ವಿಶ್ವ ವಿದ್ಯಮಾನ ಮ್ಯಾನ್ಮಾರ್ನಲ್ಲಿ ಮತ್ತೆ ಸೈನ್ಯದ ದರ್ಬಾರ್

-ಪುರುಷೋತ್ತಮ ಆಲದಹಳ್ಳಿ

2019ರಲ್ಲಿ ಮ್ಯಾನ್ಮಾರ್‍ನ (ಬರ್ಮಾ) ಆಂಗ್‍ಸಾನ್ ಸೂಚಿಯವರು ರೊಹಿಂಗ್ಯಾ ನರಹತ್ಯೆಯ ವಿಷಯದಲ್ಲಿ ಅಂತರರಾಷ್ಟ್ರೀಯ ನ್ಯಾಯಿಕ ಸಂಸ್ಥೆಯ ಮುಂದೆ ಬರ್ಮಾದ ಸೈನ್ಯವನ್ನು ಬೆಂಬಲಿಸಿ ಮಾತನಾಡಿದ್ದಾಗ ಇಡೀ ವಿಶ್ವವೇ ಆಂಗ್‍ಸಾನ್ ಸೂಕಿಯವರನ್ನು ಟೀಕಿಸಿ ಮಾತನಾಡಿತ್ತು. ಮ್ಯಾನ್ಮಾರ್‍ನ ಪ್ರಜಾತಂತ್ರದ ಚಳುವಳಿಯ ಸಂದರ್ಭದಲ್ಲಿ ತಾವು ಆಂಗ್‍ಸಾನ್ ಸೂಕಿಗೆ ನೀಡಿದ್ದ ಬೆಂಬಲ ವ್ಯರ್ಥ ಹಾಗೂ ನಿರರ್ಥಕವಾಗಿತ್ತು ಎಂದು ವಾದಿಸಲಾಗಿತ್ತು. ಆದರೆ ಮ್ಯಾನ್ಮಾರ್‍ನ ಶೈಶವ ಪ್ರಜಾಪ್ರಭುತ್ವವನ್ನು ಉಳಿಸಲು ಸೂಚಿಯವರು ಎಷ್ಟೆಲ್ಲಾ ತ್ಯಾಗ ಮಾಡುತ್ತಿದ್ದಾರೆ ಹಾಗೂ ಎಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ ಎಂಬುದನ್ನು ವಿಶ್ವದ ಮಾಧ್ಯಮಗಳು ಮರೆತಿದ್ದವು.

ಈಗ ವಿಶ್ವದ ಕಣ್ಣಿಗೆ ಮತ್ತೊಮ್ಮ ಮ್ಯಾನ್ಮಾರ್ ಬೀಳುವಂತಾಗಿದೆ. ಇದೇ ಫೆಬ್ರವರಿ ಒಂದರಂದು ಮ್ಯಾನ್ಮಾರ್‍ನ ಸೈನ್ಯವು ರಂಗೂನ್‍ನ ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಸುತ್ತುವರೆದು ಸೈನ್ಯಾಡಳಿತವನ್ನು ಘೋಷಿಸಿದೆ. ಸೂಚಿ, ಅಧ್ಯಕ್ಷ ಯು ವಿನ್ ಮ್ಯಿಂಟ್ ಹಾಗೂ ಸಂಸತ್ತಿನ ಸದಸ್ಯರನ್ನು ಬಂಧನ-ಗೃಹಬಂಧನದಲ್ಲಿರಿಸಲಾಗಿದೆ. ಮುಂದಿನ ಒಂದು ವರ್ಷದವರೆಗೆ ತುರ್ತುಪರಿಸ್ಥಿತಿ ಘೋಷಿಸಿ ಸೈನ್ಯಡಳಿತವನ್ನು ಜಾರಿ ಮಾಡಲಾಗಿದೆ. ಹತ್ತು ವರ್ಷಗಳ ಪ್ರಜಾಪ್ರಭುತ್ವದ ಪ್ರಯೋಗಕ್ಕೆ ಕತ್ತರಿ ಹಾಕಿ ಮತ್ತೊಮ್ಮೆ ಸೇನಾಧಿಕಾರಿ ಮಿನ್ ಆಂಗ್ ಹ್ಲಾಂಗ್ ‘ಸಂವಿಧಾನ ಉಳಿಸಲು’ ದೇಶದ ಅಧಿಕಾರ ವಹಿಸಿಕೊಂಡಿದ್ದಾರೆ.

2008ರಲ್ಲಿ ರಚಿತವಾದ ಮ್ಯಾನ್ಮಾರ್ ಸಂವಿಧಾನದಂತೆ ಸಂಸತ್ತಿನಲ್ಲಿ ಸೈನ್ಯಕ್ಕೆ ಶೇಕಡಾ 25 ರಷ್ಟು ಖಾಯಂ ಸದಸ್ಯತ್ವವಿದೆ. ದೇಶದ ಆಂತರಿಕ ಭದ್ರತೆ ಇಲಾಖೆ ಮತ್ತು ಸೈನ್ಯದ ಮೇಲೆ ನಾಗರೀಕ ಸರ್ಕಾರದ ಯಾವುದೇ ನಿಯಂತ್ರಣವಿಲ್ಲ. ಸಂವಿಧಾನ ತಿದ್ದುಪಡಿಗೂ ಕೂಡ ಶೇಕಡಾ 75 ರಷ್ಟರ ಬಹುಮತ ಬೇಕೆಂದು ಹೇಳಲಾಗಿದೆ. ಹೀಗೆ ದೇಶದ ಆಡಳಿತದಲ್ಲಿ ಸೈನ್ಯದ ಮಹತ್ತರ ಪಾತ್ರವನ್ನು ಸಾಂವಿಧಾನಿಕವಾಗಿ ಜಾರಿ ಮಾಡಲಾಗಿದೆ. ಆದಾಗ್ಯೂ ಈ ಸಂವಿಧಾನದಂತೆಯೇ ನಡೆದ ಚುನಾವಣೆಯಲ್ಲಿ ಆಂಗ್‍ಸಾನ್ ಸೂಕಿ ನೇತೃತ್ವದ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರೆಸಿ ಭಾರಿ ಬಹುಮತದೊಂದಿಗೆ ಜಯಗಳಿಸಿ ಕಳೆದ ಐದು ವರ್ಷಗಳಲ್ಲಿ ಆಡಳಿತ ನಡೆಸಿತ್ತು. ಸೂಕಿಯವರಿಗೆ ನೇರವಾಗಿ ಪ್ರಧಾನಿಯಾಗಲು ಬಿಡದಿದ್ದರೂ ಸರ್ಕಾರದ ಚಿಕ್ಕಾಣಿ ಸೂಕಿಯವರ ಕೈಯಲ್ಲಿಯೇ ಇತ್ತು. 2020ರ ನವೆಂಬರ್ 8ರಂದು ನಡೆದ ಚುನಾವಣೆಯಲ್ಲಿ ಎನ್‍ಎಲ್‍ಡಿ ಮತ್ತೊಮ್ಮೆ ಭಾರಿ ಬಹುಮತ ಗಳಿಸಿತ್ತು. ಸೈನ್ಯ ಬೆಂಬಲಿತ ಪಕ್ಷಕ್ಕೆ ಭಾರಿ ಹಿನ್ನೆಡೆ ಆಗಿತ್ತು. ಇದೇ ಫೆಬ್ರವರಿ ಮೊದಲ ವಾರದಲ್ಲಿ ಸಂಸತ್ತಿನ ಸಭೆಯಲ್ಲಿ ಚುನಾವಣಾ ಫಲಿತಾಂಶವನ್ನು ಅಂಗೀಕರಿಸಿ ಮುಂದಿನ ಐದು ವರ್ಷಗಳವರೆಗೂ ಸೂಕಿಯವರ ಪಕ್ಷದ ಆಡಳಿತ ಘೋಷಿತವಾಗುವುದಿತ್ತು. ಇದನ್ನರಿತ ಸೇನಾಧಿಕಾರಿ ಹ್ಲಾಂಗ್ ನವೆಂಬರ್ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಮತ್ತು ಚುನಾವಣೆಗಳು ಪಾರದರ್ಶಿಕವಾಗಿ ನಡೆದಿಲ್ಲ ಎಂದು ಆರೋಪ ಹೊರಿಸಿ ಫಲಿತಾಂಶವನ್ನು ರದ್ದುಗೊಳಿಸಿದ್ದಾರೆ. ಸಾಂವಿಧಾನಿಕ ನ್ಯೂನತೆಗಳನ್ನು ಸರಿಪಡಿಸುವ ನೆಪದಲ್ಲಿ ಮ್ಯಾನ್ಮಾರ್ ಸೈನ್ಯ ಮತ್ತೊಮ್ಮೆ ಆಡಳಿತದ ಗದ್ದುಗೆ ಏರಿದೆ.

ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಈ ಸೈನಿಕ ಕ್ಷಿಪ್ರಕ್ರಾಂತಿಯನ್ನು ತೀವ್ರವಾಗಿ ಖಂಡಿಸಿವೆ. ಮ್ಯಾನ್ಮಾರ್‍ನ ಮೇಲೆ ಆರ್ಥಿಕ ದಿಗ್ಬಂಧನವನ್ನು ಹೇರುವುದಾಗಿಯೂ ಅಮೆರಿಕ ಹೇಳಿದೆ. ಆದರೆ ಚೀನಾ ಹಾಗೂ ಭಾರತ ಸರ್ಕಾರಗಳು ಸದ್ಯಕ್ಕೆ ಕಾದುನೋಡುವ ತಂತ್ರ ಅನುಸರಿಸಿವೆ. ಸೈನಿಕ ಸರ್ಕಾರವು ತಮ್ಮ ದೇಶಗಳ ವಿರುದ್ಧವಾಗದಂತೆ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿವೆ. ಈ ಮಧ್ಯೆ ಮ್ಯಾನ್ಮಾರ್ ಆದ್ಯಂತ ಪ್ರಜಾಪ್ರಭುತ್ವದ ಪರವಾಗಿ ಚಳವಳಿ ಹಬ್ಬಿದೆ. ಹಿಂದೆಂದಿಗಿಂತಲೂ ಮ್ಯಾನ್ಮಾರ್‍ನ ಯುವಜನತೆ ಪ್ರಜಾಪ್ರಭುತ್ವದ ಪರವಾಗಿ ಗಟ್ಟಿದನಿಯಲ್ಲಿ ಮುಕ್ತವಾಗಿ ಮಾತನಾಡಲು ಪ್ರಾರಂಬಿಸಿದ್ದಾರೆ.

ಇಂಪೀಚ್‍ಮೆಂಟ್‍ನಿಂದ ಬಚಾವಾದ ಟ್ರಂಪ್

2021 ಜನವರಿ 6 ರ ದಂಗೆಗೆ ಕುಮ್ಮಕ್ಕು ನೀಡಿದ ಕಾರಣಕ್ಕೆ ಡಾನಲ್ಡ್ ಟ್ರಂಪ್‍ರವರನ್ನು ಅಮೆರಿಕದ ಸಂಸತ್ತಿನ ಕೆಳಮನೆ ಇಂಪೀಚ್‍ಮೆಂಟ್ ಪ್ರಕ್ರಿಯೆಗೆ ಒಳಪಡಿಸಿತ್ತು. ಈ ಇಂಪೀಚ್‍ಮೆಂಟ್ ನಡಾವಳಿಯನ್ನು ಮೇಲ್ಮನೆ ಸೆನೆಟ್‍ನಲ್ಲಿ ನಡೆಸಿ 2/3ನೇ ಬಹುಮತದ ಆಧಾರದ ಮೇಲೆ ತೀರ್ಪು ನೀಡಬೇಕಾದ ಅಗತ್ಯವಿತ್ತು. ಇದೀಗ ಮೂರು ದಿನಗಳ ಕಾಲದ ವಿಚಾರಣೆ ನಡೆಸಿ 57-43 ಸಂಖ್ಯೆಯ ಮೇಲೆ ಡಾನಲ್ಡ್ ಟ್ರಂಪ್‍ರವರನ್ನು ಅಮೆರಿಕದ ಸೆನೆಟ್ ಪಾರು ಮಾಡಿದೆ. 50 ಮಂದಿ ಡೆಮಾಕ್ರೆಟಿಕ್ ಮತ್ತು 50 ಮಂದಿ ರಿಪಬ್ಲಿಕನ್ ಸೆನೆಟರ್‍ಗಳನ್ನು ಒಳಗೊಂಡ ಈ ಮೇಲ್ಮನೆಯಲ್ಲಿ ಏಳು ಜನ ರಿಪಬ್ಲಿಕನ್ನರು ಕೂಡಾ ಟ್ರಂಪ್ ವಿರುದ್ಧ ಮತ ನೀಡಿದ ಹಾಗೆ ಆಗಿದೆ.

ಸೆನೆಟ್‍ನಲ್ಲಿ ಇದೇ ಫಲಿತಾಂಶ ಬರುವುದೆಂದು ಎಣಿಸಲಾಗಿತ್ತು. ಟ್ರಂಪ್ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಲು ರಿಪಬ್ಲಿಕನ್ ಸೆನೆಟ್ ಸದಸ್ಯರು ತಯ್ಯಾರಿರಲಿಲ್ಲ. ಮುಂದಿನ ವರ್ಷಗಳ ರಿಪಬ್ಲಿಕನ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಇವರು ಟ್ರಂಪ್ ಎದುರಿಸುವುದು ಕಷ್ಟವಾಗುತ್ತಿತ್ತು. ಆದರೂ ಕೂಡಾ ಸೆನೆಟ್‍ನಲ್ಲಿಯ ರಿಪಬ್ಲಿಕನ್ ಮುಖಂಡ ಮಿಚ್ ಮೆಕಾನೆಲ್ ಅತ್ಯಂತ ಕಟುವಾದ ಶಬ್ದಗಳಲ್ಲಿ ಡಾನಲ್ಡ್ ಟ್ರಂಪ್‍ರವರನ್ನು ಟೀಕಿಸಿದ್ದಾರೆ. ಜನವರಿ 6ರ ದಂಗೆಗೆ ಟ್ರಂಪ್ ನೇರ ಹೊಣೆಯೆಂದು ಹೇಳಿದ್ದಾರೆ. ಆದರೆ ಈಗಾಗಲೇ ನಿವೃತ್ತರಾಗಿರುವ ಅಧ್ಯಕ್ಷರನ್ನು ಮತ್ತೊಮ್ಮೆ ಇಂಪೀಚ್ ಮಾಡುವುದು ಕಾನೂನುಬಾಹಿರ ಎಂದು ಟ್ರಂಪ್ ಪರವಾಗಿಯೇ ಮತ ನೀಡಿದ್ದಾರೆ. ಹೀಗೆ ಟ್ರಂಪ್ ಬೆಂಬಲಿಗರನ್ನು ಕಂಡು ಬೆದರಿದ್ದ 43 ರಿಪಬ್ಲಿಕನ್ ಸದಸ್ಯರು ಟ್ರಂಪ್ ಮಾನ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಇಂಪೀಚ್‍ಮೆಂಟ್ ನಡಾವಳಿ ಡೆಮಾಕ್ರೆಟಿಕ್ ಪಕ್ಷಕ್ಕೆ ನೈತಿಕ ಗೆಲುವಾದರೆ ರಿಪಬ್ಲಿಕನ್ ಪಕ್ಷಕ್ಕೆ ಮುಖಭಂಗವಾಗಿದೆ. ಟ್ರಂಪ್ ದೋಷಿಯೆಂದು ಒಪ್ಪಿಕೊಂಡಿದ್ದರೂ ಸಹಾ ಶಿಕ್ಷೆ ನೀಡಲಾಗದ ಎಡಬಿಡಂಗಿ ಪರಿಸ್ಥಿತಿಗೆ ರಿಪಬ್ಲಿಕನ್ ಪಕ್ಷ ಬಂದಿದೆ. ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಮತ್ತೊಮ್ಮೆ ಸ್ಪರ್ಧಿಸಬಹುದು ಹಾಗೂ ಪಕ್ಷದ ಆಂತರಿಕ ಚುನಾವಣೆಯಲ್ಲಿ ಟ್ರಂಪ್ ಬೆಂಬಲಿಗರನ್ನು ಎದುರಿಸುವುದು ಕಷ್ಟವಾಗಬಹುದು ಎಂದು ರಿಪಬ್ಲಿಕನ್ ಪಕ್ಷದ ಮುಖಂಡರು ಹೆದರಿದಂತೆ ಕಾಣುತ್ತಿದೆ.

ಈ ಮಧ್ಯೆ ಅಧ್ಯಕ್ಷ ಜೋ ಬೈಡೆನ್ ಟ್ರಂಪ್‍ರವರ ಎಲ್ಲಾ ಅಸಂಬದ್ಧ ನಿರ್ಣಯಗಳನ್ನು ಹಿಂದೆಗೆಯುವ ಆದೇಶ ಹೊರಡಿಸುತ್ತಿದ್ದಾರೆ. ಜಾಗತಿಕ ಹವಾಮಾನ ಒಪ್ಪಂದಕ್ಕೆ ಮತ್ತೊಮ್ಮೆ ಸೇರುವ ಹಾಗೂ ನೇಟೋ ಒಕ್ಕೂಟಕ್ಕೆ ಗಟ್ಟಿ ಬೆಂಬಲ ವ್ಯಕ್ತಪಡಿಸುವ ನಿರ್ಧಾರ ಪ್ರಕಟಿಸಿದ್ದಾರೆ.

ನೇಪಾಳ ಸಂಸತ್ ವಿಸರ್ಜನೆ ರದ್ದು

ಮಹತ್ವದ ನಿರ್ಣಯವೊಂದರಲ್ಲಿ ನೇಪಾಳದ ಸುಪ್ರೀಮ್ ಕೋರ್ಟ್ ಪ್ರಧಾನಿ ಓಲಿಯವರ ನಿರ್ಣಯವನ್ನು ರದ್ದುಗೊಳಿಸಿ ಮತ್ತೊಮ್ಮೆ ನೇಪಾಳದ ಸಂಸತ್ತಿನ ಉಳಿದೆರೆಡು ವರ್ಷಗಳ ಸಮಯವನ್ನು ಪುಷ್ಟೀಕರಿಸಿದೆ. ಕಳೆದೆರೆಡು ತಿಂಗಳುಗಳ ಹಿಂದೆ ಪ್ರಧಾನಿ ಓಲಿಯವರು ಸಂಸತ್ತನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ಘೋಷಿಸಿದ್ದರು. ಅಧ್ಯಕ್ಷೆ ಮಾಧವಿ ಭಂಡಾರಿ ಈ ಆದೇಶವನ್ನು ಹೊರಡಿಸಿ ಮತ್ತೊಮ್ಮೆ ಚುನಾವಣೆಗೆ ನಾಂದಿ ಹಾಡಿದ್ದರು. ಆದರೆ ಈ ಆದೇಶವನ್ನು ಓಲಿಯವರ ನೇಪಾಳ ಕಮ್ಯನಿಸ್ಟ್ ಪಕ್ಷದ ಉಳಿದೆಲ್ಲಾ ಮುಖಂಡರು ಪ್ರಶ್ನಿಸಿ ಸುಪ್ರೀಮ್ ಮೆಟ್ಟಿಲೇರಿದ್ದರು. ಇದೀಗ ನೀಡಿದ ನಿರ್ಣಯದಂತೆ ಸಂಸತ್ತಿನ ಉಳಿಕೆ ಸಮಯವನ್ನು ಮಾನ್ಯ ಮಾಡಿದ ನ್ಯಾಯಾಲಯ ಸಂಸತ್ತಿನಲ್ಲಿ ಬಹುಮತ ಪ್ರತಿಪಾದನೆಗೆ ಅವಕಾಶ ನೀಡಿದೆ. ಕಮ್ಯುನಿಸ್ಟ್ ಪಕ್ಷದಲ್ಲಿ ಓಲಿಗೆ ಬಹುಮತ ಸಿಗುವುದು ಬಹುತೇಕ ಇಲ್ಲವಾಗಿ ಮುಂದಿನ ಸರ್ಕಾರ ರಚನೆ ನೆನೆಗುದಿಗೆ ಬಿದ್ದಿದೆ.

ಪೆಟ್ರೋಲ್ ಬೆಲೆ ಏರಿಕೆಗೆ ಕಚ್ಚಾತೈಲದ ಬೆಲೆ ಕಾರಣವೇ..?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2020ರ ಏಪ್ರಿಲ್‍ನಲ್ಲಿ ಕಚ್ಚಾತೈಲದ ಬೆಲೆ 40 ಡಾಲರ್‍ಗಳಿಗಿಂತಲೂ ಕಡಿಮೆಯಿತ್ತು. ಈಗ ಇದು ಬ್ಯಾರೆಲ್ ಒಂದಕ್ಕೆ 65 ಡಾಲರ್‍ಗಳಷ್ಟಾಗಿದೆ. ಕಳೆದ ಒಂದು ವರ್ಷದಲ್ಲಿ ಬ್ಯಾರೆಲ್‍ಗೆ 25 ಡಾಲರ್‍ಗಳಷ್ಟು ಮತ್ತು ಶೇಕಡಾವಾರು ಲೆಕ್ಕದಲ್ಲಿ 60 ರಷ್ಟು ಹೆಚ್ಚಾಗಿದೆ. ಆದರೆ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಗೆ ಅಂತರರಾಷ್ಟ್ರೀಯ ಕಚ್ಚಾತೈಲದ ಬೆಲೆ ಏರಿಕೆ ಕಾರಣವೇ..? ಇಲ್ಲಿನ ಕೋಷ್ಟಕ ನೋಡಿ.

2014 ಮತ್ತು 2021 ರ ನಡುವಿನ ಪೆಟ್ರೋಲ್ ದರದ ಮೇಲಿನ ಹೋಲಿಕೆಯಲ್ಲಿ ಬೆಲೆ ಏರಿಕೆಯ ಕಾರಣ ನಿಮಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಅಂತಾರಾಷ್ಟ್ರೀಯ ಕಚ್ಚಾತೈಲದ ಬೆಲೆ ಏರಿಕೆ ನೆಪದಲ್ಲಿ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಾಹನ ಮಾಲೀಕರನ್ನು ಲೂಟಿ ಹೊಡೆಯುತ್ತಿರುವುದು ಮತ್ತು ಪ್ರತಿಗಾಮಿ ಅಪ್ರತ್ಯಕ್ಷ ತೆರಿಗೆಯ ಬರೆ ಹಾಕುತ್ತಿರುವುದು ಸ್ಪಷ್ಟವಾಗಿದೆ.

Leave a Reply

Your email address will not be published.