ವಿಶ್ವ ವಿದ್ಯಮಾನ

ನ್ಯೂಜಿಲ್ಯಾಂಡಿನಲ್ಲಿ ಮತ್ತೆ ಪ್ರಧಾನಿಯಾದ ಜಸಿಂಡ ಅರ್ಡನ್

ದೇಶದ ಪ್ರಧಾನಿಯಾಗಿದ್ದಾಗಲೇ ಮಗುವೊಂದನ್ನು ಹೆತ್ತು ದಾಖಲೆ ಸೃಷ್ಟಿಸಿದ್ದ ನ್ಯೂಜಿಲ್ಯಾಂಡಿನ ಪ್ರಧಾನಿ ಜಸಿಂಡ ಅರ್ಡನ್ (40 ವರ್ಷಗಳು) ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಜಸಿಂಡ ಅವರ ಲೇಬರ್ ಪಕ್ಷವು ಒಟ್ಟು ಚಲಾಯಿಸಿದ ಮತಗಳಲ್ಲಿ ಶೇಕಡಾ 49ಕ್ಕೂ ಹೆಚ್ಚು ಮತಗಳನ್ನು ಪಡೆದು ನ್ಯೂಜಿಲ್ಯಾಂಡಿನ ಸಂಸತ್ತಿನಲ್ಲಿ ಬಹುಮತ ಪಡೆದಿದೆ. ವಿರೋಧಿ ಪಕ್ಷವಾದ ನ್ಯಾಶನಲ್ ಪಕ್ಷವು ಕೇವಲ 27ರಷ್ಟು ಮತ ಪಡೆದು ಹೀನಾಯ ಸೋಲು ಕಂಡಿದೆ.

ಐವತ್ತು ಲಕ್ಷ ಜನಸಂಖ್ಯೆಯ ನ್ಯೂಜಿಲ್ಯಾಂಡ್ ದೇಶವು ಪ್ರೊಪೋರ್ಶನೇಟ್ ಪದ್ಧತಿ ಅನುಸರಿಸುತ್ತಿದೆ. ಇದರಂತೆ ಪಕ್ಷಗಳು ತಾವು ಗಳಿಸಿದ ಶೇಕಡಾ ಮತಗಳ ಅನುಪಾತದಲ್ಲಿ ಸಂಸತ್ತಿನಲ್ಲಿ ಸ್ಥಾನಗಳನ್ನು ಗಳಿಸುತ್ತವೆ. 50 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಸಂಸತ್ತಿನಲ್ಲಿ ಸರಳ ಬಹುಮತ ಪಡೆದ ಲೇಬರ್ ಪಕ್ಷವು ಬೇರಾವುದೇ ಪಕ್ಷದ ಸಹಯೋಗವಿಲ್ಲದೆ ಕೇವಲ ತನ್ನ ಬಲದ ಮೇಲೆಯೇ ಸರ್ಕಾರ ರಚಿಸುತ್ತಿದೆ.

ನ್ಯೂಜಿಲ್ಯಾಂಡನ್ನು ಕೋವಿಡ್ ವೈರಸ್ ಮುಕ್ತವಾಗಿ ಮಾಡಿರುವ ಜಸಿಂಡ ಅತ್ಯಂತ ಜನಪ್ರಿಯ ಪ್ರಧಾನಿಯಾಗಿ ಹೊರಹೊಮ್ಮಿದ್ದರು. ಆತಂಕವಾದಿ ಗುಂಡೇಟಿನ ಘಟನೆ ಸೇರಿದಂತೆ ದೇಶದ ಮುಂದಿರುವ ಸಮಸ್ಯೆಗಳನ್ನು ಅತ್ಯಂತ ಸಮರ್ಥವಾಗಿ ಹಾಗೂ ಪಾರದರ್ಶಿಕವಾಗಿ ಎದುರಿಸಿದ್ದರು.

ಚುನಾವಣೆಯ ಪ್ರವಾಸಗಳಲ್ಲಿ ಅತ್ಯಂತ ಜನಾನುರಾಗಿ ಹಾಗೂ ಪ್ರಭಾವಿಯಾಗಿ ಕಂಡುಬಂದಿದ್ದ ಅತಿಸರಳ ವ್ಯಕ್ತಿತ್ವದ ಜಸಿಂಡ ಇದೀಗ ಸರಳ ಬಹುಮತದೊಂದಿಗೆ ನ್ಯೂಜಿಲ್ಯಾಂಡಿನ ಅನಭಿಷಿಕ್ತ ರಾಣಿಯಾಗಿ ಆಳ್ವಿಕೆ ಮುಂದುವರೆಸಿದ್ದಾರೆ.


ಆಫ್ಘಾನಿಸ್ತಾನದ ಶಾಂತಿ ಸಂಧಾನದಲ್ಲಿ ಭಾರತ ಪಾಲ್ಗೊಳ್ಳಬೇಕೆ..?

ತಾಲಿಬಾನ್ ಮತ್ತು ಅಮೆರಿಕದ ಸಂಧಾನಕಾರ ಝಲ್ಮೇ ಖಲೀಲ್ಜಾದ್ ನಡುವಿನ ಶಾಂತಿ ಸಂಧಾನದ ಮಾತುಕತೆಗಳು ಅಂತಿಮಘಟ್ಟ ತಲುಪಿವೆ. ಸಂಧಾನದ ಬೇಡಿಕೆಯಂತೆ ಕಾಬೂಲಿನ ಆಫ್ಘಾನಿಸ್ತಾನ ಸರ್ಕಾರ ತಾಲಿಬಾನಿನ 5,000 ಖೈದಿಗಳನ್ನು ಬಿಡುಗಡೆ ಮಾಡಿದ್ದರೆ ತಾಲಿಬಾನ್ ಸಹ 1,000 ಸರ್ಕಾರಿ ಸೈನಿಕರನ್ನು ಬಿಡುಗಡೆ ಮಾಡಿದೆ. ಅಮೆರಿಕ, ರಷ್ಯಾ, ಪಾಕಿಸ್ತಾನ ಮತ್ತು ಚೀನಾ ಗಂಭೀರವಾಗಿ ಗಮನಿಸುತ್ತಿರುವ ಈ ಸಂಧಾನದಲ್ಲಿ ಭಾರತದ ಪ್ರತಿನಿಧಿಯೂ ಬಾಗವಹಿಸಬೇಕೆಂಬ ಬೇಡಿಕೆ ಎದ್ದಿದೆ.

ಆಫ್ಘಾನಿಸ್ತಾನದ ಶೇಕಡಾ 60 ರಿಂದ 70 ರಷ್ಟು ಭಾಗ ಕಾಬೂಲಿನ ಸರ್ಕಾರದ ವಶದಲ್ಲಿದ್ದರೂ ದಕ್ಷಿಣ ಮತ್ತು ಪೂರ್ವ ಭಾಗದ ಸರಿಸುಮಾರು ಶೇಕಡಾ 30 ರಷ್ಟು ಭಾಗ ತಾಲಿಬಾನ್ ವಶದಲ್ಲಿದೆ. ಆದರೆ ಈ ಶೇಕಡಾವಾರು ಭೂಪ್ರಮಾಣ ಎರಡೂ ಶಕ್ತಿಗಳ ನೈಜ ಪ್ರಭಾವದ ಪ್ರತೀಕವಲ್ಲ. ಆಫ್ಘಾನಿಸ್ತಾನದ ಸರ್ಕಾರದ ಪರವಾಗಿ ಅಮೆರಿಕದ ಸೇನೆ ಹಾಗೂ ವಾಯುಶಕ್ತಿಯಿದೆ. ತಾಲಿಬಾನಿನ ಯಾವುದೇ ಗುಂಪಿನ ಮೇಲೆ ಆಕಾಶದಿಂದ ಬಾಂಬ್ ಎಸೆದು ಕೊಲ್ಲಬಲ್ಲ ಶಕ್ತಿಯ ಕಾರಣದಿಂದ ತಾಲಿಬಾನ್ ಶಕ್ತಿ ಸದ್ಯಕ್ಕೆ ಸೀಮಿತವಾಗಿದೆ. ಆದರೆ ಒಮ್ಮೆ ಅಮೆರಿಕದ ಸೈನ್ಯ ಈ ವಿದೇಶಿ ನೆಲದಿಂದ ಹೊರಟು ನಿಂತರೆ ಇಡೀ ದೇಶವನ್ನು ಮತ್ತೊಮ್ಮೆ ತಾಲಿಬಾನ್ ಆಕ್ರಮಿಸಿಕೊಳ್ಳುವ ದಿನಗಳು ದೂರವಿಲ್ಲ.

ಈ ಕಾರಣದಿಂದಲೇ ಶಾಂತಿಸಂಧಾನ ಫಲಪ್ರದವಾಗುತ್ತಿದೆಯೆನ್ನುವ ಎಣಿಕೆಯಲ್ಲಿ ಸಹಸ್ರಾರು ಆಫ್ಘನ್ನರು ದೇಶದಿಂದ ಕಾಲ್ಕೀಳುವ ಹವಣಿಕೆಯಲ್ಲಿದ್ದಾರೆ. ಪಾಕಿಸ್ತಾನದ ದೂತಾವಾಸದ ಮುಂದೆ ವೀಸಾ ಪಡೆಯಲು ಸಹಸ್ರಾರು ಆಫ್ಘನ್ನರ ನೂಕುನುಗ್ಗಲು ಉಂಟಾಗಿದೆ. ಆಫ್ಘಾನಿಸ್ತಾನದ ಗಡಿಯಲ್ಲಿ ತಂತಿಬೇಲಿಯನ್ನು ನಿರ್ಮಿಸುತ್ತಾ ಪಾಕಿಸ್ತಾನ ತನ್ನ ದೇಶದ ಒಳಗೆ ನುಗ್ಗಿಬರುವ ನಿರಾಶ್ರಿತರನ್ನು ತಡೆಯುವ ಸಿದ್ಧತೆಯಲ್ಲಿದೆ. ದೇಶದ ಹಲವು ಪಟ್ಟಣಗಳಲ್ಲಿ ಈಗಾಗಲೇ ಅರಾಜಕತೆ ಶುರುವಾಗಿದ್ದರೆ ಸೈನ್ಯದ ನಿಯಂತ್ರಣ ದಿನೇದಿನೇ ಕುಸಿದು ಬೀಳುತ್ತಿದೆ.

“ಅಮೆರಿಕ ಇದುವರೆಗೂ ಯಾವುದೇ ಯುದ್ಧ ಕಳೆದುಕೊಂಡಿಲ್ಲ ಆದರೆ ಆಸಕ್ತಿ ಕಳೆದುಕೊಂಡಿದೆ” ಎಂದು ಹೇಳಲಾಗುತ್ತದೆ. ವಿಯೆಟ್ನಾಂ ಮತ್ತು ಇರಾಖ್‍ನ ಸಂದರ್ಭದಲ್ಲಿ ಇದು ಸತ್ಯವಾಗಿದೆ. 2001 ರಿಂದ ಆಫ್ಘಾನಿಸ್ತಾನದ ನೆಲದಲ್ಲಿ ಬೇರೂರಿರುವ ಅಮೆರಿಕದ ಸೈನ್ಯ ಈಗ ಹಿಂದೆಗೆತ ಬಯಸುತ್ತಿದೆ.

ಆದರೆ ಹಿಂದೆಗೆತದ ನಂತರ ಆಗುವ ಪರಿಣಾಮಗಳಿಗೆ ಯಾವುದೇ ಹೊಣೆ ಹೊರಲು ತಾನು ಸಿದ್ಧವಿಲ್ಲವಾಗಿದೆ. ಈಗಾಗಲೇ ಆಫ್ಘಾನಿಸ್ತಾನದ ಮೋಸದ ನೆಲದಲ್ಲಿ ಪರಿಪಾಟಲು ಪಟ್ಟಿರುವ ಬ್ರಿಟನ್, ರಷ್ಯಾ ಹಾಗೂ ಅಮೆರಿಕಗಳು ಅಲ್ಲಿದ್ದು ಶಾಂತಿ ಸ್ಥಾಪಿಸುವ ಗೊಡವೆಗೆ ಹೋಗುತ್ತಿಲ್ಲ. ಐರೋಪ್ಯ ರಾಷ್ಟ್ರಗಳು ಯಾವುದೇ ನೇರ ಹೊಣೆ ಹೊರಲು ಸಿದ್ಧರಿಲ್ಲ. ಇನ್ನುಳಿದ ರಾಷ್ಟ್ರಗಳೆಂದರೆ ಚೀನಾ ಹಾಗೂ ಭಾರತ. ಅತೀವ ಇಸ್ಲಾಂ ಮತಾಂಧ ದೇಶದ ಹೊರೆ ಹೊರಲು ಚೀನಾ ಸಿದ್ಧವಿಲ್ಲ. ಮೇಲಾಗಿ ಚೀನಾಗೆ ಯಾವುದೇ ನೇರ ಸಂಪರ್ಕವಿಲ್ಲ.

ಭಾರತದ ನೇರ ಭಾಗವಹಿಸುವಿಕೆಯನ್ನು ಪಾಕಿಸ್ತಾನ ಒಪ್ಪುವುದಿಲ್ಲ. ಹೀಗೆ ಯಾರಿಗೂ ಸಲ್ಲದ ಭೂಪ್ರದೇಶವಾಗಿ ಆಫ್ಘಾನಿಸ್ತಾನವೆಂಬ ದೇಶ ಅರಾಜಕತೆಯ ಹೆಬ್ಬಾಗಿಲಿಗೆ ಬಂದು ನಿಂತಿದೆ.

ಇದುವರೆಗೂ ಕೊಲ್ಲಿಯ ದೋಹಾದಲ್ಲಿ ನಡೆಯುತ್ತಿರುವ ಶಾಂತಿ ಸಂಧಾನದ ಮಾತುಕತೆಗಳು ಅಂತಿಮ ಹಂತದಲ್ಲಿವೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಂತರದ ಕೆಲವೆರೆಡು ತಿಂಗಳುಗಳಲ್ಲಿ ಈ ಪ್ರಕ್ರಿಯೆ ಮುಗಿಯಬಹುದು. ನಂತರದ ದಿನಗಳಲ್ಲಿನ ಆಫ್ಘಾನಿಸ್ತಾನದ ಭವಿಷ್ಯವನ್ನು ಊಹಿಸಲೂ ಕಷ್ಟವಾಗುತ್ತಿದೆ. ಭಾರತದ ಗಡಿಪ್ರದೇಶದಲ್ಲಿ ನಡೆಯುವ ಈ ಘಟನೆಗಳು ಪರೋಕ್ಷವಾಗಿಯಾದರೂ ದೇಶದ ಆಗುಹೋಗುಗಳ ಮೇಲೆ ಪರಿಣಾಮ ಬೀರುವುದನ್ನು ನಾವು ಕಾದು ನೋಡಬೇಕಿದೆ.


ಅಂತಿಮ ಹಂತದಲ್ಲಿ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆ

ಪತ್ರಿಕೆಯ ಈ ಸಂಚಿಕೆ ನಿಮ್ಮ ಕೈಸೇರುವ ಹೊತ್ತಿಗೆ ಅಮೆರಿಕದ ಮುಂದಿನ ನಾಲ್ಕು ವರ್ಷಗಳ ಅಧ್ಯಕ್ಷನ ಘೋಷಣೆ ಆಗಿರುತ್ತದೆ. ಇದೇ ನವೆಂಬರ್ 3 ರಂದು ನಡೆಯುವ ಚುನಾವಣೆಯ ಫಲಿತಾಂಶ ನವೆಂಬರ್ 4 ರ ಬೆಳಿಗ್ಗೆಯ ಹೊತ್ತಿಗೆ (ಭಾರತೀಯ ವೇಳೆಯಲ್ಲಿ 4 ರ ಸಂಜೆಯ ಹೊತ್ತಿಗೆ) ಹೊರಬೀಳಲಿದೆ. ಕೋವಿಡ್ ಕರಿನೆರಳಿನಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಹಲವು ಮೊದಲುಗಳಿವೆ. 2,20,000 ಜನರನ್ನು ಈಗಾಗಲೇ ಬಲಿತೆಗೆದುಕೊಂಡಿರುವ ಸಾಂಕ್ರಾಮಿಕ ರೋಗಕ್ಕೆ ಯಾರು ಹೊಣೆ ಎಂಬ ವಿಷಯದ ಜೊತೆಗೆ ಕರಿಯ ವರ್ಣೀಯರ ಆಕ್ರೋಶಕ್ಕೆ ಗುರಿಯಾದ ‘ಜಾರ್ಜ್ ಫ್ಲಾಯ್ಡ್’ ಘಟನೆಯ ಛಾಯೆಯೂ ಇದೆ. ಅಧ್ಯಕ್ಷ ಟ್ರಂಪ್‍ರವರ ತುಘಲಕ್ ಆಡಳಿತದ ಕಾರಣದಿಂದ ಕಂಗಾಲಾಗಿರುವ ಅಮೆರಿಕದ ಆರ್ಥಿಕ ಮತ್ತು ವಿದೇಶಾಂಗ ನೀತಿಗಳ ಹಿನ್ನೆಲೆಯೂ ದಟ್ಟವಾಗಿದೆ. ಇದಕ್ಕೆ ಹೊರತಾಗಿ ಟ್ರಂಪ್‍ರವರ ತಿಕ್ಕಲುತನದ ನಡವಳಿಕೆ ಹಾಗೂ ಮಾತುಕತೆಗಳಿಂದ ಹೈರಾಣಾಗಿರುವ ಪ್ರಪಂಚದ ಬೇರೆಲ್ಲಾ ದೇಶಗಳ ಕುತೂಹಲಕ್ಕೂ ಈ ಚುನಾವಣೆ ವಿಷಯವಸ್ತುವಾಗಿದೆ.

ಮೊಟ್ಟಮೊದಲ ಬಾರಿಗೆ ಭಾರತ ಮೂಲದ ಹಾಗೂ ಕರಿಯ ವರ್ಣೀಯ ಮೂಲದ ಮಹಿಳೆಯೊಬ್ಬರು ಉಪಾಧ್ಯಕ್ಷರಾಗುವ ಸಾಧ್ಯತೆಯನ್ನು ಈ ಚುನಾವಣೆ ತೆರೆದಿಟ್ಟಿದೆ. ಡೆಮಾಕ್ರೆಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಆಯ್ಕೆಯಾದರೆ ಮುಂದಿನ ನಾಲ್ಕು ವರ್ಷಗಳಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯೂ ಆಗುವ ಸಂಭವವೂ ಇರುವ ಕಾರಣ ಸಾಕಷ್ಟು ಕುತೂಹಲ ಮೂಡಿದೆ. ಅಧಿಕ ಸಂಖ್ಯೆಯಲ್ಲಿ ಕಪ್ಪು ವರ್ಣೀಯರನ್ನು ಹಾಗೂ ಭಾರತ ಸಂಜಾತರನ್ನು ಹೇಗೆ ಮತಗಟ್ಟೆಗೆ ಆಕರ್ಷಿಸುವುದು ಎಂಬುದು ಕೂಡಾ ಮುಖ್ಯವಾಗಿದೆ. ದೊಡ್ಡ ಪ್ರಮಾಣದಲ್ಲಿ ಕರಿಯರು ಮತಗಟ್ಟೆಗೆ ಹೋದರೆ ಟ್ರಂಪ್ ಸೋಲು ಕಟ್ಟಿಟ್ಟ ಬುತ್ತಿ ಎಂದೂ ಹೇಳಲಾಗುತ್ತಿದೆ.

74ರ ಹರೆಯದ ಟ್ರಂಪ್ ಮತ್ತು 78ರ ಜೋ ಬೈಡೆನ್ ನಡುವಿನ ಅಧ್ಯಕ್ಷೀಯ ಚರ್ಚೆಗಳು ಅಷ್ಟೇನೂ ಉದ್ರೇಕ ಮೂಡಿಸಲಿಲ್ಲ. ಚುನಾವಣೆಯ ಅಂತಿಮ ಘಟ್ಟದಲ್ಲಿ ಟ್ರಂಪ್‍ಗಿಂತ ನಾಲ್ಕು ಪಟ್ಟು ಹೆಚ್ಚು ಚುನಾವಣಾ ದೇಣಿಗೆ ಸಂಗ್ರಹಿಸಿದ ಬೈಡೆನ್ ಜಯ ಬಹುತೇಕ ಖಚಿತವೆಂದು ಹೇಳಲಾದರೂ ಆರು ‘ತೂಗುಯ್ಯಾಲೆ’ ರಾಜ್ಯಗಳ (ಸ್ವಿಂಗ್ ಸ್ಟೇಟ್ಸ್) ಮತದಾನ ಪ್ರಮಾಣ, ಕರಿಯರ ಮತದಾನ, ಭಾರತೀಯರ ಮತದಾನ ಹಾಗೂ ಕಡೆಯ ಘಳಿಗೆಯ ಯಾವುದಾದರೂ ಉದ್ರೇಕಪೂರ್ಣ ವಿಷಯಗಳು ಈ ಚುನಾವಣೆಯ ಫಲಿತಾಂಶ ನಿರ್ಧರಿಸಲಿವೆ.

ವಿಶ್ವವಿದ್ಯಮಾನಗಳನ್ನು ನಿರ್ಧರಿಸುವ ಈ ಚುನಾವಣೆಯ ಫಲಿತಾಂಶವನ್ನು ಪ್ರಪಂಚದ ಎಲ್ಲಾ ದೇಶಗಳು ಉಸಿರುಗಟ್ಟಿ ಕಾಯುತ್ತಿವೆ. ಈ ಮಧ್ಯೆ ಬೈಡೆನ್ ಗೆದ್ದರೂ ಡಾನಲ್ಡ್ ಟ್ರಂಪ್ ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರ ಮಾಡುತ್ತಾರೆಯೊ ಇಲ್ಲವೋ ಎಂಬ ಪ್ರಶ್ನೆ ಕೂಡಾ ಎದ್ದು ಮುಂದಿನ ಕೆಲವು ವಾರಗಳ ಬೆಳವಣಿಗೆಗಳನ್ನು ನಾವು ತುದಿಗಾಲಲ್ಲಿ ನಿಂತು ನೋಡುವಂತಾಗಿದೆ.

Leave a Reply

Your email address will not be published.