ವಿಶ್ವದ ಮೊಟ್ಟಮೊದಲ ಮಹಿಳಾ ಕ್ರಿಕೆಟ್ ಕಾಮೆಂಟೇಟರ್ ಚಂದ್ರಾ ನಾಯಿಡು

ವಿಶ್ವ ಕ್ರಿಕೆಟ್ ರಂಗದಲ್ಲಿ ಮೊಟ್ಟಮೊದಲ ಮಹಿಳಾ ಕ್ರಿಕೆಟ್ ವೀಕ್ಷಕ ವಿವರಣೆಕಾರರಾದ ಚಂದ್ರಾ ನಾಯಿಡು ಕಳೆದ ತಿಂಗಳು ತಮ್ಮ 88ನೇ ವಯಸ್ಸಿನಲ್ಲಿ ಇಂದೋರ್‍ನ ತಮ್ಮ ನಿವಾಸದಲ್ಲಿ ನಿಧನರಾದರು. ಇದರಿಂದ ಭಾರತಿಯ ಕ್ರಿಕೆಟ್ ರಂಗ ಒಬ್ಬ ತಾರೆಯನ್ನು ಕಳೆದುಕೊಂಡಂತಾಗಿದೆ.

-ಚಂದ್ರಮೌಳಿ ಕಣವಿ

ಭಾರತೀಯ ಕ್ರಿಕೆಟ್ ರಂಗದ ದಂತಕತೆ, 1932 ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಮೊಟ್ಟಮೊದಲ ನಾಯಕ, ತಮ್ಮ ಬಿರುಸಿನ ಹೊಡೆತಗಳಿಗೆ, ನೇರ ಮಾತು, ನೇರ ನಿಲುವಿಗೆ ಜನಪ್ರಿಯರಾದ ಕರ್ನಲ್ ಸಿ.ಕೆ. ನಾಯಿಡು ಅವರ ಪುತ್ರಿ ಚಂದ್ರಾ ನಾಯಿಡು. 1972 ರಲ್ಲಿ ಆಗಿನ ರಾಷ್ಟ್ರೀಯ ಚಾಂಪಿಯನ್ ಮುಂಬೈ ಹಾಗೂ ಪ್ರವಾಸೀ ಎಂ.ಸಿ.ಸಿ ಮಧ್ಯೆ ಇಂದೋರ್‍ನ ಹೋಳ್ಕರ್ ಮೈದಾನದಲ್ಲಿ, ಕ್ರಿಕೆಟ್ ಪಂದ್ಯ ನಡೆವಾಗ, ಚಂದ್ರಾ ನಾಯಿಡು ಆಕಾಶವಾಣಿಗೆ ವೀಕ್ಷಕ ವಿವರಣೆ ನೀಡಿ, ಕ್ರಿಕೆಟ್ ಪಂದ್ಯಕ್ಕೆ ವಿವರಣೆ ನೀಡಿದ ಜಗತ್ತಿನ ಮೊಟ್ಟ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1982ರಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಮ್ಮ 50ನೇ ವರ್ಷದ ಕ್ರಿಕೆಟ್ ನಂಟನ್ನು ಆಚರಿಸಿತು. ಲಾಡ್ರ್ಸ್ ಮೈದಾನದಲ್ಲಿ ನಡೆದ ಆ ಟೆಸ್ಟ್ ಪಂದ್ಯಕ್ಕೆ ಚಂದ್ರಾ ನಾಯಿಡು ಅವರನ್ನು ಆಹ್ವಾನಿಸಲಾಗಿತ್ತು. ಚಂದ್ರಾ ನಾಯಿಡು ಟೆಸ್ಟ್ ಪಂದ್ಯ ವೀಕ್ಷಿಸಿದ ನಂತರ ಲಾಡ್ರ್ಸ್ ಪೆವಿಲಿಯನ್‍ನ ಕಮಿಟಿ ಆವರಣದಲ್ಲಿ ವ್ಯಾಖ್ಯಾನ ನೀಡಿದ ಮೊಟ್ಟ ಮೊದಲ ಮಹಿಳೆಯಾಗಿದ್ದರು. ಆಗ ಅವರು ಲಾಡ್ರ್ಸ್ ಕ್ರಿಕೆಟ್ ವಸ್ತುಸಂಗ್ರಹಾಲಯಕ್ಕೆ ತಮ್ಮ ತಂದೆ ಆಡಿದ ಕ್ರಿಕೆಟ್ ಬ್ಯಾಟ್‍ನ್ನು ಕೊಡುಗೆಯಾಗಿ ನೀಡಿದರು.

ಅವರು ಆಕಾಶವಾಣಿಗಾಗಿ ವೀಕ್ಷಕವಿವರಣೆಯನ್ನು ಬಹಳ ಕಾಲ ಮುಂದುವರೆಸಲಿಲ್ಲ. ಇಂದೋರ್‍ನ ಸರಕಾರಿ ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1995ರಲ್ಲಿ ತಮ್ಮ ತಂದೆ ಸಿ.ಕೆ. ನಾಯಿಡು ಅವರನ್ನು ಕುರಿತು “C.K. Nayaudu, A Daughter Remembers” ಎಂಬ ಪುಸ್ತಕ ಬರೆದರು. ಅದರಲ್ಲಿ ನಾಯ್ಡು ಅವರ ವ್ಯಕ್ತಿತ್ವ, ಮನೋಬಲ, ಸತತ ಸ್ಥಿರ ಮನಸ್ಥಿತಿ ಬಗ್ಗೆ ಹೆಚ್ಚು ಒತ್ತು ನೀಡಿದ್ದಾರೆ. ಆದರೆ ಅವರ ಕ್ರಿಕೆಟ್ ಅವತಾರಗಳ ಬಗ್ಗೆ ಹೆಚ್ಚು ಉಲ್ಲೇಖಿಸಿಲ್ಲ.

ಒಂದು ಖ್ಯಾತ ಕ್ರಿಕೆಟ್ ಜಾಲತಾಣ, ಕೆಲ ವರ್ಷಗಳ ಹಿಂದೆ ಚಂದ್ರಾ ನಾಯಿಡು ಅವರ ಸಂದರ್ಶನ ಮಾಡಿತ್ತು. ಸಿ.ಕೆ.ನಾಯಿಡು ಅವರ ಆಡುವ ದಿನಗಳು ಹೇಗಿದ್ದವು ಎಂದು ಕೇಳಿದಾಗ ‘ಎಲ್ಲ ಹೆಣ್ಣು ಮಕ್ಕಳಿಗೆ, ತಮ್ಮ ತಂದೆಯೇ ಸೂಪರ್ ಹೀರೋ. ನನಗೆ ನನ್ನ ತಂದೆಯಾಗಿ ಹಾಗೂ ಕ್ರಿಕೆಟರ್ ಆಗಿರುವುದರಲ್ಲಿ ಸಾಕಷ್ಟು ಸಾಮ್ಯತೆ ಇದೆ’ ಎಂದಿದ್ದರು. ಸಿ.ಕೆ.ನಾಯಿಡು ಅವರ ಸಂಗೀತದ ಹುಚ್ಚಿನ ಬಗ್ಗೆ ಮಾತನಾಡುತ್ತಾ ‘ನನ್ನ ತಂದೆ ಹಿಂದಿ ಚಲನಚಿತ್ರದ ಗಾಯಕ ಕೆ.ಎಲ್.ಸಾಯಿಗಲ್  ಹಾಗೂ ಕಾನನ್‍ದೇವಿಯವರ ದೊಡ್ಡ ಆರಾಧಕರಾಗಿದ್ದರು. ಒಮ್ಮೆ ಅವರು ಆಡಲು ಕಲಕತ್ತೆಗೆ ಹೋದಾಗ ಸಾಯಿಗಲ್ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿತ್ತು. ಕ್ರಿಕೆಟ್ ಪ್ರಿಯರಾದ ಸಾಯಿಗಲ್ ತುಂಬಾ ಖುಷಿಪಟ್ಟು, ಗಂಟೆಗಟ್ಟಲೇ ಅವರ ಮುಂದೆ, ತಮ್ಮ ಖ್ಯಾತ ಗೀತೆಗಳನ್ನು ಸಾದರಪಡಿಸಿದರು’.

ಸಿ.ಕೆ.ನಾಯಿಡು ಅವರು ತಮ್ಮ ಕ್ರಿಕೆಟ್ ಹಾಗೂ ಕೌಟುಂಬಿಕ ಜೀವನವನ್ನು ಹೇಗೆ ಸಮತೋಲಿಸುತ್ತಿದ್ದರು ಎಂಬ ಪ್ರಶ್ನೆಗೆ ಚಂದ್ರಾ ನಾಯಿಡು ಅವರ ವಿವರಣೆ:

‘ನನ್ನ ತಂದೆಗೆ ಕ್ರಿಕೆಟ್ ಮೊದಲ ಪ್ರೀತಿ, ಪ್ರವಾಸದಲಿದ್ದಾಗ ಹಾಗೂ ಮೈದಾನದಲ್ಲಿ ಆಡುವಾಗ ಮಿಕ್ಕ ಎಲ್ಲಾ ವಿಷಯಗಳ ಬಗ್ಗೆ ಸ್ಥಿತಪ್ರಜ್ಞರಾಗಿರುತ್ತಿದ್ದರು. ಉಳಿದ ಯಾವ ವಿಷಯಗಳ ಬಗ್ಗೆಯೂ ಯೋಚನೆ ಮಾಡುತ್ತಿರಲಿಲ್ಲ. ಆದರೆ ಒಂದುಬಾರಿ ಮನೆಗೆ ಮರಳಿದರೆ ಅಷ್ಟೇ. ಎಲ್ಲರನ್ನೂ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾವು ಒಟ್ಟು ಒಂಬತ್ತು ಜನ ಮಕ್ಕಳು. ಎಲ್ಲ ಮಕ್ಕಳ ಅಭ್ಯಾಸದ ಬಗ್ಗೆ ಹೆಚ್ಚು ಮುತುವರ್ಜಿವಹಿಸುತ್ತಿದ್ದರು. ಅತೀ ಜನಪ್ರಿಯತೆಗಳಿಸಿದ್ದರೂ ಹಣ ಮಾಡಲು ಸಾಧ್ಯವಾಗಲಿಲ್ಲ. ಸಿ.ಕೆ.ನಾಯಿಡು ಅವರ ತಂದೆ ದೊಡ್ಡ ಜಮೀನ್ದಾರರಾಗಿದ್ದರು. ಮಗ ಮೊದಲ ದಿನ ಶಾಲೆಗೆ ಹೋಗುವಾಗ ಆನೆಯ ಮೇಲೆ ಕೂರಿಸಿ ಕಳುಹಿಸಿದ್ದರು.

‘ಸಿ.ಕೆ.ನಾಯಿಡು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಂಡರು. 20ರ ದಶಕದಲ್ಲಿ ತಮ್ಮ ಅಮೋಘ ಕ್ರಿಕೆಟ್ ಪ್ರದರ್ಶನದಿಂದ, ಭಾರತಕ್ಕೆ 1928 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸದಸ್ಯತ್ವ ತಂದು ಕೊಟ್ಟಿದ್ದಲ್ಲದೇ 1932ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಲು ಕಾರಣೀಭೂತರಾದವರು. 1932 ರಲ್ಲಿ ಭಾರತದ ಪರವಾಗಿ ಇಂಗ್ಲೆಂಡ್ ವಿರುದ್ಧ ಮೊಟ್ಟ ಮೊದಲ ನಾಯಕರಾಗಿ ತಮ್ಮ ಮೇಲಿನ ಅತೀವ ಒತ್ತಡವನ್ನು ಬಹಳ ಚೆನ್ನಾಗಿ ನಿಭಾಯಿಸಿದರು. 1936 ರ ಇಂಗ್ಲೆಂಡ್ ಪ್ರವಾಸದಲ್ಲಿ ಮತ್ತೆ ನಾಯಕತ್ವ ವಹಿಸಬೇಕಿತ್ತು. ಅದರೆ Vizzy ಅವರ ಹಸ್ತಕ್ಷೇಪದಿಂದ ಕೈತಪ್ಪಿ ಹೋಯಿತು. ಆದರೂ ಆ ಪ್ರವಾಸದಲ್ಲಿ ಅವರ ಅತ್ಯುತ್ತಮ ಬ್ಯಾಟಿಂಗ್‍ನಿಂದ, ಎಲ್ಲರನ್ನೂ ಮನರಂಜಿಸಿ, ವರ್ಷದ ಐವರು ಶ್ರೇಷ್ಠ ಕ್ರಿಕೆಟರ್‍ಗಳ ಪಟ್ಟಿಯಲ್ಲಿ Wisden ಇವರ ಹೆಸರನ್ನೂ ಸೇರಿಸಿ ಗೌರವಿಸಿತು.

‘ಪದ್ಮಭೂಷಣ ಗೌರವಕ್ಕೆ ಪಾತ್ರರಾದ ಮೊಟ್ಟ ಮೊದಲ ಕ್ರಿಕೆಟ್ ಆಟಗಾರ ಸಿ.ಕೆ.ನಾಯಿಡು, 1967ರಲ್ಲಿ ತಾವು ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು. 68 ವರ್ಷದವರೆಗೂ ರಾಷ್ಟ್ರೀಯ ಚಾಂಪಿಯನ್ ಶಿಪ್‍ನಲ್ಲಿ ಮೊದಲ ದರ್ಜೆಯ ಕ್ರಿಕೆಟ್ ಆಡುತ್ತಲೇ ಇದ್ದರು. Cottari Kanakaiah Nayudu ಅವರ ತಮ್ಮ Cottari Subbanna Nayudu ಲೆಗ್‍ಸ್ಪಿನ್ನರ್ ಆಗಿ ಭಾರತದ ಪರವಾಗಿ ಮಿಂಚಿದರು. ಸಹೋದರರಾದ C.R.Nayudu ಹಾಗೂ C.L.Nayudu ಮೊದಲ ದರ್ಜೆಯ ಕ್ರಿಕೆಟ್ ಮಾತ್ರ ಆಡಿದರು. ನನ್ನ ಸಹೋದರರಾದ ಸಿ.ಆರ್.ನಾಯಿಡು ಹಾಗೂ ಪ್ರಕಾಶ ನಾಯಿಡು ಕೂಡ ಪ್ರಥಮ ದರ್ಜೆಯ ಕ್ರಿಕೆಟ್ ಆಡಿದ್ದರು. ಪ್ರಕಾಶ್ ನಾಯಿಡು ರಾಷ್ಟ್ರೀಯ ಟೇಬಲ್ ಟೆನ್ನಿಸ್ ಜ್ಯೂನಿಯರ್ ಚಾಂಪಿಯನ್ ಕೂಡ ಆಗಿದ್ದರು. ನಂತರ ನಮ್ಮ ಸಂಬಂಧಿ, ವೇಗದ ಬೌಲರ್ ಡಿ.ಗೋವಿಂದರಾಜ್, ಹೈದರಾಬಾದ್ ಪರವಾಗಿ 1970-71 ರ ಭಾರತದ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಭಾಗಿಯಾಗಿದ್ದರು’.

ಮಧ್ಯಪ್ರವೇಶದ ಇಂದೋರ್‍ನವರೇ ಆದ, ಆಕಾಶವಾಣಿಯಲ್ಲಿ ಕಳೆದ 5 ದಶಕಗಳಿಂದ ಅತ್ಯಂತ ಜನಪ್ರಿಯ ಹಿಂದಿ ಕ್ರಿಕೆಟ್ ವಿವರಣೆಕಾರ ಸುಶೀಲ್ ದೋಶಿಯವರು, ಚಂದ್ರಾ ನಾಯಿಡು ಅವರಿಗೆ ತೀರ ಹತ್ತಿರವರಾಗಿದ್ದರು. ಅವರು ಮಾತನಾಡುತ್ತಾ ಹೀಗೆ ಹೇಳಿದ್ದಾರೆ:

“ಸಿ.ಕೆ.ನಾಯಿಡು ಅವರಿಗೆ ಅತೀ ದೊಡ್ಡ ವ್ಯಥೆಪಡುವ ಸಂಗತಿ ಇತ್ತು. ಅದೇನೆಂದರೆ ತಮ್ಮದು ದೊಡ್ಡ ಸಂಸಾರ, ಅತ್ಯಂತ ಹೆಸರುವಾಸಿಯಾಗಿದ್ದರೂ ಹತ್ತಿರ ಹೆಚ್ಚು ಹಣ ಇಲ್ಲದ್ದರಿಂದ ಚಂದ್ರಾ ಅವರ ಮದುವೆ ಮಾಡಿಕೊಡಲು ಸಾಧ್ಯವಾಗಲಿಲ್ಲ ಎಂದು. ಚಂದ್ರಾ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ, ಹಿಂದಿ ಭಾಷೆಯ ಮೇಲೆ ಒಳ್ಳೆಯ ಹಿಡಿತವಿದ್ದುದರಿಂದ, ಅತ್ಯುತ್ತಮ ಹಿಂದಿ ಕ್ರಿಕೆಟ್ ವಿವರಣೆಕಾರರಾಗಿದ್ದರು. ಅವರಿಗಿದ್ದ ಛಲ ಅವರ ತಂದೆಯಿಂದ ಬಳುವಳಿಯಾಗಿ ಬಂದಿತ್ತು. ಆ ಫಲವೇ ಅವರನ್ನು ವಿಶ್ವದಲ್ಲಿ ಮೊಟ್ಟ ಮೊದಲ ಮಹಿಳಾ ಕ್ರಿಕೆಟ್ ಕಾಮೆಂಟೇಟರ್ ಆಗಿ ಪ್ರತಿಫಲ ನೀಡಿತ್ತು. ಇಂಥ ಧೈರ್ಯಶಾಲಿ, ನನಗೆ ಅಕ್ಕನಂತಿದ್ದರು.

“ಕೊನೆಯವರೆಗೂ ಸೋಲನ್ನು ಒಪ್ಪಿಕೊಳ್ಳಲೇ ಇಲ್ಲ. ನಾನು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಹಿಂದಿ ಕಾಮೆಂಟೇಟರ್ ಆಗಲು ಅವರೇ ನನಗೆ ದೊಡ್ಡಪ್ರೇರಣೆ. ಚಂದ್ರಾ ಅತ್ಯಂತ ಸಹಿಷ್ಣುತೆ ಉಳ್ಳವರಾಗಿದ್ದರು. 1977-88 ರಲ್ಲಿ ನನಗೆ ಮೊದಲ ಬಾರಿಗೆ ವಿದೇಶಕ್ಕೆ ಹೋಗಿ ವೀಕ್ಷಕ ವಿವರಣೆ ನೀಡಲು ಆಸ್ಟ್ರೇಲಿಯಾಗೆ ಹೋಗಲು ಅವಕಾಶ ಸಿಕ್ಕಾಗ, ನಾನು ಮೊದಲ ಬಾರಿಗೆ ವಿದೇಶ ಪ್ರಯಾಣ ಮಾಡುತ್ತಿದ್ದರಿಂದ, ನನ್ನ ಪಾಲಕರು ಆತಂಕಕ್ಕೆ ಒಳಗಾಗಿದ್ದರು. ನನ್ನ ಅಕ್ಕನಂತಿದ್ದ ಚಂದ್ರಾ, ನನ್ನನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟುಬಂದರು. ನಾನು ಪ್ರವಾಸದಲ್ಲಿದ್ದಾಗ ನಮ್ಮ ಮನೆಗೆ ಅನೇಕಬಾರಿ ಬಂದು, ನನ್ನ ಪಾಲಕರೊಂದಿಗೆ ಇದ್ದರು. ಅದನ್ನು ನಾನು ಮರೆಯುವಹಾಗಿಲ್ಲ.

“ಚಂದ್ರಾ ಕೊನೆಯ ಕೆಲವರ್ಷಕಾಲ ಹಾಸಿಗೆ ಹಿಡಿದಿದ್ದರು. ಆರ್ಥಿಕ ಪರಿಸ್ಥಿತಿಯೂ ಸಮಾಧಾನಕರರಾಗಿರಲಿಲ್ಲ. ದುರಷೃಷ್ಟವಶಾತ್, ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅವರ ನೆರವಿಗೆ ಬರಲಿಲ್ಲ”

ದುಃಖ ತಪ್ತ ಸುಶೀಲ್ ದೋಶಿ ಮುಂದುವರೆದು, “ಚಂದ್ರಾ ಅವರ ತಂದೆ ಸಿ.ಕೆ.ನಾಯಿಡು ಹೋಳ್ಕರ್ ಸಂಸ್ಥಾನದ ಸೇನೆಯಲ್ಲಿ ಕರ್ನಲ್ ಆಗಿ, ಶಿಸ್ತಿನ ಸಿಪಾಯಿಯಾಗಿದ್ದರು. ಆ ಶಿಸ್ತಿನ ಗುಣಗಳೆಲ್ಲ ಚಂದ್ರಾ ಅವರಲ್ಲಿದ್ದವು. 1966ರಲ್ಲಿ ನಾನು ಕೇವಲ 19 ವರ್ಷದವನಿದ್ದಾಗ ಸಿ.ಕೆ.ನಾಯಿಡು ಅವರ ಸಂದರ್ಶನ ಮಾಡಿದೆ. ಅದು ಅವರ ಕೊನೆಯ ಸಂದರ್ಶನವಾಗಿತ್ತು. ಆ ಸಂದರ್ಶನವನ್ನು ಆಗಿನ ಖ್ಯಾತ ಕ್ರೀಡಾ ವಾರಪತ್ರಿಕೆ Sport & Pass time ಮುಖಪುಟದೊಂದಿಗೆ ಪ್ರಕಟಿಸಿತ್ತು. ಆ ಸಂದರ್ಶನದಲ್ಲಿ ಸಿ.ಕೆ.ನಾಯಿಡು ಚಂದ್ರಾ ತಮ್ಮ ಮಗಳಾಗಿದ್ದರೂ. ಮಗನಂತಿದ್ದಾಳೆ. ನಮ್ಮ ಮನೆತನದ ಘನತೆಯನ್ನು ಮುಂದುವರಸಿಕೊಂಡು ಹೋಗುತ್ತಾಳೆ” ಎಂದು ಹೇಳಿದ್ದರು.

ಚಂದ್ರಾ ನಾಯಿಡು ಅವರ ಸೋದರಳಿಯ ಹಾಗೂ ಮಾಜಿ ಮೊದಲ ದರ್ಜೆಯ ಕ್ರಿಕೆಟ್ ಆಟಗಾರ ವಿಜಯ ನಾಯಿಡು ಈ ರೀತಿಯಾಗಿ ವ್ಯಥೆಪಟ್ಟರು:

“ಚಂದ್ರಾ ನಾಯಿಡು ಅನೇಕ ವರ್ಷಗಳಿಂದ, ಬಹಳಷ್ಟು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಕಾಯಿಲೆಗಳು ಉಲ್ಬಣವಾಗಿದ್ದರಿಂದ ಕೆಲವರ್ಷಗಳಿಂದ ನಡೆಯಲೂ ಆಗುತ್ತಿರಲಿಲ್ಲ. ಇಂದೋರ್‍ನ ಹೋಳ್ಕರ ಮೈದಾನದ ಹತ್ತಿರವಿರುವ ಮನೋರಮಗಂಜ್ ಪ್ರದೇಶದ ಸಮುಚ್ಛಯ ದಲ್ಲಿ ಒಬ್ಬರೇ ವಾಸವಾಗಿದ್ದರು. ಅವಿವಾಹಿತರಾಗಿದ್ದ ಅವರಿಗೆ ಕೆಲಸದವರು ದಿನನಿತ್ಯದ ಕಾರ್ಯಗಳಲ್ಲಿ ನೆರವಾಗುತ್ತಿದ್ದರು’’.

ವಿಜಯ ನಾಯಿಡು ಮುಂದುವರೆಯುತ್ತ, “50 ರ ವರ್ಷದಲ್ಲಿ ಚಂದ್ರಾ ಕೂಡ ಸಲ್ವಾರ್ ಕಮೀಜ್ ಧರಿಸಿ ಕ್ರಿಕೆಟ್ ಆಡಿದ್ದಾರೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯಲ್ಲಿ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. 80 ರ ದಶಕದಲ್ಲಿ ಅಂತರ್ ಕಾಲೇಜು ಮಹಿಳಾ ಕ್ರಿಕೆಟ್ ಪಂದ್ಯಾವಳಿ ನೆರವೇರಿಸಿ, ತಮ್ಮ ತಾಯಿಯ ಹೆಸರಿನಲ್ಲಿ ಟ್ರೋಫಿ ಕೊಡುಗೆಯಾಗಿ ನೀಡಿದ್ದರು. ಮಧ್ಯಪ್ರದೇಶದ ಮಹಿಳಾ ಕ್ರಿಕೆಟ್ ಏಳಿಗೆಗಾಗಿ ಬಹಳಷ್ಟು ಶ್ರಮಿಸಿದರು. ಮಹಿಳಾ ತಂಡಗಳು ಪ್ರವಾಸ ಮಾಡುವಾಗ ಅವರೊಡನೆ ಬೆರೆತು, ಮಾರ್ಗದರ್ಶನ ನೀಡುತ್ತಿದ್ದರು. ಕ್ರಿಕೆಟ್ ಅಲ್ಲದೇ ಇಂದೋರ್ ರೋಟರಿ ಕ್ಲಬ್ ಸಹಭಾಗಿಯಾಗಿ, ಸಕ್ರಿಯವಾಗಿ ಸಮಾಜಸೇವೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅವರು ಕಾಲವಶವಾಗಿದ್ದರಿಂದ, ಭೂತಕಾಲ ಹಾಗೂ ವರ್ತಮಾನವ ಮಧ್ಯೆ ಇರುವಂಥ ಒಂದು ಕೊಂಡಿ ಕಳಚಿಕೊಂಡಂತಾಗಿದೆ” ಅನೇಕಾನೇಕ ಕ್ರಿಕೆಟ್ ಪ್ರೇಮಿಗಳು ಅಧಿಕಾರಿಗಳು ಚಂದ್ರಾ ನಾಯಿಡು ವಿಧಿವಶರಾಗಿದ್ದಕ್ಕೆ, ಶೋಕ ವ್ಯಕ್ತಪಡಿಸಿದ್ದಾರೆ.

*ಲೇಖಕರು ಖ್ಯಾತ ಕ್ರೀಡಾ ವೀಕ್ಷಕ ವಿವರಣೆಕಾರರು; 15 ವರ್ಷ ಫಸ್ಟ್ ಡಿವಿಷನ್ ಕ್ರಿಕೆಟ್ ಆಡಿ, ಮೂರು ವರ್ಷ ಕರ್ನಾಟಕ ವಿವಿ ಮತ್ತು ಒಂದು ವರ್ಷ ಸ್ಟೇಟ್ ಜೂನಿಯರ್ ಟೀಮ್ ಪ್ರತಿನಿಧಿಸಿದ್ದಾರೆ. 1991ರಲ್ಲೇ ಕನ್ನಡದಲ್ಲಿ ಕ್ರಿಕೆಟ್ ಕಾಮೆಂಟರಿ ಕೊಡಲು ಆರಂಭಿಸಿದರು.

Leave a Reply

Your email address will not be published.