ವಿಶ್ವ ವಿದ್ಯಮಾನ

ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖ

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮಾರ್ಚ್2019ರ ಗಣತಿಯಲ್ಲಿಒಟ್ಟು 11.7 ಲಕ್ಷ ವಿದೇಶಿ ವಿದ್ಯಾರ್ಥಿಗಳಿದ್ದರೆ ಅವರಲ್ಲಿ ಶೇಕಡಾ 50ರಷ್ಟು ಭಾರತ ಮತ್ತುಚೀನಾ ದೇಶಗಳಿಂದ ಬಂದವರಾಗಿದ್ದಾರೆ. ಶೈಕ್ಷಣಿಕ ಕೋರ್ಸ್‍ಗಳಿಗಾಗಿ ನೀಡುವ ‘ಎಫ್’ ವೀಸಾ ಮತ್ತು ಔದ್ಯೋಗಿಕ ವೃತ್ತಿ ಶಿಕ್ಷಣಕ್ಕಾಗಿ ನೀಡುವ ‘ಎಮ್’ ವೀಸಾಗಳೆರಡನ್ನೂ ಒಟ್ಟು ಸೇರಿಸಿ ನೋಡಿದರೆ 2018ರ ಮಾರ್ಚ್‍ನಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾ 3ರಷ್ಟು ಇಳಿಮುಖ ಕಂಡಿದೆ. ವಲಸೆ ವಿರೋಧಿ ನೀತಿ ಅನುಸರಿಸುತ್ತಿರುವ ಅಧ್ಯಕ್ಷ ಡಾನಲ್ಡ್ ಟ್ರಂಪ್‍ರವರ ಹುಚ್ಚು ಘೋಷಣೆಗಳ ಕಾರಣಕ್ಕೆ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿರಬಹುದೆಂದು ಎಣಿಸಲಾಗಿದೆ.

ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳು (ಲಕ್ಷಗಳಲ್ಲಿ)
2018 2019
ಭಾರತ ಮೂಲದ ವಿದ್ಯಾರ್ಥಿಗಳು 2.11 2.09
ಚೀನಾ ಮೂಲದ ವಿದ್ಯಾರ್ಥಿಗಳು 3.77 3.69
ಭಾರತ-ಚೀನಾ ವಿದ್ಯಾರ್ಥಿಗಳು 5.88 5.78
ಒಟ್ಟು ವಿದೇಶಿ ವಿದ್ಯಾರ್ಥಿಗಳು 11.4 11.7

 

ಒಟ್ಟು ಭಾರತೀಯ ವಿದ್ಯಾರ್ಥಿಗಳಲ್ಲಿ ಪದವಿ ವಿದ್ಯಾರ್ಥಿಗಳು ಕೇವಲ 11% ರಷ್ಟಿದ್ದರೆ ಸ್ನಾತಕೋತ್ತರ ವಿದ್ಯಾರ್ಥಿಗಳು 75% ರಷ್ಟಿದ್ದಾರೆ. ಭಾರತದ ಐಐಟಿ ಹಾಗೂ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪದವಿ ಪಡೆದು ಸ್ನಾತಕೋತ್ತರ ಎಂಟೆಕ್ ಹಾಗೂ ಎಂಬಿಎ ಪದವಿ ಪಡೆಯಬಯಸುವ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿದೆ. 2018 ರಿಂದ 2019ಕ್ಕೆ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 2 ರಷ್ಟು ಇಳಿಕೆಯಾಗಿದ್ದರೆ ಚೀನಾದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 3 ರಷ್ಟು ಇಳಿದಿದೆ. ವಿದ್ಯಾರ್ಥಿ ವೀಸಾ ನೀಡುವಲ್ಲಿನ ಪ್ರಕ್ರಿಯೆಯಲ್ಲಿ ವರ್ಷದಿಂದ ವರ್ಷಕ್ಕೆ ಅನುಸರಿಸುತ್ತಿರುವ ಜಿಗುಟುತನವೂ ಈ ಇಳಿಕೆಗೆ ಕಾರಣವಾಗಿರಬಹುದೆಂದು ಹೇಳಲಾಗುತ್ತಿದೆ.

ಈ ಮಧ್ಯೆ ಅಧ್ಯಕ್ಷ ಟ್ರಂಪ್‍ರವರು ಹೊಸ ವಲಸೆ ಕರಡು ನೀತಿಯೊಂದನ್ನು ಪ್ರಕಟಿಸಿದ್ದಾರೆ. ಈ ಕರಡು ನೀತಿಯಂತೆ ಈಗಾಗಲೇ ಅಮೆರಿಕದ ಪ್ರಜೆಗಳಾಗಿರುವವರ ಕುಟುಂಬದ ಸದಸ್ಯರಿಗೆ ನೀಡುವ ಆದ್ಯತೆಯ ಬದಲಾಗಿ ಅರ್ಹತೆಯ ಆಧಾರದ ಮೇಲೆ ವೀಸಾ, ಗ್ರೀನ್‍ಕಾರ್ಡ್ ಹಾಗೂ ಪೌರತ್ವ ನೀಡುವ ಉದ್ದೇಶವಿದೆ. ಅಮೆರಿಕಕ್ಕೆ ವಲಸೆ ಹೋಗಬಯಸುವವರು ಆರ್ಥಿಕವಾಗಿ ಸ್ವಾವಲಂಬಿಗಳಾಗಿರಬೇಕು, ಇಂಗ್ಲಿಷ್ ಭಾಷೆ ಬಲ್ಲವರಾಗಿರಬೇಕು ಹಾಗೂ ನಾಗರಿಕ ಅರ್ಹತಾ ಪರೀಕ್ಷೆಯೊಂದನ್ನು ಪಾಸು ಮಾಡಬೇಕು ಎನ್ನುವ ಪ್ರಸ್ತಾಪವೂ ಕರಡಿನಲ್ಲಿದೆ. ಈ ಹೊಸ ನೀತಿಯಂತೆ ನೀಡಲಾಗುವ ಒಟ್ಟು ಗ್ರೀನ್ ಕಾರ್ಡ್ ಹಾಗೂ ಪೌರತ್ವದ ಸಂಖ್ಯೆಯಲ್ಲಿ ಬದಲಾವಣೆ ಇಲ್ಲವಾದರೂ, ವಲಸೆಯ ಅವಕಾಶವನ್ನು ಉನ್ನತ ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬನೆ ಹೊಂದಿರುವ ಉನ್ನತ ವರ್ಗದ ಉದ್ಯೋಗಾರ್ಥಿಗಳು ಮಾತ್ರ ಪಡೆಯಬೇಕು ಎಂಬ ಉದ್ದೇಶ ಹೊಂದಲಾಗಿದೆ.

ಡಾನಲ್ಡ್ ಟ್ರಂಪ್‍ರವರು ಪ್ರಕಟಿಸಿರುವ ಈ ಹೊಸ ವಲಸೆ ನೀತಿಯು ಅಮೆರಿಕಕ್ಕೆ ವಲಸೆ ಹೋಗಬಯಸುವ ಮೆಕ್ಸಿಕೋ, ಫಿಲಿಪಿನೋ ಹಾಗೂ ಲ್ಯಾಟಿನ್ ಅಮೆರಿಕ ದೇಶಗಳ ಕಾರ್ಮಿಕ ವರ್ಗಕ್ಕೆ ಕಡಿವಾಣ ಹಾಕಬಯಸಿದ್ದು, ಉನ್ನತ ಶಿಕ್ಷಣ ಹೊಂದಿದ್ದು ಆಧುನಿಕ ಸೇವಾ ವಲಯಗಳಲ್ಲಿ ಉದ್ಯೋಗಸ್ತರಾಗಿರುವ ಭಾರತೀಯರಿಗೆ ಹೆಚ್ಚಿನ ಅವಕಾಶ ತೆರೆಯಲಿದೆ. ಅರ್ಹತೆಯ ಆಧಾರದ ಮೇಲೆ ಭಾರತ ಮೂಲದ ಪದವಿಧರರು ಹಾಗೂ ಡಾಕ್ಟರೇಟ್ ಹೊಂದಿದವರಿಗೆ ಸುಲಭವಾಗಿ ಅಮೆರಿಕೆಯ ಪೌರತ್ವ ಸಿಕ್ಕುವ ಸಾಧ್ಯತೆಯಿದೆ. ಆದರೆ ಟ್ರಂಪ್‍ರವರ ಈ ಕರಡು ನೀತಿಯನ್ನು ಅಮೆರಿಕೆಯ ಕಾಂಗ್ರೆಸ್ ಹಾಗೂ ಸೆನೆಟ್‍ಗಳು ಅನುಮೋದಿಸುತ್ತವೆಯೋ ಎಂಬುದನ್ನು ಕಾದುನೋಡಬೇಕಿದೆ.


ಆಸ್ಟ್ರೇಲಿಯಾ ಚುನಾವಣೆಯ ಅಚ್ಚರಿಯ ಫಲಿತಾಂಶ

ಆಸ್ಟ್ರೇಲಿಯಾದಲ್ಲಿ ಚುನಾವಣಾ ಸಮೀಕ್ಷೆಗಳನ್ನು ಹುಸಿಗೊಳಿಸಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಇದುವರೆಗೆ ಆಡಳಿತದಲ್ಲಿದ್ದ ಅಲ್ಪಮತದ ಸಮ್ಮಿಶ್ರ ಸರ್ಕಾರ ಮೇ 18ರಂದು ನಡೆದ ಚುನಾವಣೆಯಲ್ಲಿ ಒಟ್ಟು 151 ಕ್ಷೇತ್ರಗಳಲ್ಲಿ 76 ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಈ ಸಮ್ಮಿಶ್ರ ಸರ್ಕಾರದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ರವರು ಮುಂದಿನ ಮೂರು ವರ್ಷಗಳವರೆಗೆ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ.

ಆಸ್ಟ್ರೇಲಿಯಾ ದೇಶವು ಕಡ್ಡಾಯ ಮತದಾನವನ್ನು ಜಾರಿಗೊಳಿಸಿದ್ದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಶೇಕಡಾ 50ಕ್ಕಿಂತ ಹೆಚ್ಚು ಮತ ಪಡೆಯುವವರೆಗೆ ಸ್ಪರ್ಧಿಗಳ ನಡುವೆ ಮರುಮತದಾನ ನಡೆಸುವ ಪದ್ಧತಿ ಹೊಂದಿದೆ. 151 ಸೀಟುಗಳ ಕೆಳಮನೆ ಮತ್ತು 76 ಸೀಟುಗಳ ಮೇಲ್ಮನೆ ಹೊಂದಿದೆ. ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರವು ಆಸ್ಟ್ರೇಲಿಯಾದ ಲೇಬರ್ ಪಕ್ಷವನ್ನು ಮತ್ತೆ ಮಣಿಸಿ ಅಧಿಕಾರ ಗಿಟ್ಟಿಸಿದೆ. ಆದಾಗ್ಯೂ ಆಸ್ಟ್ರೇಲಿಯಾ ಗ್ರೀನ್ ಪಕ್ಷವು ಶೇಕಡಾ 10ಕ್ಕಿಂತ ಹೆಚ್ಚು ಮತಗಳಿಸಿ ತನ್ನ ಅಸ್ತಿತ್ವ ಸಾಬೀತುಪಡಿಸಿದೆ.

ಒಟ್ಟು 2.46 ಕೋಟಿ ಜನಸಂಖ್ಯೆಯಿರುವ ಆಸ್ಟ್ರೇಲಿಯಾ ಭಾರತದ ಭೌಗೋಳಿಕ ವಿಸ್ತೀರ್ಣದ ಎರಡರಷ್ಟಿದೆ. ಭಾರತದ ಜನಸಂಖ್ಯೆಯ ವೃದ್ಧಿಯ ಗಣನೆಯಲ್ಲಿ ಪ್ರತಿ ವರ್ಷ ಭಾರತವು ಆಸ್ಟ್ರೇಲಿಯಾ ದೇಶವೊಂದನ್ನು ಹುಟ್ಟುಹಾಕುತ್ತಿದೆ ಎಂದು ಗೇಲಿ ಮಾಡಲಾಗುತ್ತದೆ.


ಮತ್ತೆ ಪರದೇಶಿಯಾದ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್‍ ಅಸ್ಸಾಂಜ್

ವಿಕಿಲೀಕ್ಸ್‍ನ ಸಂಸ್ಥಾಪಕ ಆಸ್ಟ್ರೇಲಿಯಾ ಸಂಜಾತ ಪತ್ರಕರ್ತ ಹಾಗೂ ಕಂಪ್ಯೂಟರ್ ತಜ್ಞ ಜೂಲಿಯನ್‍ ಅಸ್ಸಾಂಜ್ ಮತ್ತೊಮ್ಮೆ ಪರದೇಶಿಯಾಗಿ ಲಂಡನ್ನಿನಲ್ಲಿ ಜೈಲುವಾಸ ಅನುಭವಿಸಬೇಕಾಗಿದೆ. 2010ರ ಡಿಸೆಂಬರ್‍ನಲ್ಲಿ ಲಂಡನ್ ನ್ಯಾಯಾಲಯದ ಜಾಮೀನು ಕರಾರನ್ನು ಮೀರಿ ಈಕ್ವೆಡಾರ್ ದೂತಾವಾಸದಲ್ಲಿ ಶರಣು ಪಡೆದಿದ್ದ ಅಸ್ಸಾಂಜ್‍ರವರನ್ನು ಮೇ 2019ರಲ್ಲಿ ಹೊರದಬ್ಬಲಾಗಿದೆ. ಜಾಮೀನು ಕರಾರು ಮೀರಿದ ಕಾರಣಕ್ಕೆ ನ್ಯಾಯಾಲಯ ಅಸ್ಸಾಂಜ್‍ಗೆ 50 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಸೆರೆವಾಸಕ್ಕೆ ದಬ್ಬಿದೆ.

ಅತಿಸುರಕ್ಷಿತ ಎಲೆಕ್ಟ್ರಾನಿಕ್ ದಾಖಲೆಗಳನ್ನು ಹಾಗೂ ಗೌಪ್ಯ ಮಾಹಿತಿಗಳನ್ನು ಬಹಿರಂಗಗೊಳಿಸುವ ಉದ್ದೇಶದ ‘ವಿಕಿಲೀಕ್ಸ್’ ಜಾಲತಾಣವನ್ನು ಜೂಲಿಯನ್‍ ಅಸ್ಸಾಂಜ್ 2006ರಲ್ಲಿಯೇ ತೆರೆದಿದ್ದನು. 2010ರಲ್ಲಿ ಅಮೆರಿಕದ ರಕ್ಷಣಾ ಗುಪ್ತ ವರದಿಗಳ ಹಾಗೂ ಆಫ್ಘಾನಿಸ್ತಾನ ಯುದ್ಧದ ಸಂರಕ್ಷಿತ ದಾಖಲೆಗಳನ್ನು ತನ್ನ ವಿಕಿಲೀಕ್ಸ್ ನಲ್ಲಿ ಬಿಡುಗಡೆ ಮಾಡಿದ್ದಕ್ಕೆ ಅಸ್ಸಾಂಜ್‍ ಅವರನ್ನು ಆಪಾದಿತನನ್ನಾಗಿ ಮಾಡಲಾಗಿತ್ತು. ಅಮೆರಿಕೆಯ ಕಾನೂನಿನಿಂದ ಪಾರಾಗಲು ಅಸ್ಸಾಂಜ್ ವಿದೇಶಗಳಲ್ಲಿ ತಲೆಮರೆಸಿಕೊಂಡು ಅಲೆದಾಡಬೇಕಾಗಿತ್ತು. ಈ ಮಧ್ಯೆ ಸ್ವೀಡನ್ನಿನ ತನ್ನ ಗೆಳತಿಯ ಮೇಲೆ ಲೈಂಗಿಕ ಬಲಾತ್ಕಾರದ ಆಪಾದನೆಗೊಳಗಾಗಿ ಅಸ್ಸಾಂಜ್‍ರವರನ್ನು ಲಂಡನ್ನಿನಲ್ಲಿ ಬಂಧನಕ್ಕೆ ಒಳಪಡಿಸಲಾಗಿತ್ತು. ಜಾಮೀನು ಕರಾರು ಮುರಿದು ಅಸ್ಸಾಂಜ್‍ ಈಕ್ವೆಡಾರ್ ದೂತಾವಾಸದಲ್ಲಿ ಸರಿಸುಮಾರು ಎಂಟೂವರೆ ವರ್ಷಗಳ ಕಾಲ ಇರಬೇಕಾಗಿ ಬಂದಿತ್ತು. ನಂತರದಲ್ಲಿ ಈಕ್ವೆಡಾರ್ ದೇಶದೊಂದಿಗೆ ಮನಸ್ತಾಪ ಹೊಂದಿದ ಕಾರಣಕ್ಕೆ ಅಸ್ಸಾಂಜ್‍ ಅವರನ್ನು ಲಂಡನ್ನಿನ ದೂತಾವಾಸದಿಂದಲೂ ಹೊರದೂಡಲಾಗಿತ್ತು. ಅಸ್ಸಾಂಜ್ ಮೇಲಿನ ಆರೋಪಗಳು ಗಂಭೀರದ್ದಾದರೂ ‘ವಿಕಿಲೀಕ್ಸ್’ ಜಾಲತಾಣವು ಅಮೆರಿಕ ಮತ್ತಿತರ ದೇಶಗಳ ಡೋಂಗಿತನದ ಹಾಗೂ ದ್ವಂದ್ವನೀತಿಯ ರಕ್ಷಣಾ ತಂತ್ರಗಳನ್ನು ಬಹಿರಂಗಪಡಿಸಿತ್ತು. ಹೇಳುವುದೇ ಒಂದು ಮಾಡುವುದೇ ಮತ್ತೊಂದು ಎನ್ನುವ ರೀತಿಯಲ್ಲಿ ಅಮೆರಿಕೆಯ ಸೇನೆಯ ಬರ್ಬರ ಕೃತ್ಯಗಳನ್ನು ಬಹಿರಂಗಗೊಳಿಸಿತ್ತು.


ಗರ್ಭಪಾತ ನಿಷೇಧಿಸಿದ ಅಮೆರಿಕದ ಬೈಬಲ್ ಬೆಲ್ಟ್ ಪ್ರಾಂತ್ಯಗಳು

ಅಮೆರಿಕೆಯ ರಿಪಬ್ಲಿಕನ್ ಆಡಳಿತದ ಪ್ರಾಂತ್ಯಗಳು ಮತ್ತೊಮ್ಮೆ ಐಚ್ಛಿಕ ಗರ್ಭಪಾತವನ್ನು ಅಪರಾಧವೆಂದು ಘೋಷಿಸಲು ಹೊರಟಿವೆ. ಮೊದಲಿಗೆ ಅಲಬಾಮಾ ಪ್ರಾಂತ್ಯ ಮತ್ತು ನಂತರದಲ್ಲಿ ಮಿಸ್ಸೋರಿ, ಅರ್ಕಾನ್ಸಸ್, ಜಾರ್ಜಿಯಾ, ಕೆಂಟಕಿ, ಮಿಸ್ಸಿಸ್ಸಿಪ್ಪಿ, ಓಹೈಯೋ ಮತ್ತು ಯುಟಾ ರಾಜ್ಯಗಳು ಈಗಾಗಲೇ ಗರ್ಭಪಾತದ ವಿರುದ್ಧ ಕಾನೂನು ರಚಿಸಿವೆ. ಬಹಳಷ್ಟು ರಾಜ್ಯಗಳಲ್ಲಿ ಈ ಕಾನೂನನ್ನು ಅಲ್ಲಿಯ ರಿಪಬ್ಲಿಕನ್ ಗವರ್ನರ್ ಗಳು ಅಂಗೀಕರಿಸಿ ಕಾನೂನು ಮಾನ್ಯತೆ ನೀಡಿದ್ದಾರೆ.

ಐಚ್ಛಿಕ ಗರ್ಭಪಾತದ ಈ ಚರ್ಚೆ ಅಮೆರಿಕದಲ್ಲಿ 20ನೇ ಶತಮಾನದ ಮೊದಲಿನಿಂದ ನಡೆಯುತ್ತಿದೆ. 1973ರ ಐತಿಹಾಸಿಕ ‘ರೋ ವರ್ಸಸ್ ವೇಡ್’ ನಿರ್ಣಯದಲ್ಲಿ ಅಮೆರಿಕದ ಸುಪ್ರೀಮ್ ನ್ಯಾಯಾಲಯ ಮಹಿಳೆಯ ಜೀವದ ಹಾಗೂ ಖಾಸಗಿತನದ ಮೂಲಭೂತ ಹಕ್ಕನ್ನು ಎತ್ತಿ ಹಿಡಿದಿತ್ತು. ತನಗೆ ಬೇಕಿಲ್ಲದ ಗರ್ಭವನ್ನು ತೆಗೆದುಕಾಕುವ ಮಹಿಳೆಯ ಹಕ್ಕನ್ನು ಹಲವಾರು ಸಂದರ್ಭಗಳಲ್ಲಿ ಎತ್ತಿ ಹಿಡಿದಿತ್ತು. ಅನಂತರದ ಹಲವಾರು ನಿರ್ಣಯಗಳಲ್ಲಿ ಈ ಸಾಂವಿಧಾನಿಕ ಹಕ್ಕನ್ನು ಮೊಟಕುಗೋಳಿಸಿ ಎಲ್ಲಿಯವರೆಗೆ ಭ್ರೂಣವು ಗರ್ಭದಿಂದ ಆಚೆ ಬದುಕಲಾಗದೋ ಅಲ್ಲಿಯವರೆಗೆ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿತ್ತು. ಆದರೆ ಈಗಿನ ಅಲಬಾಮಾರಾಜ್ಯದ ಕಾನೂನು ತಿದ್ದುಪಡಿಯು ಮೊದಲ ಎಂಟು ವಾರಗಳ ನಂತರದ ಯಾವುದೇ ಭ್ರೂಣಹತ್ಯೆಯನ್ನು ಅಮಾನ್ಯ ಮಾಡಿದೆ. ಇದಕ್ಕೆ ಬಲಾತ್ಕಾರದಿಂದ ಅಥವಾ ಅನೈಸರ್ಗಿಕ ಸಂಬಂಧದಿಂದ ಕಾರಣವಾದ ಗರ್ಭವೂ ಹೊರತಾಗಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಮಹಿಳೆಯೊಬ್ಬಳಿಗೆ ತನ್ನಗರ್ಭ ನಿಂತ ಬಗ್ಗೆ ಅರಿವಾಗುವ ಹೊತ್ತಿಗೆ ನಾಲ್ಕೈದು ವಾರಗಳೇ ಸಂದಿರುತ್ತವೆ. ನಂತರದ ಎರಡು-ಮೂರು ವಾರಗಳಲ್ಲಿಯೇ ಆ ಮಹಿಳೆ ಗರ್ಭಪಾತ ಮಾಡಿಸಿಕೊಂಡರೆ ಸಾಕು, ಇಲ್ಲದಿದ್ದರೆ ಕಾನೂನಿನ ವಿಕೃತ ಕಣ್ಣಿಗೆ ಗುರಿಯಾಗಬೇಕಾಗುತ್ತದೆ.

ಅಲಬಾಮಾ ಮತ್ತಿತರ ರಾಜ್ಯಗಳಲ್ಲಿ ಪಾರಿತವಾಗಿರುವ ಈ ಗರ್ಭಪಾತ ವಿರೋಧಿ ಕಾನೂನು ಉಲ್ಲಂಘನೆಯ ಕಾರಣಕ್ಕೆ ಮಹಿಳೆಗೆ ಯಾವ ಶಿಕ್ಷೆಯೆಂದು ಪ್ರಕಟಪಡಿಸಿಲ್ಲ. ಆದರೆ ಗರ್ಭಪಾತಕ್ಕೆ ನೆರವಾದ ವೈದ್ಯರಿಗೆ 99 ವರ್ಷಗಳ ಜೈಲುವಾಸದ ಶಿಕ್ಷೆಯ ಕಾನೂನು ರಚನೆಯಾಗಿದೆ. ಈ ಕಾನೂನನ್ನು ಡೆಮಾಕ್ರೆಟಿಕ್ ಪಕ್ಷದ ಸಂಸದೀಯರು ತೀಕ್ಷ್ಣವಾಗಿ ವಿರೋಧಿಸುತ್ತಿದ್ದಾರೆ. ಆದರೆ ರಾಜ್ಯಗಳಲ್ಲಿ ಮಾನ್ಯವಾದ ಈ ಕಾನೂನು ವಾಷಿಂಗ್ಟನ್ನಿನ ಸಂಸತ್ತಿಗೆ ಬಾರದು. ಬದಲಿಗೆ, ಅಮೆರಿಕೆಯ ಸುಪ್ರೀಮ್‍ ಕೋರ್ಟ್ ಮುಂದೆ ಈ ಹೊಸ ಕಾನೂನು ಮತ್ತೆ ಪರಿಶೀಲನೆಗೆ ಒಳಪಡಲಿದೆ. ಆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ತನ್ನ 1973ರ ನಿರ್ಣಯವನ್ನು ಮತ್ತೆ ಎತ್ತಿ ಹಿಡಿಯುತ್ತದೆಯೋ ಅಥವಾ ಮತ್ತೆ ಮಧ್ಯ ಯುಗದ ಕಾನೂನನ್ನು ಮಾನ್ಯತೆ ಮಾಡುವುದೋ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published.