ವಿಶ್ವ ವಿದ್ಯಮಾನ:

ಆಂಗ್‍ಸಾನ್ ಸೂಚಿಯ ಮೇಲೆ ಮಾನವಹಕ್ಕು ರಕ್ಷಕರ ಕಣ್ಣು

ನೊಬೆಲ್ ಶಾಂತಿ ಪುರಸ್ಕಾರ ವಿಜೇತೆ ಮ್ಯಾನ್ಮಾರ್‍ನ ಆಂಗ್‍ಸಾನ್ ಸೂಚಿಯವರು ರೊಹಿಂಗ್ಯಾ ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆಂದು ವಿಶ್ವದೆಲ್ಲೆಡೆ ಪ್ರತಿಭಟನೆಗಳು ವ್ಯಕ್ತವಾಗಿವೆ. ಮ್ಯಾನ್ಮಾರ್ ಸರ್ಕಾರದ ಮೇಲೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಈಗಾಗಲೇ ಮೊಕದ್ದಮೆ ನಡೆಸುತ್ತಿದ್ದು ಈ ಪ್ರಕರಣ ವಿರುದ್ಧವಾದರೆ ಸೂಚಿ ಇನ್ನಷ್ಟು ಟೀಕೆಗೆ ಒಳಗಾಗಬೇಕಾಗುತ್ತದೆ.

ಸೂಚಿಯವರು ಮ್ಯಾನ್ಮಾರ್ (ಅಂದಿನ ಬರ್ಮಾ) ದೇಶದ ಸ್ವಾತಂತ್ರ್ಯ ಸೇನಾನಿ ಆಂಗ್‍ಸಾನ್‍ರವರ ಪುತ್ರಿ. ತಾವು ಎರಡು ವರ್ಷದವರಿದ್ದಾಗಲೇ 1949ರಲ್ಲಿ ತಂದೆಯನ್ನು ಕಳೆದುಕೊಂಡ ಸೂಚಿ ದೆಹಲಿ ಮತ್ತು ಆಕ್ಸ್‍ಫರ್ಡ್‍ನಲ್ಲಿ ಓದಿದ್ದರು. ಇದೇ ವೇಳೆ ಬ್ರಿಟನ್ ಸಂಜಾತ ಮೈಕೇಲ್ ಅರಿಸ್‍ರನ್ನು ಮದುವೆಯಾಗಿದ್ದ ಸೂಚಿಯವರಿಗೆ ಇಬ್ಬರು ಮಕ್ಕಳೂ ಇದ್ದಾರೆ. 1988ರಲ್ಲಿ ಬರ್ಮಾ ಹಿಂದಿರುಗಿದ ಸೂಚಿ ಅಂದಿನ ಮಿಲಿಟರಿ ಸರ್ವಾಧಿಕಾರವನ್ನು ವಿರೋಧಿಸಿ ಪ್ರಜಾಪ್ರಭುತ್ವಪರ ಶಾಂತಿಯುತ ಹೋರಾಟ ನಡೆಸಿದ್ದರು. 1988 ರಿಂದ 2010 ರವರೆಗಿನ 21 ವರ್ಷಗಳಲ್ಲಿ 15 ವರ್ಷ ಸೂಚಿಯವರು ಗೃಹಬಂಧನದಲ್ಲಿ ಇದ್ದರು. ಪ್ರಜಾಪ್ರಭುತ್ವದ ಪರ ಅವರು ನಡೆಸಿದ ಶಾಂತಿಯುತ ಹೋರಾಟಕ್ಕಾಗಿ 1991 ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿತ್ತು.

2010, 2012, ಹಾಗೂ 2015 ರ ಹಲವು ಚುನಾವಣೆಗಳಲ್ಲಿ ಸೂಚಿಯವರ ನ್ಯಾಶನಲ್ ಲೀಗ್ ಆಫ್ ಡೆಮಾಕ್ರೆಸಿ (ಎನ್‍ಎಲ್‍ಡಿ) ಪ್ರಚಂಡ ಬಹುಮತ ಗಳಿಸಿತ್ತು. ಕಡೆಗೆ ಸೈನ್ಯವನ್ನು ಮಣಿಸಿ 2016 ರಲ್ಲಿ ಸೂಚಿಯವರು ಸ್ಟೇಟ್ ಕೌನ್ಸಿಲರ್ (ಪ್ರಧಾನಮಂತ್ರಿಗೆ ಸಮಾನ ಪದವಿ) ಆದರು. ಮ್ಯಾನ್ಮಾರ್‍ನ ಸಂವಿಧಾನ ವಿದೇಶಿ ಗಂಡ / ಹೆಂಡತಿ ಮತ್ತು ಮಕ್ಕಳನ್ನು ಹೊಂದಿದವರನ್ನು ಅಧ್ಯಕ್ಷ ಪದವಿಯಿಂದ ಅನರ್ಹಗೊಳಿಸಿತ್ತು. ಹೀಗಾಗಿ ತಮ್ಮ ಆಪ್ತ ವಿನ್ ಮಿಂಟ್ ರವರನ್ನು ಅಧ್ಯಕ್ಷರನ್ನಾಗಿಸಿ ಸ್ಟೇಟ್ ಕೌನ್ಸಿಲರ್ ಆಗಿದ್ದಾರೆ.

2016ರಿಂದ ದೇಶದಲ್ಲಿ ಹಲವಾರು ಬದಲಾವಣೆಗಳನ್ನು ಸೂಚಿ ತಂದಿದ್ದಾರೆ. ಆದರೆ ಸಂಸತ್ತಿನ ಶೇಕಡಾ 25 ರಷ್ಟು ಸದಸ್ಯಸ್ಥಾನ ಹಾಗೂ ದೇಶದ ಗೃಹ, ರಕ್ಷಣೆ ಮತ್ತು ಗಡಿ ಮಂತ್ರಿಸ್ಥಾನಗಳು ಈಗಲೂ ಸೈನ್ಯದ ಬಳಿಯೇ ಇವೆ. ರಾಖೀನ್ ಪ್ರಾಂತ್ಯದ ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರು 2017ರ ಆಗಸ್ಟ್‍ನಲ್ಲಿ ದಂಗೆ ಎದ್ದಿದ್ದರು. ಆಗ ಇವರನ್ನು ನಿರ್ದಯವಾಗಿ ಬಗ್ಗುಬಡಿದಿದ್ದ ಮ್ಯನ್ಮಾರ್ ಸೇನೆಯು ಅವರಲ್ಲಿ ಬಹಳಷ್ಟು ಜನರನ್ನು ದೇಶ ತೊರೆದು ಬಾಂಗ್ಲಾದೇಶ ಹಾಗೂ ಭಾರತಕ್ಕೆ ನಿರಾಶ್ರಿತರಾಗಿ ಹೋಗಲು ಒತ್ತಾಯ ಹೇರಿತ್ತು. ರೊಹಿಂಗ್ಯಾ ಮುಸ್ಲಿಮರ ದಮನ ಹಾಗೂ ಈ ನಿರಾಶ್ರಿತರನ್ನು ವಾಪಸು ತೆಗೆದುಕೊಳ್ಳದಿರುವ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಸಂಘಟನೆಗಳು ಪ್ರತಿಭಟಿಸಿದ್ದವು. ಈ ಸಮಸ್ಯೆಗೆ ಮಾನವೀಯ ಪರಿಹಾರ ಹುಡುಕದ ಸೂಚಿಯವರ ನೊಬೆಲ್ ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಬೇಕೆಂದೂ ಹಲವರು ಅಭಿಪ್ರಾಯ ಪಟ್ಟಿದ್ದರು.

‘ಅತ್ತ ದರಿ ಇತ್ತ ಪುಲಿ’ ಎಂಬಂತೆ ಸೂಚಿಯವರ ಪರಿಸ್ಥಿತಿ ಕಠಿಣವಾಗಿದೆ. ಅಂತರರಾಷ್ಟ್ರೀಯ ಒತ್ತಾಯ ಒಂದೆಡೆಯಾದರೆ ದೇಶದ ಬೌದ್ಧಧರ್ಮೀಯರ ಹಾಗೂ ಸೈನ್ಯದ ವಿಶ್ವಾಸ ಉಳಿಸಿಕೊಳ್ಳುವ ಅನಿವಾರ್ಯತೆ ಇನ್ನೊಂದೆಡೆ. ಮಾನವೀಯತೆ ಮತ್ತು ರಾಷ್ಟ್ರೀಯತೆಯ ನಡುವಣ ಈ ಸಂಘರ್ಷವನ್ನು ಸೂಚಿಯವರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಮುಂದೆ ನೋಡಬೇಕಿದೆ.


ಗೂಗಲ್ ಸಿಇಓ ಸುಂದರ್ ಪಿಚೈಗೆ ಬಡ್ತಿ

2015ರಲ್ಲಿ ವಿಶ್ವದ ಪ್ರಸಿದ್ಧ ಬ್ರಾಂಡ್ ಮತ್ತು ಕಂಪನಿ ಗೂಗಲ್‍ನ ಸಿಇಓ ಆಗಿ ನೇಮಕವಾಗಿದ್ದ ಸುಂದರ್ ಪಿಚೈಗೆ ಬಡ್ತಿ ಸಿಕ್ಕಿದೆ. ಗೂಗಲ್ ಕಂಪನಿಯ ಪಿತೃ ಕಂಪನಿ ಆಲ್ಫಬೆಟ್ ಇಂಕ್‍ನ ಮುಖ್ಯಸ್ಥನಾಗಿಯೂ ಸುಂದರ್ ಪಿಚೈ ಆಯ್ಕೆಯಾಗಿದ್ದು ಇದುವರೆಗೆ ಈ ಸ್ಥಾನದಲ್ಲಿದ್ದ ಕಂಪನಿಯ ಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್‍ರವರು ತಾವೇ ಸ್ಥಾಪಿಸಿದ್ದ ಕಂಪನಿಯಿಂದ ನಿವೃತ್ತರಾಗಿದ್ದಾರೆ.

ಚೆನ್ನೈನಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರ್ ತಂದೆ ಮತ್ತು ಆಶುಲಿಪಿಕಾರ ತಾಯಿಯ ಮಗನಾಗಿ 1972 ರಲ್ಲಿ ಹುಟ್ಟಿದ್ದ ಸುಂದರ್ ಓದಿದ್ದು ಚೆನ್ನೈನ ಸಾಮಾನ್ಯ ಶಾಲೆಗಳಲ್ಲಿ. ನಂತರ ಐಐಟಿ ಖರಗ್‍ಪುರ ಮತ್ತು ಸ್ಟಾನ್‍ಫರ್ಡ್‍ನಲ್ಲಿ ಓದಿದ ಸುಂದರ್ ವಾರ್ಟನ್ ಬಿಸಿನೆಸ್ ಶಾಲೆಯಲ್ಲಿ ಎಂಬಿಎ ಪದವೀಧರರಾಗಿದ್ದರು. ಕೆಲವರ್ಷ ಮೆಕೆನ್ಸಿಯೆಂಬ ಸಲಹಾ ಕಂಪನಿಯಲ್ಲಿ ಕೆಲಸ ಮಾಡಿ 2004 ರಲ್ಲಿ ಗೂಗಲ್ ಸೇರಿದ್ದರು. ಜಿ ಮೇಲ್ ಮತ್ತು ಗೂಗಲ್ ಮ್ಯಾಪ್ಸ್ ಮೇಲೆಯೂ ಕೆಲಸ ಮಾಡಿ 2011ನಲ್ಲಿ ಗೂಗಲ್ ಕ್ರೋಮ್ ಅಂತರ್ಜಾಲ ಬ್ರೌಸರ್ ಅನ್ನು ಅಭಿವೃದ್ಧಿಪಡಿಸುವ ಮುಂದಾಳತ್ವ ವಹಿಸಿದ್ದರು.

ಕಳೆದ 15 ವರ್ಷಗಳಲ್ಲಿ ವಿಶ್ವದ ಅಗ್ರಮಾನ್ಯ ಕಂಪನಿಯ ಮುಖ್ಯಸ್ಥನಾಗಿರುವ ಪಿಚೈ ಸಾಧನೆ ಏಕಮಾತ್ರವೇನಲ್ಲ. ಈಗಾಗಲೇ ಮೈಕ್ರೋಸಾಫ್ಟ್ ಮುಖ್ಯಸ್ಥರಾಗಿ ಸತ್ಯ ನದೆಲ್ಲ, ಅಡೋಬ್‍ನ ಮುಖ್ಯಸ್ಥನಾಗಿ ಶಂತನು ನಾರಾಯಣ್, ನೊಕಿಯದಲ್ಲಿ ರಾಜೀವ್ ಸೂರಿ ಹಾಗೂ ಮಾಸ್ಟರ್ ಕಾರ್ಡ್ ಮುಖ್ಯಸ್ಥನಾಗಿ ಅಜಯ್ ಬಂಗ ಕೆಲಸ ನಿರ್ವಹಿಸುತ್ತಿದ್ದಾರೆ. ಕೇವಲ ಅರ್ಹತೆ ಮತ್ತು ದುಡಿಮೆಯ ಆಧಾರದ ಮೇಲೆ ಇವರು ಅಮೆರಿಕದ ದೈತ್ಯ ಕಂಪನಿಗಳ ಮುಖ್ಯಸ್ಥರಾದರೆ ಇಂತಹಾ ಯಶಸ್ಸಿನ ಕಥೆಗಳು ಭಾರತದಲ್ಲಿ ಏಕೆ ಕಷ್ಟಸಾಧ್ಯವಾಗಿದೆ ಎಂದು ನಾವು ಮತ್ತೊಮ್ಮೆ ಕೇಳಿಕೊಳ್ಳಬೇಕಿದೆ.


ಪರ್ವೇಜ್ ಮುಷರಫ್‍ಗೆ ಮರಣದಂಡನೆ

ಸಂವಿಧಾನವನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಂಡ ಕಾರಣಕ್ಕೆ ಪಾಕಿಸ್ತಾನದ ನ್ಯಾಯಾಲಯವು ಹಿಂದಿನ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರನ್ನು ಪರಮೋಚ್ಛ ದೇಶದ್ರೋಹದ ಆರೋಪದಲ್ಲಿ ದೋಷಿಯೆಂದು ತೀರ್ಪು ನೀಡಿದೆ. 2014 ರಿಂದ ನಡೆದ ಈ ಪ್ರಕರಣದಲ್ಲಿ ಇದೀಗ ಮುಷರಫ್ ಅವರಿಗೆ ಮರಣದಂಡನೆ ಶಿಕ್ಷೆಯನ್ನೂ ನೀಡಲಾಗಿದೆ. ಮೃತ್ಯುದಂಡ ಶಿಕ್ಷೆಯ ಮೊದಲು ದೋಷಿಯು ಸಹಜ ಮರಣ ಹೊಂದಿದರೆ ಅವರ ಮೃತದೇಹವನ್ನು ದರದರನೆ ಎಳೆದೊಯ್ದು ಪಾಕಿಸ್ತಾನ ಸಂಸತ್ತಿನ ಎದುರಿನ ಡಿ-ಚೌಕದಲ್ಲಿ ಮೂರು ದಿನಗಳ ಕಾಲ ನೇತು ಹಾಕಬೇಕೆಂದೂ ನ್ಯಾಯಾಲಯ ಆದೇಶಿಸಿದೆ.

1999 ರ ಕ್ಷಿಪ್ರಕ್ರಾಂತಿಯಲ್ಲಿ ಅಂದಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಪದಚ್ಯುತಗೊಳಿಸಿ ಪಾಕ್ ಸೈನ್ಯದ ಜನರಲ್ ಪರ್ವೇಜ್ ಮುಷರಫ್ ದೇಶದ ಚುಕ್ಕಾಣಿ ಹಿಡಿದಿದ್ದರು. ನಂತರದಲ್ಲಿ ಪ್ರಜಾತಾಂತ್ರಿಕ ಚುನಾವಣೆ ಸೋಗಿನಲ್ಲಿ ಅಧ್ಯಕ್ಷರಾಗಿ ಚುನಾಯಿತರಾಗಿ ಮುಷರಫ್ 2008 ರವರೆಗೆ ಮುಂದುವರೆದಿದ್ದರು. 2013ರಲ್ಲಿ ಮತ್ತೆ ಪ್ರಧಾನಿಯಗಿ ಆಯ್ಕೆಯಾಗಿದ್ದ ನವಾಜ್ ಷರೀಫ್ 2014ರಲ್ಲಿ ಮುಷರಫ್ ಮೇಲೆ ಈ ಪರಮೋಚ್ಛ ದೇಶದ್ರೋಹದ ಮೊಕದ್ದಮೆ ಹೂಡಿದ್ದರು.

76 ವರ್ಷದ ಮುಷರಫ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುವ ಹೆಸರಿನಲ್ಲಿ ಸದ್ಯಕ್ಕೆ ದುಬೈನಲ್ಲಿ ನೆಲೆಸಿದ್ದರೆ. ಈ ತೀರ್ಪು ನೀಡುವ ಮೊದಲು ತನ್ನ ವಿಚಾರಣೆಯೇ ಆಗಿಲ್ಲವೆಂದೂ ಅವರು ಹೇಳಿದ್ದರೆ. ಈ ತೀರ್ಪಿನಂತೆ ಮುಷರಫ್ ಅವರಿಗೆ ಶಿಕ್ಷೆಯೇನೂ ಆಗದಿದ್ದರೂ ನ್ಯಾಯಾಲಯದ ಈ ತೀರ್ಮಾನದಿಂದ ಪಾಕಿಸ್ತಾನ ಸೈನ್ಯ ವಿಚಲಿತರಾದಂತೆ ಕಾಣುತ್ತಿದೆ.


ಬ್ರಟನ್‍ನಲ್ಲಿ ಅಚ್ಚರಿಯ ಚುನಾವಣಾ ಫಲಿತಾಂಶ: ಬ್ರೆಕ್ಸಿಟ್‍ಗೆ ರಂಗಸಜ್ಜು

ಬ್ರೆಕ್ಸಿಟ್ ಪರವಾಗಿ ನಿರ್ಣಾಯಕ ಬಹುಮತ ಪಡೆಯಲಾಗದ ಕಾರಣಕ್ಕೆ ಬ್ರಿಟಿಷ್ ಸಂಸತ್ತನ್ನು ವಿಸರ್ಜಿಸಿ ಮಧ್ಯಾವಧಿ ಚುನಾವಣೆ ಎಡುರಿಸಿದ್ದ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಚಂಡ ಜಯಗಳಿಸಿದ್ದಾರೆ. ತಮ್ಮ ಕನ್ಸರ್ವೇಟಿವ್ ಪಕ್ಷಕ್ಕೆ ಬಹುಮತ ತಂದುಕೊಡುವುದೊಂದಿಗೆ ಮಾರ್ಗರೆಟ್ ಥ್ಯಾಚರ್ ನಂತರದಲ್ಲಿ ಪಕ್ಷಕ್ಕೆ ಈ ಮಟ್ಟದ ಜನಮನ್ನಣೆ ಗಳಿಸಿಕೊಟ್ಟಿದ್ದಾರೆ.

ಬಹುತೇಕ ಬ್ರೆಕ್ಸಿಟ್ ವಿವಾದದ ಹಿನ್ನೆಲೆಯಲ್ಲಿಯೇ ಆದ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ‘ಗೆಟ್ ಇಟ್ ಡನ್’ ಎಂಬ ಸರಳ ಘೋಷಣೆಯೊಂದಿಗೆ ಕಣಕ್ಕೆ ಧುಮುಕಿದ್ದರು. ಸಂಸತ್ತಿನ 650 ಸ್ಥಾನಗಳಲ್ಲಿ 365 ಸ್ಥಾನ ಗಳಿಸಿದ್ದಲ್ಲದೆ ಎದುರಾಳಿ ಲೇಬರ್ ಪಕ್ಷವನ್ನು ಕೇವಲ 202 ಸ್ಥಾನಕ್ಕೆ ಇಳಿಸಿದ್ದಾರೆ. ಪ್ರತ್ಯೇಕ ಸ್ಕಾಟ್‍ಲ್ಯಾಂಡ್‍ಗಾಗಿ ಚಳುವಳಿ ನಡೆಸುತ್ತಿರುವ ಸ್ಕಾಟಿಷ್ ನ್ಯಾಶನಲ್ ಪಾರ್ಟಿ ಸ್ಕಾಟ್‍ಲ್ಯಾಂಡ್ ಭಾಗದಲ್ಲಿ ಇದ್ದ 59 ಸ್ಥಾನಗಳಲ್ಲಿ 50 ಸ್ಥಾನ ಗಳಿಸಿ ಮತ್ತೊಮ್ಮೆ ಜನಮತಗಣನೆಗೆ (ರೆಫರೆಂಡಮ್) ಒತ್ತಾಯಿಸಿದ್ದರೆ. ಒಟ್ಟು ಮತದಾನದಲ್ಲಿ ಕೇವಲ 12% ಪಡೆದ ಲಿಬರಲ್ ಡೆಮಾಕ್ರೆಟಿಕ್ ಪಕ್ಷ ಕೇವಲ 12 ಸ್ಥಾನಗಳನ್ನು ಗಳಿಸಿದೆ.

ಚುವಾವಣೆಯ ನಂತರ ಬೋರಿಸ್ ಜಾನ್ಸನ್ ಗಟ್ಟಿನಾಯಕನಾಗಿ ಹೊರಹೊಮ್ಮಿದ್ದು 2020ರ ಜನವರಿ 31ರೊಳಗೆ ಯೂರೋಪಿಯನ್ ಯೂನಿಯನ್‍ನಿಂದ ಯುಕೆ ಹೊರಗೆ ಬರುವ ಪ್ರಕ್ರಿಯೆ ಮುಗಿಸುವಂತೆ ಕಾಣುತ್ತಿದೆ. ಇದುವರೆಗೆ ಲೇಬರ್ ಪಕ್ಷದ ನಾಯಕರಾಗಿದ್ದ ಎಡಪಂಥೀಯ ಜೆರೆಮಿ ಕಾರ್ಬೈನ್‍ರವರ ಕಾಲ ಬಹುತೇಕ ಮುಗಿದು ಪಕ್ಷದಲ್ಲಿ ಹೊಸ ನಾಯಕತ್ವಕ್ಕೆ ನಾಂದಿ ಹಾಡಿದೆ.

Leave a Reply

Your email address will not be published.