ವಿಶ್ವ ವಿದ್ಯಮಾನ

ಭಾರತ-ನೇಪಾಳ ಮಧ್ಯೆ ‘ಕಾಲಾಪಾನಿ’ ಬಿಕ್ಕಟ್ಟು

1950ರ ಸಮಯದಲ್ಲಿ ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಲಡಾಖ್‌ನ ಗಡಿ ಪ್ರದೇಶದ ಬಗ್ಗೆ ‘ಹುಲ್ಲುಕಡ್ಡಿಯೂ ಬೆಳೆಯದ ಪ್ರದೇಶ’ವೆಂದು ಬಣ್ಣನೆ ಮಾಡಿದ್ದರು. ಈ ವಿವರಣೆಯು ಅಂದಿನ ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ಚರ್ಚೆಯಲ್ಲಿ ಭಾರಿ ವಿವಾದಕ್ಕೆ ಒಳಗಾಗಿತ್ತು. ಇದೀಗ ಅದೇ ತೆರನಾದ ‘ಹುಲ್ಲುಕಡ್ಡಿಯೊಂದು ಬೆಳೆಯದ’ ಕಾಲಾಪಾನಿ ಪ್ರದೇಶವೊಂದು ಭಾರತ ನೇಪಾಳ ಮಧ್ಯೆ ಬಿಕ್ಕಟ್ಟು ತಂದಿಟ್ಟಿದೆ. ಈ ಕಾಲಾಪಾನಿ ಪ್ರದೇಶ ಉತ್ತರಾಖಂಡದ ಉತ್ತರ-ಪೂರ್ವದಲ್ಲಿರುವ ಪಿತ್ತೋರ್‌ಗಢ್ ಜಿಲ್ಲೆಯಲ್ಲಿ ಟಿಬೆಟ್ ಹಾಗೂ ನೇಪಾಳಗಳಿಗೆ ಹೊಂದಿಕೊಂಡಂತೆ ಇದೆ [ನಕ್ಷೆ ನೋಡಿ].

ಈ ಬಿಕ್ಕಟ್ಟಿಗೆ 200 ವರ್ಷಗಳ ಇತಿಹಾಸವೇ ಇದೆ. 1814-16ರ ಬ್ರಿಟಿಷ್-ನೇಪಾಳಗಳ ಮಧ್ಯೆಯ ಗೂರ್ಖಾ ಯುದ್ಧದ ನಂತರದಲ್ಲಿ ಅಂದಿನ ನೇಪಾಳದ ರಾಜ ಹಾಗೂ ಬ್ರಿಟಿಷ್ ಸರ್ಕಾರದ ಮಧ್ಯೆ 1816ರಲ್ಲಿ ಸುಗೋಲಿ ಒಪ್ಪಂದವೊಂದು ಏರ್ಪಾಡಾಗಿತ್ತು. ಈ ಒಪ್ಪಂದದಂತೆ ಪೂರ್ವದ ಸಿಕ್ಕಿಂ ಮತ್ತು ಪಶ್ಚಿಮದಲ್ಲಿ ಕಾಳಿ ನದಿಯ ಪಶ್ಚಿಮ ಭಾಗದ ಪ್ರದೇಶಗಳನ್ನು ನೇಪಾಳ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ಬಿಟ್ಟುಕೊಟ್ಟಿತ್ತು. ಈ ಸುಗೋಲಿ ಒಪ್ಪಂದವೇ ಮುಂದುವರೆದು ಭಾರತ ಮತ್ತು ನೇಪಾಳಗಳ ಮಧ್ಯೆ ಅಂತರರಾಷ್ಟ್ರೀಯ ಗಡಿರೇಖೆಯನ್ನು ನಿಗದಿ ಪಡಿಸಿತ್ತು. ಆದರೆ ನೇಪಾಳದ ಪಶ್ಚಿಮ ಗಡಿರೇಖೆಯಲ್ಲಿ ಕಾಳಿನದಿಯ ಉಗಮವನ್ನು ಕಾಲಾಪಾನಿಯವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಕಾಲಾಪಾನಿಗೆ ಉತ್ತರದಲ್ಲಿ ಕಾಳಿ ನದಿಗೆ ಉಪನದಿಗಳಿದ್ದು ಕಾಳಿನದಿಯು ‘ಲಿಂಪಿಯಧುರ’ದಲ್ಲಿ ಉಗಮವಾಗುತ್ತದೆಯೆಂದೂ ಹಾಗೂ ಕಾಲಾಪಾನಿ-ಲಿಂಪಿಯಧುರದ ಉತ್ತರ ಪ್ರದೇಶವು ನೇಪಾಳಕ್ಕೆ ಸೇರಿದ್ದೆಂದು ನಾಪಾಳ ವಾದಿಸಿತ್ತು.

ಈ ಕಾಲಾಪಾನಿ ಪ್ರದೇಶ ‘ಹುಲ್ಲುಕಡ್ಡಿಯೂ ಬೆಳೆಯದ’ ಜಾಗವಾಗಿದ್ದರೂ ಅದಕ್ಕೆ ರಕ್ಷಣಾತ್ಮಕ ಮಹತ್ವವಿದೆ. ಈ ಲಿಪುಲೇಖ್ ಕಣಿವೆ ಹಾದಿಯಲ್ಲಿ ಕೈಲಾಸದ ಮಾನಸಸರೋವರಕ್ಕೆ ಹೋಗುವ ರಸ್ತೆಯಿದೆ. ಹಿಮಾಲಯದ ಮೇಲ್ಭಾಗದ ಈ ಪ್ರದೇಶವು ಚೀನಾ-ಟಿಬೆಟ್ ಪ್ರದೇಶಕ್ಕೆ ಭೂ ಪ್ರವೇಶ ನೀಡುವಂತಿದೆ. ಚಳಿಗಾಲದ ಆರುತಿಂಗಳು ಈ ಕಣಿವೆ ದಾರಿಯಲ್ಲಿ ಹಿಮಚ್ಛಾದಿತವಾದರೂ ಬೇಸಗೆಗಾಲದ ಆರು ತಿಂಗಳು ಈ ದಾರಿಯಲ್ಲಿ ಟಿಬೆಟ್‌ಗೆ ಹೋಗಬಹುದಾಗಿದೆ. ಅದಕ್ಕೆಂದೇ ಭಾರತವು 2020ರ ಮೇ 8 ರಂದು ಡಾರ್ಚುಲ-ಲಿಪುಲೇಖ್ ಗಡಿರಸ್ತೆಯನ್ನು ಉದ್ಘಾಟನೆ ಮಾಡಿತ್ತು. ಕಾಶ್ಮೀರದ ವಿಭಜನೆಯ ನಂತರ ಭಾರತ ಹೊರಡಿಸಿದ ನಕ್ಷೆಯಲ್ಲಿಯೂ ಸಹಾ ಈ ಲಿಪುಲೇಖ್ ಪ್ರದೇಶವನ್ನು ಪಿತ್ತೋರ್‌ಗಢ್ ಜಿಲ್ಲೆಯ ಭಾಗವಾಗಿಯೇ ತೋರಿಸಲಾಗಿತ್ತು.

ಈ ಕಾಲಾಪಾನಿ-ಲಿಪುಲೇಖ್ ಪ್ರದೇಶವು ತನ್ನದೆಂದು ಮೊದಲಿನಿಂದಲೂ ನೇಪಾಳ ವಾದ ಮಾಡಿಕೊಂಡು ಬಂದಿದೆ. 1950 ಮತ್ತು 1960ರ ದಶಕದಲ್ಲಿ ಚೀನಾ ಕಮ್ಯುನಿಸ್ಟ್ ಸರ್ಕಾರವು ಟಿಬೆಟ್ ಪ್ರದೇಶವನ್ನು ಆಕ್ರಮಿಸಿಕೊಂಡು ನೇಪಾಳ-ಭಾರತವನ್ನು ಹಿಮ್ಮೆಟ್ಟಿದ ಸಂದರ್ಭದಲ್ಲಿ ಅಂದಿನ ನೇಪಾಳದ ದೊರೆ ಈ ಕಾಲಾಪಾನಿ-ಲಿಪುಲೇಖದ ಪ್ರದೇಶವನ್ನು ಭಾರತದ ಸೇನೆಯ ರಕ್ಷಣೆಗೆ ಬಿಟ್ಟುಕೊಟ್ಟಿದ್ದರು. ಅಂದಿನಿಂದ ಇಲ್ಲಿಯವರೆಗೆ ಈ ಪ್ರದೇಶವು ಭಾರತದ ಸುಪರ್ದಿನಲ್ಲಿಯೇ ಇದೆ. ಆದರೂ ನಂತರದ ನೇಪಾಳ ಸರ್ಕಾರಗಳು ಈ ಜಾಗವನ್ನು ವಿವಾದಿತ ಪ್ರದೇಶವೆಂದೇ ಗುರುತಿಸಿಕೊಂಡು ಬಂದಿದ್ದವು.

2016ರಲ್ಲಿ ಅಂದಿನ ಕೊಯಿರಾಲಾ ಸರ್ಕಾರವು ಈ ವಿವಾದದ ಬಗೆಹರಿಕೆಯನ್ನು ಬಯಸಿತ್ತು. ಆದರೆ ಅಂದಿನ ಮತ್ತು ನಂತರದ ಸರ್ಕಾರಗಳು ಈ ವಿವಾದವನ್ನು ಬಗೆಹರಿಸುವ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನಂತರದಲ್ಲಿ ಈ ಪ್ರದೇಶವನ್ನು ತನ್ನ ಭೂಪ್ರದೇಶವೆಂದು ಭಾರತವು ಹೇಳಿಕೊಂಡ ಸಂದರ್ಭದಲ್ಲಿ ನೇಪಾಳ ಸರ್ಕಾರವು ತೀವ್ರವಾಗಿ ಪ್ರತಿಭಟಿಸಿತ್ತು. ಇದೀಗ ನೇಪಾಳದ ಕೆ.ಪಿ.ಶರ್ಮಾ ಓಲಿ ಸರ್ಕಾರವು ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ತಂದು ಈ ಕಾಲಾಪಾನಿ-ಲಿಪುಲೇಖ್ ಪ್ರದೇಶವನ್ನು ತನ್ನದೆಂದು ನಕ್ಷೆ ಹೊರಡಿಸಿದೆ. ಇದರಿಂದ ಹಿಮಾಲಯದ ಈ ಎತ್ತರ ಪ್ರದೇಶದ ಹಿಮಗಡ್ಡೆಗಳಿಗೆ ಬೆಂಕಿ ಬಿದ್ದಂತಾಗಿದೆ.

ಕಳೆದ ಒಂದು ತಿಂಗಳಿನಲ್ಲಿ ಭಾರತ ಸೈನ್ಯವು ಈ ಲಿಪುಲೇಖ್ ಪ್ರದೇಶದಲ್ಲಿ ಸೈನಿಕರ ಜಮಾವಣೆ ಹೆಚ್ಚಿಸಿತ್ತು. ಇದರ ವಿರುದ್ಧ ಚೀನಾದ ಸರ್ಕಾರವು ಕೂಡಾ ತನ್ನ ಸೈನಿಕರ ಜಮಾವಣೆಯನ್ನು ಹೆಚ್ಚಿಸಿದ ಕಾರಣದಿಂದ ಗಡಿಪ್ರದೇಶಗಳಲ್ಲಿ ಸೈನ್ಯಗಳ ನಡುವೆ ಚಕಮಕಿ ಏರ್ಪಟ್ಟಿದೆ. ಮುಂದಿನ ತಿಂಗಳುಗಳಲ್ಲಿ ಭಾರತ-ಚೀನಾಗಳ ನಡುವೆ ಈ ಪ್ರದೇಶದಲ್ಲಿ ಹೆಚ್ಚಿನ ಪೈಪೋಟಿ ಏರ್ಪಡುವಂತೆ ಕಾಣುತ್ತಿದೆ.

ಚೀನಾದ ಜೊತೆ ಭಾರತದ ವೈಮನಸ್ಸು ಇಂದು ನಾಳೆಗೆ ಪರಿಹಾರವಾಗುವ ಸಾಧ್ಯತೆಯಿಲ್ಲ. ಚೀನಾದ ಕಪಿಮುಷ್ಟಿಯಿಂದ ಟಿಬೆಟ್ ಪ್ರದೇಶವನ್ನು ಮುಕ್ತಿಗೊಳಿಸುವ ಕೆಲಸವಿನ್ನೂ ಬಾಕಿಯಿದೆ. ಎಲ್ಲಿಯವರೆಗೆ ಟಿಬೆಟ್ ಚೀನಾದಿಂದ ವಿಮುಕ್ತಿ ಪಡೆದು ಸ್ವಾತಂತ್ರ್ಯ ಹೊಂದುವುದಿಲ್ಲವೋ ಅಲ್ಲಿಯವರೆಗೆ ಭಾರತ-ಚೀನಾದ ನಡುವೆ ವೈಮನಸ್ಸು ತಪ್ಪಿದ್ದಲ್ಲ. ಆದರೆ ಭಾರತ ಅನಗತ್ಯವಾಗಿ ನೇಪಾಳದ ಜೊತೆ ಗಡಿವಿವಾದವನ್ನು ಬೆಳೆಸಿಕೊಂಡು ಹೋಗುವುದು ಸರಿಯಲ್ಲ. ಹೇಗಾದರೂ ಮಾಡಿ ಕೊಡು-ಕೊಳ್ಳುವ ದಾರಿಯಲ್ಲಿ ನೇಪಾಳದೊಂದಿಗೆ ಶಾಂತಿಸ್ಥಾಪನೆ ಮಾಡುವುದು ಎರಡೂ ದೇಶಗಳ ಸುಮಧುರ ಬಾಂಧವ್ಯಕ್ಕೆ ಅಗತ್ಯವಾಗಿದೆ.

 

 


ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ಪ್ರತಿಕ್ರಿಯೆಯ ಮೌಲ್ಯಮಾಪನಕ್ಕೆ ಸ್ವತಂತ್ರ ತನಿಖೆ

ಸದಸ್ಯ ರಾಷ್ಟ್ರಗಳ ಬೇಡಿಕೆಗೆ ಮಣಿದು ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಕ್ಕೆ ತನ್ನ ಪ್ರತಿಕ್ರಿಯೆಯ ಬಗ್ಗೆ ಸ್ವತಂತ್ರ ತನಿಖೆಯೊಂದಕ್ಕೆ ಆದೇಶಿಸಿದೆ. ಏಷ್ಯಾ-ಆಫ್ರಿಕಾ ರಾಷ್ಟ್ರಗಳು ಆಸ್ಟ್ರೇಲಿಯಾದ ನಾಯಕತ್ವದಲ್ಲಿ ಈ ತನಿಖೆಗೆ ಆಗ್ರಹಿದ್ದವು. ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕ ಕೂಡಾ ತೆರೆಮರೆಯಲ್ಲಿ ಈ ತನಿಖೆಗೆ ಬೆಂಬಲವಾಗಿ ನಿಂತಿದ್ದವು. ಸಾಂಕ್ರಾಮಿಕ ರೋಗದ ಉಗಮದ ಬಗ್ಗೆ ಈ ತನಿಖೆಯಲ್ಲಿ ಹೆಚ್ಚಿನ ವಿವರಣೆ ಸಿಗಲಾರದಾದರೂ ಸೋಂಕು ಪತ್ತೆಯಾದ ನಂತರದ 2020 ಜನೆವರಿ ಹಾಗೂ ಫೆಬ್ರವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರವು ತೀವ್ರ ತನಿಖೆಗೆ ಒಳಪಡಲಿದೆ.

ಸಾಂಕ್ರಾಮಿಕ ರೋಗದ ಬಗೆಗಿನ ತನಿಖೆಗೆ ಚೀನಾ ಅಡ್ಡಿಪಡಿಸಿದೆಯೆಂದು ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಸತತವಾಗಿ ಆಪಾದಿಸುತ್ತಾ ಬಂದಿದ್ದಾರೆ. ಚೀನಾ ಸರ್ಕಾರವು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ತಡೆಯೊಡ್ಡಿ ಕೋವಿಡ್-19 ರೋಗದ ಮೊದಲ ರೋಗಿ ಯಾರೆಂಬುದರ ಪತ್ತೆಗೆ ಅಡ್ಡಿಪಡಿಸಿದೆಯೆಂದೂ ಆಪಾದಿಸಲಾಗಿದೆ. ಮೈಕ್ ಪಾಂಪಿಯೋರವರು ಈ ಕೋವಿಡ್ ಚಿಕಿತ್ಸೆಗೆ ಅಮೆರಿಕದ ವೈದ್ಯಕೀಯ ಸಂಸ್ಥೆಗಳು ಮಾಡುತ್ತಿರುವ ಸಂಶೋಧನೆಯನ್ನು ಕದಿಯುವ ಪ್ರಯತ್ನವನ್ನೂ ಚೀನಾ ಮಾಡುತ್ತಿವೆಯೆಂದು ಹೇಳಿಕೆ ನೀಡಿದ್ದಾರೆ. ಜಗತ್ತಿನಾದ್ಯಂತ ಮೂರು ಲಕ್ಷ ಜನಕ್ಕೂ ಮಿಗಿಲಾಗಿ ಸಾವಿಗೆ ಕಾರಣವಾಗಿರುವ ಈ ರೋಗದ ಪತ್ತೆ-ಚಿಕಿತ್ಸೆಗೆ ಚೀನಾ ಸರ್ಕಾರವು ತಡೆಗೋಡೆ ಒಡ್ಡಿದೆಯೆಂದೂ ಬಲವಾಗಿ ಆಪಾದಿಸಿದ್ದಾರೆ.

ಚೀನಾ ಸರ್ಕಾರದ ವಿರುದ್ಧದ ಟೀಕೆ ಹಾಗೂ ನಿರ್ಣಯಗಳಿಗೆ ಆಸ್ಟ್ರೇಲಿಯಾ ಸರ್ಕಾರ ಮುಂದಾಳತ್ವ ವಹಿಸಿದಂತೆ ಕಾಣುತ್ತಿದೆ. ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಟೀವ್ ಮಾರಿಸನ್ ಹಾಗೂ ವಿದೇಶಾಂಗ ಮಂತ್ರಿ ಮಾರಿಸ್ ಪೇನ್ ಅವರು ಚೀನಾ ಸರ್ಕಾರದ ವಿರುದ್ಧ ನಿರಂತರವಾಗಿ ಗುಡುಗಿದ್ದಾರೆ. ಇದಕ್ಕೆ ವಿಚಲಿವಾದಂತೆ ಕಾಣುತ್ತಿರುವ ಚೀನಾ ಸರ್ಕಾರ ಆಸ್ಟ್ರೇಲಿಯಾದಿಂದ ಆಯಾತ ಮಾಡಿಕೊಳ್ಳುತ್ತಿದ್ದ ಬಾರ್ಲಿಯ ಮೇಲೆ ಶೇಕಡಾ 80 ಹೆಚ್ಚಿನ ಕಸ್ಟಂಮ್ಸ್ ಶುಲ್ಕ ವಿಧಿಸಿದ್ದೇ ಅಲ್ಲದೆ ಆಸ್ಟ್ರೇಲಿಯಾದ ಮಾಂಸ ಆಯಾತದ ಮೇಲೆ ನಿರ್ಬಂಧವನ್ನೇ ಹೇರಿದೆ. ಈ ರೀತಿಯಲ್ಲಿ ಆಸ್ಟ್ರೇಲಿಯಾಗೆ ಆರ್ಥಿಕ ಹೊಡೆತ ನೀಡಲು ಹೊರಟಿರುವ ಚೀನಾದ ಪ್ರತೀಕಾರ ಕ್ರಮವು ವ್ಯಾಪಕ ಖಂಡನೆಗೆ ಒಳಗಾಗಿದೆ. ಆಸ್ಟ್ರೇಲಿಯಾ ಈ ವಿವಾದವನ್ನು ವಿಶ್ವ ವ್ಯಾಪಾರಿ ಸಂಸ್ಥೆ [ಡಬ್ಲುಟಿಓ] ಮುಂದೆ ತರುವುದಾಗಿಯೂ ಹೇಳಿದೆ.

ಜಗತ್ತಿಗೆ ಕೊರೊನಾದಂತಹ ಮಾರಕ ಸಾಂಕ್ರಾಮಿಕ ರೋಗ ನೀಡಿದ ಚೀನಾ ದೇಶವನ್ನು ವಿಶ್ವಾದ್ಯಂತ ತುಚ್ಛವಾಗಿ ಕಾಣಲಾಗುತ್ತಿದೆ. ಚೀನಾದ ಗರ್ವ, ಹಿರಿಮೆ ಮತ್ತು ಸ್ಥಾನಮಾನಗಳು ಮಣ್ಣುಪಾಲಾಗಿವೆ. ಈಗಲಾದರೂ ಚೀನಾ ತನ್ನ ತಪ್ಪುಗಳನ್ನು ಅರಿತು ಬೇರೆ ದೇಶಗಳೊಡನೆ ತನ್ನ ಸಂಬಂಧವನ್ನು ಸುಧಾರಿಸಲು ಪ್ರಯತ್ನ ಪಡಬಹುದಾಗಿತ್ತು. ಆದರೆ ತಾನು ಬಿದ್ದರೂ ಮೀಸೆ ಮಣ್ಣಾಗಿಲ್ಲವೆನ್ನುವಂತೆ ವ್ಯವಹರಿಸುತ್ತಿರುವ ಚೀನಾ ಕಮ್ಯುನಿಸ್ಟ್ ಪಕ್ಷ ಚೀನಾ ದೇಶವನ್ನು ಜಾಗತಿಕ ಅಸ್ಪೃಶ್ಯನಾಗಿ ಮಾಡಲು ಹೊರಟಂತಿದೆ.

 

Leave a Reply

Your email address will not be published.