ವಿಶ್ವ ವಿದ್ಯಮಾನ

ಏಷ್ಯಾ ವಾಣಿಜ್ಯಒಪ್ಪಂದದಿದ ದೂರವುಳಿದ ಭಾರತ

-ಪುರುಷೋತ್ತಮ ಆಲದಹಳ್ಳಿ

ವಿಶ್ವದ ಮೂರನೇ ಒಂದರಷ್ಟು ವಾಣಿಜ್ಯ ವ್ಯವಹಾರಗಳನ್ನುಳ್ಳ ದೇಶಗಳ ವಾಣಿಜ್ಯ ಒಪ್ಪಂದ ‘ಆರ್‌ಸಿಇಪಿ’ (ಸಮಗ್ರ ಕ್ಷೇತ್ರೀಯ ಆರ್ಥಿಕ ಪಾಲುದಾರಿಕೆ) ನವೆಂಬರ್ 15 ರಿಂದ ಜಾರಿಯಾಗಿದೆ. ಈ ವಾಣಿಜ್ಯ ಒಕ್ಕೂಟದಲ್ಲಿ ಆಸಿಯಾನ್ ದೇಶಗಳು, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟೆಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳು ಭಾಗಿಯಾಗಿವೆ. ಪರಸ್ಪರ ರಫ್ತು-ಆಮದುಗಳ ಮೇಲೆ ಕಡಿಮೆ ಸಾರ್ವತ್ರಿಕ ಸುಂಕ ನಿಗದಿ ಮಾಡುವ ಈ ಒಪ್ಪಂದ ದೇಶಗಳ ನಡುವೆ ಆಯಾತ-ನಿರ್ಯಾತಗಳನ್ನು ಸರಳಗೊಳಿಸಿ ಹೆಚ್ಚಿನ ವ್ಯಾಪಾರಿ ವಹಿವಾಟಿಗೆ ಅನುವು ಮಾಡಿಕೊಟ್ಟಿದೆ.

ಏಷ್ಯಾ-ಪೆಸಿಫಿಕ್ ದೇಶಗಳ ಈ ಒಕ್ಕೂಟದಿಂದ ಬಾರತ ಹೊರಗೆ ಉಳಿದಿರುವುದು ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿತ್ತು. ಈ ಒಪ್ಪಂದದ ಪೂರಕ ವಾತಾವರಣದಿಂದ ದೇಶದ ರಫ್ತು ಹೆಚ್ಚಳವಾಗುವ ಸಾಧ್ಯತೆಯೂ ಇತ್ತು. ಆಮದಾಗುವ ಕಡಿಮೆ ಸುಂಕದ ಪದಾರ್ಥಗಳಿಂದಲೂ ದೇಶದ ಸ್ಪರ್ಧಾತ್ಮಕ ಉತ್ಪಾದಕತೆ ಹೆಚ್ಚುವ ಸಾಧ್ಯತೆಯಿತ್ತು. ಈ ಕಾರಣಗಳಿಂದ ಒಕ್ಕೂಟದಿಂದ ಹೊರಗುಳಿಯುವ ಭಾರತದ ನಿರ್ಧಾರ ಟೀಕೆಗೆ ಒಳಪಟ್ಟಿತ್ತು.

ಆದರೆ ದೇಶದ ಕೃಷಿ-ಕೈಗಾರಿಕೆ-ಸೇವಾ ಕ್ಷೇತ್ರಗಳು ಈ ಒಕ್ಕೂಟದ ಪರವಾಗಿರಲಿಲ್ಲ. ಆಸ್ಟೆಲಿಯಾ ಮತ್ತು ನ್ಯೂಜಿಲ್ಯಾಂಡಿನ ಹಾಲು ಮತ್ತು ಹೈನುಗಾರಿಕೆಯ ಉತ್ಪಾದನೆಗಳು ಭಾರತದ ಸಣ್ಣ ರೈತರ ಬೆನ್ನೆಲುಬಾಗಿರುವ ಹೈನುಗಾರಿಕೆಯನ್ನು ನಾಶಪಡಿಸುವ ಸಾಧ್ಯತೆಯಿತ್ತು. ಆಮದಾದ ಆಸ್ಟೆಲಿಯಾದ ಹಾಲು ರೂ.20ಕ್ಕೆ ಬೆಂಗಳೂರಿನಲ್ಲಿ ಮಾರಾಟವಾದರೆ ನಮ್ಮ ಬಡ ಬೋರೇಗೌಡ ಹಾಲುಹಿಂಡಿ ಸಂತೆಖರ್ಚು ಸಾಗಿಸಿ ಮಾಡುವ ಜೀವನ ಮೂರಾಪಾಲಾಗುತ್ತಿತ್ತು.

ಚೀನಾದಿಂದ ಹಾಗೂ ಇತರೆ ಆಸಿಯಾನ್ ದೇಶಗಳಿಂದ ಆಮದಾಗುವ ಎಲೆಕ್ಟಾçನಿಕ್ಸ್ ಪದಾರ್ಥಗಳು ಭಾರತದ ಉತ್ಪಾದಕರಿಗೆ ಮಾರಕವಾಗಲಿದೆಯೆಂದು ಕೂಡಾ ವಾದಿಸಲಾಗಿತ್ತು. ಸೇವಾಕ್ಷೇತ್ರದ ಐಟಿ-ಬಿಟಿ ಕಂಪನಿಗಳಿಗೆ ಹೆಚ್ಚಿನ ಮಾರುಕಟ್ಟೆ ದೊರೆಯುವುದಾದರೂ ಮಾನವ ಸಂಪನ್ಮೂಲದ ಸುಲಭ ಓಡಾಟಕ್ಕೆ ಈ ಒಪ್ಪಂದದಲ್ಲಿ ಪ್ರಸ್ತಾಪವಿರಲಿಲ್ಲ. ವಲಸೆ ನೀತಿಯ ನಿರ್ಬಂಧದಲ್ಲಿ ಭಾರತೀಯ ತಂತ್ರಜ್ಞಾನದ ಉದ್ಯೋಗಿಗಳಿಗೆ ಈ ದೇಶಗಳಲ್ಲಿ ಪ್ರವೇಶ ಸಿಗುತ್ತಿರಲಿಲ್ಲ.

ಒಟ್ಟಾರೆಯಗಿ ಈ ಒಪ್ಪಂದ ದೇಶದ ಸದ್ಯದ ಪರಿಸ್ಥಿತಿಯಲ್ಲಿ ಪೂರಕವಾಗಿರಲಿಲ್ಲವೆಂದು ಹೇಳಿ ಭಾರತ ಒಕ್ಕೂಟದಿಂದ ಹೊರಗುಳಿದಿದೆ. ಆದರೆ ಮುಂದಿನ ದಿನಗಳಲ್ಲಿ ಈ ರೀತಿಯ ಬಹುರಾಷ್ಟ್ರೀಯಯ ವಾಣಿಜ್ಯ ಒಪ್ಪಂದಗಳಲ್ಲಿ ಭಾಗಿಯಾಗದೆ ಬೇರೆ ದಾರಿಯೂ ಇರುವುದಿಲ್ಲ. ಆದಷ್ಟು ಬೇಗನೆ ಭಾರತ ಇಂತಹ ವಾಣಿಜ್ಯ ಒಪ್ಪಂದಗಳೊಡನೆ ಒಡಂಬಡಿಕೆಯ ಆರ್ಥಿಕತೆ ರೂಪಿಸಿಕೊಳ್ಳುವ ಅನಿವಾರ್ಯತೆಯನ್ನೂ ಎದುರಿಸಬೇಕಾಗಿದೆ.

ಟಿಬೆಟ್ ಪರದೇಶಿ ಸರ್ಕಾರದ ಮುಖ್ಯಸ್ಥನಿಗೆ ಅಮೆರಿಕದ ಶ್ವೇತಭವನದಲ್ಲಿ ಗೌರವ

ಟಿಬೆಟಿನ ಪರದೇಶಿ ಸರ್ಕಾರದ (ಗವರ್ನಮೆಂಟ್ ಇನ್ ಎಕ್ಸೆöÊಲ್) ಸಕ್ಯಾಂಗ್ (ಅಧ್ಯಕ್ಷ) ಡಾ.ಲೋಬ್ಸಾಂಗ್ ಸಾಂಗೆಯವರಿಗೆ ಮೊಟ್ಟಮೊದಲ ಬಾರಿಗೆ ಅಮೆರಿಕದ ಶ್ವೇತಭವನದಲ್ಲಿ ಪ್ರವೇಶ ದೊರೆತಿದೆ. ಟ್ರಂಪ್ ಆಡಳಿತದಲ್ಲಿ ಟಿಬೆಟನ್ ವ್ಯವಹಾರಗಳನ್ನು ನೋಡಿಕೊಳ್ಳಲು ನಿಯುಕ್ತಿಗೊಂಡಿರುವ ರಾಜದೂತ ರಾಬರ್ಟ್ ಡೆಸ್ಟೊçà ಅವರು ಟಿಬೆಟಿನ ಸಕ್ಯಾಂಗ್‌ರವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಟಿಬೆಟಿನ ಈ ಪರದೇಶಿ ಸರ್ಕಾರದ ಮುಖ್ಯಸ್ಥನಿಗೆ ಈ ಮಟ್ಟದ ಮನ್ನಣೆ ನೀಡಿರುವುದು ಚೀನಾದ ಕೆಂಗಣ್ಣಿಗೆ ಕಾರಣವಾಗಿದೆ. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಚೀನಾ ಇದನ್ನು ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಹಾಗೂ ಚೀನಾ ವಿಭಜನೆಯ ತಂತ್ರ ಎಂದು ಆಪಾದಿಸಿದೆ.

1960ರಲ್ಲಿಯೇ ದಲೈ ಲಾಮಾರವರಿಂದ ಸ್ಥಾಪಿತಗೊಂಡಿರುವ ಈ ಪರದೇಶಿ ಸರ್ಕಾರ (ಕೇಂದ್ರೀಯ ಟಿಬೆಟನ್ ಆಡಳಿತ) ಒಬ್ಬ ಅಧ್ಯಕ್ಷ, ಏಳು ಮಂದಿ ಕ್ಯಾಬಿನೆಟ್ ಸದಸ್ಯರು, 45 ಜನರ ಸಂಸತ್ತು ಹಾಗೂ ಸಭಾಪತಿ-ಉಪಸಭಾಪತಿಗಳನ್ನು ಒಳಗೊಂಡಿದೆ. 2021 ರ ಮೇನಲ್ಲಿ ನಡೆಯುವ ಅಂತಿಮ ಹಂತದ ಚುನಾವಣೆಯಲ್ಲಿ ಈಗಾಗಲೇ ನೋಂದಾಯಿತರಾಗಿರುವ 80,000 ಪರದೇಶಿ ಟಿಬೆಟನ್ನರು (ಇವರಲ್ಲಿ 55,000 ಭಾರತದಲ್ಲಿದ್ದಾರೆ) ತಮ್ಮ ಸಂಸತ್ ಸದಸ್ಯರನ್ನು ಹಾಗು ಸಕ್ಯಾಂಗ್‌ರವರನ್ನು ಆಯ್ಕೆ ಮಾಡಲಿದ್ದಾರೆ. ಪ್ರಜಾಪ್ರಭುತ್ವದ ರೀತಿಯಲ್ಲಿ ಆಯ್ಕೆಯಗುತ್ತಿರುವ ಈ ಟಿಬೆಟನ್ ಪರದೇಶಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ರಾಷ್ಟçಗಳು ಮನ್ನಣೆ ನೀಡುವುದನ್ನು ನಾವು ಕಾದು ನೋಡಬೇಕಿದೆ.

 

ಕೂದಲೆಳೆಯ ಅಂತರದಲ್ಲಿ ಗೆದ್ದ ಜೋ ಬೈಡೆನ್

ಕಳೆದ ಸಂಚಿಕೆಯಲ್ಲಿ ತೂಗುಯ್ಯಾಲೆ ರಾಜ್ಯಗಳ (ಸ್ವಿಂಗ್ ಸ್ಟೇಟ್ಸ್) ಮತದಾನ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ನಿರ್ಧರಿಸುವುದೆಂದು ಹೇಳಿದ್ದೆವು. ಈ ತೂಗುಯ್ಯಾಲೆ ರಾಜ್ಯಗಳಲ್ಲಿ ಕತ್ತಿಯ ಅಲುಗಿನ ಮೇಲೆ ತೂಗಿದ ಫಲಿತಾಂಶಕಡೆಗೂ ಜೋ ಬೈಡೆನ್-ಕಮಲಾ ಹ್ಯಾರಿಸ್ ಅವರನ್ನು ಅಮೆರಿಕದ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೇರಿಸಿದೆ. ಈ ತೂಗುಯ್ಯಾಲೆಯ ಕೇವಲ ಐದು ರಾಜ್ಯಗಳ ಅತಿಕಡಿಮೆ ಅಂತರದ ಗೆಲುವು ಮತ್ತು ಎಲೆಕ್ಟೊರಲ್ ಕಾಲೇಜಿನ ಮತಗಳು ಹೀಗಿವೆ.

 

ತೂಗುಯ್ಯಾಲೆ  ರಾಜ್ಯ ಬೈಡೆನ್ ಗೆಲುವಿನ ಅಂತರ ಎಲೆಕ್ಟೊರಲ್ ಕಾಲೇಜಿನ ಮತಗಳು
12,670 16
10,457 11
33,596 6
81,049 20
20,608 10
ಒಟ್ಟು 1,58,380 63

ಮೇಲಿನ ಐದು ರಾಜ್ಯಗಳ ಒಟ್ಟು 1,58,380 ಮತಗಳ ಅಂತರದಲ್ಲಿ ಬೈಡೆನ್‌ಗೆ 63 ಅಧಿಕ ಎಲೆಕ್ಟೊರಲ್ ಕಾಲೇಜಿನ ಮತಗಳು ಲಭ್ಯವಾಗಿವೆ. ಇವುಗಳ ಬಲದಿಂದ ಬೈಡೆನ್ ಒಟ್ಟು 306 ಎಲೆಕ್ಟೊರಲ್ ಕಾಲೇಜಿನ ಮತ ಗಳಿಸಿದ್ದರೆ ಟ್ರಂಪ್ 232 ಮತ ಗಳಿಸಿದ್ದಾರೆ. ಐದು ರಾಜ್ಯಗಳ ಈ ಕೂದಲೆಳೆಯ ಮತಗಳೇನಾದರೂ ಇಲ್ಲವಾಗಿದ್ದರೆ ಇದೇ 63 ಎಲೆಕ್ಟೊರಲ್ ಮತಗಳು ಟ್ರಂಪ್ ಪರವಾಗಿ ಮುಂದಿನ ನಾಲ್ಕು ವರ್ಷಗಳ ಕಾಲ ನಾವು ಇನ್ನಷ್ಟು ‘ಟ್ರಂಪಿಸ’ ಸಹಿಸಿಕೊಳ್ಳಬೇಕಾಗಿತ್ತು.

ನವೆಂಬರ್ 3 ರಂದು ನಡೆದ ಚುನಾವಣೆಯ ಬಹುತೇಕ ಫಲಿತಾಂಶ ನವೆಂಬರ್ 6 ರವರೆಗೆ ಬಂದಿತ್ತು. ಆದರೆ ನಂತರದ ಮೂರು ವಾರಗಳವರೆಗೆ ಇಲ್ಲಸಲ್ಲದ ವರಾತೆ ಹಾಗೂ ಕಿತಾಪತಿ ಮಾಡಿದ ಟ್ರಂಪ್ ಇದೇ ನವೆಂಬರ್ 23 ರಂದು ಅನಧಿಕೃತವಾಗಿಯಾದರೂ ಸೋಲು ಒಪ್ಪಿಕೊಳ್ಳುವ ಮಾತನ್ನಾಡಿದ್ದಾರೆ. ಮುಂದಿನ ಜನವರಿ 20 ರಂದು ಬೈಡೆನ್-ಕಮಲಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಯೂರೋಪ್-ಅಮೆರಿಕದಲ್ಲಿ ಮತ್ತೆ ಉಲ್ಬಣಿಸಿದ ಕೋವಿಡ್

2020ರ ಮಾರ್ಚ್-ಏಪ್ರಿಲ್ ನಂತರದಲ್ಲಿ ಗಣನೀಯವಾಗಿ ಹತೋಟಿಗೆ ಬಂದಿದ್ದ ಕೋವಿಡ್ ಸಾಂಕ್ರಾಮಿಕ ಮತ್ತೆ ಅಕ್ಟೋಬರ್-ನವೆಂಬರ್‌ನಲ್ಲಿ ಉಲ್ಬಣಗೊಂಡಿದೆ. ಅದೇ ರೀತಿಯಲ್ಲಿ ಅಮೆರಿಕದಲ್ಲಿಯೂ ಕೂಡಾ ಕೋವಿಡ್ ಮೂರನೇ ಅಲೆಯಾಗಿ ತೀವ್ರತೆ ಕಂಡಿದೆ.

ಕೋವಿಡ್‌ನ ಈ ಎರಡನೇ ಅಲೆಗೆ ಯೂರೋಪ್ ತತ್ತರಿಸಿದೆ. ರಾತ್ರಿ ಕರ್ಫ್ಯೂ, ವಾರಾಂತ್ಯ ಲಾಕ್‌ಡೌನ್ ಮತ್ತಿತರ ತೀವ್ರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಕೋಣೆ-ಹಾಸಿಗೆಗಳ ಕೊರತೆ ಹಾಗೂ ತೀವ್ರನಿಗಾ ಘಟಕಗಳ ಅಭಾವ ಕಾಡಿದೆ. ಬೆಲ್ಜಿಯಂ ಮತ್ತು ಹಾಲೆಂಡಿನಲ್ಲಿ ಅತ್ಯಂತ ತೀವ್ರವಾಗಿರುವ ಈ ಅಲೆ ಜನಜೀವನವನ್ನು ಬಾಗಿಲುಮುಚ್ಚಿ ಮಲಗಿಸಿದೆ. ಯೂರೋಪಿನ ಚಳಿಗಾಲ ಹಾಗು ಕೋವಿಡ್ ಕುರಿತ ಜಾಗರೂಕ ಮನಸ್ಥಿತಿಯ ಕುಸಿತ ಈ ತೀವ್ರತಮ ಅಲೆಗೆ ಕಾರಣವೆನ್ನಲಾಗಿದೆ.

 

    ದೇಶ ಸರಿಸುಮಾರು ದೈನಂದಿನ ಕೋವಿಡ್ ಕೇಸುಗಳು
ಜುಲೈ-ಆಗಸ್ಟ್ ಅಕ್ಟೋಬರ್-ನವೆಂಬರ್
ಜರ್ಮನಿ 1,000 15,000
ಯುಕೆ 4,000 20,000
ಇಟಲಿ 3,000 20,000
ಸ್ಪೈನ್ 1,500 25,000
ಬೆಲ್ಜಿಯಂ 500 22,000
ಫ್ರಾನ್ಸ್ 3,000 25,000
ಒಟ್ಟು ಯುರೋಪ್ 20,000 2,00,000
ಅಮೆರಿಕ 55,000 1,40,000
ಭಾರತ 90,000

45,000

Leave a Reply

Your email address will not be published.