ವಿಶ್ವ ಸಾಹಿತ್ಯದಲ್ಲಿ ಸಾಂಕ್ರಾಮಿಕ ಪಿಡುಗುಗಳು

ಇತ್ತೀಚಿನ ಶತಮಾನಗಳಲ್ಲಿ ಸಂಭವಿಸಿರುವ ಸಾಂಕ್ರಾಮಿಕ ಪಿಡುಗುಗಳ ಬಗ್ಗೆ ಸಹಜವಾಗಿಯೇ ಹಲವಾರು ಕೃತಿಗಳ ರಚನೆಯಾಗಿದ್ದು ಅವು ಪುಸ್ತಕ ಹಾಗೂ ಡಿಜಿಟಲ್ ರೂಪದಲ್ಲಿ ಲಭ್ಯವಿವೆ. ಅವುಗಳಲ್ಲಿ ಆಯ್ದ ಕೆಲವು ಕೃತಿಗಳ ಪರಿಚಯ ಇಲ್ಲಿದೆ.

ಮಾನವ ಇತಿಹಾಸ ಅಸಂಖ್ಯಾತ ಸಾಂಕ್ರಾಮಿಕ ರೋಗಗಳ ಹಾಗೂ ಹಲವಾರು ವಿಶ್ವವ್ಯಾಪಿ ಸೋಂಕು ಪಿಡುಗುಗಳ ಘಟನೆಗಳಿಂದ ಕೂಡಿವೆ. ಕೆಲವು ಪಿಡುಗುಗಳು, ಲಕ್ಷಾಂತರ ಜನಸಂಖ್ಯೆಯ ನಿರ್ನಾಮಕ್ಕೆ ಕಾರಣವಾದರೆ, ಇನ್ನೂ ಕೆಲವು ಸರ್ವವ್ಯಾಪಿ ವ್ಯಾಧಿಗಳು ಕೆಲವೊಮ್ಮೆ ಇಡೀ ನಾಗರಿಕತೆಗಳನ್ನು ಅಳಿವಿನ ಅಂಚಿಗೆ ಕೊಂಡೊಯ್ದಿವೆ. ಕೆಲವು ಐತಿಹಾಸಿಕ ಪಿಡುಗುಗಳ ದಾಖಲೆ ಸಾಹಿತ್ಯ ಹಾಗೂ ವಿವಿಧ ಪ್ರಕಾರಗಳಲ್ಲಿದ್ದು ಇಂದೂ ಸಹ ನಮಗೆ ಲಭ್ಯವಿದೆ. ಇತ್ತೀಚಿನ ಶತಮಾನಗಳಲ್ಲಿ ಸಂಭವಿಸಿರುವ ಸಾಂಕ್ರಾಮಿಕ ಪಿಡುಗುಗಳ ಬಗ್ಗೆ ಸಹಜವಾಗಿಯೇ ಹಲವಾರು ಕೃತಿಗಳ ರಚನೆಯಾಗಿದ್ದು ಅವು ಪುಸ್ತಕ ಹಾಗೂ ಡಿಜಿಟಲ್ ರೂಪದಲ್ಲಿ ಲಭ್ಯವಿವೆ. ಕೆಲವು ಕಾದಂಬರಿಕಾರರು ತಮ್ಮ ಕಲ್ಪನಾ ಪ್ರಪಂಚವನ್ನು ಹರಿಬಿಟ್ಟು ಸಾಂಕ್ರಾಮಿಕ ಪಿಡುಗುಗಳ ಸುತ್ತ ನಮ್ಮ ಮೈ ನಡುಕಹುಟ್ಟಿಸುವಂತಹ ರೋಚಕ ಕಾದಂಬರಿಗಳನ್ನು ಸೃಷ್ಟಿಸಿದ್ದಾರೆ.  ಪ್ರಪಂಚ ಇಂದು ಬದಲಾಗಿದ್ದರೂ ಸಹ, ವಿಶ್ವ ಮಟ್ಟದ ಪಿಡುಗುಗಳಿಗೆ ನಾವು ಐತಿಹಾಸಿಕವಾಗಿ ಪ್ರತಿಕ್ರಿಯಿಸುವ ರೀತಿಯಲ್ಲಿ ಸಾಮ್ಯತೆಯಿಯಿದೆ. ಈ ಪಿಡುಗುಗಳು ನಮ್ಮಲ್ಲಿ ಹುಟ್ಟುಹಾಕುವ ಪ್ರತ್ಯೇಕತೆ, ಹೆದರಿಕೆ, ಕಲ್ಪನೆಗಳು ಹಾಗೂ ಅನಿಶ್ಚಿತತೆ ಸಾರ್ವಕಾಲಿಕವಾಗಿವೆ.

ಜರ್ನಲ್ ಆಫ್ ದಿ ಇಯರ್ ಆಫ್ ಪ್ಲೇಗ್ – ಡ್ಯಾನಿಯಲ್ ಡೆಫೊ

ಲಂಡನ್ನಿಗೆ 1665ರಲ್ಲಿ ಬರುವ ಪ್ಲೇಗ್ ಮಹಾಮಾರಿ ಅಲ್ಲಿ 1666ರ ಅಂತ್ಯದವರೆಗೆ ಸಾವಿನ ನರ್ತನವಾಡುತ್ತಾಳೆ. ಸುಮಾರು ಒಂದು ಲಕ್ಷ ಜನ ಸಾವನಪುö್ಪತ್ತಾರೆ. ಅದು ಲಂಡನ್‌ನ ಅಂದಿನ ಜನಸಂಖ್ಯೆಯ ನಾಲ್ಕನೇ ಒಂದು ಭಾಗ. ಈ ಘಟನೆಯ ದೀರ್ಘ ವಿವರಣೆ ರಾಬಿನ್‌ಸನ್ ಕ್ರೂಸೋ ಖ್ಯಾತಿಯ ಡ್ಯಾನಿಯಲ್ ಡೆಫೊ 1772ರಲ್ಲಿ ಬರೆದ “ಜರ್ನಲ್ ಆಫ್ ದಿ ಪ್ಲೇಗ್ ಇಯರ್” ಕೃತಿಯಲ್ಲಿದೆ.

ಈ ಕೃತಿಯಲ್ಲಿರುವುದು ಡೆಫೊ ಖುದ್ದಾಗಿ ವೀಕ್ಷಿಸಿ ಬರೆದ ಘಟನೆಯಲ್ಲ. ಪ್ಲೇಗ್ ಲಂಡನ್ ನಗರವನ್ನು ಧ್ವಂಸ ಮಾಡುತ್ತಿದ್ದಾಗ ಡ್ಯಾನಿಯಲ್ ಡೆಫೊ ಐದು ವರ್ಷದ ಹುಡುಗನಾಗಿರುತ್ತಾನೆ. ಡೆಫೊ ತನ್ನ ಪುಸ್ತಕ ನಿಜವಾದ ಸಮಕಾಲೀನ ದಾಖಲೆಯೆಂದು ಹೇಳುತ್ತಾನೆ ಹಾಗೂ ಆತ ಪುಸ್ತಕದ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆ ನಡೆಸಿದ ನಿಶ್ಚಿತತೆಯಿದೆ. ಪುಸ್ತಕದಲ್ಲಿ ಪ್ಲೇಗ್ ಲಂಡನ್‌ನ ವಿವಿಧ ನೆರೆಹೊರೆಗಳ ಮೂಲಕ ಸಾಗುವುದರ ಬಗ್ಗೆ ಹಾಗೂ ಪ್ಲೇಗ್‌ನ ವಿರುದ್ಧ ಹೋರಾಡಲು ತೆಗೆದುಕೊಂಡ ಎಚ್ಚರಿಕೆಗಳ ಬಗ್ಗೆ ಹಾಗೂ ಹೆಣಗಳಿಂದ ತುಂಬಿದ ತಳ್ಳುಗಾಡಿಗಳ ಬಗ್ಗೆ ವಿವರಣೆಗಳಿವೆ. ಪುಸ್ತಕದಲ್ಲಿನ ಚಿತ್ರಣ ಕೋವಿಡ್ 19 ಹರಡಲು ಆರಂಭಿಸಿದಾಗ ಮೊದಲು ನಾವು ಹೇಗೆ ಆಘಾತಕ್ಕೊಳಗಾಗಿ ಪ್ರತಿಕ್ರಿಯಿಸಿದೆವೋ ಆ ಕ್ಷಣಗಳನ್ನು ನೆನಪಿಗೆ ತರುತ್ತದೆ.

‘ಪಿಡುಗು’ ಹಾಲೆಂಡ್‌ಗೆ ಬಂದಿದೆ ಎಂಬ ಗಾಳಿಸುದ್ದಿಯೊಂದಿಗೆ ಡೆಫೊ ಆರಂಭಿಸಿತ್ತಾನೆ. ಡಿಸೆಂಬರ್‌ನಲ್ಲಿ ಲಂಡನ್‌ನಲ್ಲಿ ಮೊದಲ ಅನುಮಾನಾಸ್ಪದಕ ಸಾವು ಸಂಭವಿಸುತ್ತದೆ. ವಸಂತ ಋತು ಬರುತ್ತಿದ್ದ ಹಾಗೆ ಸ್ಥಳೀಯ ಪಾದ್ರಿಗಳ ಅಧಿಕಾರವಿದ್ದ ಪ್ರದೇಶಗಳಲ್ಲಿ ಹೆಚ್ಚಿದ್ದ ಸಾವಿನ ಪ್ರಕಟಣೆಗಳು ಭೀತಿ ಹುಟ್ಟಿಸುವ ಮಟ್ಟದಲ್ಲಿ ಹೆಚ್ಚಾಗುತ್ತಿರುತ್ತವೆ. ಜುಲೈ ಹೊತ್ತಿಗೆ ಲಂಡನ್ ನಗರವು, ಸದ್ಯದ (2020) ಲಾಕ್‌ಡೌನ್ ಸಂದರ್ಭದಲ್ಲಿ ಇರುವಂತಹ ಹೊಸ ನಿಯಮಗಳನ್ನು ಪ್ರಕಟಿಸುತ್ತದೆ. ಸಾರ್ವಜನಿಕ ಭೋಜನಾಲಯಗಳು, ಆಲೆಮನೆಗಳು ಹಾಗೂ ಸಾಮಾನ್ಯ ಮನರಂಜನಾ ಸ್ಥಳಗಳನ್ನು ಮುಂದಿನ ಆದೇಶಗಳು ಬರುವವರೆಗೆ ಸ್ಥಗಿತಗೊಳಿಸಬೇಕೆಂಬ ನಿಯಮಗಳನ್ನು ಜಾರಿಗೆ ತರಲಾಗುತ್ತದೆ.

ಡೆಫೊ ಬರೆಯುತ್ತಾನೆ, “ಈ ನಗರದ ನಿವಾಸಿಗಳಿಗೆ ಅವರ ಉದಾಸೀನತೆ ಹಾಗೂ ನಿರ್ಲಕ್ಷ್ಯಕ್ಕಿಂತ ಹೆಚ್ಚು ಮಾರಕವಾದದ್ದು ಯಾವುದು ಇರಲಿಲ್ಲ. ಪ್ಲೇಗ್ ಇದ್ದ ಆ ದೀರ್ಘಾವಧಿಯ ಎಚ್ಚರಿಕೆಯ ಅವಧಿಯಲ್ಲಿ, ಅಗತ್ಯ ಸಾಮಾನುಗಳನ್ನು ಶೇಖರಿಸಿಟ್ಟುಕೊಳ್ಳಲಿಲ್ಲ. ಹಾಗಿದ್ದರೆ ಅವರು ಮನೆಯೊಳಗಿರಬಹುದಿತ್ತು. ಕೆಲವರು ಹಾಗೆ ಮಾಡಿದ್ದನ್ನು ನಾನು ಗಮನಿಸಿದ್ದೇನೆ…”

ಆಗಸ್ಟ್ ನಲ್ಲಿ ಆದ ಘಟಾನಾವಳಿಗಳ ಕುರಿತು ಡೆಫೊ ಹೀಗೆ ಮುಂದುವರೆಸುತ್ತಾನೆ, “ಪ್ಲೇಗ್ ಬಹಳ ಹಿಂಸಾತ್ಮಕವೂ, ಭಯಾನಕವೂ ಆಗಿದೆ. ಸೆಪ್ಟೆಂಬರ್ ವೇಳೆಗೆ ಇದು ತನ್ನ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ತಲುಪುತ್ತದೆ. ಇಡೀ ಕುಟುಂಬಗಳು… ರಸ್ತೆಗಳಲ್ಲಿರುವ ಎಲ್ಲಾ  ಕುಟುಂಬಗಳು ನಾಶವಾಗಲಿವೆ. ಡಿಸೆಂಬರ್ ತಲುಪುವ ಹೊತ್ತಿಗೆ ಸೋಂಕು ದಣಿದಿರುತ್ತದೆ. ಚಳಿಗಾಲದ ಹವಾಮಾನ ಬಂದಿರುತ್ತದೆ. ಗಾಳಿ ಶುಭ್ರ ಹಾಗೂ ತಣ್ಣಗಿದ್ದು ಮೊನಚಾದ ನೀರುಗಡ್ಡೆಗಳಿಂದ ಕೂಡಿರುತ್ತದೆ. ರೋಗಗ್ರಸ್ಥರಾಗಿದ್ದವರಲ್ಲಿ ಬಹುತೇಕರು ಚೇತರಿಸಿಕೊಂಡಿರುತ್ತಾರೆ ಹಾಗೂ ನಗರದ ಆರೋಗ್ಯವು ಯಥಾಸ್ಥಿತಿಗೆ ಬರುತ್ತದೆ.”

ದಿ ಪ್ಲೇಗ್ -ಆಲ್ಬರ್ಟ್ ಕಮೂ

ವಾಸ್ತವಿಕ ಕಾದಂಬರಿಕಾರರಾದ ಡೆಫೊ ಹಾಗೂ ಆಲ್ಬಟ್ ಕಮೂ ಅವರಿಗೆ ಈ ಪಿಡುಗುಗಳ ಚಿತ್ರಣವು ಸ್ವಾಭಾವಿಕವಾಗಿತ್ತು. ಕಮೂ ತನ್ನ ಕೃತಿಗೆ 1899 ರಲ್ಲಿ ಅಲ್ಜೀರಿಯಾದ ಆರನ್‌ನಲ್ಲಿ ಬಹಳಷ್ಟು ಜನಸಂಖ್ಯೆಯನ್ನು ಬಲಿತೆಗೆದುಕೊಳ್ಳೂವ ಕಾಲೆರಾ ಸಾಂಕ್ರಾಮಿಕ ರೋಗದ ಘಟನೆಗಳನ್ನು ಬಳಸಿಕೊಳ್ಳುತ್ತಾನೆ. ಕಮೂವಿನ ಈ ಕೃತಿಯನ್ನು ಫ್ಯಾಸಿಸಂನ ಭಯಾನಕಗಳ ರೂಪಕವಾಗಿಯೂ ನೋಡಬಹುದು.

 

1556 ಹಾಗೂ 1678ರಲ್ಲಿ ಒರನ್ ನಗರ ಬ್ಯೂಬೋನಿಕ್ ಪ್ಲೇಗ್‌ನಿಂದ ತತ್ತರಿಸಿರುತ್ತದೆ. ನಂತರವೂ ಹಲವು ಸಾಂಕ್ರಾಮಿಕ ರೋಗಗಳಿಗೆ ಆರನ್ ತುತ್ತಾಗುತ್ತದೆ. ‘ದಿ ಪ್ಲೇಗ್’ ಕಾದಂಬರಿಯಲ್ಲಿ ಆರನ್ ನಗರವು ಹಲವಾರು ತಿಂಗಳುಗಳ ಕಾಲ ಸ್ಥಗಿತವಾಗಿರುತ್ತದೆ. ಪ್ಲೇಗ್‌ನ ಆರಂಭಿಕ ಸೂಚನೆಗಳು ಬೀದಿಗಳಲ್ಲಿ ತುಂಬಿಹೋಗಿರುವ ಸತ್ತ ಇಲಿಗಳ ರೂಪದಲ್ಲಿ ಬಂದಾಗ ಸ್ಥಳೀಯ ನಾಯಕರುಗಳು ಮೊದಲಿಗೆ ಒಪ್ಪಿಕೊಳ್ಳುವುದಿಲ್ಲ. ಸ್ಥಳೀಯ ಸುದ್ದಿಪತ್ರಿಕೆಯ ಅಂಕಣಕಾರನೊಬ್ಬ, “ನಮ್ಮ ನಗರದ ಪಿತಾಮಹರಿಗೆ ಕೊಳೆಯುತ್ತಿರುವ ಹೆಗ್ಗಣಗಳು ಜನರಿಗೆ ಗಂಭೀರ ಅಪಾಯವನ್ನು ಒಡ್ಡುತ್ತದೆ ಎಂಬ ಅರಿವಿದೆಯೇ?” ಎಂದು ಪ್ರಶ್ನಿಸುತ್ತಾನೆ. ಪುಸ್ತಕದ ನಿರೂಪಕ ಬರ್ನಾರ್ಡ್ ರಿಯೋ, ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ವೈದ್ಯಕೀಯ ಸಿಬ್ಬಂದಿಗಳ ಶೌರ್ಯದ ಮಾತುಗಳನ್ನು ಈ ರೀತಿ ವಿವರಿಸುತ್ತಾನೆ, “ನನಗೆ ಎನೂ ಕಾದಿದೆಯೋ ಎಂದು ಗೊತ್ತಿಲ್ಲ. ಅಥವಾ ಇವೆಲ್ಲಾ ಮುಗಿದ ಮೇಲೆ ಏನಾಗಬಹುದೆಂದು ತಿಳಿದಿಲ್ಲ. ಸದ್ಯಕ್ಕೆ ನನಗೆ ಗೊತ್ತಿರುವುದು ರೋಗಗ್ರಸ್ಥ ಜನರಿದ್ದಾರೆ ಹಾಗೂ ಅವರನ್ನು ಗುಣಪಡಿಸುವ ಅಗತ್ಯವಿದೆ ಎಂಬುದು ಮಾತ್ರ. ಪ್ಲೇಗ್‌ನಿಂದ ಬದುಕುಳಿದವರು ಕೊನೆಯಲ್ಲಿ ಒಂದು ಪಾಠ ಕಲಿತಿರುತ್ತಾರೆ. ಅವರಿಗೆ ಈಗ ಗೊತ್ತಾಗಿರುತ್ತದೆ. ಯಾರಾದರೂ ಯಾವಾಗಲೂ ಬಯಸುವ, ಹಾಗೂ ಕೆಲವೊಮ್ಮೆ ಪಡೆದುಕೊಳ್ಳುವ, ಒಂದೇ ಒಂದು ವಸ್ತುವೆಂದರೆ ಅದು ಮಾನವೀಯ ಪ್ರೀತಿ.”

 

 

 

ದಿ ಘೋಸ್ಟ್ ಮ್ಯಾಪ್ – ಸ್ಟೀವನ್ ಜಾನ್ಸನ್

1854ರ ಆಗಸ್ಟ್ನಲ್ಲಿ ಹಲವಾರು ಬಡ ಲಂಡನ್ನಿಗರು ಹಠಾತ್ತನೆ ರೋಗಗ್ರಸ್ಥರಾಗಿ ಸಾಯಲು ಆರಂಭಿಸುತ್ತಾರೆ. ಹೊಟ್ಟೆ ಉಬ್ಬರ, ವಾಂತಿ, ಕರುಳಿನ ಸೆಳೆತ, ಭೇದಿ ಹಾಗೂ ಬಾಯಾರಿಕೆಗಳು ರೋಗದ ಕುರುಹುಗಳಾಗಿರುತ್ತವೆ. ಸೋಂಕು ಅತ್ಯಂತ ವೇಗವಾಗಿ ಹಬ್ಬುತ್ತಿರುತ್ತದೆ ಹಾಗೂ ಸೋಂಕಿತರು 12 ಗಂಟೆಗಳೊಳಗೆ ಸಾಯುತ್ತಿರುತ್ತಾರೆ. “24 ಗಂಟೆಗಳ ಅವಧಿಯಲ್ಲಿ 70 ಸಾವುಗಳು ಸಂಭವಿಸುತ್ತವೆ. ಹಲವಾರು ಸಾವುಗಳು ಕೇವಲ ಐದು ಸ್ಕ್ವೇರ್ ಬ್ಲಾಕ್‌ಗಳೊಳಗೆ ಸಂಭವಿಸುತ್ತವೆ. ನೂರಾರು ಜೀವಗಳು ಅಪಾಯದಲ್ಲಿರುತ್ತವೆ.”

ದಿ ಹಾಟ್ ಜೋನ್ – ರಿಚರ್ಡ್ ಪ್ರೆಸ್ಟನ್

“ಹಾಟ್ ಜೋನ್ ನಲ್ಲಿರುವ ದೃಶ್ಯಗಳು ನೀವು ಸಿನಿಮಾದಲ್ಲಿ ನೋಡಿದ ದೃಶ್ಯಗಳನ್ನು ನೆನಪಿಸುತ್ತವೆ. ಮೈನಡುಕ ಹುಟ್ಟಿಸುವ ಸಂಗತಿಯೆಂದರೆ ಈ ದೃಶ್ಯಗಳು ಒಬ್ಬ ಕಾದಂಬರಿಕಾರ ಅಥವಾ ಚಿತ್ರಕಥೆಗಾರನ ಕಲ್ಪನೆಯಲ್ಲ. ಅವು ತಿಂಗಳುಗಟ್ಟಲೆ ನ್ಯೂಯಾರ್ಕರ್ ಪತ್ರಿಕೆಗೆ ರಿಚರ್ಡ್ ಪ್ರೆಸ್ಟನ್ ವರದಿ ಮಾಡಿದ ವರದಿಗಳ ಫಲ,” ಎಂದು ಮಿಶಿಕೊ ಕಕುಟನಿ 1994ರ ತನ್ನ ವಿಮರ್ಶೆಯಲ್ಲಿ ಬರೆಯುತ್ತಾರೆ. ಮಾರಕ ಹೊಸ ವೈರಸ್‌ಗಳು ಆಫ್ರಿಕಾದ ಮಳೆ ಕಾಡುಗಳಿಂದ ಹೊರಬರಲು ಆರಂಭವಾಯಿತು ಹಾಗೂ ಅವುಗಳನ್ನು ತಡೆಯಲು ನಡೆಸಿದ ಹೊರಾಟದ ಬಗೆಗಿನ ಚಿತ್ರಣ ಈ ಪುಸ್ತಕದಲ್ಲಿ ದೊರಕುತ್ತದೆ.

ಇನ್ಫ್ಲುಯೆನ್ಝಾ – ಜಿನಾ ಕೊಲಾಟ

 

1918ರ ಸ್ಪ್ಯಾನಿಷ್ ಫ್ಲೂ ಸರ್ವವ್ಯಾಪಿ ವ್ಯಾಧಿಯಾದಾಗ ಪ್ರಪಂಚದ ಯಾವುದೇ ತಾಣವೂ ಸುರಕ್ಷಿತವಾಗಿರುವುದಿಲ್ಲ. ನಿರ್ಜನ ಶೀತ ಪ್ರದೇಶಗಳಲ್ಲಿರುವ ಎಸ್ಕಿಮೋಗಳು ಅಸ್ವಸ್ಥರಾಗಿ ಎಷ್ಟು ಪ್ರಮಾಣದಲ್ಲಿ ಸಾವನಪ್ಪುತ್ತಾರೆಂದರೆ, ಇಡೀ ಹಳ್ಳಿಗಳೇ ನಿರ್ನಾಮವಾಗಿಬಿಡುತ್ತವೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಖ್ಯಾತ ವರದಿಗಾರ್ತಿ ಈ ಮಾರಕ ವೈರಸ್‌ನ ರಹಸ್ಯ ಭೇದಿಸುವುದನ್ನು ಮುಖ್ಯ ವಸ್ತುವನ್ನಾಗಿಟ್ಟುಕೊಂಡು ಈ ಕೃತಿಯನ್ನು ರಚಿಸಿದ್ದಾರೆ. ವಿಜ್ಞಾನಿಗಳು ಅಲಾಸ್ಕಾದ ಒಂದು ಸರ್ಕಾರಿ ಗೋದಾಮಿನಲ್ಲಿ ಅಂಗಾಂಶದ ಚೂರುಗಳಲ್ಲಿ ಸ್ಪ್ಯಾನಿಷ್ ಫ್ಲೂ ವೈರಸ್ ಸಂರಕ್ಷಿತವಾಗಿರುವುದನ್ನು ಪತ್ತೆಹಚ್ಚುವುದರೊಂದಿಗೆ ತೆರೆದುಕೊಳ್ಳುವ ಈ ಕೃತಿ ಒಂದು ಅದ್ಭುತ ಸಾಹಸಕಥೆಯ ನಾಟಕೀಯತೆಯನ್ನು ಹೊಂದಿದೆ. ಕೊಲಾಟ ಇಂತಹದೊಂದು ಮಹಾ ಪಿಡುಗು ಮರುಕಳಿಸುವ ಸಾಧ್ಯತೆಯ ಬಗ್ಗೆ ಬರೆಯುತ್ತಾರೆ. ಜೊತೆಗೆ, ಮುಖ್ಯವಾಗಿ ಅದನ್ನು ಹೇಗೆ ತಡೆಯಬಹುದು ಎಂಬುದನ್ನು ಹೇಳುತ್ತಾರೆ.

 

 

 

ಪೇಲ್ ಹಾರ್ಸ್, ಪೇಲ್ ರೈಡರ್ – ಕ್ಯಾಥರಿನ್ ಅನ್ ಪೋರ್ಟರ್

1918ರ ಸ್ಪ್ಯಾನಿಷ್ ಫ್ಲೂನ ನಾಟಕೀಯ ಜಾಗತಿಕ ಪರಿಣಾಮವನ್ನು, ಇದಕ್ಕಿಂತಲೂ ಹೆಚ್ಚು ನಾಟಕೀಯ ಘಟನೆಗಳನ್ನು ಒಳಗೊಂಡ ಮೊದಲ ವಿಶ್ವಯುದ್ಧ ಮರೆಮಾಡುತ್ತದೆ. ಯುದ್ಧವು ಹಲವಾರು ಕಾದಂಬರಿಗಳ ರಚನೆಗೆ ಕಾರಣವಾಗುತ್ತದೆ. ಈಗ ನಾವು ಆಚರಿಸುತ್ತಿರುವ ಸಾಮಾಜಿಕ ಅಂತರದ ರೀತಿಯಲ್ಲೇ ಆಗ ಜಗತ್ತಿನಾದ್ಯಂತ ಸಮುದಾಯಗಳು ಲಾಕ್‌ಡೌನ್‌ಗೆ ತಳ್ಳಲ್ಪಡುತ್ತವೆ. 1939ರಲ್ಲಿ ಕ್ಯಾಥರಿನ್ ಅನ್ ಪೋರ್ಟರ್ ಬರೆದ ‘ಪೇಲ್ ಹಾರ್ಸ್, ಪೇಲ್ ರೈಡರ್’ ಕಾದಂಬರಿ 1918ರ ಸ್ಪ್ಯಾನಿಷ್ ಫ್ಲೂ ಸೃಷ್ಟಿಸಿದ ವಿನಾಶದ ಬಗ್ಗೆ ವಿವರಣೆ ನೀಡುತ್ತದೆ. ಕಾದಂಬರಿಯನ್ನು ಸೈನಿಕನೊಡನೆ ಪ್ರೇಮದಲ್ಲಿ ಸಿಲುಕಿಕೊಳುವ ಯುವತಿಯೊಬ್ಬಳ ಸುತ್ತ ಹೆಣೆಯಲಾಗಿದೆ. ನೂರು ವರ್ಷಗಳ ಹಿಂದಿನ ಹಿನ್ನೆಲೆಯಿದ್ದರೂ ಈ ಕೃತಿ ಸಮಕಾಲೀನತೆಯನ್ನು ಪ್ರತಿಫಲಿಸುತ್ತದೆ.

“ಇದು ಯಾವುದು ಎಷ್ಟು ಕೆಟ್ಟದಾಗಬಹುದೋ ಅಷ್ಟು ಕೆಟ್ಟದಿದೆ. ಎಲ್ಲ ಥಿಯೇಟರ್‌ಗಳು, ಎಲ್ಲಾ ಅಂಗಡಿಗಳು ಹಾಗೂ ರೆಸ್ಟೋರೆಂಟ್‌ಗಳು ಮುಚ್ಚಲ್ಪಟ್ಟಿವೆ. ಎಲ್ಲಾ ರಸ್ತೆಗಳಲ್ಲಿ ದಿನಗಳು ಅಂತ್ಯಕ್ರಿಯೆಗಳಿಂದ ಹಾಗೂ ರಾತ್ರಿಗಳು ಆ್ಯಂಬುಲೆನ್ಸ್ಗಳಿಂದ ತುಂಬಿವೆ.” ಕಾದಂಬರಿಯ ನಾಯಕಿ ಮಿರಾಂಡಳಿಗೆ ಶೀತಜ್ವರವಿದೆಯೆಂದು ಪತ್ತೆಯಾದ ನಂತರ ಆಕೆಯ ಸ್ನೇಹಿತೆ ಅಡಮ್, ಮಿರಾಂಡಳಿಗೆ ಹೇಳುತ್ತಾಳೆ.

ಮಿರಾಂಡಳ ಜ್ವರ ಹಾಗೂ ಔಷಧಿಗಳ ಬಗ್ಗೆ, ವಾರಗಟ್ಟಲೆ ಉಳಿದುಕೊಳ್ಳುವ ರೋಗ ಹಾಗೂ ಚೇತರಿಕೆಯ ಕುರಿತು ಹಾಗೂ ಅವಳು  ಹಾಗೂ ಯುದ್ಧದಿಂದ ಮರುರೂಪಗೊಂಡಿರುವ ಹೊಸ ಜಗತ್ತಿಗೆ ಎಚ್ಚರಗೊಳ್ಳುವುದರ ಬಗ್ಗೆ ಚಿತ್ರಣ ನೀಡುತ್ತಾಳೆ.

ಪೋರ್ಟರ್ ಸಹ ಶೀತಜ್ವರಕ್ಕೊಳಗಾಗಿ ಸಾವಿನ ಅಂಚಿನಿರುತ್ತಾಳೆ. ‘ಪ್ಯಾರಿಸ್ ರಿವ್ಯೂವ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪೋರ್ಟರ್ ಹೀಗೆ ಹೇಳುತ್ತಾರೆ. “ನಾನು ಆಶ್ಚರ್ಯಕರ ರೀತಿಯಲ್ಲಿ ಬದಲಾದೆ. ಹೊರಗಿನ ಪ್ರಪಂಚದಲ್ಲಿ ಬದುಕಲು ದೀರ್ಘ ಕಾಲ ಬೇಕಾಯಿತು.”

ದಿ ಗ್ರೇಟ್ ಮೊರ್ಟಾಲಿಟಿ – ಜಾನ್ ಕೆಲ್ಲಿ

 

14ನೇ ಶತಮಾನದಲ್ಲಿ ಬ್ಯುಬೋನಿಕ್ ಪ್ಲೇಗ್ ಅಪ್ಪಳಿಸುತ್ತದೆ. ಐದು ವರ್ಷಗಳಲ್ಲಿ 25 ಮಿಲಿಯನ್ ಜನರನ್ನು ನಿರ್ನಾಮಗೊಳಿಸಿ ಹೆಮ್ಮಾರಿ ನಿರ್ಗಮಿಸಿದಾಗ ಪ್ರಪಂಚ ಎಂದಿನಂತಿರುವುದಿಲ್ಲ. ಹೊಸ ರಾಜಕೀಯ, ವಾಣಿಜ್ಯ ಹಾಗೂ ಸಾಮಾಜಿಕ ಏರ್ಪಾಟುಗಳು ಎಲ್ಲವನ್ನೂ ಬದಲಿಸುತ್ತವೆ. ಕೆಲ್ಲಿಯ ವಿವರಣೆ ವಿವರವಾಗಿಯೂ ಒದಿಸಿಕೊಂಡು ಹೋಗುವಂತದ್ದಾಗಿಯೂ ಇದೆ. ಮನುಷ್ಯನ ಅತ್ಯಂತ ಕರಾಳ ದಿನಗಳ ಮೇಲೆ ಬೆಳಕು ಬೀರುವ ದಿ ಗ್ರೇಟ್ ಮೊರ್ಟಾಲಿಟಿ ಧೈರ್ಯ, ಹೇಡಿತನ, ದುರ್ದೆಸೆ, ಹುಚ್ಚು ಹಾಗೂ ತ್ಯಾಗದ ನಾಟಕವಾಗಿದೆ. ಊಹಿಸಿಕೊಳ್ಳಲು ಸಾಧ್ಯವಿಲ್ಲದ ದುರಂತದ ದೊಡ್ಡ ಚಿತ್ರಣ ನೀಡುವುದರ ಜೊತೆಗೆ, ಸೂಕ್ಷ÷್ಮ ವಿವರಗಳೊಂದಿಗೆ ಮಾನವೀಯತೆಗೂ ಆಸ್ಪದ ನೀಡಿ ಎದ್ದು ನಿಲ್ಲುವ ಕೃತಿ ಇದಾಗಿದೆ.

 

 

 

 

 

ದಿ ಇಯರ್ ಆಫ್ ದಿ ಫ್ಲಡ್ – ಮಾರ್ಗರೆಟ್ ಅಟ್ವುಡ್

ಇಪ್ಪತ್ತೊಂದನೇ ಶತಮಾನದ ಪಿಡುಗುಗಳು ಸಹ ಪ್ಲೇಗ್ ನಂತರದ ನಿರ್ಜನತೆ, ನಿರ್ಜನ ನಗರಗಳು ಹಾಗೂ ಧ್ವಂಸಗೊಂಡ ಭೂದೃಶ್ಯಗಳ ಕುರಿತು ಹಲವಾರು ಕಾದಂಬರಿಗಳಿಗೆ ಸ್ಫೂರ್ತಿ ನೀಡಿವೆ. ಮಾರ್ಗರೆಟ್ ಅಟ್ವುಡ್ 2009ರಲ್ಲಿ ರಚಿಸಿದ ‘ದಿ ಇಯರ್ ಆಫ್ ದಿ ಫ್ಲಡ್,’ ಪಿಡುಗಿನ ನಂತರ ಮಾನವ ಹೆಚ್ಚು ಕಡಿಮೆ ಅಳಿದು ಹೋಗಿರುವ ಚಿತ್ರಣವನ್ನು ತೆರೆದಿಡುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ‘ವಾಟರ್‌ಲೆಸ್ ಫ್ಲಡ್’ ಎಂಬ ತೀಕ್ಷ್ಣ ಪ್ಲೇಗ್ ಗಾಳಿಯಲ್ಲಿ ರೆಕ್ಕೆಯ ಮೇಲೆ ಹಾರುತ್ತಿದೆಯೇನೋ ಎಂಬಂತೆ ಪ್ರಯಾಣಿಸುತ್ತಾ ನಗರಗಳನ್ನು ಸುಡುತ್ತಾ ಹೋಗುತ್ತದೆ. ಅಟ್ವುಡ್, ಬದುಕುಳಿದಿರುವ ಕೆಲವೇ ಕೆಲವು ಮಂದಿ ಅನುಭವಿಸುವ ಅತೀವ ಪ್ರತ್ಯೇಕತೆಯನ್ನು ಹಿಡಿದಿಡುತ್ತಾರೆ. ತೋಟಗಾರ್ತಿ ಟೋಬಿ ಒಂದು ನಿರ್ಜನ ಸ್ಪಾದಲ್ಲಿ ತನ್ನ ಜೀವನಾಧಾರಕ್ಕಿರುವ ಛಾವಣಿಯ ಮೇಲ್ಭಾಗದ ತೋಟದ ಮುಂದೆ ನಿಂತು, ತನ್ನ ಕಣ್ಣಿನ ದೃಷ್ಟಿ ತಲುಪುವಷ್ಟು ದೂರದವರೆಗೂ ಪರೀಕ್ಷಿಸುತ್ತಾಳೆ. “ಯಾರಾದರೊಬ್ಬರು ಉಳಿದಿರಬಹುದು. ಈ ಗ್ರಹದಲ್ಲಿ ಅವಳೊಬ್ಬಳೆ ಇರಲು ಸಾಧ್ಯವಿಲ್ಲ. ಇತರರು ಇರಬೇಕು. ಆದರೆ ಸ್ನೇಹಿತರಾ? ವಿರೋಧಿಗಳಾ? ಅವಳು ಯಾರೊಬ್ಬರನ್ನಾದರೂ ನೋಡಿದರೆ ಅದನ್ನು ಹೇಗೆ ಹೇಳುವುದು?”

ಸರ್ಕಸ್‌ನಲ್ಲಿ ನರ್ತಕಿಯಾಗಿದ್ದ ರೆನ್ ಗಿರಾಕಿಗಳಿಂದ ಹರಡಬಹುದಾಗಿದ್ದ ಸೋಂಕಿನಿಂದ ರಕ್ಷಿಸಿಕೊಳ್ಳಲು ದಿಗ್ಬಂಧನದಲ್ಲಿದ್ದದ್ದೇ ಆಕೆ ಬದುಕುಳಿಯಲು ಕಾರಣವಾಗಿತ್ತು. ಆಕೆ ತನ್ನ ಹೆಸರನ್ನು ಪದೇ ಪದೇ ಬರೆಯುತ್ತಾಳೆ. “ನೀನು ಏಕಾಂಗಿಯಾಗಿ ತುಂಬಾ ಸಮಯ ಕಳೆದುಬಿಟ್ಟರೇ ನೀನು ಯಾರು ಎಂಬುದನ್ನೇ ಮರೆಯಬಹುದು.”

ನೆನಪುಗಳ ಮೂಲಕ ಅಟ್ವುಡ್, ಹೇಗೆ ಆಡಳಿತ ಮಾಡುತ್ತಿರುವ ಸಂಸ್ಥೆಗಳು ಪ್ರಾಯೋಜಿಸಿದ ಬಯೋ-ಇಂಜಿನಿಯರಿಂಗ್ ಯಾವ ರೀತಿ ಪ್ರಕೃತಿ ಹಾಗೂ ಮಾನವನ ಪ್ರಪಂಚಗಳ ನಡುವಿನ ಸಮತೋಲನವನ್ನು ನಾಶಮಾಡಿತು ಹಾಗೂ ತೋಬಿಯಂತಹ ಕಾರ್ಯಕರ್ತರು ಹೇಗೆ ಅದರ ವಿರುದ್ಧ ಹೋರಾಡಿದರು ಎಂಬುದನ್ನು ವಿವರಿಸುತ್ತಾರೆ. ವಿಜ್ಞಾನದ ಪ್ರತಿ ಕಾಲ, ಪರಿಣಾಮಗಳ ಬಗ್ಗೆ ಯಾವಾಗಲೂ ಜಾಗೃತವಾಗಿರುವ ಅಟ್ವುಡ್ ಎಲ್ಲಾ ಸಮಂಜಸ ಆವರಣಗಳನ್ನು ಒದಗಿಸುವ ಮೂಲಕ ‘ದಿ ಇಯರ್ ಆಫ್ ದಿ ಫ್ಲಡ್’ ಪುಸ್ತಕವನ್ನು ಒಂದು ಭಯಾನಕ ಭವಿಷ್ಯವನ್ನಾಗಿ ಮಾಡಿದ್ದಾರೆ.

ಸೆವೆರೆನ್ಸ್ – ಲಿಂಗ್ ಮಾ

ಬರಹಗಾರ್ತಿ ಲಿಂಗ್ ಮಾ, ವಲಸೆಗಾರರ ಹಿನ್ನೆಲೆಯನ್ನು ಹೊಂದಿರುವ ತಮ್ಮ ‘ಸವೆರೆನ್ಸ್’ ಕಾದಂಬರಿಯನ್ನು ಕಾಲಜ್ಞಾನದ ಆಫೀಸ್ ನಾವೆಲ್ ಎಂದು ಹೇಳಿಕೊಂಡಿದ್ದಾರೆ. ಕ್ಯಾಂಡೆಸ್ ಚೆನ್ ಕಾದಂಬರಿಯ ನಿರೂಪಕಿ. 2011ರ ಕಾಲ್ಪನಿಕ ಶೆನ್ ಜ್ವರದ ಸಂದರ್ಭದಲ್ಲಿ ನ್ಯೂಯಾರ್ಕ್ ಬಿಡುವವರ ಪೈಕಿ ಬದುಕುಳಿಯುವ ಕೆಲವರ ಪೈಕಿ ಈಕೆ ಒಬ್ಬಳಾಗಿರುತ್ತಾಳೆ. ಮಾ ಮೂಲಭೂತಸೌಕರ್ಯಕುಸಿದುಬಿದ್ದ ನಂತರದ ನಗರದ ಚಿತ್ರಣವನ್ನು ಹೀಗೆ ನೀಡುತ್ತಾರೆ. “ಮೂಲಭೂತ ಸೌಕರ್ಯ ಕುಸಿದಿದೆ. ಅಂತರ್ಜಾಲ ಬತ್ತುಕುಳಿಯಲ್ಲಿ ಕುಸಿದಿದೆ. ವಿದ್ಯುತ್ ಗ್ರಿಡ್ ಶಟ್ ಡೌನ್ ಆಗಿದೆ…”

ಕ್ಯಾಂಡೇಸ್ ಶಿಕಾಗೋದ ಹೊರಹೊಲಯದ ಮಾಲ್ ಒಂದರಲ್ಲಿ ನೆಲೆಗೊಳ್ಳಲು ಹೊರಟಿರುವ ಗುಂಪನ್ನು ಸೇರುತ್ತಾಳೆ. ಆ ಗುಂಪು ಜ್ವರವಿರುವ ಜನರು ನೆಲಸಿರುವ ಜಾಗಗಳ ಮೂಲಕ ಪ್ರಯಾಣಿಸುತ್ತದೆ. ಬದುಕುಳಿದಿರುವವರು ಗೊತ್ತುಗುರಿಯಿಲ್ಲದೇ ಪ್ರತಿರೋಧಕ ಶಕ್ತಿ ಹೊಂದಿರುವರೇ? ಅಥವಾ ದೈವಿಕ ಮಾರ್ಗದರ್ಶನದಿಂದ ಆಯ್ಕೆಯಾಗಿರುವರೇ? ಇತ್ಯಾದಿ ಪ್ರಶ್ನೆಗಳನ್ನು ಲಿಂಗ್ ಕೇಳುತ್ತಾರೆ.

ಈಗ ನಮ್ಮ ಪರಿಸ್ಥಿತಿ ಸೆವೆರೆನ್ಸ್ನಲ್ಲಿ ಕಲ್ಪಿಸಿಕೊಂಡಿರುವಷ್ಟು ಭಯಾನಕವಾಗಿಲ್ಲ. ಲಿಂಗ್ ಮಾ ತೋರಿಸಿರುವ ಅತ್ಯಂತ-ಕೆಟ್ಟ ಪರಿಸ್ಥಿತಿಯನ್ನು ನಾವು ಸದ್ಯ ಎದುರಿಸುತ್ತಿಲ್ಲ. ಈ ಕಾದಂಬರಿಯಲ್ಲಿ ಆಕೆ ಪಿಡುಗು ತೊಲಗಿದ ನಂತರ ಆಕೆಯ ಕಲ್ಪಿತ ಪ್ರಪಂಚಕ್ಕೆ ಏನಾಗುತ್ತದೆ ಎಂಬುದರ ಬಗ್ಗೆ ನೋಟ ಹರಿಸುತ್ತಾರೆ. ಕೆಟ್ಟದು ಮುಗಿದ ಮೇಲೆ, ಸಮುದಾಯ ಹಾಗೂ ಸಂಸ್ಕöತಿಯನ್ನು ಪುನರ್ ನಿರ್ಮಿಸುವ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಯದ್ವಾತದ್ವಾ ಬದುಕುಳಿದಿರುವವರ ಪೈಕಿ ಯಾರಿಗೆ ಅಧಿಕಾರವಿದೆಯೆಂದು ಯಾರು ನಿರ್ಧರಿಸುತ್ತಾರೆ? ಧಾರ್ಮಿಕ ಆಚರಣೆಗಳಿಗೆ ಮಾರ್ಗಸೂಚಿಗಳನ್ನು ಯಾರು ರೂಪಿಸುತ್ತಾರೆ…?

ಸ್ಟೇಷನ್ ಇಲೆವೆನ್ – ಎಮಿಲಿ ಸೇಂಟ್ ಜಾನ್ ಮಡೇಲ್

ಎಮಿಲಿ ಸೇಂಟ್ ಜಾನ್ ಮಂಡೇಲ್ 2014ರಲ್ಲಿ ಬರೆದ ಕಾದಂಬರಿ ‘ಸ್ಟೇಷನ್ ಇಲೆವೆನ್’ ಅನ್ನು ರಿಪಬ್ಲಿಕ್ ಆಫ್ ಜಾರ್ಜಿಯಾದಲ್ಲಿ ಉಗಮಿಸುವ ಅತ್ಯಂತ ಉಗ್ರ ಸಾಂಕ್ರಾಮಿಕ ಫ್ಲೂನ ಸುತ್ತ ಹೆಣೆಯಲಾಗಿದೆ. “ಈ ಪಿಡುಗು ನ್ಯೂಕ್ಲಿಯರ್ ಬಾಂಬ್‌ನಂತೆ ಸ್ಫೋಟಿಸಿ ಜಗತ್ತಿನ ಶೇಕಡ 99ರಷ್ಟು ಜನಸಂಖ್ಯೆಯನ್ನು ಅಳಿಸಿಹಾಕುತ್ತದೆ.” ಎಂದು ಬರೆಯುವ ಮಂಡೇಲ್ ತಮ್ಮ ಕೃತಿಯಲ್ಲಿ ಕೆಲವು ಮೂಲ ಪ್ರಶ್ನೆಗಳನ್ನು ಕೇಳುತ್ತಾರೆ. ಯಾರು ಮತ್ತು ಯಾವುದು ಕಲೆಯನ್ನು ನಿರ್ಧರಿಸುತ್ತದೆ? ಸೆಲೆಬ್ರಿಟಿ ಸಂಸ್ಕೃತಿ ಮುಖ್ಯವೇ? ಈ ವೈರಸ್‌ನ ನಂತರ ನಾವು ಹೇಗೆ ಎಲ್ಲವನ್ನು ಪುನರ್‌ನಿರ್ಮಿಸುತ್ತೇವೆ…?

 

 

 

 

 

ಈಗ ಕೋವಿಡ್ 19 ನಂತರದ ಜಗತ್ತಿನಲ್ಲಿ ಇಂತಹ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳಲಿವೆ. 

Leave a Reply

Your email address will not be published.