ವಿಶ್ವ ವಿದ್ಯಮಾನ

ಚೀನಾದ ಟೆಕ್ ಕಂಪನಿಗಳಿಗೆ ತಡೆಗೋಡೆ ನಿರ್ಮಿಸಿದ ಅಮೆರಿಕಾ

ಅಮೆರಿಕದ ಒಳಗೆ ನುಸುಳಿ ಬರುವವರನ್ನು ತಡೆಯಲು ಗೋಡೆ ನಿರ್ಮಿಸುತ್ತೇನೆಂದು ಅಧಿಕಾರಕ್ಕೆ ಬಂದ ಡಾನಲ್ಡ್ ಟ್ರಂಪ್ ಇದೀಗ ಅಮೆರಿಕದಿಂದ ನುಸುಳಿ ಹೊರಗೆ ಹೋಗುತ್ತಿರುವ ತಂತ್ರಜ್ಞಾನವನ್ನು ತಡೆಯಲು ಕಾನೂನಿನ ಗೋಡೆ ನಿರ್ಮಿಸುತ್ತಿರುವಂತೆ ಕಾಣಿಸುತ್ತಿದೆ. ಚೀನಾದ ಕಂಪನಿ ‘ಹ್ವಾವೆ’ಯ ಮೇಲೆ ಹಲವಾರು ನಿಬಂಧನೆಗಳನ್ನು ಹಾಕುವುದರ ಜೊತೆಗೆ ಈ ಕಂಪನಿಯ ನಿರ್ದೇಶಕರ ಮೇಲೆ ತಂತ್ರಜ್ಞಾನ ಕಳ್ಳತನದ ಆರೋಪ ಹೊರಿಸಲಾಗಿದೆ. ‘ಹ್ವಾವೆ’ ಕಂಪನಿಯು ಯೂರೋಪಿನ ಮತ್ತು ಅಮೆರಿಕ ಮಿತ್ರರಾಷ್ಟ್ರಗಳ ಜೊತೆಯಲ್ಲಿ ಯಾವುದೇ ವಾಣಿಜ್ಯ-ತಾಂತ್ರಿಕ ಸಂಬಂಧ ಬೆಳೆಸಿಕೊಳ್ಳದಂತೆ ನಿರ್ಬಂಧ ಹೇರಲಾಗಿದೆ.

ಇದರ ಮುಂದುವರೆದ ಭಾಗವಾಗಿ ಅಮೆರಿಕವು ಚೀನಾದ ‘ಸುಗಾನ್’ ಹಾಗೂ ‘ವೂಕ್ಸಿ ಜಿಯಾಂಗ್ನಾನ್’ ಕಂಪನಿಗಳನ್ನು ತನ್ನ ಕಪ್ಪುಪಟ್ಟಿಗೆ ಸೇರಿಸಿದೆ. ಈ ಎರಡೂ ಕಂಪನಿಗಳು ಅಮೆರಿಕದ ಕಂಪನಿಗಳಿಗೆ ಸರಿಸಮಾನವಾಗಿ ಮುಂದಿನ ಪೀಳಿಗೆಯ ಕಂಪ್ಯೂಟರ್ ತಂತ್ರಜ್ಞಾನದ ಪ್ರೊಸೆಸರ್ ಚಿಪ್ ತಯಾರಿಕೆಯಲ್ಲಿ ತೊಡಗಿವೆ. ಅಮೆರಿಕದ ಇಂಟೆಲ್, ಎಎಮ್‍ಡಿ ಹಾಗೂ ಎನ್‍ವಿಡಿಯೊ ಕಂಪನಿಗಳ ಸಹಯೋಗದೊಂದಿಗೆ ಅತ್ಯಾಧುನಿಕ ಮತ್ತು ಪರಮಶಕ್ತಿಯ ಕಂಪ್ಯೂಟರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿವೆ. ಮೇಲಾಗಿ ಈ ಪರಮಶಕ್ತಿಯ ತಂತ್ರಜ್ಞಾನ ಅಣುಬಾಂಬ್ ತಂತ್ರಜ್ಞಾನ, ಕ್ಷಿಪಣಿ ತಂತ್ರಜ್ಞಾನ ಮತ್ತಿತರ ಉಪಯೋಗಗಳಿಗೆ ಬಳಕೆಯಾಗುವ ಸಾಧ್ಯತೆಯಿದೆ.

ಚೀನಾದಿಂದ ಆಮದಾಗುವ ಪದಾರ್ಥಗಳ ಮೇಲೆ ಶೇಕಡಾ 25 ಕಸ್ಟಮ್ಸ್ ಸುಂಕದ ನಂತರದಲ್ಲಿ ಚೀನಾದ ಟೆಕ್ ಕಂಪನಿಗಳಿಗೆ ಹಾಕಿರುವ ಈ ನಿರ್ಬಂಧ ಉಭಯದೇಶಗಳ ವಾಣಿಜ್ಯ-ವ್ಯವಹಾರವನ್ನು ಮತ್ತಷ್ಟು ಸಂಕೀರ್ಣಗೊಳಿಸಲಿವೆ. ಅಮೆರಿಕದ ಈ ಏಕಪಕ್ಷೀಯ ಕ್ರಮಗಳನ್ನು ಉಗುಳು ನುಂಗಿಕೊಂಡು ಸಹಿಸಿಕೊಂಡಿರುವ ಚೀನಾ ಮುಂದೆ ಹೇಗೆ ಪ್ರತೀಕಾರ ಕ್ರಮ ಕೈಗೊಳ್ಳುತ್ತದೆ ಎಂದು ನೋಡಬೇಕಿದೆ. ಈ ಮಧ್ಯೆ ಅಮೆರಿಕದಿಂದ ಒತ್ತಡಕ್ಕೆ ಸಿಲುಕಿರುವ ಭಾರತ ಕೂಡಾ ಚೀನಾ ಕಂಪನಿಗಳಿಗೆ 5ಜಿ ತಂತ್ರಜ್ಞಾನದ ಅಳವಡಿಕೆಯಲ್ಲಿನ ತಾಂತ್ರಿಕ ಗುತ್ತಿಗೆಗಳಿಂದ ಹೊರಗಿಡುವ ಸಾಧ್ಯತೆಯಿದೆ.

ಅಪರಾಧ ಒಪ್ಪಿ ಶಿಕ್ಷೆಗೆ ಗುರಿಯಾದ ಇಸ್ರೇಲ್ ಪ್ರಧಾನಿಯ ಪತ್ನಿ

ಇಸ್ರೇಲ್ ದೇಶದ ಈಗಿನ ಪ್ರಧಾನಿ ಬೆಂಜಮಿನ್ ನೆತನ್ಯಾಹುರವರ ಪತ್ನಿ ಸಾರಾ ನೆತನ್ಯಾಹುರವರು ತಾವು ಮಾಡಿದ ಅಪರಾಧ ಒಪ್ಪಿಕೊಂಡು ಶಿಕ್ಷೆಯ ರೂಪದಲ್ಲಿ ದಂಡ ತೆರಲಿದ್ದಾರೆ. ಇಸ್ರೇಲ್ ನ್ಯಾಯಾಲಯವೊಂದರ ಮುಂದೆ ಕಡಿಮೆ ಶಿಕ್ಷೆಯ ಕ್ಷಮಾದಾನ ಪಡೆದು $2,800 ರ ದಂಡ ಹಾಗೂ $12,600 ಗಳ ಹಾನಿ ಭರಿಸಲಿದ್ದಾರೆ. ಪ್ರಧಾನಿ ನಿವಾಸದ ತಮ್ಮ ಮನೆಯಲ್ಲಿ ಅಡುಗೆಯವನ ಸಹಾಯವಿದ್ದೂ ಕೂಡಾ ಹೊರಗಿನಿಂದ ಊಟ-ತಂಡಿ ತರಿಸಿ ಕೊಂಡಿರುವ ಆರೋಪದಲ್ಲಿ ಸಾರಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರ ಮೇಲಿದ್ದ ಆರೋಪದಂತೆ ಪ್ರಧಾನಿಯ ಪತ್ನಿಯು ತಮ್ಮ ಮನೆಯಲ್ಲಿ ಅಡುಗೆಯವನ ಸಹಾಯವಿಲ್ಲವೆಂದು ಹೇಳಿಕೆ ಕೊಟ್ಟು ಜೆರುಸಲೆಮ್‍ನ ಪ್ರತಿಷ್ಠಿತ ರೆಸ್ಟೊರೆಂಟುಗಳಿಂದ ನೂರಾರು ಊಟಗಳನ್ನು ತರಿಸಿಕೊಂಡಿರುವ ಅಪರಾಧಕ್ಕೆ ಗುರಿಯಾಗಿದ್ದಾರೆ. ಸರ್ಕಾರಿ ಸವಲತ್ತಿನ ದುರುಪಯೋಗ ಹಾಗೂ ಭ್ರಷ್ಟ ಆಚಾರದ ಆರೋಪಕ್ಕೆ ಅವರು ಗುರಿಯಗಿದ್ದರು. ಸರ್ಕಾರಿ ಬಂಗಲೆ ಹಾಗೂ ನೂರಾರು ನೌಕರರನ್ನು ಪಡೆದೂ ಕೂಡಾ ವರ್ಷಗಟ್ಟಲೆ ಐಷಾರಾಮಿ ಪಂಚತಾರಾ ಹೊಟೆಲಿನಲ್ಲಿಯೇ ಇರುವ ನಮ್ಮ ಮುಖ್ಯಮಂತ್ರಿಗೆ ಯಾವ ಶಿಕ್ಷೆಯಾಗಬೇಕೆಂದು ನೀವೇ ಹೇಳಬೇಕು.

ಜರ್ಮನಿಯಲ್ಲಿ ‘ತೋಳ ಬಂತು ತೋಳ’

150 ವರ್ಷಗಳ ನಂತರ ಜರ್ಮನಿಯಲ್ಲಿ ಮತ್ತೆ ಕಾಣಿಸಿಕೊಂಡಿರುವ ತೋಳಗಳು ಪರಿಸರ ಸಂತುಲನದ ಜೊತೆಗೆ ಬಿರುಸು ರಾಜಕೀಯದ ಚರ್ಚೆಗೆ ಕೂಡಾ ಗ್ರಾಸವಾಗಿವೆ. ಜರ್ಮನಿಯ ‘ಗ್ರೀನ್’ ಪಕ್ಷವು ತೋಳಗಳ ವಾಪಸಿಯನ್ನು ಸ್ವಾಗತಿಸಿದರೆ ಬಲಪಂಥೀಯ ‘ಜರ್ಮನಿ ಪರ್ಯಾಯ ಪಕ್ಷ’ ಈ ‘ವಿದೇಶಿ’ ತೋಳಗಳ ಸಂಖ್ಯೆಯನ್ನು ನಿಯಂತ್ರಿಸಲು ಮುಂದಾಗಿದೆ.

ಜರ್ಮನಿಯ ಜಾನಪದೀಯ ಕಥೆಗಳಿಗೆ ವಸ್ತುವಾಗಿದ್ದ ಈ ತೊಳಗಳು ಕಳೆದ ಒಂದೂವರೆ ಶತಮಾನಗಳಿಂದ ಕಣ್ಮರೆಯಾಗಿದ್ದವು. ನಿರಂತರ ಬೇಟೆ ಹಾಗೂ ಶಿಕಾರಿಗೆ ಬಲಿಯಾಗಿದ್ದವು. ಇದೀಗ ನೆರೆಯ ಪೋಲ್ಯಾಂಡ್ ದೇಶದಿಂದ ವಲಸೆ ಬಂದಂತಿರುವ ಈ ಬೂದುಬಣ್ಣದ ತೊಳಗಳು ನಿಜಕ್ಕೂ ತೋಳಗಳೇ ಅಥವಾ ನಾಯಿ-ತೋಳದ ಮಿಶ್ರಜಾತಿಯೇ ಎಂಬ ಸಂಶಯವೂ ಇದೆ. ಜರ್ಮನಿಯಲ್ಲಿ ಬಹುಶಃ 600-700 ರಷ್ಟಿರುವ ಈ ತೋಳಗಳನ್ನು 2000ನೆಯ ಇಸವಿಯಿಂದ ಇತ್ತೀಚೆಗೆ ಕಾಣಲಾಗುತ್ತಿದೆಯಾದರೂ ಕಳೆದೆರೆಡು ದಶಕಗಳಲ್ಲಿ 250ಕ್ಕೂ ಹೆಚ್ಚು ತೋಳಗಳನ್ನು ಬೇಟೆಯಾಡಿ ಕೊಲ್ಲಲಾಗಿದೆ.

ಕಳೆದ ಅಕ್ಟೊಬರ್‍ನಲ್ಲಿ ಸುಮಾರು ನಲವತ್ತು ಕುರಿಗಳ ಮಾರಣಹೋಮಕ್ಕೆ ಕಾರಣವಾಗಿದ್ದ ಈ ತೋಳಗಳು ಇತ್ತೀಚೆಗೆ ಮನುಷ್ಯನೊಬ್ಬನಿಗೆ ಕಚ್ಚಿದ ವರದಿಯಿದೆ. ದೃಢೀಕರಣವಾಗದ ಈ ಘಟನೆ ಮಾನವ-ತೋಳದ ನಡುವಿನ ಶತಮಾನಗಳ ಹಿಂಸಾತ್ಮಕ ಕಥೆಗಳಿಗೆ ಮರುಜನ್ಮ ನೀಡಿದೆ.

ಹಾಂಗ್‍ಕಾಂಗ್ ಪ್ರತಿಭಟನೆಗೆ ಮರುಜೀವ

ಚೀನಾ ಬೆಂಬಲಿತ ಹಾಂಗ್‍ಕಾಂಗ್ ಆಡಳಿತವು ಪ್ರತಿ ಐದಾರು ವರ್ಷಗಳಿಗೊಮ್ಮೆ ಯಾವುದಾದರೂ ಪ್ರತಿಭಟನೆಗೆ ಕಾರಣವಾಗುವ ಕಲೆಯನ್ನು ಕರಗತ ಮಾಡಿಕೊಂಡಿರುವಂತಿದೆ. 2014 ರಲ್ಲಿ ತನ್ನ ಕಟ್ಟುನಿಟ್ಟಿನ ಭದ್ರತಾ ಕಾನೂನಿಗೆ ವಿರೋಧ ಎದುರಿಸಿದ್ದ ಹಾಂಗ್‍ಕಾಂಗ್ ಆಡಳಿತ ಈಗ ತನ್ನ ‘ಗಡೀಪಾರು’ ಶಿಕ್ಷೆಗೆ ವಿರೋಧ ಎದುರಿಸುತ್ತಿದೆ.

‘ಒಂದು ದೇಶ ಎರಡು ಕಾನೂನು’ ನಿಯಮದಂತೆ ಹಾಂಗ್‍ಕಾಂಗ್ ಚೀನಾದ ಅವಿಭಾಜ್ಯ ಅಂಗವೇ ಆಗಿದ್ದರೂ ತನ್ನದೇ ಆದ ಮೂಲಭೂತ ಕಾನೂನು ಹಾಗೂ ನ್ಯಾಯಪದ್ದತಿ ಹೊಂದಿದೆ. ಇದರಂತೆ ಹಾಂಗ್‍ಕಾಂಗಿನಲ್ಲಿ ಆರೋಪಕ್ಕೆ ಅಥವಾ ಶಿಕ್ಷೆಗೆ ಗುರಿಯಾದವರನ್ನು ಹಾಂಗ್‍ಕಾಂಗಿನಲ್ಲಿಯೇ ದಂಡನೆಗೆ ಒಳಪಡಿಸಬೇಕಿತ್ತು. ಆದರೆ ಚೀನಾ ನಿಯುಕ್ತ ಆಡಳಿತಾಧಿಕಾರಿ ಕ್ಯಾರಿ ಲಾಮ್ ಅವರು ಆಪಾದಿತರನ್ನು ಚೀನಾಕ್ಕೆ ರವಾನಿಸುವ ತಿದ್ದುಪಡಿಯನ್ನು ತಂದರು. ಇದರಂತೆ ಹಾಂಗ್‍ಕಾಂಗಿನಲ್ಲಿ ಭ್ರಷ್ಟಾಚಾರ ಮತ್ತಿತರ ಯಾವುದೇ ಸರಿ/ಸುಳ್ಳು ಆರೋಪಕ್ಕೆ ಒಳಗಾದವರನ್ನು ಚೀನಾದ ಉಳಿದ ಪ್ರಾಂತ್ಯಗಳಿಗೆ ಕಳುಹಿಸಬಹುದಾಗಿತ್ತು. ಈ ತಿದ್ದುಪಡಿಯ ದುರುಪಯೋಗವನ್ನು ಅರಿತ ಹಾಂಗ್‍ಕಾಂಗಿನ ಜನತೆ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಹತ್ತು ಲಕ್ಷಕ್ಕೂ ಮಿಗಿಲಾಗಿ ಪಾಲ್ಗೊಂಡು ಪ್ರತಿ ಏಳು ಹಾಂಗ್‍ಕಾಂಗ್ ನಾಗರಿಕರಲ್ಲಿ ಒಬ್ಬ ಪ್ರತಿಭಟನೆಯಲ್ಲಿ ಹಾಜರಾದಂತೆ ಆಗಿದೆ.

ಆಪಾದಿತರನ್ನು ಚೀನಾಕ್ಕೆ ರವಾನಿಸುವ ಈ ತಿದ್ದುಪಡಿಯನ್ನು ಹಿಂದೆಗೆಯುವುದರ ಜೊತೆಗೆ ಆಡಳಿತಾಧಿಕಾರಿ ಕ್ಯಾರಿ ಲಾಮ್‍ರವರ ರಾಜೀನಾಮೆಗೆ ಪ್ರತಿಭಟನೆಕಾರರು ಒತ್ತಾಯಿಸಿದ್ದರು. ಈ ಅಭೂತಪೂರ್ವ ಪ್ರತಿಭಟನೆಗೆ ಮಣಿದು ಕ್ಯಾರಿ ಲಾಮ್ ತಿದ್ದುಪಡಿಯನ್ನು ಅನಿರ್ದಿಷ್ಟ ಕಾಲಾವಧಿಗೆ ಮುಂದೂಡಿದ್ದರು. ಆದರೂ ತಿದ್ದುಪಡಿಯ ಸಂಪೂರ್ಣ ಹಿಂದೆಗೆತಕ್ಕೆ ಪ್ರತಿಭಟನೆಕಾರರು ತಮ್ಮ ಹೋರಾಟ ಮುಂದುವರೆಸಿದ್ದಾರೆ. ಪ್ರತಿಭಟನೆಗೆ ಹೆದರಿ ಮಂಡಿಯೂರಿದ ಹಾಂಗ್‍ಕಾಂಗ್ ಸರ್ಕಾರದ ವರ್ತನೆ ಪ್ರಸ್ತುತ ಚೀನಾ ಸರ್ಕಾರದ ತಾತ್ಕಾಲಿಕ ಸೋಲೆಂದು ಬಣ್ಣಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಚೀನಾ ಕಮ್ಯುನಿಸ್ಟ್ ಸರ್ಕಾರದ ಬೆಂಬಲಿತ ಹಾಂಗ್‍ಕಾಂಗ್ ಆಡಳಿತ ತನ್ನ ದಮನಕಾರಿ ನೀತಿಯನ್ನು ಮುಂದುವರೆಸುವುದಿಲ್ಲ ಎಂದು ಹೇಳಲಾಗದು. 

Leave a Reply

Your email address will not be published.