ವಿಶ್ವ ವಿದ್ಯಮಾನ

ಸಂಭ್ರಮವಿಲ್ಲದ ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವ

2020ರ ಆಗಸ್ಟ್ ತಿಂಗಳಿಗೆ ವಿಶ್ವಸಂಸ್ಥೆಯು ತನ್ನ ಇರುವಿಕೆಯ 75 ವರ್ಷಗಳನ್ನು ಮುಗಿಸಿ ‘ವಜ್ರ ಮಹೋತ್ಸವ’ವನ್ನು ಆಚರಿಸಿಕೊಂಡಿದೆ. 1945ರ ಆಗಸ್ಟ್ ತಿಂಗಳಿನಲ್ಲಿ ದ್ವಿತೀಯ ಮಹಾಯುದ್ಧದ ನಂತರದ ದಿನಗಳಲ್ಲಿ ವಿಶ್ವಸಂಸ್ಥೆಯ ಸ್ಥಾಪನೆಯಾಗಿತ್ತು. ಸಾಮಾನ್ಯ ಸಂದರ್ಭದಲ್ಲಿ ಈ ವಜ್ರ ಮಹೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಬೇಕೆನ್ನುವ ಮತ್ತು ವಿಶ್ವಸಂಸ್ಥೆಯ ಆದರ್ಶಗಳಿಗೆ ಮತ್ತೊಮ್ಮೆ ತೊಡಗಿಸಿಕೊಳ್ಳಬೇಕೆನ್ನುವ ಕೂಗು ಕೇಳಿಬರಬೇಕಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮುಖಾಂತರ ಮಾಡಲಾಗುವ ಒಂದೆರೆಡು ವಿಶೇಷ ಅಧಿವೇಶನಗಳನ್ನು ಹೊರತುಪಡಿಸಿ ಯಾವುದೇ ಸಡಗರದ ಆಚರಣೆ ಕಾಣದಾಗಿದೆ.

ಸಡಗರ-ಸಂಭ್ರಮ ಕಣ್ಮರೆಯಾಗಿರುವುದಕ್ಕೆ ಸಂಕ್ರಾಮಿಕವೊಂದೇ ಕಾರಣವಲ್ಲ. ವಿಶ್ವಸಂಸ್ಥೆಯನ್ನು ಮುನ್ನಡೆಸಬೇಕಿದ್ದ ಟ್ರಂಪ್ ಸರ್ಕಾರ ‘ಅಮೆರಿಕ ಮೊದಲು’ ವಿಚಾರಧಾರೆಯಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಕಡೆಗಣಿಸಿದೆ. ಸಾಂಕ್ರಾಮಿಕ ರೋಗಕ್ಕೆ ಚೀನಾದ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯನ್ನೂ ಕಟಕಟೆಯಲ್ಲಿ ನಿಲ್ಲಿಸಿದೆ. ಜಾಗತಿಕ ತಾಪಮಾನ ಮತ್ತು ಪರಿಸರ ಸಂಬಂಧಿ ಒಡಂಬಡಿಕೆಗಳಿAದ ಹಿಂದಕ್ಕೆ ಸರಿಯುವುದೆಂದು ಹೇಳಿಕೊಂಡಿದೆ. ವಿಶ್ವಸಂಸ್ಥೆಗೂ ಹಾಗೂ ಅದರ ಅಂಗಸAಸ್ಥೆಗಳಿಗೆ ನೀಡುವ ದೇಣಿಗೆಯನ್ನೂ ನಿಲ್ಲಿಸಿ ಬಹುರಾಷ್ಟ್ರೀಯ ಒಕ್ಕೂಟದ ಉದ್ದೇಶಗಳನ್ನೇ ತಿರಸ್ಕರಿಸಿದೆ.

ಕಳೆದೆರೆಡು ವರ್ಷಗಳಲ್ಲಿ ಅಮೆರಿಕ ಮತ್ತು ಚೀನಾದ ನಡುವಣ ವೈಮನಸ್ಸು ವಿಶ್ವಸಂಸ್ಥೆಯ ಕಲಾಪಗಳಿಗೂ ಹಬ್ಬಿದೆ. ಅತ್ತ ರಷ್ಯಾ ವಿಶ್ವಸಂಸ್ಥೆಯ ನಿರ್ಣಯಗಳನ್ನು ತಿರಸ್ಕರಿಸಿದ್ದರೆ ಇತ್ತ ಚೀನಾ ಎಲ್ಲ ಪ್ರಜಾಸತ್ತಾತ್ಮಕ ಚಳವಳಿಗಳ ವಿರುದ್ಧದ ನಿರ್ಣಯ ತೆಗೆದುಕೊಂಡಿದೆ. ಟ್ರಂಪ್ ನೇತೃತ್ವದ ಅಮೆರಿಕ ಇರಾಖ್-ಸಿರಿಯಾದಲ್ಲಿನ ಆಂತರಿಕ ಯುದ್ಧ ಶಮನಕ್ಕೂ ಯಾವುದೇ ಕ್ರಮ ಕೈಗೊಳ್ಳದೇ ಹೋಗಿದೆ.

ಇಂತಹ ವಿಷಮ ಪರಿಸ್ಥಿತಿಯಲ್ಲಿ ವಿಶ್ವಸಂಸ್ಥೆ ಸಡಗರ-ಸಂಭ್ರಮದಿಂದ ದೂರವುಳಿದು ಸಾಂಕೇತಿಕವಾಗಿ ವಜ್ರ ಮಹೋತ್ಸವ ಆಚರಿಸುವುದಾಗಿ ಹೇಳಿಕೊಂಡಿದೆ. ಸೆಪ್ಟೆಂಬರ್ 21ರಂದು ವರ್ಚುಯಲ್ ಶೃಂಗ ಸಭೆಯೊಂದನ್ನು ಆಯೋಜಿಸಿ ವಿಶ್ವದ ನಾಯಕರ ಉಪಸ್ಥಿತಿಯಲ್ಲಿ ಬಹುರಾಷ್ಟ್ರೀಯ ಒಕ್ಕೂಟಗಳ ಮಹತ್ವವನ್ನು ಮತ್ತೊಮ್ಮೆ ಸಾರಿಹೇಳುವುದಾಗಿ ಘೋಷಿಸಿದೆ.


ಶ್ರೀಲಂಕೆಯಲ್ಲಿ ಮತ್ತೊಮ್ಮೆ ರಾಜಪಕ್ಸ ಸೋದರರ ದರ್ಬಾರು

2020ರ ಆಗಸ್ಟ್ 5 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಂದ ರಾಜಪಕ್ಸ ಸಹೋದರರ ‘ಶ್ರೀಲಂಕಾ ಪೀಪಲ್ಸ್ ಫ್ರೀಡಮ್ ಅಲೆಯನ್ಸ್’ ಭಾರಿ ಜಯಭೇರಿ ಗಳಿಸಿದೆ. ಸಂಸತ್ತಿನ ಒಟ್ಟು 225 ಸ್ಥಾನಗಳಲ್ಲಿ 145 ಸ್ಥಾನಗಳನ್ನು ಗೆದ್ದು ದ್ವೀಪರಾಜ್ಯದಲ್ಲಿ ಮತ್ತೊಮ್ಮೆ ತಮ್ಮ ಹಿಡಿತವನ್ನು ಸಾಬೀತು ಪಡಿಸಿದೆ. ಸಾಂಪ್ರದಾಯಿಕ ರಾಜಕೀಯ ವೈರಿ ರಣಿಲ್ ವಿಕ್ರಮಸಂಘೆಯ ‘ಯುನೈಟೆಡ್ ನ್ಯಾಶನಲ್ ಪಾರ್ಟಿ’ ಕೇವಲ ಒಂದು ಸ್ಥಾನ ಪಡೆಯುವುದರೊಂದಿಗೆ ನೆಲಕಚ್ಚಿದೆ.

ಕೋವಿಡ್ ಕಾರಣದಿಂದ ಈಗಾಗಲೇ ಎರಡು ಬಾರಿ ಈ ಸಾರ್ವತ್ರಿಕ ಚುನಾವಣೆಗಳು ಮುಂದೂಡಲಾಗಿದ್ದವು. ಅನಿವಾರ್ಯವಾಗಿ ಆಗಸ್ಟ್ ಮೊದಲ ವಾರದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 1.62 ಕೋಟಿ ಮತದಾರರಲ್ಲಿ ಶೇಕಡಾ 70ರಷ್ಟು ಮತದಾನವಾಗಿದ್ದು ಆಡಳಿತಾರೂಢ ಎಸ್‌ಎಲ್‌ಪಿಎಫ್ ಅಲೆಯನ್ಸ್ ಶೇಕಡಾ 59ರಷ್ಟು (ಒಟ್ಟು 68,53,690) ಮತ ಗಳಿಸಿದೆ. ಯುಎನ್‌ಪಿಯಿಂದ ಹೊರಬಿದ್ದಿರುವ ಸಜಿತ್ ಪ್ರೇಮದಾಸ ಅವರ ಪಕ್ಷ ‘ಸಮಗಿ ಜನ ಬಲವೆಗೆಯ’ ಶೇಕಡಾ 24ರಷ್ಟು ಜನಬೆಂಬಲದೊಂದಿಗೆ 54 ಸ್ಥಾನಗಳನ್ನೂ ಗೆದ್ದಿದೆ.

ಈ ಗೆಲುವಿನೊಂದಿಗೆ ಶ್ರೀಲಂಕೆಯ ಬಹುಸಂಖ್ಯಾತ ಬೌದ್ಧ ಮತೀಯರು ಮತ್ತೊಮ್ಮೆ ಸಿಂಹಳ ಜನಾಂಗೀಯ ಆಳ್ವಿಕೆಯ ಬಲಪಂಥೀಯ ವಿಚಾರಧಾರೆಗೆ ಬೆಂಬಲ ನೀಡಿದ್ದಾರೆಂದು ಹೇಳಬಹುದಾಗಿದೆ. ವಿಶ್ವದಾದ್ಯಂತ ಮುಂದುವರೆದಿರುವ ಈ ಬಲಪಂಥೀಯ-ಬಲಾಢ್ಯ-ಬಹುಮತದ ಆಳ್ವಿಕೆ ಮಾದರಿಯ ಮತ್ತೊಂದು ಉದಾಹರಣೆಯಾಗಿ ಶ್ರೀಲಂಕೆಯ ಚುನಾವಣಾ ಫಲಿತಂಶವನ್ನು ಉದಾಹರಿಸಬಹುದಾಗಿದೆ.


ಅಮೆರಿಕೆಯ ಮೂಸೆಯಲ್ಲಿ ಅರಳಿದ ಕಮಲ

ಅಮೆರಿಕದ ಸೆನೆಟ್‌ನಲ್ಲಿ ಕ್ಯಾಲಿಫೋರ್ನಿಯಾ ಪ್ರತಿನಿಧಿಸುವ ಭಾರತೀಯ ಮೂಲದ ಕಮಲಾ ದೇವಿ ಹ್ಯಾರಿಸ್ ಇದೀಗ ದೇಶದ ಉಪಾಧ್ಯಕ್ಷ ಪದವಿಗೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ನಿರೀಕ್ಷಿತ ಬೆಳವಣಿಗೆಯಲ್ಲಿ ಅಧ್ಯಕ್ಷೀಯ ಪದವಿಯ ಅಭ್ಯರ್ಥಿ ಜೋ ಬೈಡೆನ್ ತಮ್ಮ ಸಹಸ್ಪರ್ಧಿಯಾಗಿ ಮಿಶ್ರವರ್ಣದ ಕಮಲಾರವರನ್ನು ಆಯ್ಕೆ ಮಾಡಿಕೊಳ್ಳುವುದರೊಂದಿಗೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತದಾರರ ಪ್ರಾಮುಖ್ಯವನ್ನು ಎತ್ತಿ ಹೇಳಿದ್ದಾರೆ. ಇದೇ ನವೆಂಬರ್ ಮೊದಲ ಮಂಗಳವಾರ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಡೆಮಾಕ್ರೆಟಿಕ್ ಜೋಡಿ ಗೆದ್ದರೆ, ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಆಯ್ಕೆಯಾದ ಮೊದಲ ಮಿಶ್ರವರ್ಣದ ವ್ಯಕ್ತಿ, ಮೊದಲ ಭಾರತಿಯ ಸಂಜಾತ ವ್ಯಕ್ತಿ ಹಾಗೂ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರವಾಗಲಿದ್ದಾರೆ.

ಈ ಮೊದಲು ಕಮಲ ಹ್ಯಾರಿಸ್ ಅಧ್ಯಕ್ಷೀಯ ಪ್ರೈಮರಿ ಚುನಾವಣೆಯಲ್ಲಿ ಜೋ ಬೈಡೆನ್‌ರವರ ವಿರುದ್ಧವೇ ಸ್ಪರ್ಧಿಸಿದ್ದರು. ಹಣದ ಕೊರತೆಯಿಂದ 2020 ಜನವರಿಯಲ್ಲಿಯೇ ಕಣದಿಂದ ನಿವೃತ್ತರಾದರಲ್ಲದೆ ನಂತರದಲ್ಲಿ ಬೈಡೆನ್ ಸ್ಫರ್ಧೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಈಗ ಕೇವಲ 55 ವರ್ಷದ ಕಮಲ 77 ವರ್ಷದ ಬೈಡೆನ್ ಸ್ಪರ್ಧೆಗೆ ಉತ್ಸಾಹ ತುಂಬಲಿದ್ದಾರೆ. ಚುನಾವಣೆಯ ತೂಗುಯ್ಯಾಲೆಯ ಐದಾರು ರಾಜ್ಯಗಳಲ್ಲಿ ಭಾರತೀಯ ಮೂಲದವರ ಮತ್ತು ಕಪ್ಪುವರ್ಣೀಯರ ಮತಗಳನ್ನು ಡೆಮಾಕ್ರೆಟಿಕ್ ಪಕ್ಷಕ್ಕೆ ಸೆಳೆದು ಬೈಡೆನ್ ಆಯ್ಕೆಯನ್ನು ಬಹುತೇಕ ಖಚಿತ ಮಾಡಲಿದ್ದಾರೆ.

ಕಮಲಾರವರ ಹುಟ್ಟು ಮತ್ತು ಬಾಲ್ಯ ಅತ್ಯಂತ ಕುತೂಹಲಕಾರಿಯಾಗಿದೆ. ದೆಹಲಿಯಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿದ್ದ ತಮಿಳಿಗ ಪಿ.ವಿ.ಗೋಪಾಲನ್‌ರವರ ಮಗಳು ಶ್ಯಾಮಲಾ ದೆಹಲಿ ವಿವಿಯಲ್ಲಿ ಬಿ.ಎ. (ಹೋಮ್ ಸೈನ್ಸ್) ಮಾಡಿ ವಿದೇಶಕ್ಕೆ ವ್ಯಾಸಂಗ ಮಾಡಲು ಹೋಗುತ್ತಾರೆ. ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಿದ್ಯಾರ್ಥಿಯಾಗಿದ್ದ ಶ್ಯಾಮಲಾ 1959-62ರ ಸಂದರ್ಭದಲ್ಲಿ ಕರಿಯ ವರ್ಣೀಯರ ಚಳವಳಿಯಲ್ಲಿ ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಜಮೈಕಾದಿಂದ ಓದಲು ಬಂದಿದ್ದ ಡಾನಲ್ಡ್ ಹ್ಯಾರಿಸ್‌ರವರನ್ನು ಮದುವೆಯಾಗುತ್ತಾರೆ. 1964ರಲ್ಲಿ ಈ ದಂಪತಿಗೆ ಹುಟ್ಟಿದ ಮೊದಲ ಮಗುವೇ ಕಮಲಾ. ನಂತರದಲ್ಲಿ ಹುಟ್ಟಿದ ಎರಡನೇ ಮಗು ಮಾಯಾ. 1970ರ ಸುಮಾರಿನಲ್ಲಿ ಈ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಂಡು ಮುಂದಿನ ಸಮಯದುದ್ದಕ್ಕೂ ಶ್ಯಾಮಲಾ ತಮ್ಮ ಎರಡು ಹೆಣ್ಣು ಮಕ್ಕಳನ್ನು ಸುಶಿಕ್ಷಿತರಾಗಿಸುವ ಹೊಣೆ ಹೆಗಲಿಗೇರಿಸಿಕೊಳ್ಳುತ್ತರೆ.

ಬಾಲ್ಯದಿಂದಲೂ ಭಾರತೀಯ-ತಮಿಳು ಸಂಸ್ಕೃತಿಯ ಗಾಢ ಪರಿಚಯವಿದ್ದ ಕಮಲಾ ಹಲವು ಬಾರಿ ಚೆನ್ನೆನಲ್ಲಿ ತಮ್ಮ ಸಂಬಂಧಿಕರ ಮನೆಗೆ ಬರುತ್ತಾರೆ. ಇತ್ತೀಚಿಗೆ 2009 ರಲ್ಲಿ ತಮ್ಮ ತಾಯಿಯ ಚಿತಾಭಸ್ಮವನ್ನು ಸಮುದ್ರದಲ್ಲಿ ವಿಸರ್ಜಿಸಲು ಕಮಲಾ ಚೆನ್ನೈಗೆ ಬಂದು ಹೋಗಿರುತ್ತಾರೆ. ಚೆನ್ನೈನಲ್ಲಿನ ತಮ್ಮ ‘ಚಿಟ್ಟಿ’ (ಚಿಕ್ಕಮ್ಮ) ಹಾಗೂ ತಮ್ಮ ಅಜ್ಜ ಗೋಪಾಲನ್‌ರಿಂದ ತಾವು ಕಲಿತ ಜೀವನ ಪಾಠಗಳನ್ನು ಮುಂದೆ ಹಲವಾರು ಬಾರಿ ಸ್ಮರಿಸುತ್ತಾರೆ.

ವಾಷಿಂಗ್ಟನ್‌ನ ಐತಿಹಾಸಿಕ ಹೋವರ್ಡ್ ವಿವಿ ಮತ್ತು ಕ್ಯಾಲಿಫೋರ್ನಿಯಾ ಬರ್ಕ್ಲಿ ವಿವಿಗಳಲ್ಲಿ ಓದಿದ ಕಮಲಾ ಕ್ಯಾಲಿಫೋರ್ನಿಯಾದಲ್ಲಿ ಹಲವು ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳನ್ನು ನಿಭಾಯಿಸುತ್ತಾರೆ. 2009ರಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದ ಡಿಸ್ಟ್ರಿಕ್ಟ್ ಅಟಾರ್ನಿಯಾಗಿ ಆಯ್ಕೆಯಾದ ಕಮಲಾ ನಂತರ 2012ರಲ್ಲಿ ಅಮೆರಿಕದ ಸೆನೆಟ್‌ಗೆ ಪ್ರವೇಶಿಸಿದ ಭರವಸೆಯ ಮಹಿಳಾ ಮುಖಂಡರೆನಿಸುತ್ತಾರೆ. 2020ರ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಹಂತದಲ್ಲಿ ತಾವೊಬ್ಬ ಗಂಭೀರ ಅಭ್ಯರ್ಥಿಯೆಂದು ಎಲ್ಲರಿಗೂ ಮನದಟ್ಟು ಮಾಡುತ್ತಾರೆ.

ಕಮಲಾ ಹ್ಯಾರಿಸ್ ಭಾರತೀಯ ಸಂಜಾತರೋ ಅಥವಾ ಕೇವಲ ಕಪ್ಪುವರ್ಣೀಯ ಪ್ರತಿನಿಧಿಯೋ ಎಂಬ ಚರ್ಚೆಯೆದ್ದಿದೆ. ಅಮೆರಿಕದ ಸಂದರ್ಭದಲ್ಲಿ ಸಹಜವಾಗಿ ಕಪ್ಪುವರ್ಣೀಯ ಪಟ್ಟಿಗೇ ಸೇರ್ಪಡುವ ಕಮಲಾ ವರ್ಣೀಯ ಗುರುತನ್ನು ತಮ್ಮ ಲಾಂಛನವಾಗಿಯೇ ಬಳಸಿದ್ದಾರೆ. ಅಮೆರಿಕದ ರಾಜಕೀಯದಲ್ಲಿ ತಮ್ಮ ಕಪ್ಪುವರ್ಣದ ಗುರುತನ್ನು ಪದೇಪದೇ ಹೇಳಿಕೊಂಡಿದ್ದಾರೆ. ತಮ್ಮ ಬೆಂಬಲಿಗರ ಮನಗೆಲ್ಲಲು ಕಪ್ಪುವರ್ಣೀಯರ ಪರವಾಗಿ ತಾವು ಮಾಡಿದ ಚಳವಳಿಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಅವರಲ್ಲಿ ಸುಪ್ತವಾಗಿರುವ ಭಾರತೀಯ ಮೂಲದ ನಂಬಿಕೆಗಳು ಮುಂದಿನ ದಿನಗಳಲ್ಲಿ ಹೇಗೆ ಪ್ರಕಟವಾಗುವುದೆಂಬುದನ್ನು ನೋಡಬೇಕಿದೆ.

Leave a Reply

Your email address will not be published.