ವಿಶ್ವ ವಿದ್ಯಮಾನ

ಕಡೆಗೂ ಶುರುವಾದ ಓಲಿಂಪಿಕ್ಸ್

2020 ಜುಲೈನಲ್ಲಿ ಶುರುವಾಗಬೇಕಿದ್ದ ಜಪಾನ್ ಓಲಿಂಪಿಕ್ಸ್ ಕಡೆಗೂ 2021 ಜುಲೈ 23 ರಂದು ಟೋಕಿಯೋದಲ್ಲಿ ಪ್ರಾರಂಭವಾಗಿದೆ. ಜಪಾನಿನ ಟೆನಿಸ್ ಆಟಗಾರ್ತಿ ನಯೋಮಿ ಓಸಾಕ ಓಲಿಂಪಿಕ್ಸ್ ಜ್ಯೋತಿಯನ್ನು ಬೆಳಗುವುದರೊಂದಿಗೆ ಹಾಗೂ ಜಪಾನಿನ ದೊರೆ ನರುಹಿತೊ ಕ್ರೀಡಾಕೂಟ ಉದ್ಘಾಟಿಸುವುದರೊಂದಿಗೆ ಓಲಿಂಪಿಕ್ಸ್ ಮೊಟ್ಟಮೊದಲಿಗೆ ಪ್ರೇಕ್ಷಕರಿಲ್ಲದೆ ನಡೆಯಬೇಕಾಗಿದೆ. ಭಾರತೀಯ ಮಹಿಳಾ ಬಾಕ್ಸರ್ ಮೇರಿ ಕೋಮ್ ಮತ್ತು ಭಾರತೀಯ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ದೇಶದ ಬಾವುಟವನ್ನು ಹಿಡಿದು ಪಥಸಂಚಲನದಲ್ಲಿ ಪಾಲ್ಗೊಳ್ಳುವುದರೊಂದಿಗೆ ಕೂಟದಲ್ಲಿ ತಮ್ಮ ತಂಡದ ಮುಂಚೂಣಿ ಮಾಡಿದ್ದಾರೆ.

ಆಧುನಿಕ ಓಲಿಂಪಿಕ್ಸ್ ಕ್ರೀಡಾಕೂಟ 1896 ರಲ್ಲಿ ಅಥೆನ್ಸ್ ನಗರದಲ್ಲಿ ಶುರುವಾಗಿತ್ತು. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಬೇಸಿಗೆ ಕ್ರೀಡಾಕೂಟದಲ್ಲಿ 1896 ರಲ್ಲಿ ಕೇವಲ 14 ರಾಷ್ಟ್ರಗಳು ಭಾಗವಹಿಸಿದ್ದರೆ 2016 ರಿಯೋ ಡಿ ಜನೇರೋ ಓಲಿಂಪಿಕ್ಸ್ನಲ್ಲಿ 206 ರಾಷ್ಟ್ರಗಳು ಪಾಲ್ಗೊಂಡಿದ್ದವು. 2020 32 ನೇ ಟೋಕಿಯೋ ಓಲಿಂಪಿಕ್ಸ್ನಲ್ಲಿ 205 ರಾಷ್ಟ್ರಗಳ 11,326 ಕ್ರೀಡಾಪಟುಗಳು 50 ವಿವಿಧ ಆಟೋಟಗಳ 339 ಸ್ಫರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

2020 ಟೋಕಿಯೋ ಓಲಿಂಪಿಕ್ಸ್ ಕೋವಿಡ್-19 ಕಾರಣದಿಂದ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಕೋವಿಡ್ ಸೋಂಕು ದೂರವಾಗದಿದ್ದರೂ ನಾವು ಸೋಂಕಿನ ಮಧ್ಯದಲ್ಲಿಯೇ ಜೀವನ ಮಾಡುವುದನ್ನು ಅರಿತ ಕಾರಣಬಲದಿಂದ ಇದೀಗ 2021 ಜುಲೈಆಗಸ್ಟ್ನಲ್ಲಿ ಕ್ರೀಡಾಕೂಟ ಜರುಗುತ್ತಿದೆ. ಮಾನವ ಸಾಮಥ್ರ್ಯ ಹಾಗೂ ದಿಟ್ಟ ಪರಿಶ್ರಮದ ಪರೀಕ್ಷೆಯ ಕ್ರೀಡಾಕೂಟ ಬಾರಿ ನಮ್ಮ ಆರೋಗ್ಯ ಮತ್ತು ಜಾಗರೂಕತೆಯನ್ನು ಕೂಡಾ ಪರೀಕ್ಷೆಗೆ ಒಡ್ಡುತ್ತಿದೆ.


ಆಂತರಿಕ್ಷ ಯಾನಕ್ಕೆ ಶ್ರೀಮಂತರ ಲಗ್ಗೆ

ಇದುವರೆಗೂ ಅಮೆರಿಕಾ, ಚೀನಾ, ರಷ್ಯಾ, ಮತ್ತಿತರ ರಾಷ್ಟ್ರಗಳ ಸರ್ಕಾರಗಳ ಸ್ವಾಮ್ಯವಾಗಿದ್ದ ಅಂತರಿಕ್ಷ ಯಾನ ಈಗ ಖಾಸಗಿ ವಲಯದ ಶ್ರೀಮಂತ ಕಂಪನಿಗಳಿಗೂ ಆಕರ್ಷಕವಾಗಿ ಕಂಡಿದೆ. ಅಂತರಿಕ್ಷ ಯಾನ ಹಾಗೂ ಅಂತರಿಕ್ಷ ಜೀವನವನ್ನು ಆಕರ್ಷಕ ಪ್ಯಾಕೇಜ್ಗಳಲ್ಲಿ ಪ್ರವಾಸಿ ಅನುಭವದಂತೆ ನೀಡಲು ಹಲವು ಕಂಪನಿಗಳು ಪ್ರಯೋಗಾತ್ಮಕ ಪರೀಕ್ಷೆಗಳನ್ನು ಆರಂಭಿಸಿವೆ. ವಿಶ್ವದ ಶ್ರೀಮಂತರ ನಡುವೆ ಪೈಪೋಟಿಯಂತೆ ಅಂತರಿಕ್ಷಯಾನದ ಸಾಹಸಗಳು ಈಗ ಸರಣಿಯಂತೆ ನಡೆಯುತ್ತಿವೆ.

ಮೊದಲು ವರ್ಜಿನ್ ಅಟ್ಲಾಂಟಿಕ್ ಏರ್ಲೈನ್ಸ್ ಮೂಲಕ ರಿಚರ್ಡ್ ಬ್ರಾನ್ಸನ್ ವರ್ಜಿನ್ ಗ್ಯಾಲಾಕ್ಟಿಕ್ ಎಂಬ ಹೆಸರಿನಲ್ಲಿ ಅಂತರಿಕ್ಷ ಯಾನವನ್ನು ಖಾಸಗಿಯಾಗಿ ನಡೆಸಲು ತಮ್ಮ ಮರುಬಳಕೆಯ ವಿಮಾನವೊಂದನ್ನು ಬಿಡುಗಡೆ ಮಾಡಿದ್ದಾರೆ. ಅಂತರಿಕ್ಷ ನೌಕೆಯಲ್ಲಿ ಬ್ರಾನ್ಸನ್ರವರು ಭಾರತೀಯ ಮೂಲದ ಸಿರಿಶಾ ಬಾಂಡ್ಲಾ ಅವರನ್ನು ಒಳಗೊಂಡಂತೆ ಆರು ಜನರ ತಂಡವೊಂದನ್ನು ಅಂತರಿಕ್ಷಕ್ಕೆ ಕರೆದೊಯ್ದರು. ಜುಲೈ 11 ಯಾನದಲ್ಲಿ ಖುದ್ದು ಬ್ರಾನ್ಸನ್ ಅವರು ಭಾಗವಹಿಸಿ ಯಾವುದೇ ವಯಸ್ಸಿನವರು ಅಂತರಿಕ್ಷ ಯಾನ ಮಾಡಬಹುದೆಂಬ ಸಾಧ್ಯತೆಯನ್ನು ತೋರಿ ಹೇಳಿದರು. ಮುಂದಿನ ಯಾನಗಳಲ್ಲಿ $2,50,000 ಗೆ ಒಂದು ಟಿಕೆಟ್ನಂತೆ ಯಾರೇ ಆದರೂ ಅಂತರಿಕ್ಷ ಪ್ರವಾಸ ಮಾಡಬಹುದೆಂದು ಪ್ರತಿಪಾದಿಸುವುದರ ಜೊತೆಗೆ ಮುಂದೆ ಟಿಕೆಟ್ ಬೆಲೆ ಕೇವಲ $40,000 ರಷ್ಟಾಗಬಹುದೆಂದೂ ಹೇಳಿದ್ದಾರೆ.

ಇದಕ್ಕೆ ಸ್ಪರ್ಧೆಯೆಂಬಂತೆ ಅಮೆಝಾನ್ ಸಂಸ್ಥಾಪಕ ಜೆಫ್ ಬೇಜೋಸ್ ತಮ್ಮಬ್ಲೂ ಓರಿಜಿನ್ರಾಕೆಟ್ನಲ್ಲಿ ಜುಲೈ 21 ರಂದು ಪ್ರಯಾಣ ಮಾಡಿ ಇತಿಹಾಸ ಬರೆದರು. ಕೇವಲ 10 ನಿಮಿಷಗಳ ಕಾಲದ ಅಂತರಿಕ್ಷ ಯಾನದ ನಂತರ ಪ್ಯಾರಾಶೂಟ್ಗಳ ನೆರವಿನಿಂದ ಕೆಳಗೆ ಇಳಿದ ಪ್ರವಾಸವೂ ಮುಂದಿನ ದಿನಗಳಲ್ಲಿ ಖಾಸಗಿ ಪ್ರವಾಸಕ್ಕೆ ಲಭ್ಯವಾಗಲಿದೆ.

ಇವರಿಬ್ಬರ ನಂತರ ತಾನೇನು ಕಡಿಮೆಯೆಂಬಂತೆ ಟೆಸ್ಲಾದ ಸಂಸ್ಥಾಪಕ ಇಲೋನ್ ಮಸ್ಕ್ ತಮ್ಮ ಸ್ಪೇಸ್ಎಕ್ಸ್ ಗಗನ ನೌಕೆಯನ್ನು ಅಣಿಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನೌಕೆಯೂ ಖಾಸಗಿ ಪ್ರವಾಸಕ್ಕೆ ಲಭ್ಯವಾಗಲಿದ್ದು ಹಣವಿರುವ ಯಾರೇ ಆದರೂ ಅಂತರಿಕ್ಷ ಯಾನ ಮಾಡಬಹುದೆಂಬ ಅವಕಾಶ ದೊರೆಯಲಿದೆ. ಯಾರಿಗೆ ಗೊತ್ತು..? ಮುಂದಿನ ದಶಕಗಳಲ್ಲಿ ಶಾಲಾ ಪ್ರವಾಸದಂತೆ ವಿದ್ಯಾರ್ಥಿಗಳಿಗೆ ಅಂತರಿಕ್ಷ ಯಾನದ ಪ್ರವಾಸವೂ ಲಭ್ಯವಾಗುವಂತಾದರೆ ಕಲಿಕೆಯ ಆಯಾಮಗಳೇ ಬದಲಾಗಬಹುದು


ಮತ್ತೊಮ್ಮೆ ಪ್ರಧಾನಿಯಾದ ನೇಪಾಳ ಕಾಂಗ್ರೆಸ್ ದೇವ್ಬಾ

ನಾಟಕೀಯ ಬೆಳವಣಿಗೆಯಲ್ಲಿ ನೇಪಾಳದ ಸರ್ವೋಚ್ಚ ನ್ಯಾಯಾಲಯ ಸಂಸತ್ತು ವಿಸರ್ಜಿಸಿದ ಅಧ್ಯಕ್ಷೆ ಬಿದಿಯಾದೇವಿ ಭಂಡಾರಿಯವರ ನಿರ್ಣಯವನ್ನು ರದ್ದುಗೊಳಿಸಿ ಎರಡು ದಿನಗಳಲ್ಲಿ ನೇಪಾಳ ಕಾಂಗ್ರೆಸ್ ಶೇರ್ ಬಹಾದೂರ್ ದೇವ್ಬಾ ಅವರಿಗೆ ಪ್ರಧಾನಮಂತ್ರಿ ಪ್ರಮಾಣವಚನ ಬೋಧಿಸುವಂತೆ ಆದೇಶಿಸಿತ್ತು. ಆದೇಶ ಪಾಲನೆ ಮಾಡಿದ ಅಧ್ಯಕ್ಷೆ ಭಂಡಾರಿ 75 ವರ್ಷದ ದೇವ್ಬಾ ಅವರಿಗೆ ಜುಲೈ 13 ರಂದು ಪ್ರಧಾನಿಯಾಗಿ ನಿಯುಕ್ತಿ ಮಾಡಿದ್ದರು. ದೇವ್ಬಾರವರ ನೇಪಾಳಿ ಕಾಂಗ್ರೆಸ್ ಜೊತೆಗೆ ಸರ್ಕಾರದಲ್ಲಿ ಪುಷ್ಪಕುಮಾರ್ ಪ್ರಚಂಡರವರ ನೇಪಾಳಿ ಕಮ್ಯುನಿಸ್ಟ್ ಪಕ್ಷ ಮತ್ತು ಹಳೆಯ ಮಾವೋವಾದಿ ಮತ್ತು ಮಧೇಸಿ ನಾಯಕರ ಜನತಾ ಸಮಾಜವಾದಿ ಪ್ರತಿನಿಧಿಗಳು ಪಾಲುದಾರವಾಗಿವೆ. ಎರಡೂ ಪಕ್ಷಗಳ ಪ್ರತಿನಿಧಿಗಳು ಮಂತ್ರಿಗಳಾಗಿ ಸರ್ಕಾರದಲ್ಲಿ ಕೂಡಾ ಭಾಗಿಯಾಗಿದ್ದಾರೆ.

ನಂತರ ಸಂಸತ್ತಿನಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಒಟ್ಟು 275 ಸದಸ್ಯರಲ್ಲಿ 165 ಸದಸ್ಯರು ದೇವ್ಬಾ ಪರವಾಗಿ ಮತ ಚಲಾಯಿಸಿ ದೇವ್ಬಾ ಆಯ್ಕೆಯನ್ನು ಊರ್ಜಿತಗೊಳಿಸಿದ್ದಾರೆ. ಕೇವಲ 83 ಜನ ಸದಸ್ಯರು ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ ಒಬ್ಬ ಸದಸ್ಯ ಮಾತ್ರ ತಟಸ್ಥರಾಗಿ ಉಳಿದಿದ್ದರು. ಹೀಗೆ ಬಹುಮತ ಸಾಬೀತು ಮಾಡಿ ಶೇರ್ ಬಹಾದೂರ್ ದೇವ್ಬಾ ಮುಂದಿನ ಎರಡು ವರ್ಷಗಳವರೆಗೆ ತಮ್ಮ ಸರ್ಕಾರವನ್ನು ಮುನ್ನಡೆಸುವ ಗಟ್ಟಿ ಸೂಚನೆ ನೀಡಿದ್ದಾರೆ.

ನೇಪಾಳಿ ಕಾಂಗ್ರೆಸ್ ಪಕ್ಷವು ಪರಂಪರಾನುಗತವಾಗಿ ಭಾರತದೊಂದಿಗೆ ಒಳ್ಳೆಯ ಸಂಬಂಧವನ್ನು ಬೆಳೆಸಿಕೊಂಡು ಬಂದಿದೆ. ದೇವ್ಬಾರವರ ಅನುಭವವನ್ನು ಕೂಡಾ ಗಣನೆಗೆ ತೆಗೆದುಕೊಂಡರೆ ಭಾರತನೇಪಾಳದ ಮಧ್ಯೆ ಉಂಟಾಗಿರುವ ವೈಮನಸ್ಸಿನ ವಿಷಯಗಳನ್ನು ಪರಿಹರಿಸುವ ಅವಕಾಶಗಳು ಹೆಚ್ಚಿವೆ.


ಹಲವೆಡೆ ಕಾಳ್ಗಿಚ್ಚು ಕಾಡಿದರೆ ಹಲವೆಡೆ ಅತಿವೃಷ್ಟಿಯ ಅನಾಹುತ

ವಿಶ್ವದ ಹವಾಮಾನ ಮತ್ತು ಬಿಸಿಲುಮಳೆಗಾಳಿಗಳ ಕಾಲಮಾನ ಸಂಪೂರ್ಣ ಬದಲಾವಣೆಗೊಂಡಿರುವುದು ವರ್ಷದಿಂದ ವರ್ಷಕ್ಕೆ ಸಾಬೀತಾಗುತ್ತಿದೆ. ಹಲವೆಡೆ ಅನಾವೃಷ್ಟಿ ಮತ್ತು ಬಿರುಬೇಸಿಗೆಯ ವಾತಾವರಣ ಕಂಡುಬಂದರೆ ಇನ್ನು ಹಲವೆಡೆ ಅದೇ ಸಮಯದಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ. ಬಾರಿ ಮಧ್ಯ ಚೀನಾ ಪ್ರಾಂತ್ಯಗಳು, ಭಾರತದ ಮಹಾರಾಷ್ಟ್ರ, ಉತ್ತರ ಯೂರೋಪಿನ ಜರ್ಮನಿ ಮತ್ತು ಹಾಲೆಂಡ್ ಹಾಗೂ ಅಮೆರಿಕದ ನ್ಯೂಯಾರ್ಕ್ ನಗರಗಳಲ್ಲಿ ಅತಿವೃಷ್ಟಿಯ ಅನಾಹುತ ಕಾಡಿದೆ. ಚೀನಾದ ಜೆಂಗ್ಜೂ ಹಾಗೂ ಹೆನಾನ್ ಪ್ರಾಂತ್ಯಗಳಲ್ಲಿ ಹಲವು ನಗರಗಳು ಜಲಾವೃತಗೊಂಡಿವೆ. ಮೆಟ್ರೋ ರೈಲು ಸಂಪರ್ಕ ಜಲಾವೃತಗೊಂಡು ನೂರಾರು ಜನರು ಮೃತಪಟ್ಟಿದ್ದಾರೆ. ಅದೇ ರೀತಿಯಲ್ಲಿ ಪಶ್ಚಿಮ ಜರ್ಮನಿ ಮತ್ತು ನೆದರ್ಲ್ಯಾಂಡಿನ ಹಲವು ನಗರಗಳು ನೀರಿನಲ್ಲಿ ಮುಳುಗಿವೆ.

ಇದೇ ಸಮಯದಲ್ಲಿ ರಷ್ಯಾದ ಸೈಬೀರಿಯಾ, ಕೆನಡಾದ ಬ್ರಿಟಿಷ್ ಕೊಲಂಬಿಯಾ ಹಾಗೂ ಅಮೆರಿಕದ ಓರೆಗಾನ್ ಪ್ರಾಂತ್ಯಗಳಲ್ಲಿ ಕಾಳ್ಗಿಚ್ಚು ಸಹಸ್ರಾರು ಚದರ ಕಿಲೋಮೀಟರ್ಗಳಷ್ಟು ಅರಣ್ಯ ನಾಶ ಮಾಡಿದೆ. ಸೈಬೀರಿಯಾದ ಕಾಳ್ಗಿಚ್ಚಿನ ಹೊಗೆ ಅಲಾಸ್ಕಾ ತಲುಪಿದರೆ ಓರೆಗಾನ್ ಬೆಂಕಿಯ ಪರಿಣಾಮ ನ್ಯೂಯಾರ್ಕ್ ನಗರದ ಮೇಲೆ ಕಂಡಿದೆ. ಹೀಗೆ ಏಕಕಾಲದಲ್ಲಿ ಪ್ರಪಂಚದ ಹಲವೆಡೆ ಕಾಳ್ಗಿಚ್ಚಿನ ಕೆನ್ನಾಲಿಗೆ ಹಾಗೂ ಕುಂಭದ್ರೋಣ ಮಳೆಯ ಅನಾಹುತಗಳು ಪೃಥ್ವಿಯ ಮೇಲಣ ನೈಸರ್ಗಿಕ ಸಮತೋಲನ ಹೇಗೆ ಮತ್ತು ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿವೆ.

Leave a Reply

Your email address will not be published.