ವಿಶ್ವವಿದ್ಯಾಲಯ ಪರಿಕಲ್ಪನೆಯ ಮರುಸ್ಥಾಪನೆಯೇ ಪರಿಹಾರ

-ಡಾ.ಎನ್.ಎಸ್.ಗುಂಡೂರ

ವಿಸ್ಮøತಿಗೆ ಒಳಗಾದ ವಿವಿಯ ಪರಿಕಲ್ಪನೆಯನ್ನು ಹುಡುಕಿಕೊಳ್ಳುವ ಕಾರ್ಯಕ್ರಮ ಒಂದೆಡೆಗಿದ್ದರೆ, ವಿವೇಕ ಕಳೆದುಕೊಂಡಿರುವ ಸಂಶೋಧನಾ ಚಟುವಟಿಕೆಯನ್ನು ಅರ್ಥಪೂರ್ಣಗೊಳಿಸುವ ಜರೂರು ಮತ್ತೊಂದೆಡೆ ಇದೆ.

ನಮ್ಮ ಸಂಶೋಧನೆಗಳು ಮತ್ತು ವಿವಿಗಳ ಬೌದ್ಧಿಕ ಬಿಕ್ಕಟ್ಟಿನ ಚರ್ಚೆಯನ್ನು ಭ್ರಷ್ಟ ವ್ಯವಸ್ಥೆ, ಜಾತೀಯತೆ, ಸ್ವಜನಪಕ್ಷಪಾತ, ಬೌದ್ಧಿಕ ಅಸಾಮಥ್ರ್ಯ, ಮೂಲ ಸೌಕರ್ಯಗಳ ಕೊರತೆ, ಯುಜಿಸಿಯ ಅತಾರ್ಕಿಕ ನಿರ್ಧಾರಗಳು, ಸರಕಾರದ ನೀತಿನಿಯಮ, ಸಂಶೋಧನಾರ್ಥಿಗಳ ಆಲಸ್ಯ -ಇತ್ಯಾದಿಗಳನ್ನು ದೂರುವುದರ ಮುಖಾಂತರ ಚರ್ಚಿಸಬಹುದು. ಆದರೆ ಈ ಎಲ್ಲ ಸಮಸೆÀ್ಯಗಳನ್ನು ಬಗೆಹರಿಸಿದರೂ ನಾವು ಉತ್ಕøಷ್ಟವಾದ ಸಂಶೋಧನೆಗಳನ್ನು ಉತ್ಪಾದಿಸುತ್ತೇವೆ ಎನ್ನುವುದು ಅನುಮಾನ. ಆದ್ದರಿಂದ ಈ ವಿಷಯ ಕುರಿತು ತಾತ್ವಿಕ ಜಿಜ್ಞಾಸೆಯ ಪ್ರಯತ್ನ ಮಾಡುತ್ತ, ಕನ್ನಡನಾಡು ಕುರಿತ ಸಂಶೋಧನೆಯ ಸಮಸ್ಯೆಯ ತಳಪಾಯವನ್ನು ಶೋಧಿಸುವುದು ಈ ಲೇಖನದ ಉದ್ದೇಶ.

ಸಂಶೋಧನೆಯ ಬಿಕ್ಕಟ್ಟಿನ ಈ ವಿಚಾರ ಕೇವಲ ಕರ್ನಾಟಕಕ್ಕೆ ಸಂಬಂಧಿಸಿದ ಜ್ಞಾನಸೃಷ್ಟಿಯ ಸಮಸ್ಯೆ ಅಲ್ಲ, ಇದು ಒಟ್ಟಾರೆ ಎಲ್ಲ ಸಂಶೋಧನೆಗಳಿಗೆ ಬಂದ ವಿಪತ್ತಾಗಿದೆ. ಮುಂದುವರೆದು ಹೇಳುವುದಾದರೆ, ಸಂಶೋಧನೆಯ ಚಟುವಟಿಕೆ ವಿಶ್ವವಿದ್ಯಾಲಯವೆಂಬ ಸಂಸ್ಥೆ ವ್ಯಾಪಕವಾಗಿ ಎದುರಿಸುತ್ತಿರುವ ಗಂಡಾಂತರದ ಭಾಗವಾಗಿದೆ. ಈ ಗಂಡಾಂತರವು ಕೇವಲ ಭಾರತೀಯ ವಿವಿಗಳ ಸಮಸ್ಯೆ ಮಾತ್ರವಲ್ಲ. ವಿಶ್ವವ್ಯಾಪಿಯಾಗಿ ವಿವಿ ಎನ್ನುವ ಸಂಸ್ಥೆ ತನ್ನ ಐತಿಹಾಸಿಕ ಜೀವನ ಮುಗಿಸಿ, ಅದರ ಉದ್ದೇಶ ಹಾಗೂ ಸ್ವರೂಪವನ್ನು ಬದಲಾಯಿಸಿಕೊಂಡ ಕಾಲವಿದು. ಈ ಬದಲಾದ ಸ್ವರೂಪವನ್ನು ನಾವು ನಿರ್ವಹಿಸಬೇಕಾದರೆ, ವಿವಿಯ ಸಾಂಪ್ರದಾಯಕ ಗುರಿ ಮತ್ತು ಉದ್ದೇಶಗಳನ್ನು ಅವಲೋಕಿಸಬೇಕಾಗುತ್ತದೆ.

ನಾನು ಉಲ್ಲೇಖಿಸುತ್ತಿರುವ ವಿವಿಯ ಸಾಂಪ್ರದಾಯಕ ಗುರಿ, ಉದ್ದೇಶಗಳು ಹುಟ್ಟಿಕೊಂಡಿದ್ದು 19ನೆಯ ಶತಮಾನದ ಜರ್ಮನಿಯಲ್ಲಿ. ಇದು ಹಂಬೊಲ್ಟ್ ಮಾದರಿಯ ವಿವಿಯ ಪರಿಕಲ್ಪನೆಯೆಂದೇ ಚಿರಪರಿ ಚಿತ. ಸ್ವತಃ ವಿದ್ವಾಂಸನಾಗಿದ್ದ ವಿಲ್‍ಹೆಲ್ಮ್ ವೊನ್ ಹಂಬೊಲ್ಟ್, ಪೃಷ್ಯಾದ ಸರಕಾರದಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದ. ಹೊಸದಾಗಿ ರೂಪುಗೊಳ್ಳುತ್ತಿರುವ ಜರ್ಮನಿಯ ಪ್ರಜೆಗಳಿಗೆ ಯಾವ ರೀತಿಯ ಶಿಕ್ಷಣಬೇಕು ಎಂದು ಚಿಂತಿಸುತ್ತ, ಹಂಬೊಲ್ಟ್ ಉನ್ನತ ಶಿಕ್ಷಣದ ದೂರದೃಷ್ಟಿಯನ್ನು ಪ್ರಚುರಪಡಿಸಿದನು. ಆ ಮೂಲಕ 1810ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ. ಮನುಷ್ಯರು ತಮ್ಮ ಬದುಕಿನ ಸಾರ್ಥಕತೆಯನ್ನು ಸಾಧಿಸುವುದು ಶಿಕ್ಷಣದ ಮೂಲಕವೆಂದು ನಂಬಿದ್ದ ಹಂಬೊಲ್ಟ್, ಶಿಕ್ಷಣವನ್ನು ಜ್ಞಾನಸೃಷ್ಟಿಯ ಕೆಲಸವೆಂದು ಭಾವಿಸಿದ್ದ. ಒಂದು ಉನ್ನತ ಶಿಕ್ಷಣ ಸಂಸ್ಥೆಗೆ ಎಷ್ಟೇ ಬೃಹತ್ ಕಟ್ಟಡಗಳಿರಬಹುದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿರಬಹುದು, ಅತ್ಯಾಧುನಿಕ ಮೂಲಸೌಕರ್ಯಗಳಿರಬಹುದು, ಆದರೆ ಜ್ಞಾನವೆನ್ನುವುದು ಅದರ ಗುರಿಯಾಗದಿದ್ದರೆ, ಅದು ವಿಶ್ವವಿದ್ಯಾಲಯವಾಗುವುದಿಲ್ಲ ಎನ್ನುವುದು ಹಂಬೊಲ್ಟ್ ಮಾದರಿಯ ನಂಬಿಕೆ.  

ಈ ಮಾದರಿಯ ಎಲ್ಲ ಆಯಮಗಳನ್ನು ಇಲ್ಲಿ ಚರ್ಚಿಸುವುದು ಸಾಧ್ಯವಿರದ ಕಾರಣ, ನಮಗೆ ಮುಖ್ಯವೆನಿಸುವ ಒಂದೆರಡು ಅಂಶಗಳನ್ನು ಉಲ್ಲೇಖಿಸಬಹುದು. ಹಂಬೊಲ್ಟ್ ಮಾದರಿಯ ವಿವಿಯನ್ನು ಸಂಶೋಧನಾ ವಿವಿ (ರಿಸರ್ಚ್ ಯುನಿವರ್ಸಿಟಿ) ಎಂದು ಕರೆಯುತ್ತಾರೆ. ನಮ್ಮ ಹೊಸ ಶಿಕ್ಷಣ ನೀತಿಯಲ್ಲಿ ಈ ಪ್ರಕಾರದ ವಿವಿಗೆ ಇಂಬು ಕೊಟ್ಟಿದ್ದನ್ನು ಕಾಣಬಹುದು. ಈ ಮಾದರಿಯ ವಿವಿಗಳಲ್ಲಿ ಕಲಿಸುವುದೆಂದರೆ ಸಂಶೋಧನೆಯನ್ನೇ ಕಲಿಸುವುದು ಎಂದರ್ಥ.

ಉನ್ನತ ಶಿಕ್ಷಣದಲ್ಲಿ ಕಲಿಸುವ ಎಲ್ಲ ವಿಷಯಗಳು ಸಂಶೋಧನಾ ಸ್ವರೂಪದ್ದಾಗಿರುತ್ತವೆ. ಒಂದು ಚಿಕ್ಕ ಪದ್ಯವನ್ನು ಕಲಿಸುವುದು ಕೂಡಾ ಸಂಶೋಧನೆಯ ತರಬೇತಿಯೇ ಆಗಿರಬೇಕು. ಹಾಗೆಂದರೆ ಒಂದು ಪದ್ಯವನ್ನು ಕಲಿಸುವುದೆಂದರೆ ಆ ಪದ್ಯದ ಅರ್ಥವಿವರಣೆ ಮಾಡುವುದಷ್ಟೇ ಅಲ್ಲ. ಪದ್ಯಗಳನ್ನು ಓದುವಾಗ ಸಮರ್ಪಕವಾದ ಪ್ರಶ್ನೆಗಳನ್ನು ಕೇಳುವುದು ಹೇಗೆ, ಅದರ ಕುರಿತು ಹೊಸದಾಗಿ ಆಲೋಚಿಸುವುದು ಹೇಗೆ ಎಂದು ಕಲಿಸಿದರೆ ಅದು ಸಂಶೋಧನೆಯನ್ನೇ ಕಲಿಸಿದಂತೆ. ಈ ಮಾದರಿಯಲ್ಲಿ ನಾವು ಸಂಶೋಧನೆ ಮಾಡುವುದನ್ನೇ ಪಾಠ ಮಾಡಬೇಕು. ಹಾಗಾಗಿ ಸಂಶೋಧನೆಗಳು ಮತ್ತು ಪಾಠಪ್ರವಚನಗಳು ಒಟ್ಟೊಟ್ಟಿಗೆ ಹೋಗುವ ತಾಣ ವಿಶ್ವವಿದ್ಯಾಲಯ. ಸಂಶೋಧನೆ ಕೈಗೊಳ್ಳುವುದೆಂದರೆ ಪಿ.ಎಚ್.ಡಿ. ಮಾಡುವುದೆಂದು ಸೀಮಿತ ಅರ್ಥವಿರುವ ನಮ್ಮ ಕಾಲದಲ್ಲಿ, ಎಲ್ಲ ಬಗೆಯ ಬೌದ್ಧಿಕ ಹುಡುಕಾಟಗಳನ್ನು ಸಂಶೋಧನೆಯ ಮಾರ್ಗಗಳೆಂದೇ ನೋಡುವ ಈ ವಿವಿ ಮಾದರಿಯು ನಮಗೆ ಅನುಕರಣೀಯ. ಆದರೆ ವಿವಿ ಎಂಬ ಸಂಸ್ಥೆಯು ಜಾಗತಿಕ ನಕಾಶೆಯಲ್ಲಿ ಹಂಬೊಲ್ಟ್ ಪರಂಪರೆಯಿಂದ ಬಹುದೂರ ಸಾಗಿಬಂದಿದೆ. ಈ ಪಥವನ್ನು ವಿಶ್ಲೇಷಿಸುವುದು ಬೇರೆ ವಿಷಯ.        

ಹಂಬೊಲ್ಟ್ ವಿವಿ ಮಾದರಿಯ ಸಾಂಪ್ರದಾಯಿಕ ಗುರಿಗಳಾದ ಚಿಂತನೆ, ಜಿಜ್ಞಾಸೆ, ಸಂಶೋಧನೆ ಮೂಲಕ ಜ್ಞಾನಸೃಷ್ಟಿ ಮಾಡುವುದು ನಮ್ಮ ಉನ್ನತ ಶಿಕ್ಷಣದಲ್ಲಿ ಇಲ್ಲವೆನ್ನಲಾಗದು. ಆರಂಭದಲ್ಲಿ ನಮ್ಮ ವಿವಿಗಳು ಕೈಗೊಂಡ ಕೆಲಸ, ಆಚರಣೆಗಳಲ್ಲಿ ಈ ಸಾಂಪ್ರದಾಯಕ ಗುರಿಗಳು ವ್ಯಕ್ತಗೊಂಡಿದ್ದನ್ನು ಗಮನಿಸಬಹುದು. ಹೊಸ ಹುರುಪು, ಶೈಕ್ಷಣಿಕ ಸ್ವಾತಂತ್ರ್ಯಗಳೊಂದಿಗೆ, ಅವುಗಳಿಗಿದ್ದ ಮಹತ್ವಾಕಾಂಕ್ಷೆ, ಕಾಳಜಿಗಳು ಅವು ಸಂಶೋಧನೆ ಮೂಲಕ ಜ್ಞಾನ ನಿರ್ಮಿಸಲು ಅನುವು ಮಾಡಿಕೊಟ್ಟಿರುವುದರಲ್ಲಿ ಯಾವ ಅನುಮಾನವು ಇಲ್ಲ.

ಆದರೆ ಈಗ ನಾವು ವಿವಿಯ ಸಾಂಪ್ರದಾಯಿಕ ಗುರಿ, ಉದ್ದೇಶಗಳನ್ನು ಮರೆತಂತೆ ಕಾಣುತ್ತದೆ; ವಿವಿಯ ಪರಿಕಲ್ಪನೆಯು ವಿಸ್ಮøತಿಗೊಂಡು, ನಮ್ಮ ಲಕ್ಷ್ಯ ಮೊಂಡಾಗಿದೆ. ಈ ಸಮಕಾಲೀನ ಸಂದಿಗ್ಧತೆಗೆ ವಿವಿಯ ಪರಿಕಲ್ಪನೆಯನ್ನು ಮರುಸ್ಥಾಪಿಸದೇ ಅನ್ಯಮಾರ್ಗವಿಲ್ಲ. ಸತ್ತಂತಿರುವ ಈ ಸಂಸ್ಥೆಗೆ ಅದರ ಉದ್ದೇಶದÀ ಪ್ರಜ್ಞೆಯನ್ನು (ಸೆನ್ಸ್ ಆಫ್ ಪರ್‍ಪಸ್) ನೆನಪಿಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು. ವಿವಿಯ ಈ ಪರಿಕಲ್ಪನೆಯಲ್ಲಿ ನಾವು ನಂಬಿಕೆ ಇಟ್ಟು, ನಮ್ಮ ಶೈಕ್ಷಣಿಕ ನೀತಿ ನಿಯಮ, ಪಠ್ಯಕ್ರಮಗಳಲ್ಲಿ ಅದು ಹಾಸುಹೊಕ್ಕಾದರೆ ಸಹಜವಾಗಿಯೆ ಜ್ಞಾನಸೃಷ್ಟಿಯು ಸಾಧಿತವಾಗುವುದು.  

ಪಶ್ಚಿಮ ಸಂಸ್ಕøತಿಯ ಒಡಲಾಳದಲ್ಲಿ ಜನ್ಮ ತಾಳಿದ ವಿವಿ ಎಂಬ ಈ ಸಂಸ್ಥೆ ಭಾರತದಂತಹ ಪಶ್ಚಿಮೇತರ ಸಂಸ್ಕøತಿಗಳಲ್ಲಿ ಬೇರುಬಿಟ್ಟು ಸಾವಯವ ಬೆಳವಣಿಗೆ ಹೊಂದುವುದು ಕಷ್ಟ ಎನ್ನುವುದು ನಿಜವಾದರೂ, ಅದರ ಆಚೆಗೂ ನಾವು ನಮ್ಮ ಚಿಂತನೆಯನ್ನು ಹರಿಬಿಡಬೇಕಾಗುತ್ತದೆ. ಜ್ಞಾನಸೃಷ್ಟಿಯಲ್ಲಾಗುತ್ತಿರುವ ಭೌಗೋಳಿಕ-ರಾಜಕಾರಣ (ಜಿಯೊ-ಪೊಲಿಟಿಕ್ಸ್) ನೋಡಿದಾಗ, ಯುರೋಪ್ ಹಾಗೂ ಅಮೆರಿಕೆ ವಿವಿಗಳ ಉತ್ಕøಷ್ಟತೆ ಎದ್ದುಕಾಣುತ್ತದೇನೊ ನಿಜ. ಈ ಸಾಂಸ್ಕøತಿಕ ತೊಳಲಾಟದಲ್ಲಿ, ಯಥಾವತ್ತಾಗಿ ಅಮೆರಿಕೆಯ ಮಾದರಿಗಳನ್ನು ಕುರುಡಾಗಿ ಅನುಕರಣೆ ಮಾಡುವುದು ಅಪಾಯಕರ. ಹಾಗಾಗಿ ನಮ್ಮ ಅಗತ್ಯಕ್ಕೆ ತಕ್ಕಂತೆ ಎಂತಹ ವಿವಿಯ ಪರಿಕಲ್ಪನೆ ಬೇಕೆಂದು ಆಲೋಚಿಸಿ, ಈ ಒಟ್ಟಾರೆ ವ್ಯವಸ್ಥೆಯನ್ನು ಮರುರೂಪಿಸದಿದ್ದರೆ ಯಾವ ಪ್ರಯೋಜನವು ಆಗುವುದಿಲ್ಲ. ವಿವಿಗಳಿಗಾಗಿ ಅಧಿಕಾರಿಗಳನ್ನು ನೇಮಕ ಮಾಡುವ ಪ್ರಭುತ್ವ, (ಸಂಶೊಧನಾಪ್ರಿಯ) ಅಧ್ಯಾಪಕರನ್ನು ನೇಮಕ ಮಾಡುವ ವಿವಿಗಳ ಸಮಿತಿಗಳು ಈ ಕಾಳಜಿಯನ್ನು ತೋರಿಸುವಲ್ಲಿ ನಮ್ಮ ಒಳಿತಿದೆ.

ವಿಸ್ಮøತಿಗೆ ಒಳಗಾದ ವಿವಿಯ ಪರಿಕಲ್ಪನೆಯನ್ನು ಹುಡುಕಿಕೊಳ್ಳುವ ಕಾರ್ಯಕ್ರಮ ಒಂದೆಡೆಗಿದ್ದರೆ, ವಿವೇಕ ಕಳೆದುಕೊಂಡಿರುವ ಸಂಶೋಧನಾ ಚಟುವಟಿಕೆಯನ್ನು ಅರ್ಥಪೂರ್ಣಗೊಳಿಸುವ ಜರೂರು ಮತ್ತೊಂದೆಡೆ ಇದೆ. ಸಂಶೋಧನೆಯ ಅರ್ಥವೆಂದರೆ ಸತ್ಯವನ್ನು ಅರಸುವುದು, ಸಮಸ್ಯೆಗಳನ್ನು ಬಿಡಿಸುವುದು, ಬದುಕಿನ ಬಗ್ಗೆ ವೈಜ್ಞಾನಿಕ ತಿಳಿವಳಿಕೆಯನ್ನು ಒದಗಿಸುವುದು, ತಪ್ಪು ಗ್ರಹಿಕೆಗಳನ್ನು ಸರಿಪಡಿಸುವದು, ಸರಕಾರಗಳು ನೀತಿ ನಿಯಮ ರೂಪಿಸಲು ಬೇಕಾದ ಅರಿವನ್ನು ಒದಗಿಸುವುದು ಅಥವಾ ಕಡೇ ಪಕ್ಷ ಚೆಲ್ಲಾಪಿಲ್ಲಿಯಾದ ಮಾಹಿತಿಯನ್ನು ವ್ಯವಸ್ಥಿತವಾಗಿ ಜೋಡಿಸುವುದು. ಈ ಎಲ್ಲ ಅರ್ಥಗಳು ನಮ್ಮ ನಡುವೆ ಕಾಣೆಯಾಗಿವೆ.

ನಾವು ವಿವಿಗಳಲ್ಲಿ ಸಂಶೋಧನೆಯ ಕಾರ್ಯಕ್ರಮವನ್ನು ನಿರ್ವಹಣೆ ಮಾಡುತ್ತಿರುವ ರೀತಿ ರಿವಾಜುಗಳನ್ನು ನೋಡಿದರೆ ಈ ಚಟುವಟಿಕೆ ಯ ಅರ್ಥಹೀನತೆ ನಮ್ಮ ಗಮನಕ್ಕೆ ಬರುತ್ತದೆ. ಉದಾಹರಣೆಗೆ, ಸಂಶೋಧನೆಗಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನೆ ತೆಗೆದುಕೊಳ್ಳೋಣ. ಹೆಚ್ಚಿನ ವಿವಿಗಳಲ್ಲಿ ಬಹು-ಆಯ್ಕೆಯ ಪ್ರಶ್ನೆಗಳ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹಿಂದೆ ಬಹು-ಆಯ್ಕೆಯ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಇಂತಹ ಪ್ರವೇಶ ಪರೀಕ್ಷೆಗಳಲ್ಲಿ ಚತುರತನದಿಂದ ಪಾಸಾಗುವುದನ್ನು ಕರಗತ ಮಾಡಿಕೊಂಡವÀರು ಹೆಚ್ಚಾಗಿ ಸಂಶೋಧನೆಗೆ ಪ್ರವೇಶ ಪಡೆಯುತ್ತಾರೆ. ಆದರೆ ಸಂಶೋಧನೆಯ ಸಮಸ್ಯೆಯನ್ನು ತಮ್ಮ ಮಹಾಪ್ರಬಂಧದಲ್ಲಿ ವಿವರಣಾತ್ಮಕವಾಗಿ ಮಂಡಿಸುವುದರಲ್ಲಿ ಅವರು ವಿಫಲರಾಗುವುದನ್ನು ಕಾಣುತ್ತೇವೆ. ಸಂಶೋಧನೆ ಮಾಡಲು ಬರುವವರಲ್ಲಿ ಯಾವ ಅಂಶಗಳನ್ನು ಗುರುತಿಸಬೇಕು, ಏನನ್ನು ಪರೀಕ್ಷಿಸಬೇಕು ಎಂಬ ವಿವೇಚನೆ ಇರದ ಈ ಪ್ರವೇಶ ಪರೀಕ್ಷೆಗಳು ನಾವು ಸಂಶೋಧನೆಯ ಅರ್ಥವನ್ನು ಕಳೆದುಕೊಂಡಿದ್ದನ್ನು ಸೂಚಿಸುತ್ತವೆ.

ಇನ್ನು ಸಂಶೋಧನೆಯನ್ನು ಕಲಿಸುವ ವಿಚಾರವೂ ಅರ್ಥಹೀನವಾಗಿ ಕಾಣುತ್ತದೆ. ನಮ್ಮ ಕೋರ್ಸ್‍ವರ್ಕ್‍ಗಳ ಪಠ್ಯಕ್ರಮವನ್ನು ಗಮನಿಸಿದಾಗ, ಅವು ಸಂಶೋಧನೆ ವಿಷಯದ ಕುರಿತು ಮಾಹಿತಿಯನ್ನು ಒದಗಿಸುತ್ತವೆಯೇ ಹೊರತು, ಸಂಶೋಧನಾ ಸಾಮಥ್ರ್ಯವನ್ನು ಬೆಳೆಸುವುದಿಲ್ಲ. ಕೋರ್ಸ್‍ವರ್ಕ್‍ನ ಅರ್ಥವೇನು, ಅದನ್ನು ಏಕೆ ಮತ್ತು ಹೇಗೆ ರೂಪಿಸಲಾಗಿದೆ ಎನ್ನುವ ತರ್ಕವನ್ನು ಅರಿಯದೇ ಇರುವುದು ಸಮಸ್ಯಾತ್ಮಕವಾಗಿದೆ. ಆದ್ದರಿಂದ ಅದು ಕೂಡಾ ಮುಂಬರುವ ಪರೀಕ್ಷೆಗಾಗಿ ವಿದ್ಯಾರ್ಥಿಗಳನ್ನು ತಯಾರಿ ಮಾಡುವ ಕೃತಕ ಚಟುವಟಿಕೆಯಾಗಿಬಿಟ್ಟಿದೆ. ಹಾಗಾಗಿ ಸಂಶೋಧನೆಯ ಕಲಿಕೆಯನ್ನು ಸಾರ್ಥಕಗೊಳಿಸುವ ದಾರಿಗಳನ್ನು ಹುಡುಕಬೇಕಾಗಿದೆ.

ಎಲ್ಲ ಕಲಿಕೆಗಳಿಗೆ ಅನ್ವಯವಾಗುವ ಎರಡು ಸೂತ್ರಗಳಿವೆ: ಮಾದರಿಗಳನ್ನು ಅವಲೋಕಿಸುತ್ತ, ಅನುಕರಿಸುತ್ತ ಕಲಿಯುವುದು ಮತ್ತು ಗುರು ಮುಖೇನ ಕಲಿಯುವುದು. ಅಂದರೆ ರಿಸರ್ಚ್ ಮೆಥಡಾಲಜಿ ಪುಸ್ತಕಗಳನ್ನು ಓದುವುದು ಬಿಟ್ಟು, ನಮ್ಮ ನಮ್ಮ ಜ್ಞಾನಶಿಸ್ತು, ಕಾರ್ಯಕ್ಷೇತ್ರಗಳಲ್ಲಿ ಈಗಾಗಲೆ ನಡೆದಿರುವ ಸಂಶೋಧನಾ ಮಾದರಿಗಳನ್ನು ಓದುವುದು, ಅವಲೋಕಿಸುವುದು ಸಂಶೋಧನೆಯನ್ನು ಕಲಿಯಲು ಹೆಚ್ಚು ಉಪಯುಕ್ತವೆನಿಸುತ್ತದೆ. ಇನ್ನು ಗುರು-ಮುಖೇನ ಕಲಿಯುವುದೆಂದರೆ ವಿವಿಯಿಂದ ಮಾನ್ಯತೆ ಪಡೆದ ಮಾರ್ಗದರ್ಶಕರ ಮುಖೇನ ಕಲಿಯುವುದಂತಲ್ಲ. ಏಕೆಂದರೆ ‘ಗೈಡ್‍ಶಿಪ್’ ಇದ್ದವರೆಲ್ಲರೂ ಸಂಶೋಧಕರಾಗಿರುವುದಿಲ್ಲ. ಸಂಗೀತವನ್ನು ಸಂಗೀತಗಾರರಿಂದಲೇ ಕಲಿಯಬೇಕಾಗುತ್ತದೆ. ಹಾಗೆ ಸಂಶೋಧನೆಯನ್ನು ಬಲ್ಲ ಸಂಶೋಧಕ-ಮಾರ್ಗದರ್ಶಕರಿಂದಲೇ ಕಲಿಯಬೇಕು.

ಸಂಶೋಧನೆಯ ಸಂಸ್ಕøತಿಯನ್ನು ನಾವು ನಿಭಾಯಿಸುತ್ತಿರುವಲ್ಲಿ ಇನ್ನೊಂದು ಅನರ್ಥ ನಂಬಿಕೆ ಇದೆ: ಎಲ್ಲವನ್ನು ನೀತಿಸಂಹಿತೆ ಹೇರುವುದರ ಮೂಲಕ ನಿಯಂತ್ರಿಸುವುದು. ಕೃತಿಚೌರ್ಯ ತಡೆಗಟ್ಟಲು ಯುಜಿಸಿಯು ರಿಸರ್ಚ್ ಪಬ್ಲಿಕೇಶನ್ ಅಂಡ್ ಎಥಿಕ್ಸ್ ಎಂಬ ಹೊಸ ಪತ್ರಿಕೆಯನ್ನು ಕೋರ್ಸ್‍ವರ್ಕನಲ್ಲಿ ಅಳವಡಿಸಿದೆ. ಅಂದರೆ ಕಳ್ಳತನ ಮಾಡಬಾರದೆಂಬ ನೀತಿಯನ್ನು ಪಠ್ಯಕ್ರಮದ ಮೂಲಕವೇ ಕಲಿಸುವುದು. ಒಂದು ಚಟುವಟಿಕೆಯ ನೈತಿಕತೆ, ಸರಿ-ತಪ್ಪು ಎನ್ನುವ ವಿಚಾರಗಳು ಆ ಚಟುವಟಿಕೆಯ ಸಂಪ್ರದಾಯ, ಸಂಸ್ಕøತಿಯ ಭಾಗವಾಗಿ ಮೈಗೂಡಬೇಕೇ ಹೊರತು, ಅದರ ಬಗ್ಗೆ ಮಾಹಿತಿ ನೀಡುವ ಪಠ್ಯಕ್ರಮದಿಂದ ಅಲ್ಲ.  

ಸಂಶೋಧನೆಗೆ ಸಂಬಂಧಪಟ್ಟಂತೆ ಇ-ಮೇಲ್ ಮೂಲಕ ಇಂಗ್ಲೆಂಡ್‍ನ ಪ್ರಸಿದ್ಧ ವಿಮರ್ಶಕಿ ಕ್ಯಾಥರಿನ್ ಬೆಲ್ಸಿ ಅವರ ಜೊತೆ ಚರ್ಚಿಸುತ್ತಿರುವಾಗ ಅವರು ಸೂಚಿಸಿದ ಅಂಶವೊಂದನ್ನು ಇಲ್ಲಿ ಉಲ್ಲೇಖಿಸುತ್ತೇನೆ: “ಸತ್ಯವನ್ನರಿಸುವ ಪಾಶ್ಚಿಮಾತ್ಯ ಮಾರ್ಗವಾದ ಬೌದ್ಧಿಕ ವಿಚಾರಣೆ (ಇನ್‍ಕ್ವಾಯ್‍ರಿ) ಜೊತೆಗೆ ನಿಮ್ಮ (ನಮ್ಮ) ಪ್ರಾಚೀನ ಸಂಪ್ರದಾಯದಲ್ಲಿ ಲಭ್ಯವಿರುವ ಸತ್ಯಶೋಧದ ಪರ್ಯಾಯ ಮಾರ್ಗಗಳ ಹುಡುಕಾಟ ಮಾಡಬೇಕು”. ಅಂದರೆ ವಸ್ತು ಮತ್ತು ವಿಷಯಗಳನ್ನು ಪರಿಶೀಲನೆ ಮಾಡುವÀ ಭಾರತೀಯ ಮಾರ್ಗಗಳೇನಾದರೂ ಇದ್ದರೆ, ಅವುಗಳನ್ನು ಅನುಸಂಧಾನ ಮಾಡುವುದು ಹೆಚ್ಚು ಪ್ರಯೋಜನಕಾರಿ. ಮತ್ತೆ, ಸಂಶೋಧನೆಗಳಿಗೆ ಬೇಕಾದ ವಿಮರ್ಶಾತ್ಮಕ ಚಿಂತನೆ (ಕ್ರಿಟಿಕಲ್ ಥಿಂಕಿಂಗ್) ಜೊತೆಗೆ ಲಕ್ಷ್ಮೀಶ್ ತೋಳ್ಪಾಡಿ ಅವರು ಹೇಳುವ ಧ್ಯಾನಿಸುವ ವಿಧಾನ ನಮಗೆ ಸಹಾಯ ಮಾಡಬಹುದೇ ಎಂದು ಪರೀಕ್ಷಿಸಬೇಕಾಗಿದೆ. 

ಇಲ್ಲಿ ತಾತ್ವಿಕವಾಗಿ ಈ ವಿಷಯವನ್ನು ಪ್ರವೇಶಿಸಲು ಪ್ರಯತ್ನ ಪಟ್ಟಿದ್ದು ಆದರ್ಶದ ಮಾತಾಗಿ, ಪ್ರಾಯೋಗಿಕವಾಗಿ ನಿರುಪಯುಕ್ತವೆನಿಸಬಹುದು. ಆದರೆ ನಾವು ವಾಸ್ತವವನ್ನು ಆದರ್ಶದ ಚಾವಡಿಯಲ್ಲಿಯೇ ರೂಪಿಸುವುದು; ಅದು ಮನೆ ಕಟ್ಟುವುದಿರಬಹುದು, ಮದುವೆ ಮಾಡುವುದಿರಬಹುದು ಅಥವಾ ವಿವಿಗಳನ್ನು ಕಟ್ಟುವುದಿರಬಹುದು.  

*ಲೇಖಕರು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಶ್ ಅಧ್ಯಯನ ವಿಭಾಗದ ಮುಖ್ಯಸ್ಥರು.

Leave a Reply

Your email address will not be published.