ವಿರಹದ ಬಾನಿನ ಹಕ್ಕಿಯ ಹಾಡು

ಮಾಲತಿ ಪಟ್ಟಣಶೆಟ್ಟಿ

ತನ್ಹಾಯಿಕವನ ಸಂಗ್ರಹವು ತನ್ನ ಹಲವು ವಿಶಿಷ್ಟ ಗುಣಗಳಿಂದಾಗಿ ಮೆಚ್ಚುಗೆಯಾಗುತ್ತದೆ. ಗಜಲ್ಗಳಂತೆಯೇ ವಿರಹದ ಹೂರಣವುಳ್ಳ ಇಲ್ಲಿಯ ಕವಿತೆಗಳು ಕನ್ನಡ ಸಾಹಿತ್ಯದಲ್ಲಿ ಭಿನ್ನ ಮಾದರಿಯನ್ನು ಸ್ಥಾಪಿಸಿವೆ.

ತನ್ಹಾಯಿ

ಕವನ ಸಂಗ್ರಹ

ಎಚ್.ಎಸ್. ಮುಕ್ತಾಯಕ್ಕ

ಪುಟ: 6+121

ಬೆಲೆ: ರೂ.100

ಪ್ರಕಾಶನ: ಆಶಿಯಾನಾ ಪ್ರಕಾಶನ,

ರಾಯಚೂರು.

ಸಂಪರ್ಕ: 9611933050

ಎಚ್.ಎಸ್.ಮುಕ್ತಾಯಕ್ಕ ಅವರದು ಆಧುನಿಕ ಕನ್ನಡ ಕಾವ್ಯದಲ್ಲಿ ಸುಪರಿಚಿತವಾದ ಹೆಸರು. ಅವರನಾನು ಮತ್ತು ಅವನುಕವಿತಾ ಸಂಕಲನವು ಕನ್ನಡ ಮಹಿಳಾ ಕಾವ್ಯ ಚರಿತ್ರೆಯಲ್ಲಿ ತನ್ನ ದಿಟ್ಟ ಅಭಿವ್ಯಕ್ತಿಯಿಂದಾಗಿ ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇವರನಾವು ಪತಿವ್ರತೆಯರಲ್ಲಕವಿತೆ ದಿನಗಳಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತ್ತು!

ಮುಕ್ತಾಯಕ್ಕ ಅವರ ಗಜಲ್ಗಳಿಂದಾಗಿ ನೆನಪು ನನ್ನ ಮನಸ್ಸಿನಲ್ಲಿ ಹಸಿರಾಗಿಯೆ ಇದೆ. ಇವರ ತಂದೆ ಶಾಂತರಸರು ಗಜಲ್ ಕಾವ್ಯ ರಚನೆಯಲ್ಲಿ ಎತ್ತಿದ ಕೈ. ತಂದೆಯಂತೆ ಇವರೂ ಗಜಲ್ಗಳ ಕಾವ್ಯ ರಚನೆಯ ಹಾದಿಯನ್ನೇ ಆಯ್ಕೆ ಮಾಡಿಕೊಂಡರೆಂದು ತೋರುತ್ತದೆ. ಪ್ರಸ್ತುತದಲ್ಲಿ ಪ್ರಕಟವಾದತನ್ಹಾಯಿ(2021) ಕವನ ಸಂಗ್ರಹವು ತನ್ನ ಹಲವು ವಿಶಿಷ್ಟ ಗುಣಗಳಿಂದಾಗಿ ನನಗೆ ಮೆಚ್ಚುಗೆಯಾಗಿದೆ. ಗಜಲ್ಗಳಂತೆಯೇ ವಿರಹದ ಹೂರಣವುಳ್ಳ ಇಲ್ಲಿಯ ಕವಿತೆಗಳು ಕನ್ನಡ ಸಾಹಿತ್ಯದಲ್ಲಿ ಭಿನ್ನ ಮಾದರಿಯನ್ನು ಸ್ಥಾಪಿಸಿವೆ ಎಂದು ನಾನು ಅಂದುಕೊಳ್ಳುತ್ತೇನೆ. ಉರ್ದು ಗಜಲ್ಗಳ ರಚನೆಯಲ್ಲಿಯ ನೀತಿ ನಿಯಮಗಳನ್ನು ತ್ಯಜಿಸಿ ತಮಗೆ ಬೇಕಿದ್ದ ಸ್ವಚ್ಛಂದದಲ್ಲಿ ರಚನೆಗೊಂಡ 121 ಕವಿತೆಗಳ ಆತ್ಮವು ಮಾತ್ರ ಗಜಲ್ಗಳದ್ದೇ! ಆದ್ದರಿಂದ ಇವನ್ನುಕನ್ನಡದ ಗಜಲ್ಗಳೆಂದು ಕರೆಯಬಹುದು.

ಪುಸ್ತಕದ ಶೀರ್ಷಿಕೆಯೂ ಉರ್ದು ಪದವೇ. ‘ತನ್ಹಾಯಿ 121 ಕವಿತೆಗಳ ಸರಣಿಯಲ್ಲಿ ಏಕಾಕಿತನ, ವಿರಹ ಮತ್ತು ನೆನಪುಗಳು ಮಾರ್ದನಿಗೊಳ್ಳುತ್ತ ನೋವಿನ ಹಲವಾರು ಮುಖಗಳನ್ನು ತೋರುತ್ತವೆ. ವಿರಹವು ಇಲ್ಲಿಯ ಒಟ್ಟು ಕವಿತೆಗಳಲ್ಲಿ ಸ್ಥಾಯೀಭಾವ. ಜಗತ್ತಿನಲ್ಲಿ ಪ್ರೇಮಗೀತೆಗಳಿಗಿಂತ ವಿರಹಗೀತೆಗಳ ಸಂಖ್ಯೆಯೇ ಹೆಚ್ಚು. ‘ತನ್ಹಾಯಿಕವಿತೆಗಳು ಆಪ್ಯಾಯಮಾನವಾಗುವುದು ಅವು ಕಟ್ಟಿಕೊಡುವ ಪ್ರತೀಕಗಳಿಂದ. ವಿರಹಾಗ್ನಿಗ್ರಸ್ತ ಕವಿ ಇಲ್ಲಿ ಚಿತ್ರಿಸಿದ ಸಂಜೆ, ರಾತ್ರಿ, ಮುಂಜಾವು ಇತ್ಯಾದಿ ಪ್ರಕೃತಿಯ ಮಾದಕ ಸಮಯದ ವರ್ಣನೆಗಳ ಹಲವಾರು ನಮೂನೆಗಳು ಸ್ಮøತಿ ಪಟಲದಲ್ಲಿ ಅಚ್ಚೊತ್ತಿ ನಿಲ್ಲುತ್ತವೆ. ಪ್ರಕೃತಿಯ ಸುಂದರ ಸರ್ವಕಾಲಿಕ ಸೌಂದರ್ಯವು ಅಲೆಯುತ್ತಿರುವ ದಗ್ಧಹೃದಯದ ವಿರಹಿಯ ಏಕಾಕಿತನವನ್ನು ಉಲ್ಬಣಗೊಳಿಸುತ್ತದೆ. ಗುಡ್ಡದ ಮೇಲಿನ ಗುಡಿಯಲ್ಲಿಯ ಘಂಟೆನಾದ, ಸಮುದ್ರದ ಅಲೆಗಳ ತಾಳಬದ್ಧ ಮೊರೆತಗಳು, ಕವಿಯ ನೆನಪುಗಳ ಹರಿತದ ತೀಕ್ಷ್ಣತೆಯನ್ನು ಅಧಿಕಗೊಳಿಸುತ್ತವೆ!

ಇಲ್ಲಿಯ ಕವಿತೆಗಳನ್ನು ಓದುತ್ತ ಸಾಗಿದಂತೆ ದಾವಾನಲಕ್ಕೆ ಬಲಿಯಾದ ಕಾಡಿನ ವೃಕ್ಷಗಳ ಪರಿಯಂತೆ ತಳಮಳವು ಉಲ್ಬಣಿಸುತ್ತ ನಡೆಯುತ್ತದೆ. ಇಲ್ಲಿಯ ಕವಿತೆಗಳಲ್ಲಿ ಹಲವಾರು ದ್ವಂದ್ವ ಭಾವಗಳಿವೆ, ಸ್ಥಿತಿಗಳಿವೆ. ಒಮ್ಮೆ ಬದುಕು ಸುಂದರವಾಗಿದ್ದರೆ ಬೇರೆ ಕಡೆಗೆ ಅದು ರೂಕ್ಷವಾಗುತ್ತದೆ. ಒಂದೆಡೆ ಪ್ರಿಯಕರ ಮನಮೋಹನವಾಗಿ ಕಂಡರೆ ಇನ್ನೊಂದೆಡೆ ಕ್ರೂರಿಯಾಗುತ್ತಾನೆ. ನೆನಪು ಅನೇಕ ಸಲ ಹೃದಯ ಸುಟ್ಟರೆ, ಬೇರೆ ಕಡೆ ನೆನಪುಗಳು ತೋಟದಲ್ಲಿಯ ಹೂಗಳಂತೆ ನಳನಳಿಸುತ್ತವೆ.

ನೂರಿಪ್ಪತ್ತೊಂದು ಕವಿತೆಗಳನ್ನು ಬರೆಯಲು ಮುಕ್ತಾಯಕ್ಕ ಅದ್ದಿಕೊಂಡ ಶಾಯಿಯು ಬೂದುಬಣ್ಣದ್ದೇ! ಆದರೆ ನೆನಪಿನ ಬೂದಿಯಲ್ಲಿ ಕಿಡಿಗಳಿವೆ, ನಿಗಿನಿಗಿ ಕೆಂಡಗಳಿವೆ, ಕುಣಿಯುವ ಉರಿಯ ನಾಲಿಗೆಗಳು ಇವೆ. ಕೆಲವು ಉದಾಹರಣೆಗಳನ್ನು ತೆಗೆದುಕೊಳ್ಳೋಣ.

ನೆನಪುಗಳೋ!

ನೀವೇಕೆ ಹಿಂಬಾಲಿಸಿ ಬರುವಿರಿ,

ಅವಕೆ ಕೇಳುವೆ,

ದೂರದಾಗಸದಲಿ ಚಿಕ್ಕೆಯೊಂದು

ಉರಿದು ಬೀಳುವುದನು

ನೋಡುತ್ತ

(ಕವಿತೆ-46)

*

ನಿನ್ನೊಲವಿನ ಬೆಂಕಿಯಲಿ

ಉರಿಯ ಬಯಸುತ್ತೇನೆ,

ಕೊನೆಗೆ ನನ್ನಾತ್ಮವೂ

ಕರ್ಪೂರಂದತೆ ಉರಿದು

ಹೋಗಲಿ, ಯಾವ ಕುರುಹೂ

ಬಿಡದಂತೆ,

ಎಂದೂ ಮತ್ತೇ ಹುಟ್ಟದಂತೆ

(ಕವಿತೆ– 60)

ತನ್ಹಾಯಿ ಕವಿತೆಗಳಲ್ಲಿ ನಾನು ಮೆಚ್ಚಿಕೊಂಡದ್ದು ಇಲ್ಲಿಯ ಪ್ರಾಮಾಣಿಕ ಅಭಿವ್ಯಕ್ತಿಯನ್ನು. ಕೃತಕತೆ ಎನಿತೂ ಇಲ್ಲದ ಸಹಜ ಸರಳ ಅಭಿವ್ಯಕ್ತಿಗಳು ಇಲ್ಲಿವೆ. ಭಾಷಾಪ್ರಯೋಗ ಪರಿಣಾಮಕಾರಿಯಾಗಿದೆ. ಚಿತ್ರಗಳ ಮೂಲಕ ಹೇಳುವ ವಿರಹದ ಕತೆಯು ಬಹಳ ಹೃದಯಸ್ಪರ್ಶಿಯಾಗುತ್ತವೆ. ಉಪಮೆ, ರೂಪಕ ಮತ್ತು ಪ್ರತೀಕಗಳ ಪ್ರಯೋಗಗಳ ಮೂಲಕ ತನ್ನ ವಿರಹದ ಆಳ, ಎತ್ತರಗಳನ್ನು ವಿಸ್ತರಿಸಿದ ಪರಿಯು ಅದ್ಭುತವಾಗಿದೆ!

ಮುಕ್ತಾಯುಕ್ಕನಲ್ಲಿ ಕಾವ್ಯಕೌಶಲವಿದೆ. ನಿರೂಪಣೆಯ ಕಲೆ ಇದೆ, ಮೌಲಿಕ ಅನುಭವಗಳಿವೆಯಾದ್ದರಿಂದ ಅವರು ಬರೆಯುತ್ತಿರಬೇಕು…. ಬರೆಯುತ್ತಲೇ ಮುಂದುವರೆಯಬೇಕು ಎಂದು ನಾನು ಆಶಿಸುತ್ತೇನೆ.

Leave a Reply

Your email address will not be published.