ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ಭಾರತ ಮಿತ್ರ ಜಪಾನ್ ಪ್ರಧಾನಿ ಶಿಂಜೊ ಅಬೆ ನಿವೃತ್ತಿ

2012 ರಿಂದ ಜಪಾನಿನ ಪ್ರಧಾನಿಯಾಗಿದ್ದ ಶಿಂಜೊ ಅಬೆ (66 ವರ್ಷ) ಅನಾರೋಗ್ಯದ ಕಾರಣದಿಂದ ತಮ್ಮ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಎಂಟೂವರೆ ವರ್ಷಗಳಿಂದ ಜಪಾನಿನ ಅತ್ಯಂತ ದೀರ್ಘಕಾಲದ ಪ್ರಧಾನಿಯಾಗಿಯೂ ಅಬೆ ದಾಖಲೆ ಮಾಡಿದ್ದರು. ಇದಕ್ಕೆ ಮೊದಲು ಅಬೆಯವರ ಅಜ್ಜ ಐಸಾಕೊ ಸಾಟೋರವರು 1964 ರಿಂದ 1972 ರವರೆಗೆ ದೀರ್ಘಕಾಲದ ಪ್ರಧಾನಿಯಾಗಿ ದಾಖಲೆ ಹೊಂದಿದ್ದರು. ತಾವು ಬಾಲ್ಯದಿಂದಲೂ ಹೊಂದಿದ್ದ ಕರುಳಿಗೆ ಸಂಬಂಧಿಸಿದ ಖಾಯಿಲೆ ಉಲ್ಬಣಿಸಿದ ಕಾರಣಕ್ಕೆ ಶಿಂಜೊ ಅಬೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಅಚ್ಚರಿಯ ನಿವೃತ್ತಿ ಘೋಷಿಸಿದ್ದರು.

ಶಿಂಜೊ ಅಬೆ ಭಾರತದ ಪರಮಾಪ್ತ ಮಿತ್ರ ಜಪಾನ್ ಮುಖಂಡನಾಗಿ ಎರಡೂ ದೇಶಗಳ ನಡುವೆ ಸಂಬಂಧ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಭಾರತದೊಂದಿಗೆ ಅಣು ಒಪ್ಪಂದ ಸಹಿ ಹಾಕುವಲ್ಲಿ, ಚೀನಾದ ವಿರುದ್ಧ ಭಾರತದೊಡನೆ ನಿಲ್ಲುವಲ್ಲಿ, ಅಮೆರಿಕ-ಆಸ್ಟ್ರೇಲಿಯಾ-ಜಪಾನ್-ಭಾರತಗಳ ‘ಚತುಷ್ಪಾದ’ ಒಪ್ಪಂದದಲ್ಲಿ ಹಾಗೂ ಭಾರತದಲ್ಲಿ ಬುಲೆಟ್ ಟ್ರೈನ್ ಸೇರಿದಂತೆ ಹಲವು ಮಹತ್ವದ ಹೂಡಿಕೆಗಳಿಗೆ ಕಾರಣಕರ್ತರಾಗುವಲ್ಲಿ ಶೀಂಜೊ ಅಬೆಯವರ ಕೊಡುಗೆ ಅಪಾರವಾದದ್ದು. ಎರಡೂ ದೇಶಗಳ ನಡುವೆ ಅತ್ಯಂತ ಆತ್ಮೀಯ ಹಾಗೂ ನಂಬಿಕೆಯ ಸಂಬಂಧಗಳನ್ನು ಬೆಳೆಸುವಲ್ಲಿ ಅಬೆಯವರ ಪಾತ್ರ ಗಣನೀಯ. ಇದೇ ಕಾರಣಕ್ಕೆ ಭಾರತದ ಗಣತಂತ್ರ ದಿನದಂದು ಮುಖ್ಯ ಅತಿಥಿಯಾಗಿ ಕೂಡಾ ಅಬೆಯವರನ್ನು ಕರೆಸಿ ಗೌರವಿಸಲಾಗಿತ್ತು.

2012ರಲ್ಲಿ ಅಬೆಯವರು ಪ್ರಧಾನಿಯಾದಾಗ ಜಪಾನಿನ ಆರ್ಥಿಕತೆ ಹಿಂಜರಿಕೆ ಕಂಡಿತ್ತು. ಪ್ರಪಂಚದ ಮೂರನೇ ಶ್ರೀಮಂತ ದೇಶವಾದರೂ ಸ್ಥಗಿತ ಜಿಡಿಪಿ ಹಾಗೂ ವಯಸ್ಸಾದ ಜನಸಂಖ್ಯೆಯ ಕಾರಣದಿಂದ ಆರ್ಥಿಕತೆ ಬಳಲಿತ್ತು. ಇದರ ಜೊತೆಗೆ ಹಳೆಯ ತಲೆಮಾರಿನ ಉದ್ದಿಮೆದಾರರು ಬದಲಾದ ಡಿಜಿಟಲ್ ಆರ್ಥಿಕತೆಗೆ ಹೊಂದಿಕೊಳ್ಳದೆ ದೇಶದ ಅಭಿವೃದ್ಧಿ ಕುಂಠಿತವಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿಯಾದ ಶಿಂಜೊ ಅಬೆ ಆರ್ಥಿಕತೆಗೆ ಹೊಸ ರೂಪ ನೀಡಿದ್ದರು. ‘ಅಬೆನಾಮಿಕ್ಸ್’ ಎಂದು ಕರೆಸಿಕೊಳ್ಳುವ ಈ ಆರ್ಥಿಕ ಬದಲಾವಣೆಗಳಿಂದ ಜಪಾನ್ ಹೊರದೇಶಗಳಲ್ಲಿ ಹೂಡಿಕೆ ಹಾಗೂ ದೇಶೀಯ ಉತ್ಪಾದನೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು. ಅತಿಯಾದ ಕೆಲಸ ಮಾಡಿ ದಣಿಯುವ ಜಪಾನಿಯರಿಗೆ ಪರ್ಯಟನ ಮಾಡಿ ಜೀವನ ಆನಂದಿಸುವುದನ್ನೂ ಅಬೆ ಹೇಳಿಕೊಟ್ಟರು. ಇದರ ಜೊತೆಯಲ್ಲಿ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡಲು ಪ್ರೇರೇಪಿಸಿದ್ದರು.

ಬಹಳ ಮಖ್ಯವಾಗಿ ಶಿಂಜೊ ಅಬೆಯವರು ಅಮೆರಿಕದ ಜೊತೆಯಲ್ಲಿ ಸುಮಧುರ ಬಾಂಧವ್ಯ ಮುಂದುವರೆಯುವಂತೆ ನೋಡಿಕೊಂಡಿದ್ದರು. ವಾಣಿಜ್ಯ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಾಗ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಹಿಂದೆಗೆತ ಮಾಡಿದಾಗಲೂ ಅಬೆ ಅಮೆರಿಕದ ಸಖ್ಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಚೀನಾ ಆಕ್ರಮಣಕಾರಿ ನೀತಿಗೆ ತಡೆಗೋಡೆ ಒಡ್ಡುವಂತೆ ದಕ್ಷಿಣ ಕೊರಿಯಾ, ಆಸಿಯನ್ ದೇಶಗಳು, ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಇಂಡೋ-ಪೆಸಿಫಿಕ್ ರಣನೀತಿಯ ಪ್ರಮುಖ ರೂವಾರಿಯಾಗಿದ್ದರು.

ಜಪಾನಿನ ರಾಜಕೀಯದಲ್ಲಿ ಅಜಾತಶತ್ರುವಾಗಿದ್ದ ಅಬೆಯವರ ಜಾಗ ತುಂಬುವುದು ಕಷ್ಟದ ಕೆಲಸವೇ ಸರಿ. ಆಡಳಿತಾರೂಢ ಲಿಬರಲ್ ಡೆಮಾಕ್ರೆಟಿಕ್ ಪಕ್ಷ ಅಬೆಯವರ ಜಾಗಕ್ಕೆ ಅವರ ಬಲಗೈ ಬಂಟನಂತಿದ್ದ ‘ಯೋಶಿಯುದೆ ಸುಗ’ ರವರನ್ನು ಆಯ್ಕೆ ಮಾಡಿದೆ. ಅಬೆಯವರಿಗಿಂತಲೂ ಐದು ವರ್ಷ ಹೆಚ್ಚು ವಯಸ್ಸಾದ ಸುಗ ಜಪಾನ್ ರಾಜಕೀಯದಲ್ಲಿ ತರುಣರೇ ಸರಿ. ಆದರೆ ಅಬೆಯವರು ಆಡಳಿತಕ್ಕೆ ಹಾಗೂ ದೇಶದ ಆರ್ಥಿಕತೆಗೆ ತಂದಿದ್ದ ಚುರುಕು ಮುಂದುವರೆಸಿಕೊಂಡು ಹೋಗುವುದು ಕಷ್ಟಸಾಧ್ಯ. ಅಬೆಯವರಿಗೆ ಹೋಲಿಕೆಯಲ್ಲಿ ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಜನಿಸಿದ್ದ ಸುಗ ಮುಂದಿನ ದಿನಗಳಲ್ಲಿ ಹೇಗೆ ಅಬೆಯವರ ಜಾಗ ತುಂಬುವ ಅಸಾಮಾನ್ಯ ಕಾರ್ಯ ಮಾಡುತ್ತಾರೆಂದು ನೋಡಬೇಕಿದೆ.

ವಿಷಕಂಠನಾಗಿ ಎದ್ದುಬಂದ ರಷ್ಯಾದ ಅಲೆಕ್ಸಿ ನವಾಲ್ನಿ

ಕಳೆದ ಹತ್ತು ವರ್ಷಗಳಿಂದಲೂ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರವರ ‘ಭ್ರಷ್ಟ’ ಆಡಳಿತವನ್ನು ವಿರೋಧಿಸಿಕೊಂಡು ಬಂದಿರುವ ಅಲೆಕ್ಸಿ ನವಾಲ್ನಿ ಅಕ್ಷರಶಃ ವಿಷಕಂಠನಾಗಿ ವಿಷಪ್ರಾಶನ ಹೊಂದಿಯೂ ಬದುಕುಳಿದು ಬಂದಿದ್ದಾರೆ. ಆಗಸ್ಟ್ 20 ರಂದು ರಷ್ಯಾದ ಆಂತರಿಕ ವಿಮಾನ ಪ್ರಯಾಣ ಮಾಡುವಾಗ ವಿಷಪ್ರಾಶನಕ್ಕೆ ಬಲಿಯಾದ ನವಾಲ್ನಿಯವರನ್ನು ಆಗಸ್ಟ್ 22 ರಂದು ಜರ್ಮನಿಯ ಬರ್ಲಿನ್‌ಗೆ ಕರೆದು ತರಲಾಗಿತ್ತು. ಇದೇ ಸೆಪ್ಟೆಂಬರ್ ಏಳರಂದು ಕೋಮಾದಿಂದ ಎದ್ದು ಬಂದ ನವಾಲ್ನಿ ಈಗ ಗುಣಮುಖರಾಗಿದ್ದಾರೆ. ಮತ್ತೆ ದೇಶಕ್ಕೆ ಮರಳಿ ತಮ್ಮ ರಾಜಕೀಯ ಹೋರಾಟ ಮುಂದುವರೆಸುವವರಿದ್ದಾರೆ.

ರಷ್ಯಾದ ‘ಪ್ರೊಗ್ರೆಸ್ ಪಾರ್ಟಿ’ಯ ಮುಖಂಡರಾದ ನವಾಲ್ನಿ ಪುಟಿನ್ ಆಡಳಿತದ ಭ್ರಷ್ಟತೆಯ ವಿರುದ್ಧ ಕಳೆದ ಹತ್ತು ವರ್ಷಗಳಿಂದಲೂ ಹೋರಾಡುತ್ತಲೇ ಬಂದಿದ್ದಾರೆ. 2013ರಲ್ಲಿ ಮಾಸ್ಕೋ ಮೇಯರ್ ಚುನಾವಣೆಯಲ್ಲಿ ಶೇಕಡಾ 27ರಷ್ಟು ಮತ ಪಡೆದು ಸೋಲು ಕಂಡಿದ್ದ ನವಾಲ್ನಿ ತಮ್ಮ ವಿರುದ್ಧ ಮಾಡಲಾದ ಚುನಾವಣಾ ಅಕ್ರಮದ ಆರೋಪ ಮಾಡಿದ್ದರು. ನಂತರದಲ್ಲಿ ಒಂದಿಲ್ಲಾ ಒಂದು ಮೊಕದ್ದಮೆ ಹೂಡಿ ನವಾಲ್ನಿಯವರನ್ನು ಜೈಲಿಗೆ ಅಟ್ಟಲಾಗುತ್ತಿತ್ತು. 2018 ರಲ್ಲಿ ಪುಟಿನ್ ವಿರುದ್ಧ ರಷ್ಯಾದ ಅಧ್ಯಕ್ಷ ಪದವಿಗೆ ಚುನಾವಣೆ ಬಯಸಿ ನವಾಲ್ನಿ ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ ನವಾಲ್ನಿಯ ‘ಅಪರಾಧಿ ಹಿನ್ನೆಲೆ’ಯ ಕಾರಣ ನೀಡಿ ಚುನಾವಣೆಯಲ್ಲಿ ನಿಲ್ಲಲು ಬಿಡಲಿಲ್ಲ. ರಷ್ಯಾದ ನ್ಯಾಯಾಲಯವೂ ನವಾಲ್ನಿಯ ಪರ ನಿಲ್ಲಲಿಲ್ಲ.

ಪುಟಿನ್ ಭ್ರಷ್ಟಾಚಾರದ ವಿರುದ್ಧ ಯೂ ಟ್ಯೂಬ್ ಹಾಗೂ ಟ್ವಿಟರ್‌ನಲ್ಲಿ ತಮ್ಮ ದಾಳಿಯನ್ನು ಮುಂದುವರೆಸಿದ್ದ ನವಾಲ್ನಿಯ ಮೇಲೆ ಈ ಮಾರಣಾಂತಿಕ ಅಪಾಯ ಒದಗಿದೆ. ಈ ವಿಷಪ್ರಾಶನದಿಂದ ಎದ್ದುಬಂದಿರುವ ವಿಷಕಂಠ ನವಾಲ್ನಿ ಮುಂದೆ ಪುಟಿನ್ ಸವಾಲು ಹೇಗೆ ಎದುರಿಸುವರು ಎಂಬ ಕಥೆ ರೋಚಕವಾಗಲಿದೆ.

ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ರಾಜ್ಯದ ಸ್ಥಾನಮಾನ ನೀಡಬಯಸಿದ ಪಾಕಿಸ್ತಾನ

1948 ರಿಂದ ಪಾಕಿಸ್ತಾನದ ಹತೊಟಿಯಲ್ಲಿರುವ ಅವಿಭಾಜಿತ ಜಮ್ಮು ಮತ್ತು ಕಾಶ್ಮೀರ್ ಅಂಗವಾದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಕ್ಕೆ ರಾಜ್ಯದ ದರ್ಜೆ ನೀಡಲು ಪಾಕಿಸ್ತಾನ ಹೊರಟಿದೆ. ಪಾಕಿಸ್ತಾನದ ಸುಪ್ರೀಮ್ ಕೋರ್ಟ್ ಅಣತಿಯಂತೆ ಐದನೇ ರಾಜ್ಯವಾಗಿ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಸ್ಥಾನಮಾನ ನೀಡುವುದಾಗಿ ಪಾಕಿಸ್ತಾನದ ಮಂತ್ರಿ ಅಲಿ ಅಮೀನ್ ಗಂದಾಪುರ್ ಹೇಳಿಕೆ ನೀಡಿದ್ದಾರೆ. ಈ ಬೆಟ್ಟ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡುವುದಾದರೆ ಪಾಕ್ ಆಕ್ರಮಿತ ಕಾಶ್ಮೀರ, ಫೆಡೆರಲಿ ಅಡ್ಮಿನಿಸ್ಟರ್ಡ್ ಟ್ರೈಬಲ್ ಏರಿಯಾಸ್ ಮತ್ತಿತರ ಪ್ರದೇಶಗಳಿಗೂ ರಾಜ್ಯ ದರ್ಜೆಯ ಸ್ಥಾನಮಾನ ನೀಡಬೇಕೆಂಬ ಕೂಗು ಎದ್ದಿದೆ.

12 ನೆಯ ಶತಮಾನದವರೆಗೂ ಬೌದ್ಧ ಧರ್ಮೀಯರಿಂದಲೇ ತುಂಬಿದ್ದ ಬಾಲ್ಟಿಸ್ತಾನದ ಆಳ್ವಿಕೆ ಲಡಾಖ್‌ನ ಲೇಹ್‌ನಿಂದಲೇ ನಡೆಯುತ್ತಿತ್ತು. ನಂತರ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಸ್ಥಳೀಯರು ನಿಧಾನವಾಗಿ ಕಾಶ್ಮೀರದೊಂದಿಗೆ ಸಂಬಂಧ ಬೆಳೆಸಿದ್ದರು. 18-19ರ ಶತಮಾನದಲ್ಲಿ ರಣಜೀತ್ ಸಿಂಗ್‌ರವರ ವಶಕ್ಕೆ ಬಂದು ಸಿಖ್ ಆಡಳಿತಕ್ಕೆ ಒಳಪಟ್ಟ ಬಾಲ್ಟಿಸ್ತಾನ ನಂತರ ಬ್ರಿಟಿಷರ ಮತ್ತು ಡೋಗ್ರಾ ರಾಜರಿಂದ ಆಳ್ವಿಕೆಗೆ ಸಂದಿತ್ತು. 1948ರಲ್ಲಿ ಪಾಕಿಸ್ತಾನದ ಆಕ್ರಮಣಕ್ಕೆ ಒಳಗಾಗಿ ಇಲ್ಲಿಯವರೆಗೆ ಪಾಕ್ ಆಕ್ರಮಿತ ಪ್ರದೇಶವಾಗಿಯೇ ಮುಂದುವರೆದಿದೆ. 1947ರಲ್ಲಿ ಹೆಚ್ಚಿನ ಶಿಯಾ ಧರ್ಮೀಯರಿದ್ದ ಈ ಪ್ರದೇಶ ಈಗ ಬಹುಸಂಖ್ಯಾತ ಸುನ್ನಿ ಧರ್ಮೀಯರ ವಲಸೆಗೂ ತುತ್ತಾಗಿದೆ.

ಈಗಲೂ ಬೌದ್ಧಧರ್ಮದ ಅತಿಹೆಚ್ಚು ಪಳೆಯುಳಿಕೆಯನ್ನು ಹೊಂದಿರುವ ಬಾಲ್ಟಿಸ್ತಾನ ಪಾಕಿಸ್ತಾನವನ್ನು ಚೀನಾಕ್ಕೆ ಸಂಪರ್ಕಿಸುತ್ತಿದೆ. ಹಾಗಾಗಿ ಈ ಬಾಲ್ಟಿಸ್ತಾನದ ಮೂಲಕವೇ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಹಾದುಹೋಗಬೇಕಾಗಿದೆ. ಬಿಲಿಯಾಂತರ ಡಾಲರ್‌ಗಳ ಈ ಯೋಜನೆಗೆ ಬಾಲ್ಟಿಸ್ತಾನ ಪ್ರವೇಶದ್ವಾರವಾಗಿದೆ. ಸಹಜವಾಗಿ ಗಿಲ್ಗಿಟ್-ಬಾಲ್ಟಿಸ್ತಾನದ ಈ ಘೋಷಣೆಯನ್ನು ಭಾರತ ಕಟುವಾಗಿ ಟೀಕಿಸಿದೆ. ಆಕ್ರಮಿತ ಪ್ರದೇಶವಾದ ಗಿಲ್ಗಿಟ್-ಬಾಲ್ಟಿಸ್ತಾನದ ಮೇಲೆ ಪಾಕಿಸ್ತಾನ ಆಡಳಿತಕ್ಕೆ ಹಾಗೂ ಪಾಕಿಸ್ತಾನದ ಕೋರ್ಟುಗಳಿಗೆ ಯಾವುದೇ ಹಕ್ಕಿಲ್ಲವೆಂದು ಪ್ರತಿಪಾದಿಸಿದೆ.

ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಬೆಳೆಸಿದ ಯುಎಇ

ದಶಕಗಳ ವೈಮನಸ್ಸನ್ನು ಬದಿಗಿಟ್ಟು ಯುನೈಟೆಡ್ ಅರಬ್ ಎಮಿರೇಟ್ಸ್ (ದುಬೈ, ಶಾರ್ಜಾ, ಅಬುದಾಧಿ ನಗರಗಳ ದೇಶ) ಯೆಹೂದಿ ರಾಜ್ಯ ಇಸ್ರೇಲ್ ಜೊತೆಗೆ ಸಾಮಾನ್ಯ ರಾಜತಾಂತ್ರಿಕ ಸಂಬಂಧ ಬೆಳೆಸುವ ನಿರ್ಣಯ ಕೈಗೊಂಡಿದೆ. ಈಜಿಪ್ಟ್ ಮತ್ತು ಜೋರ್ಡಾನ್‌ಗಳ ನಂತರ ಇಸ್ರೇಲ್ ಜೊತೆಗೆ ರಾಜತಾಂತ್ರಿಕ ಸಂಬಂಧ ಬೆಳೆಸಿದ ಮೂರನೇ ಇಸ್ಲಾಮಿ ದೇಶವಾಗಿಯೂ ಸಹಾ ಹೊರಹೊಮ್ಮಿದೆ.

ಸೆಪ್ಟೆಂಬರ್ 15 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ಅಮೆರಿಕದ ಶ್ವೇತಭವನದಲ್ಲಿ ಮಾಡಲಾದ ಈ ಘೋಷಣೆಯನ್ನು ಅಮೆರಿಕದ ಮಧ್ಯಸ್ಥಿಕೆಗೆ ದೊರೆತ ಜಯವೆಂದೂ ಹೇಳಲಾಗಿದೆ. ಹೇಗಾದರೂ ಮಾಡಿ ಇಸ್ರೇಲ್ ದೇಶವನ್ನು ಮಧ್ಯಪ್ರಾಚ್ಯ ಇಸ್ಲಾಮಿ ದೇಶಗಳಿಗೆ ಒಗ್ಗುವಂತೆ ಮಾಡಬಯಸುವ ಹಾಗೂ ತನ್ಮೂಲಕ ಬದ್ಧ ವೈರಿದೇಶ ಇರಾನ್‌ನನ್ನು ಮೂಲೆಗುಂಪಾಗಿಸುವ ಅಮೆರಿಕಾದ ಪ್ರಯತ್ನಕ್ಕೂ ಜಯ ಸಂದಂತಾಗಿದೆ. ಯುಎಇ ನಂತರದಲ್ಲಿ ಬೇರೆ ಯಾವ ದೇಶಗಳು ಇಸ್ರೇಲ್ ಜೊತೆ ಸಂಬಂಧ ಸುಧಾರಿಸುವೆಡೆಗೆ ನೊಡುತ್ತಿವೆ ಎಂಬುದು ಮುಂದಿನ ಪ್ರಶ್ನೆಯಾಗಿದೆ.

Leave a Reply

Your email address will not be published.