ವಿಶ್ವ ವಿದ್ಯಮಾನ

ತುರ್ತು ಪರಿಸ್ಥಿತಿ ಘೋಷಿಸಿದ ಡಾನಲ್ಡ್ ಟ್ರಂಪ್

ಅಮೆರಿಕೆಯ ಅಧ್ಯಕ್ಷ ಡಾನಲ್ಡ್ ಟ್ರಂಪ್ ಮತ್ತು ಅಮೆರಿಕ ಶಾಸಕಾಂಗದ ಕೆಳಮನೆ ‘ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್’ ನಡುವಿನ ಕಾಳಗ ತಾರಕಕ್ಕೇರಿದೆ. 2018ರ ನವೆಂಬರ್ ಚುನಾವಣೆಯವರೆಗೆ ಇದೇ ಕೆಳಮನೆಯಲ್ಲಿ ಟ್ರಂಪ್‍ರವರ ರಿಪಬ್ಲಿಕನ್ ಪಕ್ಷದ ಬಹುಮತವಿತ್ತು. ಆದರೆ ಎರಡು ವರ್ಷಕ್ಕೊಮ್ಮೆ ಮೂರನೇ ಒಂದರಷ್ಟು ಸದಸ್ಯರು ಚುನಾಯಿತರಾಗುವ ಈ ಸದನದಲ್ಲಿ ರಿಪಬ್ಲಿಕನ್ ಪಕ್ಷ ಬಹುಮತ ಕಳೆದುಕೊಂಡಿತ್ತು. 2019-21ರ ಎರಡು ವರ್ಷಗಳ ಅವಧಿಯಲ್ಲಿ ಡೆಮಾಕ್ರೆಟಿಕ್ ಪಕ್ಷ 235ಕ್ಕೆ 199ರ ಬಹುಮತ ಸಾಬೀತು ಪಡಿಸಿ ಸದನದ ಮೇಲೆ ತನ್ನ ಛಾಪು ಮೂಡಿಸಿತ್ತು. ಮೇಲಾಗಿ ನ್ಯಾನ್ಸಿ ಪೆಲೋಸಿ ಡೆಮಾಕ್ರೆಟಿಕ್ ಪಕ್ಷದ ಮುಖಂಡೆಯಾಗಿ ಟ್ರಂಪ್ ಆಡಳಿತವನ್ನು ಅಂಕುಶಕ್ಕೆ ಒಳಪಡಿಸುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವ ಲಕ್ಷಣಗಳೂ ಕಾಣುತ್ತಿಲ್ಲ.

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕಾದ ದಕ್ಷಿಣ ಭಾಗದ ಮೆಕ್ಸಿಕೋ ಗಡಿಯಲ್ಲಿ ತಾನೊಂದು ಗೋಡೆಯನ್ನು ಕಟ್ಟುತ್ತೇನೆಂದು ಬಡಾಯಿ ಕೊಚ್ಚಿಕೊಂಡು ಟ್ರಂಪ್ ಚುನಾಯಿತರಾಗಿದ್ದರು. ಈ ಗೋಡೆಯನ್ನು ಕಟ್ಟುವುದಕ್ಕೆ ಮೆಕ್ಸಿಕೊನಿಂದಲೇ ಹಣ ಹೂಡಿಕೆ ಮಾಡಿಸುವುದಾಗಿ ಉಡಾಫೆ ಮಾಡಿದ್ದ ಟ್ರಂಪ್ ನಂತರ ಪೇಚಿಗೆ ಸಿಲುಕಿದ್ದರು. 2017-18ರ ಅವಧಿಯಲ್ಲಿ ಸಂಸತ್ತಿನ ಎರಡೂ ಮನೆಗಳಲ್ಲಿ ಬಹುಮತ ಹೊಂದಿದ್ದರೂ ಟ್ರಂಪ್ ಈ ಗೋಡೆ ಕಟ್ಟಲು ಯಾವುದೇ ಹಣ ಬಿಡುಗಡೆ ಮಾಡಿಸಿಕೊಳ್ಳಲಿಲ್ಲ. ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಗೋಡೆ ಕಟ್ಟುವ ಕೆಲಸ ಶುರುವಾಗಲೇ ಇಲ್ಲ. ಆದರೆ ಒಮ್ಮೆ ಕೆಳಮನೆಯಲ್ಲಿ ಡೆಮಾಕ್ರೆಟಿಕ್ ಪಕ್ಷ ಬಹುಮತ ಪಡೆದ ಕೂಡಲೇ ಟ್ರಂಪ್ ತಮ್ಮ ಕ್ಯಾತೆ ಪ್ರಾರಂಭಿಸಿದ್ದರು.

ಬಜೆಟ್ ಅನುಮೋದಿಸಬೇಕಾಗಿದ್ದ ಕಾಂಗ್ರೆಸ್ ಮುಂದೆ ಗೋಡೆ ಕಟ್ಟಲು ತಮಗೆ ಐದಾರು ಬಿಲಿಯನ್ ಡಾಲರ್ ಬೇಕೆಂದು ಪಟ್ಟು ಹಿಡಿದಿದ್ದರು. ಸುಲಭಕ್ಕೆ ಕಾಂಗ್ರೆಸ್ ಮಣಿಯದಿದ್ದಾಗ ಅಂಗೀಕೃತ ಬಜೆಟ್‍ಗೆ ಸಹಿಹಾಕದೆ ಒಂದು ತಿಂಗಳಿಗೂ ಮಿಗಿಲಾಗಿ ಅಮೆರಿಕದ ಫೆಡೆರಲ್ ಸರ್ಕಾರವನ್ನು ಮುಚ್ಚಿಹಾಕಿಸಿದ್ದರು. ದೇಶಾದ್ಯಂತ ಸುಮಾರು ಎಂಟು ಲಕ್ಷ ಫೆಡೆರಲ್ ನೌಕರರಿಗೆ ಸಂಬಳ ನೀಡದೆ ಸತಾಯಿಸಿ ಅವರ ಶಾಪಕ್ಕೂ ಗುರಿಯಾಗಿದ್ದರು. ನಂತರ ಫೆಡೆರಲ್ ಸರ್ಕಾರವನ್ನು ನಡೆಯಲು ಬಿಟ್ಟರೂ ಕಾಂಗ್ರೆಸ್‍ನ ಮೇಲೆ ಒತ್ತಾಯ ಹೇರುವುದನ್ನು ನಿಲ್ಲಿಸಲಿಲ್ಲ. ಕಡೆಗೆ ಸ್ವಲ್ಪಮಟ್ಟಿಗೆ ಟ್ರಂಪ್ ಬ್ಲಾಕ್‍ಮೇಲ್ ತಂತ್ರಕ್ಕೆ ಮಣಿದಂತೆ ಕಂಡ ಕಾಂಗ್ರೆಸ್, ಮೆಕ್ಸಿಕೊ ಗಡಿಯ ಗೋಡೆಯ ನಿರ್ಮಾಣಕ್ಕೆ 1.4 ಬಿಲಿಯನ್ ಡಾಲರ್‍ಗಳನ್ನು ನೀಡಲು ಒಪ್ಪಿತ್ತು. ಆದರೆ ಇದು ಟ್ರಂಪ್ ಕೇಳಿದ್ದ 5.7 ಬಿಲಿಯನ್ ಡಾಲರ್‍ಗೆ ಸಾಕಷ್ಟು ಕಡಿಮೆಯೇ ಆಗಿತ್ತು.

ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಅಡಿ ಹೊಸ ಗೋಡೆ ಕಟ್ಟದಿದ್ದರೂ ಈಗ ದಿಢೀರನೆ ಬಿಲಿಯಾಂತರ ಡಾಲರ್ ಖರ್ಚು ಮಾಡಲು ಹೊರಟಿದ್ದಾರೆ.

ಹೇಗಾದರೂ ಮಾಡಿ ಮುಂದಿನ ಎರಡು ವರ್ಷಗಳಲ್ಲಿ ಐದಾರು ಬಿಲಿಯನ್ ಡಾಲರ್‍ಗಳ (ಸುಮಾರು ನಲವತ್ತು ಸಾವಿರ ಕೋಟಿ ರೂಪಾಯಿಗಳಷ್ಟು) ಗೋಡೆ ಕಟ್ಟಿ ನವೆಂಬರ್ 2020ರ ಚುನಾವಣೆಯಲ್ಲಿ ಮತ್ತೆ ಅಧ್ಯಕ್ಷನಾಗಿ ಆಯ್ಕೆ ಆಗಬಯಸಿದ ಟ್ರಂಪ್, ಇದಕ್ಕೆ ವಾಮಮಾರ್ಗ ಹಿಡಿದರು. ಕಾನೂನುಬಾಹಿರ ವಲಸಿಗರಿಂದ ದೇಶದ ರಕ್ಷಣೆಗೆ ಅಪಾಯ ಒದಗಿದೆಯೆಂದು ಹೇಳುತ್ತಾ ದೇಶದ ಮೇಲೆ ‘ತುರ್ತು ಪರಿಸ್ಥಿತಿ’ ಹೇರಿದರು. ಈ ಘೋಷಣೆಯಂತೆ ಟ್ರಂಪ್ ಸೈನಿಕ ಕಾಮಗಾರಿ ಮತ್ತು ಮಾದಕದ್ರವ್ಯದ ವಿರುದ್ಧದ ಹೋರಾಟಕ್ಕೆ ಮೀಸಲಾಗಿರುವ ಹಣದಲ್ಲಿ ಆರು ಬಿಲಿಯನ್ ಡಾಲರ್‍ಗಳಿಗಿಂತಲೂ ಹೆಚ್ಚು ಹಣವನ್ನು ಗೋಡೆ ಕಟ್ಟಲು ಬಯಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಅಡಿ ಹೊಸ ಗೋಡೆ ಕಟ್ಟದಿದ್ದರೂ ಈಗ ದಿಢೀರನೆ ಬಿಲಿಯಾಂತರ ಡಾಲರ್ ಖರ್ಚು ಮಾಡಲು ಹೊರಟಿದ್ದಾರೆ.

ಈ ‘ತುರ್ತು ಪರಿಸ್ಥಿತಿ’ಯನ್ನು ಡೆಮಾಕ್ರೆಟಿಕ್ ಪಕ್ಷ ಒಪ್ಪಿಲ್ಲ. ಅಮೆರಿಕದ 16 ರಾಜ್ಯಗಳು ಈಗಾಗಲೇ ಶಾಸಕಾಂಗದ ಬಜೆಟ್ ಹಕ್ಕಿನ ರಕ್ಷಣೆಗೆ ದಾವೆ ಹೂಡಿವೆ. ಈ ‘ತುರ್ತು ಪರಿಸ್ಥಿತಿ’ಯ ಘೋಷಣೆ ಅಮೆರಿಕೆಯ ಕೋರ್ಟುಗಳಲ್ಲಿ ಪರಿಶೀಲನೆಗೆ ಒಳಪಟ್ಟು ಕಡೆಗೆ ಅಮೆರಿಕದ ಸುಪ್ರೀಂ ಕೋರ್ಟಿನ ಮುಂದೆ ಬರಲಿದೆ. ಸುಪ್ರೀಂ ಕೋರ್ಟಿಗೆ ತನಗೆ ಬೇಕಾದ ನ್ಯಾಯಮೂರ್ತಿಗಳನ್ನು ಈಗಾಗಲೇ ನೇಮಿಸಿಕೊಂಡಿರುವ ಟ್ರಂಪ್, ನ್ಯಾಯಿಕ ಹೋರಾಟದಲ್ಲಿ ಗೆಲ್ಲುವ ಗಟ್ಟಿ ನಿರೀಕ್ಷೆಯಲ್ಲಿದ್ದಾರೆ.

ಬ್ರೆಕ್ಸಿಟ್: ಜಟಿಲಗೊಂಡ ಕಗ್ಗಂಟು

ಬೆಕ್ಸಿಟ್‍ನ ಕಗ್ಗಂಟು ಮತ್ತಷ್ಟು ಗೋಜಲಾಗುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ. ಇತ್ತ ಬ್ರಿಟಿಷ್ ಸಂಸತ್ತು ಪ್ರಧಾನಿ ಟೆರೆಸಾ ಮೇ ಅವರ ಪ್ರಸ್ತಾವವನ್ನು ತಿರಸ್ಕರಿಸಿದರೆ ಅತ್ತ ಯೂರೋಪಿಯನ್ ಯೂನಿಯನ್ ಮತ್ತೊಮ್ಮೆ ಬ್ರೆಕ್ಸಿಟ್ ಸಂಧಾನಕ್ಕೆ ಇಳಿಯಲು ಆಸಕ್ತಿ ತೋರುತ್ತಿಲ್ಲ. ಮಾರ್ಚ್ 29ರ ಮೊದಲು ಸುಧಾರಿತ ಬ್ರೆಕ್ಸಿಟ್ ಪರಿಹಾರವನ್ನು ಸಂಸತ್ತಿನ ಮುಂದೆ ತೆಗೆದುಕೊಂಡು ಹೋಗಲು ಟೆರೆಸಾ ಮೇ ಉತ್ಸುಕತೆ ತೋರುತ್ತಿದ್ದರೂ, ಇದು ದಿನೇದಿನೇ ಜಟಿಲಗೊಂಡಂತೆ ಕಂಡುಬರುತ್ತಿದೆ. ಬ್ರೆಕ್ಸಿಟ್ ವಿರೋಧಿಗಳು ಮತ್ತೊಮ್ಮೆ ರೆಫೆರೆಂಡಮ್ ಬಯಸುತ್ತಿದ್ದಾರೆ. ಲೇಬರ್ ಪಕ್ಷದ ಏಳು ಹಾಗೂ ಕನ್ಸರ್ವೇಟಿವ್ ಪಕ್ಷದ ಮೂರು ಸಂಸದರು ಈಗಾಗಲೇ ತಮ್ಮ ತಮ್ಮ ಪಕ್ಷಗಳನ್ನು ತೊರೆದು ‘ಬ್ರೆಕ್ಸಿಟ್ ವಿರೋಧಿ’ ಹೊಸ ಗಣವೊಂದನ್ನು ರಚಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಒಳಗೆ ಬ್ರೆಕ್ಸಿಟ್ ಪರ ಹಾಗೂ ಟೆರೇಸಾ ಮೇಯವರ ನಾಯಕತ್ವದಲ್ಲಿ ನಂಬಿಕೆ ಕಡಿಮೆಯಾಗುತ್ತಿದೆ.

ಅತ್ತ ಮಾರ್ಚ್ 29ರ ಗಡುವು ಸನಿಹವಾಗುತ್ತಿದೆ. ಈ ಗಡುವಿನೊಳಗೆ ಯೂರೋಪಿಯನ್ ಯೂನಿಯನ್ ಜೊತೆಗೆ ಒಪ್ಪಂದವಾಗದಿದ್ದರೆ ದೇಶದ ಆಯಾತ-ನಿರ್ಯಾತ ಆರ್ಥಿಕತೆಯು ಡೋಲಾಯಮಾನವಾಗುವುದೆಂಬ ಹೆದರಿಕೆಯಿದೆ. ಗಡುವು ವಿಸ್ತರಿಸಲು ಸದ್ಯಕ್ಕೆ ಯಾವುದೇ ಕಾನೂನು ಅವಕಾಶವಿಲ್ಲ. ಆದರೂ ಕೋರಿಕೆಯ ಮೇರೆಗೆ ‘ಇಯು’ ಗಡುವು ವಿಸ್ತರಿಸುವುದೆಂಬ ಆಶಾವಾದವೂ ಚಾಲ್ತಿಯಲ್ಲಿದೆ.

ಆವಿಯಾಗಿ ಹಾರಿಹೋದ ವೆನೆಜುಯೇಲಾ ಕರೆನ್ಸಿ

ನಮ್ಮ ದೇಶದ ಶೇಕಡಾ ಐದರ ಹಣದುಬ್ಬರಕ್ಕೇ ನಾವು ಬೆಚ್ಚಿಬೀಳುತ್ತೇವೆ. ಈ ಹಣದುಬ್ಬರ ಶೇಕಡಾ ಐದಾರು ಲಕ್ಷ ಪಟ್ಟು ಆದರೆ ಏನು ಮಾಡಬೇಕು? ನಿಮ್ಮ ಕಣ್ಣೆದುರೇ ನಿಮ್ಮ ಬಳಿಯ ದುಡ್ಡಿನ ಮೌಲ್ಯ ನಿಮಿಷ ನಿಮಿಷಕ್ಕೆ ಕುಸಿದು ಬಿದ್ದರೆ ಏನು ಮಾಡುತ್ತೀರಿ? ನಿಮ್ಮ ಉಳಿತಾಯವೆಲ್ಲಾ ಕರಗಿ ನಿಂತಲ್ಲೇ ನೀರಾಗಿ, ನಿಮ್ಮ ಜೇಬಿನಲ್ಲಿ ನೀವಿಟ್ಟ ಹಣ ಆವಿಯಾಗಿ ಗಾಳಿಯಲ್ಲಿ ತೇಲಿಹೋದರೆ ಏನು ಮಾಡುತ್ತೀರಿ?

ಇಂತಹುದೇ ಪರಿಸ್ಥಿತಿ ಈಗ ದಕ್ಷಿಣ ಅಮೆರಿಕಾದ ವೆನೆಜುಯೇಲಾದಲ್ಲಿದೆ. ಅಲ್ಲಿನ ಹಣದುಬ್ಬರ ವರ್ಷಕ್ಕೆ ಶೇಕಡಾ 15 ಲಕ್ಷದಷ್ಟಿದೆ. ಹಣದ ಮೌಲ್ಯವೆಲ್ಲಾ ಮಂಗಮಾಯವಾಗಿದೆ. ಆದರೆ ಅಲ್ಲಿನ ಸರ್ಕಾರ ಈಗಲೂ ತನ್ನ ಸೈನ್ಯದ ಸಹಾಯದಿಂದ ರಾಜ್ಯಭಾರ ಮಾಡುತ್ತಿದೆ.

2013ರವರೆಗೆ ಹ್ಯೂಗೊ ಚಾವೆಝ್ ಎಂಬ ಸರ್ವಾಧಿಕಾರಿ ವೆನೆಜುಯೇಲಾವನ್ನು ಆಳುತ್ತಿದ್ದ. ಚಾವೆಝ್ ಮರಣದ ನಂತರ ಅವನ ಬಲಗೈಬಂಟ ನಿಕೊಲಾಸ್ ಮಡುರೊ ಆಯ್ಕೆಯಾದ. 2013ರಿಂದ ಇಲ್ಲಿಯವರೆಗೆ ಸರ್ವಾಧಿಕಾರಿಯಾಗಿ ಆಳುತ್ತಿರುವ ಮಡುರೊ ದೇಶದ ಆರ್ಥಿಕತೆಯನ್ನು ಸಂಪೂರ್ಣವಾಗಿ ಹಾಳುಗೆಡವಲು ಬಿಟ್ಟಿದ್ದಾನೆ. ಅತೀವ ಹಣದುಬ್ಬರದಲ್ಲಿ ದೇಶದ ಕರೆನ್ಸಿಯನ್ನು ಚೀಲಗಳಲ್ಲಿ ತುಂಬಿ ಒಯ್ದರೂ ಒಂದು ಪೌಂಡ್ ಬ್ರೆಡ್ ಸಿಗದಂತಾಗಿದೆ. ದೇಶದ ಎಲ್ಲಾ ಸಂಸ್ಥೆಗಳು ಒಂದೊಂದಾಗಿ ತಲೆಕೆಳಗಾಗಿ ದೇಶÀ ಅರಾಜಕ ಪರಿಸ್ಥಿತಿಗೆ ಬಂದು ನಿಂತಿದೆ. ಅದರೂ ಮಡುರೊ ತನ್ನ ದಂತದ ಅರಮನೆಯಿಂದ ಕೆಳಗೆ ಇಳಿದಿಲ್ಲ.

ಹಾಗಾದರೆ ವೆನೆಜುಯೇಲಾ ಬಳಿ ಯಾವುದೇ ಸಂಪನ್ಮೂಲವಿಲ್ಲ ಎಂದು ಎಣಿಸಬೇಡಿ. ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ತೈಲನಿಕ್ಷೇಪ ವೆನೆಜುಯೇಲಾದಲ್ಲಿದೆ. ಈಗಾಗಲೇ ನಕ್ಷೆಗೆ ಬಂದಿರುವ ತೈಲನಿಧಿಯನ್ನು ಮಾತ್ರ ತೆಗೆದುಕೊಂಡರೆ ಮುಂದಿನ 600 ವರ್ಷಗಳ ಕಾಲ ಅಗೆದು ಬಗೆದರೂ ವೆನೆಜುಯೇಲಾ ತೈಲ ನಿಕ್ಷೇಪ ಮುಗಿಯುವುದಿಲ್ಲ. ಆದರೆ ಈ ತೈಲನಿಧಿಯನ್ನು ಬಳಸಿ ಆರ್ಥಿಕತೆಯನ್ನು ಸುಧಾರಿಸಲೂ ಆಗದ ಪರಿಸ್ಥಿತಿಯಲ್ಲಿ ದೇಶದ ರಾಜಕೀಯವಿದೆ. ಆಂತರಿಕ ಯುದ್ಧ, ಭ್ರಷ್ಟಾಚಾರ, ಸಂಪೂರ್ಣ ಅದಕ್ಷತೆ ಮತ್ತು ಲೂಟಿಯ ವಾತಾವರಣದಲ್ಲಿ ಕರಿಬಂಗಾರವೂ ಕಾಗೆ ಬಂಗಾರವಾದಂತಾಗಿದೆ.

ಭಾರತವು 2005ರಿಂದಲೂ ವೆನೆಜುಯೇಲಾದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ದಿನಕ್ಕೆ 4,00,000 ಬ್ಯಾರೆಲ್‍ಗಳಷ್ಟು ಕಚ್ಚಾತೈಲವನ್ನು ಜಾಮ್‍ನಗರದ ರಿಲೆಯೆನ್ಸ್ ಘಟಕ ಆಯಾತ ಮಾಡಿಕೊಳ್ಳುತ್ತಿದೆ. ಆದರೆ 2012-13ರಲ್ಲಿ 14.5 ಬಿಲಿಯನ್ ಡಾಲರ್‍ಗಳಷ್ಟಿದ್ದ ಈ ಆಮದು ಮೌಲ್ಯ ತೈಲದರದ ಕುಸಿತದಿಂದ 2017-18ರಲ್ಲಿ ಕೇವಲ 5.6 ಬಿಲಿಯನ್ ಡಾಲರ್‍ಗಳಷ್ಟಾಗಿತ್ತು. ಅಮೆರಿಕವು ವೆನೆಜುಯೇಲಾ ಮೇಲೆ ನಿರ್ಬಂಧ ಹೇರಿದ್ದ ಕಾರಣ ವೆನೆಜುಯೇಲಾ ಈ ಹಣ ಬಳಸಿ ತನ್ನ ಆವಶ್ಯಕ ಸಾಮಾನು ಖರೀದಿಸಲೂ ಅಶಕ್ತವಾಗಿತ್ತು.

ಮಡುರೊ ಸರ್ಕಾರದ ಪತನ ಸನ್ನಿಹಿತವಾಗಿದೆಯೆಂದು ಪಾಶ್ಚಿಮಾತ್ಯ ರಾಷ್ಟ್ರಗಳು ಕಳೆದ ಹಲವಾರು ತಿಂಗಳುಗಳಿಂದ ಹೇಳುತ್ತಾ ಬಂದಿವೆ. ಆದರೆ ಎಲ್ಲ ಅಡೆತಡೆಗಳ ನಡುವೆಯೂ ಸರ್ಕಾರ ನಡೆಸುತ್ತಿರುವ ಮಡುರೊ ತನ್ನ ದೇಶದ ಜನರ ಪಾಲಿಗೆ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಮುಳ್ಳಿನಂತಾಗಿದ್ದಾನೆ.

ಈ ಬಾರಿಯ ಅಸ್ಕರ್ ಚಲನಚಿತ್ರ ಪ್ರಶಸ್ತಿಯ ವಿವರಗಳು

 

ಅತ್ಯುತ್ತಮ ಚಿತ್ರ : ‘ಗ್ರೀನ್ ಬುಕ್’ ಪೀಟರ್ ಫೆರೇಲಿ ನಿರ್ದೇಶನದಲ್ಲಿ ಅಮೆರಿಕದ ಬಿಳಿಯರು ಮತ್ತು ಕರಿಯರ ನಡುವಿನ ಮಾನಸಿಕ ಕಂದರದ ಮೇಲಿನ ಚಿತ್ರ.

 

 

 

2019ರ ಅಸ್ಕರ್ ಚಲನಚಿತ್ರ ಪ್ರಶಸ್ತಿ

ಅತ್ಯುತ್ತಮ ನಿರ್ದೇಶಕ : ಅಲ್ಪಾನ್ಸೋ ಕ್ಯುಅರೋನ್ – ‘ರೋಮಾ’ ಚಿತ್ರದ ನಿರ್ದೇಶನಕ್ಕೆ.

ಅತ್ಯುತ್ತಮ ನಟ : ರಾಮಿ ಮಲೆಕ್ – ‘ಬೊಹೆಮಿಯನ್ ರಾಪ್ಸೊಡಿ’ ಚಿತ್ರದಲ್ಲಿನ ನಟನೆಗೆ.

ಅತ್ಯುತ್ತಮ ನಟಿ : ಓಲಿವಿಯ ಕೊಲ್ಮನ್ – ‘ದಿ ಫೇವರೈಟ್’ ಚಿತ್ರದಲ್ಲಿನ ನಟನೆಗೆ.

ಅತ್ಯುತ್ತಮ ಪೋಷಕ ನಟ : ಮಹರ್ಷಲ್ ಅಲಿ – ‘ಗ್ರೀನ್ ಬುಕ್’ ಚಿತ್ರದಲ್ಲಿನ ನಟನೆಗೆ.

ಅತ್ಯುತ್ತಮ ಪೋಷಕ ನಟಿ : ರೆಜಿನ ಕಿಂಗ್ – ‘ಇಫ್ ಬೇಲ್ ಸ್ಟ್ರೀಟ್ ಕುಡ್ ಟಾಕ್’ ಚಿತ್ರದ ನಟನೆಗೆ.

Leave a Reply

Your email address will not be published.