ವಿಶೇಷ ಸಂದರ್ಭದ ವಿಶಿಷ್ಟ ಶಿಶು!

ಬದಲಾವಣೆಯೇ ಶಾಶ್ವತ’ –ಇದು ರೂಢಿಗತ ನುಡಿ. ಜೊತೆಗೆ, ಸತ್ಯವೂ ಕೂಡಾ. ಈಗಂತೂ ವೈಜ್ಞಾನಿಕ ಸಂಶೋಧನೆಗಳ ಫಲರೂಪವಾದ ವಿಪರೀತ ಆಯ್ಕೆಗಳು ಬೇರೆ. ಪರಿಸ್ಥಿತಿ ಹೀಗಿರುವಾಗ ಶಾಶ್ವತಪದಕ್ಕೆ ನೆಲೆಯೆಲ್ಲಿ?

‘ಅಕ್ಷರ’ ಎಂದರೆ ಶಾಶ್ವತ ಎಂದರ್ಥ. ಅಕ್ಷರ ಜ್ಞಾನವೇ ಶಿಕ್ಷಣ. ಅಕ್ಷರವೇ ಶಾಶ್ವತವಾಗಿರಬೇಕೇ ವಿನಾ ಶಿಕ್ಷಣ ವಿಧಾನ ಶಾಶ್ವತವಾಗಿರಬಾರದು. ಹಿಂದಿನ ವಿಧಾನಕ್ಕಿಂತ ಶ್ರೇಷ್ಠ ವಿಧಾನದ ಅನ್ವೇಷಣೆಯಾಗಬೇಕಲ್ಲದೆ, ಸಂಪೂರ್ಣ ರೂಪಾಂತರ ಉಚಿತವಲ್ಲ. ಭಾರತೀಯ ಶಿಕ್ಷಣಪದ್ಧತಿ ವಿಶ್ವದಲ್ಲೇ ಹೆಸರುವಾಸಿಯಾಗಿತ್ತು. ಮಕ್ಕಳ ಬೌದ್ಧಿಕ, ಮಾನಸಿಕ, ಅಧ್ಯಾತ್ಮಿಕ ವಿಕಾಸಕ್ಕೆ ಪೂರಕವಾದ ಶಿಕ್ಷಣ ಪದ್ಧತಿ ಆಚರಣೆಯಲ್ಲಿತ್ತು. ಮಕ್ಕಳ ಶಾಲಾಭ್ಯಾಸ ಆರಂಭವಾಗುತ್ತಿದ್ದುದೇ 8ರ ವಯಸ್ಸಿನಲ್ಲಿ. ಅಲ್ಲಿಯವರೆಗೆ ಮನೆಯ ವಾತಾವರಣವೇ ಶಿಕ್ಷಣ ನೀಡುವ ಕೇಂದ್ರವಾಗಿತ್ತು. ಜೀವನಮೌಲ್ಯಗಳ ಅಳವಡಿಕೆಗೆ ಪೂರಕ ಅಂಶಗಳನ್ನು ಹೇಳಿಕೊಡಲಾಗುತ್ತಿತ್ತು. ಪ್ರೀತಿ ಹಾಗೂ ಸುರಕ್ಷಾ ವಾತಾವರಣ ಮಕ್ಕಳಿಗೆ ಸಿಗುತ್ತಿತ್ತು. ಮನೆಯಲ್ಲಿನ ಹಿರಿಯರ ಅನುಕರಣೆಯೇ ಜೀವನಪಾಠವಾಗಿತ್ತು; ಪ್ರೇರಕಶಕ್ತಿಯಾಗಿತ್ತು. ಸಹಜವಾಗಿಯೇ ಉತ್ತಮ ವ್ಯಕ್ತಿತ್ವದ ಜಾಡನ್ನು ಹಿಡಿದು ಮಕ್ಕಳು ತಮ್ಮ ಜೀವನದಲ್ಲಿ ಮುಂದೆ ಬರುತ್ತಿದ್ದರು. ಡೀನ್ ಡಬ್ಲ್ಯೂ ಆರ್ ಇಂಗ್ ಹೇಳಿರುವಂತೆ; “ಶಿಕ್ಷಣದ ಗುರಿ ಸಂಗತಿಗಳ ಜ್ಞಾನವಲ್ಲ; ಮೌಲ್ಯಗಳ ಪರಿಜ್ಞಾನ”.

ಇಂದಿನ ಶಿಕ್ಷಣಪದ್ಧತಿ ತಾಂತ್ರಿಕತೆಗೆ ಅತಿಯಾದ ಒತ್ತುಕೊಟ್ಟು ಮನುಷ್ಯನನ್ನು ನಾಶಮಾಡಿದೆ. ನಮ್ಮ ಕೋಪ, ಅಸಮಾಧಾನ, ಅತೃಪ್ತಿಗಳು ಅರ್ಥವಾಗದೆ ಇದ್ದರೆ ಶಿಕ್ಷಣ ವ್ಯರ್ಥ! ಶಿಕ್ಷಣ ನಮಗೆ ಕುಶಲತೆಯನ್ನು ಕಲಿಸುತ್ತದೆಯೇ ಹೊರತು; ನಾವು ಕುಶಲವೇ? ಎನ್ನುವ ಪ್ರಶ್ನೆಗೆ ಉತ್ತರಕೊಡುವುದೇ ಇಲ್ಲ.

ಟ್ಯಾಬ್, ಆ್ಯಂಡ್ರಾಯ್ಡ್ ಮೊಬೈಲುಗಳ ಯುಗದಲ್ಲಿ ವಿಶ್ವವೇ ಅಂಗೈಯಲ್ಲಿ ಬಂದು ಕುಳಿತಿದೆ. ಜ್ಞಾನದ ಓಟದಲ್ಲಿ ವಿವೇಕವನ್ನೂ, ಮಾಹಿತಿಯ ಮಹಾಪೂರದಲ್ಲಿ ಜ್ಞಾನವನ್ನೂ ನಾವು ಕಳೆದುಕೊಂಡಿದ್ದೇವೆಯೋ?” ಎಂಬುದು ಪ್ರಸಿದ್ಧ ಇಂಗ್ಲಿಷ್ ಕವಿ ಟಿ.ಎಸ್.ಎಲಿಯಟ್ ಎತ್ತಿದ ಪ್ರಶ್ನೆ. ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ಈ ಪ್ರಶ್ನೆ ಅತ್ಯಂತ ಪ್ರಸ್ತುತ ಎನಿಸುತ್ತಿದೆ. ಅಂತರ್ಜಾಲ ವ್ಯವಸ್ಥೆ ಈ ಭೂಮಿಯ ಮೇಲೆ ಕಣ್ತೆರೆಯುವ ಹತ್ತಾರು ವರ್ಷಗಳ ಮೊದಲೇ ಗಟ್ರೂಡ್ ಸ್ಟೈನ್ ಎಂಬ ಅಮೆರಿಕನ್ ಬರಹಗಾರ್ತಿ ಒಂದು ಮಾತು ಹೇಳಿದ್ದರು: ಪ್ರತಿದಿನ ಪ್ರತಿಯೊಬ್ಬರೂ ಎಷ್ಟೊಂದು ಮಾಹಿತಿಗಳನ್ನು ಪಡೆಯುತ್ತಾರೆಂದರೆ; ಅವುಗಳ ಭರಾಟೆಯಲ್ಲಿ ಅವರು ತಮ್ಮ ಸಾಮಾನ್ಯ ವಿವೇಕವನ್ನೇ ಕಳಕೊಂಡುಬಿಡುತ್ತಾರೆ”. ನಡೆದಿರುವುದು ಅದೇ ತಾನೇ? ಈ ಹಿನ್ನೆಲೆಯಲ್ಲಿ ಈಗಿನ ಆನ್‌ಲೈನ್ ಪಾಠಪದ್ಧತಿಯನ್ನು ಕಲ್ಪಿಸಿಕೊಂಡರೆ ಮನಸ್ಸಿನಲ್ಲಿ ಯಾವ ರೀತಿಯ ಚಿತ್ರ ಮೂಡಬಹುದು?

‘ಬದಲಾವಣೆಯೇ ಶಾಶ್ವತ’ -ಇದು ರೂಢಿಗತ ನುಡಿ. ಜೊತೆಗೆ, ಸತ್ಯವೂ ಕೂಡಾ. ಈಗಂತೂ ವೈಜ್ಞಾನಿಕ ಸಂಶೋಧನೆಗಳ ಫಲರೂಪವಾದ ವಿಪರೀತ ಆಯ್ಕೆಗಳು ಬೇರೆ. ಪರಿಸ್ಥಿತಿ ಹೀಗಿರುವಾಗ ‘ಶಾಶ್ವತ’ ಪದಕ್ಕೆ ನೆಲೆಯೆಲ್ಲಿ? ಈ ಹಿನ್ನೆಲೆಯಲ್ಲಿ ಹೇಳುವುದಾದರೆ; ಕೊರೋನಾ ಪ್ರೇರಿತ ಆನ್‌ಲೈನ್ ಕ್ರಾಂತಿ ಕೇವಲ ಸದ್ಯದ ಪರಿಸ್ಥಿತಿಯ ಸೃಷ್ಟಿ. ಶಾಶ್ವತವಾಗಲು ಸಾಧ್ಯವೇ ಇಲ್ಲ! ಸರ್ಕಾರ, ಕಾನೂನು, ಮಸೂದೆಗಳಿಂದ ಶಾಶ್ವತವನ್ನಾಗಿಸುವ ಅಥವಾ ಅನಿವಾರ್ಯವನ್ನಾಗಿಸುವ ಪ್ರಯತ್ನವೇನಾದರೂ ನಡೆದಲ್ಲಿ ಅದು ಸಫಲವೂ ಆಗುವುದಿಲ್ಲ.

ಮನುಷ್ಯನ ವ್ಯಾವಹಾರಿಕ ಪ್ರಪಂಚದಲ್ಲಿ ‘ಆನ್‌ಲೈನ್’ ಹಲವಾರು ದೈನಂದಿನ ಕೆಲಸಕಾರ್ಯಗಳಿಗೆ ಸಹಕಾರಿಯಾಗಿದೆ; ಕೆಲವು ಸಂದರ್ಭಗಳಲ್ಲಿ ಅಷ್ಟೇ ಅಪಾಯಕಾರಿಯೂ ಆಗಿದೆ. ತತ್ಕಾಲದ ವ್ಯವಸ್ಥೆಯಾಗಿ ಶಿಕ್ಷಣಕ್ಷೇತ್ರದಲ್ಲಿ ಈಗಷ್ಟೇ ಆರಂಭಿಸಿದ ಆನ್‌ಲೈನ್ ತರಗತಿಗಳೂ ಯಾವೆಲ್ಲಾ ರೀತಿಯ ದುರುಪಯೋಗ-ಅನಾಹುತಗಳಿಗೆ ಎಡೆಮಾಡುತ್ತಿವೆ ಎಂಬುದು ಆಗಲೇ ಅನುಭವಕ್ಕೂ ಬಂದಿದೆ! ಶಿಕ್ಷಣಕ್ಷೇತ್ರ ಇತರ ವ್ಯಾಪಾರ ವಹಿವಾಟು ಕ್ಷೇತ್ರಗಳಂತಲ್ಲ; ಆದರೆ ಪ್ರಸ್ತುತ ಶಿಕ್ಷಣಕ್ಷೇತ್ರ ಬಂಡವಾಳ ಹೂಡಿ ಲಾಭ ತೆಗೆಯುವಂತಹ ಒಂದು ಅದ್ಭುತ ವ್ಯವಸ್ಥೆಯಾಗಿರುವುದು ಪರಿಸ್ಥಿತಿಯ ವಿಡಂಬನೆ.

ಶಿಕ್ಷಣಕ್ಷೇತ್ರ ಗುರು-ಶಿಷ್ಯ; ಶಿಕ್ಷಕ-ವಿದ್ಯಾರ್ಥಿ ಆಧಾರಿತ ವ್ಯವಸ್ಥೆ. ಸಹಜವಾಗಿಯೇ ಪರಸ್ಪರ ಮುಖಾಮುಖಿಯಿಂದ ಜೀವಂತಿಕೆ, ಸೂಕ್ಷ್ಮತೆ, ಸಂವೇದನಾಶೀಲತೆಯನ್ನು ಅಪೇಕ್ಷಿಸುತ್ತದೆ. ಹೀಗಿರುವಲ್ಲಿ ಯಾವುದೇ ಜೀವಂತಿಕೆಯ ಸ್ಪರ್ಶವಿಲ್ಲದ, ಸಂವೇದನೆಯಿಲ್ಲದ ಈ ಆನ್‌ಲೈನ್ ಪರಿಸರದಲ್ಲಿ ಶೈಕ್ಷಣಿಕವಾಗಿ ರೂಪುಗೊಳ್ಳುವ ಮಕ್ಕಳ ಮನಃಸ್ಥಿತಿಯಾಗಲೀ, ಸಂಸ್ಕಾರವಾಗಲೀ ಹೇಗಿರಬಹುದು? ಮಾಹಿತಿ ತಂತ್ರಜ್ಞಾನದ ದೆಸೆಯಿಂದ ಈಗಾಗಲೇ ಒಂದು ಪೀಳಿಗೆ ಸೂಕ್ತ ಸ್ಪಂದನೆಯಿಲ್ಲದ, ತಮ್ಮಷ್ಟಕ್ಕೆ ತಾವೇ ಒಂದೊಂದು ಮೂಲೆ ಹಿಡಿದುಕೊಂಡು ಕುಳಿತುಕೊಳ್ಳುವ, ಒಂದೇ ಸೂರಿನಡಿಯಲ್ಲಿದ್ದರೂ ಪರಸ್ಪರ ಮುಖದರ್ಶನವಾಗದ ಪರಿಸ್ಥಿತಿಗೆ ಶರಣಾಗಿದೆ.

ಒಂದು ಹಂಚಿಕೆಯಿಲ್ಲ, ಒಂದು ನಗುವಿಲ್ಲ, ಒಂದು ಸ್ಪಂದನೆಯಿಲ್ಲ. ಯಾಂತ್ರಿಕ ಬದುಕನ್ನು ಅಪ್ಪಿಕೊಂಡಾಗಿದೆ. ಇದು ಮುಂಬರುವ ಪೀಳಿಗೆಗಳಿಗೂ ವಿಸ್ತರಿಸಬೇಕೆಂಬ ಕನಸಿದ್ದಲ್ಲಿ ಪ್ರಸ್ತುತ ಕೈಗೆತ್ತಿಕೊಂಡಿರುವ ಆನ್‌ಲೈನ್ ಶಿಕ್ಷಣವ್ಯವಸ್ಥೆ ಖಂಡಿತಾ ಆ ಕನಸನ್ನು ನನಸಾಗಿಸುವ ತಾಕತ್ತು ಹೊಂದಿದೆ!

ಖಾಸಗಿ ಶಿಕ್ಷಣಸಂಸ್ಥೆಗಳ ಮಕ್ಕಳು-ಪೋಷಕರಿಗೆ ಇದೊಂದು ‘ಪ್ರತಿಷ್ಠೆ’ಯಾದರೆ; ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳು-ಪೋಷಕರಿಗೆ ಇದೊಂದು ‘ಅನಿಷ್ಠ’! ಒಪ್ಪೊತ್ತಿನ ಊಟಕ್ಕೇ ತತ್ವಾರವಾಗಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ಕಾತರದಿಂದ ಕಾಯುತ್ತಿದ್ದ ಮಕ್ಕಳ ಮುಖಮಂಡಲವನ್ನೊಮ್ಮೆ ಈ ‘ಉಳ್ಳವರು’ ದೃಶ್ಯೀಕರಿಸಿಕೊಂಡರೆ(visualize) ವಾಸ್ತವ ಸತ್ಯದ ದರ್ಶನವಾದೀತು.

ಇದು ನಿಶ್ಚಿತವಾಗಿಯೂ ‘ಶ್ರೀಮಂತರ ಇಂಡಿಯಾ’ ಮತ್ತು ‘ಬಡವರ ಭಾರತ’ ಮಾಡುವುದಷ್ಟೇ ಅಲ್ಲ; ಸಮಾಜದಲ್ಲಿ ಸಮಾನತೆ ತರುವ ಬದಲು ಮತ್ತೆ ಸ್ವಾತಂತ್ರö್ಯಪೂರ್ವದ ಬ್ರಿಟಿಷ್ ಕಾಲದ ವಸಾಹತುಶಾಹಿ ಮನಃಸ್ಥಿತಿಗೆ ನೂಕುವ ಪ್ರಯತ್ನ.

‘ಮಾನವ ಸಂಘಜೀವಿ’ ಎಂಬುದು ಮನುಜಕುಲ ಒಪ್ಪಿಕೊಂಡು ಬಂದ ಸತ್ಯ. ಮಾಹಿತಿ ತಂತ್ರಜ್ಞಾನದ ವಿಷಯ-ಸುಖಗಳು ಪ್ರತಿ ಕ್ಷಣ, ಪ್ರತಿ ಕಣ, ಪ್ರತಿಯೊಬ್ಬ ವ್ಯಕ್ತಿಯಲ್ಲಿ ಈ ಸತ್ಯವನ್ನು ಅಲ್ಲಾಡಿಸುತ್ತಿರುವುದು ಬಹುತೇಕ ಪ್ರತಿಯೊಬ್ಬರ ಅನುಭವಕ್ಕೂ ಬಂದಿದೆ; ಬಹುಶಃ ಇಂದಿನ ಯುವಪೀಳಿಗೆಯನ್ನು ಹೊರತುಪಡಿಸಿ! ಅವರ ಆಸೆ, ಆಕಾಂಕ್ಷೆ, ಇಷ್ಟಾನಿಷ್ಟಗಳಿಗೆ ಯಾರದೇ (ಪೋಷಕರೂ ಸೇರಿದಂತೆ) ಹಂಗು, ಅಪ್ಪಣೆ, ಲಗಾಮಿನ ಅವಶ್ಯಕತೆ ಇಲ್ಲ ಎಂಬಂತಾಗಿದೆ. ಈ ಕಟುಸತ್ಯವನ್ನು ಸಾಂಘಿಕವಾಗಿ, ಸಾಂಸ್ಥಿಕವಾಗಿ, ಸಾಮೂಹಿಕವಾಗಿ ಒಪ್ಪಿಕೊಳ್ಳಲು ಪ್ರತಿಷ್ಠೆ, ಒಣಜಂಭ ಅಡ್ಡಬರುತ್ತಿದೆ.

ಯಾಕೆ ಆನ್‌ಲೈನ್ ಕ್ರಾಂತಿ ಶಾಶ್ವತವಾಗುವುದಿಲ್ಲ; ಶಾಶ್ವತವಾಗಬಾರದು ಎಂಬುದಕ್ಕೆ ಈ ಕೆಳಗಿನ ವಿಚಾರಗಳನ್ನು ಪ್ರಸ್ತುತಪಡಿಸುತ್ತೇನೆ.

 • ಶಿಕ್ಷಣವೆಂದರೆ ಕೇವಲ ಅಕ್ಷರ, ಮಾಹಿತಿ ವರ್ಗಾವಣೆ ಅಲ್ಲ; ಇದು ಮಾನವೀಯ ಸಂಬಂಧಗಳನ್ನು ಬೆಳೆಸಬೇಕಾದ ವ್ಯವಸ್ಥೆ ಎಂಬುದನ್ನು ನಾವು ಸದಾ ಪ್ರಜ್ಞೆಯಲ್ಲಿರಿಸಿಕೊಳ್ಳಬೇಕು.
 • ಶಾಲೆಯ ಪ್ರತ್ಯಕ್ಷ ಕಲಿಕಾ ವಾತಾವರಣ ಎಲ್ಲಿ? ಮನೆಯಲ್ಲಿ ಬಲವಂತವಾಗಿ ಕೂಡಿಟ್ಟು ಕಲಿಸುವ ಆನ್‌ಲೈನ್ ಪಾಠಕ್ರಮ ಎಲ್ಲಿ? ಈ ವ್ಯತ್ಯಾಸವನ್ನು ಅರಿಯಲಾರದಷ್ಟು ಅಮಾಯಕರೇ ನಾವು?
 • ಸೃಜನಶೀಲತೆಯನ್ನು ಅವುಗಳು (ಆನ್‌ಲೈನ್ ಪಠ್ಯಗಳು) ಕಟ್ಟಿಕೊಟ್ಟದ್ದರಲ್ಲೇ ಕಂಡುಕೊಳ್ಳಲು ಪ್ರಯತ್ನಿಸಬೇಕಾದ ಅನಿವಾರ್ಯತೆ. ಮಕ್ಕಳನ್ನು ಚಿಂತನೆಗೆ ಹಚ್ಚುವ ಯಾವ ಪ್ರಯತ್ನವೂ ಈ ಕ್ರಮದಲ್ಲಿ ಇರುವುದಿಲ್ಲ.
 • ಮನೆಯಲ್ಲಿ ಬೇರೆ ಬೇರೆ ವಯಸ್ಸಿನ ಮಕ್ಕಳಿದ್ದಾಗ ಇದು ಉಂಟುಮಾಡುವ ಪ್ರಭಾವ; ಅವರನ್ನು ಪ್ರೇರೇಪಿಸಬಹುದಾದ ಇನ್ನಿತರ ಅಭ್ಯಾಸಗಳನ್ನು ಕಲ್ಪಿಸಿಕೊಂಡರೆ ಭಯವಾಗುತ್ತದೆ.
 • ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್ ಸಿಗುವುದಿಲ್ಲ; ಆನ್‌ಲೈನ್ ಶಿಕ್ಷಣವ್ಯವಸ್ಥೆ ಅಪೇಕ್ಷಿಸುವ ಪರಿಕರ, ಅವಶ್ಯಕತೆಗಳನ್ನು ಹೊಂದಿಸಿಕೊಳ್ಳುವಷ್ಟು ಆರ್ಥಿಕ ಶಕ್ತಿ ಬಹುಪಾಲು ವರ್ಗಗಳಿಗೆ ಇರುವುದಿಲ್ಲ.
 • ಮಕ್ಕಳ ಮನಸ್ಸು ಮತ್ತು ಒಟ್ಟು ಆರೋಗ್ಯದ ಮೇಲೆ ಇದು ಬೀರಬಹುದಾದ ದುಷ್ಪರಿಣಾಮಗಳ ಬಗ್ಗೆ ಆನ್‌ಲೈನ್ ಶಿಕ್ಷಣದ ಪರವಾಗಿರುವವರು ಪ್ರಾಮಾಣಿಕವಾಗಿ ವಿಮರ್ಶೆ ಮಾಡಬೇಕಿದೆ.
 • ಪ್ರತ್ಯಕ್ಷ ಶಿಕ್ಷಣಕ್ರಮದಲ್ಲೇ ಸಾಧಿಸಲಾಗದ ಜೀವನ್ಮುಖಿ ಫಲಿತಾಂಶವನ್ನು ಆನ್‌ಲೈನ್ ಶಿಕ್ಷಣದಲ್ಲಿ ಸಾಧಿಸಲು ಸಾಧ್ಯವಿಲ್ಲ.
 • ಪದವಿ ವಿದ್ಯಾರ್ಥಿಗಳಿಗೇ ಜೀರ್ಣಿಸಿಕೊಳ್ಳಲು ಕಷ್ಟವಾಗಿರುವಾಗ ಈಗಷ್ಟೇ ಅರಳುತ್ತಿರುವ ಮಕ್ಕಳಿಗೆ ಸಾಧ್ಯವೇ?
 • ಇಲ್ಲಿವರೆಗೆ ಮಕ್ಕಳಿಗೆ ಮೊಬೈಲ್ ಫೋನು ಕೊಡುವುದಕ್ಕೇ ಭಯಪಡುತ್ತಿದ್ದ ಪಾಲಕರು-ಪೋಷಕರು ಈಗ ತಾವಾಗಿಯೇ ಸ್ಮಾರ್ಟ್ಫೋನ್ ಕೊಟ್ಟು ಶಿಕ್ಷಿತರನ್ನಾಗಿಸುವ ಸಂದರ್ಭ ಬೇಕೇ?
 • ಮಕ್ಕಳಿಗೆ ಮೊಬೈಲ್ ಕೊಡಲೇಬೇಡಿ ಎಂಬ ವೈದ್ಯರ ಎಚ್ಚರಿಕೆ ಹೊರತಾಗಿಯೂ ಮಕ್ಕಳು ಗಂಟೆಗಟ್ಟಲೆ ಕಿವಿಗೆ ಇಯರ್‌ಫೋನು ಸಿಕ್ಕಿಸಿಕೊಂಡು ಕೂತಾಗ ಪರಿಸ್ಥಿತಿ ಏನಿರಬೇಡ? ಮಕ್ಕಳ ಆರೋಗ್ಯ ಹೇಗಿರಬೇಡ?
 • ದೈಹಿಕ ಚಟುವಟಿಕೆಗಳಿಗಂತೂ ಅವಕಾಶವೇ ಇರುವುದಿಲ್ಲ. ಸ್ಮಾರ್ಟ್ ಫೋನುಗಳಿಂದ ಉಂಟಾಗುವ ವಿಕಿರಣತೆಯ ಸಾಧಕ-ಬಾಧಕಗಳ ಬಗ್ಗೆ ಪ್ರಜ್ಞೆ ಬೇಡವೇ?
 • ನಿಮ್ಹಾನ್ಸ್ ಆಸ್ಪತ್ರೆಯ ತಜ್ಞರ ತಂಡ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಆನ್‌ಲೈನ್ ಬೋಧನೆಯೇ ಅಗತ್ಯವಿಲ್ಲ ಎಂಬುದಾಗಿ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಅದನ್ನು ಮೀರಿ ಕೆಲವು ಖಾಸಗಿ ಶಿಕ್ಷಣಸಂಸ್ಥೆಗಳಂತೂ ಪ್ರಾಥಮಿಕ ಶಿಕ್ಷಣಕ್ಕೂ ಆನ್‌ಲೈನ್ ಕಲಿಕೆ ಕಡ್ಡಾಯ ಎಂಬುದನ್ನು ಜಾರಿಮಾಡಿಯಾಗಿದೆೆ! ಇವೇ ಸಂಸ್ಥೆಗಳು ಕೊರೋನಾ ಪೂರ್ವದ ದಿನಗಳಲ್ಲಿ ಮಕ್ಕಳ ಪಾಲಕರು-ಪೋಷಕರು ‘ಯಾವುದೇ ಕಾರಣಕ್ಕೂ ಮಕ್ಕಳಿಗೆ ಮೊಬೈಲ್ ನೀಡಬೇಡಿ’ ಎಂಬ ಕಡಕ್ ನಿರ್ದೇಶನ ನೀಡಿದ್ದವು ಎಂಬುದನ್ನು ಬಹಳ ಬೇಗ ಮರೆತಂತಿದೆ.

ಬದುಕು ಈ ಎಲ್ಲಾ ತಾಂತ್ರಿಕತೆಗಿಂತಲೂ, ಉದ್ಯೋಗ ಭದ್ರತೆಗಿಂತಲೂ ಮುಖ್ಯವಾದುದು. ಜ್ಞಾನದ ಸಂಗ್ರಹ ಬದುಕಿನ ಉತ್ಸಾಹವನ್ನು ಕಸಿದುಕೊಂಡಿದೆ. ಮಕ್ಕಳ ಮೇಲೆ ಈಗ ನಮ್ಮ ಮಹತ್ವಾಕಾಂಕ್ಷೆಯ ಭಾರವಿದೆ! ಮಕ್ಕಳ ಮೇಲೆ ನಮ್ಮ ಕೊನೆಮೊದಲಿಲ್ಲದ ಕನಸುಗಳ ಹೊರೆಯಿದೆ! ಈ ಹೊರೆ ಪುಸ್ತಕಗಳ ಹೊರೆಗಿಂತಲೂ ಅಧಿಕ. ಪುಸ್ತಕಗಳನ್ನು ಶಾಲೆಯಲ್ಲೇ ಇಟ್ಟು ಮಕ್ಕಳಹೊರೆಯನ್ನು ಕಡಿಮೆಮಾಡಬಹುದು. ಆದರೆ ಹೆತ್ತವರ ಹಂಬಲದ ಹೊರೆಯನ್ನು ಕಳಚಿಡುವುದು ಸಾಧ್ಯವೇ ಇಲ್ಲ. ಇದು ಹಗಲಿರುಳು ಮಕ್ಕಳ ಹೆಗಲಮೇಲಿರುತ್ತದೆ. ಈ ಹಿನ್ನೆಲೆಯಲ್ಲಿ ಸಿಗುವ ಶಿಕ್ಷಣ ಮುಕ್ತವಾಗಿರುವುದು ಸಾಧ್ಯವೇ ಇಲ್ಲ.

ನಿಜವಾದ ಶಿಕ್ಷಣ ಯಾವುದೇ ಒಂದು ತತ್ವಕ್ಕೆ, ಅದು ಎಷ್ಟೇ ಉದಾತ್ತವಾಗಿದ್ದರೂ ಅಂಟಿಕೊಳ್ಳುವುದಿಲ್ಲ. ಅದು ಯಾವುದೇ ವ್ಯವಸ್ಥೆಗೂ ಹೊಂದಿಕೊಂಡಿಲ್ಲ. ನಿಜವಾದ ಅರ್ಥದಲ್ಲಿ ಶಿಕ್ಷಣ ವ್ಯಕ್ತಿಯ ಸಂಪೂರ್ಣ ವಿಕಾಸ ಮತ್ತು ಸ್ವಾತಂತ್ರ್ಯಕ್ಕೆ, ಒಳ್ಳೆಯತನದ ಅರಳುವಿಕೆಗೆ ಸಹಾಯಮಾಡುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಣವೆನ್ನುವುದು ಕ್ಷಣಕ್ಷಣವೂ ನಡೆಯಬೇಕಾದ ಒಂದು ಅನುಭವ ವೃತ್ತಾಂತ! ಇದು ಬದುಕು ಕೊಡುವುದನ್ನು ಸ್ವೀಕರಿಸಿ ಪಾಠ ಕಲಿಯುತ್ತಾ ಹೋಗಬೇಕಾದ ಒಂದು ಸಹಜಗತಿ! ಶಿಕ್ಷಕ ಕೇವಲ ಮಾಹಿತಿನೀಡುವ ವ್ಯಕ್ತಿಯಲ್ಲ. ಶಿಕ್ಷಣದ ಉದ್ದೇಶ ಹೊಸ ಮೌಲ್ಯಗಳ ಸೃಷ್ಟಿ. ಹೊಸತನ್ನು ಸ್ವಾಗತಿಸಲು ಮುಕ್ತ ಮನಸ್ಸು ಬೇಕು. ಈ ಮುಕ್ತ ಮನಸ್ಸು ಮೂಡುವಂಥ ಶಿಕ್ಷಣ ಈಗ ಬೇಕು.

ಅಲೆ ಸಮುದ್ರದ್ದು; ಸಮುದ್ರ ಅಲೆಯದ್ದಲ್ಲ! ಶಿಕ್ಷಣ ಬೇಕಿರುವುದು ಮಕ್ಕಳಿಗೆ; ಬಂಡವಾಳ ಹೂಡಿದವರಿಗಲ್ಲ! ಶಿಕ್ಷಣವನ್ನು ಒದಗಿಸುವ ನೆಪದಲ್ಲಿ ಸಮುದ್ರವನ್ನೇ ತನ್ನದೆಂಬ ಭ್ರಾಂತು ಹಚ್ಚಿಕೊಂಡಂತಿದೆ. “ವಿದ್ಯಾರ್ಥಿಗೆ ಸ್ಫೂರ್ತಿನೀಡದೆ ಪಾಠಹೇಳುವ ಶಿಕ್ಷಕ ತಣ್ಣನೆಯ ಕಬ್ಬಿಣವನ್ನು ಬಡಿಯುತ್ತಾನೆ” ಎಂಬ ಹೊರೇಸ್ ಮಾನ್ ನುಡಿ ಈ ಸಂದರ್ಭದಲ್ಲಿ ಮನನ ಯೋಗ್ಯವಾಗಿದೆ. “ಪುಸ್ತಕ ಭಾರವನ್ನು ಹೊತ್ತವರೆಲ್ಲ ವಿದ್ಯಾವಂತರಲ್ಲ. ಅದು ನಿಜವಾದ ವಿದ್ಯೆಗೆ ಸಾಧನವಷ್ಟೆ. ನೀರು, ಕಟ್ಟಿಗೆಗಳು ಅಡುಗೆ ಮಾಡಲು ಸಾಧನ. ಆದರೆ ನೀರು ಹೊರುವುದು, ಕಟ್ಟಿಗೆ ಒಡೆಯುವುದೇ ಪಾಕಶಾಸ್ತç ಪ್ರಾವೀಣ್ಯವಲ್ಲ” -ಇದು ಮಹಾಭಾರತದ ಉದ್ಯೋಗಪರ್ವದಲ್ಲಿ ಬರುವ ಮಾತು.

ನಿರ್ದಿಷ್ಟ ಕಾರ್ಯಸೂಚಿ ಹಾಗೂ ನಿರ್ದೇಶನಗಳನ್ನು ಒಳಗೊಂಡಂತೆ ಸರ್ಕಾರ ಒಂದು ಸ್ಪಷ್ಟ ನೀತಿಯನ್ನು ರೂಪಿಸಬೇಕು. ಈ ವಿಚಾರದಲ್ಲಿ ರಾಜಕೀಯ ಸಲ್ಲದು.

*ಲೇಖಕರು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರು, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು.

Leave a Reply

Your email address will not be published.