ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ನೇಪಾಳದಲ್ಲಿ ಸಾಂವಿಧಾನಿಕ ಕ್ಷೋಬೆ

ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿಯವರು ಮತ್ತೊಮ್ಮೆ ನೇಪಾಳವನ್ನು ಸಾಂವಿಧಾನಿಕ ಕ್ಷೋಭೆಗೆ ದೂಡಿದ್ದಾರೆ. ಸಂಸತ್ತಿನ 275 ಸದಸ್ಯರ ಕೆಳಮನೆ ‘ಪ್ರತಿನಿಧಿ ಸಭಾ’ವನ್ನು ವಿಸರ್ಜಿಸುವಂತೆ ಕ್ಯಾಬಿನೆಟ್ ನಿರ್ಣಯ ತೆಗೆದುಕೊಂಡು ನೇಪಾಳದ ಅಧ್ಯಕ್ಷೆ ಬಿದ್ಯಾದೇವಿ ಭಂಡಾರಿಗೆ ಶಿಫಾರಸು ಮಾಡಿದ್ದಾರೆ. ಈ ಕ್ಯಾಬಿನೆಟ್ ನಿರ್ಣಯವನ್ನು ಒಪ್ಪಿಕೊಂಡ ಅಧ್ಯಕ್ಷೆ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿ 2021 ರ ಏಪ್ರಿಲ್ 30 ಮತ್ತು ಮೇ 10 ರಂದು ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದ್ದಾರೆ.

ಓಲಿಯವರಿಗೆ ಸಂಸತ್ತಿನಲ್ಲಿರಲಿ, ತಮ್ಮ ಕ್ಯಾಬಿನೆಟ್‍ನಲ್ಲಿಯೇ ಬಹುಮತದ ಬೆಂಬಲವಿರಲಿಲ್ಲ. ನೇಪಾಳ ಕಮ್ಯುನಿಸ್ಟ್ ಪಾರ್ಟಿಯ ಎರಡನೇ ಮೂರರಷ್ಟು ಸಂಸದರು ಓಲಿಯ ವಿರೋಧಿಯಾಗಿದ್ದರು. ಒಂದು ಗುಂಪು ಪುಷ್ಪ ಕುಮಾರ್ ಧಮಾಲ್ ‘ಪ್ರಚಂಡ’ರವರನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಸದ್ಯಕ್ಕೆ ಓಲಿಯ ಮುಂದುವರಿಕೆಯನ್ನು ವಿರೋಧಿಸುತ್ತಿದ್ದರು. ತಮ್ಮ ಪಕ್ಷದಲ್ಲಿಯೇ ಬಹುಮತ ಕಳೆದುಕೊಂಡ ಓಲಿ ರಾತ್ರೋರಾತ್ರಿ ಕ್ಯಾಬಿನೆಟ್ ಸಭೆ ಕರೆದು ಸಂಸತ್ತಿನ ವಿಸರ್ಜನೆಗೆ ಕಾರಣರಾಗಿದ್ದಾರೆ. ಮುಂದೆ ಓಲಿ ತನ್ನ ಬೆಂಬಲಿಗರೊಂದಿಗೆ ಪ್ರತ್ಯೇಕ ಪಕ್ಷವೊಂದನ್ನು ರಚಿಸಿಕೊಂಡು ಚುನಾವಣೆ ಎದುರಿಸುವ ಸಿದ್ಧತೆಯಲ್ಲಿದ್ದಾರೆ.

ಈ ಮಧ್ಯೆ ಪ್ರಚಂಡ ಹಾಗೂ ನೇಪಾಳದ ಕಾಂಗ್ರೆಸ್ ಪಕ್ಷ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದೆ. ಪಕ್ಷದಲ್ಲಿಯೇ ಬಹುಮತ ಕಳೆದುಕೊಂಡಿದ್ದ ಓಲಿ ಸಂವಿಧಾನ ಬಾಹಿರವಾಗಿ ಸಂಸತ್ತಿನ ವಿಸರ್ಜನೆಗೆ ಕರೆ ಕೊಟ್ಟಿದ್ದಾರೆ ಹಾಗೂ ಅಧ್ಯಕ್ಷೆ ಭಂಡಾರಿ 

ಆತುರದ ಹಾಗೂ ಪಕ್ಷಪಾತದ ನಿರ್ಣಯ ಕೈಗೊಂಡಿದ್ದಾರೆ ಎಂದು ಆಪಾದಿಸಲಾಗಿದೆ. ಸುಪ್ರೀಮ್ ಕೋರ್ಟಿನ ಈ ನಿರ್ಣಯದ ಮೇಲೆ ಮುಂದಿನ ಚುನಾವಣೆ ಅಥವಾ ಮತ್ತೊಂದು ಸರ್ಕಾರದÀ ರಚನೆ ನಿರ್ಧಾರವಾಗಲಿದೆ. ಸುಪ್ರೀಮ್ ಕೋರ್ಟಿನ ಬಹುತೇಕ ನಿರ್ಣಯ ಸಂಸತ್ತಿನ ಆತುರದ ವಿಸರ್ಜನೆಯ ವಿರುದ್ಧವೇ ಇರಲಿದೆಯೆಂದು ಹೇಳಲಾಗುತ್ತಿದೆ. ಆದಾಗ್ಯೂ ಇದೇ ಸಂಸತ್ತಿನಲ್ಲಿ ಮತ್ತೊಂದು ಸರ್ಕಾರ ರಚನೆಯೂ ಕಷ್ಟಸಾಧ್ಯವೆಂದು ಹೇಳುತ್ತಾ ನೇಪಾಳದ ಸಾಂವಿಧಾನಿಕ ಕ್ಷೋಭೆ ಮುಂದುವರೆಯುವುದೆಂದು ಅಭಿಪ್ರಾಯ ಪಡಲಾಗುತ್ತಿದೆ.

ಬೈಡೆನ್ ಕ್ಯಾಬಿನೆಟ್‍ನಲ್ಲಿ ಭಾರತೀಯ ಸಂಜಾತರು

ಭಾರತೀಯ ಮೂಲದ ಕಮಲಾದೇವಿ ಹ್ಯಾರಿಸ್‍ರವರೇ ಉಪಾಧ್ಯಕ್ಷೆ ಹುದ್ದೆಯಲ್ಲಿರುವ ಕಾರಣ ಆಧ್ಯಕ್ಷ ಜೋ ಬೈಡೆನ್ ತಮ್ಮ ಕ್ಯಾಬಿನೆಟ್‍ಗೆ ಭಾರತೀಯ ಮೂಲದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಿಕೊಳ್ಳಲಾರರು ಎಂದು ಎಣಿಸಲಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬೈಡೆನ್‍ರವರು ಅನೇಕ ಭಾರತೀಯ ಸಂಜಾತರನ್ನು ಮುಖ್ಯ ಪದವಿಗಳಿಗೆ ಆಯ್ಕೆ ಮಾಡಿ ಭಾರತ ಮೂಲದವರ ಪರ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.

ಅತಿ ಮುಖ್ಯವಾಗಿ, ಮೆಸಾಚುಸೆಟ್ಸ್‍ನ ನೀರಾ ಟಂಡನ್‍ರವರನ್ನು ಬಜೆಟ್ ಮತ್ತು ಮ್ಯಾನೇಜ್‍ಮೆಂಟ್ ಕಚೇರಿಯ ನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಗಿದೆ. ಕೇವಲ 50 ವರ್ಷ ವಯಸ್ಸಿನ ನೀರಾ ಹಿಂದೆ ಓಬಾಮಾ ಆಡಳಿತದಲ್ಲಿಯೂ ಸಹಾ ಕಿರಿಯ ಹುದ್ದೆಯಲ್ಲಿ ಕೆಲಸ ಮಾಡಿದ್ದರು. ಕರ್ನಾಟಕ ಮೂಲದ ಡಾಕ್ಟರ್ ವಿವೇಕ್ ಮೂರ್ತಿ ಮತ್ತೊಮ್ಮೆ ಸರ್ಜನ್ ಜನರಲ್ ಆಗಿ ನಿಯುಕ್ತಿಗೊಂಡಿದ್ದಾರೆ. ಈ ಹಿಂದೆ ಓಬಾಮ ಆಡಳಿತದ ಕೊನೆಯ ವರ್ಷಗಳಲ್ಲಿ ಸಹಾ ಸರ್ಜನ್ ಜನರಲ್ ಆಗಿದ್ದ ವಿವೇಕ್ ಮೂರ್ತಿ ಈಗಾಗಲೇ ಬೈಡೆನ್‍ರವರ ಕೋವಿಡ್ ಟಾಸ್ಕ್ ಫೊರ್ಸ್‍ನ ಮುಖ್ಯ ಸದಸ್ಯರೂ ಆಗಿದ್ದಾರೆ.

ತಮಿಳುನಾಡು ಮೂಲದ ಡಾಕ್ಟರ್ ಸೆಲೀನ್ ಗೌಂಡರ್ ಕೂಡಾ ಬೈಡೆನ್‍ರವರ ಕೋವಿಡ್ ಟಾಸ್ಕ್ ಫೋರ್ಸ್‍ಗೆ ಆಯ್ಕೆಯಗಿದ್ದಾರೆ. ಅದೇ ರೀತಿಯಲ್ಲಿ ಮತ್ತೊಂದು ವಿತ್ತೀಯ ಹೊಣೆಗಾರಿಕೆಗೆ ಭಾರತೀಯ ಸಂಜಾತ ಭರತ್ ರಾಮಮೂರ್ತಿ ಉಪ-ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಬೈಡೆನ್ ಆಡಳಿತದಲ್ಲಿ ಹಲವಾರು ಭಾರತೀಯ ಸಂಜಾತರು ಇರುವುದು ಖಾತರಿಯಾಗಿದೆ. ಆದರೆ ಹೊಸ ಆಡಳಿತ ಭಾರತ ಪರವಾಗಿ ಕೂಡಾ ಇರುವ ಸಾಧ್ಯತೆಯೇನಿಲ್ಲ. ಕಾಶ್ಮೀರ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಲ್ಪಸಂಖ್ಯಾತರ ದಮನ ಮತ್ತಿತರ ವಿಷಯಗಳ ವಿಷಯದಲ್ಲಿ ಬೈಡೆನ್À ಸರ್ಕಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ಇಂಗ್ಲೆಂಡಿನಲ್ಲಿ ಕಾಣಿಸಿಕೊಂಡ ಹೊಸ ಕೋವಿಡ್ ತಳಿ

ಮೊದಲಿಗೆ ಇಂಗ್ಲೆಂಡಿನ ದಕ್ಷಿಣ ಭಾಗದಲ್ಲಿ ಕೋವಿಡ್ ವೈರಸ್ಸಿನ ಹೊಸ ತಳಿಯೊಂದು ಕಾಣಿಸಿಕೊಂಡು ಮತ್ತೊಮ್ಮೆ ಯೂರೋಪಿನಾದ್ಯಂತ ತಲ್ಲಣವೆಬ್ಬಿಸಿದೆ. ಶೇಕಡಾ 70ರಷ್ಟು ಹೆಚ್ಚು ವೇಗವಾಗಿ ಪ್ರಸರಣಗೊಳ್ಳುವುದೆಂದು ಹೇಳಲಾಗಿರುವ ಈ ಹೊಸತಳಿ ಈಗಾಗಲೇ ಯೂರೋಪಿನ ಹಲವು ದೇಶಗಳಲ್ಲಿ ಹಾಗೂ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಕಾಣಿಸಿಕೊಂಡಿದೆ. ಈ ಹೊಸ ತಳಿಯಿಂದಾಗಿ ಈ ದೇಶಗಳಲ್ಲಿ ಕೋವಿಡ್ ವಿಕೋಪ ಮತ್ತಷ್ಟು ಏರಿಕೆಯಾದಂತಾಗಿದೆ.

ಈ ತಳಿಯ ಪ್ರಸರಣ ತಡೆಯಲು ಹಲವಾರು ದೇಶಗಳು ಇಂಗ್ಲೆಂಡಿನಿಂದ ಯಾತಾಯಾತ ನಿರ್ಬಂಧಿಸಿವೆ. ಇಂಗ್ಲೆಂಡಿನಿಂದ 

ಹೊರಡುವ ವಿಮಾನಗಳ ಮೇಲೆ ನಿರ್ಬಂಧ ಹೇರುವ ಜೊತೆಗೆ ಈ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಭಾರತ ಕೂಡಾ ಇಂಗ್ಲೆಂಡಿನಿಂದ ಹೊರಡುವ ವಿಮಾನ ಪ್ರಯಾಣಿಕರ ಮೇಲೆ ನಿರ್ಬಂಧ ಹೇರಿದೆ.

ಈ ತಳಿ ಹೆಚ್ಚು ವೇಗವಾಗಿ ಪ್ರಸರಣ ಆಗುವುದು ಎಂದು ಹೇಳಲಾದರೂ ಇದು ಹೆಚ್ಚು ಆಕ್ರಮಣಕಾರಿ ಅಥವಾ ಅಪಾಯಕಾರಿ ಎಂದು ಹೇಳಲಾಗುತ್ತಿಲ್ಲ. ಈಗಾಗಲೇ ಶೇಕಡಾ 60ರಿಂದ 70ರಷ್ಟು ಹರ್ಡ್ ಇಮ್ಯುನಿಟಿ ಕಂಡಿರುವ ಭಾರತದಲ್ಲಿ ಈ ಹೊಸ ತಳಿಯಿಂದ ಹೆಚ್ಚಿನ ಅಪಾಯವೇನಿಲ್ಲ. ಮೇಲಾಗಿ ಈಗಾಗಲೇ ಬಿಡುಗಡೆಯಾಗಿರುವ ಲಸಿಕೆಗಳು ಈ ತಳಿಯ ಪ್ರಭಾವವನ್ನೂ ತಾವು ನಿಯಂತ್ರಿಸುವುದಾಗಿ ಹೇಳಿಕೊಂಡಿವೆ. ಒಟ್ಟಾರೆ ಈ ಹೊಸ ತಳಿಯ ಪರಿಣಾಮ ಭಾರತದಲ್ಲಿ ನಗಣ್ಯ ಎಂದೇ ಹೇಳಲಾಗುತ್ತಿದೆ.

ಅಮೆರಿಕದ ಮೇಲೆ ರಷ್ಯಾದ ಸೈಬರ್ ದಾಳಿ

ಇದೇ ಡಿಸೆಂಬರ್ ಮಧ್ಯಭಾಗದಲ್ಲಿ ಅಮೆರಿಕದ ಅತಿಮುಖ್ಯ ಸರ್ಕಾರಿ ಸಂಸ್ಥೆಗಳು ರಷ್ಯಾ ಪ್ರಚೋದಿತ ಸೈಬರ್ ದಾಳಿಗೆ ಗುರಿಯಾಗಿವೆ. ಅಮೆರಿಕದ ಖಜಾನೆ ಇಲಾಖೆ, ವಾಣಿಜ್ಯ ಇಲಾಖೆ, ಆಂತರಿಕ ಭದ್ರತೆ ಇಲಾಖೆ, ರಕ್ಷಣಾ ಇಲಾಖೆ ಮತ್ತು ಪೆಂಟಗನ್‍ಗಳು ಈ ಸೈಬರ್ ದಾಳಿಗೆ ಗುರಿಯಾಗಿವೆ. ಹಲವಾರು ಸೂಕ್ಷ್ಮ ದಾಖಲೆಗಳು ಕಳುವಾಗಿರುವ ಬಗ್ಗೆ ಹಾಗೂ ಈ ಇಲಾಖೆಗಳ ಆನ್‍ಲೈನ್ ಕಂಪ್ಯೂಟರ್ ವ್ಯವಸ್ಥೆ ಏರುಪೇರಾಗಿರುವ ವರದಿಗಳೂ ಬಂದಿವೆ. ಈ ಇಲಾಖೆಗಳ ಸೈಬರ್ ಸೆಕ್ಯೂರಿಟಿ ನೋಡಿಕೊಳ್ಳುತ್ತಿದ್ದ ‘ಸೋಲಾರ್ ವಿಂಡ್ಸ್’ ಎಂಬ ಸಂಸ್ಥೆಯ ಪರವಾನಗಿಯ ಮುಖಾಂತರ ರಷ್ಯಾ ಸರ್ಕಾರಿ ಸಂಸ್ಥೆ ‘ಎಸ್‍ವಿಆರ್’ ಈ ಸೈಬರ್ ದಾಳಿಯನ್ನು ನಡೆಸಿದೆ ಎಂದು ಹೇಳಲಾಗಿದೆ.

21ನೆಯ ಶತಮಾನದಲ್ಲಿ ದೇಶಗಳ ನಡುವೆ ನಡೆಯುವ ಮಿಲಿಟರಿ ಯುದ್ಧಗಳಿಗಿಂತ ಈ ತೆರನಾದ ಸೈಬರ್ ಯುದ್ಧ, ವಾಣಿಜ್ಯ ಯುದ್ಧ ಹಾಗೂ ಬಾಹ್ಯಾಕಾಶ ಮೇಲಾಟದ ಪೈಪೋಟಿಗಳೇ ಯುದ್ಧದ ರೀತಿಯಲ್ಲಿ ಕಾಣುತ್ತಿವೆ. ಅಮೆರಿಕದ 2016ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಕೂಡಾ ರಷ್ಯಾದ ಮೂಗು ತೂರಿಕೆ ಕಂಡುಬಂದಿತ್ತು. ನಂತರದ ದಿನಗಳಲ್ಲಿ ಚೀನಾ ಹಾಗೂ ರಷ್ಯಾದ ಸೈಬರ್ ಪರಿಣಿತರು ಪದೇಪದೇ ಅಮೆರಿಕದ ಸರ್ಕಾರಿ ಹಾಗೂ ವಾಣಿಜ್ಯ ಸಂಸ್ಥೆಗಳ ಮೇಲೆ ಒಂದಿಲ್ಲಾ ಒಂದು ರೀತಿಯಲ್ಲಿ ದಾಳಿ ನಡೆಸುತ್ತಿದ್ದಾರೆ. ಡಿಸೆಂಬರ್‍ನ ದಾಳಿ ಈ ಸೈಬರ್ ಯುದ್ಧದ ತಾರಕ ಮುಟ್ಟಿದೆಯೆಂದು ಸಹಾ ಹೇಳಲಾಗುತ್ತಿದೆ. ಇದಕ್ಕೆ ಸೂಕ್ತ ರಕ್ಷಣಾತ್ಮಕ ವ್ಯೂಹ ರಚನೆ ಹಾಗೂ ಪ್ರತಿರೋಧ ಕಾರ್ಯ ಕೈಗೊಂಡಿರುವುದಾಗಿ ಅಮೆರಿಕ ಹೇಳಿಕೊಂಡಿದೆ.

ರಷ್ಯಾ ಮೂಲದ ಈ ಸೈಬರ್ ದಾಳಿಯನ್ನು ಅಧ್ಯಕ್ಷ ಟ್ರಂಪ್ ಟೀಕಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. ಚುನಾವಣೆ ಸೋತ ನಂತರ ಯಾವುದೇ ವಿಷಯದಲ್ಲಿ ಮುಂದಾಳತ್ವ ತೋರಿಸದೇ ಉಳಿದಿರುವ ಟ್ರಂಪ್ ಕೇವಲ ತನ್ನ ಬಂಧು-ಬಾಂಧವರಿಗೆ ‘ಅಧ್ಯಕ್ಷೀಯ ಕ್ಷಮಾದಾನ’ ನೀಡುವಲ್ಲಿಗೆ ಸೀಮಿತರಾಗಿದ್ದಾರೆ. ಈ ಮಧ್ಯೆ ಬೈಡೆನ್ ಈ ಸೈಬರ್ ದಾಳಿಯನ್ನು ಟೀಕಿಸಿ, ಮುಂದಿನ ದಿನಗಳಲ್ಲಿ ಪ್ರತಿದಾಳಿ ಕೈಗೊಂಡು ಸೈಬರ್ ದಾಳಿಕೋರರ ಹುಟ್ಟಡಗಿಸುವುದಾಗಿ ಘೋಷಣೆ ಮಾಡಿದ್ದಾರೆ.

Leave a Reply

Your email address will not be published.