ವಿಶ್ವ ವಿದ್ಯಮಾನ

ಆಫ್ಘಾನಿಸ್ತಾನದಲ್ಲಿ ಮುಂದುವರೆದ ಅಶ್ರಫ್ ಘನಿ ಸರ್ಕಾರ

ನೆರೆಯ ಆಫ್ಘಾನಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಅಶ್ರಫ್ ಘನಿಯವರು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಘನಿಯವರಿಗೆ ಶೇಕಡಾ 50.64 ಮತಗಳು ಬಂದಿದ್ದರೆ ಅವರ ಸಮೀಪ ಸ್ಪರ್ಧಿ ಅಬ್ದುಲ್ಲಾ ಅಬ್ದುಲ್ಲಾ ಅವರಿಗೆ ಶೇಕಡಾ 39.52 ಮತಗಳು ಬಂದಿವೆ. ಆಫ್ಘಾನಿಸ್ತಾನದ ಸ್ವತಂತ್ರ ಚುನಾವಣಾ ಆಯೋಗ ನಡೆಸಿದ ಈ ಚುನಾವಣೆಯಲ್ಲಿ ದೇಶದ 25% ಕ್ಕೂ ಹೆಚ್ಚು ಜನರು ಆತಂಕವಾದಿಗಳ ಬೆದರಿಕೆಯ ಮತ ನೀಡಿದ್ದರು.

ಸ್ವತಂತ್ರ ಚುನಾವಣಾ ಆಯೋಗ ನೀಡಿದ ಫಲಿತಾಂಶವನ್ನು ಅಬ್ದುಲ್ಲಾ ಅಬ್ದುಲ್ಲಾ ಅವರ ಗುಂಪು ವಿರೋಧಿಸಿತ್ತು. ಚುನಾವಣೆಗಳು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆದಿಲ್ಲವೆಂದು ಆಪಾದಿಸಲಾಗಿತ್ತು. ಈ ಮಧ್ಯೆ ಆಫ್ಘಾನಿಸ್ತಾನಕ್ಕೆ ಅಮೆರಿಕದ ಶಾಂತಿದೂತ ಝಲ್ಮೇ ಖಲೀಲ್‌ಜಾದ್‌ರವರು ಎರಡೂ ಬಣಗಳ ನಡುವೆ ಮಾತುಕತೆ ಮತ್ತು ಒಪ್ಪಂದ ಮಾಡಲು ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರು. ಆದರೆ ಈ ಮಧ್ಯಸ್ಥಿಕೆ ಮುರಿದುಬಿದ್ದು ಎರಡೂ ಬಣಗಳು ತಮ್ಮ ಅಭ್ಯರ್ಥಿಯೇ ರಾಷ್ಟ್ರದ ಅಧ್ಯಕ್ಷರಾಗಬೇಕೆಂದು ಹಠ ಹಿಡಿದಿದ್ದವು. ಅಶ್ರಫ್ ಘನಿಯವರು ಬಹುಸಂಖ್ಯಾತ ಪುಷ್ತೂ ಮೂಲದವರಾದರೆ ಅಬ್ದುಲ್ಲಾ ಅಬ್ದುಲ್ಲಾ ಅವರು ಉತ್ತರದ ತಾಜಿಕ್ ಮೂಲದವರು.

 

ಎರಡೂ ಬಣಗಳ ನಡುವಿನ ಸಂಧಾನ ಪ್ರಯತ್ನಗಳು ಮುರಿದ ಮೇಲೆ ಕಡೆಗೆ ಮಾಚ್ 9 ರಂದು ಅಶ್ರಫ್ ಘನಿಯವರು ಅಧ್ಯಕ್ಷೀಯ ಅರಮನೆಯಲ್ಲಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.  ಪಕ್ಕದ ಸಪೇದಾರ್ ಅರಮನೆಯಲ್ಲಿ ಅದೇ ದಿನ ಅಬ್ದುಲ್ಲಾ ಅಬ್ದುಲ್ಲಾ ಅವರೂ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಹೀಗಾಗಿ ಎರಡೂ ಬಣಗಳ ನಡುವಿನ ತಿಕ್ಕಾಟ ಮುಂದಿನ ಹಂತಕ್ಕೆ ತಲುಪಿದಂತಾಗಿದೆ.

ಈ ಮಧ್ಯೆ ಅಮೆರಿಕದ ಮಧ್ಯಸ್ತಿಕೆಯಲ್ಲಿನ ತಾಲಿಬಾನ್ ಮತ್ತು ಆಫ್ಘನ್ ಸರ್ಕಾರದ ನಡುವಿನ ಶಾಂತಿ ಸಂಧಾನ ಮುಂದುವರೆದಿದೆ. ಎರಡೂ ಪ್ರತಿವಾದಿಗಳು ಪರಸ್ಪರ ಯುದ್ಧಖೈದಿಗಳನ್ನು ಬಿಡುಗಡೆ ಮಾಡುವ ಹಂತಕ್ಕೆ ತಲುಪಿದ್ದಾರೆ. ಅಂತರಿಮ ಒಪ್ಪಂದದಂತೆ ಮುಂದಿನ ಮೂರು ತಿಂಗಳುಗಳಲ್ಲಿ ಅಮೆರಿಕ ತನ್ನ ಬಹುತೇಕ ಸೈನಿಕರನ್ನು ಹಿಂದೆಗೆಯಲು ಒಪ್ಪಿದ್ದು ಕೆಲವೇ ಆವಶ್ಯಕ ಸೈನಿಕರನ್ನು ಮಾತ್ರ ಆಫ್ಘನ್ ನೆಲೆಯಲ್ಲಿ ಇರಿಸುವುದಾಗಿ ಹೇಳಿದೆ. ತಾಲಿಬಾನ್ ಪಡೆ ತಾತ್ಕಾಲಿಕ ಶಸ್ತತ್ಯಾಗಕ್ಕೆ ಒಪ್ಪಿದ್ದರೂ ಕರಾರಿನಂತೆ ತನ್ನ ಮಾತನ್ನು ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆಯೇ ಇದೆ. ಸದ್ಯದ ಕೊರೊನಾ ಪಿಡುಗಿನ ಸಮಸ್ಯೆಯಲ್ಲಿ ಆಫ್ಘನ್ ಸಮಸ್ಯೆಯ ಬಗೆಹರಿಕೆಯೂ ಕೆಲವು ತಿಂಗಳು ಮುಂದೂಡಿಕೆಯಾದಂತಾಗಿದೆ.


ಮಲೇಶಿಯಾಕ್ಕೆ ನೂತನ ಪ್ರಧಾನಿಯಾಗಿ ಮುಹ್ಯಿದ್ದೀನ್ ಯಾಸಿನ್

ಅಚ್ಚರಿಯ ಬೆಳವಣಿಗೆಯಲ್ಲಿ ಮಲೇಶಿಯಾದ ಪ್ರಧಾನಿ ಮಹಾಥಿರ್ ಮೊಹಮ್ಮದ್ ಅವರು ರಾಜೀನಾಮೆ ಇತ್ತ ಜಾಗಕ್ಕೆ ಮುಹ್ಯಿದ್ದೀನ್ ಯಾಸಿನ್ ನೇಮಕಗೊಂಡಿದ್ದಾರೆ. ಹಿಂದಿನ ಪ್ರಧಾನಿ ಮತ್ತು ಆಡಳಿತಾರೂಢ ಪಕ್ಷದ ನೇತಾರ ಅನ್ವರ್ ಅಬ್ರಹಾಂರವರು ಮತ್ತೆ ಜೊತೆಗೂಡಿ ಹೊಸ ಪ್ರಧಾನಿಯ ನೇಮಕವನ್ನು ಪ್ರಶ್ನಿಸಿದ್ದಾರಾದರೂ ಮಲೇಶಿಯಾದ ಸಂಸತ್ತಿನಲ್ಲಿ ಮುಹ್ಯಿದ್ದೀನ್ ಯಾಸಿನ್‌ರವರೇ ಬಹುಮತ ಸಾಧಿಸುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿವೆ.

2016 ರಲ್ಲಿ ಅಂದಿನ ಪ್ರಧಾನಿ ನಜೀಬ್ ರಜಾಕ್‌ರವರ ಭ್ರಷ್ಟ ಆಡಳಿತ ವಿರೋಧಿಸಿ ಮುಹ್ಯಿದ್ದೀನ್ ಪಕ್ಷ ತೊರೆದಿದ್ದರು. ಇದೀಗ ಆಡಳಿತಾರೂಢ ಪಕ್ಷದ ಒಂದು ಗುಂಪಿನ ಜೊತೆಗೆ ವಿರೋಧ ಪಕ್ಷವಾದ ಸಂಯುಕ್ತ ಮಲಾಯ್ ರಾಷ್ಟಿಯ ಸಂಘಟನೆಯ ಬೆಂಬಲದೊಂದಿಗೆ ಮುಹ್ಯಿದ್ದೀನ್ ಸರ್ಕಾರ ರಚಿಸಿದ್ದಾರೆ. ಮಲೇಶಿಯಾದ ರಾಜ ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹ್ಮದ್ ಶಾಹ್ ಅವರು ಅನ್ವರ್ ಇಬ್ರಾಹಿಂ ಅವರ ಮನವಿಯನ್ನು ಪುರಸ್ಕರಿಸದೆ ಮುಹ್ಯಿದ್ದೀನ್ ಯಾಸಿನ್‌ರವರಿಗೇ ಪ್ರಧಾನಿಯಾಗಿ ಪ್ರಮಾಣವಚನ ಬೋಧಿಸಿದ್ದರು. ಇದರಿಂದ ಮುಹ್ಯಿದ್ದೀನ್‌ರವರು ಭ್ರಷ್ಟಾಚಾರದ ಆರೋಪ ಹೊತ್ತ ಹಿಂದಿನ ಪ್ರಧಾನಿ ನಜೀಬ್ ರಜಾಕ್‌ರವರ ಪಕ್ಷದ ಬೆಂಬಲವನ್ನೇ ಪಡೆದು ಸರ್ಕಾರ ರಚಿಸಿದಂತಾಗಿದೆ.

ಭಾರತ ವಿರೋಧಿ ನಿಲುವು ತಳೆದಿದ್ದ ಮಹಾಥಿರ್ ಮೊಹಮ್ಮದ್ ಅವರು ತೆರೆಮರೆಗೆ ತೆರಳಿದ್ದು ದೇಶಕ್ಕೆ ಒಳ್ಳೆಯದಾಗಿದೆ. ನಂತರದ ವಾರಗಳಲ್ಲಿ ಭಾರತ ಸರ್ಕಾರವು ಮಲೇಶಿಯಾಗೆ ಅಗತ್ಯ ಔಷಧಿಗಳನ್ನು ಸರಬರಾಜು ಮಾಡಿ ಹಳೆಯ ಸಂಬಂಧವನ್ನು ಮರು ಸ್ಥಾಪಿಸಿದೆ. ಮುಂದಿನ ದಿನಗಳಲ್ಲಿ ಹೊಸ ಪ್ರಧಾನಿ ಮುಹ್ಯಿದ್ದೀನ್ ಯಾಸಿನ್ ಹೇಗೆ ಭಾರತದೊಂದಿಗೆ ಹಳಸಿದ ರಾಜತಾಂತ್ರಿಕ ಸಂಬಂಧವನ್ನು ಸುಧಾರಿಸುತ್ತಾರೆಯೊ ಎಂಬುದನ್ನು ನೋಡಬೇಕಿದೆ.


ನವೆಂಬರ್ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಜೋ ಬೈಡೆನ್ ನೇರಸ್ಪರ್ಧೆ:

ಅಮೆರಿಕದ ಸಾರ್ವತ್ರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಪಕ್ಷಗಳು ನಡೆಸುವ ಪ್ರಾಥಮಿಕ ಚುನಾವಣೆಗಳು ಈಗಾಗಲೇ ಸ್ಪಷ್ಟ ಫಲಿತಾಂಶ ನೀಡಿವೆ. ರಿಪಬ್ಲಿಕನ್ ಪಕ್ಷದ ವತಿಯಿಂದ ಹಾಲಿ ಆದ್ಯಕ್ಷ ಡಾನಲ್ಡ್ ಟ್ರಂಪ್ ಮತ್ತೊಮ್ಮೆ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಅಂತಿಮವಾದರೆ ಡೆಮಾಕ್ರೆಟಿಕ್ ಪಕ್ಷದ ಪರವಾಗಿ ಹಿಂದಿನ ಉಪಾಧ್ಯಕ್ಷ ಜೋ ಬೈಡೆನ್ ಸ್ಪರ್ಧಿಯಾಗುವುದು ಖಚಿತವಾಗಿದೆ.

ಡೆಮಾಕ್ರೆಟಿಕ್ ಪಕ್ಷದ ಪ್ರಾಥಮಿಕ ಚುನಾವಣೆ ಸುಲಭದ್ದಾಗಿರಲಿಲ್ಲ. ಎಂಟರಿಂದ ಹತ್ತು ಮಂದಿ ಗಂಭೀರ ಸ್ಪರ್ಧಿಗಳು ಕಣದಲ್ಲಿದ್ದರು. ಬೈಡೆನ್‌ರವರ ಜೊತೆಯಲ್ಲಿ ಬರ್ನಿ ಸ್ಯಾಂಡರ್ಸ್, ಎಲಿಜೆಬೆಥ್ ವಾರೆನ್, ಮೈಕೇಲ್ ಬ್ಲೂಮ್‌ಬರ್ಗ್, ಕಮಲಾ ಹ್ಯಾರಿಸ್, ತುಲಸಿ ಗಬ್ಬಾರ್ಡ್ ಮತ್ತಿತರರು ಕಣದಲ್ಲಿದ್ದರು. ಮಾರ್ಚ್ ಮಧ್ಯದ ಹೊತ್ತಿಗೆ ಬರ್ನಿ ಸ್ಯಾಂಡರ್ಸ್ ಹೊರತುಪಡಿಸಿ ಬೇರೆಲ್ಲರೂ ಕಣದಿಂದ ಹಿಂದೆ ಸರಿದಿದ್ದರು. ಅಲ್ಲಿಯವರೆಗೆ ಬೈಡೆನ್‌ರವರ ಸರಿಸಮನಾಗಿ ಸ್ಪರ್ಧಿಸಿದ್ದ ಬರ್ನಿ ಕೋವಿಡ್ ಶಕೆಯ ಸಮಯದಲ್ಲಿ ಪೇಲವವಾದರು. ಪಕ್ಷದ ಎಲ್ಲರೂ ಅನುಭವಿ ಮತ್ತು ಸಾಂಪ್ರದಾಯಿಕ ಉದಾರವಾದಿ ಪರಿಚಯವುಳ್ಳ ಬೈಡೆನ್‌ರವರೇ ಡಾನಲ್ಡ್ ಟ್ರಂಪ್ ಸೋಲಿಸಲು ಸೂಕ್ತ ವ್ಯಕ್ತಿಯೆಂಬ ತೀರ್ಮಾನಕ್ಕೆ ಬಂದಿದ್ದರು. ಬರ್ನಿ ಸ್ಯಾಂಡರ್ಸ್ರವರೂ ಬೈಡೆನ್ ಸ್ಪರ್ಧೆಯನ್ನು ಒಪ್ಪಿದೊಡನೆ ಕಣದಲ್ಲಿ ಉಳಿದ ಏಕಮಾತ್ರ ಅಭ್ಯರ್ಥಿಯಾಗಿ ಜೋ ಉಳಿದಿದ್ದಾರೆ.

 

 

 

 

 

1973 ರಿಂದ 2009 ರವರೆಗೆ 36 ವರ್ಷಗಳ ಕಾಲ ಸತತವಾಗಿ ಅಮೆರಿಕನ್ ಸೆನೆಟರ್ ಆಗಿದ್ದ ಬೈಡೆನ್‌ರವರು 1999 ಮತ್ತು 2008 ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಆಗಬಯಸಿದ್ದರು. 2008ರಲ್ಲಿ ಪಕ್ಷದ ಅಭ್ಯರ್ಥಿಯಾದ ಬರಾಕ್ ಒಬಾಮ ಬೈಡೆನ್‌ರವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿಕೊಂಡಿದ್ದರು. 2009 ರಿಂದ 2017 ರವರೆಗೆ ಅಮೆರಿಕದ ಉಪಾಧ್ಯಕ್ಷರಾಗಿ ಅಪಾರ ಅನುಭವ ಪಡೆದ ಬೈಡೆನ್ ಪರವಾಗಿ 2020 ರ ಚುನಾವಣೆಯಲ್ಲಿ ಒಬಾಮ ಕೂಡಾ ಪ್ರಚಾರ ಮಾಡಲಿದ್ದಾರೆ.

ಪಕ್ಷಾತೀತವಾಗಿ ಅಮೆರಿಕ ಭಾರತದ ಬೆಂಬಲಕ್ಕೆ ನಿಂತಿದೆ. ಆದರೂ ರಿಪಬ್ಲಿಕನ್ ಅಧ್ಯಕ್ಷರ ರೀತಿಯಲ್ಲಿ ಡೆಮಾಕ್ರೆಟಿಕ್ ಆದ್ಯಕ್ಷರು ಭಾರತದ ಬೆಂಬಲಕ್ಕೆ ನಿಲ್ಲುವುದಿಲ್ಲ. ಆದರೂ ಬೈಡೆನ್ ಮೊದಲಿನಿಂದಲೂ ಭಾರತದ ಪರ ಮೃದು ಧೋರಣೆ ಹೊಂದಿದವರೇ ಆಗಿದ್ದಾರೆ. 2020ರ ಈ ಚುನಾವಣೆಯಲ್ಲಿ ಯಾರು ಗೆದ್ದರೂ ಭಾರತಕ್ಕೆ ಯಾವುದೇ ಹಾನಿಯಿಲ್ಲ. ಆದರೆ ಅಮೆರಿಕದ ದೃಷ್ಟಿಕೋನದಲ್ಲಿ ನೋಡುವುದಾದರೆ ಟ್ರಂಪ್ ಹೊರತುಪಡಿಸಿ ಯಾರೇ ಅಧ್ಯಕ್ಷರಾದರೂ ಒಳ್ಳೆಯದು ಎಂದೇ ಅನ್ನಿಸುತ್ತದೆ.


ವಿವಾದದ ಕಟಕಟೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ

ಕೋವಿಡ್ 19 ಸಾಂಕ್ರಾಮಿಕ ರೋಗ ತಡೆಯುವಲ್ಲಿನ ತನ್ನ ನಿಧಾನಗತಿಯ ಕಾರ್ಯವೈಖರಿಗೆ ಹಾಗೂ ಚೀನಾಪರ ಮೃದು ಧೋರಣೆಗೆ ವಿಶ್ವ ಆರೋಗ್ಯ ಸಂಸ್ಥೆ ಅತೀವ ಟೀಕೆಗೆ ಒಳಗಾಗಿದೆ. ಕೆಲವು ರಾಷ್ಟ್ರಗಳು ಸಂಸ್ಥೆಯನ್ನು ಬೇಜವಾಬ್ದಾರಿ ಹಾಗೂ ಅದಕ್ಷ ಎಂದು ಕರೆದಿದ್ದರೆ ಮತ್ತೆ ಕೆಲವು ರಾಷ್ಟ್ರಗಳು ಸಂಸ್ಥೆಯ ಸೆಕ್ರೆಟರಿ ಜನರಲ್‌ರವರ ಕಾರ್ಯವೈಖರಿಗೆ ಕಡು ಆಕ್ಷೇಪ ವ್ಯಕ್ತಪಡಿಸಿವೆ.

1948ರಲ್ಲಿ ಸ್ಥಾಪಿತವಾದ ವಿಶ್ವ ಆರೋಗ್ಯ ಸಂಸ್ಥೆ ಅಲ್ಲಿಯವರೆಗೆ ಅಸ್ತಿತ್ವದಲ್ಲಿದ್ದ ಜಾಗತಿಕ ಆರೋಗ್ಯ ಸಂಘಟನೆಗಳ ಮುಂದುವರೆದ ರೂಪವಾಗಿ ಬೆಳೆದಿತ್ತು. ವಿಶ್ವದ ಎಲ್ಲೆಡೆಯ ಸಾಂಕ್ರಾಮಿಕ ರೋಗಗಳ ತಡೆ ಹಾಗೂ ಸದಸ್ಯ ರಾಷ್ಟ್ರಗಳಲ್ಲಿ ಮಾದರಿ ಆರೋಗ್ಯ ವ್ಯವಸ್ಥೆ ರೂಪಿಸುವುದು ಸಂಸ್ಥೆಯ ಗುರಿಯಾಗಿತ್ತು. ಈ ನಿಟ್ಟಿನಲ್ಲಿ ಮಲೇರಿಯಾ, ಕಾಲೆರಾ, ಟ್ಯೂಬರ್‌ಕ್ಯುಲೋಸಿಸ್, ಎಬೊಲಾ, ಸರ‍್ಸ್ ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಇದುವರೆಗೆ ಸಂಸ್ಥೆಯು ಮಾಡಿದ ಕಾರ್ಯಗಳು ವ್ಯಾಪಕ ಪ್ರಶಂಸೆಗೆ ಒಳಗಾಗಿವೆ.

ಈ ಸಂಸ್ಥೆಯ ಮುಖ್ಯ ಕಛೇರಿ ಸ್ವಿಟ್ಜರ್‌ಲ್ಯಾಂಡಿನ ಜಿನೀವಾದಲ್ಲಿದ್ದರೆ ಎಂಟು ವಲಯ ಕಛೇರಿಗಳು ಹಾಗು 150 ಕ್ಷೇತ್ರ ಕಛೇರಿಗಳು ಪ್ರಪಂಚದಾದ್ಯಂತ ಹರಡಿವೆ. ಸರಿಸುಮಾರು ವಾರ್ಷಿಕ 4.2 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಖರ್ಚು ಮಾಡುವ ಈ ವಿಶ್ವ ಆರೋಗ್ಯ ಸಂಸ್ಥೆಗೆ ಎಲ್ಲಾ ಸದಸ್ಯ ರಾಷ್ಟ್ರಗಳು ಹಾಗೂ ಕೆಲವು ದಾನಿಗಳು ದೇಣಿಗೆ ನೀಡುತ್ತಾರೆ. ಒಟ್ಟು ಬಜೆಟ್‌ನಲ್ಲಿ ಶೇಕಡಾ 15ರಷ್ಟು ದೇಣಿಗೆ ಕೇವಲ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಬಂದರೆ ಭಾರತದಿಂದ 0.36% ದೇಣಿಗೆ ಬರುತ್ತಿದೆ. ಚೀನಾದ ದೇಣಿಗೆ ಕೂಡಾ 0.48% ರಷ್ಟರಲ್ಲಿಯೇ ಇದೆ. ಜರ್ಮನಿ, ಫ್ರಾನ್ಸ್ ಮತ್ತಿತರ ಐರೋಪ್ಯ ರಾಷ್ಟ್ರಗಳು ಸಂಸ್ಥೆಗೆ ಸಾಕಷ್ಟು ದೇಣಿಗೆ ನೀಡುತ್ತಿವೆ.

ಸದ್ಯ ಸೆಕ್ರೆಟರಿ ಜನರಲ್ ಆಗಿರುವ ಟೆಡ್ರೊಸ್ ಗೆಬ್ರೆಸುಸ್ ಹಿಂದೆ ಎಥಿಯೋಪಿಯ ದೇಶದ ಆರೋಗ್ಯ ಮತ್ತು ವಿದೇಶಾಂಗ ಸಚಿವರಾಗಿದ್ದರು. 2017ರಲ್ಲಿ ಆಫ್ರಿಕ ಹಾಗೂ ಏಷ್ಯಾ ಖಂಡದ ರಾಷ್ಟ್ರಗಳ ಬೆಂಬಲದಿಂದ ಚುನಾವಣೆ ಗೆದ್ದ ಗೆಬ್ರೆಸುಸ್ 2022ರವರೆಗೆ ಸೆಕ್ರೆಟರಿ ಜನರಲ್ ಪದವಿಯಲ್ಲಿ ಮುಂದುವರೆಯುತ್ತಾರೆ. ಭಾರತದ ಸೌಮ್ಯ ಸ್ವಾಮಿನಾಥನ್ ಅವರು ಸದ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರ ಪುತ್ರಿ.

ಕೋವಿಡ್ ಸೋಂಕಿನ ಬಗ್ಗೆ ವಿಶ್ವಾದ್ಯಂತ ಜನವರಿ 2020ರ ಮೊದಲ ವಾರದಲ್ಲಿ ಸಮಾಚಾರ ಹೊರಬಿದ್ದಿತ್ತು. ಇದಕ್ಕೆ ಮುಂಚಿತವಾಗಿ 2019 ರ ನವೆಂಬರ್ ತಿಂಗಳಿನಿಂದಲೇ ಚೀನಾದ ಮಧ್ಯಭಾಗದ ವುಹಾನ್ ನಗರದಲ್ಲಿ ಕೊರೊನಾ ಹರಡಿತ್ತು. 2020 ರ ಜನವರಿ ಏಳನೇ ತಾರೀಖಿನವರೆಗೂ ಚೀನಾ ಸರ್ಕಾರ ಈ ಸಾಂಕ್ರಾಮಿಕ ರೋಗವನ್ನು ಅಲ್ಲಗಳೆಯುತ್ತಾ ಈ ರೋಗವು ಮನುಷ್ಯರಿಂದ ಮನುಷ್ಯರಿಗೆ ಹರಡಿರುವ ಬಗ್ಗೆ ಪುರಾವೆಯಿಲ್ಲವೆಂದು ಹೇಳಿಕೊಂಡಿತ್ತು. ರೋಗ ವ್ಯಾಪಕ ರೂಪ ಪಡೆದುಕೊಂಡ ಮೇಲೆ ಮಾತ್ರ ಚೀನಾ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಿ ಜನವರಿ ನಾಲ್ಕನೇ ವಾರದ ಸಮಯಕ್ಕೆ ರೋಗದ ವಿಷಮ ಪರಿಸ್ಥಿತಿ ಬಯಲು ಮಾಡಿತ್ತು.

ಈ ರೀತಿ ರೋಗವನ್ನು ಮುಚ್ಚಿಡುವ ಬದಲು ರೋಗದ ಗುಣಲಕ್ಷಣಗಳನ್ನು ಮತ್ತು ಗಂಭೀರತೆಯನ್ನು ಜನವರಿ ಮೊದಲ ವಾರದಲ್ಲಿಯೇ ವರದಿ ಮಾಡಿದ್ದರೆ ವಿಶ್ವಾದ್ಯಂತ ರೋಗ ಹರಡುವುದನ್ನು ತಡೆಯಬಹುದಿತ್ತು. ಚೀನಾದ ಈ ಅಸಹಕಾರ ನೀತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಎದುರಿಸಲಿಲ್ಲ. ಬದಲು ಸಂಸ್ಥೆಯು ಕೋವಿಡ್ ಪಿಡುಗನ್ನು ಜನವರಿ 31 ರಂದು ‘ಅಂತರರಾಷ್ಟ್ರೀಯ ಕಳವಳಕಾರಿ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ’ಯೆಂದು ಘೋಷಿಸಿತ್ತು. ಆ ನಂತರದಲ್ಲಿ ಕೂಡಾ ಪಿಡುಗನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ನಿರ್ದೇಶಿಸದೆ ಈ ರೋಗವು ಚೀನಾ ದೇಶದೊಳಗೆ ಮಾತ್ರ ಸೀಮಿತವಾಗಿದೆ ಎಂಬಂತೆ ಬಿಂಬಿಸಿತ್ತು. ರೋಗದ ಕಾರಣದಿಂದ ಇರಾನ್ ಮತ್ತು ಇಟಲಿ ದೇಶಗಳಲ್ಲಿ ಸಾವು ಸಂಭವಿಸಿದ ನಂತರ ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಪಿಡುಗನ್ನು ’ಪಾಂಡೆಮಿಕ್’ ಎಂದು ಘೋಷಿಸಿತ್ತು. ಆ ಹೊತ್ತಿಗೆ ರೋಗವು ಯೂರೋಪ್ ಮತ್ತು ಅಮೆರಿಕದೆಲ್ಲೆಡೆ ಹರಡಿಯಾಗಿತ್ತು.

ಈ ಸಾಂಕ್ರಾಮಿಕ ರೋಗದ ಉತ್ಪತ್ತಿ ಮತ್ತು ಹರಡುವಿಕೆಯಲ್ಲಿ ಚೀನಾ ದೇಶದ ಪಾತ್ರದ ಜೊತೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರವನ್ನು ಟೀಕಿಸಲಾಗಿದೆ. ಅಮೆರಿಕದ ಅಧ್ಯಕ್ಷ ಡಾನಲ್ಡ್ ಟ್ರಂಪ್ ಅಮೆರಿಕದ ದೇಣಿಗೆಯನ್ನು ತಡೆಹಿಡಿಯುವ ಘೋಷಣೆ ಮಾಡಿದ್ದಾರೆ. ಯಾವುದೇ ವಿಶ್ವಸಂಸ್ಥೆಗೆ ಈ ರೀತಿಯ ಪ್ರಚಾರ ಆರೋಗ್ಯದಾಯಕವಲ್ಲ. ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪರಸ್ಪರ ಪಾತ್ರ ಮುಂದಿನ ದಿನಗಳಲ್ಲಿ ಸಾಬೀತಾಗಬೇಕಿದೆ. ಅಲ್ಲಿಯವರೆಗೆ ಈ ಎರಡೂ ದೇಶಿ ಮತ್ತು ಅಂತರ್ದೇಶಿ ಸಂಸ್ಥೆಗಳು ಕಟಕಟೆಯಲ್ಲಿ ನಿಲ್ಲುವಂತಾಗಿದೆ.

ತನ್ನ ಮೇಲಿನ ಆಪಾದನೆಗಳಿಂದ ವಿಶ್ವ ಆರೋಗ್ಯ ಸಂಸ್ಥೆ ಹೊರಬರಬಹುದು. ಆದರೆ ಜಾಗತಿಕ ಮಟ್ಟದಲ್ಲಿ ಇಂತಹ ಸೂಕ್ಷö್ಮ ಸಂಸ್ಥೆಯೊಂದಕ್ಕೆ ಟೆಡ್ರೊಸ್ ಗೆಬ್ರೆಸುಸ್ ಅವರಂತಹ ರಾಜಕಾರಣಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತೇ ಎಂಬ ವಿಷಯ ಚರ್ಚೆಗೆ ಗ್ರಾಸವಾಗಲಿದೆ. ತನ್ನ ದೇಶ, ಪಕ್ಷ ಮತ್ತು ನಾಯಕನಿಗೆ ಮೊದಲ ನಿಷ್ಠೆ ತೋರುವ ಸಕ್ರಿಯ ರಾಜಕಾರಣಿಯೊಬ್ಬ ವಿಶ್ವದ ಆರೋಗ್ಯದಂತಹ ಪಕ್ಷಾತೀತ ಮತ್ತು ದೇಶಾತೀತ ವೈಜ್ಞಾನಿಕ ವಿಷಯವೊಂದಕ್ಕೆ ನ್ಯಾಯ ಸಲ್ಲಿಸಬಲ್ಲರೇ ಎಂಬ ವಿಷಯವೂ ವಿಶ್ಲೇಷಣೆಗೆ ಒಳಗಾಗಲಿದೆ.

Leave a Reply

Your email address will not be published.