ವಿಶ್ವ ವಿದ್ಯಮಾನ

ಶ್ರೀಲಂಕಾದಲ್ಲಿ ಅಧಿಕಾರಕ್ಕೆ ಮರಳಿದ ರಾಜಪಕ್ಷ ಕುಟುಂಬ

ಶ್ರೀಲಂಕಾದಲ್ಲಿ ಬಲಪಂಥೀಯ ಸಿಂಹಳವಾದಿ ರಾಜಕಾರಣಿ ಕುಟುಂಬ ಮತ್ತೆ ಅಧಿಕಾರಕ್ಕೆ ಏರಿದೆ. ಎಲ್‍ಟಿಟಿಇ ತಮಿಳು ಬಂಡುಕೋರರನ್ನು ಬಗ್ಗುಬಡಿಯುವ ಸಮಯದಲ್ಲಿ ಶ್ರೀಲಂಕಾದ ರಕ್ಷಣಾ ಮಂತ್ರಿಯಾಗಿದ್ದ ಗೊಟಬಯ ರಾಜಪಕ್ಷ ಈಗ ದೇಶದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಹಿಂದೆ ಅಧ್ಯಕ್ಷರಾಗಿದ್ದ ಮಹಿಂದ ರಾಜಪಕ್ಷ ಈಗ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ.

ಇದುವರೆಗೆ ಅಧ್ಯಕ್ಷರಾಗಿದ್ದ ಮೈತ್ರಿಪಾಲ ಸಿರಿಸೇನ ಈ ಚುನಾವಣೆಯಲ್ಲಿ ಭಾಗವಹಿಸಿರಲಿಲ್ಲ. ಸ್ಪರ್ಧೆಯು ಎಸ್‍ಎಲ್‍ಪಿಪಿ ಪಕ್ಷದ ಗೊಟಬಯ ರಾಜಪಕ್ಷ ಮತ್ತು ಯುಎನ್‍ಪಿ ಪಕ್ಷದ ಸಜಿತ್ ಪ್ರೇಮದಾಸರವರೊಡನೆ ಏರ್ಪಟ್ಟಿತ್ತು. ಗೊಟಬಯ 52.25% ಮತ ಗಳಿಸಿ ಗೆದ್ದರೆ ಸಜಿತ್ ಪ್ರೇಮದಾಸ ಕೇವಲ 42% ಮತ ಪಡೆದಿದ್ದರು. ಯುಎನ್‍ಪಿಯ ಈ ಸೋಲಿನಿಂದ ಕಂಗೆಟ್ಟ ಪಕ್ಷಾಧ್ಯಕ್ಷ ರಣಿಲ್ ವಿಕ್ರಮಸಿಂಘೆ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

2019ರ ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇಕಡಾ 10 ರಷ್ಟು ಇರುವ ಮುಸ್ಲಿಮರು, ಶೇಕಡಾ 12 ರಷ್ಟಿರುವ ತಮಿಳು ಹಿಂದೂಗಳು ಹಾಗೂ ಶೇಕಡಾ 7 ರಷ್ಟಿರುವ ಕ್ರಿಶ್ಚಿಯನ್ನರು ಬಹತೇಕ ಯುಎನ್‍ಪಿಯ ಅಭ್ಯರ್ಥಿಯನ್ನೇ ಬೆಂಬಲಿಸಿದ್ದರು. ಆದರೆ ಉಳಿದ ಶೇಕಡಾ 70 ರಷ್ಟು ಸಿಂಹಳ ಬೌದ್ಧಮತೀಯರು ರಾಜಪಕ್ಷ ಕುಟುಂಬಕ್ಕೆ ತಮ್ಮ ಬೆಂಬಲ ಸೂಚಿಸಿದ್ದರು. ಇದರಿಂದ ಮುಂದಿನ ಐದು ವರ್ಷಗಳವರೆಗೆ ಮತ್ತೆ ಸಿಂಹಳ ಬಹುಮತದ ಸರ್ಕಾರ ಸ್ಥಾಪನೆಯಾಗಿದೆ. ಈ ಚುನಾವಣೆ ಮತ್ತೆ ತಮಿಳು ರಾಷ್ಟ್ರವಾದ ಅಥವಾ ಮುಸ್ಲಿಮ್ ಪ್ರತ್ಯೇಕತಾವಾದಕ್ಕೆ ಇಂಬು ನೀಡಬಹುದೇನೋ ಎಂಬ ಹೆದರಿಕೆಯನ್ನೂ ಹುಟ್ಟಿಸುತ್ತಿದೆ.

ಯುಎನ್‍ಪಿಯ ಸರ್ಕಾರವು ಭಾರತದ ಪರವಾಗಿದ್ದರೆ ರಾಜಪಕ್ಷ ಕುಟುಂಬ ಮೊದಲಿನಿಂದಲೂ ಚೀನಾದ ಬಗ್ಗೆ ಮೃದು ಧೋರಣೆ ತಾಳಿದೆ. ಬಂದರು ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಲಿಯಾಂತರ ಚೀನಾ ಹೂಡಿಕೆಗೂ ಆಸ್ಪದ ನೀಡಿದೆ. ಆದರೆ ಈ ಬಾರಿ ಅಧಿಕಾರಕ್ಕೆ ಬಂದ ತರುವಾಯದಲ್ಲಿ ಗೊಟಬಯ ರಾಜಪಕ್ಷ ತಾವು ಯಾವುದೇ ಭಾರತ ವಿರೋಧಿ ನೀತಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಬೇಕಾಗಿದೆ.


ಡಾನಲ್ಡ್ ಟ್ರಂಪ್ ಅಧ್ಯಕ್ಷೀಯ ಪದವಿ ಕಿತ್ತುಕೊಳ್ಳಲು ಶುರುವಾದ ‘ಇಂಪೀಚ್‍ಮೆಂಟ್’ ನಡಾವಳಿ.

ಅಮೆರಿಕೆಯ ಅಧ್ಯಕ್ಷ ಯಾವುದಾದರೂ ಅಪರಾಧಿ ಕೆಲಸ ಮಾಡಿ ಪುರಾವೆಯೊಡನೆ ಸಿಕ್ಕಿಹಾಕಿಕೊಂಡರೆ ಅವರನ್ನು ವಾಪಸ್ ಕರೆಸುವ ಅಧಿಕಾರ ಅಮೆರಿಕೆಯ ಸಂಸತ್ತಿಗೆ ಇದೆ. ಕೆಳಮನೆ ಕಾಂಗ್ರೆಸ್ಸಿನಲ್ಲಿ ಸರಳ ಬಹುಮತ ಹಾಗೂ ಮೇಲ್ಮನೆ ಸೆನೆಟ್‍ನಲ್ಲಿ ಎರಡನೇ ಮೂರರಷ್ಟು ಬಹುಮತದೊಂದಿಗೆ ಅಮೆರಿಕದ ಸಂಸತ್ತು ಅಧ್ಯಕ್ಷನನ್ನು ಕಾನೂನುಬಾಹಿರ ಕೃತ್ಯಕ್ಕೆ ದೋಷಿಯಾಗಿ ಕಂಡು ಮನೆಗೆ ಕಳಿಸಬಹುದು. ಅಂತಹಾ ಸಂದರ್ಭದಲ್ಲಿ ಉಪಾಧ್ಯಕ್ಷನೇ ಉಳಿದ ಅಧ್ಯಕ್ಷೀಯ ಕಾಲದವರೆಗೆ ಅಧ್ಯಕ್ಷ ಪದವಿಯನ್ನು ಅಲಂಕರಿಸುತ್ತಾನೆ.

ಅಮೆರಿಕೆಯ ಅಧ್ಯಕ್ಷ ಡಾನಲ್ಡ್ ಟ್ರಂಪ್ ಉಕ್ರೈನ್ ದೇಶದ ಅಧ್ಯಕ್ಷ ಜೆಲೆನ್ಸ್ಕಿ ಅವರೊಡನೆ ಇದೇ 2019ರ ಜುಲೈ 25 ರಂದು ಮಾಡಿದ ದೂರವಾಣಿ ಸಂಭಾಷಣೆಯಲ್ಲಿ 2020ರ ತಮ್ಮ ಚುನಾವಣೆಗೆ ಸಹಾಯ ಕೇಳಿದರೆಂದು ದೂರು ಸಲ್ಲಿಸಲಾಗಿತ್ತು. ಈ ದೂರನ್ನು ಸಂಸತ್ತಿನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್ ಸಭಾಧ್ಯಕ್ಷೆ ನ್ಯಾನ್ಸಿ ಪೆಲೋಸಿಯವರು ಗಂಭೀರವಾಗಿ ಪರಿಗಣಿಸಿ ಸದನದ ಮುಂದಿಟ್ಟರು. ಈ ದೂರಿನಂತೆ ಡಾನಲ್ಡ್ ಟ್ರಂಪ್ ಉಕ್ರೈನ್ ದೇಶಕ್ಕೆ ಸೈನಿಕ ನೆರವು ನೀಡುವುದನ್ನು ಮುಂದೂಡಿ ಆ ದೇಶದಿಂದ ತಮ್ಮ ಚುನಾವಣೆಗೆ ಪೂರಕ ನಿಲುವುಗಳನ್ನು ಬಯಸಿದ್ದರು. ಆದ್ಯಕ್ಷೀಯ ಪ್ರತಿಸ್ಪರ್ಧಿ ಜೋ ಬೈಡೆನ್‍ರವರ ಮಗ ಹಾಗೂ ಅವನು ಕೆಲಸ ಮಾಡುತ್ತಿದ್ದ ಕಂಪನಿಯ ತನಿಖೆ ಹಾಗೂ 2016ರ ಚುನಾವಣೆಯಲ್ಲಿ ಹಸ್ತಸಕ್ಷೇಪ ಮಾಡಿದೆವೆಂಬ ಹೇಳಿಕೆಯನ್ನು ಉಕ್ರೈನ್‍ನ ಅಧ್ಯಕ್ಷರಿಂದ ಬಯಸಲಾಗಿತ್ತು. ದೇಶಿ ಚುನಾವಣೆಯಲ್ಲಿ ಪರದೇಶದ ನೆರವು ಬಯಸುವುದು ಕಾನೂನುಬಾಹಿರವಾದ್ದರಿಂದ ಡಾನಲ್ಡ್ ಟ್ರಂಪ್‍ರವರ ದೂರವಾಣಿ ಸಂಭಾಷಣೆಯು ಕಾನೂನು ವಿರೋಧಿ ಚಟುವಟಿಕೆಗೆ ಪುರಾವೆ ಎಂದು ಆಪಾದಿಸಲಾಗಿತ್ತು.

ಈ ಆಪಾದನೆಯನ್ನು ಉಕ್ರೈನ್‍ನ ಅಧ್ಯಕ್ಷ ಹಾಗೂ ಅಮೆರಿಕದ ಅಧ್ಯಕ್ಷರಿಬ್ಬರೂ ಅಲ್ಲಗಳೆದಿದ್ದಾರೆ. ಆದರೆ ಸ್ವಹಿತಾಸಕ್ತಿ ಕಾಪಾಡುವ ಈ ಹೇಳಿಕೆಗಳನ್ನು ಮನ್ನಿಸದೆ ಅಮೆರಿಕದ ಕಾಂಗ್ರೆಸ್ ಟ್ರಂಪ್‍ರವರ ಮೇಲೆ ‘ಇಂಪೀಚ್‍ಮೆಂಟ್’ ನಡಾವಳಿಯನ್ನು ಶುರುಮಾಡಿದೆ. ಈಗಾಗಲೇ ಹಲವು ಸುತ್ತಿನ ವಿಚಾರಣೆಯಲ್ಲಿ ಟ್ರಂಪ್ ಆಪ್ತರು ಮತ್ತು ಸಹಾಯಕರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ಟ್ರಂಪ್‍ರವರನ್ನು ಕರೆಸಿ ವಿಚಾರಣೆ ಮಾಡುವುದರ ಜೊತೆಗೆ ದೂರವಾಣಿ ಸಂಭಾಷಣೆಯ ರೆಕಾರ್ಡಿಂಗ್ ಕಾಂಗ್ರೆಸ್ಸಿನ ಮುಂದಿಡುವುದು ಬಾಕಿಯಿದೆ.

ಅಮೆರಿಕೆಯ ಕಾಂಗ್ರೆಸ್ ಬಹುತೇಕ ಟ್ರಂಪ್‍ರವರನ್ನು ದೋಷಿಯೆಂದು ತೀರ್ಪು ನೀಡಬಹುದು. ಆಗ ಈ ದೋಷಾರೋಪಣೆ ಅಮರಿಕದ ಸೆನೆಟ್ ಮುಂದೆ ಬರಲಿದೆ. ಆದರೆ ಸೆನೆಟ್‍ನಲ್ಲಿ ಬಹುಮತ ಹೊಂದಿರುವ ರಿಪಬ್ಲಿಕನ್ ಪಕ್ಷ ಇದನ್ನು ಒಪ್ಪಲಾರದು. ತನ್ನದೇ ಆದ ವಿಚಾರಣೆಯನ್ನು ನೆಪಮಾತ್ರಕ್ಕೆ ಮಾಡಿ ಟ್ರಂಪ್ ದೋಷಮುಕ್ತರೆಂದು ಪ್ರಮಾಣಪತ್ರ ನೀಡಬಹುದು. ಆದರೂ ಈ ವಿಚಾರಣೆ ಟ್ರಂಪ್‍ರವರು 2020ರಲ್ಲಿ ಮರು ಆಯ್ಕೆ ಬಯಸುವ ಆಸೆಗೆ ತಣ್ಣೀರು ಎರಚಲಿದೆ. ಕಾಂಗ್ರೆಸ್‍ನಿಂದ ಇಂಪೀಚ್ ಆದವರೆಂಬ ಹಣೆಪಟ್ಟಿ ಹೊತ್ತು ಟ್ರಂಪ್ ಅದುಹೇಗೆ 2020ರ ಅಧ್ಯಕ್ಷೀಯ ಚುನಾವಣೆ ಎದುರಿಸುತ್ತಾರೆಂದು ನೋಡಬೇಕಿದೆ.


ವೆನಿಸ್ ಪ್ರವಾಹಕ್ಕೆ ಜಾಗತಿಕ ತಾಪಮಾನ ಹೆಚ್ಚಳ ಕಾರಣವೇ..?

ನವೆಂಬರ್ ಎರಡನೇ ವಾರದಲ್ಲಿ ಇಟಲಿಯ ವೆನಿಸ್ ನಗರಕ್ಕೆ ನಾಲ್ಕರಿಂದ ಐದು ಅಡಿಯಷ್ಟು ಎತ್ತರಕ್ಕೆ ನೀರು ನುಗ್ಗಿತ್ತು. ಒಂದು ವಾರದಲ್ಲಿ ಮೂರು ಬಾರಿ ನುಗ್ಗಿದ್ದ ಈ ಸಮುದ್ರದ ನೀರಿನಿಂದ ವೆನಿಸ್ ನಗರದ ಕೆಲವು ಪ್ರಖ್ಯಾತ ಪ್ರವಾಸಿ ತಾಣಗಳು ನೀರಿನಲ್ಲಿ ಆವೃತವಾಗಿದ್ದವು. ಜಗತ್ತಿನಾದ್ಯಂತ ಹರಿದಾಡಿದ ಈ ವೆನಿಸ್ ನಗರದ ಚಿತ್ರಗಳು ಮತ್ತೊಮ್ಮೆ ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಬಗ್ಗೆ ಜನರ ಗಮನ ಸೆಳೆದಿವೆ.

ಏಡ್ರಿಯಾಟಿಕ್ ಸಮುದ್ರದ ಕೊಲ್ಲಿಯೊಂದರಲ್ಲಿರುವ ವೆನಿಸ್ ನಗರದಲ್ಲಿ ಕಾಂಕ್ರೀಟ್ ರಸ್ತೆಗಳಿಲ್ಲ. ಬದಲಿಗೆ ನೀರಿನ ಕಾಲುವೆಗಳ ಮೇಲೆ ತಳ್ಳು ದೋಣಿಯಲ್ಲಿ ಕುಳಿತು ಸಂಚಾರ ಮಾಡಬೇಕು. ಈ ವಿಶಿಷ್ಟ ದೋಣಿ ಸಂಚಾರಕ್ಕೆ ಹೆಸರುವಾಸಿಯಾದ ವೆನಿಸ್ ನಗರ ಇತ್ತೀಚಿನ ನೀರಿನ ಏರಿಳಿತದಲ್ಲಿ ನಷ್ಟ ಅನುಭವಿಸಿದೆ. ನಗರವನ್ನು ಅಕ್ಷರಶಃ ತೇಲಿಸಿದೆ. ಜೋರುಗಾಳಿ ಹಾಗು ಮೇಲ್-ತೆರೆ (ಹೈ ಟೈಡ್) ಸಂರ್ಭದಲ್ಲಿ ಆಗಾಗ್ಗೆ ಬರುವ ಈ ‘ಅಕ್ವಾ-ಆಲ್ಟಾ’ ಪ್ರಕ್ರಿಯೆ ಈ ಬಾರಿ ವೆನಿಸ್ ನಗರವನ್ನೇ ಜಲಾವೃತವಾಗಿಸಿದೆ. ನಂತರದಲ್ಲಿ ನೀರು ಇಳಿಕೆಯಾದರೂ ಇತ್ತೀಚಿನ ವರುಷಗಳಲ್ಲಿ ಪದೇಪದೇ ಬರುತ್ತಿರುವ ಈ ಪ್ರವಾಹಕ್ಕೆ ಜಾಗತಿಕ ತಾಪಮಾನದ ಹೆಚ್ಚಳವೇ ಕಾರಣ ಎಂದು ವಾದಿಸಲಾಗುತ್ತಿದೆ.

ಜಾಗತಿಕ ತಾಪಮಾನ ಹೆಚ್ಚಳಕ್ಕೆ (ಗ್ಲೋಬಲ್ ವಾರ್ಮಿಂಗ್) ಮುಂದಿನ ದಿನಗಳಲ್ಲಿ ಹಲವು ನಗರಗಳು ಬಲಿಯಾಗಲಿವೆಯೆಂದು ಹೇಳಲಾಗುತ್ತಿದೆ. 2050ರ ಇಸವಿಯೊಳಗೆ ನಮ್ಮ ದೇಶದ ಮುಂಬೈ ಮತ್ತಿತರ ಸಮುದ್ರ ಮಟ್ಟದಿಂದ ಕೇವಲ ಐದು ಮೀಟರ್ ಎತ್ತರದಲ್ಲಿರುವ ನಗರಗಳು ಈ ಮಾನವ ನಿರ್ಮಿತ ವಿಕೋಪಕ್ಕೆ ಬಲಿಯಾಗಬಹುದು. ತಾಪಮಾನ ಹೆಚ್ಚಳದ ವಿಷಯದಲ್ಲಿ ಪರಸ್ಪರ ದೂರುವುದರಲ್ಲಿಯೇ ಸಮಯ ಕಳೆಯುತ್ತಿರುವ ದೇಶಗಳು ಮುಂದೆ ಬರುವ ನೈಸರ್ಗಿಕ ಜಲಾಹುತಿಗೆ ಸಿದ್ಧವಾಗಬೇಕಿದೆ.

Leave a Reply

Your email address will not be published.