ವಿಶ್ವವಿದ್ಯಾಲಯಗಳು ಅನುಭವ ಮಂಟಪಗಳಾಗಲಿ

-ಎಂ.ಕುಸುಮ

ನಮ್ಮ ವಿಶ್ವವಿದ್ಯಾಲಯಗಳ ‘ಸಾಪ್ಟ್ವೇರ್’ಗಳು ಸರಿಯಾಗಿಯೇ ಇವೆ; ಆಡಳಿತಾತ್ಮಕ ‘ಹಾರ್ಡ್ವೇರ್’ ಸರಿಯಾಗಿಡುವುದು ಸರ್ಕಾರದ ಜವಾಬ್ದಾರಿ!

ರೋಗ ನಿವಾರಣೆಗೆ, ರೋಗಮೂಲವನ್ನು ಪತ್ತೆ ಹಚ್ಚಿ, ಪರಿಹಾರವನ್ನು ಕಂಡುಕೊಳ್ಳುವುದು ಎಷ್ಟು ಮುಖ್ಯವೋ ಹಾಗೆ, ವಿಶ್ವವಿದ್ಯಾಲಯಗಳ ಪಿ.ಹೆಚ್.ಡಿ ಮಟ್ಟವನ್ನು ಉನ್ನತೀಕರಿಸಲು ಶಾಲಾ-ಕಾಲೇಜು ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ದೃಷ್ಟಿಕೋನವನ್ನು ಬೆಳೆಸುವುದು ಅಷ್ಟೇ ಮುಖ್ಯ. ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ಸರಿ-ತಪ್ಪುಗಳನ್ನು ಅವಲೋಕಿಸುವ ಸ್ಥೈರ್ಯವನ್ನು ತುಂಬಬೇಕಿದೆ.

ನಮ್ಮ ರಾಜ್ಯ, ಜಿಲ್ಲೆ, ಊರಿನ ವಿಶೇಷತೆ, ಅಲ್ಲಿನ ನದಿ, ಅಣೆಕಕಟ್ಟು, ಕಾರ್ಖಾನೆ, ಸ್ಮಾರಕ ಇತ್ಯಾದಿಗಳ ಕುರಿತು ಯುವಜನರಿಗೆ ಕಾಳಜಿಯುತ ಆಸಕ್ತಿ ಮೂಡಿಸುವ ಗುರುತರ ಹೊಣೆಗಾರಿಕೆ ಇಂದಿನ ಪಾಲಕರು, ಗುರುವೃಂದ ಹಾಗೂ ವಿದ್ಯಾಸಂಸ್ಥೆಗಳ ಮೇಲಿದೆ. ಇದಾಗದಿದ್ದರೆ ನಮ್ಮ ಸುತ್ತಮುತ್ತಲಿನ ವರದಾನ/ಶಾಪಗಳಿಗೆ ಕುರುಡಾದವರು ‘ಊರಿಗೆ ಉಪಕಾರಿ, ಮನೆಗೆ ಮಾರಿ’ಯಂತೆ ಪ್ರಾದೇಶಿಕ ಹೊಣೆಗಾರಿಕೆಯಿಂದ ಲುಪ್ತರಾಗುತ್ತಾರೆ, ಮುಂದೆ ಪಿ.ಹೆಚ್.ಡಿ. ಪ್ರಬಂಧದ ವಿಷಯಕ್ಕಾಗಿ ತಡಕಾಡುತ್ತಾರೆ. ಬದುಕಿನ ಉನ್ನತಿಯೆಡಗಿನ ಸರಪಳಿಯ ಮೂಲ, ವಿಚಾರವಂತ ಮಾನವನೇ ಆಗಿದ್ದಾನೆ. ಉನ್ನತ ಶಿಕ್ಷಣವನ್ನು ನೀಡುವ ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳ ವಿಚಾರಶಕ್ತಿಗೆ ಸಾಣೆಹಿಡಿದು ‘ಸ್ವಯಂಪ್ರಭೆ’ಯ ವಜ್ರಗಳನ್ನಾಗಿ ಮಾಡಿ, ಆ ಮೂಲಕ ಸಮಾಜಕ್ಕೆ ಕೈದೀವಿಗೆಯನ್ನು ಒದಗಿಸಿಬೇಕಾಗಿದೆ.

ಹೊರಾಡಂಬರಕ್ಕೆ ಮರುಳಾದ ಜನರು ಮಧ್ಯಮ/ ಅಧಮ ಹಾದಿ ಹಿಡಿದು ಪಿಹೆಚ್‌ಡಿ ಡಿಗ್ರಿಯ ‘ಡಾ’ವನ್ನು ತಮ್ಮ ಹೆಸರಿಗೆ ಅಂಟಿಸಿಕೊಳ್ಳುವತ್ತ ಮಾತ್ರ ಅಭಿರುಚಿ ಹೊಂದಿರುತ್ತಾರೆ. ಪಿಹೆಚ್‌ಡಿಯನ್ನು ಪಡೆದವರಿಗೆ ಇರಬೇಕಾದ ಮೂಲ/ಸ್ವಜ್ಞಾನ ಬೆಳೆಸಿಕೊಳ್ಳುವುದರತ್ತ ಇಂತಹವರು ಆಸಕ್ತಿ ತೋರುವುದಿಲ್ಲ. ತಮ್ಮ ವಿಷಯದ ಸಂಶೋಧನೆಯಿಂದ ವಿದ್ಯಾರ್ಥಿಗಳಿಗೆ, ಶಾಸ್ತ್ರೀಯ ಮಾಹಿತಿಗೆ, ಒಟ್ಟಾರೆಯಾಗಿ ಸಮಾಜಕ್ಕೆ ಹೇಗೆ ಸಹಕಾರಿ/ಅನುಕೂಲವಾಯಿತು ಎಂದು ಸಿಂಹಾವಲೋಕನ ಮಾಡದೆ, ಡಿಗ್ರಿ ಆಧಾರಿಯ ಆರ್ಥಿಕ ಧನಸಹಾಯ ಅಥವಾ ಹುದ್ದೆಯ ಬಡ್ತಿಗಾಗಿ ಎದುರು ನೋಡುತ್ತಾರೆ.

ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ತಮ್ಮ ಜ್ಞಾನಾಭಿವೃದ್ಧಿಯಲ್ಲಿ ಸತತವಾಗಿ ತೊಡಗಿಸಿಕೊಂಡರೆ, ಅವರಿಂದ ಉತ್ತಮ ಪಿಹೆಚ್‌ಡಿ ಪ್ರಬಂಧಗಳನ್ನು ನಿರೀಕ್ಷಿಸಬಹುದು. ಸಂಶೋಧನೆಯ ಮೂಲ ಪರಿಭಾಷೆ, ರಿವಾಜುಗಳ ಉಸಾಬರಿಗೆ ಹೋಗದೆ ಪ್ರಬಂಧಗಳ ‘ನಿರ್ಮಾಣ’ಕ್ಕಾಗಿ ಮನವೀಯುವ ವಿದ್ಯಾರ್ಥಿಗಳಿಂದ ಹೆಚ್ಚೇನು ನಿರೀಕ್ಷಿಸಲಾಗದು, ಕಾಲೇಜಿನ ಶಿಕ್ಷಕ ಹುದ್ದೆಗಳ ಆಕಾಂಕ್ಷೆಗಳಾದ ಇಂತಹವರು, ಪಿಹೆಚ್‌ಡಿ ಪದವಿಗಾಗಿ ವಾಮಮಾರ್ಗವನ್ನು ಹಿಡಿಯಲೂ ಹಿಂಜರಿಯಲಾರರು. ಇಂತಹ ‘ವ್ಯಾಪಾರ’ ದಿಂದ ಯಾರಿಗೂ ಪ್ರಯೋಜನವಾಗದು. ನಮ್ಮ ವಿಶ್ವವಿದ್ಯಾಲಯಗಳಿಗೂ ಇಂತಹವರು ಕಪ್ಪುಚುಕ್ಕೆಯಂತಾಗಿ ಅವುಗಳ ಗುಣಾತ್ಮಕ ಮೌಲ್ಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿಯತೊಡಗುತ್ತದೆ. ಸಂಶೋಧಿತ ಪ್ರಬಂಧಗಳು ಎಲ್ಲೂ ಉಲ್ಲೇಖವಾಗದೆ, ಲೈಬ್ರರಿಯ ಮೂಲೆಯಲ್ಲಿ ದೂಳುಹಿಡಿಯುತ್ತವೆ.

ಹೊರಗಿನ ಹೊಸತನಕ್ಕೆ ತೆರೆದುಕೊಳ್ಳದ, ಬದಲಾವಣೆ ಬೇಕು ಎನಿಸುವ ಮನಸ್ಥಿತಿಯೇ ಇಲ್ಲದ ಜಡ್ಡುತನವೂ ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟಿದೆ. ತಮ್ಮ ವಿಭಾಗಗಳ ಒಳ-ಜಗಳದಲ್ಲಿಯೇ ಪ್ರಪಂಚವನ್ನು ಕಂಡುಕೊಳ್ಳುವ ಪ್ರಾಧ್ಯಾಪಕರಿದ್ದಾರೆ.

ಹೊಸ ಚಿಂತನೆಗಳನ್ನು ನೀಡದ ವಿಶ್ವವಿದ್ಯಾಲಯಗಳು ಕೇವಲ ಕಟ್ಟಡಗಳಿಂದ ಗುರುತಿಸಿಕೊಂಡು, ‘ಅನುಭವ ಮಂಟಪ’ಗಳಾಗದೆ, ಹೊಸ ಚರ್ಚೆಗಳ ವಿಚಾರ ಸಂಕಿರಣಗಳು ನಡೆಯದೆ ನಶಿಸುತ್ತವೆ. ಕೇವಲ ಹಳೆಯದನ್ನೇ ತಿರುವಿಹಾಕುವ ಹಾಗೂ ಹೊಸದನ್ನು ಓದಿಸದ ಪಿಹೆಚ್‌ಡಿ ಮಾರ್ಗದರ್ಶಕರು, ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಕಾಲನ ಓಟದಲ್ಲಿ ನಾವೀನ್ಯಕ್ಕೆ ಬೆನ್ನುಹಾಕುತ್ತಾರೆ. ಸಹಜವಾಗಿಯೇ ಇವರ ಮಾರ್ಗದರ್ಶನದ ಪಿಹೆಚ್‌ಡಿ ಪ್ರಬಂಧಗಳು ಬಾಹ್ಯ ಪ್ರಪಂಚಕ್ಕೆ ಸಲ್ಲದೆ ಅನುಪಯುಕ್ತವಾಗುತ್ತವೆ. ವಿವಿಧ ವಿಶ್ವವಿದ್ಯಾನಿಲಯಗಳ ನಡುವೆಯಿರುವ ಅನುಕೂಲಸಿಂಧು ಹೊಂದಾಣಿಕೆಯಿಂದ, ವ್ಯಕ್ತಿಪ್ರತಿಷ್ಠೆಗೆ ಮನ್ನಣೆ ಸಿಕ್ಕಿ, ವಿಷಯವ್ಯಾಪ್ತಿ ಔಚಿತ್ಯವು ಎರವಾಗುತ್ತದೆ. ಹೊರ ರಾಜ್ಯಗಳ, ವಿದೇಶಿ ಸಂಶೋಧನಾ ಪ್ರಬಂಧಗಳನ್ನು ಓದದೆ ಅವುಗಳ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದಿದ್ದರೆ ವಿಶ್ವವಿದ್ಯಾಲಯಗಳ ಮಾರ್ಗದರ್ಶಕರು ಒಳ್ಳೆಯದನ್ನು ತಮ್ಮ ಮಾತೃವಿಭಾಗದಲ್ಲಿ ಅಳವಡಿಸಿಕೊಳ್ಳಲು ಹೇಗೆ ಸಾಧ್ಯ? ಈ ಮುಖಾಮುಖಿಗೆ ಅವಕಾಶವನ್ನು ದೊರಕಿಸಿಕೊಡುವ ವಿಚಾರಸಂಕಿರಣಗಳು ಹೆಚ್ಚಾಗಿ ಆಯೋಜನೆಗೊಳ್ಳಬೇಕು. ವಿಷಯಜ್ಞಾನಕ್ಕೆ ಆದ್ಯತೆ ದೊರಕಿ, ಜ್ಞಾನ ಸೃಷ್ಟಿಯತ್ತ ಎಲ್ಲರ ಚಿತ್ತ ಹರಿಯಬೇಕು.

ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಇರಬಹುದಾದ ತಾಂತ್ರಿಕ ನ್ಯೂನತೆಗಳನ್ನು ಸರಿಪಡಿಸಿ, ಅನುದಾನವನ್ನು ಹೆಚ್ಚಿಸಿ ಅವುಗಳನ್ನು ಖಾಸಗಿ ವಿಶ್ವವಿದ್ಯಾನಿಲಯಗಳಿಗಿಂತಲೂ ಹೆಚ್ಚು ಅಭಿವೃದ್ಧಿಪಡಿಸಿದ್ದಾರೆ ನಮ್ಮ ರಾಜ್ಯ ಹಾಗೂ ಕೇಂದ್ರ ವಿಶ್ವವಿದ್ಯಾಲಯಗಳು ಒಳ್ಳೆಯ ಹೆಸರು ಗಳಿಸುವುದರಲ್ಲಿ ಸಂಶಯವಿಲ್ಲ. ಪ್ರಾಧ್ಯಾಪಕರ ಕೊರತೆಯನ್ನು ಕೇವಲ ಅತಿಥಿ ಉಪನ್ಯಾಸಕರಿಂದಲೇ ಸರಿದೂಗಿಸದೆ, ಕಾಲಕಾಲಕ್ಕೆ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸಿದರೆ, ಉನ್ನತ ಶಿಕ್ಷಣ ಕ್ಷೇತ್ರವು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಬಲ್ಲದು.

ದೇಶದ ರಾಷ್ಟ್ರಪತಿ ಹುದ್ದೆಗೆ ಪ್ರೊ.ಎಸ್.ರಾಧಾಕೃಷ್ಣನ್ ಅವರಂತಹ ಅರ್ಹರನ್ನು ನೀಡಿದ ಮೈಸೂರು ವಿಶ್ವವಿದ್ಯಾಲಯ ನಮ್ಮದು. ನಮ್ಮ ಬಹಳಷ್ಟು ಪ್ರಾಧ್ಯಾಪಕರು, (ಪ್ರೊ.ಎಸ್.ಎಲ್.ಬೈರಪ್ಪ, ಪ್ರೊ.ಎ.ಕೆ.ರಾಮಾನುಜನ್, ಪ್ರೊ.ಯು.ಆರ್.ಅನಂತಮೂರ್ತಿ, ಪ್ರೊ.ಚಂಪಾ, ಲಂಕೇಶ್) ಸೃಜನಶೀಲ ಲೇಖಕರಾಗಿ, ಪ್ರೊ.ರಾಜೀವ್ ತಾರಾನಾಥ್‌ರಂತೆ ಕಲಾಕಾರರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು. ಹೀಗಾಗಿ ವಿಶ್ವವಿದ್ಯಾಲಯಗಳ ‘ಸಾಪ್ಟ್ವೇರ್’ಗಳು ಸರಿಯಾಗಿಯೇ ಇವೆ. ಆಡಳಿತಾತ್ಮಕ ‘ಹಾರ್ಡ್ವೇರ್’ನ್ನು ಸರಿಯಾಗಿಡುವುದು ಸರ್ಕಾರದ ಜವಾಬ್ದಾರಿ.

ಜನರ ತೆರಿಗೆಯ ಹಣವಾದ ‘ಶೈಕ್ಷಣಿಕ ಸೆಸ್’ ಇನ್ನೇತಕ್ಕೆ ಬಳಕೆಯಾಗಬೇಕು? ಸೌಲಭ್ಯಯುತ ಪ್ರಯೋಗಾಲಯಗಳಲ್ಲಿ ಜ್ಞಾನಸೃಷ್ಟಿಗಾಗಿ ಬೇಕಾದ ಬುದ್ಧಿಮತ್ತೆ ಇಂದಿಗೂ ನಮ್ಮ ಪ್ರಾಧ್ಯಾಪಕರಲ್ಲಿ ಪತರಗುಟ್ಟುತ್ತಲೇ ಇದೆ. ಯುಜಿಸಿಯ ಧನಸಹಾಯದಿಂದ ಸಮಕಾಲೀನತೆಗೆ ತಕ್ಕುದಾದ ವಿಶಿಷ್ಟ ಸಮ್ಮೇಳನ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಇಂದು ಕೆಲ ಪದವಿ ಕಾಲೇಜುಗಳಲ್ಲಿ ಸಹ ಸ್ನಾತಕೋತ್ತರ ಪದವಿಯನ್ನು ತಂದಿಟ್ಟು, ಉನ್ನತಶಿಕ್ಷಣಕ್ಕೆ ಬೇಕಾದ ಕ್ಯಾಂಪಸ್, ಓದುವ ವಾತಾವರಣ, ಅನುಭವೀ ಪ್ರಾಧ್ಯಾಪಕರ ಕೊರತೆಯಿಂದ ವಿದ್ಯಾರ್ಥಿಗಳು ‘ಸೊರಗು’ತ್ತಿದ್ದಾರೆ. ಅವರಲ್ಲಿ ಜ್ಞಾನದ ಹಸಿವು, ತೃಷೆಯನ್ನು ಹುಟ್ಟುಹಾಕಬಲ್ಲ ಪೂರ್ಣಪ್ರಮಾಣದ ಸ್ನಾತಕೋತ್ತರ ಕೇಂದ್ರಗಳನ್ನು ಎಲ್ಲಾ ಜಿಲ್ಲಾಕೇಂದ್ರಗಳಲ್ಲಿಯೂ ತೆರೆದು, ಅವಶ್ಯಕ ಕಟ್ಟಡ, ಸಾರಿಗೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿಕೊಡಬೇಕು.

ಅಂದು ನಮ್ಮದೇ ದೇಶದ ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯಗಳು ವಿದೇಶಿ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯಲು ಸಫಲವಾಗಿದ್ದವು. ಇದು ಸಾಧ್ಯವಾಗಿದ್ದು, ಅಲ್ಲಿನ ಹೆಸರಾಂತ ಗುರುಸಮೂಹದಿಂದ, ವಿಸ್ತಾರವಾಗಿ, ಸಮೃದ್ಧವಾಗಿದ್ದ ಅಲ್ಲಿನ ಗ್ರಂಥಾಲಯಗಳಿAದ. ಓದುವ ಹವ್ಯಾಸ, ಕಷ್ಟಪಡುವ ರೂಢಿಯೇ ನಶಿಸುತ್ತಿರುವ ಇಂದಿನ ಪೀಳಿಗೆಯಿಂದ, ಕಾಲನಿಷ್ಠೆ, ಧ್ಯಾನವನ್ನು ಬೇಡುವ ಸಂಶೋಧನೆ ಅಸಾಧ್ಯವೇ ಸರಿ.

ಹೆಸರಾಂತ ವಿದೇಶಿ ವಿಶ್ವವಿದ್ಯಾಲಯಗಳು ಭಾರತಕ್ಕೆ ಅಡಿಯಿಡಲು ಸಿದ್ಧವಾಗಿರುವ ಈಗಿನ ಕಾಲಘಟ್ಟದಲ್ಲಿ ನಮ್ಮಲ್ಲಿನ ಅಡೆತಡೆಗಳನ್ನು ಗುರುತಿಸಿ ನಿವಾರಿಸಿಕೊಂಡರೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲೂ ಗಣನೀಯ ಕ್ರಾಂತಿಯಾದೀತು, ನವಚೈತನ್ಯ ಹರಿದೀತು. ತಮ್ಮದೇ ನೆಲ, ಜಲ, ಕುಟುಂಬದ ಇತಿಹಾಸ, ಮಹತ್ವವನ್ನು ಮನದಟ್ಟು ಮಾಡಿಕೊಳ್ಳದ ವಿದ್ಯಾರ್ಥಿಗಳು ಭ್ರಮನಿರಸನಗೊಂಡು ಅನಾಹುತ ಮಾಡಿಕೊಳ್ಳಬಹುದು.

ವಿಶ್ವವಿದ್ಯಾಲಯಗಳಲ್ಲಿನ ಸ್ವಜಾತಿ ಮನ್ನಣೆ, ಲೈಂಗಿಕ ದೌರ್ಜನ್ಯಗಳು ಓದಿಗೆ, ಸಂಶೋಧನೆಗೆ ತಡೆಯಾಗಬಹುದು. ಮಾನವಿಕ/ಕಲೆಯ ಒಂದು ವಿಷಯವನ್ನು ಪೂರ್ಣದೃಷ್ಟಿಯ ಪ್ರಜ್ಞೆಗಾಗಿ ವಿಜ್ಞಾನ/ವಾಣಿಜ್ಯದ ಪದವೀಧರರೂ ಹಾಗೂ ವಿಜ್ಞಾನ/ವಾಣಿಜ್ಯದ ಒಂದು ವಿಷಯವನ್ನು ಕಲಾ ವಿಭಾಗದವರೂ, ವಿಶ್ವವಿದ್ಯಾನಿಲಯದಲ್ಲಿ ಓದುವಂತಾದರೆ, ವಿಷಯಗಳ ನಡುವಿನ ಸಂವಹನವೂ ಸಾಧ್ಯವಾಗಿ ಸಮಷ್ಟಿಪ್ರಜ್ಞೆಯ ಜ್ಞಾನಸೃಷ್ಟಿ ಸಾಧ್ಯವಾಗಬಹುದು. ರಾಷ್ಟ್ರದ ಗತವೈಭವ ಪ್ರಜ್ಞೆಯಿರದ ಪೀಳಿಗೆಯಿಂದ ಯಾವ ಗುರುತರವಾದ ಸಾಧನೆಯೂ ಅಸಾಧ್ಯ.

ಉದಾಹರಣೆಗೆ ಟಿಪ್ಪುಸುಲ್ತಾನ್ ಕುರಿತಾದ ರಾಜಕೀಯ ಪ್ರೇರಿತ ಊಹಾಪೋಹಗಳಿಗೆ, ನಿರ್ದಿಷ್ಟ ಸಮಂಜಸ ಉತ್ತರವನ್ನು ಏಕೆ ನಮ್ಮ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಸಾರ್ವಜನಿಕವಾಗಿ ನೀಡುತ್ತಿಲ್ಲ? ಹಲವು ದೃಷ್ಟಿಕೋನಗಳಿಂದ ಅಭ್ಯಸಿಸಿದ ಅವರಿಗೆ, ನಿರ್ಧಾರಯುತ ವಿಷಯವಿಸ್ತಾರವನ್ನು ನೀಡಲು ಖಂಡಿತ ಸಾಧ್ಯ. ಪ್ರವಾಸೋದ್ಯಮವನ್ನು ಒಂದು ವಿಷಯವನ್ನಾಗಿ ಓದಲು, ಕರ್ನಾಟಕದ ಎಷ್ಟು ವಿಶ್ವವಿದ್ಯಾಲಯಗಳು ಅವಕಾಶವನ್ನು ನೀಡಿವೆ? ಸರ್ಕಾರದ ಹೊಸ ನೀತಿ-ನಿರೂಪಕರಿಗೆ ವಿಶ್ವವಿದ್ಯಾಲಯಗಳ ಪ್ರೊಫೆಸರ್‌ಗಳು ಸಲಹೆ-ಸೂಚನೆಗಳನ್ನು ನೀಡುವಂತಹ ನೆಟ್‌ವರ್ಕ್ ಜಾರಿಯಾಗಬೇಕು.

ಹಾಸನ ಜಿಲ್ಲೆಯ ಸಕಲೇಶಪುರದ ಎತ್ತಿನಹೊಳೆ ಕುಡಿಯುವ ನೀರಿನ ಕಾಮಗಾರಿ ಯೋಜನೆಯ ಸಾಧಕ-ಬಾಧಕಗಳ ಕುರತಾದ ಚರ್ಚೆಯು ವಿಶ್ವವಿದ್ಯಾನಿಲಯಗಳ ವಿಚಾರಸಂಕೀರಣಗಳಲ್ಲಿ ನಡೆದಿದ್ದರೆ, ಅವುಗಳ ಫಲಶ್ರುತಿಯನ್ನು ಯೋಜನೆಯ ಅನುಷ್ಠಾನ ಹಂತದಲ್ಲಿ ಅಳವಡಿಸಿಕೊಳ್ಳಬಹುದಿತ್ತು. ಅನ್ನ ನೀಡುವ ರೈತನ ಬೆಳೆಹಾನಿ-ಆತ್ಮಹತ್ಯೆಗಳಂತಹ ಸಮಸ್ಯೆಗಳಿಗೆ ಈ ಯೋಜನೆಯಿಂದ ಪರಿಹಾರ ದೊರಕುವುದೇ? ಇಂತಹ ವಾಸ್ತವಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುವ ಪ್ರಜ್ಞೆಯನ್ನು ನಮ್ಮ ಯುವ ಪೀಳಿಗೆ ಬೆಳೆಸಿಕೊಳ್ಳವಂತಾಗಬೇಕು.

ವಿಮರ್ಶಾತ್ಮಕ ಚಿಂತನೆಗಳಿಗೆ ಪಕ್ಕಾದ ಯುವಜನರು ಸಮಾಜಸ್ನೇಹಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ, ‘ಸಮೃದ್ಧ ಕರ್ನಾಟಕ’ವು ಕೇವಲ ಕನಸಾಗದೆ ನನಸನ್ನಾಗಿಸುವುದು ನಮ್ಮೆಲ್ಲರ ಅದರಲ್ಲೂ ಸಂಶೋಧನಾರ್ಥಿಗಳ ಕೈಯಲ್ಲಿದೆ. ಏಕೆಂದರೆ ‘ವಿಚಾರಗಳು ಪ್ರಪಂಚವನ್ನು ಆಳುತ್ತವೆ’. ಇಡೀ ಮಾನವಕುಲಕ್ಕೆ ಲೇಸನ್ನು ಬಯಸುವಂತಹ ವಿಚಾರಕ್ರಾಂತಿಗಳು ಹುಟ್ಟುವ ತಾಣವಾಗಿ ನಮ್ಮ ವಿಶ್ವವಿದ್ಯಾಲಯಗಳು ರೂಪುಗೊಳ್ಳುವಂತಾಗಲಿ.

*ಲೇಖಕರು ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು ಹಾಗೂ ಹಾಸನದ ಹೇಮಗಂಗೋತ್ರಿಯ ಇಂಗ್ಲಿಷ್ ವಿಭಾಗದಲ್ಲಿ ಸಂಶೋಧನಾರ್ಥಿ.

Leave a Reply

Your email address will not be published.