ತು ಜಮೀನ್ದಾರಿ ಪದ್ಧತಿ ಪತನವಾಗುತ್ತ,  ಸಾಂಪ್ರದಾಯಕ ಭಾರತೀಯ ಜೀವನವು  ವಸಾಹತುಶಾಹಿಯ ಆಧುನಿಕತೆಗೆ ಒಡ್ಡುಗೊಳ್ಳುತ್ತಿರುವ ಕಾಲಘಟ್ಟದಲ್ಲಿ  ಶೆಟ್ಟರ್  ಬೆಳೆದ ಬಂದರು.  

ಹಂಪಸಾಗರದಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಹೊಸಪೇಟೆಯ ಮುನಿಸಿಪಲ್ ಹೈಸ್ಕೂಲ್‍ನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ, ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಶೆಟ್ಟರ್ ಅವರು  ಇಂಟರ್‍ಮಿಡಿಯೆಟ್‍ನ್ನು ಪೂರ್ಣಗೊಳಿಸಿದರು. ಆ ದಿನಗಳಲ್ಲಿ ನಾಟಕರಂಗ ಮತ್ತು ಸಾಹಿತ್ಯದಂತಹ ಮಾನವಿಕ  ಆಚರಣೆಗಳೆಡೆಗೆ ಅವರು ಹೆಚ್ಚು ಆಕರ್ಷಿತರಾಗಿದ್ದರು. ತಮ್ಮ ಶಾಲಾ ದಿನಗಳಲ್ಲಿ  ಲವಲವಿಕೆಯಿಂದ ಇರುತ್ತಿದ್ದ ತುಂಟ ಶೆಟ್ಟರ್‍ರವರು ತನ್ನ ಅಣ್ಣನ ಜೊತೆಗೆ ರಂಗ ಚಟುವಟಿಕೆ ಮತ್ತು ಆಟ ಆಡುವುದರಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಆದರೆ ಬಳ್ಳಾರಿಯಲ್ಲಿ ಓದುವಾಗಲೇ ರವೀಂದ್ರನಾಥ ಟ್ಯಾಗೋರ್‍ರವರನ್ನು ಓದಿಕೊಂಡಿದ್ದ ಇವರು ತಮ್ಮ ಸೋದರಳಿಯ, ಈ ಲೇಖನದ ಲೇಖಕರಲ್ಲೊಬ್ಬರಾದ ಪ್ರೊ. ರವಿ ಕೋರಿಶೆಟ್ಟರ್‍ರವರಿಗೆ  ರವೀಂದ್ರ ಎಂದು ನಾಮಕರಣ ಮಾಡುವುದರ ಮೂಲಕ ಈ ಮಹಾನ್ ಕವಿ ಬಗ್ಗೆ ತಮಗಿದ್ದ ಮೆಚ್ಚುಗೆ ಹಾಗೂ ಗೌರವವನ್ನು ತೋರಿಸಿದ್ದಾರೆ. ರವಿ ಕೋರಿಶೆಟ್ಟರ ಅವರು ಚಿಕ್ಕವರಿರುವಾಗ, ಅವÀರಿಗೆ ಇಂಗ್ಲಿಶ್ ವರ್ಣಮಾಲೆಯನ್ನು ಕಲಿಸುತ್ತಾ, ರವೀಂದ್ರನಾಥ ಟ್ಯಾಗೋರ್‍ರ ಹೆಸರನ್ನು ಪುಸ್ತಕ ಮತ್ತು ಫೋಟೊ ಆಲ್ಬಮ್ ಕವರ್‍ಗಳ ಮೇಲೆಲ್ಲಾ ಬರೆಸುತ್ತಿದ್ದರಂತೆ. ಕಾಲಾಂತರದಲ್ಲಿ ಶೆಟ್ಟರ್‍ರವರು ಕನ್ನಡ ವೃತ್ತ ಪತ್ರಿಕೆಗಳಿಗಳಲ್ಲಿ ಪ್ರಕಟಿಸುತ್ತಿದ್ದ ಕತೆಗಳು, ಹಾಸ್ಯ ಕವನಗಳು ಮತ್ತು ನಾಟಕಗಳನ್ನು ಕಂಡ ರವಿ ಕೋರಿಶೆಟ್ಟರ್‍ರವರು ಆರಂಭದಲ್ಲಿ ಶೆಟ್ಟರ್ ಅವರಿಗಿದ್ದ ಸಾಹಿತ್ಯಾಸಕ್ತಿ, ರವೀಂದ್ರನಾಥ ಟ್ಯಾಗೋರ್ ಅವರ ಮೇಲೆ ಬೀರಿದ ಪರಿಣಾಮ  ಅರ್ಥವಾಗತೊಡಗಿದವು. ಆಧುನಿಕಪೂರ್ವ ಮತ್ತು ಆಧುನಿಕ ಕನ್ನಡದ ಮೇರು ಕೃತಿಗಳನ್ನು ಆಳವಾಗಿ ಅಭ್ಯಸಿಸಿದ ಶೆಟ್ಟರ್, ಸಂಸ್ಕøತ ಕೃತಿಗಳ ಪರಿಚಯಯೂ ಇತ್ತು. ಪ್ರಾರಂಭದಲ್ಲಿದ್ದ ಈ ಆಸಕ್ತಿಗಳೇ ಶೆಟ್ಟರ್‍ರವರ ನಂತರದ ಚರಿತ್ರೆಯ ಅಧ್ಯಯನಗಳಿಗೆ ಸಹಾಯ ಮಾಡಿವೆ ಎಂದು ಹೇಳಿದರೆ ತಪ್ಪಾಗಲಾರದು.

ಮೈಸೂರು ದಿನಗಳು

ಶೆಟ್ಟರ್‍ರವರು ತಮ್ಮ ಉನ್ನತ ಶಿಕ್ಷಣಕ್ಕಾಗಿ ಮೈಸೂರನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಸಾಹಿತ್ಯದ ಅಧ್ಯಯನ ಕೈಗೊಳ್ಳಬೇಕೆಂಬ ಮಹದಾಸೆ ಹೊಂದಿದ್ದರು. ಆದರೆ ಕಾಲ ಅವರಿಗೆ ಬೇರೆಯದೇ ದಾರಿ ತೋರಿದ್ದರಿಂದ ಕೊನೆಗೆ ಅವರು ಇತಿಹಾಸವನ್ನು ಆಯ್ಕೆಮಾಡಿಕೊಂಡರು. ಇಂಗ್ಲಿಶ್ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಹೆಬ್ಬಯಕೆಯಿದ್ದ ಶೆಟ್ಟರ್‍ರವರಿಗೆ ಒಮ್ಮೆ ಮೈಸೂರು ವಿಶ್ವವಿದ್ಯಾಲಯದ ವಿದ್ವಾಂಸ ಮತ್ತು ಪ್ರಾಧ್ಯಾಪಕ ಎಂ. ವಿ. ಕೃಷ್ಣರಾವ್ ಅವರು ಅಕಸ್ಮಾತಾಗಿ ಭೇಟಿಯಾದಾಗ, ಇವರಿಗೆ ಇತಿಹಾಸ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಸ್ಪೂರ್ತಿ ತುಂಬಿದರು. ಪ್ರೊ. ಕೃಷ್ಣರಾವ್ ಮತ್ತು ಇನ್ನೊರ್ವ ಇತಿಹಾಸ ಪ್ರಾಧ್ಯಾಪಕರಾದ ಶ್ರೀಕಂಠಶಾಸ್ತ್ರಿಯವರು ಶೆಟ್ಟರ್ ಅವರನ್ನು ಎಷ್ಟು ಪ್ರಭಾವಿಸಿದ್ದರೆಂದರೆ ಅವರ ಭೇಟಿ ಮಾಡಿದ ನಂತರ ಸಾಹಿತ್ಯವನ್ನು ಬಿಟ್ಟು ಇತಿಹಾಸದ ಆನರ್ಸ್‍ನ್ನು  ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಇದೇ ಅವರ ಚರಿತ್ರೆ ಅಧ್ಯಯನ ವೃತ್ತಿಯ ಮತ್ತು ಇತಿಹಾಸಕಾರರಾದ ಆರಂಭಿಕ ಹೆಜ್ಜೆಯಾಗಿದೆ. ಹೀಗಿದ್ದರೂ, ಸಾಹಿತ್ಯದ ಬಗೆಗಿನ ಅವರ ಆಸಕ್ತಿ ಕುಂದದೆ, ಮುಂದೆ ಐತಿಹಾಸಿಕ ಅನ್ವೇಷಣೆಗಳಿಗೆ ಉಪಯುಕ್ತವಾದ ಕನ್ನಡ ಸಾಹಿತ್ಯದ ಓದನ್ನು ಅವರು ಮುಂದುವರಿಸಿದರು. ಪ್ರೊ. ಎಂ ವಿ ಕೃಷ್ಣರಾವ್ ಮತ್ತು ಪ್ರೊ. ಶ್ರೀಕಂಠಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಬಿಎ ಆನರ್ಸ್ ಮತ್ತು ಎಂ.ಎ. ತೇರ್ಗಡೆಯಾಗಿ ಬಂಗಾರದ ಪದಕ ಗಳಿಸಿ, ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಮೈಸೂರಿನ ಬೌದ್ಧಿಕ ಸಂಸ್ಕøತಿಯೂ ಸಹ ಶೆಟ್ಟರ್‍ರವರ ಚಿಂತನಾ ವಿಧಾನವನ್ನು ರೂಪಿಸಿತ್ತು.

ತಮ್ಮ ಮೈಸೂರಿನ ದಿನಗಳು ಹೇಗೆ ಅವರಿಗೆ ಕಲಿಕೆಯಲ್ಲಿ  ಅಭಿರುಚಿಯನ್ನು ಹುಟ್ಟಿಸಿ, ತರ್ಕಬದ್ಧವಾಗಿ ಆಲೋಚನೆÀ ಮಾಡುವ ತರಬೇತಿಯನ್ನು ಕೊಟ್ಟವು ಎಂಬುದನ್ನು ಆಗಾಗ ಶೆಟ್ಟರ್ ಅವರು ನೆನಪಿಸಿಕೊಳ್ಳುತ್ತಿದ್ದರು. ಇತಿಹಾಸ ಅಧ್ಯಯನದ ಸಹವಾಸ ಅವರಲ್ಲಿ ಒಂದು ಶಿಸ್ತನ್ನು ಬೆಳೆಸಿತ್ತು. ಈ ಹಿಂದಿನ ಅಧ್ಯಯನಗಳ ಇತಿಮಿತಿಗಳನ್ನು ಗುರ್ತಿಸಿ, ಹೊಸ ಒಳನೋಟಗಳ ಹುಡುಕಾಟಕ್ಕೆ ಆಕರಗಳನ್ನು ಮರುಪರಿಶೀಲಿಸುವ ಕೌಶಲ್ಯವನ್ನು ಅವರಲ್ಲಿ ಈ ಶಿಸ್ತು ಬೆಳೆಸಿತ್ತು. ಐತಿಹಾಸಿಕ ಸ್ಥಳಗಳಿಗೆ ಅಧ್ಯಯನ ಪ್ರವಾಸ ಕೈಗೊಂಡಾಗಂತೂ ಅವುಗಳಿಗೆ ಸಂಬಂಧಿಸಿದ ಪ್ರಕಟಿತ ಲೇಖನ, ಕೃತಿಗಳನ್ನು ಅವರೊಟ್ಟಿಗೆ ತೆಗೆದುಕೊಂಡು ಹೋಗಿ, ಈ ಅಧ್ಯಯನಗಳ ತಿರ್ಮಾನಗಳನ್ನು ಮತ್ತು ಸ್ಥಳಗಳಲ್ಲಿ ಸಿಗುವ ಮಾಹಿತಿ, ಆಕರಗಳನ್ನು ಅವಲೋಕಿಸಿ ಒರೆಗೆ ಹಚ್ಚುತ್ತಿದ್ದರು. ಮುಂದೆ ಅವುಗಳ ಬಗೆಗಿನ ಹೆಚ್ಚಿನ ತಿಳಿವಳಿಕೆಗೆ ಐತಿಹಾಸಿಕ ಸಾಕ್ಷ್ಯಗಳ ಅಧ್ಯಯನ ನಡೆಸುತ್ತಿದ್ದರು. ಬಹುಶಃ ಇದೇ ಕಾಲಘಟ್ಟದಲ್ಲ್ಲಿ ಶೆಟ್ಟರ್ ಅವರಿಗೆ ಮೌರ್ಯ ಚಕ್ರವರ್ತಿ ಅಶೋಕನ ಬಗ್ಗೆ ಆಸಕ್ತಿ ಹುಟ್ಟಿದ್ದು. ನಂತರ ಅಶೋಕ ಅವರು ಬೌದ್ಧಿಕ ಗೀಳಾಗಿಬಿಟ್ಟ.   ತಮ್ಮ ಮೊದಲ ಮಗುವಿಗೆ ಪ್ರಿಯದರ್ಶಿನಿ ಎಂದು ನಾಮಕರಣ ಮಾಡಿದ ಶೆಟ್ಟರ ಅವರು ತಾವು ಕೈಗೊಂಡ ಸೃಜನಶೀಲ ಬರಹಗಳನ್ನು ದೇವನಾಂಪ್ರಿಯ ಎಂಬ ಕಾವ್ಯನಾಮದ ಅಡಿಯಲ್ಲಿ ಪ್ರಕಟಿಸಿದರು.  ಯಾವಾಗಲು ತಮ್ಮ ಸಹೊದ್ಯೋಗಿಗಳ ಜೊತೆಗೆ ಅಶೋಕ ಚಕ್ರವರ್ತಿಯ ಬಗ್ಗೆ ಆಳವಾದ ಚರ್ಚೆಯಲ್ಲಿ ತೊಡಗುತ್ತಿದ್ದರು. 

ಮೈಸೂರಿನ ಸಾಹಿತ್ಯಿಕ ಹಿನ್ನೆಲೆ ಶೆಟ್ಟರ್‍ರವರ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಆಗಿನ ಮೈಸೂರು ಎಂದರೆ ಕುವೆಂಪು ಅಂತಹವರು ನಿರ್ಮಾಣ ಮಾಡುತ್ತಿದ್ದ ಸಾಹಿತ್ಯ ಸಂಸ್ಕøತಿಯ  ಮೈಸೂರು. ಅದು ಸಾಹಿತ್ಯಿಕ ಚರ್ಚೆ ಮತ್ತು ಚಟುವಟಿಕೆಗಳ ಕೇಂದ್ರವಾಗಿದ್ದ ನಗರ. ಕನ್ನಡದ ಹೆಸರಾಂತ ಕಾದಂಬರಿಕಾರ ತರಾಸು (ಟಿ ಆರ್ ಸುಬ್ಬರಾವ್)ರವರು ಇವರ ಅತ್ಮೀಯರಾಗಿದ್ದರಲ್ಲದೆ, ಕನ್ನಡದ ಪ್ರಮೂಖ ಬರಹಗಾರರಾದ ಪಿ ಲಂಕೇಶ್, ಯು ಆರ್ ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ರಾಜೀವ್ ತಾರಾನಾಥ್, ಲಕ್ಷ್ಮಿನಾರಾಯಣ್ ಭಟ್ ಇನ್ನೂ ಮುಂತಾದವರ ಜೊತೆಗೆ ಇವರ ಒಡನಾಟವಿತ್ತು. ಕನ್ನಡದ ವಿದ್ವಾಂಸರÀ ಮತ್ತು ಸಾಹಿತಿಗಳ ಜೊತೆಗಿನ ಚರ್ಚೆ, ಸಂವಾದಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.  ಎಂ.ಎ. ಪದವಿಯ ನಂತರ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತ, ನಾಟಕ, ವಿಡಂಬನೆ ಮತ್ತು ಹಾಸ್ಯ ಕವನಗಳನ್ನು ಬರೆದರು. 

ಧಾರವಾಡದ ದಿನಗಳು

ಅರವತ್ತರ ದಶಕದಲ್ಲಿ ಧಾರವಾಡದಕ್ಕೆ ಬಂದ ಶೆಟ್ಟರ್‍ರವರು ಅಲ್ಲಿನ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ ತಮ್ಮ ವೃತ್ತಿ ಪ್ರಾರಂಭಿಸಿ, ನಂತರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಸಾಹಿತ್ಯದ ಅಧ್ಯಯನ ಮತ್ತು ಸೃಜನಶೀಲ ಬರವಣಿಗೆಯನ್ನು ಮಾಡುತ್ತಲೆ ಶೆಟ್ಟರ್‍ರವರು ತಮ್ಮ ಐತಿಹಾಸಿಕ ಸಂಶೋಧನೆಗಳನ್ನು ಮುಂದುವರೆಸಿ, ಈ ಜ್ಞಾನಶಿಸ್ತಿನಲ್ಲಿ ಹೊಸ ಬಗೆಯ ಕ್ಷೇತ್ರಗಳ ಅನ್ವೇಷಣೆ ಮಾಡಿದರು.  ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಪ್ರೊ. ಪಿ. ಬಿ. ದೇಸಾಯಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್‍ಡಿ ಪ್ರಾರಂಭಿಸಿ, ನಂತರ ಪ್ರೊ. ಜಿ. ಎಸ್. ದೀಕ್ಷಿತ ಅವರ ಮಾರ್ಗದರ್ಶನದಲ್ಲಿ ಪಿ.ಎಚ್‍ಡಿ ಪದವಿಯನ್ನು ಪಡೆದರು. ಮಧ್ಯಕಾಲೀನ ಕರ್ನಾಟಕ ಇತಿಹಾಸದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದ ಅವರು ತಮ್ಮ ಪಿ.ಹೆಚ್‍ಡಿ ಸಂಶೋಧನೆಗೆ ಶ್ರವಣಬೆಳಗೊಳದ ಸ್ಮಾರಕಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡರು. ಆಗಿನ ಧಾರವಾಡದ ಸಾಹಿತ್ಯಿಕ ಸಂಸ್ಕøತಿಯು ಸಹ ಇವರ ಮೇಲೆ ಹೆಚ್ಚು ಪ್ರಭಾವ ಬೀರಿತು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿದ್ವಾಂಸರ ಜೊತೆಗಿನ ಚರ್ಚೆ ಇವರ ಚರಿತ್ರಯ ಅಧ್ಯಯನಕ್ಕೆ, ಮುಂದೆ ಇವರು ಅಭಿಜಾತ ಕನ್ನಡ ನಾಡು-ನುಡಿಯ ಬಗ್ಗೆ ಕೃತಿ ರಚಿಸಲು ಹೆಚ್ಚು ಸಹಾಯಕವಾದವು. 

ಪ್ರೊ.ಶೆಟ್ಟರ್ ಅವರ ಅನನ್ಯತೆ

ಎನ್.ಎಸ್.ಗುಂಡೂರ್ ಮತ್ತು ರವಿ ಕೋರಿಶೆಟ್ಟರ್ ಅವರು ಬರೆದಿರುವ ಈ ಲೇಖನಕ್ಕೆ ಪೂರಕವಾಗಿ ಒಂದು ಅಂಶವನ್ನು ಇಲ್ಲಿ ಗುರುತಿಸಬಯಸುತ್ತೇನೆ. ಈ ಅಂಶವು ಪ್ರೊ.ಶೆಟ್ಟರ್ ಅವರ ಅನನ್ಯತೆ ಗುರುತಿಸಲು ಸಹಕಾರಿಯಾಗುವಂತಹುದು. ಶೆಟ್ಟರ್ ಅವರ ಬೌದ್ಧಿಕ ಬದುಕಿನ ಒಂದು ಅಪರೂಪದ ಅಂಶವೆಂದರೆ ಅವರು ಪ್ರತಿ ದಶಕದಲ್ಲಿಯೂ ತಮ್ಮನ್ನು ತಾವು ಪುನರ್ ನಿರ್ಮಾಣ ಮಾಡಿಕೊಳ್ಳುತ್ತಿದ್ದುದು. ಅಂದರೆ ನಿಯಮಿತವಾಗಿ ಅವರು ಹೊಸದೊಂದು ವಿಷಯ ಮತ್ತು ಅದಕ್ಕೆ ಪೂರಕವಾದ ಆಕರ ಕೋಶ (ಆರ್ಕೈವ್) ಹಾಗೂ ಇವೆರಡಕ್ಕೂ ಅಗತ್ಯವಾದ ವಿಶ್ಲೇಷಣಾ ಕ್ರಮವನ್ನು ಹುಡುಕುತ್ತಿದ್ದರು, ತಮ್ಮದಾಗಿಸಿಕೊಳ್ಳುತ್ತಿದ್ದರು. ಆ ಕಾರಣದಿಂದಲೆ ಅವರು ಶಾಸನಗಳು, ಪ್ರಾಚೀನ ಕಾವ್ಯಗಳು, ಧಾರ್ಮಿಕ ಗ್ರಂಥಗಳು, ಕಲಾಸ್ಮಾರಕಗಳು, ಭೌತಿಕ ಸಂಸ್ಕೃತಿಯ ವಸ್ತುಗಳು -ಇವುಗಳನ್ನೆಲ್ಲ ಓದುವ, ವ್ಯಾಖ್ಯಾನಿಸುವ ಮತ್ತು ಹೊಸ ಹೊಳಹುಗಳು ಹಾಗೂ ಕಥನಗಳನ್ನು ಕಟ್ಟಿಕೊಡುವ ಸಾಮಥ್ರ್ಯ ಹೊಂದಿದ್ದರು.

ಈ ಎಲ್ಲ ಅಂಶಗಳು ಅವರ ಬರಹದಲ್ಲಿ ಹೇಗೆ ಮೇಳವಿಸುತ್ತದೆ ಎನ್ನುವುದಕ್ಕೆ ಉದಾಹರಣೆ: ಕರ್ನಾಟಕದಲ್ಲಿನ ಅಶೋಕನ ಶಾಸನಗಳನ್ನು ವಿಶ್ಲೇಷಿಸುವಾಗ, ಅವರು ಬ್ರಹ್ಮಗಿರಿಯಲ್ಲಿ ಒಂದೆ ಶಾಸನದ ಮೂರು ಪಾಠಗಳಿವೆ ಎಂದು ಗಮನಿಸಿದರು. ಇದು ಅವರ ಅರಿವಿಗೆ ಬರುವುದಕ್ಕೆ ಕಾರಣವೆಂದರೆ ಅವರು ಶಾಸನವಿರುವ ಬಂಡೆಯನ್ನು ಸ್ವತಃ ಸ್ಥಳಕ್ಕೆ ಹೋಗಿ ನೋಡಿದ್ದರಿಂದ. ಕೇವಲ ಶಾಸನಗಳನ್ನು ವಿಶ್ಲೇಷಿಸುವ ಇತಿಹಾಸಕಾರ ಯಾವುದಾದರೂ ಆಕರ ಗ್ರಂಥದಲ್ಲಿ ದೊರಕುವ ಶಾಸನವನ್ನು ಓದಿ ಅದರ ಬಗ್ಗೆ ತನ್ನ ವಿಶ್ಲೇಷಣೆಯನ್ನು ಬರೆಯುತ್ತಾನೆ. ಆದರೆ ಕಲೆಯ ಇತಿಹಾಸಕಾರರೂ ಆಗಿದ್ದ ಶೆಟ್ಟರ್ ಅವರಿಗೆ ಶಾಸನವಿರುವ ಬಂಡೆಯೂ ಒಂದು ಭೌತಿಕ ಆಕರ. ಇಲ್ಲಿನ ಮೂರು ಪಾಠಗಳು ಶೆಟ್ಟರ್ ಅವರಿಗೆ ಆ ಶಾಸನದ ಲಿಪಿಕಾರನ ಬಗ್ಗೆ ಕುತೂಹಲ ಮೂಡಿಸಿತು. ಲಿಪಿ ಮತ್ತು ಲಿಪಿಕಾರನ ಇತಿಹಾಸಗಳನ್ನು ಭೌತಿಕ ಆಕರಗಳ ಮೂಲಕ ಹೇಗೆ ಪುನಾರಚಿಸಬಹುದು ಎನ್ನುವುದಕ್ಕೆ ಒಂದು ಸೊಗಸಾದ ಪಾಠವನ್ನು ಇತಿಹಾಸದ ವಿದ್ಯಾರ್ಥಿಗೆ ಶೆಟ್ಟರ್ ಅವರು ಒದಗಿಸುತ್ತಾರೆ. ಇಂತಹ ನೂರಾರು ಒಳನೋಟಗಳು ಅವರ ಬರಹಗಳಲ್ಲಿ ದೊರಕುತ್ತವೆ.

ಹೊಯ್ಸಳ ಮತ್ತು ವಿಜಯನಗರ ಕಲೆ, ಜೈನ ಧಾರ್ಮಿಕ ಆಚರಣೆಗಳು, ಕನ್ನಡನಾಡಿನ ಮೊದಲ ಸಹಸ್ರಮಾನದ ಶಾಸನಗಳು, ಭಾಷೆ, ಲಿಪಿ, ಲಿಪಿಕಾರರು, ಶಿಲ್ಪಿಗಳು ಮತ್ತು ರೂವಾರಿಗಳು -ಹೀಗೆ ಹಲವು ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮತ್ತೆಮತ್ತೆ ನವೀಕರಿಸಿಕೊಳ್ಳುತ್ತಿದ್ದುದು ಪ್ರೊ.ಶೆಟ್ಟರ್ ಅವರ ವೈಶಿಷ್ಟ್ಯ.

-ಪೃಥ್ವಿದತ್ತ ಚಂದ್ರಶೋಭಿ

ಒಬ್ಬ ಇತಿಹಾಸಕಾರರಾಗಿ, ಶೆಟ್ಟರ್‍ರವರು ಧಾರವಾಡದಲ್ಲಿದ್ದಾಗಲೇ ತಮ್ಮ ಪ್ರಮುಖ ಕೃತಿಗಳನ್ನು ಇಂಗ್ಲಿಶ್ ಭಾಷೆಯಲ್ಲಿ ರಚಿಸಿದರು. ಹೊಯ್ಸಳ ಸ್ಮಾರಕಗಳ ಬಗ್ಗೆ ಕೈಗೊಂಡ ವ್ಯಾಪಕ ಅಧ್ಯಯನ ಅವರನ್ನು ಒಬ್ಬ ಕಲೆಯ ಇತಿಹಾಸಕಾರನನ್ನಾಗಿ ಮತ್ತು ಕಲಾ ವಿಮರ್ಶಕನಾಗಿ ಹೊರಹೊಮ್ಮಿಸಿತು.  ಮುಂದೆ ಕಾಮನ್‍ವೆಲ್ತ್ ಫೆಲೋ(1967-70) ಆಗಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಇದೇ ಕ್ಷೇತ್ರದಲ್ಲಿ ಅಧ್ಯಯನ ಮಾಡಿ ತಮ್ಮ ಎರಡನೇ ಪಿ.ಎಚ್‍ಡಿ ಪದವಿಯನ್ನು ಪಡೆದರು. ಮುಂದಿನ ಎರಡು ದಶಕಗಳವರೆÀಗೆ ಶ್ರವಣಬೆಳಗೊಳ ಮತ್ತು ಹೊಯ್ಸಳ ದೇವಾಲಯಗಳು ಅವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳಾಗಿ ಮುಂದುವರಿದವು. ಅಭಿಜಾತ ಕನ್ನಡ ಸಾಹಿತ್ಯದ ಪರಿಚಯವಿದ್ದ ಅವರು ತಮ್ಮ ಕಾರ್ಯಕ್ಷೇತ್ರದ ಐತಿಹಾಸಿಕ ಆಕರ, ದತ್ತಾಂಶಗಳ ಮೇಲೆ ಉತ್ತಮವಾದ ಹಿಡಿತವನ್ನು ಸಾಧಿಸಿದ್ದರು. 

ಕನ್ನಡ ಸಾಹಿತ್ಯದ ಮೇರು ಕೃತಿಗಳ ಅಧ್ಯಯನ ಮಾಡುತ್ತಿರುವಾಗ ಈ ಕೃತಿಗಳ ಶಬ್ದ-ಸಮನ್ವಯಗಳ ಪಟ್ಟಿ (ಕನ್‍ಕಾರ್ಡನ್À್ಸ) ಅನ್ನು ರಚಿಸಿದ್ದರು. ಮರಣೋತ್ತರವಾಗಿ ಈಗ ಅದು ಪ್ರಕಟಣೆಗೆ ಸಿದ್ಧವಾಗಿದೆ. ಜೈನ ತತ್ವಶಾಸ್ತ್ರ, ಜೈನ ತೀರ್ಥಂಕರರ ಐಕನಾಗ್ರಫಿ, ಧಾರ್ಮಿಕ ಆಚರಣೆ ಮುಂತಾದವುಗಳ ಜಿಜ್ಞಾಸೆ ಅವರನ್ನು ಪುನಃ ಶ್ರವಣಬೆಳಗೊಳದ ಅಧ್ಯಯನಕ್ಕೆ ಪ್ರೇರೇಪಿಸಿ, ಅವರು ಇನ್ವೈಟಿಂಗ್ ಡೆತ್(1988) ಮತ್ತು ಪಸ್ರ್ಯೂಯಿಂಗ್ ಡೆತ್ (1990) ಎಂಬ ಶ್ರೇಷ್ಠ ಕೃತಿಗಳನ್ನು ರಚಿಸುವಂತಾಯಿತು. ಜೈನ ಧರ್ಮದಲ್ಲಿ ಸ್ತ್ರೀ-ಪುರುಷರು ತಮ್ಮ ಲೌಕಿಕ ಜೀವನ ತೊರೆದು ಸ್ವಯಂಪ್ರೇರಿತವಾಗಿ ಜೀವವನ್ನು ತ್ಯಜಿಸಿವ ಸಾವಿನ ಪರಿಕಲ್ಪನೆ ಬಗ್ಗೆ ಇರುವ ಈ ಕೃತಿಗಳು ಹಲವು ಬಾರಿ ಮರು ಮುದ್ರಣಗೊಂಡಿವೆ. ಕನ್ನಡದ ಸಮಕಾಲೀನ ಕವಿ ಮತ್ತು ನಾಟಕಕಾರ ಎಚ್. ಎಸ್. ಶಿವಪ್ರಕಾಶ್‍ರವರು ಹೇಳುವಂತೆ ರೋಮಿಲಾ ಥಾಪರ್ ಮತ್ತು ಇರ್ಫಾನ್ ಹಬೀಬ್ ಅವರಂತೆ ಶೆಟ್ಟರ್ ಅವರು ಟಾಪಿಕಲ್ ವಸ್ತುವಿನ ಬಗ್ಗೆ ಬರೆಯದೆ, ಬಹಳ ಕಡಿಮೆ ಪ್ರಚಾರದಲ್ಲಿರುವ ವಸ್ತುವಿನ ಬಗ್ಗೆ ಬರೆಯುತ್ತಲೇ  ಎಲ್ಲರಿಗೂ ಮುಖ್ಯವಾಗುವ ಒಳನೋಟಗಳನ್ನು ನೀಡುತ್ತಾರೆ.(ಶಿವಪ್ರಕಾಶ್, 2011:xvi).

ಶೆಟ್ಟರ್‍ರವರ ಸಂಶೋಧನಾ ಆಸಕ್ತಿಯ ವಿಷಯವಾದ ಕಲೆಯ ಇತಿಹಾಸ ದಕ್ಷಿಣ ಭಾರತವನ್ನು ಅದರಲ್ಲಿಯೂ ಮುಖ್ಯವಾಗಿ ಕರ್ನಾಟಕ ಇತಿಹಾಸದ ಚಾಲುಕ್ಯ, ರಾಷ್ಟ್ರಕೂಟ ಮತ್ತು ವಿಜಯನಗರ ಸಾಮ್ರಾಜ್ಯಗಳ ಕಾಲಘಟ್ಟಗಳನ್ನು ಒಳಗೊಂಡಿತ್ತು. ಲಿಪಿಕಾರರು, ಶಿಲ್ಪಿಗಳು ಮತ್ತು ವಾಸ್ತು ಶಿಲ್ಪಿಗಳನ್ನು ಒಳಗೊಂಡಂತೆ ಎಲ್ಲಾ ಕಲಾವಿದರ ಇತಿಹಾಸವನ್ನು ಬರೆಯಬೇಕಾದ ಅವಶ್ಯವಿದೆ ಎಂದು ಅವರು ಭಾವಿಸಿದ್ದರು. ಈ  ವಿಷಯಗಳ ಕುರಿತು ಅವರು ಹಲವು ಲೇಖನಗಳನ್ನು  ಬರೆದಿದ್ದಲ್ಲದೆ,  ಕೆಲವು ಪಿ. ಎಚ್‍ಡಿ ಮಹಾಪ್ರಬಂಧಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. 

ಕನ್ನಡದ ತಿರುವು

ಶೆಟ್ಟರ್‍ರವರು ತಮ್ಮ ಸಂಶೋಧನಾ ಬರವಣಿಗೆಗೆ ಆಯ್ಕೆ ಮಾಡಿಕೊಂಡ ಭಾಷೆಯ ಕುರಿತು ಆಕ್ಷೇಪ ಒಂದಿತ್ತು. ಕನ್ನಡ ಸಂಸ್ಕøತಿ ಮತ್ತು ಆಕರಗಳನ್ನು ಕುರಿತು ಅಧ್ಯಯನ ಮಾಡಿದರೂ, ಅವರು ತಮ್ಮ ಇತಿಹಾಸ ಬರವಣಿಗೆಯನ್ನು ಹೆಚ್ಚಾಗಿ ಇಂಗ್ಲಿಶ್‍ನಲ್ಲಿ ಕೈಗೊಂಡ್ಡಿದ್ದರು.  ರಹಮತ್ ತರೀಕೆರೆಯವರು ಮಾಡಿದ ಸಂದರ್ಶನದಲ್ಲಿ ಈ ಕುರಿತು ಅವರು ಹೇಳುವುದೇನೆಂದರೆ: “ಕನ್ನಡದಲ್ಲಿ ಬರೀಲಿಲ್ಲ ಎನ್ನುವ ಆಪಾದನೆ ನನ್ನ ಮೇಲೆ ಏನಿದೆ, ಅದನ್ನು ಸ್ವೀಕರಿಸ್ತೀನಿ.(…) ಈ ಆಪಾದನೆಯಿಂದ ವಿಮುಕ್ತಿ ಪಡೆಯುವುದಕ್ಕೋಸ್ಕರನೇ ಈಗ ಈ ಪೂರ್ಣ ಅವಧಿಯನ್ನ ಕನ್ನಡಕ್ಕಾಗಿಯೇ ಮೀಸಲಿಟ್ಟಿದ್ದೇನೆ. ದಿನನಿತ್ಯನೂ ಕನ್ನಡ ಕಾವ್ಯ ಓದದೇ ಮಲಗತಾ ಇಲ್ಲ(…) (ತರೀಕೆರೆ, 2011:281).

ತಮ್ಮ ವೃತ್ತಿಯ ಅಂತ್ಯದ ವೇಳೆಗೆ ಪ್ರಜ್ಞಾಪೂರ್ವಕವಾಗಿ ಕನ್ನಡವನ್ನು ತಮ್ಮ ಸಂಶೋಧನೆಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು, ಕನ್ನಡದಲ್ಲಿ ಅತ್ಯುತ್ತಮ ಕೃತಿಗಳನ್ನು ಶೆಟ್ಟರ ಅವರು ರಚಿಸಿದ್ದಾರೆ. ಅವುಗಳಲ್ಲಿ ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ(2007), ಹಳೆಗನ್ನಡ: ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ(2014), ಹಳೆಗನ್ನಡ ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ(2017), ಪ್ರಾಕೃತ ಜಗದ್ವಲಯ(2018) ಮುಖ್ಯ ಕೃತಿಗಳಾಗಿವೆ. ಓದುಗರ ಬೇಡಿಕೆಯಿಂದ ಈ ಎಲ್ಲಾ ಕೃತಿಗಳು ಹಲವು ಬಾರಿ ಮರು ಮುದ್ರಣಗೊಂಡಿವೆ.

ಶೆಟ್ಟರ್‍ರವರ ಈ ಕೃತಿಗಳು ದ್ರಾವಿಡ ಸಂಸ್ಕøತಿಯ ಅದರಲ್ಲಿಯೂ ಪ್ರಮುಖವಾಗಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿ ಅಧ್ಯಯನದಲ್ಲಿ ಹೆಗ್ಗುರುತಾಗಿವೆ. ಬಹುಶ ಈ ಕೆಲಸದಿಂದಲೇ ಅವರ ಹೆಸರು ನಮ್ಮ ಬೌದ್ಧಿಕ ಇತಿಹಾಸದ ಸ್ಮøತಿಪಟಲದಲ್ಲಿ ಅಚ್ಚಳಿಯದೇ ಉಳಿಯುವುದು ಎಂದೆನಿಸುತ್ತದೆ. ಈ ಕೃತಿಗಳನ್ನು ಹೊರತುಪಡಿಸಿ ನೋಡಿದರೆ ಶೆಟ್ಟರ್‍ರವರು ಕೇವಲ ಕಲೆಯ ಇತಿಹಾಸಕಾರರಾಗಿ ಅಥವಾ ಜೈನ ದೃಷ್ಟಿಕೋನದಿಂದ ಸಾವಿನ ಕೃತಿ ಬರೆದ ಸಾಧಾರಣ ಲೇಖಕರಾಗಿ ಉಳಿಯುತ್ತಾರಷ್ಟೆ. ಇವರು ಕನ್ನಡದಲ್ಲಿ ಬರೆದ ಮೊದಲ ಕೃತಿ ಶಂಗಂ ತಮಿಳಗಂ, ಮೊದಲ ಮುದ್ರಣ ಕಂಡ ಕೇವಲ ನಾಲ್ಕು ವರ್ಷಗಳ ಅಂತರದಲ್ಲಿ ಹನ್ನೊಂದು ಬಾರಿ ಮರು ಮುದ್ರಣಗೊಂಡಿದೆ. ಆರಂಭಿಕ ದ್ರಾವಿಡರ ಸಂಬಂಧಗಳನ್ನು ಅನ್ವೇಷಿಸುವ ಸಂದರ್ಭದಲ್ಲಿ ತಮಿಳು ಮತ್ತು ಕನ್ನಡ ನಡುವಿನ ಬೌದ್ಧಿಕ ಸಂಬಂಧಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಈ ಕೃತಿ ಎತ್ತುತ್ತದೆ. ಅಷ್ಟೇ ಅಲ್ಲದೆ ಆಧುನಿಕಪೂರ್ವ ಕನ್ನಡದ ಮೇರು ಕೃತಿ ಕವಿರಾಜಮಾರ್ಗ ಮತ್ತು ತಮಿಳಿನ ಮೇರು ಕೃತಿ ತೊಲ್ಕಾಪಿಯಮ್ ಬಗ್ಗೆ ಇವರೆಗೆ ಇದ್ದ ಅಭಿಪ್ರಾಯಗಳನ್ನು ಅಲ್ಲಗಳೆಯುವಂತಹ ಹೊಸ ಸಾಕ್ಷಾಧಾರಗಳ ಮೇಲೆ ಬೆಳಕು ಚೆಲ್ಲುತ್ತದೆ.

ಅಭಿಜಾತ ದ್ರಾವಿಡ ಪರಂಪರೆಯೊಂದಿಗೆ ಶೆಟ್ಟರ್‍ರವರು ತೊಡಗಿಸಿಕೊಂಡು ನಡೆಸಿದ ಅಧ್ಯಯನದ ಪರಿ ಮತ್ತು ಬದ್ಧತೆ ಇನ್ನೂ ಮೂರು ಕೃತಿಗಳಲ್ಲಿ ಮುಂದುವರಿಯುತ್ತದೆ. ಕ್ರಮವಾಗಿ ಹಳಗನ್ನಡ: ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ (2014), ಹಳಗನ್ನಡ: ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ (2017), ಪ್ರಾಕೃತ ಜಗದ್ವಲಯ: ಪ್ರಾಕೃತ-ಕನ್ನಡ-ಸಂಸ್ಕøತ ಭಾಷೆಗಳ ಅನುಸಂಧಾನ (2018) ಈ ಕೃತಿಗಳಾಗಿವೆ. ಅಭಿಜಾತ ಕನ್ನಡದ ಬಗ್ಗೆ ಬಂದ ಹಳಗನ್ನಡದ ಎರಡು ಸಂಪುಟಗಳು ಸಾಹಿತ್ಯಿದ ಇತಿಹಾಸವನ್ನು ಓದುವ ಮೂಲಕ ಮತ್ತು ಅಭಿಜಾತ ಕನ್ನಡ ಸಂಸ್ಕøತಿಯ ಸಾಮಾಜಿಕ ಚರಿತ್ರೆಯೆನ್ನು ಪುನರ್‍ರಚಿಸುವುದರ ಮೂಲಕ ಕನ್ನಡ ವರ್ಣಮಾಲೆಯ ಇತಿಹಾಸವನ್ನು ಅನ್ವೇಷಿಸುತ್ತವೆ. ಶೆಟ್ಟರ್ ಅವರ ಪ್ರಾಕೃತ ಜಗದ್ವಲಯ ಕೃತಿಯು ಅಭಿಜಾತ ಕನ್ನಡ ಮತ್ತು ಸಂಸ್ಕøತಗಳ ಸಂದರ್ಭದಲ್ಲಿ ಪ್ರಾಕೃತ ಭಾಷೆಯು ವಿಶ್ವಾತ್ಮಕ (ಕಾಸ್ಮೋಪಾಲಿಟನ್) ಭಾಷೆಯಾದ ಅದರ ಏಳು ಬೀಳಿನ ಕತೆಯನ್ನು ಹೇಳುತ್ತಾರೆ. 

ಈ ಕೃತಿಗಳಲ್ಲಿ, ಶೆಟ್ಟರ್‍ರವರು  ದ ಲಾಂಗ್ವೇಜ್ ಆಫ್ ಗಾಡ್ಸ್ ಇನ್ ದ ವಲ್ರ್ಡ್ ಆಫ್ ಮೆನ್ (2009) ಕೃತಿಯ ಲೇಖಕ ಶೆಲ್ಡನ್ ಪೊಲಾಕ್‍ರೊಡನೆ ನೇರವಾಗಿ ಮುಖಾಮುಖಿ ಆಗದಿದ್ದರೂ, ಅವು ಪೊಲಾಕ್ ಮಾದರಿಯ ಅನ್ವೇಷಣೆಯನ್ನು ಅನುಸರಿಸುವುದಲ್ಲದೇ, ಆಧುನಿಕಪೂರ್ವ ಭಾರತೀಯ ಭಾಷಾ ಸಂಬಂಧ, ಅದರಲ್ಲಿಯೂ ಮುಖ್ಯವಾಗಿ ಕನ್ನಡ ಮತ್ತು ಸಂಸ್ಕøತದ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಪೊಲಾಕ್‍ರ ಅಧ್ಯಯನಗಳನ್ನು ಕಟು ವಿಮರ್ಶೆಗೆ ಒಳಪಡಿಸುತ್ತವೆ. ಈ ಕಾಲಘಟ್ಟದಲ್ಲಿ ನಡೆದ ಶೆಟ್ಟರ್‍ರವರ ಇಡೀ ಸಂಶೋಧನೆಯ ಮುಖ್ಯ ಕೆಲಸವೆಂದರೆ, “ಹಿಂದಿನ ಭಾಷಾ ಸಮಾಜಗಳ ಭಾಷಾ ನೀತಿಗಳನ್ನು ಅಭ್ಯಸಿಸಿ ಅವು ಬಹುತ್ವದ ನೆಲೆಗಳನ್ನು ಹೇಗೆ ಕಂಡುಕೊಂಡಿದ್ದವೆಂಬುದನ್ನು ಸಾಕ್ಷಾಧಾರಗಳ ಸಮೇತ ನಿರೂಪಿಸುವುದು” (ಶಶಿಕುಮಾರ್, 2018:182). ಶೆಟ್ಟರ ಅವರ ಇಂತಹ ಐತಿಹಾಸಿಕ ವಿಶ್ಲೇಷಣೆಗಳನ್ನು ಸಮಕಾಲೀನ ಅಧಿಕಾರ ಶಕ್ತಿಗಳ ದಮನಕಾರಿ ಮನೋವೃತ್ತಿಯಿಂದ ನೊಂದುಕೊಂಡು ಮಾಡಿರಬೇಕೆನಿಸುತ್ತದೆ. ಕೊನೆಯಲ್ಲಿ ಇವರ ಕೃತಿಗಳು ಆಗಿನ ಸಾಹಿತ್ಯಿಕ ಮತ್ತು ಬೌದ್ಧಿಕ ಸಂಸ್ಕøತಿಗಳು ಭಯವಿಲ್ಲದ ಸಮಾಜೋ-ರಾಜಕೀಯ ವಾತಾವರಣದಲ್ಲಿ ಹೇಗೆ ವಿರಾಜಮಾನವಾಗಿ ಮೆರೆದಿವೆ ಎಂಬುದನ್ನು ಹುಡುಕಾಡುವ ಪ್ರಯತ್ನಗಳಾಗಿವೆÉ.  ಕರ್ನಾಟಕದ ಬಹುತ್ವದ ಆಯಾಮಗಳು (2018) ಎಂಬ ಅವರ ಪುಸ್ತಿಕೆ ಹಳೆಗನ್ನಡದ ಸಾಹಿತ್ಯ ಸಂಸ್ಕøತಿ ಮತ್ತು ರಾಜಾಧಿಕಾರದ (ರಾಯಲ್ ಪವರ್) ಒಡನಾಟಗಳನ್ನು ಅಧ್ಯಯನ ಮಾಡುವುದರ ಮೂಲಕ ಹೊಸ ಹುಡುಕಾಟವನ್ನು ಕೈಗೊಂಡಿದೆ.

ಶೆಟ್ಟರ್ ಅವರ ಕನ್ನಡದ ಸಂಶೋಧನೆಯ ವಿಶೇಷತೆಯೇನೆಂದರೆ ಹೊಸ ಐತಿಹಾಸಿಕ ಸಾಕ್ಷಾಧಾರಗಳನ್ನು ಒದಗಿಸಿ ಈ ಹಿಂದಿನ ಅಭಿಪ್ರಾಯ ಮತ್ತು ತಿಳಿವಳಿಕೆಗಳನ್ನು ಪ್ರಶ್ನಿಸುವುದು. ಮತ್ತು ಕನ್ನಡದ ವಾಕ್ಯ ರಚನೆ ಮತ್ತು ಪದಗಳ ವಿಶಿಷ್ಟ ಬಳಕೆಯ ಮೂಲಕ ಕನ್ನಡ ಭಾಷೆಯನ್ನು ಸಂಶೋಧನಾ ನುಡಿಯಾಗಿ ಹದಗೊಳಿಸಿದ್ದು.  ಸಮಕಾಲೀನ ಕನ್ನಡದಲ್ಲಿ ಐತಿಹಾಸಿಕ ಸಂಶೋಧನೆಗಳನ್ನು ಕೈಗೊಳ್ಳುವುದಕ್ಕೆ ಅವರು ಅತ್ಯುತ್ತಮವಾದ ಪದಕೋಶವನ್ನೆ ಸೃಷ್ಟಿಸಿದ್ದಾರೆನಿಸುತ್ತದೆ. ಶೆಟ್ಟರ್ ಅವರಲ್ಲಿದ್ದ ಮೊದಲಿನ ಸಂಶೋಧಕ ಸಮಾಜ ವಿಜ್ಞಾನಿಯಾಗಿ ಬರೆದರೆ, ಅವರಲ್ಲಿನ ಆನಂತರದ ಸಂಶೋಧಕ ಒಬ್ಬ ಕತೆಗಾರನಾಗಿ ಬರೆಯುತ್ತಾನೆ. ಸಮಕಾಲೀನ ಕನ್ನಡವನ್ನು ಐತಿಹಾಸಿಕ ನಿರೂಪಣೆಯ ಭಾಷೆಯನ್ನಾಗಿ ಶೆಟ್ಟರ್ ಅವರು ರೂಪಿಸುವ ಪ್ರಯತ್ನ ಮಾಡಿದ್ದಾರೆ.

ಒಬ್ಬ ಇತಿಹಾಸಕಾರರಾಗಿ, ಶೆಟ್ಟರ್‍ರವರು ಹೊಸ ಸಂಶೋಧನಾ ವಿಧಾನವೊಂದನ್ನು ರೂಪಿಸಿಲ್ಲ ಹಾಗೂ ಐತಿಹಾಸಿಕ ಅಧ್ಯಯನಕ್ಕೆ ಹೊಸ ಜ್ಞಾನಮೀಮಾಂಸೆಯನ್ನೂ ಕಟ್ಟಿಕೊಟ್ಟಿಲ್ಲ. ಆದರೆ ಈಗಾಗಲೇ ನಡೆದಿರುವ ಅಧ್ಯಯನಗಳ ತಿರ್ಮಾನಗಳನ್ನು ಪ್ರಶ್ನಿಸುವುದು ಸಂಶೋಧನೆಯ ಆಧಾರ ಸ್ತಂಭವೆಂದು ಅವರು ಒತ್ತಿ ಹೇಳಿರುವುದು ಗಮನೀಯ ಅಂಶ. ಅಂತೆಯೇ ತಮ್ಮ ಕ್ಷೇತ್ರದಲ್ಲಿ ಹಿಂದಿನ ಅಧ್ಯಯನಕಾರರ ಇತಿಮಿತಿಗಳನ್ನು ಎತ್ತಿ ತೋರಿಸಿ, ಹೊಸ ಐತಿಹಾಸಿಕ ತಿಳಿವಳಿಕೆಯನ್ನು ಒದಗಿಸಬಲ್ಲ ಅವರ ಕೃತಿಗಳೂ ಅಂತಿಮ ತೀರ್ಮಾನಗಳನ್ನು ಘೊಷಿಸುವುದಿಲ್ಲ. ಅವು ಮುಂದಿನ ಅಧ್ಯಯನಗಳಿಗೆ ಇಂಬುಕೊಟ್ಟು ತಮ್ಮ ದಾರಿಯನ್ನು ತೆರೆದಿಡುತ್ತವೆ. 

ಶೆಟ್ಟರ್ ಅವರು ಸಾಯುವ ಮುನ್ನ ಅವರ ದೈಹಿಕ ಆರೋಗ್ಯ ಹದಗೆಟ್ಟರೂ ಬರವಣಿಗೆ ಮತ್ತು ಸಂಶೋಧನೆಗೆ ತಮಗಿದ್ದ ಬದ್ಧತೆಯನ್ನು ಬಿಟ್ಟಿರಲಿಲ್ಲ. ತಾವು ಕೈಗೆತ್ತಿಕೊಂಡ ಬರವಣಿಗೆಯ ಎಲ್ಲ ಯೋಜನೆಗಳನ್ನು ಮುಗಿಸುವವರೆಗೆ ಕನಿಷ್ಠ ಪಕ್ಷ ಎರಡು ವರ್ಷವಾದರೂ ಗಟ್ಟಿಯಾಗಿ ಇರುತ್ತೇನೆಂಬ ಭರವಸೆ ಅವರಿಗಿತ್ತು. ವಚನ ಸಾಹಿತ್ಯ ಮತ್ತು ಜೈನ ಸಾಹಿತ್ಯ ಕುರಿತ ಅಧ್ಯಯನಗಳು, ಎಂಟು ಸಂಪುಟಗಳ ಮೊದಲನೇ ಸಹಸ್ರಮಾನದ ಶಾಸನಗಳು, ಪರಿಷ್ಕರಿಸಬೇಕಾದ ಅವರ ಹೊಯ್ಸಳ ದೇವಾಲಾಯಗಳು  ಎಂಬ ಕೃತಿ, ಎ ಹಿಸ್ಟರಿ ಆಫ್ ವಿಜಯನಗರ,  ಇತ್ಯಾದಿ ಅವರು ಹಾಕಿಕೊಂಡಿದ್ದ ಮತ್ತಿತರ ಯೋಜನೆಗಳನ್ನು ಪೂರ್ಣಗೊಳಿಸಲು ಇನ್ನೆರೆಡು ವರ್ಷ ಬದುಕುತ್ತೇನೆಂಬ ಬರವಸೆ ಅವರಿಗಿತ್ತು.  ಅವರ ಆರೋಗ್ಯ ಹದಗೆಡುತ್ತ ಬಂದ ಹಾಗೆ ತಾವು ಕೈಗೆತ್ತಿಕೊಂಡ ಈ ಯೋಜನೆಗಳು ಎಷ್ಟು ಮುಖ್ಯವಾದವು ಎಂದು ಅವರು ನಂಬಿದ್ದರೆಂದರೆ ಅವುಗಳನ್ನು ಮುಗಿಸಲು ತಾವು ಇನ್ನೆರಡು ವರ್ಷ ಬದುಕಲೇ ಬೇಕೆಂದು ಆಸೆ ಪಟ್ಟಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸಾವನ್ನು ಅವರು ಅರಸುವುದಾಗಿರಲಿ (ಪರಸ್ಯುಯಿಂಗ್ ಡೆಥ್) ಅಥವಾ ಸಾವೇ ಅವರನ್ನು ಆವಾಹ್ನಿಸುವುದಾಗಲಿ (ಇನ್ವಾಯಿಟಿಂಗ್ ಡೆಥ್) ಅವರಿಗೆ ಬೇಕಾಗಿರಲಿಲ್ಲ. ಈ ಆಸೆ ಇಡೇರುವಾಗಲೆ 28-02-2020ರಂದು ಶೆಟ್ಟರ್ ಅವರು ವಿಧಿವಶರಾದರು, ಸಾವೇ ಅವರನ್ನು ಆವಾಹ್ನಿಸಿರಬೇಕು.

ನಾವು ಕಲಿಯಬೇಕಾಗಿರುವುದು ಏನು?

ಈ ಮೇಲಿನ ಸಂಕ್ಷಿಪ್ತ ನಿರೂಪಣೆಯಿಂದ ತಿಳಿಯುವುದೇನೆಂದರೆ, ಷ ಶೆಟ್ಟರ್ ಅವರ ಪ್ರತಿಭೆ ಮತ್ತು ಮಹಾತ್ವಾಕಾಂಕ್ಷೆ ಅವರ ಕಾಲದ ಬೌದ್ಧಿಕ ಯುಗಧರ್ಮದಿಂದ ರೂಪುಗೊಂಡಿತ್ತು.ಒಂದು ವೇಳೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಇತಿಹಾಸ ವಿಷಯವನ್ನು ಅವರು ಆಯ್ಕೆಮಾಡಿಕೊಂಡಿರದಿದ್ದರೆ ಅವರೊಬ್ಬ ಕನ್ನಡದ ಸೃಜನಶೀಲ ಬರಹಗಾರರಾಗುತ್ತಿದ್ದರೇನೊ.ಆದರೆ ಶೆಟ್ಟರ್ ಅವರು ಆಧುನಿಕ ಕರ್ನಾಟಕ ರೂಪಿಸಿದ ಪ್ರಮುಖ ಇತಿಹಾಸಕಾರ ಎನ್ನುವುದರಲ್ಲಿ ಯಾವ ಸಂಶಯವಿಲ್ಲ. ಬೌದ್ಧಿಕ ಕಾರ್ಯ ಮತ್ತು ಬರವಣಿಗೆ ಬಗೆಗೆ ಅವರಿಗಿದ್ದ ಉತ್ಸಾಹ ನಮಗೆ ಸ್ಪೂರ್ತಿ ನೀಡುತ್ತದೆ. ಅವರು ಕಂಡುಕೊಂಡÀ ಸಂಶೋಧನಾ ಮಾರ್ಗ ಮುಂದಿನ ಪೀಳಿಗೆಯ ಸಮಾಜ ವಿಜ್ಞಾನಗಳು ತಮ್ಮ ಜಿಜ್ಞಾಸೆಯಲ್ಲಿ, ಶೆಟ್ಟರ್ ಅವರ ರೂಪಕ ಬಳಸಿ ಹೇಳುವುದಾದರೆ, ಪೂರ್ಣ ವಿರಾಮ ಹುಡುಕದೆ, ಅಲ್ಪ ವಿರಾಮಗಳನ್ನಿಡಲು ಪ್ರೇರೇಪಿಸುತ್ತದೆ (ಶೆಟ್ಟರ್, 2015). ಶೆಟ್ಟರ್ ಅವರು ಪರಿಭಾವಿಸಿದ ‘ಅಂತ್ಯವೇ ಇಲ್ಲದ ಅನ್ವೇಷಣೆ’ ನಮಗೆ ಅನುಕರಣೀಯ.

ಪ್ರೊ. ಶೆಟ್ಟರ್ ಅವರ ಜೀವನಕ್ಕೆ ಒಂದು ಸಂಕಲ್ಪವಿತ್ತು. ಅವರು ಜ್ಞಾನಸೃಷ್ಟಿ ಮತ್ತು ಪ್ರಸರಣದಲ್ಲಿ ನಂಬಿಕೆಯಿಟ್ಟ ಜಾಯಮಾನಕ್ಕೆ ಒಗ್ಗಿಕೊಂಡವರು. ಪ್ರಾಧ್ಯಾಪಕ ವೃತ್ತಿ ಅವರಿಗೆ ಕೇವಲ ಒಂದು ಹೊಟ್ಟೆಪಾಡಿನ ನೌಕರಿ ಆಗಿರಲಿಲ್ಲ. ಅದು ಅವರಿಗೆ ವಿದ್ವತ್ ಮತ್ತು ಅನ್ವೇಷಣೆ ಮೂಲಕ ಸತ್ಯವನ್ನರಿಸುವ ಜೀವನ ಕ್ರಮವಾಗಿತ್ತು. ಕನ್ನಡದ ಶ್ರೇಷ್ಠ ಕೃತಿ ಪಂಪ ಭಾರತವನ್ನು ಅವರು ಸುಮಾರು ಐವತ್ತಕ್ಕೂ ಹೆಚ್ಚು ಬಾರಿ ಓದಿದ್ದರಂತೆ. ಯಾವ ಪುರುಷಾರ್ಥಕ್ಕೂಸ್ಕರ ಶೆಟ್ಟರ್ ಅವರು ಇದನ್ನು ಓದಿರಬೇಕು? ಪ್ರಮೋಶನ್‍ಗಾಗಿ ಅಲ್ಲ, ಕುಲಪತಿಯಾಗಲಿಕ್ಕಂತೂ ಅಲ್ಲವೇ ಅಲ್ಲ; ಒಬ್ಬ ವಿದ್ವಾಂಸನಾಗಿ ಓದು, ಅಧ್ಯಯನಗಳನ್ನು ಪ್ರೀತಿಸಿದ್ದಕ್ಕಾಗಿ.

[ಈ ಲೇಖನದ ಪೂರ್ಣಪಠ್ಯ ಇ.ಪಿ.ಡಬ್ಲ್ಯು ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಇPW, ಗಿoಟ.55, Issue ಓo.28-29, 11 ಎuಟ, 2020]

*ಡಾ.ಎನ್.ಎಸ್.ಗುಂಡೂರ ಅವರು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಶ್ ಅಧ್ಯಯನ ವಿಭಾಗದ ಮುಖ್ಯಸ್ಥರು. ಪ್ರೊ.ರವಿ ಕೋರಿಶೆಟ್ಟರ ಅವರು ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್‍ನ ಸಿನಿಯರ್ ಫೆಲೊ ಹಾಗೂ ಬೆಂಗಳೂರಿನ ನಿಯಾಸ್ ನಲ್ಲಿ ಅಡ್ಜ್‍ಂಕ್ಟ್ ಪ್ರೊಫೆಸರ್. ಪವನಗಂಗಾಧರ ಅವರು ಗುಬ್ಬಿ ತಾಲೂಕಿನ ಮಾವಿನಹಳ್ಳಿಯ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಶ್ ಉಪನ್ಯಾಸಕರು.

 

 

 

 

Leave a Reply

Your email address will not be published.