ವಿಶ್ವ ವಿದ್ಯಮಾನ

ವಲಸೆ ನೀತಿ ಸಡಿಲಿಸಿದ ಬ್ರಿಟನ್

ಬ್ರೆಕ್ಸಿಟ್ ವಿದ್ಯಮಾನಗಳಿಂದ ತತ್ತರಿಸಿಹೋಗಿರುವ ಯುನೈಟೆಡ್ ಕಿಂಗ್‍ಡಮ್ ಇದೀಗ ವಲಸೆ ನೀತಿಯನ್ನು ಸಡಿಲಿಸಿಕೊಂಡು ಡಿಜಿಟಲ್ ಯುಗದಲ್ಲಿ ತನ್ನ ಸ್ಪರ್ಧಾತ್ಮಕತೆಯನ್ನು ಉತ್ತಮವಾಗಿಸಲು ಹೊರಟಿದೆ. ಈ ಸುಧಾರಣೆಯಂತೆ ಪಿಹೆಚ್‍ಡಿ ಪದವಿ ಬಯಸುವ ಕೆಲಸಗಳಿಗೆ ನೀಡುವ ವೀಸಾ ಸಂಖ್ಯೆಯ ಮಿತಿಯನ್ನು ತೆಗೆದುಹಾಕಲಾಗಿದೆ. ಹಾಗಾಗಿ ಉತ್ತಮ ಕುಶಲತೆ ಬಯಸುವ ಉದ್ಯಮಗಳನ್ನು ಯಾವುದೇ ‘ವಲಸೆ ನೀತಿ’ ಹಾಗೂ ‘ವೀಸಾ ಮಿತಿ’ಯಿಲ್ಲದೆ ಬ್ರಿಟನ್‍ನಲ್ಲಿ ಪ್ರಾರಂಭ ಮಾಡಲು ಅನುವಾಗುತ್ತದೆ. ಡಿಜಿಟಲ್ ಮತ್ತಿತರ ಉತ್ತಮ ಕುಶಲತೆ ಬಯಸುವ ಈ ಉದ್ಯಮಗಳಲ್ಲಿ ಬಹುತೇಕ ಭಾರತೀಯರೇ ಅತ್ಯಂತ ಹೆಚ್ಚಿನ ಉದ್ಯೋಗಾಕಾಂಕ್ಷಿಗಳಾಗಿದ್ದಾರೆ. ಬ್ರಿಟನ್‍ನ ಈ ಸಡಿಲಿಸಿದ ನೀತಿಯಿಂದ ಭಾರತೀಯ ಸಂಜಾತ ಪಿಹೆಚ್‍ಡಿ ಪದವೀಧರರಿಗೆ ಇನ್ನೂ ಹೆಚ್ಚಿನ ಬೇಡಿಕೆ ಸಿಗಲಿದೆ.

ಈ ಮಧ್ಯೆ ಬ್ರೆಕ್ಸಿಟ್ ಗಡುವನ್ನು ಮಾರ್ಚ್ 29ರಿಂದ ಮೂರು ತಿಂಗಳು ವಿಸ್ತರಿಸಲು ಯುನೈಟೆಡ್ ಕಿಂಗ್‍ಡಮ್ ಬಯಸಿದೆ. ಇಂಗ್ಲೆಂಡಿನ ಸಂಸತ್ತು ಐರೋಪ್ಯ ಒಕ್ಕೂಟದೊಂದಿಗಿನ ಒಪ್ಪಂದವನ್ನು ಮನ್ನಿಸಿದ್ದೇ ಆದಲ್ಲಿ ‘ಇಯು’ ಬ್ರೆಕ್ಸಿಟ್ ಗಡುವನ್ನು ಮೂರು ತಿಂಗಳು ವಿಸ್ತರಿಸಲು ಸಿದ್ಧವಾಗಿರುವಂತಿದೆ.

ಅಝರ್ ಮಸೂದ್‍ಗೆ ರಕ್ಷಣೆ ಮುಂದುವರೆಸಿದ ಚೀನಾ

ಪುಲ್ವಾಮಾ ದಾಳಿಯ ರೂವಾರಿ ಹಾಗೂ ಜೈಶ್-ಎ-ಮೊಹಮ್ಮದ್ ಸಂಘಟನೆಯ ನೇತಾರ ಅಝರ್ ಮಸೂದ್ ರಕ್ಷಣೆಗೆ ಚೀನಾ ಮತ್ತೊಮ್ಮೆ ಬಂದು ನಿಂತಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಝರ್‍ನನ್ನು ಜಾಗತಿಕ ಭಯೋತ್ಪಾದಕ ಎಂದು ಹೆಸರಿಸುವ ಠರಾವಿಗೆ ಚೀನಾ, ಫ್ರಾನ್ಸ್, ಬ್ರಿಟನ್ ಮತ್ತು ಉಳಿದೆಲ್ಲಾ ಸದಸ್ಯ ರಾಷ್ಟ್ರಗಳು ಬೆಂಬಲ ನೀಡಿದ ಈ ನಿಲುವಿಗೆ ಚೀನಾ ತಡೆ ಒಡ್ಡಿದೆ. ಭದ್ರತಾ ಮಂಡಳಿಯು ಒಮ್ಮೆ ಅಝರ್‍ನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಹೆಸರಿಸಿದರೆ ಆತನ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಬೇಕಾಗುವುದಲ್ಲದೆ ಅವನ ಅಂತರದೇಶೀಯ ಪ್ರವಾಸಕ್ಕೂ ಕಡಿವಾಣ ಬೀಳುತ್ತದೆ. ಭಯೋತ್ಪಾದಕನೆಂಬ ಹಣೆಪಟ್ಟಿಯ ಬಗ್ಗೆ ಅಝರ್ ತಲೆಕೆಡಿಸಿಕೊಳ್ಳದಿದ್ದರೂ, ಇಂತಹ ಭಯೋತ್ಪಾದಕನಿಗೆ ಶರಣು ನೀಡಿದ ಕಾರಣಕ್ಕೆ ಪಾಕಿಸ್ತಾನ ಕುಹಕಕ್ಕೆ ಮತ್ತು ಕೆಟ್ಟ ಹೆಸರಿಗೆ ಪಾತ್ರವಾಗುತ್ತಿತ್ತು.

ಮಸೂದ್ ಅಝರ್‍ನ ಬೆಂಬಲಕ್ಕೆ ಚೀನಾ ನಿಂತದ್ದು ಇದೇ ಮೊದಲಲ್ಲ. 2009, 2011 ಮತ್ತು 2017ರಲ್ಲಿ ಚೀನಾ ವಿಶ್ವಸಂಸ್ಥೆಯಲ್ಲಿ ಅಝರ್‍ನ ಬೆಂಬಲಕ್ಕೆ ನಿಂತಿತ್ತು. ತಾಂತ್ರಿಕ ಕಾರಣಗಳನ್ನು ನೀಡಿ ಪಾಕಿಸ್ತಾನದಲ್ಲಿ ನೆಲೆಸಿದ ನರಹಂತಕನಿಗೆ ಶರಣು ನೀಡಿತ್ತು. ತನ್ನ ಸರ್ವಋತು ಸ್ನೇಹಿತ ಪಾಕಿಸ್ತಾನವನ್ನು ಓಲೈಸಲು ಮುಂದಾಗಿತ್ತು. ಇದೇ ಧಾಟಿಯಲ್ಲಿ ಈ ಬಾರಿಯೂ ಚೀನಾ ವರ್ತಿಸಿತ್ತಾದರೂ ಅಂತರರಾಷ್ಟ್ರೀಯ ವಲಯದಲ್ಲಿ ಅತ್ಯಂತ ಟೀಕೆಗೆ ಗುರಿಯಾಗಿದೆ. ಭಯೋತ್ಪಾದನೆಯ ವಿರುದ್ಧದ ಅಂತರರಾಷ್ಟ್ರೀಯ ಸಮರದಲ್ಲಿ ಚೀನಾವನ್ನು ನಂಬಲಾಗದು ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಹೀಗೇ ಮುಂದುವರೆದರೆ ಪಾಕಿಸ್ತಾನದ ಜೊತೆಗೆ ಚೀನಾ ಕೂಡಾ ಜಾಗತಿಕ ಅಸ್ಪøಶ್ಯ ರಾಷ್ಟ್ರಗಳ ಪಟ್ಟಿಗೆ ಸೇರಬೇಕಾಗುತ್ತದೆ.

ಚೀನಾ ವರ್ತನೆಗೆ ಕಾರಣಗಳಿಲ್ಲದಿಲ್ಲ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‍ಗೆ ಈಗಾಗಲೇ ಚೀನಾ ಬಿಲಿಯಾಂತರ ಡಾಲರ್‍ಗಳ ಹೂಡಿಕೆ ಮಾಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮುಖಾಂತರ ಚೀನಾದಿಂದ ಪಾಕಿಸ್ತಾನದ ಕರಾಚಿ ಬಳಿಯ ಗ್ವಾಡರ್ ಬಂದರುವರೆಗಿನ ಈ ಕಾರಿಡಾರ್ ಮೂಲಕ ಚೀನಾ ಅರೇಬಿಯನ್ ಸಮುದ್ರಕ್ಕೆ ಹತ್ತಿರದ ದಾರಿ ಕಂಡುಕೊಳ್ಳಬೇಕಾಗಿದೆ. ಪಾಕಿಸ್ತಾನಕ್ಕೆ ಅಣ್ವಸ್ತ್ರ ಸೇರಿದಂತೆ ಹಲವಾರು ರಕ್ಷಣಾ ಮಿಲಿಟರಿ ಸಾಮಗ್ರಿಗಳನ್ನು ಚೀನಾ ಮಾರಾಟ ಮಾಡುತ್ತಿದೆ. ಪ್ರಪಂಚದ ಬೇರೆಲ್ಲಾ ರಾಷ್ಟ್ರಗಳನ್ನು ದೂರ ಮಾಡಿಕೊಂಡಿರುವ ಚೀನಾ ತನ್ನ ‘ಆಪ್ತಮಿತ್ರ’ ಪಾಕಿಸ್ತಾನವನ್ನು ಕಳೆದುಕೊಳ್ಳಲು ಬಯಸದಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಪಾಕಿಸ್ತಾನದ ಹಳೆಯ ಮಿತ್ರರಾಷ್ಟ್ರಗಳಾದ ಸೌದಿ ಅರೇಬಿಯಾ ಹಾಗೂ ಯುಎಇ ಕೊಲ್ಲಿ ರಾಷ್ಟ್ರಗಳು ಪಾಕಿಸ್ತಾನದಿಂದ ನಿಧಾನವಾಗಿ ದೂರ ಸರಿದಂತೆ ಕಾಣುತ್ತಿವೆ. ಸೌದಿ ಅರೇಬಿಯಾ ಈಗಾಗಲೇ ಭಾರತದಲ್ಲಿ 100 ಬಿಲಿಯನ್ ಡಾಲರ್‍ಗಳ ಹೂಡಿಕೆಗೆ ಸಿದ್ಧವಾಗಿದೆ. ಭಾರತೀಯ ಸಂಜಾತರಿಗೆ ಯುಎಇ ಮುಕ್ತ ಪ್ರವೇಶ ನೀಡುತ್ತಿದೆ. ಪಾಕಿಸ್ತಾನದ ಆಕ್ಷೇಪಣೆಯ ನಡುವೆಯೂ ಇಸ್ಲಾಮಿಕ್ ದೇಶಗಳ ಸಂಘಟನೆ (ಓಐಸಿ)ಯಲ್ಲಿ ಕೂಡಾ ಭಾರತಕ್ಕೆ ‘ವಿಶೇಷ ಅತಿಥಿ’ಯ ಸ್ಥಾನಮಾನ ನೀಡಲಾಗಿದೆ.

ಎಲ್ಲಿಯವರೆಗೆ ಚೀನಾ ಅಝರ್‍ನ ರಕ್ಷಣೆಗೆ ನಿಲ್ಲುತ್ತದೆ ಎಂಬುದನ್ನು ನೋಡಬೇಕಿದೆ. ಅಂತರರಾಷ್ಟ್ರೀಯ ವಲಯದಲ್ಲಿ ಅನಪೇಕ್ಷಿತ ಕೆಟ್ಟಹೆಸರು ಪಡೆಯುವುದನ್ನು ಎಲ್ಲಿಯವರೆಗೆ ಚೀನಾ ತಡೆದುಕೊಳ್ಳುತ್ತದೆಯೋ ಎಂಬುದನ್ನು ನೋಡಬೇಕಿದೆ. ಈ ಮಧ್ಯೆ ಪಾಕಿಸ್ತಾನವನ್ನು ಜಾಗತಿಕ ವಲಯದಲ್ಲಿ ಮತ್ತಷ್ಟು ಮೂಲೆಗುಂಪು ಮಾಡಲು ಭಾರತ ಸನ್ನದ್ಧವಾಗಿದೆ ಈಗಾಗಲೇ ಫ್ರಾನ್ಸ್ ಅಝರ್‍ನನ್ನು ಐರೋಪ್ಯ ಒಕ್ಕೂಟದ ಭಯೋತ್ಪಾದಕ ಕಪ್ಪುಪಟ್ಟಿಗೆ ಸೇರಿಸಬಯಸಿದೆ. ಪಾಕಿಸ್ತಾನವನ್ನು ‘ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್’ ಪಟ್ಟಿಗೆ ಸೇರಿಸಿ ಪಾಕಿಸ್ತಾನದ ಮೇಲೆ ಆರ್ಥಿಕ ನಿರ್ಬಂಧ ಹೇರಲು ಭಾರತ ಸಜ್ಜಾಗಿದೆ. ಭಾರತದ ಸಾರ್ವತ್ರಿಕ ಚುನಾವಣೆ ನಂತರದ ತಿಂಗಳುಗಳಲ್ಲಿ ಈ ವಿದ್ಯಮಾನಗಳು ನಿರ್ಣಾಯಕ ಘಟ್ಟ ಮುಟ್ಟಲಿವೆ.

ನ್ಯೂಜಿಲೆಂಡಿನ ಮಸೀದಿಯಲ್ಲಿ ನರಮೇಧ

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಭಾರತದ ಪ್ರವಾಸಿಗಳ ಅಚ್ಚುಮೆಚ್ಚಿನ ನೈಸರ್ಗಿಕ ಸೌಂದರ್ಯದ ತಾಣಗಳಾಗಿದ್ದವು. ಕಳೆದ ಐದು ವರ್ಷಗಳಲ್ಲಿ ನ್ಯೂಜಿಲೆಂಡ್ ದೇಶಕ್ಕೆ ಪ್ರವಾಸ ಹೋಗಿಬಂದ ಭಾರತೀಯ ಪ್ರವಾಸಿಗಳ ಸಂಖ್ಯೆಯೇ ಮೂರುಪಟ್ಟು ಬೆಳೆದಿತ್ತು. ಪ್ರತಿವರ್ಷ ಒಂದು ಲಕ್ಷಕ್ಕೂ ಮಿಗಿಲಾಗಿ ಪ್ರವಾಸಿಗಳ ವಿಹಾರಕ್ಕೆ ತಾಣವಾಗಿತ್ತು.

ಇದಕ್ಕೆ ಬರಸಿಡಿಲು ಬಡಿದಂತೆ ಇದೇ ಮಾರ್ಚ್ 15ರಂದು ನ್ಯೂಜಿಲೆಂಡಿನ ಕ್ರೈಸ್ಟ್‍ಚರ್ಚ್ ನಗರದಲ್ಲಿನ ಎರಡು ಮಸೀದಿಗಳಲ್ಲಿನ ನರಮೇಧದಲ್ಲಿ 50 ಜನ ಸಾವನ್ನಪ್ಪಿದ್ದಾರೆ. ಆಸ್ಟ್ರೇಲಿಯಾ ಸಂಜಾತ ಹಾಗೂ ವಲಸೆ ವಿರೋಧಿ ಬಿಳಿಯ ನರಹಂತಕನೊಬ್ಬ ತನ್ನ ಸೆಮಿ-ಆಟೋಮ್ಯಾಟಿಕ್ ಗನ್‍ಗಳನ್ನು ಬಳಸಿ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅಣಿಯಾಗುತ್ತಿದ್ದವರನ್ನು ಗುಂಡಿಟ್ಟು ಕೊಂದಿದ್ದಾನೆ. ಭಾರತ ಮೂಲದ ಏಳು ಜನ ಮೃತರಾಗಿದ್ದರೆ, ಪ್ರಾರ್ಥನೆಗೆಂದು ಅದೇ ಮಸೀದಿಗೆ ತೆರಳುತ್ತಿದ್ದ ಬಾಂಗ್ಲಾದೇಶದ ಕ್ರಿಕೆಟ್ ತಂಡ ಕೂದಲೆಳೆಯಲ್ಲಿ ಪಾರಾಗಿದೆ. 28 ವಯಸ್ಸಿನ ನರಹಂತಕ ಬ್ರೆಂಟನ್ ಟರ್ರಾಂಟ್‍ನನ್ನು ಪೋಲೀಸರು ಬಂಧಿಸಿದ್ದಾರೆ.

ಈ ನರಮೇಧದ ನೇರಪ್ರಸಾರವನ್ನು ಫೇಸ್‍ಬುಕ್ ಲೈವ್‍ನಲ್ಲಿ ಮಾಡಲು ಅನುವು ಮಾಡಿಕೊಟ್ಟಿದ್ದಕ್ಕೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಸಮೂಹ ಮಾಧ್ಯಮಗಳನ್ನು ತಮ್ಮ ಅಸಹನೆಯ ಹಾಗೂ ದ್ವೇಷ ಬಿತ್ತುವ ವಿಚಾರಧಾರೆಯ ಪ್ರಸರಣಕ್ಕೆ ಬಳಸುವ ಪ್ರವೃತ್ತಿ ವ್ಯಾಪಕ ಖಂಡನೆಗೆ ಒಳಗಾಗಿದೆ. ಘಟನೆ ನಡೆದ ಕೆಲವೇ ಸಮಯದಲ್ಲಿ ನೇರಪ್ರಸಾರದ ವಿಡಿಯೋ, ಶ್ವೇತವರ್ಣೀಯ ಹೆಗ್ಗಳಿಕೆ ಸಾರುವ ಹಂತಕನ ಪ್ರಣಾಳಿಕೆ ಮುಂತಾದುವುಗಳನ್ನು ತೆಗೆಯಲಾಯಿತಾದರೂ ಇಂತಹ ಅಪಪ್ರಚಾರ ತಡೆಯುವ ಬಗ್ಗೆ ಡಿಜಿಟಲ್ ವಿಶ್ವ ತಲೆಕೆಡಿಸಿಕೊಂಡಿದೆ.

ಭಾತರದೊಂದಿಗೆ ವಿಶ್ವದ ರಾಷ್ಟ್ರಗಳೆಲ್ಲವೂ ಈ ನರಮೇಧವನ್ನು ಖಂಡಿಸಿವೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್‍ಖಾನ್ ಮುಸ್ಲಿಮರ ಮೇಲೆ ಹೆಚ್ಚಿದ ಘಟನೆಗಳಿಗೆ 2001ರ 9/11 ನ್ಯೂಯಾರ್ಕ್ ದಾಳಿ ನಂತರದಲ್ಲಿ ಉಂಟಾಗಿರುವ ‘ಇಸ್ಲಾಮೋಫೋಬಿಯ’ (ಇಸ್ಲಾಮಿಯರನ್ನು ಕಂಡರೆ ಭಯಪಡುವ) ಕಾರಣವೆಂದು ದೂರಿದ್ದಾರೆ. ಯಾವುದೇ ಭಯೋತ್ಪಾದನೆಯ ಕೃತ್ಯಗಳಿಗೆ ವಿಶ್ವದಾದ್ಯಂತದ 130 ಕೋಟಿ ಮುಸ್ಲಿಮರೆಲ್ಲರನ್ನು ದೋಷಿಗಳಂತೆ ನೋಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಚಾಬಹಾರ್ ಬಂದರಿನಿಂದ ಭಾರತಕ್ಕೆ ರಫ್ತು ಮಾಡಿದ ಆಫ್ಘಾನಿಸ್ತಾನ

ಇರಾನ್‍ನ ಚಾಬಹಾರ್ ಬಂದರಿನಿಂದ ಮೊಟ್ಟಮೊದಲ ಬಾರಿಗೆ ಆಫ್ಘಾನಿಸ್ತಾನ ತನ್ನ ಉತ್ಪನ್ನಗಳನ್ನು ಭಾರತಕ್ಕೆ ನಿರ್ಯಾತ ಮಾಡಿದೆ. ಇದುವರೆಗೂ ವಾಯುಮಾರ್ಗದಲ್ಲಿ ಅಥವಾ ಪಾಕಿಸ್ತಾನದ ಮೂಲಕವೇ ಆಫ್ಘಾನಿಸ್ತಾನ ಭಾರತದೊಂದಿಗೆ ಆಮದು-ರಫ್ತು ಮಾಡಬೇಕಿತ್ತು. ಆದರೆ ಇರಾನ್‍ನ ಸಮುದ್ರ ತಟದಲ್ಲಿ ಭಾರತ ಚಾಬಹಾರ್ ಬಂದರು ಅಭಿವೃದ್ಧಿಪಡಿಸಿ ತನ್ನ ವಾಣಿಜ್ಯ ನಿಯಂತ್ರಣಕ್ಕೆ ಒಳಪಡಿಸಿಕೊಂಡಿತ್ತು. ಈ ಬಂದರಿನಿಂದ ಆಫ್ಘಾನಿಸ್ತಾನಕ್ಕೆ ಹಾಗೂ ಇರಾನ್‍ನ ಪೂರ್ವ ಭಾಗಗಳಿಗೆ ಆಮದು-ರಫ್ತು ಮಾಡಲು ಈಗ ಸುಗಮವಾಗಿದೆ.

ಇದೇ 2019ರ ಫೆಬ್ರವರಿ ಕೊನೆಯ ವಾರದಲ್ಲಿ ಆಫ್ಘನ್ ಪ್ರಧಾನಿ ಅರ್ಷಫ್ ಘಾನಿ ಹಾಗೂ ಬಾರತದ ರಾಯಭಾರಿ ವಿನಯ್‍ಕುಮಾರ್‍ರವರು ಆಫ್ಘಾನಿಸ್ತಾನದಿಂದ 23 ವಾಹನಗಳಲ್ಲಿ 270 ಟನ್ ಒಣಹಣ್ಣುಗಳು, ರತ್ನಗಂಬಳಿ, ಬಟ್ಟೆಗಳು ಮತ್ತು ಗಣಿ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡಲು ಚಾಲನೆ ನೀಡಿದರು. ಇದುವರೆಗೆ ಕೇವಲ ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ಆಫ್ಘಾನಿಸ್ತಾನ ಇದೀಗ ರಫ್ತು ಮಾಡಲು ಸಾಮಥ್ರ್ಯ ಬೆಳೆಸಿಕೊಂಡಿದೆ. ಪಾಕಿಸ್ತಾನದ ನಿಯಂತ್ರಣಕ್ಕೆ ಒಳಪಡದೆ ಇರಾನ್ ಮುಖಾಂತರ ಭಾರತದ ನಿಯಂತ್ರಣದ ಚಾಬಹಾರ್ ಬಂದರಿನ ಮೂಲಕ ಆಫ್ಘಾನಿಸ್ತಾನ ತನ್ನೆಲ್ಲಾ ಆಮದು-ರಫ್ತು ವಹಿವಾಟು ನಡೆಸಬಹುದಾಗಿದೆ.

ಬೋಯಿಂಗ್ ವಿಮಾನದಲ್ಲಿ ತಾಂತ್ರಿಕ ದೋಷ

ಕಳಪೆ ಗುಣಮಟ್ಟದ ಅಥವಾ ದೋಷಪೂರಿತ ವಾಹನಗಳನ್ನು ತಯಾರಿಸುವುದರಲ್ಲಿ ನಾವೇ ಪ್ರವೀಣರು ಎಂಬ ನಮ್ಮ ಖ್ಯಾತಿಗೂ ಈಗ ಕುಂದು ಬಂದಿದೆ. ಪ್ರಖ್ಯಾತ ಬೋಯಿಂಗ್ ವಿಮಾನಸಂಸ್ಥೆಯು ಕೂಡಾ ನಮ್ಮಂತೆಯೇ ದೋಷಪೂರ್ಣ ವಿಮಾನ ನಿರ್ಮಾಣ ಮಾಡಿರುವುದು ಈಗ ಸಿದ್ಧವಾಗಿದೆ. ಕಳೆದ 2018 ಅಕ್ಟೋಬರ್‍ನಲ್ಲಿ ಮಲೇಶಿಯಾದ ಲಯನ್ ಏರ್ ಸಂಸ್ಥೆಯ 737-ಮ್ಯಾಕ್ಸ್ ದುರ್ಘಟನೆಗೆ ಈಡಾದರೆ ಇದೀಗ ಮಾರ್ಚ್ 2019ರಲ್ಲಿ ಇಥಿಯೋಪಿಯಾದ ಏರ್‍ಲೈನ್ಸ್‍ನ ಬೋಯಿಂಗ್ 737-ಮ್ಯಾಕ್ಸ್ ವಿಮಾನ ಪೈಲಟ್ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ. ನೂರಾರು ಜನರ ಸಾವಿಗೆ ಕಾರಣವಾದ ಈ ಬೋಯಿಂಗ್ ವಿಮಾನದ ಘಟನೆಯಿಂದ ಪ್ರಪಂಚದಾದ್ಯಂತ 737-ಮ್ಯಾಕ್ಸ್ ವಿಮಾನಗಳಿಗೆ ನೀಡಿದ್ದ ಅನುಮತಿ ಹಿಂದೆಗೆದುಕೊಳ್ಳಲಾಗಿದೆ.

ಒಮ್ಮೆ ವಿಮಾನವೊಂದು ಆಗಸಕ್ಕೇರಿದ ಮೇಲೆ ಸಾಮಾನ್ಯವಾಗಿ ಅದನ್ನು ‘ಆಟೋ ಪೈಲಟ್’ ನಿಯಂತ್ರಣಕ್ಕೆ ಒಳಪಡಿಸುತ್ತಾರೆ. ಚಾಲಕರ ಅಗತ್ಯವೇ ಇಲ್ಲದೆ ವಿಮಾನವು ತನ್ನ ನಿರ್ದೇಶಿತ ಮಾರ್ಗದಲ್ಲಿ ಚಲಿಸುತ್ತದೆ. ವಿಮಾನ ಇಳಿಯುವಾಗ ಮತ್ತೆ ಪೈಲಟ್‍ಗಳು ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಚಾಲನೆ ಮಾಡುತ್ತಾರೆ. ಆದರೆ 737-ಮ್ಯಾಕ್ಸ್ ವಿಮಾನದ ಆಟೋ ಪೈಲಟ್ ವಿನ್ಯಾಸದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ವಿಮಾನದ ಎಂಜಿನ್ ಶಕ್ತಿ ಹಾಗೂ ವಿಮಾನ ಹಾರಿಕೆಯ ನಡುವಿನ ಸಮತೋಲನ ಸಾಧಿಸುವ ವಿಮಾನದ ಮೂಗು ತಗ್ಗಿಸುವ ತಂತ್ರಗಾರಿಕೆಯಲ್ಲಿ ಏರುಪೇರಾಗಿ ವಿಮಾನ ಧರೆಗುರುಳಿದೆ. ಆಟೋ ಪೈಲಟ್ ತಂತ್ರಜ್ಞಾನದ ಮಿತಿ ತಿಳಿಯುವಂತಾಗಿದೆ.

Leave a Reply

Your email address will not be published.