ವಿಮರ್ಶೆಗೆ ತಕ್ಕ ವಾತಾವರಣ ಏಕಿಲ್ಲ?

-ಓ.ಎಲ್.ನಾಗಭೂಷಣ ಸ್ವಾಮಿ

ಕನ್ನಡದ ವಿಮರ್ಶಾ ಬರಹಗಳು ನಿಜಕ್ಕೂ ಕೃತಿಗಳಿಗೆ, ಕೃತಿಕಾರರಿಗೆ ನ್ಯಾಯ ಒದಗಿಸುತ್ತಿವೆಯೇ? ಪುಸ್ತಕಗಳ ಪರಿಚಯ, ಅವಲೋಕನ, ಬೆನ್ನುಡಿ, ಮುನ್ನುಡಿಗಳ ಹೆಸರಿನಲ್ಲಿ ಪ್ರಕಟವಾಗುವ ಏಕಮುಖೀ ಹೊಗಳಿಕೆ-ತೆಗಳಿಕೆಗಳು ವಸ್ತುನಿಷ್ಠ ವಿಮರ್ಶೆಯನ್ನು ನುಂಗಿಹಾಕುತ್ತಿವೆಯೇ? ಈ ಕುರಿತ ಆರೋಗ್ಯಪೂರ್ಣ ಸಂವಾದಕ್ಕೆ, ಕೃತಿಗಳ ನಿಷ್ಪಕ್ಷಪಾತ ವಿಮರ್ಶೆಗೆ ವೇದಿಕೆಯಾಗಬೇಕೆಂಬುದು ಸಮಾಜಮುಖಿಯ ಆಶಯ.

ವಿಮರ್ಶೆಯನ್ನು ಕುರಿತು ಮಾತಾಡಲು ಹೊರಟರೆ, `ಹೊನ್ನ ತೂಗಿದ ತ್ರಾಸು ಕಟ್ಟಳೆ ಹೊನ್ನಿಂಗೆ ಸಮನಪ್ಪುದೇ,’ ಎಂದು ಅಲ್ಲಮ ಕೇಳಿದ ಪ್ರಶ್ನೆ ನೆನಪಾಗುತ್ತದೆ. ಚಿನ್ನವನ್ನು ತೂಗುವ ತಕ್ಕಡಿ ಚಿನ್ನಕ್ಕೆ ಸಮವೇ ಅನ್ನುವ ಪ್ರಶ್ನೆಯಲ್ಲೇ `ಖಂಡಿತ ಇಲ್ಲ!’ ಎಂಬ ಉತ್ತರವೂ ಇದೆ. `ವಿಮರ್ಶೆ’ ಅನ್ನುವ ಪದದ ಮೂಲ ಅರ್ಥವೂ `ಉಜ್ಜಿ ನೋಡುವುದು,’ ಎಂದೇ ಇತ್ತು-ಚಿನ್ನವನ್ನು ಒರೆಗೆ ಉಜ್ಜಿ ನೋಡಿ ಪರೀಕ್ಷಿಸುವ ಹಾಗೆ.

ಈ ಎರಡೂ ಮಾತು ವಿಮರ್ಶೆಯ ಬಗ್ಗೆ ಇರುವ ಎರಡು ವಿರುದ್ಧ ಧೋರಣೆಗಳನ್ನು ಹೇಳುತ್ತವೆ. ವಿಮರ್ಶೆ ಎಂದೂ ಕೃತಿಗೆ ಸಮನಲ್ಲ ಅನ್ನುವ ಧೋರಣೆ ಬೆಳೆಯುತ್ತ, `ವಿಮರ್ಶಕರು ಪಕ್ಷಿಕಾಶಿಯ ಹಕ್ಕಿಗಳನ್ನು ಕೊಲ್ಲುವ ವ್ಯಾಧರು,’ ಎಂದೋ, `ನೆಲದ ಮೇಲೆ ಹೊಟ್ಟೆ ಹೊಸೆಯುತ್ತ ಸಾಗುವ ವಿಷ ಸರ್ಪ’ವೆಂದೋ ನಿಂದಿಸುವಲ್ಲಿಗೆ ತಲುಪುತ್ತದೆ. ವಿಮರ್ಶಕರಷ್ಟು ನಿಂದೆಗೆ ಗುರಿಯಾದವರು, ಅಪಾಯಕ್ಕೆ ಸಿಲುಕಿದವರು ಯಾರೂ ಇಲ್ಲ. ಇದು ಸಾಹಿತ್ಯ ವಿಮರ್ಶೆಯ ಮಾತು ಮಾತ್ರವಲ್ಲ. ಸಮಾಜದಲ್ಲಿ ನಡೆಯುವ ಸಂಗತಿಗಳನ್ನು, ಸಮಾಜದ ಸ್ವರೂಪವನ್ನು ವಿಮರ್ಶಿಸಿದವರೂ ಅಪಾಯಕ್ಕೆ ಕೊರಳೊಡ್ಡುವ, ಸೆರೆಮನೆ ಸೇರುವ, ಪ್ರಾಣ ತೆರುವ ನಿದರ್ಶನಗಳು ಹೇರಳವಾಗಿವೆ. ವಿಮರ್ಶೆ ಅಪಾಯಕಾರಿ ಎಂದು ಆಳುವವರ್ಗಗಳು ಸದಾ ಭಾವಿಸುತ್ತವೆ.

ಈ ಹೋಲಿಕೆಗಳು ಇನ್ನೊಂದು ದಿಕ್ಕಿಗೂ ನಮ್ಮ ಮನಸ್ಸನ್ನು ಸೆಳೆಯುತ್ತವೆ. ಕಣ್ಣಿಗೆ ಕಾಣುವ ಪ್ರತಿಯೊಂದನ್ನೂ ಮನಸಿಗೆ ಬರುವ ಪ್ರತಿಯೊಂದನ್ನೂ ನಾವು ಬದುಕಿರುವವರೆಗೂ ಮತ್ತೊಂದಕ್ಕೆ ಹೋಲಿಸುತ್ತ, ಬೆಲೆ ಕಟ್ಟುತ್ತ, ಕಟ್ಟಿದ ಬೆಲೆಯನ್ನು ಪರಿಷ್ಕರಿಸುತ್ತ ಇರುತ್ತೇವೆ. ವಿಮರ್ಶೆಯಿಂದ ಪಾರಾಗುವ ಮಾತೇ ಇಲ್ಲ. ನಾವು ಪ್ರತಿಯೊಬ್ಬರೂ ವಿಮರ್ಶೆ ಮಾಡುತ್ತಲೂ ಇರುತ್ತೇವೆ, ವಿಮರ್ಶೆಗೆ ಗುರಿಯಾಗುತ್ತಲೂ ಇರುತ್ತೇವೆ. `ವಿಮರ್ಶೆ ಅನ್ನುವುದು ಉಸಿರಾಟದಷ್ಟೇ ಅನಿವಾರ್ಯ,’ ಎಂಬ ಇನ್ನೊಂದು ಪ್ರಸಿದ್ಧ ಉಕ್ತಿ, ಎಲಿಯಟ್ ಹೇಳಿದ್ದು, ನೆನಪಾಗುತ್ತಿದೆ. ವಿಮರ್ಶೆಯು `ಸತ್ಯ ತೀರ್ಮಾನದ ಸಾಮೂಹಿಕ ಅನ್ವೇಷಣೆ,’ ಅನ್ನುವ ಘೋಷಣೆಯೂ ಅವನದೇ.

ಯಾವುದು ಒಳ್ಳೆಯದು, ಯಾವುದು ಅಲ್ಲ, ಯಾವುದು ಹಿತ, ಯಾವುದು ದುಃಖ ತರುವಂಥದು ಅನ್ನುವುದನ್ನು ತಿಳಿಸುವುದು ಸಾಹಿತ್ಯದ ಜವಾಬ್ದಾರಿ ಎಂದು ಕನ್ನಡ ಚಿಂತನೆ ಒಂಬತ್ತನೆಯ ಶತಮಾನದಲ್ಲೇ ಹೇಳಿದೆ. ಬರೆಯುವವರು ತಮ್ಮ ಸುಖಕ್ಕೆ ಬರೆಯುತ್ತೇವೆ ಅನ್ನಬಹುದು, ಓದುವವರು ತಮ್ಮ ಖುಷಿಗೆ ಓದುತ್ತೇವೆ ಅನ್ನಬಹುದು. ಹಾಗನ್ನುವ ಅವಕಾಶ ವಿಮರ್ಶಕರಿಗೆ ಇಲ್ಲವೇ ಇಲ್ಲ. ವಿಮರ್ಶೆ ಸಾಮಾಜಿಕವಾದೊಂದು ಕ್ರಿಯೆ, ಜವಾಬ್ದಾರಿ. ಅದಕ್ಕೇ ಅದು ಅಷ್ಟೊಂದು ಬೆಲೆ ಬಾಳದ, ಅದರೆ ಬೆಲೆ ಕಟ್ಟುವುದಕ್ಕೆ ಅನಿವಾರ್ಯವಾಗಿ ಬೇಕಾಗಿರುವ ತಕ್ಕಡಿ, ಮತ್ತು ಒರೆಗಲ್ಲು! ಎಲ್ಲಿಯವರೆಗೆ ಮನುಷ್ಯ ಸಮಾಜ `ಅರ್ಥ’ವನ್ನು ಕಟ್ಟಿಕೊಂಡು ಬದುಕುತ್ತದೋ ಅಲ್ಲಿಯವರೆಗೆ ತಕ್ಕಡಿ, ಒರೆಗಲ್ಲು ಬೇಕೇಬೇಕು. ಸರಿ ತಪ್ಪು, ಒಳಿತು ಕೆಡುಕು, ನ್ಯಾಯ ಅನ್ಯಾಯ ಇಂಥ ದ್ವಂದ್ವ ಇರುವವರೆಗೆ ವಿಮರ್ಶೆ ಅನಿವಾರ್ಯ ಸಾಮಾಜಿಕ ಅಗತ್ಯ,

ಹಾಗೆ ವಿಮರ್ಶೆ ಅನ್ನುವುದು ಮನುಷ್ಯನ ಸಹಜಶಕ್ತಿಗಳಲ್ಲಿ ಒಂದು. ಅದರ ಅಸಂಖ್ಯ ರೂಪಗಳಲ್ಲಿ ಸಾಹಿತ್ಯ ವಿಮರ್ಶೆ ಒಂದು ರೂಪ. ಸಾಹಿತ್ಯ ವಿಮರ್ಶೆ ಯಾಕೆ ಮುಖ್ಯ ಅನ್ನುವುದಕ್ಕೆ ಸಮರ್ಥವಾದ ಕಾರಣ 1980ರ ಸುಮಾರಿನಲ್ಲಿ ನಾನು ಓದಿದ ಲೇಖನವೊಂದರಲ್ಲಿ ದೊರೆಯಿತು. ಬದುಕು ಅಸಂಗತ, ಅತಾರ್ಕಿಕ, ಅಸ್ಥಿರ, ಅಸಂಬದ್ಧ ಇತ್ಯಾದಿ ಎಲ್ಲವೂ ಆಗಿರುವಾಗ ಸಾಹಿತ್ಯವು ಬದುಕಿಗೆ ಅರ್ಥದ, ಮೌಲ್ಯದ, ತರ್ಕದ, ಭಾವದ ಚೌಕಟ್ಟು ಹಾಕಿಕೊಡುತ್ತದೆ ಅನ್ನುವ ಕಾರಣಕ್ಕೆ ಅದು ಮುಖ್ಯವಾಗುತ್ತದೆ. ಸಾಹಿತ್ಯವು ಬದುಕನ್ನು ಕಲಿಯುವ ದಾರಿ ಎಂದು ಕೆನಡಾದ ವಿಮರ್ಶಕ ನಾರ್ಥೋಪ್ ಫ್ರೈ ಆ ಲೇಖನದಲ್ಲಿ ವಿವರಿಸಿದ್ದ. ಅದನ್ನೆ ಸ್ವಲ್ಪ ಮುಂದೊತ್ತಿದರೆ ಸಾಹಿತ್ಯವನ್ನು ವಿಮರ್ಶಿಸುವುದನ್ನು ಕಲಿಯುವ ಮೂಲಕ ಬದುಕನ್ನು ವಿಮರ್ಶಿಸಲು ಕಲಿಯುತ್ತೇವೆ ಅನ್ನಬಹುದು.

ನಮ್ಮ ದೇಶದಂಥ `ಮುಂದುವರೆಯುತ್ತಿರುವ’ ದೇಶಗಳ ಒಂದು ಲಕ್ಷಣವೆಂದರೆ ಸಾಹಿತ್ಯ ಎಂದು ಸಾಮಾನ್ಯವಾಗಿ ಕರೆಯಲಾಗುವ ಬರವಣಿಗೆಗೆ ಹೆಚ್ಚು ಪ್ರಾಶಸ್ತ್ಯ ದೊರೆಯುತ್ತದೆ, ಇತರ ಜ್ಞಾನಶಾಖೆಗಳ ಬೆಳವಣಿಗೆ ತೀರ ನಿಧಾನಗತಿಯದಾಗುತ್ತದೆ. ಅಧಿಕಾರವಿರದ ಭಾಷೆಗಳು ಅನ್ನದ ಭಾಷೆಯೂ ಆಗದೆ, ಅರಿವಿನ ಭಾಷೆಯೂ ಆಗದೆ ಸೊರಗುತ್ತವೆ. ಭಾವಗಳ ಭಾಷೆ, ಸಂಕಟ ತೋಡಿಕೊಳ್ಳುವ ಭಾಷೆ, ಸಿಟ್ಟು ತೋರುವ ಭಾಷೆಯಾಗಿ, ಆಪ್ತ ನುಡಿಯಾಗಿ ಇತರ ಅಮೂರ್ತ ವಿಷಯಗಳನ್ನು ಹೇಳುವ ಕ್ರಮವಾಗಲೀ, ಪದಸಂಪತ್ತಾಗಲೀ ಇಲ್ಲವಾಗುತ್ತ ನರಳುತ್ತವೆ.

ಹಾಗಾಗಿ ಆಫ್ರಿಕದಲ್ಲೋ ನಮ್ಮ ದೇಶದಲ್ಲೋ ಸಮಾಜವಿಜ್ಞಾನಿಗಳು, ಮಾನವಿಕ ವಿಷಯಗಳನ್ನು ಬಲ್ಲವರು ಮಾಡಬೇಕಾದ ಕಾರ್ಯಗಳನ್ನೆಲ್ಲ ಸಾಹಿತಿಗಳೇ ಮಾಡಬೇಕಾಗಿ ಬಂದಿದೆ ಅನ್ನುವ ಮಾತು ನಾನು ವಿದ್ಯಾರ್ಥಿಯಾಗಿದ್ದಾಗ ಕೇಳಿದ್ದೆ. ಪರಿಸ್ಥಿತಿ ಹೆಚ್ಚೇನೂ ಬದಲಾದಂತೆ ಕಾಣುತ್ತಿಲ್ಲ. ಹಾಗಾಗಿ ರಾಜಕೀಯ, ಪರಿಸರ, ಜಾತಿ ಸಮಸ್ಯೆ, ಚಲನಚಿತ್ರ, ಗಡಿ ಹೋರಾಟ, ನದೀ ನೀರಿನ ಜಗಳ ಇಂಥವು ಯಾವುದು ತಲೆ ಎತ್ತಿದರೂ `ಯಾಕೆ ನಮ್ಮ ಸಾಹಿತಿಗಳು, ಬುದ್ಧಿಜೀವಿಗಳು ಸುಮ್ಮನಿದ್ದಾರೆ?’ ಅನ್ನುವ ಪ್ರಶ್ನೆ ಏಳುತ್ತದೆ. ಸಾಹಿತ್ಯ ಸಾಹಿತಿಗಳು, ವಿಮರ್ಶಕರು ಹೊರಲು ಸಾಧ್ಯವಿಲ್ಲದ, ಹೊರಲು ಬಾರದ ಜವಾಬ್ದಾರಿಗಳನ್ನು ಹೊರುವಂತಾಗಿದೆ. 

ಗಮನಿಸಿ ನೋಡಿದರೆ ಸಾಹಿತ್ಯದ ಬೋಧನೆ ಅನ್ನುವುದು ಸಾಹಿತ್ಯದ ಅರಿವನ್ನು ಪಡೆಯುವ ಕಲಿಕೆಯೇ ಆಗಿರುತ್ತದೆ. ವಿದ್ಯಾರ್ಥಿಗಳು ಕಲಿಯುವುದು ವಿಮರ್ಶೆಯನ್ನೇ ಹೊರತು ಸಾಹಿತ್ಯವನ್ನಲ್ಲ. ಈ ಮಾತು ನಮಗೆ ಅರ್ಥವಾದರೆ ಸಾಹಿತ್ಯದಲ್ಲಿ, ಸಾಹಿತ್ಯ ವಿಮರ್ಶೆಯಲ್ಲಿ ಯಾಕೆ ಪಂಥಗಳು ಅಥವ ಬೇರೆ ಬೇರೆ ದಾರಿಗಳು ಹುಟ್ಟಿಕೊಳ್ಳುತ್ತವೆ ಅನ್ನುವುದು ತಿಳಿಯುತ್ತದೆ.  ಬದುಕನ್ನು ನೋಡುವುದಕ್ಕೆ `ಒಂದು’ ಸರಿಯಾದ ಕ್ರಮ, ವಿಧಾನ ಹೇಗೆ ಇರಲು ಸಾಧ್ಯವಿಲ್ಲವೋ ಹಾಗೆಯೇ ಸಾಹಿತ್ಯವನ್ನು ನೋಡಲು `ಒಂದು’ ಸರಿಯಾದ ಕ್ರಮ, ವಿಧಾನ ಇರಲು ಸಾಧ್ಯವಿಲ್ಲ.

ವಿಮರ್ಶೆಯೆಂಬ ಸಾಮೂಹಿಕ, ಸಾಮಾಜಿಕ ಕ್ರಿಯೆಗೆ ತಕ್ಕ ವಾತಾವರಣ ಈಗ ಇಲ್ಲ ಅನಿಸುತ್ತದೆ. ಹಾಗಾಗಿರುವುದಕ್ಕೆ ಸಾಹಿತ್ಯಬೋಧನೆಯಲ್ಲಿ ಆಗಿರುವ ಬದಲಾವಣೆಗಳು, ಸಾಹಿತ್ಯಸಂಬಂಧೀ ಪರಿಕಲ್ಪನೆಗಳ ಬಗ್ಗೆ ಹುಟ್ಟಿಕೊಂಡಿರುವ ಸಂಶಯ, ಪ್ರಶ್ನೆಗಳು ಕಾರಣವಾಗಿವೆ. ಸಾಹಿತ್ಯವೆನ್ನುವುದು ಇದೆಯೋ, ಅದನ್ನು ಕೃತಿಯೊಂದರ ಲಕ್ಷಣಗಳಿಂದ ನಿರ್ಧರಿಸಬಹುದೋ ಅಥವಾ ಸಾಮಾಜಿಕ, ರಾಜಕೀಯ ಕಾರಣಗಳಿಂದ ಸಾಹಿತ್ಯವೆನ್ನುವುದನ್ನು ವ್ಯಾಖ್ಯಾನಿಸುತ್ತೇವೋ ಅನ್ನುವ ಪ್ರಶ್ನೆಯ ಬಗ್ಗೆ ಕನ್ನಡದಲ್ಲಿ ಚರ್ಚೆ ನಡೆದಿಲ್ಲ. ಸಾಹಿತ್ಯವನ್ನು ಕುರಿತು ಕಳೆದೆರಡು ದಶಕಗಳ ಬರವಣಿಗೆಯ ಮೇಲೆ ಕಣ್ಣಾಡಿಸಿದರೆ ಕೃತಿಯೊಂದರ ಆಶಯ, ಕೃತಿಕಾರರ ರಾಜಕೀಯ ಒಲವು, ಸೈದ್ಧಾಂತಿಕ ನಿಲುವು ಇವೇ ಮುಖ್ಯವಾಗಿ ಎಣಿಕೆಗೆ ಬಂದಿರುವುದು ಕಾಣುತ್ತದೆ.

`ಏನು ಬರೆದಿದ್ದಾರೆ ಅನ್ನುವುದಕ್ಕಿಂತ ಯಾರು ಬರೆದಿದ್ದಾರೆ ಅನ್ನುವುದು ಮುಖ್ಯವಾಗಿರುವ ಕಾಲ,’ ಎಂದು ಕೆ.ವಿ.ನಾರಾಯಣ ಅವರು ಹೇಳಿದ ಮಾತು ನೆನಪಾಗುತ್ತಿದೆ. ಈ ಧೋರಣೆ ಸಾಹಿತ್ಯ ಬೋಧನೆಯನ್ನೂ ಪ್ರಭಾವಿಸಿದೆ. ವಿಮರ್ಶೆಯ ತತ್ವ, ಸಿದ್ಧಾಂತ, ಕೃತಿಯ ವಿವರಗಳ ಪರಿಶೀಲನೆಗಿಂತ ಸುಲಭವಾಗಿ ಒಪ್ಪಿಕೊಂಡ ತೀರ್ಮಾನಗಳಿಗೆ ಅನುಸಾರವಾಗಿ ಕೃತಿಯನ್ನು ವಿಮರ್ಶಿಸುವ ಕ್ರಮ ಮುಖ್ಯವಾದಂತೆ ತೋರುತ್ತದೆ.

ಸಾಹಿತ್ಯವೆನ್ನುವುದು ಭಾಷೆಯಲ್ಲಿ ರೂಪುತಳೆಯುವ, ಭಾಷೆಯ ಮೂಲಕವೇ ಓದುಗರ ಮನಸಿನಲ್ಲಿ ಅನುಭವ ಪ್ರಪಂಚವನ್ನು ಕಟ್ಟುವ ಕ್ರಿಯೆ ಎಂದಾದರೆ ಭಾಷೆ, ಲಯ, ಛಂದಸ್ಸು, ವ್ಯಾಕರಣ, ಅರ್ಥನಿರ್ಮಾಣಕ್ಕೂ ಸಮಾಜದ ಸ್ಥಿತಿಗತಿಗೂ ಇರುವ ಸಂಬಂಧ ಇಂಥವುಗಳಿಗೆ ಸೂಕ್ಷ್ಮ ಗಮನಕೊಡಬೇಕೆನ್ನುವುದು ಅಷ್ಟು ಮುಖ್ಯವಾಗಿ ಇಂದು ತೋರುತ್ತಿಲ್ಲ. ಯಾವುದೇ ಒಂದು ಸಿದ್ಧಾಂತದ ಸೂಕ್ಷ್ಮಗಳಿಗೆ ಗಮನಕೊಡುವ ಬದಲಾಗಿ ಸ್ಥೂಲವಾದ ಸಾಮಾನ್ಯ ತಿಳಿವಳಿಕೆಯೇ ಬೇಕಾದಷ್ಟಾಯಿತು ಅನ್ನುವ ಧೋರಣೆಯೂ ಇದೆ.

ಸಾಹಿತ್ಯದ ಓದು ಅನ್ನುವುದು ನನ್ನದಲ್ಲದ ಇನ್ನೊಂದು ಮನಸ್ಸು ಲೋಕವನ್ನು ಹೇಗೆ ನೋಡಿದೆ ಎಂದು ಅರಿತು ಅನುಭವಿಸುವ ಕುತೂಹಲ ಮತ್ತು ತಾಳ್ಮೆಯ ಕ್ರಿಯೆ. ಹಾಗೆ ಅರಿತದ್ದನ್ನು ಜೊತೆಯವರೊಡನೆ ಹಂಚಿಕೊಂಡು, ಭಿನ್ನಾಭಿಪ್ರಾಯಕ್ಕೂ ಅವಕಾಶಕೊಟ್ಟು, ನಮ್ಮ ತೀರ್ಮಾನ ತಿದ್ದಿಕೊಳ್ಳುವ, ಇನ್ನೊಬ್ಬರು ತಮ್ಮ ನಿಲುವು ಪರಿಷ್ಕರಿಸಿಕೊಳ್ಳುವ ಸಾಮೂಹಿಕ ಕ್ರಿಯೆ ವಿಮರ್ಶೆ.  

ಕನ್ನಡದ ವಿಮರ್ಶಾ ಬರಹಗಳ ಒಂದು ವಿಶೇಷ ಲಕ್ಷಣವನ್ನು ಗಮನಿಸಬಹುದು. ಎಪ್ಪತ್ತರ ದಶಕದಿಂದ ಆರಂಭವಾಗಿ ಸುಮಾರು ಎರಡು ದಶಕಗಳ ಕಾಲ ಕನ್ನಡ ಸಾಹಿತ್ಯ ವಿಮರ್ಶೆ ವಿಚಾರಸಂಕಿರಣಗಳ ಫಲಿತಾಂಶವಾಗಿ ಬೆಳೆದದ್ದು ಕಾಣುತ್ತದೆ. ಈಗಿನಂತೆ ಮನೆಮನೆಗೂ ಪ್ರತಿಯೊಬ್ಬರ ಕೈಗೂ ಎಟಕುವ ಹಾಗೆ ಸಮೂಹ ಮಾಧ್ಯಮಗಳು ಬೆಳೆದಿರದಿದ್ದ ಕಾಲದಲ್ಲಿ ಮುದ್ರಣ, ಪತ್ರಿಕೆ, ವಿಚಾರ ಸಂಕಿರಣ ಇವೇ ಸಾಹಿತಿ, ವಿಮರ್ಶಕರನ್ನು ಕನ್ನಡಿಗರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದವು. ಮುಖ್ಯವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಹಾಗೆಯೇ ತಕ್ಕ ಮಟ್ಟಿಗೆ ಇತರ ಸಂಘಸಂಸ್ಥೆಗಳೂ ಹಮ್ಮಿಕೊಳ್ಳುತ್ತಿದ್ದ ವಿಚಾರಸಂಕಿರಣಗಳಲ್ಲಿ ಸರಿಸುಮಾರು ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಮಂಡಿಸಿದ ಪ್ರಬಂಧಗಳೇ ಆನಂತರ ಪುಸ್ತಕ ರೂಪದಲ್ಲಿ ಮರು ಹುಟ್ಟು ಪಡೆಯುತ್ತಿದ್ದವು.

ಹೀಗೆ ಏರ್ಪಾಟಾಗುತ್ತಿದ್ದ ಸಂಕಿರಣಗಳಿಗೂ ಸ್ನಾತಕೋತ್ತರ ಮತ್ತು ಸ್ನಾತಕ ತರಗತಿಗಳ ಸಾಹಿತ್ಯ ಸಿಲೆಬಸ್‍ಗೂ ಸಂಬಂಧವೂ ಇರುತ್ತಿತ್ತು. ಹಾಗೆ ಬರೆಯಬಲ್ಲ ವಿಮರ್ಶಕರು ವರ್ಷದಲ್ಲಿ ನಾಲ್ಕಾರು ಸಂಕಿರಣಗಳಲ್ಲಿ ಒಂದೊಂದರಲ್ಲೂ ಒಬ್ಬ ಕವಿಯೋ ಕಾದಂಬರಿಕಾರನ ಕುರಿತೋ ಬರೆಯುತ್ತ ಅವರವರ ಬರವಣಿಗೆಯ ವಿಸ್ತಾರ ಹೆಚ್ಚಿತು, ಜೊತೆಗೆ ಕೆಲವು ಅಪರೂಪದ ಪಿಎಚ್‍ಡಿ ಪ್ರಬಂಧಗಳು ಗಮನ ಸೆಳೆದವು. ನವ್ಯದ ಉತ್ಕರ್ಷತೆಯ ಅವಧಿಯಲ್ಲಿ ವಿಚಾರಸಂಕಿರಣಗಳ ಫಲವಾಗಿ ಮೂಡಿದ ವಿಮರ್ಶಾ ಬರವಣಿಗೆಯಲ್ಲಿ ಒಳನೋಟಗಳು, ವಾಗ್ವಾದಗಳು ಇದ್ದವು, ನಮ್ಮನ್ನು ಬೆಳೆಸಿದವು, ನಿಜ. ಆದರೆ ಹಿಂದಿನ ತಲೆಮಾರಿನಲ್ಲಿ ಬಂದಂಥ ಕವಿರಾಜಮಾರ್ಗ, ನಾಡೋಜ ಪಂಪ, ಬಂಕಿಮಚಂದ್ರ ಇಂಥ ಪುಸ್ತಕಗಳು, ಒಬ್ಬ ವಿಮರ್ಶಕರ ಪ್ರಜ್ಞೆಯ ಮೂಲಕ ಲೇಖಕ, ಸಾಹಿತ್ಯ ಪ್ರಕಾರವನ್ನು ಕುರಿತ, ಸಾಹಿತ್ಯ ತತ್ವಗಳನ್ನು ಕುರಿತ ಗಹನ ಅಧ್ಯಯನಗಳು ಕಡಮೆಯಾದವು. ಈ ಮಾತಿಗೆ ಗೌರವಾರ್ಹ ಅಪವಾದಗಳಿವೆ.

ಎಪ್ಪತ್ತರ ದಶಕದ ಮಧ್ಯಭಾಗದಿಂದ ಆರಂಭಿಸಿ ಸಾಹಿತ್ಯ ಅಧ್ಯಯನದಲ್ಲಿ ತೊಡಗುವವರಲ್ಲಿ ವೈವಿಧ್ಯ ಹೆಚ್ಚಿತು. ವಿವಿಧ ಜಾತಿ, ಸಾಮಾಜಿಕ ಆರ್ಥಿಕ, ಪ್ರಾದೇಶಿಕ ಹಿನ್ನೆಲೆಯ ವೈವಿಧ್ಯ ಎದ್ದು ಕಾಣತೊಡಗಿದವು, ಜಾಗತಿಕವಾಗಿ ಅದುವರೆಗೆ ಒಪ್ಪಿತವಾಗಿದ್ದ ಸಾಹಿತ್ಯ ತತ್ವಗಳು ಪ್ರಶ್ನೆಗೊಳ್ಳತೊಡಗಿದವು. ಹೊಸ ಉದ್ಯೋಗಾವಕಾಶ ಸೃಷ್ಟಿಯಾದಂತೆ, ಅದಕ್ಕೆ ಬೇರೆಯ ರೀತಿಯ ಕೌಶಲ ಅಗತ್ಯವಾದಂತೆ ಉನ್ನತ ಮಟ್ಟದ ಭಾಷೆ, ಸಾಹಿತ್ಯಗಳ ಅಧ್ಯಯನದಲ್ಲಿ ಈಗಿರುವಂತೆ ಆರ್ಥಿಕವಾಗಿ ಸಬಲರಲ್ಲದ ವರ್ಗಗಳಿಂದ ಬಂದವರು ಅದರಲ್ಲೂ ಮಹಿಳೆಯರು ಹೆಚ್ಚಾಗಿ ತೊಡಗಿರುವುದು ಕಾಣುತ್ತದೆ. ಬದಲಾದ ವಿದ್ಯಾರ್ಥಿ ಸಮೂಹಕ್ಕೆ ಚೈತನ್ಯ ತರುವ ರೀತಿಯಲ್ಲಿ ಸಾಹಿತ್ಯ ಅಧ್ಯಯನ ವಿಧಾನವನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯಗಳು ವಿಫಲವಾಗಿವೆ ಎಂದೇ ತೋರುತ್ತದೆ. ಎಳೆಯ ಮನಸುಗಳನ್ನು ತಾಳ್ಮೆಯ ಓದಿಗೆ, ಸಹನೆಯಿಂದ ಪರಿಶೀಲಿಸಿ ನೋಡುವುದಕ್ಕೆ, ಅರ್ಥಸಾಧ್ಯತೆಗಳನ್ನು ತಡಕುವ ರೀತಿಗೆ ಸಜ್ಜುಗೊಳಿಸಿ ಬದುಲು ಅಗತ್ಯವಾದ ಮನಸಿನ ಪ್ರಬುದ್ಧತೆ ಪಡೆಯಲು ನೆರವಾಗಬೇಕಿದ್ದ ಸಾಹಿತ್ಯ ವಿಮರ್ಶೆ ನಿರ್ಜೀವ ಪಾರಿಭಾಷಿಕಗಳ ಅಧ್ಯಯನವಾಯಿತು ಅನಿಸುತ್ತದೆ.

*

ಈಗ ಕಣ್ಣಿಗೆ ಕಾಣುವ ವಿಮರ್ಶೆಯನ್ನು ನೋಡೋಣ. ಸಾಹಿತ್ಯದಲ್ಲಿ ಹಲವು ಬಗೆಗಳಿರುವ ಹಾಗೆ ಸಾಹಿತ್ಯ ವಿಮರ್ಶೆಯಲ್ಲೂ ಹಲವು ಬಗೆಗಳಿವೆ. ಪುಸ್ತಕವನ್ನು ಸಾರಾಂಶರೂಪದಲ್ಲಿ ಪರಿಚಯ ಮಾಡುವುದು ತೀರ ಪ್ರಾಥಮಿಕವಾದ ಕೆಲಸ. ಪುಸ್ತಕದ ಮುನ್ನುಡಿ, ಬೆನ್ನುಡಿಗಳು ಬಹಳ ಮಟ್ಟಿಗೆ ಕೃತಿಯ ಒಳ್ಳೆಯ ಅಂಶಗಳನ್ನು ಎತ್ತಿಹಿಡಿಯುವುದೇ ಹೆಚ್ಚು. ರೆವ್ಯೂ ಅನ್ನುವ ಪದಕ್ಕೆ ಸಂವಾದಿಯಾಗಿ ಅವಲೋಕನ ಅನ್ನುವುದಿದೆ. ದಿನ ಪತ್ರಿಕೆಗಳಲ್ಲಿ ವಾರಕ್ಕೆ ಒಂದು ದಿನ ನಾಲ್ಕು ಅಥವ ಐದು ಪುಸ್ತಕಗಳ ಅವಲೋಕನ ಪ್ರಕಟವಾಗುತ್ತಿತ್ತು. ಸುಮಾರು ಐನೂರು ಪದಗಳ ಮಿತಿಯಲ್ಲಿ ಬರೆದ ಬರಹಕ್ಕೆ ಓದುಗರ ಗಮನ ಸೆಳೆಯುವುದು ಮುಖ್ಯ ಉದ್ದೇಶವಾಗಿರುತ್ತಿತ್ತು.

ನಿಜವಾದ ರೆವ್ಯೂ ಕೃತಿಯ ವಿನ್ಯಾಸ, ಅದು ಅಂಥದೇ ಇತರ ಕೃತಿಗಳಿಗಿಂತ ಹೇಗೆ ಭಿನ್ನ, ಲೇಖಕರು ಎಷ್ಟು ಬೆಳೆದಿದ್ದಾರೆ ಅಥವ ಭರವಸೆ ಮೂಡಿಸುತ್ತಾರೆ ಅನ್ನುವ ಮೌಲ್ಯಮಾಪನವನ್ನೂ ಮಾಡಬೇಕು. ಪರಂಪರೆಯ ಸಾತತ್ಯವನ್ನೋ ಪರಂಪರೆಯಲ್ಲಿ ಕಾಣುವ ಹೊಸ ತಿರುವನ್ನೋ ಗುರುತಿಸುವ ಸಾಮಥ್ರ್ಯವೂ ಅವಲೋಕನಕಾರರಿಗೆ ಇರುವುದು ಅಪೇಕ್ಷಣೀಯ. ಓದುಗವಲಯದ ರುಚಿ ಸೂಕ್ಷ್ಮವನ್ನು ತಿದ್ದುವ ಜವಾಬ್ದಾರಿಯೂ ವಿಮರ್ಶಕರದೇ. ಇಂಥ ಕೆಲಸಗಳಿಗೆ ವ್ಯಾಪಕ ಓದುಗರಿರುವ ದಿನಪತ್ರಿಕೆಗಳಲ್ಲಿ ಈಗ ಅವಕಾಶವಿಲ್ಲ, ರೆವ್ಯೂ ಅನ್ನುವ ಪದ ದಿನ ನಿತ್ಯದ ಬಳಕೆಯಲ್ಲಿ ಆನ್ ಲೈನ್ ಸ್ಟೋರುಗಳಲ್ಲಿ ಗ್ರಾಹಕರ ಮೆಚ್ಚುಗೆ ಅಥವ ನಿಂದನೆಯ ಮಾತಿನ ನಾಲ್ಕು ಸಾಲುಗಳಿಗೆ ಪರಿಮಿತವಾಗಿದೆ. ಗ್ರಾಹಕ ಸಂಸ್ಕೃತಿ ಅನ್ನುತ್ತಾರಲ್ಲ ಅದರ ಪರಿಣಾಮ. ಸಹೃದಯರೂ ಈಗ ಗ್ರಾಹಕರಾಗಿ ಬದಲಾಗಿದ್ದಾರೇನೋ.

ಆದರ್ಶವೆಂದರೆ ಅವಲೋಕನ ಮಾಡುವುದು ತಜ್ಞರೊಬ್ಬರ ಕೆಲಸವಾಗಬೇಕು. ಅಂಥ ತಜ್ಞರನ್ನು ಕನ್ನಡದಲ್ಲಿ ಕಷ್ಟಪಟ್ಟು ಹುಡುಕಿದರೂ ಅವರ ಬರವಣಿಗೆಗೆ ಪ್ರಕಟಣೆಯ ಅವಕಾಶ ಕಡಮೆ. ಪುಸ್ತಕಗಳ ಪರಿಶೀಲನೆಗೇ ಮೀಸಲಾದ ನಿಯತಕಾಲಿಕಗಳು ಎಪ್ಪತ್ತರ ದಶಕದಲ್ಲೇ ಆರಂಭವಾದರೂ ಯಾವುದೂ ದೀರ್ಘಕಾಲ ಬದುಕಿ ಬೆಳೆಯಲಿಲ್ಲ. ವಿಶ್ವವಿದ್ಯಾಲಯಗಳ ವಿದ್ವತ್ ನಿಯತಕಾಲಿಕಗಳಲ್ಲಿ ಮೈಸೂರು, ಬೆಂಗಳೂರು ಮತ್ತು ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯ ದೊಡ್ಡ ಕೆಲಸ ಮಾಡಿದರೂ ಅವೆಲ್ಲ ಈಗ ಗತಕಾಲದ ನೆನಪು ಮಾತ್ರ.

ಮೆಚ್ಚುಗೆಯನ್ನು ಮಾತ್ರ ಬಯಸುವ ಲೇಖಕರು, ತಮ್ಮ ನಿಲುವನ್ನು ಎತ್ತಿ ಹಿಡಿಯುವ ಪುಸ್ತಕವನ್ನು ಮಾತ್ರ ಓದುವ ಓದುಗರು, ಸಾಹಿತ್ಯಾಧ್ಯಯನದಿಂದ ಹೊಟ್ಟೆ ತುಂಬದು ಅನ್ನುವ ನಂಬಿಕೆಯ ವಿದ್ಯಾರ್ಥಿಗಳು, ಕಲಿಸುವ ಉತ್ಸಾಹವಿರದ ಅಧ್ಯಾಪಕರು, ನಮ್ಮ ಖುಷಿಗೆ ನಾವು ಓದುತ್ತೇವೆ ಅನ್ನುವ ಮುಗ್ಧ ಓದುಗರು ಇರುವಾಗ ವಿಮರ್ಶೆ ಕೇವಲ ಮೆಚ್ಚುಗೆ, ಉಗ್ರವಿರೋಧಗಳ ನಡುವೆ ತುಯ್ದಾಡುತ್ತಿರುತ್ತದೆ. ಅಥವಾ ಅದೃಶ್ಯ ಓದುಗರು ತಮ್ಮತಮ್ಮಲ್ಲಿ ನಡೆಸುವ ಅಶೃತ ಸಂವಾದಗಳಲ್ಲಿ ಜೀವಂತವಾಗಿರುತ್ತದೆ.

ಲವಲವಿಕೆಯ ಭಾಷೆ ಬಳಸುತ್ತ, ತನ್ನ ಮೆಚ್ಚುಗೆಗೆ ಕಾರಣಗಳನ್ನು ತಿಳಿಸುತ್ತ, ಕೃತಿಯ ಅರ್ಥವಂತಿಕೆಯ ಹಲವು ಮಗ್ಗುಲನ್ನು ಶೋಧಿಸುತ್ತ ವೈಯಕ್ತಿಕ ಓದಿನ ಆನಂದಕ್ಕೂ ಕೃತಿಯ ಸಾಮಾಜಿಕ ಪರಿಣಾಮದ ಸಾಧ್ಯತೆಗಳಿಗೂ ಕೃತಿಯ ಒಳವಿವರಗಳಿಗೂ ಸಮತೋಲ ಏರ್ಪಡಿಸಿಕೊಂಡು ಖಚಿತ ತೀರ್ಮಾನ ಹೇಳುತ್ತ, ಆ ತೀರ್ಮಾನ ಪರಿಷ್ಕಾರಕ್ಕೆ ಒಳಪಡುವಂಥದು ಅನ್ನುವ ವಿನಯವಿಟ್ಟುಕೊಂಡ ವಿಮರ್ಶೆಯನ್ನು ಬರೆಯುವುದು ಕೃತಿ ರಚನೆಯಷ್ಟೇ ಜವಾಬ್ದಾರಿಯ, ಶ್ರಮದ ಮತ್ತು ಜೀವಂತಿಕೆಯನ್ನು ಕಾಪಾಡುವ, ಸಂತೋಷ ತರುವ ಕೆಲಸ.

*ಲೇಖಕರು ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಪ್ರಸ್ತುತ ಮೈಸೂರಿನಲ್ಲಿ ವಾಸ.

Leave a Reply

Your email address will not be published.