ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ಕೊರೊನಾ ವೈರಸ್‍ಗೆ ಚೀನಾ ತತ್ತರ

ಚೀನಾ ಸರ್ಕಾರದ ಅಧಿಕೃತ ಮೂಲಗಳಂತೆಯೇ ಫೆಬ್ರವರಿ 24 ರವರೆಗೆ ಕೊರೊನಾ ವೈರಸ್ ಕಾರಣದಿಂದ 2,592 ಜನ ಸತ್ತು 77,000ಕ್ಕೂ ಹೆಚ್ಚು ಜನ ಸೋಂಕಿಗೆ ಗುರಿಯಾಗಿದ್ದಾರೆ. ಚೀನಾ ಮಧ್ಯಭಾಗದ ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್‍ನಲ್ಲಿಯೇ ಬಹುತೇಕ ಜನ ಸೋಂಕಿಗೆ ಬಲಿಯಾಗಿದ್ದಾರೆ. ವುಹಾನ್ ನಗರ ಮತ್ತು ಹುಬೇ ಪ್ರಾಂತ್ಯದ ಎಲ್ಲೆಡೆ ಸಂಪೂರ್ಣ ಸಂಚಾರ ನಿಯಂತ್ರಣ ವಿಧಿಸಿ ಚೀನಾ ಸರ್ಕಾರವು ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಹರಸಾಹಸ ಮಾಡುತ್ತಿದೆ.

110 ಲಕ್ಷ ಜನರಿರುವ ವುಹಾನ್ ನಗರದ ಸುತ್ತ ರಕ್ಷಣಾ ಕವಚವನ್ನೇ ಕಟ್ಟಲಾಗಿದೆ. ಅನುಮತಿಯಿಲ್ಲದೆ ಯಾರೂ ಒಳಗೆ ಮತ್ತು ಹೊರಗೆ ಹೋಗುವಂತಿಲ್ಲ. ಭಾರತೀಯ ಸಂಜಾತ ನೂರಾರು ವಿದ್ಯಾರ್ಥಿಗಳು ಇದೇ ವುಹಾನ್ ನಗರದಲ್ಲಿ ವೈದ್ಯಕೀಯ ಶಿಕ್ಷಣದ ಜೊತೆಗೆ ಬೇರೆ ಹಲವು ತರಬೇತಿ ಪಡೆಯುತ್ತಿದ್ದರು. ಇವರಲ್ಲಿ ಬಹುತೇಕರನ್ನು ಭಾರತ ಸರ್ಕಾರ ಸ್ವದೇಶಕ್ಕೆ ಕರೆತಂದು ಪರೀಕ್ಷೆಗೆ ಒಳಪಡಿಸಿದೆ. ಇವರಾರಿಗೂ ಸೋಂಕು ತಗುಲಿಲ್ಲವಾದರೂ ರಕ್ಷಣಾತ್ಮಕವಾಗಿ ಹರಿಯಾಣದ ಐಟಿಬಿಪಿ ಸೈನಿಕ ಆಸ್ಪತ್ರೆಯಲ್ಲಿ ಇವರನ್ನು ದಿಗ್ಬಂಧನದಲ್ಲಿರಿಸಲಾಗಿತ್ತು. ಇವರನ್ನು ಇದೀಗ ಸೋಂಕು ರಹಿತರೆಂದು ಬಿಡುಗಡೆ ಮಾಡಲಾಗುತ್ತಿದೆ. ವುಹಾನ್ ನಗರದಲ್ಲಿನ ಕೆಲವು ಮತ್ತು ಜಪಾನ್‍ನ ಸಮುದ್ರ ತಟದಲ್ಲಿನ ಐಷಾರಾಮಿ ಹಡಗೊಂದರಲ್ಲಿ  170ಕ್ಕೂ ಹೆಚ್ಚು ಬಾರತೀಯರಿನ್ನೂ ಸ್ವದೇಶಕ್ಕೆ ಮರಳಬೇಕಿದೆ. ಜಪಾನ್ ಹಡಗಿನಲ್ಲಿದ್ದ ಐವರು ಭಾರತೀಯರಿಗೆ ಸೋಂಕು ತಗುಲಿದೆಯೆಂದು ವರದಿಯಾಗಿದೆ. ಈ ಹಿಂದೆ ಸೋಂಕು ತಗುಲಿಸಿಕೊಂಡಿದ್ದ ಮೂವರು ಭಾರತೀಯರು ಅಪಾಯದಿಂದ ಪಾರಾಗಿದ್ದಾರೆ.

ಕಾಡುಪ್ರಾಣಿಗಳನ್ನು ತಿನ್ನುವ ಚೀನೀಯರ ಆಹಾರ ಪದ್ಧತಿಯಿಂದ ಈ ಕೊರೊನಾ ವೈರಸ್ ಬಂದಿದೆಯೆಂದು ಹೇಳಲಾಗುತ್ತಿದೆ. ಆಹಾರಕ್ಕಾಗಿ ಸಾಕುವ ಕೋಳಿ-ಕುರಿಗಳ ಜೊತೆಯಲ್ಲಿ ಕಾಡುಬೆಕ್ಕು, ಬಾವಲಿ ಮತ್ತಿತರ ಪ್ರಾಣಿಗಳನ್ನು ಶೇಖರಿಸುವ, ಕಡಿಯುವ ಮತ್ತು ಮಾಂಸ ಸಂಸ್ಕರಿಸುವ ಚೀನೀಯರ ಹವ್ಯಾಸದಿಂದ ಈ ರೋಗ ಹಬ್ಬಿದೆ. 2019ರ ಡಿಸೆಂಬರ್‍ನಲ್ಲಿಯೇ ಈ ವೈರಸ್ ಮೊದಲು ಪತ್ತೆಯಾಗಿತ್ತು. ಚೀನಾ ಸರ್ಕಾರ ಈ ರೋಗವನ್ನು ಪರಿಣಾಮಕಾರಿಯಾಗಿ ತಡೆಯದೆ ರೋಗದ ಮಾಹಿತಿಯನ್ನೇ ಹತ್ತಿಕ್ಕಲು ಮಾಡಿದ ಪ್ರಯತ್ನಗಳಿಂದಾಗಿ ರೋಗ ಹುಬೇ ಪ್ರಾಂತ್ಯದಲ್ಲಿ ಅನಿಯಂತ್ರಿತವಾಗಿ ಹಬ್ಬಲು ಸಹಕಾರಿಯಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ನಂತರದ ದಿನಗಳಲ್ಲಿ ಚೀನಾ ಸರ್ಕಾರ ಇನ್ನಿಲ್ಲದ ಪ್ರಯತ್ನ ಮತ್ತು ಶಿಸ್ತಿನಿಂದ ರೋಗ ಹಬ್ಬುವುದನ್ನು ತಡೆಯಲು ಪ್ರಯತ್ನ ಪಟ್ಟಿದೆ. ಚೀನಾ ಸರ್ಕಾರದ ಯಶಸ್ಸಿನಲ್ಲಿ ರೋಗ ಹರಡುವುದನ್ನು ತಪ್ಪಬಯಸುವ ವಿಶ್ವದ ರಾಷ್ಟ್ರಗಳ ಬಯಕೆ ನಿರ್ಭರವಾಗಿದೆ.

ಕೋವಿಡ್-19 ಎಂದು ಕರೆಯಲಾಗುತ್ತಿರುವ ಈ ಸಾಂಕ್ರಾಮಿಕ ವೈರಾಣು ಈಗಾಗಲೇ 25ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಹಬ್ಬಿದೆ. ದಕ್ಷಿಣ ಕೊರಿಯಾ, ಆಸಿಯಾನದ ದೇಶಗಳು ಮತ್ತು ಇರಾನ್ ದೇಶಗಳಲ್ಲಿ ಈ ವೈರಾಣು ಈಗಾಗಲೇ ಬಲಿ ಪಡೆದುಕೊಂಡಿದೆ. ಭಾರತದಲ್ಲಿ ಕೆಲವಾರು ಜನ ಸೋಂಕಿಗೆ ಒಳಪಟ್ಟಿದ್ದರೂ ಇದುವರೆಗೆ ಯಾರೂ ಸಾವಿಗೆ ಶರಣಾಗದೇ ಇರುವುದೇ ಅತ್ಯಂತ ಸಮಾಧಾನಕರ ಸಂಗತಿಯಾಗಿದೆ.

ಈ ವೈರಸ್‍ಗೆ ಲಸಿಕೆ ಕಂಡುಹಿಡಿಯಲು ಮತ್ತು ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆ ಮಾಡಲು ಒಂದು ವರ್ಷವಾದರೂ ಬೇಕಾಗಬಹುದು. 2020ನೇ ವರ್ಷದ ಕೊನೆಯವರೆಗೂ ಈ ವೈರಸ್ ಹರಡದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಚೀನಾ ಹಾಗೂ ಇನ್ನಿತರ ಸರ್ಕಾರಗಳಿಗೆ ಇದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೂ ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಿದ್ದು ಮುಂದಿನ ಕೆಲವೇ ತಿಂಗಳುಗಳಲ್ಲಿ ಸಂತಸದ ಸುದ್ದಿ ಬರುವುದೆಂದು ಎಣಿಸಲಾಗಿದೆ.

ಈ ಮಧ್ಯೆ ಕೋವಿಡ್-19 ಸಾಂಕ್ರಾಮಿಕ ವೈರಾಣು ಚೀನಾದ ಆರ್ಥಿಕತೆಯ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರಿದೆ. ಚೀನಾ ಮಧ್ಯಭಾಗದ ಹುಬೇ ಪ್ರಾಂತ್ಯ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಉಳಿದ ಪ್ರಾಂತ್ಯಗಳಲ್ಲಿಯೂ ಎಚ್ಚರಿಕೆಯ ಕಾರಣದಿಂದ ಶಾಲಾ-ಕಾಲೇಜು ಹಾಗೂ ಕೈಗಾರಿಕೆ-ವಾಣಿಜ್ಯಗಳನ್ನು ಮುಚ್ಚಲಾಗಿದೆ. ಚೀನಾದಿಂದ ಆಯಾತ ಮಾಡಿಕೊಂಡ ಬಿಡಿಭಾಗಗಳ ಮೇಲೆ ನಿರ್ಭರವಾಗಿದ್ದ ಹಲವು ಕೈಗಾರಿಕೆಗಳು ತೊಂದರೆ ಅನುಭವಿಸಿವೆ. ಭಾರತದ ವಾಹನ ತಯಾರಕರು ಮತ್ತು ಬಿಡಿಭಾಗ ತಯಾರಕರು ಚೀನಾ ಮುಚ್ಚುವಿಕೆಯಿಂದ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಅತ್ತ ಹಲವಾರು ಅಂತರರಾಷ್ಟ್ರೀಯ ಕ್ರೀಡಾ ಕೂಟಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇದೇ ವರ್ಷದ ಜುಲೈನಲ್ಲಿ ಜಪಾನ್‍ನಲ್ಲಿ ನಡೆಯಬೇಕಿರುವ ಒಲಿಂಪಿಕ್ಸ್ ಕ್ರಿಡಾಕೂಟಕ್ಕೂ ಈ ವೈರಾಣುವಿನ ಕರಿನೆರಳು ಬಿದ್ದಿದೆ.


ಎಫ್‍ಎಟಿಎಫ್ ‘ನಸುಗಪ್ಪು ಪಟ್ಟಿಯಲ್ಲಿ ಮುಂದುವರೆದ ಪಾಕಿಸ್ತಾನ

ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‍ಎಟಿಎಫ್ -ಹಣಕಾಸು ಕ್ರಿಯಾ ಕಾರ್ಯ ಪಡೆ) ಪಾಕಿಸ್ತಾನವನ್ನು ಜೂನ್ 2020 ರವರೆಗೆ ‘ನಸುಗಪ್ಪು’ (ಗ್ರೇ ಲಿಸ್ಟ್) ಪಟ್ಟಿಯಲ್ಲಿರಿಸಲು ತೀರ್ಮಾನಿಸಿದೆ. 2019ರ ಅಕ್ಟೋಬರ್‍ನಲ್ಲಿ ಕಾರ್ಯಪಡೆಯು ಪಾಕಿಸ್ತಾನಕ್ಕೆ ಕಡು ಎಚ್ಚರಿಕೆಯನ್ನು ನೀಡಿತ್ತು. ಇದರಂತೆ 27 ಕಾರ್ಯಕ್ಷೇತ್ರಗಳಲ್ಲಿ ಪಾಕಿಸ್ತಾನವು ಭಯೋತ್ಪಾದನೆ ಹಾಗೂ ಅಪರಾಧಿ ಹಣ ವರ್ಗಾವಣೆಯನ್ನು ತಡೆಯಲು ಕ್ರಮಕೈಗೊಳ್ಳಬೇಕಾಗಿತ್ತು. 27ರಲ್ಲಿ 14 ಕ್ಷೇತ್ರಗಳಲ್ಲಿ ಪಾಕಿಸ್ತಾನವು ಪರಿಣಾಮಕಾರಿ ಕ್ರಮ ಕೈಗೊಂಡಿದೆಯೆಂದು ಕಾರ್ಯಪಡೆ ಹೇಳಿದೆ. ಉಳಿದ ಕ್ಷೇತ್ರಗಳಲ್ಲಿಯೂ ತಾನು ಕ್ರಮ ಕೈಗೊಳ್ಳುತ್ತಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಪಾಕಿಸ್ತಾನದ ಕ್ರಮವನ್ನು ಟರ್ಕಿ, ಮಲೇಶಿಯಾ ಹಾಗೂ ಚೀನಾಗಳು ಬಲವಾಗಿ ಸಮರ್ಥಿಸಿಕೊಂಡಿವೆ.

ಕ್ರಿಯಾಪಡೆಯ ಸಭೆಯ ಕೆಲವು ವಾರಗಳ ಮೊದಲು ಪಾಕಿಸ್ತಾನದ ನ್ಯಾಯಾಲಯವು ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್‍ಗೆ 5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಮತ್ತೊಬ್ಬ ಅಪರಾಧಿ ಮಸೂರ್ ಅಝರ್ ತಲೆಮರೆಸಿಕೊಂಡಿದ್ದಾನೆಂದು ಪಾಕಿಸ್ತಾನದ ಫೆಡೆರಲ್ ಪೊಲೀಸ್ ಇಲಾಖೆ ಹೇಳಿತ್ತು. ಅಪರಾಧಿ ಹಿನ್ನೆಲೆಯ ಹಣವರ್ಗಾವಣೆಯನ್ನು ತಡೆಹಿಡಿಯುವ ನಿಟ್ಟಿನಲ್ಲಿ ಕೂಡಾ ಕಾನೂನು ರಚನೆ ಹಾಗು ವಿಶೇಷ ದಳ ರಚನೆಯ ಕ್ರಮ ಕೈಗೊಂಡಿದ್ದೇವೆಂದು ಪಾಕಿಸ್ತಾನ ಹೇಳಿಕೊಂಡಿದೆ.

ಕಾರ್ಯಪಡೆಯ ಮುಂದಿನ ಸಭೆ 2020ರ ಜೂನ್ ತಿಂಗಳಿನಲ್ಲಿ ನಡೆಯಲಿದೆ. ತನ್ನ ವಿರುದ್ಧದ ಭಯೋತ್ಪಾದನೆ ಕೃತ್ಯಗಳನ್ನು ಬಯಲಿಗೆ ತರಲು ಹಾಗೂ ಭಯೋತ್ಪಾದನೆಗೆ ಶಿಕ್ಷೆ ನೀಡಲು ಭಾರತ ತನ್ನ ರಾಜತಾಂತ್ರಿಕ ಒತ್ತಾಯವನ್ನು ಮುಂದುವರೆಸಿದೆ. ವಿಶ್ವದ ಪ್ರಮುಖ ರಾಷ್ಟ್ರಗಳನ್ನು ಈ ನಿಟ್ಟಿನಲ್ಲಿ ಜಾಗೃತಗೊಳಿಸಿರುವ ಭಾರತ, ಕಾರ್ಯಪಡೆಯ ಮೂಲಕ ಪಾಕಿಸ್ತಾನದ ಭಯೋತ್ಪಾದನೆ ಜಾಲವನ್ನು ನಿರ್ವಸ್ತ್ರಗೊಳಿಸಲು ಪ್ರಯತ್ನಿಸುತ್ತಿದೆ.


ನಾರಾಯಣಮೂರ್ತಿ ಅಳಿಯ ರಿಶಿ ಸುನಕ್ ಇದೀಗ ಬ್ರಿಟನ್ನಿನ ವಿತ್ತಮಂತ್ರಿ

ಅನಿರೀಕ್ಷಿತ ಮತ್ತು ಅಪೇಕ್ಷಿತ ಬೆಳವಣಿಗೆಯಲ್ಲಿ ಭಾರತ ಮೂಲದ ರಿಶಿ ಸುನಕ್ ಯುನೈಟೆಡ್ ಕಿಂಗ್‍ಡಮ್‍ನ ಚಾನ್ಸೆಲರ್ ಆಫ್ ಎಕ್ಸ್‍ಚೆಕರ್ (ವಿತ್ತ ಮಂತ್ರಿ) ಆಗಿ ಆಯ್ಕೆಯಾಗಿದ್ದಾರೆ. ಇದುವರೆಗೆ ವಿತ್ತಮಂತ್ರಿಯಾಗಿದ್ದ ಸಾಜಿದ್ ಜಾವಿದ್‍ರವರ ರಾಜೀನಾಮೆಯಿಂದ ತೆರವಾದ ಜಾಗಕ್ಕೆ ರಿಶಿ ಸುನಕ್ ಆಯ್ಕೆಯಾಗಿದ್ದಾರೆ. ರಿಶಿಯವರು ಜುಲೈ 2019 ರಿಂದ ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಪಂಜಾಬಿ ಮೂಲದ ರಿಶಿ ಸುನಕ್‍ರವರ ತಂದೆ ವೈದ್ಯರಾಗಿದ್ದರೆ ತಾಯಿ ಕೆಮಿಸ್ಟ್ ಆಗಿ ಬ್ರಿಟನ್ನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 1980ರಲ್ಲಿ ಜನಿಸಿದ ರಿಶಿ ಆಕ್ಸ್‍ಫರ್ಡ್‍ನ ಲಿಂಕನ್ ಕಾಲೇಜಿನಲ್ಲಿ ಪದವಿ ಪಡೆದು ನಂತರ ಸ್ಟಾನ್‍ಫರ್ಡ್ ವಿವಿಯಿಂದ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದರು. ಇದೇ ಸ್ಟಾನ್‍ಫರ್ಡ್‍ನಲ್ಲಿ ಓದುವ ಸಮಯದಲ್ಲಿ ರಿಶಿ ಎನ್.ಆರ್.ನಾರಾಯಣಮೂರ್ತಿಯವರ ಮಗಳು ಅಕ್ಷತಾ ಮೂರ್ತಿಯವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಯಶಸ್ವಿ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಮೊದಲು ಗೋಲ್ಡ್‍ಮನ್ ಸ್ಯಾಕ್ಸ್ ನಿವೇಶನ ಸಂಸ್ಥೆಯಲ್ಲಿ ಮತ್ತು ನಂತರ ಕೆಲವಾರು ನಿವೇಶನ ನಿಧಿಗಳಿಗೆ ಕೆಲಸ ಮಾಡಿದ್ದ ರಿಶಿ ರಾಜಕೀಯ ಪ್ರವೇಶ ಮಾಡಿದ್ದು 2014ರಲ್ಲಿ. ‘ರಿಚ್‍ಮಂಡ್’ ಕ್ಷೇತ್ರದಿಂದ ಕನ್ಸರ್ವೇಟಿವ್ ಅಭ್ಯರ್ಥಿಯಾಗಿ ಚುನಾವಣೆ ಗೆದ್ದ ರಿಶಿ ನಂತರ 2017 ಮತ್ತು 2019ರಲ್ಲಿ ಸುಧಾರಿತ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ಬ್ರೆಕ್ಸಿಟ್‍ನ ಕಟ್ಟಾ ಬೆಂಬಲಿಗರಾದ ರಿಶಿ ಸುನಕ್ ಮೊದಲು ಥೆರೆಸಾ ಮೇ ಹಾಗೂ ನಂತರ ಬೋರಿಸ್ ಜಾನ್ಸನ್‍ರವರ ಬೆಂಬೆಲಕ್ಕೆ ನಿಂತಿದ್ದರು.

ಅಚ್ಚರಿಯ ಬೆಳವಣಿಗೆಯಲ್ಲಿ ವಿತ್ತಮಂತ್ರಿ ಸಾಜಿದ್ ಜಾವೇದ್‍ರವರು ರಾಜೀನಾಮೆ ನೀಡಿದಾಗ ಅಲ್ಲಿಯವರೆಗೆ ಜಾವೇದ್‍ರವರ ಸಹಾಯಕರಾಗಿದ್ದ ರಿಶಿ ಸುನಕ್ ಅವರನ್ನು ಪ್ರಧಾನಿ ಬೋರಿಸ್ ಆಯ್ಕೆ ಮಾಡಿದ್ದರು. ವಿತ್ತಮಂತ್ರಿಯಾಗಿ ಕಾರ್ಯ ಪ್ರಾರಂಭಿಸಿ ನಂಬರ್ 11 ಡೌನಿಂಗ್ ಸ್ಟ್ರೀಟ್ ಮನೆಗೆ ಬಂದಿಳಿದಿರುವ ರಿಶಿ ಇದೇ ಮಾರ್ಚ್ 11 ರಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ವಿತ್ತಮಂತ್ರಿಯಾಗಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಯುನೈಟೆಡ್ ಕಿಂಗ್‍ಡಮ್‍ನ ಪ್ರಧಾನಿಮಂತ್ರಿಯಾಗಿಯೂ ಆಯ್ಕೆಯಾಗುವ ಅವಕಾಶ ಹೊಂದಿದ್ದಾರೆ. ಹಾಗೇನಾದರೂ ಆದರೆ ಭಾರತ-ಬ್ರಿಟನ್ನಿನ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದಕ್ಕೆ ಭಾಷ್ಯ ಬರೆಯಲಿದ್ದಾರೆ.       

Leave a Reply

Your email address will not be published.