ವಿಶ್ವ ವಿದ್ಯಮಾನ

ವಿಶ್ವಸಂಸ್ಥೆಯ ಸುಧಾರಣೆಯೇಕೆ ತೆರೆಮರೆಗೆ ಸರಿದಿದೆ..?

2021-22ರ ಎರಡು ವರ್ಷದ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ. ಈ ಭದ್ರತಾ ಮಂಡಳಿಯಲ್ಲಿ ಐದು ಶಾಶ್ವತ ಸದಸ್ಯ ರಾಷ್ಟ್ರಗಳು ಹಾಗೂ ಹತ್ತು ತಾತ್ಕಾಲಿಕ ಸದಸ್ಯ ರಾಷ್ಟ್ರಗಳಿರುತ್ತವೆ. ಅಮೆರಿಕ, ಯುಕೆ, ಫ್ರಾನ್ಸ್, ಚೀನಾ ಹಾಗೂ ರಷ್ಯಾ ದೇಶಗಳು ಶಾಶ್ವತ ಸದಸ್ಯ ಸ್ಥಾನದೊಂದಿಗೆವಿಟೋಅಧಿಕಾರವನ್ನು ಕೂಡಾ ಹೊಂದಿವೆ.

1945ರಲ್ಲಿ ಪ್ರಾರಂಭಗೊಂಡ ವಿಶ್ವಸಂಸ್ಥೆಯು 51 ಸದಸ್ಯ ರಾಷ್ಟ್ರಗಳ ಕಾಲದಿಂದ ಇದೀಗ 193 ಸದಸ್ಯ ರಾಷ್ಟ್ರಗಳವರೆಗೆ ಬೆಳೆದಿದೆ. ಈ ಸಮಯದಲ್ಲಿ ವಿಶ್ವದಲ್ಲಿ ಆಮೂಲಾಗ್ರ ಬದಲಾವಣೆಗಳಾಗಿವೆ. ಏಷ್ಯಾ ಹಾಗೂ ಆಫ್ರಿಕಾಗಳ ಹತ್ತಾರು ವಸಾಹತು ರಾಷ್ಟ್ರಗಳು ಸ್ವಾತಂತ್ರö್ಯ ಪಡೆದು ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿಟ್ಟಿವೆ. ಬರ್ಲಿನ್ ಗೋಡೆ ಬೀಳಿಸುವ ಹಾಗೂ ರಷ್ಯಾದ ಕಮ್ಯುನಿಸ್ಟ್ ಸರ್ಕಾರ ಉರುಳಿಸುವ 1989 ರ ಸಮಯದಲ್ಲಿ ಯೂರೋಪಿನ ಏಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜಾಗತಿಕ ಉತ್ಪಾದನೆ ಶೇಕಡಾ 51 ರಷ್ಟಿದ್ದರೆ ಅದೇ ರಾಷ್ಟ್ರಗಳ ಪಾಲು ಈಗ ಕೇವಲ ಶೇಕಡಾ 30 ಕ್ಕೆ ಇಳಿದಿದೆ. ಇಷ್ಟೆಲ್ಲಾ ಆದರೂ ವಿಶ್ವಸಂಸ್ಥೆಯ ರೂಪುರೇಷೆಯಲ್ಲಿ ಆಗಬೇಕಿದ್ದ ಪ್ರಾತಿನಿಧಿಕ ಬದಲಾವಣೆಗಳು ನೆನೆಗುದಿಗೆ ಬಿದ್ದಿವೆ.

2005ರಲ್ಲಿ ವಿಶ್ವಸಂಸ್ಥೆಯ ಸುಧಾರಣೆ ಬಯಸಿ ಗಂಭೀರ ಚರ್ಚೆಯೊಂದು ಎದ್ದಿತ್ತು. ಅಮೆರಿಕಾದ ಮುಂದಾಳತ್ವದಲ್ಲಿ ಭದ್ರತಾ ಮಂಡಳಿಗೆ ಇನ್ನೂ ನಾಲ್ಕೆöÊದು ಶಾಶ್ವತ ಸದಸ್ಯ ರಾಷ್ಟ್ರಗಳನ್ನು ಸೇರಿಸಿಕೊಳ್ಳಬೇಕು ಹಾಗೂ ತಾತ್ಕಾಲಿಕ ಸದಸ್ಯತ್ವವನ್ನು ಕೂಡಾ ಇನ್ನೂ ಹೆಚ್ಚು ಪ್ರಾತಿನಿಧಿಕವಾಗಿ ಮಾಡಬೇಕು ಎಂಬ ಕೂಗು ಎದ್ದಿತ್ತು. ಇದರ ಪರವಾಗಿ ಪಿ-4 ಎಂಬ ಗುಂಪು ಕೆಲಸ ಮಾಡಿತ್ತು. ಭಾರತ, ಜಪಾನ್, ಜರ್ಮನಿ ಹಾಗೂ ಬ್ರೆಜಿಲ್ ದೇಶಗಳನ್ನು ಒಳಗೊಂಡ ಪಿ-4 ಗುಂಪಿಗೆ ಅಮೆರಿಕ, ಯುಕೆ ಹಾಗೂ ಫ್ರಾನ್ಸ್ ಕೂಡಾ ಪರವಾಗಿದ್ದವು. ಆದರೆ ಪಿ-4 ವಿರುದ್ಧವಾಗಿ ಯುನೈಟೆಡ್ ಫಾರ್ ಕನ್ಸೆನ್ಸಸ್ (ಸರ್ವಸಮ್ಮತಿಗಾಗಿ ಒಕ್ಕೂಟ) ಎಂಬ ಗುಂಪೊAದು ಕೆಲಸ ಮಾಡಿತ್ತು. ಪಾಕಿಸ್ತಾನ, ದಕ್ಷಿಣ ಕೊರಿಯಾ, ಅರ್ಜೆಂಟೀನಾ ಹಾಗೂ ಇಟಲಿ ರಾಷ್ಟ್ರಗಳ ಈ ಗುಂಪು ಪಿ-4 ರಾಷ್ಟ್ರಗಳಿಗೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಸ್ಥಾನ ನೀಡುವುದನ್ನು ವಿರೋಧಿಸಿ ತಾತ್ಕಾಲಿಕ ಸದಸ್ಯ ರಾಷ್ಟ್ರಗಳ ಸಂಖ್ಯೆಯನ್ನು ಏರಿಸಿದರೆ ಸಾಕೆಂದು ವಾದಿಸಿತ್ತು. ರಷ್ಯಾ ಈ ವಿಷಯದಲ್ಲಿ ತಟಸ್ಥ ಧೋರಣೆ ತಳೆದರೆ ಚೀನಾ ದೇಶವು ಭಾರತ ಮತ್ತು ಜಪಾನಿಗೆ ಶಾಶ್ವತ ಸದಸ್ಯ ಸ್ಥಾನವನ್ನು ನೀಡುವುದನ್ನು ಬಲವಾಗಿ ವಿರೋಧಿಸಿತ್ತು.

ಆ ನಂತರದಲ್ಲಿ ವಿಶ್ವಸಂಸ್ಥೆ ಹಾಗೂ ಭದ್ರತಾ ಮಂಡಳಿಯ ಸುಧಾರಣೆಯ ವಿಷಯ ನೆನೆಗುದಿಗೆ ಬಿದ್ದಿದೆ. ರಷ್ಯಾದ ಧೋರಣೆ ಮತ್ತು ಚೀನಾದ ಅಸಹಕಾರದ ಮುಂದೆ ಬೇರೆ ರಾಷ್ಟ್ರಗಳು ಮೌನ ವಹಿಸಿವೆ. ಹಿಂದಿನ ಅಧ್ಯಕ್ಷ ಬರಾಕ್ ಓಬಾಮ ಹಾಗೂ ಈಗಿನ ಡಾನಲ್ಡ್ ಟ್ರಂಪ್ ಭಾರತಕ್ಕೆ ಶಾಶ್ವತ ಸ್ಥಾನ ನೀಡಲಾಗುವುದೆಂದು ಹೇಳುತ್ತಾ ಬಂದಿದ್ದರೂ ಈ ವಿಷಯದಲ್ಲಿ ಹೆಚ್ಚಿನದೇನನ್ನೂ ಮಾಡಲಾಗದೆ ಉಳಿದಿದ್ದಾರೆ. ಈ ಮಧ್ಯೆ ವಿಶ್ವಸಂಸ್ಥೆಯು ತನ್ನ ಅಂಗಸಂಸ್ಥೆಗಳ ಜೊತೆಯಲ್ಲಿ ತಾನೂ ನಿರುಪದ್ರವಿ ಹಾಗೂ ನಿರುಪಯೋಗಿ ಆಗಿರುವ ಹಣೆಪಟ್ಟಿ ಪಡೆಯುತ್ತಿದೆ.


ಸಾವಿನಲ್ಲಿ ಅಮರನಾದ ಜಾರ್ಜ್ ಫ್ಲಾಯ್ಡ್

ಬಿಳಿಯ ವರ್ಣದ ಪೋಲಿಸ್ ಅಧಿಕಾರಿಯೊಬ್ಬನಿಂದ ಕೊಲೆಗೀಡಾದ ಆಫ್ರಿಕ-ಅಮೆರಿಕ ಮೂಲದ ಜಾರ್ಜ್ ಫ್ಲಾಯ್ಡ್ ಅಮೆರಿಕದ ಇತಿಹಾಸದಲ್ಲಿ ಅಮರತ್ವ ಪಡೆದುಕೊಂಡು ದೇಶಾದ್ಯಂತ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಚಳವಳಿಯ ಪುನರ್-ಪ್ರೇರಕನಾಗಿ ರೂಪುಗೊಂಡಿದ್ದಾನೆ. ಜಾರ್ಜ್ ಫ್ಲಾಯ್ಡ್ನ ಸಾವು ಜಗತ್ತಿನಾದ್ಯಂತ ಜನಾಂಗೀಯ ದ್ವೇಷ ಹಾಗೂ ಹಿಂಸೆಯ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ. ಅಮೆರಿಕದಲ್ಲಂತೂ ಈ ಚಳವಳಿ ಹಿಂಸಾತ್ಮಕ ರೂಪವನ್ನು ಪಡೆದು ಶ್ವೇತವರ್ಣೀಯ ಪೊಲೀಸರ ದಬ್ಬಾಳಿಕೆಯ ವಿರುದ್ಧ ನಡೆಸಲಾಗುತ್ತಿರುವ ನಿರ್ಣಾಯಕ ಹೋರಾಟದಂತೆಯೂ ಕಾಣಿಸುತ್ತಿದೆ.

46 ವರ್ಷದ ಜಾರ್ಜ್ ಫ್ಲಾಯ್ಡ್ ಅಮೆರಿಕದ ಪೂರ್ವ-ಉತ್ತರ ನಗರ ಮಿನಿಯಾಪೊಲೀಸ್‌ನ ಅಂಗಡಿಯೊಂದರಲ್ಲಿ ಇಪ್ಪತ್ತು ಡಾಲರ್‌ಗಳ ನಕಲಿ ನೋಟೊಂದರ ಚಲಾವಣೆಗೆ ಅರಿತೋ ಅರಿಯದೆಯೋ ಪ್ರಯತ್ನಿಸಿ ಸಿಕ್ಕಿಹಾಕಿಕೊಂಡಿದ್ದ. ಅಂಗಡಿಯ ಮಾಲೀಕನಿಂದ ಪೊಲೀಸ್ ಕರೆಸಲಾಗಿ ಅವರು ಬಂದು ಫ್ಲಾಯ್ಡ್ ನನ್ನು ಬಂಧಿಸಿದ್ದರು. ಈ ಬಂಧನದ ಸಂದರ್ಭದಲ್ಲಿ ಬಿಳಿಯ ವರ್ಣದ ಪೊಲೀಸನೊಬ್ಬ ಫ್ಲಾಯ್ಡ್ನ ಕತ್ತಿನ ಮೇಲೆ ತನ್ನ ಮೊಣಕಾಲಿಟ್ಟು ಅದುಮಿ ನಿಂತಿದ್ದ. ತಾನು ಉಸಿರಾಡಲೂ ಕಷ್ಟವಾಗುತ್ತಿದೆಯೆಂದು ಜಾರ್ಜ್ ಫ್ಲಾಯ್ಡ್ ಬೇಡಿಕೊಂಡರೂ ಅಧಿಕಾರಿ ಫ್ಲಾಯ್ಡ್ ನ ಕತ್ತಿನ ಮೇಲಿನ ತನ್ನ ಮೊಣಕಾಲು ಹಿಡಿತವನ್ನು ಎಂಟು ನಿಮಿಷ ಹಾಗೂ ನಲವತ್ತಾರು ಸೆಕೆಂಡುಗಳವರೆಗೆ ಮುಂದುವರೆಸಿದ್ದ. ಕಡೆಗೆ ತನ್ನ ತಾಯಿಯ ಹೆಸರನ್ನೊಮ್ಮೆ ಹೇಳಿ ಜಾರ್ಜ್ ಫ್ಲಾಯ್ಡ್ ಕೊನೆಯ ಉಸಿರೆಳೆದಿದ್ದ.

ಇದೇ ಮೇ 25 ರಂದು ನಡೆದ ಈ ಘಟನೆಯನ್ನು ಸೆಲ್‌ಫೋನಿನಲ್ಲಿ ಚಿತ್ರೀಕರಿಸಲಾಗಿತ್ತು. ಈ ವಿಡಿಯೋ ವೈರಲ್ ಆಗಿ ಕರಿಯರ ಮೇಲಿನ ದಮನಕಾರಿ ನಡವಳಿಕೆ ಹಾಗೂ ಜಾರ್ಜ್ ಫ್ಲಾಯ್ಡ್ ನ ‘ಐ ಕಾಂಟ್ ಬ್ರೀದ್’ ಎಂಬ ಕಡೆಯ ನುಡಿಗಳು ಅಮೆರಿಕದಾದ್ಯಂತ ಅನುರಣನಗೊಂಡಿದ್ದವು. ತಕ್ಷಣ ಸ್ಪೋಟಗೊಂಡ ಜನಾಂಗೀಯ ಪ್ರತಿಭಟನೆಗಳು ವಾಶಿಂಗ್ಟನ್ ಡಿ.ಸಿ. ಸೇರಿದಂತೆ ಅಮೆರಿಕದ ಹಲವು ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ, ಲೂಟಿ ಮತ್ತು ದೊಂಬಿಗಳಿಗೆ ಎಡೆಮಾಡಿಕೊಟ್ಟಿದೆ. ಇದರ ಜೊತೆಯಲ್ಲಿಯೇ ಅಮೆರಿಕದಲ್ಲಿ ಕರಿಯ ವರ್ಣೀಯರ ನಾಗರಿಕ ಹಕ್ಕು ಮತ್ತು ಆರ್ಥಿಕ-ಸಾಮಾಜಿಕ ಸ್ಥಿತಿಗತಿಗಳ ಬಗ್ಗೆಯೂ ಗಮನ ಸೆಳೆದಿದೆ.

1865ರಲ್ಲಿ ಅಮೆರಿಕದಲ್ಲಿ ಗುಲಾಮಗಿರಿಯನ್ನು ಕಾನೂನುಬಾಹಿರವೆಂದು ಘೋಷಿಸಲಾಯಿತಾದರೂ ಕರಿಯ ವರ್ಣೀಯರಿಗೆ ಸಮಾನ ನಾಗರೀಕ ಹಕ್ಕು ದೊರಕಲು ನಂತರದ ಒಂದು ಶತಮಾವವೇ ಬೇಕಾಗಿತ್ತು. 1964-65ರಲ್ಲಿ ನಾಗರಿಕ ಹಕ್ಕು-ಮತದಾನದ ಹಕ್ಕಿನ ಜೊತೆಗೆ 1968ರಲ್ಲಿ ಸಮಾನ ವಸತಿಯ ಹಕ್ಕನ್ನು ಕರಿಯ ವರ್ಣೀಯರಿಗೆ ನೀಡಲಾಯಿತು. 1619ರಿಂದ ಅಮೆರಿಕಕ್ಕೆ ಸುಮಾರು 4,00,000 ಕರಿಯ ವರ್ಣೀಯ ಗುಲಾಮರನ್ನು ಕರೆತರಲಾಗಿದ್ದರೆ ಈಗ ಅಮೆರಿಕದಲ್ಲಿ ಒಟ್ಟು 3.6 ಕೋಟಿ ಕರಿಯ ವರ್ಣೀಯರಿದ್ದಾರೆ. ಇವರಲ್ಲಿ ಬಹುತೇಕರು ನಗರಗಳ ಒಳಗಣ ಸರ್ಕಾರಿ ನಿರ್ಮಿತ ವಸಾಹತುಗಳಲ್ಲಿ ನೆಲೆಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಶ್ವೇತವರ್ಣೀಯರು ನಗರಗಳ ಹೊರವಲಯದ ಸಬರ್ಬುಗಳಲ್ಲಿ ನೆಲೆಸಿದ್ದಾರೆ. ಈ ಎರಡೂ ವರ್ಣೀಯರ ನಡುವೆ ಅಘೋಷಿತ ಕಂದಕವೊಂದು ನಿರ್ಮಾಣವಾಗಿ ಪರಸ್ಪರ ವೈಮನಸ್ಸಿನ ವಾತಾವರಣ ಮುಂದುವರೆದು ಬಂದಿದೆ.

ಈಗ ಜಾರ್ಜ್ ಫ್ಲಾಯ್ಡ್ನ ನಿಧನ ಅಮೆರಿಕದಲ್ಲಿ ಪೊಲೀಸ್ ಸುಧಾರಣೆ ಹಾಗೂ ಅಪರಾಧಿಕ ನ್ಯಾಯ ವ್ಯವಸ್ಥೆಯ ಸುಧಾರಣೆಗೆ ಬೇಡಿಕೆಯಿಟ್ಟಿದೆ. ಪೊಲೀಸ್ ಇಲಾಖೆ ಹಾಗೂ ಬೇರೆಲ್ಲೆಡೆಯಲ್ಲಿ ಕರಿಯ ವರ್ಣೀಯರಿಗೆ ಹೆಚ್ಚಿನ ಸಂಖ್ಯೆಯ ಕೆಲಸ ಹಾಗೂ ಪ್ರಾತಿನಿಧ್ಯ ನೀಡಬೇಕೆಂಬ ಕೂಗು ಎದ್ದಿದೆ. ಈ ಚಳವಳಿ ಅಮೆರಿಕದ ಜನಾಂಗೀಯ ನಡವಳಿಕೆ ಹಾಗೂ ಸಾಂಸ್ಥಿಕ ರಚನೆಗಳಲ್ಲಿ ಸ್ವಲ್ಪವಾದರೂ ಬದಲಾವಣೆ ತಂದರೆ ಜಾರ್ಜ್ ಫ್ಲಾಯ್ಡ್ನ ಅನಗತ್ಯ ಸಾವು ವ್ಯರ್ಥವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಜಾರ್ಜ್ ಫ್ಲಾಯ್ಡ್ನನ್ನು ಕೊಂದವರಿಗೆ ಸಿಗುವ ಶಿಕ್ಷೆ ಹಾಗೂ ಚಳವಳಿಯ ಸ್ವರೂಪಗಳು ಈ ಬೆಳವಣಿಗೆಯ ದಿಕ್ಸೂಚಿಯಾಗಲಿವೆ.


ಚೀನಾ ವಿರುದ್ಧ ಜಾಗತಿಕ ಒಕ್ಕೂಟ ರಚನೆ

ಚೀನಾ ವಿರುದ್ಧ ವಿಶ್ವದ ದೇಶಗಳು ಒಂದಾಗುವ ಮುನ್ಸೂಚನೆಗಳು ದಟ್ಟವಾಗಿ ದೊರೆಯಲಾರಂಭಿಸಿವೆ. ಈ ದಿಕ್ಕಿನಲ್ಲಿ ಹಲವು ಆಯಾಮಗಳಲ್ಲಿ ಕೆಲಸಗಳು ಪ್ರಾರಂಭವಾಗಿದ್ದು ಮುಂದಿನ ತಿಂಗಳುಗಳಲ್ಲಿ ಈ ಪ್ರಯತ್ನಗಳು ಕಮ್ಯುನಿಸ್ಟ್ ಚೀನಾ ವಿರುದ್ಧ ಜಾಗತಿಕ ಒಕ್ಕೂಟವೊಂದರ ರಚನೆಗೆ ಕಾರಣವಾದರೆ ಆಶ್ಚರ್ಯವೇನಿಲ್ಲ.

ಬ್ರಿಟನ್ ದೇಶದ ಪ್ರಧಾನಿ ಬೋರಿಸ್ ಜಾನ್ಸನ್‌ರವರು ಪ್ರಜಾಪ್ರಭುತ್ವ ಪಾಲಿಸುವ ದೇಶಗಳ ಡಿ-10 ಒಕ್ಕೂಟವೊಂದರ ರಚನೆಗೆ ಕರೆ ಕೊಟ್ಟಿದ್ದಾರೆ. ಈ ಒಕ್ಕೂಟದಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ಕೆನಡಾ ಹಾಗೂ ಜಪಾನ್ ಜೊತೆಗೆ ಭಾರತ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಕೊರಿಯಾಗಳನ್ನು ಸೇರಿಸಿಕೊಳ್ಳುವ ಆಲೋಚನೆಯಿದೆ. ಡೆಮಾಕ್ರೆಟಿಕ್-10 ಹೆಸರಿನ ಈ ಒಕ್ಕೂಟವು ವಿಶ್ವದಲ್ಲಿ ಚೀನಾದ ಆರ್ಥಿಕ ಹಾಗೂ ಮಿಲಿಟರಿ ಪ್ರಭಾವವನ್ನು ಎದುರಿಸುವೆಡೆಗೆ ಗಮನ ಹರಿಸುವ ಇರಾದೆ ಹೊಂದಿದೆ.

ಅದೇ ರೀತಿಯಲ್ಲಿ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳ ಸಂಸತ್ ಸದಸ್ಯರ ಅಂತರ ಸಂಸದೀಯ ಒಡಂಬಡಿಕೆಯೊಂದು ಕೂಡಾ ಪ್ರಾರಂಭವಾಗಿದೆ. ಅಮೆರಿಕದ ರಿಪಬ್ಲಿಕನ್ ಸೆನೆಟರ್ ಮಾರ್ಕೋ ರೂಬಿಯೋ, ಡೆಮಾಕ್ರೆಟಿಕ್ ಸೆನೆಟರ್ ಬಾಬ್ ಮೆನೆಂಡಿಸ್, ಜಪಾನ ಮಾಜಿ ರಕ್ಷಣಾ ಸಚಿವ ಜನರಲ್ ನಕಾಟಾನಿ ಹಾಗೂ ಯುಕೆಯ ಪ್ರಭಾವಿ ಸಂಸತ್ ಸದಸ್ಯ ಡಂಕನ್ ಸ್ಮಿತ್‌ರವರು ಈ ಒಡಂಬಡಿಕೆಯ ಸಹ-ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರೆ. ಈ ಸಂಸದೀಯ ಗುಂಪು ಚೀನಾದ ಆಕ್ರಮಣಕಾರಿ ಧೋರಣೆಯ ವಿರುದ್ಧ ದನಿಯೆತ್ತಲಿದೆ.

ವಿಶ್ವಕ್ಕೆ ಕೊರೊನಾ ಸೋಂಕನ್ನು ಕೊಡುಗೆಯಾಗಿ ನೀಡಿರುವ ಚೀನಾ ಹಲವು ಜಾಗತಿಕ ಸಾಂಸ್ಥಿಕ ವ್ಯವಸ್ಥೆಗಳನ್ನು ದುರುಪಯೋಗಿಸಿಕೊಂಡು ಪ್ರಪಂಚದ ಮೇಲೆ ಪ್ರಭುತ್ವ ಸಾಧಿಸಲು ಹೊರಟಿದೆ. ಹ್ವಾವೆ ಕಂಪನಿಯ 5ಜಿ ತಂತ್ರಜ್ಞಾನವೂ ಚೀನಾಕ್ಕೆ ಇನ್ನಿಲ್ಲದ ಬೇಹುಗಾರಿಕೆಯ ಸಾಧನವಾಗಲಿದೆ. ಚೀನಾದ ಕಂಪನಿಗಳು ನೂರಾರು ಸಂಖ್ಯೆಯಲ್ಲಿ ತಾಂತ್ರಿಕ ವಿಷಯಗಳ ಹಕ್ಕುಸ್ವಾಮ್ಯಕ್ಕೆ ಅರ್ಜಿ ಸಲ್ಲಿಸುತ್ತಿವೆ. ಚೀನಾದ ಬ್ಯಾಂಕುಗಳು ಅಮೆರಿಕ ಹಾಗೂ ಯೂರೋಪಿನೆಲ್ಲೆಡೆ ಸಾಲಪತ್ರಗಳನ್ನು ಖರೀದಿಸಿ ಈ ಐರೋಪ್ಯ ಸಂಸ್ಥೆಗಳ ಮೇಲೆ ಹತೋಟಿ ಸಾಧಿಸ ಹೊರಟಿವೆ. ಹೀಗೇ ಮುಂದುವರೆದರೆ ಮುಂದಿನ ಒಂದೆರೆಡು ದಶಕಗಳಲ್ಲಿ ಇಡೀ ಪ್ರಪಂಚವೇ ಚೀನಾ ದೇಶದ ವಸಾಹತಾಗಿ ಪರಿವರ್ತಿತವಾದರೆ ಆಶ್ಚರ್ಯ ಪಡಬೇಕಿಲ್ಲ. ಇದನ್ನು ಎದುರಿಸಲು ಇದೀಗ ಶುರುವಾಗಿರುವ ಒಕ್ಕೂಟ-ಒಡಂಬಡಿಕೆಗಳ ಹಾದಿ ಕಷ್ಟಸಾಧ್ಯ ಹಾಗೂ ಕಠಿಣವಾಗಿದೆ.

 

Leave a Reply

Your email address will not be published.