ವಿಶ್ವ ವಿದ್ಯಮಾನ

ಹಾಂಗ್‌ಕಾಂಗ್‌ನಲ್ಲಿ ಸ್ವಾಯತ್ತತೆಯ ಕೊನೆಯ ಅಧ್ಯಾಯ

‘ಒಂದು ದೇಶ ಎರಡು ವ್ಯವಸ್ಥೆ’ ಎಂದು 1997ರಲ್ಲಿ ಶುರುವಾಗಿದ್ದ ಹಾಂಗ್‌ಕಾಂಗಿನ ಸ್ವಾಯತ್ತತೆಯ ಕೊನೆಯ ಅಧ್ಯಾಯ ಇದೀಗ ಪ್ರಾರಂಭವಾಗಿದೆ. ಬ್ರಿಟನ್ ಮತ್ತು ಚೀನಾ ಮಧ್ಯೆ ಆದ ಒಡಂಬಡಿಕೆಯಂತೆ 1997 ರಿಂದ 2047 ರವರೆಗೆ ಹಾಂಗ್‌ಕಾಂಗಿನಲ್ಲಿ ‘ಮೂಲಭೂತ ಕಾನೂನಿ’ನಂತೆ ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವ ಇರಬೇಕಿತ್ತು. ಚೀನಾದ ಕಮ್ಯುನಿಸ್ಟ್ ಸರ್ಕಾರ ಸೈನ್ಯ, ವಿದೇಶಾಂಗ ನೀತಿ ಮತ್ತಿತರ ಕೆಲವೇ ವಿಷಯಗಳಲ್ಲಿ ತನ್ನ ಅಧಿಕಾರ ಚಲಾಯಿಸಿ ಸ್ಥಳೀಯ ಸರ್ಕಾರಕ್ಕೆ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಡಬೇಕಿತ್ತು. ಆದರೆ ಈ ಒಡಂಬಡಿಕೆಯ ಮೂಲಭೂತ ಸೂತ್ರವಾದ ವೈಯಕ್ತಿಕ ಸ್ವಾತಂತ್ರö್ಯಕ್ಕೆ ಚೀನಾ ಸರ್ಕಾರ ಕೊಡಲಿ ಪೆಟ್ಟು ನೀಡಿದೆ.

ಇದೇ ಜೂನ್ 30 ರಂದು ಚೀನಾದ ಸಂಸತ್ತು ಮತ್ತು ಸರ್ಕಾರದಿಂದ ಜಾರಿಯಾದ ‘ರಾಷ್ಟ್ರೀಯ ಭದ್ರತಾ ಕಾನೂನಿ’ನಂತೆ ಚೀನಾದ ಕೇಂದ್ರ ಸರ್ಕಾರ ಹಾಂಗ್‌ಕಾಂಗಿನ ಯಾವುದೇ ನಾಗರಿಕನ ಮೇಲೆ ದೇಶದ್ರೋಹ, ಭಯೋತ್ಪಾದನೆ ಹಾಗೂ ದೇಶವಿರೋಧಿ ಆರೋಪ ಹೊರಿಸಿ ಬಂಧಿಸಬಹುದಾಗಿದೆ. ಈ ರೀತಿಯ ಬಂಧಿತರನ್ನು ಹಾಂಗ್‌ಕಾಂಗಿನ ಹೊರಗೆ ಚೀನಾದ ಪ್ರದೇಶಕ್ಕೆ ಕರೆದೊಯ್ದು ಚೀನಾದ ಕಾನೂನಿನಂತೆಯೇ ಶಿಕ್ಷೆ ನೀಡಬಹುದಾಗಿದೆ. ಅಲ್ಲಿಗೆ ಹಾಂಗ್‌ಕಾಂಗಿನ ಮೂಲಭೂತ ಕಾನೂನಿನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದು ಪ್ರಜಾಪ್ರಭುತ್ವ ಚಳವಳಿಗೆ ಮಾರಕ ಹೊಡೆತ ಬಿದ್ದಿದೆ. ಚೀನಾದ ಸೈನಿಕರು ಮತ್ತು ಪೊಲೀಸರು ಯಾವುದೇ ಕ್ಷಣದಲ್ಲಾದರೂ ಹಾಂಗ್‌ಕಾಂಗಿನ ಪ್ರಜೆಯನ್ನು ಬಂಧಿಸಿ ಕರೆದೊಯ್ಯಬಹುದೆಂದು ಅಲ್ಲಿಯ ಜನ ಭಯಭೀತರಾಗಿದ್ದಾರೆ. ಇಲ್ಲಿಯವರೆಗೆ ನಡೆಯುತ್ತಿದ್ದ ಶಾಂತಿಯುತ ಚಳವಳಿಯೂ ಸ್ತಬ್ಧವಾಗಿ ಜನರು ಹಾಂಗ್‌ಕಾಂಗ್ ತೊರೆಯುವ ಒತ್ತಡಕ್ಕೆ ಒಳಗಾಗಿದ್ದಾರೆ.

ಸಹಜವಾಗಿ ವಿಶ್ವದೆಲ್ಲೆಡೆ ಚೀನಾದ ಈ ಹೊಸ ಕಾನೂನುಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಮೆರಿಕ ಹಾಗೂ ಬ್ರಿಟನ್ ಸರ್ಕಾರಗಳು ಚೀನಾದ ಕ್ರಮವನ್ನು 1997ರ ಕರಾರು ಉಲ್ಲಂಘನೆಯೆಂದು ಕಟುವಾಗಿ ಟೀಕಿಸಿವೆ. ಈ ಯಾವುದೇ ಟೀಕೆಗಳಿಗೆ ಮಣಿಯದ ಚೀನಾ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಚೀನಾ ರೀತಿನೀತಿಗಳನ್ನು ಮೊದಲಿನಿಂದಲೂ ಅರಿತಿರುವ ಜಪಾನ್, ಕೊರಿಯಾ, ಟೈವಾನ್ ಹಾಗೂ ದಕ್ಷಿಣ-ಪೂರ್ವ ದೇಶಗಳ ಒಕ್ಕೂಟ ‘ನಾವು ಮೊದಲೇ ಹೇಳಿದ್ದೆವು’ ಎಂದು ಅಣಕಿಸುವಂತೆ ಮಾತನಾಡಿವೆ.

ಹಾಂಗ್‌ಕಾಂಗಿನಲ್ಲಿ ಉಳಿದಿರುವ 30 ಲಕ್ಷ ನಾಗರಿಕರಿಗೆ ತಾನು ಪೌರತ್ವ ನೀಡಲು ಬದ್ಧವೆಂದು ಬ್ರಿಟನ್ ಪುನರುಚ್ಛರಿಸಿದೆ. ಪೌರತ್ವ ಹಾಗೂ ವಲಸೆ ಬಯಸುವ ಹಾಂಗ್‌ಕಾಂಗಿನ ನಾಗರಿಕರಿಗೆ ಯಾವುದೇ ಪ್ರಶ್ನೆಯಿಲ್ಲದೆ ಐದು ವರ್ಷಗಳ ವಸತಿ ಪರ್ಮಿಟ್ ನೀಡಿ ನಂತರದಲ್ಲಿ ಪೌರತ್ವವನ್ನು ನೀಡುವುದಾಗಿಯೂ ಬ್ರಿಟನ್ ಹೇಳಿದೆ. ಅದೇ ರೀತಿಯಲ್ಲಿ ಆಸ್ಟ್ರೇಲಿಯಾ ಹಾಗೂ ಟೈವಾನ್ ರಾಷ್ಟ್ರಗಳೂ ಸಹಾ ಹಾಂಗ್‌ಕಾಂಗಿನಿಂದ ವಲಸೆ ಬಯಸುವ ನಾಗರಿಕರಿಗೆ ತಾವು ಆಶ್ರಯ ನೀಡುವುದಾಗಿ ಹೇಳಿಕೊಂಡಿವೆ. ಆದರೆ ಹಾಂಗ್‌ಕಾಂಗಿನ ಎಲ್ಲ ನಾಗರಿಕರು ವಲಸೆ ಹೋಗುವ ಇರಾದೆಯಲ್ಲಿ ಇರಲಾರರು. ಇವರಲ್ಲಿ ಒಟ್ಟು 4 ರಿಂದ 5 ಲಕ್ಷ ಜನ ಮಾತ್ರ ಕ್ರಮೇಣ ವಲಸೆ ಹೋಗುವ ಸಾಧ್ಯತೆಯಿದ್ದು ಇವರಲ್ಲಿ ಬಹುತೇಕರು ಬ್ರಿಟನ್ ದೇಶವನ್ನೇ ಆಯ್ಕೆ ಮಾಡಿಕೊಳ್ಳಬಹುದೆಂದು ಎಣಿಸಲಾಗಿದೆ.

ಈ ಮಧ್ಯೆ ಅಮೆರಿಕವು ಹಾಂಗ್‌ಕಾಂಗಿಗೆ ನೀಡಿದ್ದ ‘ವಿಶೇಷ ದರ್ಜೆ’ಯ ಸ್ಥಾನಮಾನವನ್ನು ವಜಾಗೊಳಿಸಿ ಚೀನಾದ ಮೇಲೆ ನಿರ್ಬಂಧ ಹೇರುವುದಾಗಿ ಘೋಷಿಸಿದೆ. ಚೀನಾ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳಿಗೆ ನೀಡಿದ್ದ ವೀಸಾ ಹಿಂದೆಗೆಯುವುದೂ ಸೇರಿದಂತೆ ಮುಂದಿನ ದಿನಗಳಲ್ಲಿ ಚೀನಾ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದೆ. ಈ ನಡುವೆ ಹಾಂಗ್‌ಕಾಂಗಿನಿಂದಲೇ ಟಿಬೆಟ್, ಪೂರ್ವ ತುರ್ಕಿಸ್ತಾನ (ಉಯ್‌ಘುರ್ ಪ್ರಾಂತ್ಯ), ಟೈವಾನ್ ಹಾಗೂ ಹಾಂಗ್‌ಕಾಂಗ್ ಪ್ರದೇಶಗಳ ಸ್ವಾತಂತ್ರ್ಯ ಚಳವಳಿ ಘೋಷಣೆಯಾಗಿದೆಯೆಂದು ವರದಿಯಾಗಿದೆ.


ನೇಪಾಳದ ಸರ್ಕಾರದಲ್ಲಿ ತೀವ್ರ ಬಿಕ್ಕಟ್ಟು

ಕೆ.ಪಿ.ಶರ್ಮ ಓಲಿ ನೇತೃತ್ವದ ನೇಪಾಳ ಕಮುನಿಸ್ಟ್ ಪಕ್ಷದ ಸರ್ಕಾರದಲ್ಲಿ ತೀವ್ರ ಬಿಕ್ಕಟ್ಟು ಎದುರಾಗಿದೆ. ಪ್ರಧಾನಿ ಓಲಿ ಹಾಗೂ ಹಿಂದಿನ ಪ್ರಧಾನಿ ‘ಪ್ರಚಂಡ’ ಅವರ ಮಾತಿನ ಸಮರ ತಾರಕಕ್ಕೇರಿದ್ದು ಪಕ್ಷ ಹಾಗೂ ಸರ್ಕಾರಗಳ ಮೇಲೆ ಹತೋಟಿ ಪಡೆಯಲು ಉಭಯ ಬಣಗಳು ಇನ್ನಿಲ್ಲದ ಕಸರತ್ತು ಮಾಡಿವೆ. ಸರ್ಕಾರ ಅಲ್ಪಮತಕ್ಕೆ ಇಳಿಯಬಹುದೆಂಬ ಸಾಧ್ಯತೆಯಲ್ಲಿ ನೇಪಾಳ ಕಾಂಗ್ರೆಸ್ ಪಕ್ಷ ತಾನು ಓಲಿ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಹೇಳಿಕೊಂಡಿದೆ.

2006ರಲ್ಲಿ ಭಾರತದ ಮಧ್ಯಸ್ಥಿಕೆಯಲ್ಲಿ ನೇಪಾಳದ ಎರಡು ಕಮ್ಯುನಿಸ್ಟ್ ಪಕ್ಷಗಳು ಶಸ್ತ್ರಾಸ್ತ್ರ ಸಂಘರ್ಷ ತೊರೆದು ಪ್ರಜಾಪ್ರಭುತ್ವದ ಹಾದಿ ಹಿಡಿದಿದ್ದವು. 2017ರಲ್ಲಿ ನಡೆದ ಚುನಾವಣೆಯಲ್ಲಿ ಈ ಎರಡೂ ಬಣಗಳು ಒಟ್ಟಾರೆಯಾಗಿ ಚುನಾವಣೆ ಎದುರಿಸಿ ನೇಪಾಳ ಸಂಸತ್ತಿನ ಒಟ್ಟು 275 ಸ್ಥಾನಗಳಲ್ಲಿ 174 ಸ್ಥಾನಗಳನ್ನು ಗೆದ್ದಿದ್ದವು. ಆಗ ಓಲಿಗೆ ಪ್ರಧಾನಿಯಾಗಲು ಬಿಟ್ಟುಕೊಟ್ಟ ಪುಷ್ಪ ಕುಮಾರ್ ಧಹಾಲ್ (ಪ್ರಚಂಡ) ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಮೊದಲಿನಿಂದಲೂ ಉಗ್ರವಾಗಿ ಭಾರತ ವಿರೋಧಿ ನಿಲುವು ತಳೆದಿರುವ ಪ್ರಧಾನಿ ಓಲಿ ಇದೀಗ ನೇಪಾಳದ ಭೂಪಟವನ್ನೇ ಬದಲಾಯಿಸಿ ಕಾಲಾಪಾನಿ ಪ್ರದೇಶವನ್ನು ನೇಪಾಳದ ನಕ್ಷೆಗೆ ಸೇರಿಸಿದ್ದಾರೆ. ಇದರೊಂದಿಗೆ ಭಾರತದೊಂದಿಗೆ ಬಗೆಹರಿಯದ ಬಿಕ್ಕಟ್ಟೊಂದನ್ನು ಸೃಷ್ಟಿಸಿದ್ದಾರೆ. ಇದರ ಜೊತೆಗೆ ನೆರೆಯ ಚೀನಾದ ಜೊತೆಗೆ ಗೆಳೆತನ ಸಾಧಿಸಿ ಭಾರತ ವಿರೋಧಿ ಚಟುವಟಿಕೆಗಳಿಗೆ ಕೂಡಾ ಜಾಗ ನೀಡಿದ್ದಾರೆ.

ಆದರೆ ಓಲಿಯವರಿಗೆ ಪಕ್ಷದಲ್ಲಿ ಹೆಚ್ಚಿನ ಬೆಂಬಲವೇನಿಲ್ಲ. ಹಿಂದಿನ ಮೂರು ಪ್ರಧಾನಿಗಳು ಮತ್ತು ಬಹುತೇಕ ಕ್ಯಾಬಿನೆಟ್ ಸಚಿವರು ಓಲಿಯ ವಿರುದ್ಧ ಇದ್ದಾರೆ. ಇವರಲ್ಲಿ ಬಹುತೇಕರು ಪ್ರಚಂಡರವರಿಗೆ ಬೆಂಬಲ ನೀಡಬಹುದಾದರೂ ಪಕ್ಷ ಮತ್ತೊಮ್ಮೆ ಇಬ್ಭಾಗವಾಗಿ ಸರ್ಕಾರ ಅಲ್ಪಮತಕ್ಕೆ ಇಳಿಯುತ್ತದೆ. ರಾಜಕೀಯ ಅವಕಾಶ ಅರಿತ ನೇಪಾಳ ಕಾಂಗ್ರೆಸ್ ಪಕ್ಷ ಓಲಿಗೆ ಹೊರಗಿನಿಂದ ಬೆಂಬಲ ನೀಡುವುದಾಗಿ ಹೇಳಿದೆ.

ಈ ಮಧ್ಯೆ ಪ್ರಧಾನಿ ಓಲಿಯವರು ತಮ್ಮ ವಿರೋಧಿ ಚಟುವಟಿಕೆಗಳಿಗೆ ಭಾರತದ ಕುಮ್ಮಕ್ಕೇ ಕಾರಣವೆಂದು ಹೇಳಿಕೊಂಡಿದ್ದಾರೆ. ಇದನ್ನು ತೀವ್ರವಾಗಿ ಟೀಕಿಸಿರುವ ವಿರೋಧಿಗಳು ಆರೋಪವನ್ನು ಸಾಬೀತುಪಡಿಸಬೇಕೆಂದು ಓಲಿಯವರ ಮೇಲೆ ಒತ್ತಾಯ ಮಾಡಿದ್ದಾರೆ. ತಮ್ಮ ಕ್ಯಾಬಿನೆಟ್‌ನಲ್ಲಿ ಆದ ಚರ್ಚೆಗಳು ಅಕ್ಷರಶಃ ಭಾರತೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದೇ ಇದಕ್ಕೆ ಸಾಕ್ಷಿಯೆಂದು ಓಲಿ ತಿರುಗೇಟು ನೀಡಿದ್ದಾರೆ. ಇವುಗಳ ನಡುವೆ ನೇಪಾಳ ಕಾಂಗ್ರೆಸ್ ಪಕ್ಷ, ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಹಾಗೂ ಸಾಝಾ ಪಕ್ಷಗಳು ತಮ್ಮ ಅವಕಾಶಕ್ಕೆ ಕಾದು ಕೂತಿರುವಂತೆ ಕಾಣುತ್ತಿದೆ.


5ಜಿ ಮತ್ತು ಹ್ವಾವೆಯ ಮುಗಿಯದ ಕಥೆ

ಬ್ರಿಟಿಷ್ ಸರ್ಕಾರ ಚೀನಾದ ತಂತ್ರಜ್ಞಾನ ಕಂಪನಿ ‘ಹ್ವಾವೆ’ಯನ್ನು ಕಪ್ಪುಪಟ್ಟಿಗೆ ಸೇರಿಸುವುದರೊಂದಿಗೆ 5ಜಿಯ ಸಮಸ್ಯೆ ಮತ್ತಷ್ಟು ಗೋಜಲಾಗುವಂತೆ ಕಾಣುತ್ತಿದೆ. ಅಮೆರಿಕದ ಪ್ರಭಾವಕ್ಕೆ ಮಣಿದು ಬ್ರಿಟನ್ ಸರ್ಕಾರ ಈ ಕ್ರಮ ತೆಗೆದುಕೊಂಡಿದೆಯಾದರೂ 5ಜಿ ಅನುಭವ ಬಯಸುವ ಬಳಕೆದಾರರು ಇನ್ನಷ್ಟು ಕಾಲ ಕಾಯಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಕಳೆದ ಹಲವಾರು ವರ್ಷಗಳಿಂದ ಅಮೆರಿಕ ಹ್ವಾವೆ ಕಂಪನಿಯ ಮೇಲೆ ಕೆಂಗಣ್ಣು ಬೀರುತ್ತಾ ಬಂದಿದೆ. 5ಜಿ ಜಾಲದ ಹಾಗೂ ತನ್ನ ಮೊಬೈಲ್ ಸೇವೆಯ ಮುಖಾಂತರ ಹ್ವಾವೆ ಕಂಪನಿ ಅಮೆರಿಕದಲ್ಲಿ ಚೀನಾದ ಪರ ಬೇಹುಗಾರಿಕೆ ನಡೆಸುತ್ತಿದೆಯೆಂದು ದೂರಲಾಗಿದೆ. ಹ್ವಾವೆಯ ಸಂಸ್ಥಾಪಕ ಹಿಂದೆ ಚೀನಾ ಸೈನ್ಯದಲ್ಲಿ ಕೆಲಸ ಮಾಡಿದ್ದರು ಹಾಗೂ ಈಗಲೂ ಚೀನಾ ಕಮ್ಯುನಿಸ್ಟ್ ಪಕ್ಷದ ಪ್ರಭಾವಿ ಸದಸ್ಯರಾಗಿದ್ದಾರೆಂದು ಹೇಳಲಾಗಿದೆ. ಹ್ವಾವೆ ಕಂಪನಿಯ ಬೇಹುಗಾರಿಕೆಯ ಮೇಲಿನ ಆರೋಪಕ್ಕೆ ಪೂರಕವಾಗಿ ಮೂರು ಸಬೂತುಗಳನ್ನು ನೀಡಲಾಗುತ್ತಿದೆ.

  • 2009 ರಿಂದ 2011 ರವರೆಗೆ ಅಮೆರಿಕದ ವೊಡಾಪೋನ್ ಸೇವೆಯ ಜಾಲದಲ್ಲಿ ಬ್ಯಾಕ್‌ಎಂಡ್ ಸೌಲಭ್ಯ ನೀಡಿದ್ದ ಹ್ವಾವೆ ಮಾಹಿತಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿತ್ತು. 2011 ರಲ್ಲಿ ಈ ವಿಷಯದಲ್ಲಿ ಎಚ್ಚರಿಕೆ ನೀಡಿದ್ದರೂ ತನ್ನ ಮಾಹಿತಿ ಕಳ್ಳತನವನ್ನು ನಿಲ್ಲಿಸಲಿಲ್ಲ.
  • 2012 ರಿಂದ 13 ರವರೆಗೆ ಅಮೆರಿಕದ ಟಿ-ಮೊಬೈಲ್ ಜಾಲದಲ್ಲಿಯೂ ಕೂಡ ಬ್ಯಾಕ್‌ಎಂಡ್ ಸೌಲಭ್ಯ ನೀಡಿ ಮಾಹಿತಿ ಸೋರಿಕೆಗೆ ಹ್ವಾವೆ ಕಾರಣವಾಗಿತ್ತು.
  • ಹ್ವಾವೆಯು ಹಾಂಗ್‌ಕಾಂಗಿನಲ್ಲಿ ‘ಸ್ಕೈಕಾಮ್’ ಎಂಬ ಅಧೀನ ಕಂಪನಿಯೊಂದರ ಮೂಲಕ ಅಮೆರಿಕದ ತಂತ್ರಜ್ಞಾನ ಹಾಗೂ ನಿರ್ಬಂಧಿತ ಮಾಹಿತಿ ತಂತ್ರಾಂಶವನ್ನು ಕದಿಯಲು ಪ್ರಯತ್ನಿಸಿತ್ತು ಎಂದೂ ಹೇಳಲಾಗಿದೆ.

ಈ ಎಲ್ಲ ಕಾರಣಗಳಿಂದ ಅಮೆರಿಕದಿಂದ ಹೊರದೂಡಲ್ಪಟ್ಟಿರುವ ಹ್ವಾವೆ ಕಂಪನಿ ಬೇರೆ ದೇಶಗಳಲ್ಲಿ ತನ್ನ ಸೇವೆಯ ಜಾಲ ವಿಸ್ತರಿಸಲು ಬಯಸಿದೆ. ಇದನ್ನು ತೀವ್ರವಾಗಿ ವಿರೋಧಿಸಿರುವ ಅಮೆರಿಕ ತನ್ನ ಮಿತ್ರರಾಷ್ಟ್ರಗಳ ಮೇಲೆ ಹ್ವಾವೆಯ ಸೇವೆಯನ್ನು ನಿರ್ಬಂಧಿಸುವಂತೆ ಒತ್ತಡ ಹೇರುತ್ತಾ ಬಂದಿದೆ. ಈ ಒತ್ತಡಕ್ಕೆ ಮಣಿದು ಕೆನಡಾ, ಬ್ರಿಟನ್, ಆಸ್ಟ್ರೇಲಿಯಾಗಳು ಹ್ವಾವೆಯನ್ನು ತಮ್ಮ ದೇಶಗಳಿಂದ ಹೊರಗಿಡುವ ನಿರ್ಧಾರಕ್ಕೆ ಬಂದಿವೆ. ಆದರೆ ಯೂರೋಪಿನ ಮುಖ್ಯರಾಷ್ಟ್ರಗಳಾದ ಜರ್ಮನಿ ಮತ್ತು ಫ್ರಾನ್ಸ್ಗಳು ಈ ಬಗ್ಗೆ ಯಾವುದೇ ನಿರ್ಧಾರ ತಳೆಯದೆ ಕಾಯ್ದು ನೋಡುವ ನೀತಿಯನ್ನು ಸದ್ಯಕ್ಕೆ ಆರಿಸಿಕೊಂಡಿವೆ.

ಇದುವರೆಗೆ ಹ್ವಾವೆ ಕಂಪನಿ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಿಲ್ಲ. ಚೀನಾದ ಮೊಬೈಲ್ ಉತ್ಪಾದಕ ಕಂಪನಿಗಳಾದ ಶಾವ್‌ಮಿ, ವಿವೋ, ಓಪ್ಪೋಗೆ ಹೋಲಿಕೆಯಲ್ಲಿ ಹ್ವಾವೆಯ ಸಂಖ್ಯೆ ಗಣನೀಯವಾಗಿಲ್ಲ. ಆದರೆ ಹ್ವಾವೆ ಕಂಪನಿ ಭಾರತದ 5ಜಿ ಜಾಲ ವಿಸ್ತರಿಸಲು ತುದಿಗಾಲ ಮೇಲೆ ನಿಂತು ಕಾಯುತ್ತಿದೆ. ಇದುವರೆಗೆ ಭಾರತ ಹ್ವಾವೆಯನ್ನು ಕಡೆಗಣಿಸುತ್ತಾ ಬಂದಿದ್ದರೂ ಅಧಿಕೃತವಾಗಿ ಕಪ್ಪುಪಟ್ಟಿಗೆ ಸೇರಿಸಿಲ್ಲ. ಈ ಮಧ್ಯೆ ಆದಷ್ಟು ಬೇಗ 5ಜಿ ಜಾಲದ ಹಂಚಿಕೆ ಮಾಡಬೇಕು ಎಂಬ ಒತ್ತಾಯ ಭಾರತ ಸರ್ಕಾರದ ಮೇಲೆ ಬರುತ್ತಿದೆ.

 

Leave a Reply

Your email address will not be published.