ವಿಶ್ವ ವಿದ್ಯಮಾನ

ನಾಟರ್ ಡಾಮ್ ಬೆಂಕಿ ದುರಂತ
ಪ್ಯಾರಿಸ್ ನಗರದ ಕೇಂದ್ರಭಾಗದಲ್ಲಿನ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ ‘ನಾಟರ್ ಡಾಮ್’ ಚರ್ಚ್‍ನ ಬಹುಭಾಗ ಬೆಂಕಿಗೆ ಆಹುತಿಯಾಗಿದೆ. 12ನೇ ಶತಮಾನದಲ್ಲಿ ಕಟ್ಟಲಾಗಿದ್ದ ಈ ಐತಿಹಾಸಿಕ ‘ಯುನೆಸ್ಕೋ’ ವಿಶ್ವ ಪರಂಪರೆಯ ಸ್ಥಾವರದ ಛಾವಣಿ, ಮೆಟ್ಟಿಲುಗಳು ಮತ್ತು ಒಳಭಾಗದ ಪ್ರದೇಶ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಸುಟ್ಟು ಕರಕಲಾಗಿದೆ. ಏಪ್ರಿಲ್ 15ರಂದು ನಡೆದ ಈ ಬೆಂಕಿ ದುರಂತವು ತಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಹೆಮ್ಮೆ ಪಡುವ ಫ್ರೆಂಚ್‍ ಜನರ ಮನ ಕಲಕಿದೆ.

ನಾಟರ್ ಡಾಮ್ ನಲ್ಲಿ ನಡೆಯುತ್ತಿದ್ದ ಜೀರ್ಣೋದ್ದಾರದ ಸಮಯದಲ್ಲಿ ಕಾಣಿಸಿಕೊಂಡ ಬೆಂಕಿ ಅಪಘಾತದಲ್ಲಿ ಚರ್ಚಿನಕಲ್ಲಿನ ಗೋಪುರಗಳು ಹಾಗೂ ಗೋಡೆಗಳಿಗೆ ಯಾವುದೇ ಹಾನಿಯಾಗದಿದ್ದರೂ ಪ್ರಾರ್ಥನಾ ಸ್ಥಳದಲ್ಲಿದ್ದ ಅತ್ಯಂತ ಪುರಾತನ ವರ್ಣಚಿತ್ರಗಳು, ಭಿತ್ತಿ ಚಿತ್ರಗಳು ಮತ್ತು ಮರದ ಕೆತ್ತನೆಯ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಸುಂದರ ಪ್ಯಾರಿಸ್‍ ನಗರಿಯ ಮೂಲಕ ಹರಿಯುವ‘ಸೇನ್’ ನದಿಯು ಕವಲೊಡೆದು ನಿರ್ಮಿಸಿರುವ ದ್ವೀಪದಲ್ಲಿರುವ ಈ ನಾಟರ್ ಡಾಮ್   ಕೆಥೆಡ್ರಲ್‍ ಫ್ರಾನ್ಸ್  ಇತಿಹಾಸಕ್ಕೆ ಸಾಕ್ಷಿಯೆಂಬಂತೆ ಕಳೆದ ಎಂಟು ಶತಮಾನಗಳಿಂದಲೂ ನಿಂತಿದೆ. ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಪ್ರವಾಸಿಗಳು ಸಂಧರ್ಶಿಸುವ ಈ ಪ್ರಾರ್ಥನಾ ಮಂದಿರ ಫ್ರಾನ್ಸಿನ ಜನರಿಗೆ ಅತ್ಯಂತ ಪ್ರಮುಖ ಶ್ರದ್ಧಾ ಕೇಂದ್ರವಾಗಿದೆ.

ಬೆಂಕಿ ದುರಂತದ ನಂತರದಲ್ಲಿ ಫ್ರಾನ್ಸ್ ನಾದ್ಯಂತ ಹಲವು ಚರ್ಚೆಗಳು ಶುರುವಾಗಿವೆ. ಈ ಪ್ರಾರ್ಥನಾ ಮಂದಿರವನ್ನು ಮುಂದಿನ ಶತಮಾನಗಳಿಗೆ ದಕ್ಕುವಂತೆ ಅತ್ಯಂತ ಸುಭದ್ರ ಕ್ಷೇಮವಾಗಿ ಮತ್ತೆ ಕಟ್ಟುವುದು ಹೇಗೆಂಬ ಚರ್ಚೆಯೆದ್ದಿದೆ. ಜೊತೆಗೆ, ನೂರಾರು ವರ್ಷಗಳ ಹಳೆಯ ಐತಿಹಾಸಿಕ ಅವಶೇಷಗಳನ್ನು ಮತ್ತು ಕಲಾಕೃತಿಗಳನ್ನು ಬೆಂಕಿ-ಮಳೆ-ಭೂಕಂಪ ಮತ್ತಿತರ ನೈಸರ್ಗಿಕ ವಿಕೋಪಗಳಿಂದ ರಕ್ಷಿಸುವ ಬಗ್ಗೆಯೂ ಚಿಂತನೆ ಪ್ರಾರಂಭವಾಗಿದೆ.

ಚೀನಾದಲ್ಲಿ ಸಣ್ಣ ಪುಟ್ಟ ಅಪರಾಧ ಮಾಡಿದವರು ರೈಲ್ವೆ / ವಿಮಾನ ಟಿಕೆಟ್‍ ಖರೀದಿಸುವಂತಿಲ್ಲ
ಚೀನಾದ ಹಲವಾರು ಪ್ರಾಂತ್ಯಗಳು ತಮ್ಮ ನಾಗರೀಕರಿಗೆ ಇದೀಗ ಹೊಸ ಶಿಕ್ಷಾಪದ್ದತಿಯನ್ನು ಜಾರಿಗೆತಂದಿವೆ. ‘ಸೋಶಿಯಲ್ ಕ್ರೆಡಿಟ್ ಸಿಸ್ಟಮ್’ ಎಂಬ ಈ ಪದ್ದತಿಯಂತೆ ರಸ್ತೆಯಲ್ಲಿ ಎಲ್ಲೆಂದರಲ್ಲಿ ನಡೆಯುವುದು, ತೆರಿಗೆ / ಶುಲ್ಕ ಕಟ್ಟದಿರುವುದು, ಬಸ್-ಟ್ರೇನ್‍ಗಳಲ್ಲಿ ಧೂಮಪಾನ ಮಾಡುವುದು, ಮಾದಕದ್ರವ್ಯ ಸೇವನೆ ಮಾಡುವುದು, ಚೈನ್ ಹಾಕದೆ ನಾಯಿಯನ್ನು ಮನೆಯಾಚೆ ಕರೆದೊಯ್ಯು ವುದು ಮತ್ತಿತರ ಅಪರಾಧಗಳಿಗೆ ನಾಗರೀಕರಿಗೆ ಸೋಶಿಯಲ್ ಕ್ರೆಡಿಟ್‍ ದಂಡಾಂಕವನ್ನು ನೀಡಲಾಗುತ್ತದೆ. ಈ ರೀತಿಯ ದಂಡಾಂಕವನ್ನು ಪಡೆದ ನಾಗರೀಕರು ಟ್ರೇನ್‍ ಅಥವಾ ವಿಮಾನ ಟಿಕೆಟ್‍ ಖರೀದಿಸುವಂತಿಲ್ಲ. ಇಂತಹಾ ನಾಗರೀಕರು ಈಗಾಗಲೇ 1.75 ಕೋಟಿ ಸಲ ವಿಮಾನಟಿಕೆಟ್ ನಿರಾಕರಿಸಲ್ಪಟ್ಟಿದ್ದರೆ, 55 ಲಕ್ಷ ಸಲ ಟ್ರೇನ್‍ ಟಿಕೆಟ್‍ ಖರೀದಿ ಮಾಡದಂತೆ ತಡೆಯಲಾಗಿದೆ.

ಈ ‘ಸೋಶಿಯಲ್ ಕ್ರೆಡಿಟ್’ ದಂಡಾಂಕ ಪದ್ದತಿಯನ್ನು ಹಂತಹಂತವಾಗಿ ದೇಶಾದ್ಯಂತ ವಿಸ್ತರಿಸುವ ಯೋಜನೆ ಚೀನಾ ಸರ್ಕಾರದ ಮುಂದಿದೆ. ಈಗಾಗಲೇ ಸರ್ಕಾರದ ವಿರುದ್ಧ ಪ್ರತಿಭಟಿಸುವವರು ಹಾಗೂ ಚೀನಾ ಕಮ್ಯನಿಸಿಸ್ಟ್ ಪಕ್ಷದ ವಿರುದ್ಧ ಮಾತನಾಡುವವರು ಯಾವುದೇ ಪ್ರವಾಸದಿಂದ ನಿರ್ಭಂಧಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಸೋಶಿಯಲ್ ಕ್ರೆಡಿಟ್‍ ದಂಡಾಂಕ ಪದ್ದತಿಯಂತೆ ಸಾರ್ವಜನಿಕವಾಗಿ ಯಾವುದೇ ತಪ್ಪು ಮಾಡಿದ ನಾಗರೀಕರು ಪ್ರವಾಸ ನಿರ್ಭಂಧಕ್ಕೆ ಒಳಗಾಗುತ್ತಾರೆ. ದೇಶಾದ್ಯಂತ ಅಳವಡಿಸಿರುವ ಕ್ಯಾಮೆರಾ ಕಣ್ಣುಗಳಿಗೆ ಸಿಗುವ ಯಾವುದೇ ಅಪರಾಧಿಗಳು ಹಾಗೂ ಚೀನಾದ ಏಕಪಕ್ಷೀಯ ಸರ್ವಾಧಿಕಾರಿ ಸರ್ಕಾರದ ಅವಗಣವೆಗೆ ಒಳಗಾದ ಆರೋಪಿಗಳು ಈ ದಂಡಾಂಕ ಪದ್ದತಿಯ ಶಿಕ್ಷೆಗೆ ಒಳಪಡಲಿದ್ದಾರೆ. ಹಿಂದೆ ಅಪರಾಧಿಗಳನ್ನು ‘ಕಪ್ಪು ಪಟ್ಟಿ’ಗೆ ಸೇರಿಸಲಾಗುತ್ತಿತ್ತು. ಇದೀಗ ಹೊಸದಾದ ಸೋಶಿಯಲ್ ಕ್ರೆಡಿಟ್ ಶಿಕ್ಷಾ ಪದ್ದತಿಯು ನಾಗರೀಕರಲ್ಲಿ ಸರ್ಕಾರದ ಕಾನೂನುಗಳಿಗೆ ವಿಶ್ವಾಸಾರ್ಹ ನಡತೆಯನ್ನು ಪ್ರೇರೇಪಿಸುತ್ತದೆ. ಈ ಪದ್ದತಿಯಂತೆ “ನಂಬಿಕೆಗೆ ಅರ್ಹರಾದವರು ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ವಿಹರಿಸಬಹುದಾದರೆ ನಂಬಿಕೆಗೆ ಅನರ್ಹರು ಮನೆಯಿಂದ ಹೊರಗೆ ಒಂದು ಹೆಜ್ಜೆಯನ್ನೂ ಇಡದಂತಾಗಿದೆ.”

ಆದರೆ ಈ ಹೊಸ ಶಿಕ್ಷಾ ಪದ್ದತಿಯು ಚೀನಾ ಸರ್ಕಾರವನ್ನು ಟೀಕೆ ಮಾಡುವ ಎಲ್ಲರನ್ನೂ ದಮನ ಮಾಡುವಂತಿದೆ ಎಂದು ಬೆರಳೆಣಿಕೆಯ ಕೆಲವರು ದೂರಿದ್ದಾರೆ. ಚೀನಾದ ಪತ್ರಕರ್ತ ಲಿಯು ಹು ರವರು ಚೀನಾ ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಟೀಕಿಸಿದ ಮೇಲೆ ಯಾವುದೇ ಪ್ರವಾಸ ಮಾಡುವುದರಿಂದ, ಯಾವುದೇ ಸಾಲ ಪಡೆಯುವುದರಿಂದ ಹಾಗೂ ಯಾವುದೇ ಆಸ್ತಿ ಖರೀದಿಸುವುದರಿಂದ ವಂಚಿತರಾಗಿದ್ದಾರೆ. “ಯಾವುದೇ ಕಡತವಿಲ್ಲ, ಪೋಲಿಸ್ ವಾರಂಟ್‍ ಇಲ್ಲ ಅಥವಾ ಮುಂಗಡ ಮಾಹಿತಿಯಿಲ್ಲ. ಒಂದೇ ಕ್ಷಣದಲ್ಲಿ ನನ್ನನ್ನು ಎಲ್ಲಾ ಸೌಲಭ್ಯಗಳಿಂದ ಕಡಿತ ಮಾಡಿದರು. ಯಾವುದು ಭಯಾನಕ ವೆಂದರೆ, ನೀವು ಇದನ್ನು ಯಾರಿಗೂ ದೂರುವಂತಿಲ್ಲ, ಏನನ್ನೂ ಮಾಡುವಂತಿಲ್ಲ. ನೀವು ಯಾರಿಗೂ ಬೇಡವಾದ ಜಾಗದಲ್ಲಿ ಒಬ್ಬಂಟಿಯಾಗುವಿರಿ” ಎಂದು ಲಿಯು ಹು ರವರು ದೂರಿದ್ದಾರೆ. ಬ್ರಿಟನ್‍ನ ಗಾರ್ಡಿಯನ್ ವೃತ್ತ ಪತ್ರಿಕೆಯಂತೆ ಈ ಶಿಕ್ಷಾ ಪದ್ದತಿಯಲ್ಲಿ ನಾಗರೀಕರು ವಿಮೆ ಮಾಡಿಸುವ, ಆಸ್ತಿ ಖರೀದಿಸುವ ಅಥವಾ ಹೂಡಿಕೆ ಮಾಡುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.

ಸೂಡಾನ್‍ ಅಧ್ಯಕ್ಷ ಓಮರ್ ಅಲ್-ಬಷರ್  ಪದಚ್ಯುತಿ
ಕಳೆದ 30 ವರ್ಷಗಳಿಂದ ಸೂಡಾನ ಆಳುತ್ತಿದ್ದ 75 ವರ್ಷದ ಓಮರ್ ಅಲ್-ಬಷರ್ ಕಡೆಗೂ ಪದಚ್ಯುತಿಗೊಂಡಿದ್ದಾರೆ. ಹಲವಾರು ತಿಂಗಳುಗಳಿಂದ ನಡೆಯುತ್ತಿದ್ದ ನಾಗರೀಕ ಪ್ರತಿಭಟನೆಗಳಿಗೆ ಮಣಿದು ಸೂಡಾನ್‍ನ ಸೈನ್ಯ ಓಮರ್ ಅಲ್-ಬಷರ್ ಅವರನ್ನು ಕೆಳಗಿಳಿಸಿ ಸೇನಾಡಳಿತವನ್ನು ಘೋಷಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಮುಕ್ತ ಚುನಾವಣೆಗಳನ್ನು ನಡೆಸುವುದಾಗಿ ಮಿಲಿಟರಿ ಕೌನ್ಸಿಲ್ ಹೇಳಿಕೆ ನೀಡಿದೆ.

ಆದರೆ ಇದಕ್ಕೆ ತೃಪ್ತರಾಗದ ಸೂಡಾನ್ ನಾಗರೀಕರು‘ಸೂಡಾನೀಸ್ ಪ್ರೊಫೆಶನಲ್ ಅಸೋಸಿಯೇಶನ್’ಅಡಿಯಲ್ಲಿ ತಮ್ಮ ಪ್ರತಿಭಟನೆ ಮುಂದುವರೆಸಿ, ಹಿಂದಿನ ಆಡಳಿತದ ಎಲ್ಲಾ ಪಳೆಯುಳಿಕೆ ಮತ್ತು ವಾರಸುದಾರರನ್ನು ಕಿತ್ತು ಜೈಲಿಗೆ ಅಟ್ಟಬೇಕೆಂದು ಆಗ್ರಹ ಮಾಡಿದ್ದಾರೆ. ‘ಫ್ರೀಡಮ್’ ಮತ್ತು ‘ರೆವಲ್ಯೂಶನ್’ ಎಂದು ಕೂಗುತ್ತಿರುವ ಸೂಡಾನ್‍ ಜನರು ಮಿಲಿಟರಿ ಕೇಂದ್ರಸ್ಥಾನದ ಮುಂದೆ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಪ್ರತಿಭಟನೆಯನ್ನು ಚದುರಿಸಲು ಯತ್ನಿಸಿದ ಮಿಲಿಟರಿ ಸರ್ಕಾರವು ಜನರೊಡನೆ ಕಾಳಗ ಮತ್ತು ಹಿಂಸಾಚಾರ ತಪ್ಪಿಸಲು ತನ್ನ ಪಡೆಯನ್ನು ಹಿಂದೆಗೆದಿದೆ.

ಈ ಮಧ್ಯೆ ಅಲ್-ಬಷರ್ ನನ್ನು ಜನಾಂಗೀಯ ಹತ್ಯೆ ಹಾಗೂ ಯುದ್ಧ ಅಪರಾಧಗಳಿಗೆ ದೋಷಿಯಾಗಿ ಅಂತರರಾಷ್ಟ್ರೀಯ ಕ್ರಿಮಿನಲ್‍ ಕೋರ್ಟ್‍ಗೆ ಒಪ್ಪಿಸಲಾಗಿದೆ. 2003 ರ ನಂತರದ ಢಾರ್ ಫರ್ ಜನಾಂಗೀಯ ಹತ್ಯೆಯಲ್ಲಿ ನಾಲ್ಕು ಲಕ್ಷ ಸೂಡಾನ್ ನಾಗರೀಕರು ಹತ್ಯೆಗೆ ಒಳಗಾಗಿದ್ದರೆ 30 ಲಕ್ಷ ಜನ ಮನೆಮಠ ಕಳೆದುಕೊಂಡಿದ್ದರು.
ಪದಚ್ಯುತಿಯ ನಂತರ ಅಲ್-ಬಷರ್ ಮನೆಯ ಶೋಧದಲ್ಲಿ ರೂ.900 ಕೋಟಿ ಮೌಲ್ಯಕ್ಕೂ ಮಿಗಿಲಾದ ಡಾಲರ್, ಪೌಂಡ್ ಮತ್ತು ಯೂರೋ ನೋಟುಗಳು ಸೂಟ್‍ಕೇಸುಗಳಲ್ಲಿ ಕಂತೆಕಂತೆಯಗಿ ದೊರೆತಿವೆ. ಅಲ್-ಬಷರ್ ನ ಕುಟುಂಬದ ಸದಸ್ಯರು ಹಾಗೂ ಸರ್ಕಾರದ ಮಂತ್ರಿಗಳನ್ನು ಬಂಧಿಸಲಾಗಿದ್ದು ವಿಚಾರಣೆ ಮುಂದುವರೆದಿದೆ.

ಶ್ರೀಲಂಕಾದಲ್ಲಿ ಇಸ್ಲಾಮಿಕ್ ಸ್ಟೇಟ್‍ನಿಂದ ಆತ್ಮಾಹುತಿ ದಾಳಿ ನರಮೇಧ
ಎಲ್‍ಟಿಟಿಇ ವಿರುದ್ಧದ 2009 ರ ಸೈನಿಕ ಕಾರ್ಯಾಚರಣೆಯ ಹತ್ತು ವರ್ಷಗಳ ನಂತರ ಶ್ರೀಲಂಕಾಗೆ ಮತ್ತೊಮ್ಮೆ ಹಿಂಸಾಚಾರ ಮರುಕಳಿಸಿದೆ. ಏಪ್ರಿಲ್ 21ರ ಈಸ್ಟರ್ ಭಾನುವಾರದಂದು ನಡೆದ ಸರಣಿ ಬಾಂಬ್ ಸ್ಫೋಟಗಳು ಹತ್ತು ವರ್ಷದಿಂದ ಶಾಂತಿ ವಾತಾವರಣ ಆನಂದಿಸುತ್ತಿದ್ದ ಬೌದ್ಧ ಬಹುಮತದ ಶ್ರೀಲಂಕಾ ಜನತೆಯನ್ನು ತಲ್ಲಣಗೊಳಿಸಿದೆ. ಸಿಂಹಳೀಯರ ಮತ್ತು ತಮಿಳು ರಾಷ್ಟ್ರವಾದಿಗಳ ನಡುವಣ 37 ವರ್ಷಗಳ ಹಿಂಸಾತ್ಮಕ ಹೋರಾಟದ ಕೊನೆ ಕಂಡಿದ್ದ ದ್ವೀಪದೇಶ ಇದೀಗ ಇಸ್ಲಾಂ ಉಗ್ರರ ಅಟ್ಟಹಾಸಕ್ಕೆ ನಲುಗಿದೆ. ಹೇಡಿತನದ ಈ ಆತ್ಮಾಹುತಿ ದಾಳಿಯಲ್ಲಿ 10 ಭಾರತೀಯರು ಸತ್ತಿದ್ದು ಅವರಲ್ಲಿ ಶ್ರೀಲಂಕಾ ಪ್ರವಾಸಕ್ಕೆಂದು ತೆರಳಿದ್ದ ಏಳು ಕನ್ನಡಿಗರ ತಂಡವೂ ಬಲಿಯಾಗಿದೆ.

ಈಸ್ಟರ್ ಭಾನುವಾರದಂದು ಬೆಳಿಗ್ಗೆ 8.30 ರಿಂದ 9 ಘಂಟೆಯವರೆಗೆ ಕೊಲಂಬೋದ ಪಂಚತಾರಾ ಹೋಟೆಲುಗಳಾದ ಶಾಂಗ್ರಿ ಲಾ, ದಿ ಗ್ರಾಂಡ್ ಸಿನಮನ್ ಮತ್ತು ಕಿಂಗ್ಸ್ ಬರಿಗಳಲ್ಲಿ ಮತ್ತು ಕೊಲಂಬೋದ ಆಂಟನಿ ಚರ್ಚ್, ನೊಗೊಂಬೋದ ಸೈಂಟ್ ಸೆಬಾಸ್ಟಿಯನ್ ಚರ್ಚ್ ಹಾಗೂ ಬಟ್ಟಿಕಲೋವಾದ ಝಯನ್ ಚರ್ಚ್‍ಗಳ ಮೇಲೆ ಎಂಟು ಉಗ್ರರು ಆತ್ಮಾಹುತಿ ದಾಳಿ ಮಾಡಿದ್ದರು. ಬೆಳಿಗ್ಗೆಯ ಉಪಹಾರ ಸೇವಿಸುತ್ತಿದ್ದ ಜನರ ನಡುವೆ ಹಾಗೂ ಚರ್ಚ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಜನರ ನಡುವೆ ತಮ್ಮನ್ನು ತಾವು ಸ್ಫೋಟಿಸಿಕೊಂಡು ನರಮೇಧ ನಡೆಸಿದ್ದರು. ಇದುವರೆಗೆ 320ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ಖಚಿತವಾಗಿದ್ದರೆ ನೂರಾರು  ಜನರು ಮಾರಣಾಂತಿಕ ಗಾಯಗಳೊಂದಿಗೆ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.

ಆತ್ಮಾಹುತಿ ದಾಳಿ ನಡೆದಎರಡು ದಿನಗಳ ನಂತರ ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ದಾಳಿಗೆ ಹೊಣೆ ಹೊತ್ತಿದ್ದು, ಕಳೆದ ತಿಂಗಳ ನ್ಯೂಜಿಲೆಂಡಿನ ಮಸೀದಿಗಳಲ್ಲಿ ನಡೆದ ನರಮೇಧಕ್ಕೆ ಉತ್ತರವಾಗಿ ತಾನು ಪ್ರತೀಕಾರ ದಾಳಿ ನಡೆಸಿದ್ದೇನೆಂದು ಹೇಳಿಕೊಂಡಿದೆ.ಆತ್ಮಾಹುತಿ ದಾಳಿಕೋರರ ವಿಡಿಯೋ ಬಿಡುಗಡೆ ಮಾಡುವ ಜೊತೆಗೆ ಯಾವ ಉಗ್ರಗಾಮಿಯು ಯಾವ ಜಾಗದಲ್ಲಿ ದಾಳಿ ನಡೆಸಿದನೆಂದು ಕೂಡಾ ಹೇಳಿಕೊಂಡಿದೆ.

ಶ್ರೀಲಂಕಾದಲ್ಲಿನ ಕ್ರಿಶ್ಚಿಯನ್ನರು ಕೇವಲ ಶೇಕಡಾ 7.6ರಷ್ಟಿದ್ದು ಬಹುಸಂಖ್ಯಾತ ಸಿಂಹಳೀಯರೊಡನೆ ಉತ್ತಮ ಸಂಬಂಧವಿಟ್ಟುಕೊಂಡಿದ್ದಾರೆ. ಹಿಂದೂಗಳು ಶೇಕಡಾ 12.6 ರಷ್ಟಿದ್ದರೆ ಮುಸ್ಲಿಮರು ಶೇಕಡಾ 9.7 ರಷ್ಟಿದ್ದಾರೆ. ಉಳಿದ ಶೇಕಡಾ 70.1 ಜನಸಂಖ್ಯೆ ಬೌದ್ಧಧರ್ಮ ಪಾಲನೆ ಮಾಡುವ ಸಿಂಹಳೀಯ ಜನರದ್ದಾಗಿದೆ. ಸ್ವಾತಂತ್ರ್ಯಾ ನಂತರದ ಕಳೆದ 70 ವರ್ಷಗಳಲ್ಲಿ ಶ್ರೀಲಂಕಾದ ಮುಸ್ಲಿಮರು ರಾಷ್ಟ್ರೀಯ ಮುಖ್ಯಧಾರೆಯಲ್ಲಿಯೇ ಮಿಳಿತವಾಗಿದ್ದು ನಾಲ್ಕು ದಶಕಗಳ ತಮಿಳು-ಸಿಂಹಳೀಯ ಘರ್ಷಣೆಗಳಲ್ಲಿ ನಿರ್ಲಿಪ್ತರಾಗಿದ್ದರು. ಈಸ್ಟರ್ ಭಾನುವಾರದ ಈ ಘಟನೆ ಮತ್ತೊಮ್ಮೆ ಜನಾಂಗೀಯ ಕಲಹಕ್ಕೆ ನಾಂದಿಯೆರೆದು ದ್ವೀಪದೇಶದ ಶಾಂತಿಯನ್ನು ಅಲ್ಲೋಲ ಕಲ್ಲೋಲ ಮಾಡಿದೆ.

Leave a Reply

Your email address will not be published.