ವಿಶ್ವ ವಿದ್ಯಮಾನ

ಎಫ್‍ಎಟಿಎಫ್‍ನಿಂದ ಕಡೆಯ ಎಚ್ಚರಿಕೆ ಪಡೆದ ಪಾಕಿಸ್ತಾನ

ಭಯೋತ್ಪಾದಕ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ತಡೆಗಟ್ಟಲು ಕಳೆದ ಮೂವತ್ತು ವರ್ಷಗಳಿಂದ ಭಾರತ ಹೆಣಗುತ್ತಲೇ ಬಂದಿದೆ. ಈ ಯಾವುದೇ ಪ್ರಯತ್ನಗಳಿಗೆ ಸಿಗದ ಸಫಲತೆ ಈಗ ಎಫ್‍ಎಟಿಎಫ್‍ನಿಂದ ಆಗುತ್ತಿದೆ. ಭಯೋತ್ಪಾದಕ ಮೂಲಸೌಲಭ್ಯಕ್ಕೆ ಕೊಡಲಿಪೆಟ್ಟು ನೀಡುವ ನಿಟ್ಟನಲ್ಲಿ ಎಫ್‍ಎಟಿಎಫ್ ಪಾಕಿಸ್ತಾನವನ್ನು ‘ನಸುಗಪ್ಪು’ (ಗ್ರೇ) ಪಟ್ಟಿಯಲ್ಲಿ ಮುಂದುವರೆಸಿದೆ. ಮುಂದಿನ 2020ರ ಫೆಬ್ರವರಿಯೊಳಗೆ ತಾನು ಬಯಸಿರುವ ನಿಬಂಧನೆಗಳನ್ನು ಪಾಲಿಸದೇ ಹೋದರೆ ‘ಕಪ್ಪು ಪಟ್ಟಿ’ಗೆ ಸೇರಿಸುವುದಾಗಿ ಬೆದರಿಕೆ ಒಡ್ಡಿದೆ.

ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‍ಎಟಿಎಫ್) ಶುರುವಾಗಿದ್ದು 1989ರ ಪ್ಯಾರಿಸ್‍ನಲ್ಲಿನ ಜಿ7 ಶೃಂಗಸಭೆಯಲ್ಲಿ. ಅಂತರರಾಷ್ಟ್ರೀಯ ಭಯೋತ್ಪಾದಕರಿಗೆ ನೆಲೆ ಹಾಗೂ ನೆರವು ನೀಡುತ್ತಿದ್ದ ರಾಷ್ಟ್ರಗಳನ್ನು ಹದ್ದುಬಸ್ತಿಗೆ ತರಬೇಕೆಂದು ಈ ಎಫ್‍ಎಟಿಎಫ್ ಶುರುವಾಗಿತ್ತು. ಇದರಂತೆ 27 ಮಾನದಂಡಗಳನ್ನು ವಿಧಿಸಿ ಭಯೋತ್ಪಾದಕರಿಗೆ ನೆರಳು ಹಾಗೂ ಯಾವುದೇ ಧನಸಹಾಯ ನೀಡದರೆ ಅಂತಹಾ ರಾಷ್ಟ್ರಗಳನ್ನು ಎಫ್‍ಎಟಿಎಫ್ ತನ್ನ ‘ಗ್ರೇ’ ಹಾಗೂ ‘ಬ್ಲಾಕ್’ ಪಟ್ಟಿಗಳಲ್ಲಿ ಸೇರಿಸಿ ನಿರ್ಬಂಧಗಳನ್ನು ವಿಧಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪರಾಧಿ ಹಣ ವರ್ಗಾವಣೆ, ಅಪರಾಧಿಗಳಿಗೆ ಶರಣು ಹಾಗೂ ಇದಕ್ಕೆ ಪೂರಕ ಕಾನೂನು ಮತ್ತು ರಕ್ಷಣೆಯ ಸಾದ್ಯತೆಯನ್ನು ಎಫ್‍ಎಟಿಎಫ್ ನಿಗ್ರಹ ಮಾಡುತ್ತಿದೆ.

ಒಮ್ಮೆ ಎಫ್‍ಎಟಿಎಫ್‍ನ ಕಪ್ಪು ಪಟ್ಟಿಯಲ್ಲಿ ಸೇರ್ಪಡೆಯಾದರೆ ಆ ರಾಷ್ಟ್ರಗಳು ಯಾವುದೇ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ-ವ್ಯವಹಾರ ಪಡೆಯುವಂತಿಲ್ಲ. ಈ ಕಪ್ಪುಪಟ್ಟಿಯ ರಾಷ್ಟ್ರಗಳ ಹಣಕಾಸಿನ ವಹಿವಾಟಿನ ಮೇಲೆ ನಿರ್ಬಂಧಗಳನ್ನು ಸಹಾ ವಿಧಿಸಲಾಗುತ್ತದೆ. ಈಗಾಗಲೇ ಇರಾನ್ ಇಂತಹಾ ಕಪ್ಪುಪಟ್ಟಿಯಲ್ಲಿ ಇದೆ. ಈಗ ಪಾಕಿಸ್ತಾನಕ್ಕೆ ಕೂಡಾ ಈ ಕಪ್ಪು ಪಟ್ಟಿಯಲ್ಲಿ ಸೇರುವ ಹದರಿಕೆಯಿದೆ. ಲಷ್ಕರ್-ಎ-ತಯ್ಯಬಾ ಹಾಗೂ ಜೈಷ್-ಎ-ಮೊಹಮ್ಮದ್ ಸಂಘಟನೆಗಳಿಗೆ ಸೇರುತ್ತಿರುವ ಹಣದ ಬಗ್ಗೆ ತುರ್ತು ನಿಗಾ ವಹಿಸದಿದ್ದರೆ ಪಾಕ್ ಅಧಿಕೃತವಾಗಿ ಕಪ್ಪುಪಟ್ಟಿಗೆ ಸೇರಲಿದೆ. ಹಾಗೇನಾದರೂ ಆದರೆ ಈಗಾಗಲೇ ಅತೀವ ಹಣಕಾಸಿನ ಮುಗ್ಗಟ್ಟು ಅನುಭವಿಸುತ್ತಿರುವ ಪಾಕಿಸ್ತಾನದ ಆರ್ಥಿಕತೆ ಪಾತಾಳಕ್ಕೆ ಕುಸಿಯಬಹುದು. ಈ ಹೆದರಿಕೆಯಿಂದಲಾದರೂ ಪಾಕಿಸ್ತಾನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ನಿಗ್ರಹಿಸಲೇಬೇಕಾದ ಅನಿವಾರ್ಯತೆಗೆ ಒದಗಿದೆ.

ಹೊಸದಾಗಿ ಸಿಕ್ಕ ಈಜಿಪ್ಟಿನ ಹಳೆಯ ‘ಮಮ್ಮಿ’ಗಳು

ಕ್ರಿಸ್ತಪೂರ್ವ 945-715 ಇಸವಿಯಲ್ಲಿನ ಈಜಿಪ್ಟಿನ 22ನೇ ರಾಜವಂಶದ ಮೂವತ್ತು ಮಮ್ಮಿಗಳು ದೊರೆತಿವೆಯಂತೆ. ಮರದ ಪೆಟ್ಟಿಗೆಯಲ್ಲಿ ಬಟ್ಟೆಯಿಂದ ಸಂಪೂರ್ಣ ಸುತ್ತುವರೆದ ಈ ಮೃತದೇಹಗಳು ದಕ್ಷಿಣ ಈಜಿಪ್ಟಿನ ‘ಲಕ್ಸರ್’ ನಗರದ ಬಳಿ ಸಿಕ್ಕಿವೆ. 23 ಗಂಡಸರ, 5 ಹೆಂಗಸರ ಮತ್ತು ಎರಡು ಮಕ್ಕಳ ಶವಗಳು ಅತ್ಯಂತ ರಕ್ಷಿತ ಸ್ಥಿತಿಯಲ್ಲಿಯೇ ಸಿಕ್ಕಿವೆ. ಈಜಿಪ್ಟಿನ ದೇಗುಲದ ಪೂಜಾರಿಯೊಬ್ಬ ಈ ಮೃತದೇಹಗಳು ಕಳುವಾಗಬಹುದೆಂದು ಬಚ್ಚಿಟ್ಟಿದ್ದ ಎಂದು ಹೇಳಲಾಗುತ್ತಿದೆ. ಇದೇ ಜಾಗದ ಸುತ್ತಮುತ್ತ ಇನ್ನೂ ಹುಡುಕಾಟ ನಡೆಯುತ್ತಿದ್ದು ಕ್ರಿಸ್ತಪೂರ್ವ ಶತಮಾನಗಳಲ್ಲಿನ ಹಲವು ಪಳೆಯುಳಿಕೆಗಳು ಸಿಗುವ ಸಾಧ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ಸಿಕ್ಕ ಅತಿದೊಡ್ಡ ಸಂಖ್ಯೆಯ ಈಜಿಪ್ಟಿನ ಪಳೆಯುಳಿಕೆಗಳು ಇವೆಂದು ಹೇಳಲಾಗುತ್ತಿದೆ.

ಕೈರೋ ಬಳಿಯ ಗೀಜಾ ಪಿರಮಿಡ್ ಬಳಿಯಲ್ಲಿ ಈಜಿಪ್ಟ್ ಸರ್ಕಾರ ಆಧುನಿಕ ಸಂಗ್ರಹಾಲಯವೊಂದನ್ನು ಕಟ್ಟುತ್ತಿದೆ. ಮುಂದಿನ ವರ್ಷ ಮುಗಿಯಲಿರುವ ಈ ಸಂಗ್ರಹಾಲಯದಲ್ಲಿ ಈ ಮೂವತ್ತು ಮಮ್ಮಿಗಳನ್ನು ಸಂರಕ್ಷಿಸಲಾಗುವುದು ಎಂದು ಹೇಳಲಾಗುತ್ತಿದೆ.

ಪಳೆಯುಳಿಕೆಗಳು ಉಳಿಬೇಕೆಂದರೆ ಅಲ್ಲಿನ ಪರಿಸರ ಒಣ ಮತ್ತು ತಂಪಾಗಿರಬೇಕಂತೆ. ಈ ಮಾನದಂಡದಲ್ಲಿ ಈಜಿಪ್ಟ್ ಮತ್ತು ಇಸ್ರೇಲ್ ಅತ್ಯಂತ ಸೂಕ್ತ ಪ್ರದೇಶವಾದ ಕಾರಣ ಈಗಲೂ ಕೂಡಾ ಹಲವಾರು ಪಳೆಯುಳಿಕೆಗಳು ಸಿಗುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತವು ಉಷ್ಣ ಹಾಗೂ ಮಳೆಯ ಪ್ರದೇಶವಾದ ಕಾರಣ ನಮ್ಮಲ್ಲಿ ಪಳೆಯುಳಿಕೆಗಳು ಉಳಿದು ಬರುವ ಸಾಧ್ಯತೆ ಕಡಿಮೆ. ಇದನ್ನು ಅರಿತೆಯೇ ನಮ್ಮ ಪೂರ್ವಜರು ಕಲ್ಲಿನ ಕಟ್ಟಡಗಳ ಪರಂಪರೆಯನ್ನೇ ಸೃಷ್ಟಿಸಿರಬೇಕು. ಅಥವಾ ಕೇವಲ ಕಲ್ಲಿನ ಕಟ್ಟಡಗಳು ಉಳಿದು ಬೇರೆಲ್ಲಾ ಪ್ರಾಚೀನ ವಸ್ತುಗಳು ಅವಶೇಷವಾಗಿರಬೇಕು. ಹಾಗೆಯೂ ಸದ್ಯಕ್ಕೆ ನಮ್ಮಲ್ಲಿ ಇರುವ ಅವಶೇಷಗಳನ್ನು ಉಳಿಸಿಕೊಂಡರೆ ಸಾಕಾಗಿದೆ.

ಕೆನಡಾ ಚುನಾವಣೆಯ ಫಲಿತಾಂಶ

ಎಲ್ಲರ ಅಪೇಕ್ಷೆಯ ವಿರುದ್ಧ ಕೆನಡಾದ ಚುನಾವಣೆಗಳಲ್ಲಿ ಜಸ್ಟಿನ್ ಟ್ರೂಡೋರವರ ಲಿಬರಲ್ ಪಕ್ಷಕ್ಕೆ ಹಿನ್ನಡೆಯಾಗಿ ಅವರೀಗ ಅಲ್ಪಮತದ ಸರ್ಕಾರ ನಡೆಸಬೇಕಾಗಿ ಬಂದಿದೆ. ಈ ಚುನಾವಣೆಯ ಫಲಿತಾಂಶಗಳು ಇಂತಿವೆ:

ಪಕ್ಷ  ನಾಯಕತ್ವ  ಸ್ಥಾನ
ಲಿಬರಲ್  ಜಸ್ಟಿನ್ ಟ್ರೂಡೋ 157
ಕನ್ಸರ್ವೇಟಿವ್ ಆಂಡ್ರೂ ಶೀಯರ್  121
ನ್ಯೂ ಡೆಮಾಕ್ರೆಟಿಕ್  ಜಗಮೀತ್ ಸಿಂಗ್ 24
ಗ್ರೀನ್  ಎಲಿಜಬೆತ್ ಮೇ  3
ಬ್ಲಾಕ್ ಕ್ಯುಬೆಕೋಸ್ ವೆಸ್ ಫ್ರಾನ್ಸ್‍ವಾಂ ಬ್ಲಾಂಚೆಟ್  32
ಒಟ್ಟು    ಒಬ್ಬ ಸ್ವತಂತ್ರ್ಯ ಸೇರಿ 338

                

ಹೀಗೆ ಜಸ್ಟಿನ್ ಟ್ರುಡೋ ಕೆನಡಾದ ಹೌಸ್ ಆಫ್ ಕಾಮನ್ಸ್‍ನಲ್ಲಿ ತಮ್ಮ ಬಹುಮತಕ್ಕೆ ಬೇಕಿದ್ದ 170 ಸ್ಥಾನಗಳನ್ನು ಗಳಿಸುವಲ್ಲಿ ಸೋತಿದ್ದಾರೆ. ಹೀಗಾಗಿ ಅವರು ನ್ಯೂ ಡೆಮಾಕ್ರೆಟಿಕ್ ಪಕ್ಷದ 24 ಸದಸ್ಯರ ಬಲದೊಂದಿಗೆ ಸರ್ಕಾರ ರಚಿಸಬೇಕಿದೆ.

ಈ ನ್ಯೂ ಡೆಮಾಕ್ರೆಟಿಕ್ ಪಕ್ಷದ ಮುಖ್ಯಸ್ಥ ಜಗಮೀತ್ ಸಿಂಗ್. 40 ವರ್ಷದ ಈ ಮಾಜಿ ಕ್ರಿಮನಲ್ ಲಾಯರ್ ಕೆನಡಾದ ಯಾವುದೇ ಮುಖ್ಯ ಪಕ್ಷವೊಂದರ ಮೊದಲ ಭಾರತ ಸಂಜಾತ. ಮೊದಲಿನಿಂದಲೂ ಎಡಪಂಥೀಯ ಧೋರಣೆಯ ಈತ ಕೆನಡಾದ ಎಲ್ಲ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ಹಾಕಬೇಕು ಹಾಗೂ ಸಾಮಾನ್ಯ ಕೆನಡಾ ಪ್ರಜೆಗಳ ಜೀವನ ಸುಧಾರಿಸಬೇಕು ಎಂದು ಶರತ್ತು ಹಾಕಿದ್ದಾನೆ. ಜಗಮೀತ್ ಸಿಂಗ್‍ರವರ ನ್ಯೂ ಡೆಮಾಕ್ರೆಟಿಕ್ ಪಕ್ಷ ಈ ಮೊದಲೂ ಲಿಬರಲ್ ಪಕ್ಷದೊಡನೆ ಸೇರಿ ಸರ್ಕಾರ ರಚಿಸಿತ್ತು. ಹಾಗಾಗಿ ಈ ಬಾರಿಯೂ ಸರ್ಕಾರ ರಚಿಸುವುದು ಕಷ್ಟವಾಗಲಾರದು.

ಹಿಂದಿನ ಐದು ವರ್ಷಗಳ ಜಸ್ಟಿನ್ ಟ್ರೂಡೋ ಸರ್ಕಾರದಲ್ಲಿ ನಾಲ್ಕು ಭಾರತ ಸಂಜಾತ ಪಂಜಾಬಿಗಳು ಕ್ಯಾಬಿನೆಟ್ ಮಂತ್ರಿಗಳಾಗಿದ್ದರು. ಈ ಬಾರಿ ಎಷ್ಟು ಜನ ಭಾರತ ಸಂಜಾತರು ಮಂತ್ರಿಗಳಾಗುತ್ತರೆಂದು ಕಾದು ನೋಡಬೇಕಿದೆ.

‘ಟ್ರಂಪ್ ಅಮೆರಿಕ’ ಜಗತ್ತಿನ ವಿಶ್ವಾಸ ಕಳೆದುಕೊಳ್ಳುತ್ತಿದೆಯೇ..?

ಏಕಾಏಕಿ ತನ್ನ ಸೈನಿಕರನ್ನು ವಾಪಸು ಕರೆಸಿಕೊಂಡು ಅಮೆರಿಕದ ಅಧ್ಯಕ್ಷ ಡಾನಲ್ಡ್ ಟ್ರಂಪ್ ಉತ್ತರ ಸಿರಿಯಾದ ಅಲ್ಪಸಂಖ್ಯಾತ ‘ಕುರ್ಡ್’ ಜನಾಂಗೀಯರನ್ನು ಅಕ್ಷರಶಃ ನಡುನೀರಿನಲ್ಲಿ ಕೈ ಬಿಟ್ಟಿದ್ದಾರೆ. ಟರ್ಕಿಯ ಸೈನ್ಯ ಈ ಅಮಾಯಕ ಕುರ್ಡಿಶ್ ಜನರ ಪ್ರದೇಶವನ್ನು ಆಕ್ರಮಿಸಿಕೊಂಡು ತನ್ನ ಎಲ್ಲೆಯಲ್ಲಿ ಅಧಿಪತ್ಯ ಮೆರೆದಿದೆ.

ಈ ಘಟನೆಯ ನಂತರ ಟ್ರಂಪ್ ನೇತೃತ್ವದ ಅಮೆರಿಕೆಯನ್ನು ಅಂತರರಾಷ್ಟ್ರಿಯ ಮಟ್ಟದಲ್ಲಿ ನಂಬಬಹುದೇ ಎಂಬ ಕೂಗು ಕೇಳಿಬಂದಿದೆ. ‘ಗ್ಲೋಬಲ್ ಪುಲೀಸ್’ ಎಂದು ಇದುವರೆಗೂ ಬಿರುದು ಪಡೆದು ಬಂದಿದ್ದ ಅಮೆರಿಕಾದ ಹಿರಿಯಣ್ಣ ಈಗ ಏಕಾಏಕಿ ತನ್ನ ಜವಾಬ್ದಾರಿಯನ್ನು ಕಿತ್ತು ಬಿಸಾಕಿ ಮನೆಗೆ ಹೊರಟರೆ ಹೇಗೆ ಎಂಬ ಪ್ರಶ್ನೆ ಮೂಡಿದೆ.

ಅಮೆರಿಕಾ-ಸೋವಿಯಟ್ ರಷ್ಯಾ ನಡುವಿನ ಶೀತಲ ಸಮರದ ದಿನದಿಂದಲೂ ಅಮೆರಿಕ ವಿಶ್ವದ ರಾಜಕೀಯ ಸಮತೋಲನವನ್ನು ಕಾಪಾಡಿಕೊಂಡು ಬಂದಿದೆ. ಯಾವುದೇ ಪುಂಡು ರಾಷ್ಟ್ರಕ್ಕೆ ತನ್ನ ಚಾಳಿಯನ್ನು ತೋರಿಸಲು ಬಿಟ್ಟಿಲ್ಲ. ಎಲ್ಲರನ್ನೂ ಅಂತರರಾಷ್ಟ್ರೀಯ ಕಾನೂನುಗಳ ಹದ್ದುಬಸ್ತಿನಲ್ಲಿ ಇಟ್ಟಿದೆ. ಇದನ್ನು ಸಾಧಿಸಲು ಅಮೆರಿಕ ತನ್ನ ಸೈನ್ಯ ಮತ್ತು ಸೈನಿಕರನ್ನು ವಿಶ್ವದಾದ್ಯಂತ ನಿಯೋಜಿಸಬೇಕಾಗಿ ಬಂದಿತ್ತು. ದಕ್ಷಿಣ ಕೊರಿಯಾದ ‘ಡಿ-ಮಿಲಿಟರೈಸ್ಡ್ ಝೋನ್’ ನಿಂದ ಹಿಡಿದು ಮಧ್ಯ ಅಮೆರಿಕಾದ ಓಪಿಯಮ್ ವ್ಯಾಪಾರ ನಿಯಂತ್ರಣಗೊಳಿಸುವಲ್ಲಿಗೆ ಅಮೆರಿಕಾದ ಪಾತ್ರವಿತ್ತು. ಹಲವು ಸಂದರ್ಭಗಳಲ್ಲಿ ಜಪಾನ್, ಟೈವಾನ್, ವಿಯೆಟ್ನಾಂ, ಆಫ್ಘಾನಿಸ್ತಾನ, ಸೌದಿ ಅರೇಬಿಯಾ, ಇರಾಖ್ ಮತ್ತು ಮಧ್ಯಪ್ರಾಚ್ಯ, ಯೂರೋಪ್ ಮತ್ತು ನೇಟೋ, ಆಫ್ರಕಾದ ದೇಶಗಳು ಹಾಗೂ ಮಧ್ಯ ಅಮೆರಿಕಾದಲ್ಲಿ ಯುಎಸ್‍ಎನ ಸೈನಿಕರು ನಿಯೋಜನೆಗೆ ಒಳಗೊಂಡಿದ್ದರು. ಈ ಸಂದರ್ಭದಲ್ಲಿ ಅಪಾರ ಸಾವು-ನೋವುಗಳು ಹಾಗೂ ಆರ್ಥಿಕ ಹೊರೆಯೂ ಉಂಟಾಗಿತ್ತು. ತನ್ನ ‘ಹಿರಿಯಣ್ಣ’ನ ಪಾತ್ರವನ್ನು ಬಿಟ್ಟುಕೊಡದ ಅಮೆರಕಾದ ಎಲ್ಲಾ ಅಧ್ಯಕ್ಷರು ಈ ಮಿಲಿಟರಿ ತಂತ್ರಕ್ಕೆ ಬದ್ಧವಾಗಿದ್ದರು. ಈ ಬದ್ಧತೆ ರಿಪಬ್ಲಿಕನ್ ಅಧ್ಯಕ್ಷರಲ್ಲಿ ಹೆಚ್ಚು ಕಂಡರೂ ಡೆಮಾಕ್ರೆಟಿಕ್ ಅಧ್ಯಕ್ಷರು ಅಂದಿನ ಮಿಲಿಟರಿ ನಿಯೋಜನೆಯನ್ನು ನಾಟಕೀಯವಾಗಿ ಅಥವಾ ಗಂಭೀರವಾಗಿ ಹಿಂದೆಗೆಯುವ ಪ್ರಯತ್ನವನ್ನೇನೂ ಮಾಡಿರಲಿಲ್ಲ. ಹಿಂದಿನ ಅಧ್ಯಕ್ಷ ಬರಾಕ್ ಓಬಾಮಾ ಕೂಡಾ ಆಫ್ಘಾನಿಸ್ತಾನ ಹಾಗೂ ಇರಾಖ್-ಸಿರಿಯಾಗಳಲ್ಲಿ ಅಮೆರಿಕಾದ ಸೈನಿಕರ ನಿಯೋಜನೆ ಕಡಿಮೆಯೇನೂ ಮಾಡಲಿಲ್ಲ.

ಟ್ರಂಪ್ ಹೇಳಿಕೇಳಿ ರಿಪಬ್ಲಿಕನ್ ಪಕ್ಷದವರು. ಗಂಡುಗೂಳಿ. ಇವರು ಅಧ್ಯಕ್ಷರಾದ ಮೇಲೆ ಇನ್ನಷ್ಟು ದೇಶಗಳಲ್ಲಿ ಅಮೆರಿಕಾದ ಸೈನಿಕರ ನಿಯೋಜನೆಯನ್ನು ಎಲ್ಲರೂ ಬಯಸಿದ್ದರು ಹಾಗೂ ಊಹಿಸಿದ್ದರು. ಆದರೆ ಟ್ರಂಪ್ ತಮ್ಮ ಚುನಾವಣಾ ಘೋಷಣೆಗೆ ಬದ್ಧರಾದಂತೆ ತೋರುತ್ತಿದ್ದಾರೆ. ‘ಅಮೆರಿಕಾ ಮೊದಲು’ ಹಾಗೂ ಸೈನಿಕರನ್ನು ಮನೆಗೆ ಕರೆಸಿಕೊಳ್ಳುವ ತಮ್ಮ ಘೋಷಣೆಗಳನ್ನು ಗಂಭೀರವಾಗಿಯೇ ಪಾಲಿಸುತ್ತಿದ್ದಾರೆ. ಇದರಂತೆ ಈಗಾಗಲೇ ಆಫ್ಘಾನಿಸ್ತಾನ ಹಾಗೂ ಇರಾಖ್‍ಗಳಿಂದ ಬಹಳಷ್ಟು ಸಂಖ್ಯೆಯಲ್ಲಿ ತಮ್ಮ ಸೈನಿಕರ ಹಿಂದೆಗೆತ ಮಾಡಿದ್ದಾರೆ. ಈಗ ಸಿರಿಯಾ ಹಾಗೂ ಪಶ್ಚಿಮ ಯೂರೋಪಿನಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಮಾತನಾಡುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಟ್ರಂಪ್ ಅಮೆರಿಕಾದ ಸೈನಿಕರು ಅಮೆರಿಕಾದ ನೆಲವನ್ನು ಬಿಟ್ಟು ಹೊರಗೆ ಹೋಗುವುದಿಲ್ಲ ಎಂದೂ ಹೇಳಬಹುದು.

ಇದು ಎಲ್ಲರನ್ನೂ ಕಷ್ಟಕ್ಕೆ ದೂಡುತ್ತದೆ. ವಿಶ್ವಕ್ಕೊಬ್ಬ ಅಥವಾ ಇಬ್ಬರು ‘ದೊಡ್ಡಣ್ಣ’ಗಳು ಬೇಕೇಬೇಕು. ಈ ಪಾತ್ರದಿಂದ ಅಮೆರಿಕ ಹಿಂದೆಗೆದರೆ ಈ ಜಾಗಕ್ಕೆ ಬೇರೆ ಯಾರಾದರೂ ಬರಲೇಬೇಕು. ಈ ಸ್ಥಾನ ಆಕ್ರಮಿಸಲು ರಷ್ಯಾದ ವ್ಲಾದಿಮಿರ್ ಪುಟಿನ್ ಹಾಗೂ ಚೀನಾದ ಕ್ಷಿ ಜಿನ್‍ಪಿಂಗ್ ಕಾದು ಕುಳಿತಿದ್ದಾರೆ. ಅಮೆರಿಕಾದ ಬದಲು ಈ ಎರಡು ದೇಶಗಳ ಸರ್ವಾಧಿಕಾರಿಗಳು ವಿಶ್ವದ ‘ದೊಡ್ಡಣ್ಣ’ಗಳಾದರೆ ಏನಾಗಬಹುದು ಎಂಬುದನ್ನು ನಿಮ್ಮ ಊಹೆಗೇ ಬಿಟ್ಟಿದೆ.

Leave a Reply

Your email address will not be published.