ವೀಕ್ಷಕವಿವರಣೆ: ಕ್ರೀಡಾಲೋಕದಲ್ಲಿ ಕನ್ನಡ ನುಡಿನಡಿಗೆ

ಈವರೆಗೆ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಪ್ರಸಾರವಾಗುವ ವೀಕ್ಷಕವಿವರಣೆಗೆ ಕನ್ನಡದ ಪ್ರೇಕ್ಷಕ ಹೊಂದಿಕೊಂಡಿದ್ದ. ಇದೀಗ ಕ್ರೀಡಾ ಜಗತ್ತಿನ ಪ್ರಮುಖ ಚಾನೆಲ್, ‘ಸ್ಟಾರ್ ಸ್ಪೋಟ್ರ್ಸ್’, ಪ್ರಾದೇಶಿಕ ಭಾಷೆಗಳಲ್ಲಿ ಕ್ರೀಡೆಯ ವೀಕ್ಷಕವಿವರಣೆ ನೀಡಲು ಶುರುಮಾಡಿದೆ. ಇದು ಹೊಸಕಾಲದ ತಾಂತ್ರಿಕ ಬೆಳವಣಿಗೆಯೊಂದಿಗೆ ಕನ್ನಡ ನುಡಿಯ ನಡಿಗೆ.

ಕ್ರಿಕೆಟ್ ವೀಕ್ಷಕವಿವರಣೆ ಕೇಳಲು ರೇಡಿಯೋಗೆ ಕಿವಿಯಾದ ಅನುಭವ ಹಳೆಯ ತಲೆಮಾರಿನ ಎಲ್ಲರಿಗೂ ಇರುತ್ತದೆ. ಪಂದ್ಯಾವಳಿ ವಿದೇಶಗಳಲ್ಲಿ ನಡೆದಾಗ ಭಾರತದ ಸಮಯ ವ್ಯತಿರಿಕ್ತವಾಗಿರುತ್ತದೆ. ಆದರೂ ಕೇಳುವ ಉತ್ಸಾಹ ಭಂಗವಾಗಲಾರದು. ಕಾಮೆಂಟರಿ ಅರ್ಥಾತ್ ವೀಕ್ಷಕವಿವರಣೆ ಆಲಿಸುವುದು ಕ್ರೀಡೆ ಬಗ್ಗೆ ಆಸಕ್ತಿಯುಳ್ಳ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ರೇಡಿಯೋ ಅಥವಾ ಟಿವಿಗಳಲ್ಲಿ ನಮ್ಮದೇ ಭಾಷೆಯಲ್ಲಿ ಕಾಮೆಂಟರಿ ಬಿತ್ತರವಾದರಂತೂ ಅತ್ಯಾಪ್ತವಾಗಿರುತ್ತದೆ, ಪರಮಾನಂದ ನೀಡುತ್ತದೆ.

ಪ್ರಾದೇಶಿಕವಾಗಿ ರಣಜಿ ಅಥವಾ ದೇಶೀಯ ಕ್ರಿಕೆಟ್ ಟೂರ್ನಿಗಳ ವೇಳೆ ರೇಡಿಯೋ ವೀಕ್ಷಕವಿವರಣೆ ಕನ್ನಡದಲ್ಲೇ ಇರುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಆರಂಭವಾದ ಬಳಿಕ ಕನ್ನಡ ಚಾನೆಲ್‍ಗಳು ನೇರಪ್ರಸಾರಕ್ಕೆ ಮುಂದಾಗಿದ್ದು, ಕನ್ನಡದಲ್ಲೇ ವೀಕ್ಷಕವಿವರಣೆ ನೀಡುತ್ತಿವೆ. ಇದೀಗ ಪ್ರಾದೇಶಿಕ ಭಾಷೆಗಳಲ್ಲಿ ಕಾಮೆಂಟರಿ ನೀಡುವ ವಿದ್ಯಮಾನಕ್ಕೆ ತೆರೆದುಕೊಂಡಿರುವುದು ಜಗತ್ತಿನ ಪ್ರಭಾವಿ ಕ್ರೀಡಾ ಚಾನಲ್ ‘ಸ್ಟಾರ್ ಸ್ಪೋಟ್ರ್ಸ್’.

ಸ್ಟಾರ್ ಸ್ಪೋಟ್ರ್ಸ್‍ನಂತಹ ಪ್ರಸಿದ್ಧ ಕ್ರೀಡಾ ಚಾನೆಲ್‍ನಲ್ಲಿ ಪ್ರಾದೇಶಿಕವಾಗಿ ಒಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಸಾಕಷ್ಟು ಸಾಧಕಬಾಧಕಗಳ ಅಧ್ಯಯನ ನಡೆಸಿಯೇ ಮುಂದಡಿ ಇಡಲಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡದ ಆಯ್ಕೆ ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆ ತಂದಿದೆ. ಏಕೆಂದರೆ ನಿರ್ದಿಷ್ಟ ಪ್ರಾದೇಶಿಕ ಭಾಷೆಯ ಚಾನೆಲ್ ಉಪಗ್ರಹ ಆಧಾರಿತ ಆಗಿರುವುದರಿಂದ ಸಹಜವಾಗಿಯೇ ವಿಶ್ವವ್ಯಾಪಿಯಾಗಿ ಬಿತ್ತರಿಸಲಾಗುತ್ತದೆ. ಹಾಗಾಗಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಕನ್ನಡಿಗ ಮಾತೃಭಾಷೆಯಲ್ಲೇ ವೀಕ್ಷಕವಿವರಣೆ ಆಲಿಸಿ ಸಂಭ್ರಮ ಪಡಬಹುದು. ಇದು ಕೇವಲ ದೃಶ್ಯಮಾಧ್ಯಮಗಳಿಗೆ ಸೀಮಿತವಾಗಿಲ್ಲ. ಶ್ರವ್ಯ ಮಾಧ್ಯಮಗಳು ಕೂಡಾ ಇದನ್ನೇ ಅನುಕರಿಸುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎನ್ನಬಹುದು.

ಆಟದ ಅರಿವೇ ಗುರು

ಕ್ರಿಕೆಟ್‍ನ ವೀಕ್ಷಕವಿವರಣೆ ಸುಲಭವಲ್ಲ. ಅದರಲ್ಲೂ ಇಂಗ್ಲಿಷ್‍ನಷ್ಟು ಸುಲಲಿತವಾಗಿ ಕನ್ನಡದಲ್ಲಿ ಪದಬಳಕೆ ಕಷ್ಟಸಾಧ್ಯ. ಅದಕ್ಕೆ ಅನುಭವ ಮತ್ತು ಕ್ರೀಡೆಯ ತಾಂತ್ರಿಕ ಅಂಶಗಳ ಪ್ರಾವೀಣ್ಯ ಅತ್ಯಗತ್ಯ. ಏಕೆಂದರೆ ನೇರಪ್ರಸಾರದ ವೇಳೆ ಆಟದ ವೇಗಕ್ಕೆ ವೀಕ್ಷಕವಿವರಣೆಯ ಓಘವೂ ಹೊಂದಾಣಿಕೆ ಆಗಬೇಕು. ಕ್ರೀಡೆಯ ಆಳ ಅರಿವಿದ್ದರೆ ಮಾತ್ರ ಒಬ್ಬ ಅತ್ಯುತ್ತಮ ವೀಕ್ಷಕ ವಿವರಣೆಕಾರ ಆಗಬಹುದು. ಇತ್ತೀಚಿನ ದಿನಗಳಲ್ಲಿ ಮಾಜಿ ಕ್ರಿಕೆಟಿಗರೇ ವೀಕ್ಷಕ ವಿವರಣೆಕಾರರಾಗಿ ಬದಲಾಗುತ್ತಿರುವುದು ತಾಂತ್ರಿಕವಾಗಿ ಮತ್ತು ವೃತ್ತಿಪರ ದೃಷ್ಟಿಯಿಂದ ಉತ್ತಮ ಬೆಳವಣಿಗೆ.

ವೀಕ್ಷಕವಿವರಣೆಯ ಒಂದು ಝಲಕ್
`ಪೆವಿಲಿಯನ್ ತುದಿಯಿಂದ ಬೌಲಿಂಗ್‍ಗೆ ತಯಾರಾದ ಬೌಲರ್. ತನ್ನ ಪ್ಯಾಂಟ್‍ಗೆ ಚೆಂಡನ್ನು ಉಜ್ಜಿ ಹೊಳಪು ಕೊಟ್ಟು… ಓಡಿಬಂದು ಎಸೆದ ಚೆಂಡು ಗಾಳಿಯಲ್ಲಿ ತೇಲಿ ಬಂದು.. ನೇರವಾಗಿ ಬ್ಯಾಟ್ಸ್‍ಮನ್ ಪ್ಯಾಡ್‍ಗೆ ಅಪ್ಪಳಿಸಿದೆ.. ಬೌಲರ್‍ನಿಂದ ಎಲ್‍ಬಿಡಬ್ಲ್ಯೂಗೆ ಬಲವಾದ ಮನವಿ. ಸ್ಪಂದಿಸಿದ ತೀರ್ಪುಗಾರರಿಂದ ಔಟ್ ನಿರ್ಧಾರ.. ಬೌಲರ್ ಎಸೆದ ಚೆಂಡನ್ನು ಬಲವಾಗಿ ಬೀಸಿ ಸೀಮಾರೇಖೆ ದಾಟಿಸಿದ ಬ್ಯಾಟ್ಸ್‍ಮನ್‍ನಿಂದ ಆರು ರನ್ ಗಳಿಕೆ…’.

ಸ್ಟಾರ್ ಸ್ಪೋಟ್ರ್ಸ್‍ನಂತಹ ಚಾನೆಲ್‍ಗೆ ಪ್ರಾದೇಶಿಕ ಭಾಷೆಯಲ್ಲಿ ವೀಕ್ಷಕವಿವರಣೆ ನೀಡಬೇಕೆಂಬ ಕಲ್ಪನೆ ಬಂದಿದ್ದೇ ಬಹುದೊಡ್ಡ ಸಕಾರಾತ್ಮಕ ಸಂಗತಿ. ಇದರ ಹಿಂದಿನ ಸತ್ಯವನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರು ನಮ್ಮ ವೀಕ್ಷಕರಲ್ಲ ಎಂಬುದೂ ಅಷ್ಟೇ ವಾಸ್ತವ.

ವಿರಾಜಮಾನ ವಾಣಿಜ್ಯ

ಹೌದು, ಎಲ್ಲದರಂತೆ ಇಲ್ಲೂ ವಾಣಿಜ್ಯ ದೃಷ್ಟಿಯೇ ಪ್ರಮುಖ ಸ್ಥಾನ ಪಡೆಯುತ್ತದೆ. ಮೊದಲು ತಮಿಳು, ಬಳಿಕ ತೆಲುಗು, ಬಂಗಾಳಿ ಭಾಷೆಯಲ್ಲಿ ಸ್ಟಾರ್ ವೀಕ್ಷಕವಿವರಣೆ ಆರಂಭಿಸಿತು. ಮಾರುಕಟ್ಟೆ ಮತ್ತು ನೋಡುಗರ ಆಸಕ್ತಿ ಪರಿಗಣಿಸಿ ನಂತರದಲ್ಲಿ ಕನ್ನಡಕ್ಕೂ ವಿಸ್ತರಿಸಿತು. ಅಂದರೆ ಕರ್ನಾಟಕದ ಜಾಹೀರಾತು ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಕೇವಲ ಏಳೆಂಟು ತಿಂಗಳಲ್ಲಿ ಬಹುಕೋಟಿ ಬಾಚುವ ಹಂತಕ್ಕೆ ಚಾನೆಲ್ ಬಂದಿದೆ ಎಂದರೆ ‘ಸ್ಟಾರ್’ ನ ಪ್ರಾದೇಶಿಕ ಮಾರುಕಟ್ಟೆ ಕಲ್ಪನೆ ಯಶ ಕಂಡಿದೆ ಎಂಬುದು ನಿಸ್ಸಂಶಯ. ಚಾನೆಲ್ ಬಿತ್ತರಿಸುವ ಜಾಹೀರಾತು ಕನ್ನಡದಲ್ಲೇ ಪ್ರಸಾರವಾಗುವುದು ಸಹಜವಾಗಿ ವೀಕ್ಷಕರ ಮನಮುಟ್ಟುತ್ತವೆ. ಜತೆಗೆ ಭಾಷಾ ಬಾಂಧವ್ಯ ಮತ್ತು ವಾಣಿಜ್ಯ ಸಂಬಂಧವನ್ನು ಬಲವಾಗಿ ಕಟ್ಟುವ ಚಾನೆಲ್‍ನ ವಿಶ್ವಾಸ ಗೆದ್ದಿದೆ.

ಇವೆಲ್ಲದರ ನಡುವೆ ವಾಣಿಜ್ಯ ದೃಷ್ಟಿ ಬದಿಗಿಟ್ಟು ಕನ್ನಡಿಗರ ಕ್ರೀಡಾಪ್ರೇಮ ಗಮನಿಸಿ. ಕನ್ನಡ ಭಾಷೆ, ಕನ್ನಡತನ ಮರೆಯಾಗುತ್ತಿದೆ ಎಂಬ ಆತಂಕವನ್ನು ವೀಕ್ಷಕವಿವರಣೆ ಕೊಂಚ ಮಟ್ಟಿಗೆ ನಿವಾರಿಸುವ ಪ್ರಯತ್ನ ಮಾಡಿದೆ ಎಂದರೆ ತಪ್ಪಾಗದು.

ಏರಿದ ವೀಕ್ಷಕರ ಸಂಖ್ಯೆ

ಸಮೀಕ್ಷೆಯೊಂದರ ಮಾಹಿತಿಯಂತೆ ಕನ್ನಡದಲ್ಲಿ ಕ್ರಿಕೆಟ್ ವೀಕ್ಷಕವಿವರಣೆ ಆರಂಭವಾದ ಬಳಿಕ ವೀಕ್ಷಕರ ಸಂಖ್ಯೆಯಲ್ಲಿ ಶೇಕಡಾವಾರು ಪ್ರಮಾಣ 1 ರಿಂದ 7ಕ್ಕೆ ತಲುಪಿದೆ. ಪ್ರತೀ ವಾರ ಬಿಡುಗಡೆಯಾಗುವ `ಟಿಆರ್‍ಪಿ ರೇಟಿಂಗ್’ನಲ್ಲಿ ಸ್ಟಾರ್ ಕನ್ನಡವೂ ಸ್ಥಾನ ಪಡೆಯುತ್ತಿದೆ ಎಂಬುದು ಗಮನಾರ್ಹ ಸಂಗತಿ. ಜತೆಗೆ ಇದರ ಆಧಾರದಲ್ಲಿಯೇ ಜಾಹೀರಾತು ಬರುವ ಕಾರಣಕ್ಕೆ ಚಾನೆಲ್‍ಗೆ ಹಣದ ಹರಿವು ಹೆಚ್ಚಿಸಿದೆ ಎಂಬುದೂ ಉಲ್ಲೇಖನೀಯ.

ಮಿನುಗಿದ ಸ್ಟಾರ್ ವೀಕ್ಷಣೆ
ಭಾಷೆ ಆರಂಭ  ಪ್ರಸ್ತುತ
ಕನ್ನಡ ಶೇ.1 ಶೇ.7.8
ತಮಿಳು ಶೇ.2 ಶೇ.11.3
ತೆಲುಗು ಶೇ.1 ಶೇ.13.8
ಬಂಗಾಳಿ ಶೇ.2 ಶೇ.14.01
(ಸ್ಥಳೀಯ ಟೂರ್ನಿಗಳ ಸಂದರ್ಭ ಪರಿಗಣಿಸಿ)

 

ವಿಶೇಷವೆಂದರೆ ಇತ್ತೀಚೆಗೆ ಸ್ಟಾರ್‍ಗೆ ಪೈಪೋಟಿ ಕೊಡಲು ಸ್ಥಳೀಯ ಭಾಷಾ ಚಾನೆಲ್‍ಗಳು ಪ್ರಮುಖ ದೇಶೀಯ ಕ್ರಿಕೆಟ್ ಟೂರ್ನಿ ಮಾತ್ರವಲ್ಲದೆ, ಕಬಡ್ಡಿ, ಹಾಕಿಯಂತಹ ಕ್ರೀಡೆಗಳ ನೇರಪ್ರಸಾರ ಮತ್ತು ವೀಕ್ಷಕ ವಿವರಣೆಯನ್ನು ಕನ್ನಡದಲ್ಲಿಯೇ ನೀಡುತ್ತಿರುವುದು ಭಾಷಾಭಿಮಾನದ ಜತೆಗೆ ದೊಡ್ಡಣ್ಣನ ಖಜಾನೆಗೆ ಸ್ಥಳೀಂವಾಗಿ ಕೈಹಾಕಿರುವುದರ ಸಂಕೇತ. ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವ ರೀತಿಯಲ್ಲಿ ಆಕಾಶವಾಣಿ ಮತ್ತು ಎಫ್‍ಎಂ ರೇಡಿಯೊಗಳು ಸಾಥ್ ಕೊಡುತ್ತಿವೆ. ಪ್ರಮುಖ ಪಂದ್ಯಗಳ ಸಂದರ್ಭದಲ್ಲಿ ಕಾರ್ಯಕ್ರಮದ ನಡುವೆ ಸ್ಕೋರ್ ಬಿತ್ತರಿಸುವುದು, ಅಲ್ಲಲ್ಲಿ ನೇರ ಪ್ರಸಾರವನ್ನೂ ಕೇಳಿಸುವುದು, ಹೀಗೆ ಕೇಳುಗರನ್ನು ಗಟ್ಟಿಗೊಳಿಸುತ್ತಿದೆ. ಒಟ್ಟಿನಲ್ಲಿ ಡಿಜಿಟಲ್ ಯುಗದಲ್ಲೂ ಆಧುನಿಕ ಸ್ಪರ್ಶದ ಕ್ರೀಡಾ ಜಗತ್ತಿನ ಕನ್ನಡ, ಕೇಳುಗರ ಕಿವಿ ನಿಮಿರಿಸುತ್ತಿರುವುದಂತೂ ಸತ್ಯ.

ತಾಳ ತಪ್ಪದ ಧ್ವನಿ ಏರಿಳಿತ

ನಿರ್ಣಾಯಕ ಸನ್ನಿವೇಶಗಳಲ್ಲಿ ವೇಗದ ಬೆಳವಣಿಗೆಗಳನ್ನು ಕೇಳುಗರಿಗೆ ಅಥವಾ ನೋಡುಗರಿಗೆ ವರ್ಣಿಸುವ ಕಲೆಯೂ ಕರಗತವಾಗಿರಲೇಬೇಕು. ಹಾಗಿದ್ದಲ್ಲಿ ಮಾತ್ರ ಆತ ಆಕರ್ಷಕ ವೀಕ್ಷಕ ವಿವರಣೆಕಾರ ಆಗಬಲ್ಲ. ಜತೆಗೆ ಧ್ವನಿಯೂ ಅದಕ್ಕೆ ಪೂರಕವಾಗಿ ಇರಬೇಕಾಗುತ್ತದೆ. ಧ್ವನಿ ಎನ್ನುವಾಗ ಥಟ್ ಅಂತ ನೆನಪಾಗುವುದು ಒಂದು ಕಾಲದಲ್ಲಿ ದೂರದರ್ಶನ ಪ್ರಮುಖ ವಾರ್ತಾ ವಾಚಕರಾಗಿದ್ದ ಶಂಕರ್ ಪ್ರಕಾಶ್. ಇತ್ತೀಚಿನ ವರ್ಷಗಳಲ್ಲಿ ಚಂದ್ರಮೌಳಿ ಕಣವಿ ಅವರೂ ಅದ್ಭುತ ವೀಕ್ಷಕ ವಿವರಣೆಕಾರ ಎನಿಸಿದ್ದಾರೆ. ಅಷ್ಟೇ ಏಕೆ ನಮ್ಮ ಕನ್ನಡದವರೇ ಆದ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ವಿಜಯ್ ಭಾರದ್ವಾಜ್. ಜಿ.ಕೆ.ಅನಿಲ್ ಕುಮಾರ್, ಸೋಮಶೇಖರ್ ಸಿರಗುಪ್ಪಿ, ದೀಪಕ್ ಚೌಗಲೆ, ಕೆಲವೊಮ್ಮೆ ಖ್ಯಾತನಾಮರಾದ ಜಿ.ಆರ್.ವಿಶ್ವನಾಥ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಅವರೂ ವೀಕ್ಷಕ ವಿವರಣೆ ನೀಡುತ್ತಿದ್ದಾರೆ.

Leave a Reply

Your email address will not be published.