ವಿಶ್ವ ವಿದ್ಯಮಾನ

-ಪುರುಶೋತ್ತಮ ಆಲದಹಳ್ಳಿ

ಇರಾನ್ ಯುದ್ಧಕ್ಕೆ ಕಾಲು ಕೆರೆದ ಡಾನಲ್ಡ್ ಟ್ರಂಪ್

ಇರಾನಿನ ಇಸ್ಲಾಮಿಕ್ ರೆವೆಲ್ಯೂಶನರಿ ಗಾಡ್ರ್ಸ್‍ನ ಮುಂಚೂಣಿ ಸೈನ್ಯ ‘ಖುದ್ಸ್’ನ ಜನರಲ್ ಖಾಸಿಮ್ ಸುಲೇಮಾನಿಯವರನ್ನು ಹಾಡುಹಗಲೇ ಸಂಹರಿಸಿ ಅಮೆರಿಕ ಇರಾನ್‍ನ ಮೇಲೆ ತಾನು ಯಾವುದೇ ಸಮಯದಲ್ಲಿ ಯುದ್ಧಕ್ಕೆ ತಯ್ಯಾರು ಎಂದು ಘೋಷಿಸಿಕೊಂಡಿದೆ. ಇರಾಖ್‍ನ ಬಾಗ್ದಾದ್ ಬಳಿಯಲ್ಲಿ ತನ್ನ ಅಂಗರಕ್ಷಕರ ಜೊತೆ ವಾಹನದಲ್ಲಿ ಸಂಚರಿಸುತ್ತಿದ್ದ ಸುಲೇಮಾನಿಯನ್ನು ಅಮೆರಿಕದ ಡ್ರೋನ್ ಕ್ಷಿಪಣಿ ಪಡೆ ದಾಳಿ ಮಾಡಿ ಹೊಡೆದುರುಳಿಸಿದೆ. ಹೊಸವರ್ಷದ ಜನವರಿ 3 ರಂದು ನಡೆದ ಈ ಘಟನೆಯು ಇಡೀ ಮಧ್ಯಪ್ರಾಚ್ಯ ಪರಿಸರವನ್ನು ಸಮರ ಸನ್ನದ್ಧಿಗೆ ದೂಡಿದೆ.

ಸುಲೇಮಾನ್ ಹತ್ಯೆಗೆ ಡಾನಲ್ಡ್ ಟ್ರಂಪ್ ಹಲವಾರು ಕಾರಣಗಳನ್ನು ನೀಡಿದ್ದಾರೆ. ದೆಹಲಿಯಲ್ಲಿ 2012 ರಲ್ಲಿ ನಡೆದ ಇಸ್ರೇಲಿಯನ್ನರ ಮೇಲಿನ ಕಾರ್‍ಬಾಂಬ್ ಘಟನೆ ಹಾಗೂ ಲಂಡನ್ ಬಾಂಬ್ ದಾಳಿಗೆ ಸುಲೇಮಾನಿ ಕಾರಣರೆಂದು ಹೇಳಿದ್ದಾರೆ. ಸುಲೇಮಾನ್‍ನನ್ನು ಹತ್ಯೆ ಮಾಡಿ ಘಟಿಸಬಹುದಾಗಿದ್ದ ಯುದ್ಧವೊಂದನ್ನು ತಾನು ತಡೆದಿದ್ದೇನೆ ಎಂದು ಕೂಡಾ ಟ್ರಂಪ್ ಹೇಳಿದ್ದಾರೆ. ಸ್ಥಳೀಯ ಶಿಯಾ ಉಗ್ರರ ಜೊತೆ ಸೇರಿಕೊಂಡು ಇರಾಖ್‍ನಲ್ಲಿ ತನ್ನ ಸೈನಿಕರ ಮೇಲೆ ಸುಲೇಮಾನಿ ಅಘೋಷಿತ ಸಮರ ಸಾರಿದ್ದರು ಎಂದು ಹೇಳಿದ್ದಾರೆ.

ಖಾಸಿಮ್ ಸುಲೇಮಾನಿ ಇರಾನಿನ ಪರಮೋಚ್ಚ ನಾಯಕ ಅಲಿ ಖಮೇನಿಯವರಿಗೆ ಖಾಸಾ ಶಿಷ್ಯನಾಗಿದ್ದ. ಸಾಮಾನ್ಯ ಕುಟುಂಬವೊಂದರಲ್ಲಿ ಹುಟ್ಟಿದ್ದರೂ ಇರಾನ್‍ನ ಅತ್ಯುನ್ನತ ಜನರಲ್ ಪದವಿಗೆ ಏರುವಷ್ಟು ಮಟ್ಟಿಗೆ ಯುದ್ಧ ಪ್ರವೀಣತೆ ಹಾಗೂ ನಾಯಿನಿಷ್ಠೆ ತೋರಿದ್ದ. ಕಳೆದೆರೆಡು ದಶಕಗಳಲ್ಲಿ ‘ಖುದ್ಸ್’ ಮುಂಚೂಣಿ ಸೈನ್ಯದ ನಾಯಕತ್ವ ವಹಿಸಿ ಇರಾನ್‍ನ ಪರವಾಗಿ

ಬೇರೆ ರಾಷ್ಟ್ರಗಳಲ್ಲಿ ಹತ್ಯೆ, ಬಂಡುಕೋರತನ ಹಾಗೂ ದಾಳಿ ನಡಸಿದ್ದ. ಸುಲೇಮಾನಿಯ ಶವಯಾತ್ರೆಯ ಸಂದರ್ಭದಲ್ಲಿ ಮಿಲಿಯಾಂತರ ಜನರು ಭಾಗವಹಿಸಿ ನೂಕುನುಗ್ಗಲಿನ ಕಾಲ್ತುಳಿತಕ್ಕೆ ಸುಮಾರು ಐವತ್ತಕ್ಕೂ ಹೆಚ್ಚು ಜನರು ಸತ್ತಿದ್ದಲ್ಲದೆ ಇನ್ನೂರಕ್ಕೂ ಹೆಚ್ಚು ಜನ ಗಾಯಗೊಂಡರು. ಸುಲೇಮಾನಿ ಅಂತ್ಯಸಂಸ್ಕಾರಕ್ಕೂ ಮುಂಚೆಯೇ ಜನವರಿ ಏಳರಂದು ಇರಾನ್ ಸೇನಾಪಡೆ ಇರಾಖ್‍ನಲ್ಲಿಯ ಅಮೆರಿಕಾ ಸೇನಾಪಡೆಯ ಮೇಲೆ ರಾಕೆಟ್ ದಾಳಿ ಮಾಡಿತು. ಈ ದಾಳಿಯಿಂದ ಸುಲೇಮಾನಿ ಹತ್ಯೆಗೆ ಪ್ರತೀಕಾರ ತೀರಿಸಿದೆನೆಂದು ಇರಾನ್ ಹೇಳಿಕೊಂಡರೂ ತನ್ನ ಯಾವುದೇ ಸೈನಿಕರು ಹತರಾಗಿಲ್ಲವೆಂದು ಅಮೆರಿಕ ಬಿಂಬಿಸಿದೆ.

ಇರಾನ್, ಇರಾಖ್, ಸೌದಿ ಅರೇಬಿಯಾ, ಇಸ್ರೇಲ್, ಸಿರಿಯಾ ಹಾಗೂ ರಷ್ಯಾ ದೇಶಗಳನ್ನು ಯುದ್ಧದ ಹೊಸ್ತಿಲಿಗೆ ತಂದು ನಿಲ್ಲಿಸಿದ್ದ ಈ ಘಟನೆ ನಂತರದಲ್ಲಿ ಎರಡೂ ಪಕ್ಷಗಳು ತಣ್ಣಗಾಗುವುದರೊಂದಿಗೆ ಶಮನಗೊಂಡಿದೆ. ಅಮೆರಿಕಾದ ಕಾಂಗ್ರೆಸ್ ಯುದ್ಧ ಘೋಷಿಸುವ ಅಧಿಕಾರವನ್ನೇ ಅಧ್ಯಕ್ಷ ಟ್ರಂಪ್‍ರವರಿಂದ ಹಿಂದೆಗೆದುಕೊಳ್ಳುವುದೆಂದು ಹೇಳುವ ಜೊತೆಯಲ್ಲಿ ಇರಾನ್ ತನ್ನ ಕ್ಷೀಣ ಸೈನಿಕಶಕ್ತಿಯನ್ನು ಅರಿತು ಬೇರಾವುದೇ ಗಂಭೀರ ಪ್ರತೀಕಾರ ಕ್ರಮಕ್ಕೆ ಕೈ ಹಾಕದಂತೆ ಮಾಡಿದೆ.

ಅದರೂ ಸುಲೇಮಾನಿ ಹತ್ಯೆಯ ಈ ಘಟನೆ ಮಧ್ಯಪ್ರಾಚ್ಯದ ಹುಲ್ಲುಬಣಕ್ಕೆ ಕಡ್ಡಿಗೀರುವ ಕೆಲಸ ಮಾಡಿದೆಯೆಂದು ಹೇಳಬಹುದು. ಅಮೆರಿಕವು ಇರಾನ್‍ನ ಶಕ್ತಿ ಪರೀಕ್ಷೆ ಮಾಡುವ ಕೆಲಸ ಮಾಡಿದರೆ ಪಕ್ಕದ ಇರಾಖ್‍ನಿಂದ ಅಮೆರಿಕದ ಸೈನ್ಯವನ್ನು ಹೊರಗಿಡಲು ಹಾಕಿದ ಇರಾನ್ ಹುನ್ನಾರ ಬಟಾಬಯಲಾದಂತಾಗಿದೆ.


ರಷ್ಯಾ ಪ್ರಜಾಪ್ರಭುತ್ವದ ಕಣ್ಕಟ್ಟಿಗೆ ಗಾಜು ಬದಲಿಸಿದ ಪುಟಿನ

ಭಾರತ ಮತ್ತು ಚೀನಾ ದೇಶಗಳು ಜನಸಂಖ್ಯಾ ಸ್ಪೋಟದ ಸಮಸ್ಯೆ ಎದುರಿಸುತ್ತಿದ್ದರೆ ರಷ್ಯಾ ಜನಸಂಖ್ಯಾ ಕುಸಿತದ ಸಮಸ್ಯೆ ಎದುರಿಸುತ್ತಿದೆ. ಪ್ರತಿವರ್ಷವೂ ರಷ್ಯಾದ ಜನಸಂಖ್ಯೆ ಹತ್ತುಲಕ್ಷದಷ್ಟು ಕಡಿಮೆಯಾಗುತ್ತಿದ್ದು ದೇಶದ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸರ್ವಾಧಿಕಾರಿ ಆಡಳಿತವು ದೇಶದಲ್ಲಿ ಯಾವುದೇ ಆಶಾವಾದಿತನಕ್ಕೆ ಅವಕಾಶ ನೀಡದೆ ನಿರಾಸೆಯ ಛಾಯೆ ಮೂಡಿಸಿದೆ.

ಹಾಗೆಂದ ಮಾತ್ರಕ್ಕೆ ರಷ್ಯಾದ ವ್ಲಾದಿಮಿರ್ ಪುಟಿನ್ ಜನಪ್ರಿಯತೆ ಕುಗ್ಗಿದೆ ಎಂದೇನಿಲ್ಲ. 90ರ ದಶಕದ ಮಧ್ಯಭಾಗದಿಂದಲೂ ರಷ್ಯಾದ ಅನಧಿಕೃತ ದೊರೆಯಾಗಿರುವ ಪುಟಿನ್ ವಿಶ್ವದ ಅತ್ಯಂತ ಜನಪ್ರಿಯ ಸರ್ವಾಧಿಕಾರಿಯಾಗಿದ್ದಾರೆ. ಪುಟಿನ್ ಹೊರತಾಗಿ ಯಾರೂ ರಷ್ಯಾ ದೇಶವನ್ನು ಆಳಲಾರರು ಎಂಬಷ್ಟರ ಮಟ್ಟಿಗೆ ರಷ್ಯಾದ ಜನತೆ ಪುಟಿನ್ ಮೇಲೆ ತಮ್ಮ ಭರವಸೆ ಮುಂದುವರೆಸಿದ್ದಾರೆ. ಭರವಸೆಗಳ ಈ ಭಾರದಲ್ಲಿ ಇದೀಗ ಪುಟಿನ್ ತಮ್ಮ ಮಂತ್ರಿಮಂಡಲ ಪುನರ್‍ರಚಿಸಲು ಮುಂದಾಗಿದ್ದಾರೆ. ಇದರಂತೆ ಇದುವರೆಗೆ ಪ್ರಧಾನಿಯಾಗಿದ್ದ ಮೆದ್ವೆದೇವ್ ಅವರು ದೇಶದ ಸೆಕ್ಯುರಿಟಿ ಕೌನ್ಸಿಲ್ ಉಪಾಧ್ಯಕ್ಷರಾದರೆ ಇದುವರೆಗೆ ವಿತ್ತಮಂತ್ರಿಯಾಗಿದ್ದ ಮಿಖಾಯಿಲ್ ಮಿಶುಸ್ಟಿನ್‍ರವರು ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ರಷ್ಯಾದ ಸಂಸತ್ತು ಡ್ಯೂಮಾಗೆ ಕೂಡಾ ಹೆಚ್ಚು ಅಧಿಕಾರವನ್ನು ಪುಟಿನ್ ನೀಡಿ ಸಂವಿಧಾನಕ್ಕೆ ತಿದ್ದುಪಡಿಯನ್ನೇ ತಂದಿದ್ದಾರೆ.

ಈ ಎಲ್ಲಾ ತೋರಿಕೆಯ ಬದಲಾವಣೆಗಳ ನಡುವೆ ಪುಟಿನ್‍ರವರ ಸರ್ವಾಧಿಕಾರ 2020ರ ದಶಕದಲ್ಲಿ ಅಬಾಧಿತವಾಗಿ ನಡೆಯಲಿದೆ. ಅಮೆರಿಕದ ಆರ್ಥಿಕ ದಿಗ್ಬಂಧನ ಹಾಗೂ ಯೂರೋಪಿನ ರಾಷ್ಟ್ರಗಳ ಪ್ರತಿರೋಧದ ನಡುವೆಯೂ ಪುಟಿನ್ ರಷ್ಯಾದ ಸೈನಿಕ ಶಕ್ತಿಯನ್ನು ಗಟ್ಟಿಗೊಳಿಸಿಲು ವಿಶ್ವದ ಉಳಿದ ದೇಶಗಳ ಜೊತೆಗೆ ಬಾಂಧವ್ಯ ವೃದ್ಧಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜನಸಂಖ್ಯಾ ಕುಸಿತ ತಡೆಗಟ್ಟಲು ಎಲ್ಲಾ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ, ಗರ್ಭಿಣಿತಾಯಂದಿ ರಿಗೆ ಭತ್ಯ ಹಾಗೂ ಬಡ ಕುಟುಂಬಗಳಿಗೆ ಸಹಾಯಧನ ನೀಡುವ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಅಮೆರಿಕದ ಡಾಲರ್ ಲೆಕ್ಕದಲ್ಲಿ 7.5 ಬಿಲಿಯನ್‍ಗಳಷ್ಟು (ಸುಮಾರು ರೂ.55,000 ಕೋಟಿಗಳಷ್ಟು) ಹೆಚ್ಚಿನ ಅನುದಾನವನ್ನು ಮೀಸಲಾಗಿಟ್ಟಿದ್ದಾರೆ.

ಪುಟಿನ್‍ರವರ ಮುಂದೆ ದೇಶದ ಆರ್ಥಿಕ-ಸೈನಿಕ ಶಕ್ತಿಯನ್ನು ಬಲಪಡಿಸುವ ಸವಾಲು ಇದ್ದೇ ಇದೆ. ಆದರೆ ಇದಕ್ಕಿಂತ ಮುಖ್ಯವಾಗಿ ದೇಶದ ಮನೋಬಲ ಹಾಗೂ ಮಾನಸಿಕ ಆರೋಗ್ಯವನ್ನು ಬಲಪಡಿಸುವ ಸವಾಲು ಹೆಚ್ಚು ಕಠಿಣವಾಗಿ ಕಾಣುತ್ತಿದೆ.


ಆಸ್ಟ್ರೇಲಿಯಾ ಕಂಗೆಡಿಸಿದ ಕಾಳ್ಗಿಚ್ಚು 

ಇಲ್ಲಿ ನಮಗೆ ಚಳಿಗಾಲವಿದ್ದರೆ ಆಸ್ಟ್ರೇಲಿಯಾದಲ್ಲಿ ಬೇಸಗೆಯ ಬೇಗೆ. ಕಳೆದ ಮೂರು ವರ್ಷಗಳಿಂದ ಕಾಡಿದ ಬರದಲ್ಲಿ ಆಸ್ಟ್ರೇಲಿಯಾ ಕಾದು ಬೆಂಗಾಡಾಗಿದೆ. ಈ ವರ್ಷದ ಬೇಸಗೆಯು ಅತ್ಯಂತ ಭೀಕರವಾಗಿದ್ದು ದೇಶದ ದಕ್ಷಿಣ ಮತ್ತು ಪೂರ್ವ ಪ್ರಾಂತ್ಯದಲ್ಲಿ ನೂರಾರು ಕಾಳ್ಗಿಚ್ಚಿಗೆ ಕಾರಣವಾಗಿದೆ. ಇದುವರೆಗಿನ ಅಂಕಿ ಅಂಶಗಳಲ್ಲಿ 29 ಜನರು ಸತ್ತು 2,500 ಜನರು ತಮ್ಮ ಮನೆಯು ಬೆಂಕಿಯಲ್ಲಿ ಭಸ್ಮವಾಗುವುದನ್ನು ಕಾಣಬೇಕಾಗಿದೆ. ಇದಕ್ಕೂ ಮುಖ್ಯವಾಗಿ ನ್ಯೂ ಸೌಥ್ ವೇಲ್ಸ್ ಹಾಗೂ ಕ್ವೀನ್ಸ್‍ಲ್ಯಾಂಡ್ ಪ್ರಾಂತ್ಯಗಳಲ್ಲಿ ನೂರು ಕೋಟಿಗೂ ಮಿಗಿಲಾಗಿ ವನ್ಯಜೀವಿಗಳು ಬೆಂಕಿಗೆ ಆಹುತಿಯಾಗಿವೆ. ಕರ್ನಾಟಕದ ಅರ್ಧ ಭಾಗದಷ್ಟು ಆಸ್ಟ್ರೇಲಿಯಾದ ಭೂಮಿ ಬೆಂಕಿಯಲ್ಲಿ ಕರಕಲಾಗಿದೆ. ಸಿಡ್ನಿ, ಕ್ಯಾನ್‍ಬೆರಾ ಹಾಗೂ ಮೆಲ್‍ಬೋರ್ನ್ ನಗರಗಳ ಮೇಲೆ ಹೊಗೆಯ ಕಾರ್ಮೋಡ ಬೀಸುತ್ತಿದೆ. ಇದು ಹೀಗೆಯೇ ಮುಂದುವರೆದರೆ ಆಸ್ಟ್ರೇಲಿಯಾದ ಬಹುಭಾಗ ಜನವಸತಿಗೆ ದುರ್ಗಮವಾಗುವಷ್ಟರ ಮಟ್ಟಿಗೆ ಉಷ್ಣಪ್ರದೇಶವಾಗಲಿದೆ.

ಆಸ್ಟ್ರೇಲಿಯಾದ ಸರ್ಕಾರ ಕಾಡಿನ ಬೆಂಕಿಯನ್ನು ಹತೋಟಿಗೆ ತರಲು ಇನ್ನಿಲ್ಲದ ಸಾಹಸ ಪಡುತ್ತಿದೆ. ಗುಡ್ಡಗಾಡುಗಳಲ್ಲಿ ಮೇವಿನ ಕೊರತೆಯಿಂದಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಕಾಡುಪ್ರಾಣಿಗಳು ವಲಸೆ ಹೋಗುವುದನ್ನು ತಡೆಯಲಾಗುತ್ತಿದೆ. ದೇಶದ ಒಂಟೆ ಸಂತತಿಯಲ್ಲಿ 20,000 ಕಾಡುಒಂಟೆಗಳನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿದೆ. ಇಲ್ಲವಾದಲ್ಲಿ ಇವು ಜನವಸತಿಯ ಜಾಗಗಳ ಮೇಲೆ ದಾಳಿಯಿಡುವ ಸಂಭವವಿದೆ. ದೇಶದೆಲ್ಲೆಡೆ ಕಾಂಗರೂ, ಕ್ವಾಲ ಮತ್ತಿತರ ಪ್ರಾಣಿಗಳ ರಕ್ಷಣೆಗೆ ಸರ್ಕಾರ ಹೋರಾಡುತ್ತಿದೆ. ಜನವರಿ ಮಧ್ಯಭಾಗದಲ್ಲಿ ಕೆಲಪ್ರದೇಶಗಳಲ್ಲಿ ಸುರಿದ ಮಳೆ ಉಪಯುಕ್ತವಾದರೂ ಬೆಂಕಿಯ ಕೆನ್ನಾಲಗೆಯನ್ನು ನಂದಿಸಲು ಇನ್ನೂ ವರುಣದೇವನ ಕೃಪೆ ಬೇಕಾಗಿದೆ.


ಮಲೇಶಿಯಾವನ್ನು ರಾಜತಾಂತ್ರಿಕ ಬಿಕ್ಕಟ್ಟಿಗೆ ದೂಡಿದ ಮೂರ್ಖ ಮಹಾಥಿರ್

ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಯಾರೂ ಉಲ್ಲಂಘನೆ ಮಾಡಬಾರದೆನ್ನುವ ಅಲಿಖಿತ ನಿಯಮವೊಂದಿದೆ. ಯಾವ ರಾಷ್ಟ್ರದ ಸರ್ಕಾರವೂ ಬೇರೊಂದು ರಾಷ್ಟ್ರದ ಆಂತರಿಕ ರಾಜಕೀಯ ವಿಷಯಗಳ ಮೇಲೆ ಯಾವೊಂದು ಟೀಕೆ-ಟಿಪ್ಪಣಿ ಮಾಡುವುದಿಲ್ಲ. ಹಾಗೇನಾದರೂ ಮಾಡಿದರೆ ಅದನ್ನು ಜಯಿಸಿಕೊಳ್ಳುವ ಆರ್ಥಿಕ ಬಲಾಢ್ಯತೆ ಇರಬೇಕು ಅಥವಾ ತಮ್ಮ ದೇಶದ ಹಿತವನ್ನು ಬಲಿಕೊಡುವ ಬಗ್ಗೆ ಯಾವುದೇ ಹಿಂಜರಿಕೆ ಇರಬಾರದು.

ಇಂತಹುದೇ ಸಮಸ್ಯೆಯನ್ನು ಮಲೇಶಿಯಾದ ಅಧ್ಯಕ್ಷ 94 ವರ್ಷದ ಮಹಾಥಿರ್ ಮೊಹಮ್ಮದ್ ಮಾಡಿದ್ದಾರೆ. ಮೊದಲು ಕಾಶ್ಮೀರದ 370ನೇ ವಿಧಿಯನ್ನು ರದ್ದು ಮಾಡಿದ ಬಗ್ಗೆ ಟೀಕೆ ಮಾಡಿದರೆ ಈಗ ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆಯೂ ಟಿಪ್ಪಣಿ ಮಾಡಿದ್ದಾರೆ. ಭಾರತವು ಕಾಶ್ಮೀರಿಗರ ತಾಯಿನಾಡಿನ ಮೇಲೆ ದಾಳಿಯಿಟ್ಟಿದೆಯೆಂದು ಹಿಂದೆ ಹೇಳಿದ್ದರೆ ಇದೀಗ ಧರ್ಮದ ಆಧಾರದಲ್ಲಿ ನೆರೆಹೊರೆಯ ದೇಶಗಳ ರಾಜಕೀಯ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯಿದೆಯನ್ನು ಟೀಕಿಸಿದ್ದಾರೆ. ಸಹಜವಾಗಿ ಭಾರತ ಸರ್ಕಾರ ಇದನ್ನು ಕೇಳಿಸಿಕೊಂಡು ಸುಮ್ಮನಾಗಿಲ್ಲ. ರಾಜತಾಂತ್ರಿಕ ಮೂಲಗಳಿಂದ ದೇಶದ ಆಂತರಿಕ ವಿಷಯಗಳ ಮೇಲಿನ ಟೀಕೆಯನ್ನು ಖಂಡಿಸಿದೆ ಹಾಗೂ ಮಲೇಶಿಯಾದ ಅಧ್ಯಕ್ಷರಿಂದ ಕ್ಷಮಾಪಣೆ ಬಯಸಿದೆ.

ಭಾತರ ತನ್ನ ಅಡುಗೆ ಎಣ್ಣೆಯ ಬಹುತೇಕ ಪಾಲಿನ ತಾಳೆ ಎಣ್ಣೆಯನ್ನು (ಪಾಮ್ ಆಯಿಲ್) ಮಲೇಶಿಯಾದಿಂದ ಆಯಾತ ಮಾಡಿಕೊಳ್ಳುತ್ತಿತ್ತು. ಈ ಆಯಾತದ ಮೇಲೆ ಇದೀಗ ಭಾರತ ಸರ್ಕಾರ ನಿರ್ಬಂಧ ಹೇರಿದೆ. 2019 ರಲ್ಲಿ 4.4 ಮಿಲಿಯನ್ ಟನ್‍ಗಳಷ್ಟಿದ್ದ ಈ ತಾಳೆ ಎಣ್ಣೆ ಆಯಾತವು 2020 ರ ವರ್ಷದಲ್ಲಿ ಒಂದು ಮಿಲಿಯನ್ ಟನ್‍ಗಳಿಗೂ ಕಡಿಮೆಯಾಗುವ ಸಾಧ್ಯತೆ ಇದೆ. ಮಲೇಶಿಯಾದ ಸಮೀಪಸ್ಪರ್ಧಿ ಇಂಡೋನೇಶಿಯಾದಿಂದ ಭಾರತ ಸರ್ಕಾರ ತಾಳೆ ಎಣ್ಣೆ ಬಯಸಿದೆ. ಈ ತಾಳೆ ಎಣ್ಣೆಯ ನಿರ್ಯಾತದ ಮೇಲೆಯೇ ನಿರ್ಭರವಾಗಿದ್ದ ಮಲೇಶಿಯಾ ಆರ್ಥಿಕತೆ ಇದೀಗ ತತ್ತರಿಸಿದೆ. ದೇಶದ ಜನ ತಮ್ಮ ಅಧ್ಯಕ್ಷನನ್ನು ‘ಮೂರ್ಖ ಮಹಾಥಿರ್’ ಎಂದು ಬಹಿರಂಗವಾಗಿ ಟೀಕಿಸುತ್ತಿದ್ದಾರೆ.

ಆದರೆ ಮೂರ್ಖ ಮಹಾಥಿರ್ ಕೇವಲ ಟೀಕಿಸಿ ಸುಮ್ಮನಾಗಿಲ್ಲ. ದೇಶದ ಆರ್ಥಿಕತೆಯ ಮೇಲಿನ ಪ್ರತಿಕೂಲ ಪರಿಣಾಮದ ನಡುವೆಯೂ ತಾವು ಬೇರೊಂದು ದೇಶದ ತಪ್ಪುಗಳನ್ನು ಹೆಸರಿಸಲೇ ಬೇಕಿದೆಯೆಂದು ಹೇಳಿಕೊಂಡಿದ್ದಾರೆ. ಜೊತೆಗೆ ಭಾರತದ ಪ್ರತೀಕಾರದ ಕ್ರಮಕ್ಕೆ ಎದುರೇಟು ನೀಡುವ ಶಕ್ತಿಯಿಲ್ಲವೆಂದೂ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಶಕ್ತಿಹೀನ ರಾಷ್ಟ್ರದ ಅಧ್ಯಕ್ಷನೊಬ್ಬ ಬೇರೊಂದು ದೇಶದ ಆಂತರಿಕ ರಾಜಕೀಯ ವಿಷಯದ ಮೇಲೆ ಟೀಕೆ-ಟಿಪ್ಪಣಿ ಮಾಡಬೇಕಾದ ಅಗತ್ಯವಾದರೂ ಏನಿತ್ತೆಂದು ಮಲೇಶಿಯಾದ ಜನತೆ ಕೇಳುತ್ತಿದ್ದಾರೆ. 

Leave a Reply

Your email address will not be published.