ವಿಶಿಷ್ಟ ಆಚರಣೆಯ ಜನಪದ ಕ್ರೀಡೆಗಳು

ಗ್ರಾಮೀಣ ಕ್ರೀಡೆಗಳಲ್ಲಿ ಹಲವು ವಿಶಿಷ್ಟ ಮತ್ತು ವಿಚಿತ್ರ ಆಟಗಳಿವೆ. ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ಕಂಡುಬರುವಂತಹ ಆಟಗಳು. ಅವುಗಳಿಗೆ ಗ್ರಾಮಮಟ್ಟವೇ ದೊಡ್ಡ ವೇದಿಕೆ. ಇವುಗಳಿಗೆ ಬೇರೆಲ್ಲೂ ಹೇಳಿಕೊಳ್ಳುವಂತಹ ಹೆಸರಿಲ್ಲ. ಹಾಗಾಗಿ ಹುಟ್ಟಿದ ಜಾಗದಲ್ಲೇ ಅಸ್ತಿತ್ವ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇವುಗಳಿಗಿದೆ. ಇಂತಹ ಕ್ರೀಡೆಗಳ ಪಟ್ಟಿಯಲ್ಲಿ ಕಪ್ಪೆಗುಪ್ಪಾಟ, ಟೊಪ್ಪಿಯಾಟ, ಗೋಣಿಚೀಲ ಓಟ, ನಿಂಬೆಹಣ್ಣಿನ ಓಟ ಮತ್ತಿತರ ಆಟಗಳಿವೆ.

 

ಕಪ್ಪೆಗುಪ್ಪಾಟ

ಈ ಬಗೆಯ ಆಟಗಳಿಗೆ ಪ್ರಾಚೀನ ಹಿನ್ನೆಲೆ ಇದ್ದರೂ ಹೇಳಿಕೊಳ್ಳುವಂತಹ ಮನ್ನಣೆ ಸಿಗಲಿಲ್ಲ. ಹಾಗಾಗಿ ಆಯಾ ಊರು ಅಥವಾ ಸೀಮಿತ ಪ್ರದೇಶದಲ್ಲಿ ಶಾಲಾಮಟ್ಟದಲ್ಲಿಯೇ ಈ ಆಟಗಳು ಜನಪ್ರಿಯ. ಗ್ರಾಮೀಣ ಭಾಗದ ಮಕ್ಕಳಲ್ಲಿ ಇಂದಿಗೂ ಕಪ್ಪೆಗುಪ್ಪೆ ಪ್ರಸಿದ್ಧಿ. ಇದು ಮೂರರಿಂದ ಆರೇಳು ವರ್ಷದೊಳಗಿನ ಮಕ್ಕಳ ಆಟ. ಕುಕ್ಕರಗಾಲಿನಲ್ಲಿ ಕುಳಿತು ನಿಗದಿಪಡಿಸಿದ ದೂರವನ್ನು ಕಪ್ಪೆ ರೀತಿಯಲ್ಲಿ ಹಾರಿ ತಲುಪಬೇಕು. ಯಾರು ವೇಗವಾಗಿ ತಲುಪುತ್ತಾರೋ ಅವರು ಗೆದ್ದಂತೆ. ಇದರಲ್ಲಿ ಒಮ್ಮೆಗೆ ಎಂಟರಿಂದ ಹತ್ತು ಮಂದಿ ಪಾಲ್ಗೊಳ್ಳುವುದಿದೆ. ಬಹುತೇಕ ಈಗ್ಗೆ 25 ವರ್ಷಗಳ ಹಿಂದೆ ಮೈಸೂರು ಮತ್ತು ಮಲೆನಾಡು ಭಾಗದಲ್ಲಿ ಈ ಆಟ ಹೆಚ್ಚು ಕಾಣಸಿಗುತ್ತಿತ್ತು. ಜೊತೆಗೆ ಅಂತರ್‍ಶಾಲಾ ಪಂದ್ಯಾವಳಿಯ ವೇಳೆ ವಿಶೇಷವಾಗಿ ಕಪ್ಪೆಗುಪ್ಪುವುದನ್ನು ಸೇರಿಸಿಕೊಳ್ಳಲಾಗುತ್ತಿತ್ತು. ಹಾಗಾಗಿಯೇ ಇದಕ್ಕೆ ಈವತ್ತಿಗೂ ಕುಟುಕು ಜೀವ ಉಳಿದಿದೆ.

ಟೋಪಿಯಾಟ

ಟೋಪಿಯಾಟ ಇನ್ನೂ ವಿಶೇಷವಾದದ್ದು. ಇದರಲ್ಲಿ ಚಕ್ರಾಕಾರವಾಗಿ ಆರೇಳು ಮಂದಿ ಕುಳಿತಿರುತ್ತಾರೆ. ಆ ಪೈಕಿ ಒಬ್ಬರ ಕೈಯಲ್ಲಿ ಒಂದು ಟೊಪ್ಪಿ ಇರುತ್ತದೆ. ಆತ ಕುಳಿತವರಿಗೆ ಸುತ್ತುಹಾಕುತ್ತಾ ಟೊಪ್ಪಿ.. ಟೊಪ್ಪಿ.. ಎಂದು ಕೂಗಿದಾಗ ಕುಳಿತವರು ಎಂಥಾ ಟೊಪ್ಪಿ ಎಂದು ಕೇಳುತ್ತಾರೆ. ಆತ ಚಿನ್ನದ ಟೊಪ್ಪಿ ಎಂದಾಗ ಉಳಿದವರು ಎಷ್ಟು ರೂಪಾಯಿ ಎಂದು ಕೇಳುತ್ತಾರೆ. 100 ರೂಪಾಯಿ ಎಂದು ಆತ ಹೇಳುವಾಗ ಹಾಕು ಮತ್ತೆ… ಎಂದು ಕುಳಿತವರು ಕೂಗುತ್ತಾರೆ. ತಕ್ಕೋ ಮತ್ತೆ ಎನ್ನುವುದು ಸುತ್ತುತ್ತಿದ್ದವನ ಮಾತು. ಹೀಗೆ ಐದಾರು ಸುತ್ತು ಬಂದ ಬಳಿಕ ಮತ್ತೊಬ್ಬರಿಗೆ ಗೊತ್ತಾಗದಂತೆ ಟೊಪ್ಪಿಯನ್ನು ಯಾರಾದರೊಬ್ಬರ ಹಿಂದೆ ಹಾಕಲಾಗುತ್ತದೆ. ಹಾಕಿದ ಬಳಿಕ ಆತ ಒಂದು ಸುತ್ತು ಬರುವಷ್ಟರಲ್ಲಿ ಕುಳಿತವನಿಗೆ ಅದು ಗೊತ್ತಾಗಿ ಆತ ಟೊಪ್ಪಿ ತೆಗೆದುಕೊಂಡು ಹಾಕಿದವನನ್ನು ಮುಟ್ಟಬೇಕು. ಆಗ ಅವನು ಔಟ್ ಆದಂತೆ. ಇಲ್ಲದಿದ್ದರೆ ಓಡುವ ಶಿಕ್ಷೆ ಕುಳಿತು ಟೊಪ್ಪಿ ಹಾಕಿಸಿಕೊಂಡವನದಾಗುತ್ತದೆ. ಈ ಟೊಪ್ಪಿ ಆಟ ಕೆಲವೊಮ್ಮೆ ಮಕ್ಕಳಿಗಷ್ಟೇ ಸೀಮಿತವಾಗದೆ ಯುವಕರೂ ಆಡುವುದಿದೆ.

ಮತ್ತೊಂದು ಬಗೆಯ ಟೆಕ್ಕಿ

ಇದರಲ್ಲಿ ಕಾರ್ಡ್‍ಗಳನ್ನು ನಿಗದಿತ ಚೌಕಟ್ಟಿನಲ್ಲಿ ಇರಿಸಿ ಸುಮಾರು ಐದಾರು ಅಡಿ ದೂರದಿಂದ ಗೋಲಿ ಅಥವಾ ಕಲ್ಲಿನಲ್ಲಿ ಪಟ್ಟೆಯಿಂದ ಹಾರಿಸುವ ಪದ್ಧತಿ ಇದೆ. ಯಾರು ಯಾವ ಕಾರ್ಡ್‍ಅನ್ನು ಹೊರಹಾರಿಸುತ್ತಾರೋ ಅವರಿಗೆ ಆ ಕಾರ್ಡ್ ದಕ್ಕುತ್ತದೆ. ಜೊತೆಗೆ ಇದೇ ಮಾದರಿಯಲ್ಲಿ ಪ್ರತೀ ಕಾರ್ಡ್‍ಗೂ ಇಂತಿಷ್ಟು ಎಂದು ರೂಪಾಯಿ ಮೌಲ್ಯ ನಿಗದಿಪಡಿಸಿಕೊಂಡು ಆಡುವುದಿದೆ. 10 ರೂಪಾಯಿಯಿಂದ ಶುರುವಾಗಿ 1000ದವರೆಗೂ ಬೆಲೆ ನಿಗದಿ ಪಡಿಸುವುದು ವಿಶೇಷ. ಮೇಲ್ನೋಟಕ್ಕೆ ಮನರಂಜನೆಯ ಟೆಕ್ಕಿ ಎನಿಸಿದರೂ ಕೆಲವೊಮ್ಮೆ ಹಣ ಕೈಬಿಟ್ಟು ಹೋಗುವ ಅಪಾಯವೂ ಇರುತ್ತದೆ. ಇಂತಹ ಆಟ ಇದೀಗ ನಗರಪ್ರದೇಶಗಳಲ್ಲೂ ಕಾಣಸಿಗುತ್ತದೆ. ರೈಲ್ವೇ ಹಳಿಯ ಬದಿಯಲ್ಲೋ ಅಥವಾ ಶಾಲಾ ಮೈದಾನದಲ್ಲೋ ಮ್ಕಕಳಷ್ಟೇ ಅಲ್ಲ ಹದಿಹರೆಯದವರೂ ಈ ಟೆಕ್ಕಿಯಲ್ಲಿ ನಿರತರಾಗಿ ಹಣ ಮಾಡುವುದು ಮತ್ತು ಕಳೆದುಕೊಳ್ಳುವುದು ನಡೆದಿರುತ್ತದೆ. ಒಂದು ರೀತಿಯಲ್ಲಿ ಇದನ್ನು ಪುರಾತನ ಇಸ್ಪೀಟು ಎನ್ನಲು ಅಡ್ಡಿಯಿಲ್ಲ. ಹಬ್ಬಹರಿದಿನಗಳಲ್ಲಿ ಹಳ್ಳಿಪ್ರದೇಶಗಳಲ್ಲೂ ಇದೇ ಮಾದರಿಯ ಆಟ ನಡೆಯುವುದಿದೆ. ಇತ್ತೀಚೆಗೆ ಶಾಲಾ ವಿದ್ಯಾರ್ಥಿಗಳು ಇದಕ್ಕೆ ಆಕರ್ಷಿತರಾಗಿ ಹಣಕ್ಕಾಗಿ ಕಳ್ಳಮಾರ್ಗಹಿಡಿದಿರವುದು ದುರದೃಷ್ಟಕರ.

ಗೋಣಿಚೀಲ ಓಟ

ಇದಕ್ಕಿಂತಲೂ ವಿಚಿತ್ರ ಅಂದರೆ ಅದು ಗೋಣಿಚೀಲದ ಓಟ. ಇದನ್ನು ಆಡಲು ಪರಿಣತಿ ಬೇಕು. ಇಲ್ಲದಿದ್ದಲ್ಲಿ ಕೈಕಾಲು ಉಳುಕಿಸಿಕೊಂಡು ಆಸ್ಪತ್ರೆ ಸೇರುವುದು ಖಚಿತ. ಅಷ್ಟಕ್ಕೂ ಆಡುವ ಬಗೆ ತಿಳಿದುಕೊಳ್ಳೋಣ. ಇದರಲ್ಲಿಯೂ ಇಂತಿಷ್ಟು ಮಂದಿ ಎಂದು ಗುರುತಿಸಿಕೊಂಡು ಪ್ರತ್ಯೇಕ ತಂಡ ಕಟ್ಟಿಕೊಳ್ಳುತ್ತಾರೆ. ಬಳಿಕ ಹೊರಡುವ ಮತ್ತು ತಲುಪುವ ನಿರ್ದಿಷ್ಟ ಸ್ಥಳ ಗುರುತಿಸಲಾಗುತ್ತದೆ. ಬಳಿಕ ಆಡುವವರು ತಮ್ಮ ಎರಡೂ ಕಾಲುಗಳನ್ನು ಖಾಲಿಗೋಣಿಚೀಲದೊಳಕ್ಕೆ ಇಟ್ಟುಕೊಂಡು ಮೂಟೆಯಾಕಾರದಲ್ಲಿ ಓಡಬೇಕು. ಓಡುವುದಿರಲಿ ನಡೆಯುವುದೇ ಕಷ್ಟಕರ. ಹಾಗಾಗಿ ಇದನ್ನು ಕಲಿತವರಿಂದ ಮಾತ್ರ ಮಾಡಲು ಸಾಧ್ಯ. ಹೀಗೆ ಕಟ್ಟಿಕೊಂಡು ಚೀಲದೊಂದಿಗೆ ನಿರ್ದಿಷ್ಟ ಸ್ಥಳವನ್ನು ಯಾರು ಮೊದಲು ಮುಟ್ಟುತ್ತಾರೋ ಅವರು ಗೆದ್ದಂತೆ. ವಿಶೇಷವೆಂದರೆ ಇದರಲ್ಲಿ ಗುರಿಮುಟ್ಟುವವರು ತುಂಬಾ ವಿರಳ. ಹೆಚ್ಚಿನ ಮಂದಿ ಸ್ಪರ್ಧೆಯ ನಡುವಿನಲ್ಲಿಯೇ ಬಿದ್ದುಹೋಗುವುದಿದೆ. ಈ ಆಟ ಕಷ್ಟಕರ ಎನಿಸಿದರೂ ನೋಡುಗರಿಗೆ ಮಾತ್ರ ಅತ್ಯಂತ ಮನರಂಜನೆ ಮತ್ತು ನಕ್ಕುನಗಿಸುವ ಗ್ರಾಮೀಣ ಕ್ರೀಡೆ ಎನ್ನುವದರಲ್ಲಿ ಎರಡು ಮಾತಿಲ್ಲ.

ನಿಂಬೆಹಣ್ಣಿನ ಓಟ

ನಿಂಬೆಹಣ್ಣಿನ ಓಟ ಇತ್ತೀಚೆಗೆ ಹೆಚ್ಚಾಗಿ ಮಹಿಳಾ ಸಂಘಸಂಸ್ಥೆಗಳ ಕ್ರೀಡಾಪಂದ್ಯ ಆಯೋಜಿಸುವ ಸಂದರ್ಭ ಕಂಡುಬರುತ್ತದೆ. ಇದೂ ಕೂಡಾ ನಮ್ಮ ಗಮನ ಕೇಂದ್ರೀಕರಿಸುವುದರ ಜೊತೆಗೆ ಚಾಣಾಕ್ಷತೆಗೆ ಹೆಸರಾದ ಗೇಮ್. ಇದರಲ್ಲಿಯೂ ನಿಗಧಿತ ಸ್ಥಳದಿಂದ ಐದಾರು ಮಂದಿ ಏಕಕಾಲಕ್ಕೆ ಬಾಯಲ್ಲಿ ಚಮಚವಿರಿಸಿ ಅದೆ ಮೇಲೆ ನಿಂಬೆಹಣ್ಣನ್ನು ಇಡಲಾಗುತ್ತದೆ. ಇವರು ಓಡುವ ವೇಳೆ ನಿಂಬೆಹಣ್ಣು ಕೆಳಕ್ಕೆ ಬೀಳದಂತೆ ಎಚ್ಚರವಹಿಸಿ ಮತ್ತೊಂದು ಗುರಿ ಮುಟ್ಟಬೇಕು. ಹಾಗೆ ಓಡುವಾಗ ಹಣ್ಣಿನ ಮೇಲೆ ನಮ್ಮ ಗಮನ ಕೇಂದ್ರೀಕರಿಸುವುದು ಅಗತ್ಯ. ಜೊತೆಗೆ ಹಣ್ಣು ಬೀಳದಂತೆ ಮತ್ತು ಬಯಲ್ಲಿ ಕಚ್ಚಿಕೊಂಡಿರುವ ಚಮಚ ಅಲುಗಾಡದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕು. ಹಾಗಾಗಿ ಇಂತಹ ಕ್ರೀಡೆಗಳು ಗ್ರಾಮೀಣ ಭಾಗದ ಜನರ ನೈಪುಣ್ಯತೆಗೆ ಹಿಡಿದ ಕೈಗನ್ನಡಿ.

ಗ್ರಾಮೀಣ ಭಾಗದ ಜನರು ಅನ್ವೇಷಣೆಯಲ್ಲಿ ಎತ್ತಿದ ಕೈ. ಸಾಕಷ್ಟು ಕ್ರೀಡೆಗಳ ಜನಕರು ನಮ್ಮ ಗ್ರಾಮದ ಮಂದಿಯೇ ಎನ್ನುವುದು ವಿಶೇಷ. ಅಷ್ಟೇ ಅಲ್ಲ ಹಳ್ಳಿಗಾಡಿನ ಕ್ರೀಡೆಗಳ ಮೂಲಕವೇ ಯುವಕರನ್ನು ಬಲಶಾಲಿಗಳನ್ನಾಗಿಸಿದ ಕೀರ್ತೀಯೂ ನಮ್ಮ ಪೂರ್ವಿಕರಿಗೆ ಸಲ್ಲಬೇಕು. ಹಲವು ಕ್ರೀಡೆಗಳು ನಶಿಸಿದ್ದರೂ ಮತ್ತಷ್ಟು ಇಂದಿಗೂ ಜೀವಂತಿಕೆ ಉಳಿಸಿಕೊಂಡಿರುವುದು ನಮ್ಮ ಇಚ್ಚಾಶಕ್ತಿಯ ಫಲ.

‘ಟೆಕ್ಕಿ’ ಎಂಬ ಜೂಜಿನಾಟ

ಮಕ್ಕಳ ಮನಸ್ಸಿನ ಭಾವನೆಗಳೇ ಒಂದು ರೀತಿಯಲ್ಲಿ ಕಲ್ಪನಾತೀತ ಎನ್ನಬಹುದು. ಯಾವುದೋ ಸಂದರ್ಭದಲ್ಲಿ ಬರುವ ಆಲೋಚನೆಗಳು ಪದ್ಧತಿಯೋ ಅಥವಾ ಪರಂಪರೆಯೋ ಆಗಿಬಿಡುವ ಸಾದ್ಯತೆಗಳೂ ಹೆಚ್ಚು. ಅದರಲ್ಲೂ ಹಳ್ಳಿಗಾಡಿನ ಮಕ್ಕಳಲ್ಲಿ ಇಂತಹ ಕ್ರಿಯಾಶೀಲತೆ ತುಸು ಹೆಚ್ಚೆಂದರೆ ಅತಿಶಯವಲ್ಲ. ಏಕೆಂದರೆ ಇಲ್ಲಿ ಹೇಳಹೊರಟಿರುವ ಟೆಕ್ಕಿ ಆಟದ ಮೂಲವೇ ಈ ಹಿನ್ನೆಲೆಯಲ್ಲಿ ಬಂದಿದ್ದು ಎನ್ನುವುದು ವಿಶೇಷ. ಅಷ್ಟಕ್ಕೂ ಈ ಟೆಕ್ಕಿ ಆಟ ಒಂದು ರೀತಿಯಲ್ಲಿ ಪುರಾತನ ಇಸ್ಪೀಟು ಆಟ ಎನ್ನುವ ಕಲ್ಪನೆಯೂ ಇದೆ. ಏಕೆಂದರೆ ಬಹುತೇಕ ಟೆಕ್ಕಿ ಇದನ್ನೇ ಹೋಲುತ್ತದೆ. ಇಸ್ಪೀಟಾಟದಲ್ಲಿ ಎಲೆಗಳನ್ನು (ಕಾರ್ಡ್) ಬಳಸಿದರೆ ಟೆಕ್ಕಿಯಲ್ಲಿ ಸಿಗರೇಟ್ ಪ್ಯಾಕ್ ಮತ್ತು ಬೆಂಕಿಪೊಟ್ಟಣದ ಮೇಲು ಹೊದಿಕೆಗಳನ್ನು ಬಳಸಲಾಗುತ್ತದೆ.

ಸಾಮಗ್ರಿ ಸಂಗ್ರಹ

ಗ್ರಾಮೀಣ ಪ್ರದೇಶಗಳಲ್ಲಿ ಈ ಆಟ ಅತ್ಯಂತ ಪ್ರಸಿದ್ಧ. ಅದರಲ್ಲೂ ವಾರಾಂತ್ಯ ಬಂತೆಂದರೆ ಶಾಲಾ ಮಕ್ಕಳು ಹೆಚ್ಚಾಗಿ ತೊಡಗಿಕೊಳ್ಳುವುದೂ ಈ ಟೆಕ್ಕಿ ಆಟಕ್ಕೆ. ಇದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಸಂಗ್ರಹಿಸುವುದಕ್ಕೆ ತೀವ್ರ ಪೈಪೋಟಿ. ಹಳ್ಳಿಗಾಡಿನಲ್ಲಿ ಬೆಂಕಿಪೊಟ್ಟಣಗಳು ಸಿಗಬಹುದು. ಆದರೆ ಖಾಲಿ ಸಿಗರೇಟ್ ಪ್ಯಾಕ್ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅವಕಾಶ ಸಿಕ್ಕಿ ಪಟ್ಟಣಗಳಿಗೆ ಹೋದಾಗಲೋ ಅಥವಾ ಹೋದ ಗೆಳೆಯರಿಗೆ ಖಾಲಿ ಸಿಗರೇಟ್ ಪ್ಯಾಕ್ ಹೆಕ್ಕಿ ತರಲು ಹೇಳುವ ಪರಿಪಾಠವೂ ಇದೆ. ಅದರಲ್ಲೂ ವಿವಿಧ ಬಣ್ಣದ ಪ್ಯಾಕ್‍ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಹೀಗೆ ಸಂಗ್ರಹಿಸಿ ತಂದ ಪ್ಯಾಕ್‍ಗಳ ಮುಂಭಾಗ ಮತ್ತು ಹಿಂಭಾಗವನ್ನು ತುಂಡರಿಸಿ ಇಸ್ಪೀಟ್ ಎಲೆಗಳಂತೆ ಬಳಸಲಾಗುತ್ತದೆ. ಒಂದೊಂದು ಬಣ್ಣದ ಕಾರ್ಡ್‍ಗೂ ಅದರದ್ದೇ ಆದ ಮೌಲ್ಯವನ್ನು ನಿಗದಿ ಮಾಡಲಾಗುತ್ತದೆ. ಬೆಂಕಿಪೊಟ್ಟಣದಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುತ್ತದೆ. ಸಿಗರೇಟ್ ಪ್ಯಾಕ್‍ನ ಕಾರ್ಡ್‍ಗೆ ಹೆಚ್ಚಿನ ಮೌಲ್ಯ ನೀಡುವುದು ವಾಡಿಕೆ.

ಆಡುವುದು ಹೇಗೆ?

ಈ ಆಟವನ್ನು (ಇಬ್ಬರಿಗಿಂತ ಹೆಚ್ಚು) ಎಷ್ಟು ಮಂದಿಯಾದರೂ ಆಡಬಹುದು. ಆಟಕ್ಕಿಳಿಯುವವರು ಇಂತಿಷ್ಟು ಎಂದು ಕಾರ್ಡ್‍ಗಳನ್ನು ಹೊಂದಿರಬೇಕಾಗುತ್ತದೆ. ಬಳಿಕ ಇಸ್ಪೀಟ್ ಆಟದಂತೆಯೇ ಪ್ರತಿಯೊಬ್ಬರು ತಮ್ಮಲ್ಲಿರುವ ಕಾರ್ಡ್‍ಗಳನ್ನು ಒಂದೊಂದಾಗಿ ಆಟಕ್ಕೆ ಹಾಕುತ್ತಾರೆ. ಮೊದಲಿನ ಆಟಗಾರ ಹಾಕಿದ ಕಾರ್ಡ್ ಮತ್ತೊಬ್ಬ ಹಾಕುವ ಕಾರ್ಡ್‍ಗೆ ಹೋಲಿಕೆಯಾದರೆ ಅದು ಅವನಿಗೆ ಸಿಕ್ಕಂತೆ. ಇದು ಒಮ್ಮೊಮ್ಮೆ ಹತ್ತಾರು ಬಾರಿ ಹಾಕಿದರೂ ಹೊಂದಾಣಿಕೆ ಆಗುವುದಿಲ್ಲ. ಕೆಲವೊಮ್ಮೆ ಮೊದಲನೇ ಆಟದಲ್ಲಿಯೇ ಜಯ ದಕ್ಕುವುದಿದೆ. ಇನ್ನೂ ಕೆಲವು ಬಾರಿ ಆಟಗಾರ ತನ್ನಲ್ಲಿನ ಎಲ್ಲ ಕಾರ್ಡ್‍ಗಳನ್ನು ಕಳೆದುಕೊಂಡು ‘ಪಾಪರ್” ಆಗುವ ಸಂದರ್ಭವೂ ಇದೆ. ಇಂತಹ ಪ್ರಸಂಗದಲ್ಲಿ ಉಳಿದವರು ಆಟ ಮುಂದುವರೆಸಿಕೊಂಡು ಹೋಗುತ್ತಾರೆ. ಅದೇ ಬಣ್ಣದ ಅಥವಾ ನಮೂನೆ ಹೋಲುವ ಕಾರ್ಡ್ ಬರುವವರೆಗೂ ಆಟ ಸಾಗುತ್ತದೆ. ಉದಾಹರಣೆಗೆ, ಬರ್ಕ್‍ಲಿ ಸಿಗರೇಟ್ ಪ್ಯಾಕ್‍ನ ಹಾಳೆಯನ್ನು ಒಬ್ಬ ಹಾಕಿದರೆ ಮುಂದಿನ ಆಟಗಾರ ಅದನ್ನೇ ಹಾಕಿದರೆ ಅದು ಆತನಿಗೆ ಸಿಕ್ಕಂತೆ. ಇದರಲ್ಲಿ ಪ್ಯಾಕ್‍ನ ಹಿಂಭಾಗದ ಕಾರ್ಡ್‍ಗೂ ಮೌಲ್ಯವಿದೆ. ಬೆಂಕಿಪೊಟ್ಟಣದ ಚಿತ್ರಗಳೂ ಇದೇ ರೀತಿಯಲ್ಲಿ ಪರಸ್ಪರ ಹೋಲುವಂತಿರಬೇಕು. ಇನ್ನೂ ಕೆಲವು ಬಾರಿ ಯಾರ ಬಳಿಯೂ ಹೋಲುವ ಕಾರ್ಡ್ ಸಿಗದಿರುವ ನಿದರ್ಶನವೂ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಮರುಆಟಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

Leave a Reply

Your email address will not be published.