ವೃದ್ಧರ ಪಿಂಚಣಿ ನಿರಾಯಾಸ ತಲುಪಲಿ

-ಸ್ಮಿತಾ ಅಮೃತರಾಜ್

ನನ್ನೂರಾದ ಕೊಡಗಿನಲ್ಲಿ ಕಂಡು ಕೇಳರಿಯದಂತಹ ಭೀಕರ ಜಲಸ್ಫೋಟ, ಭೂಕುಸಿತದ ಜೊತೆಗೆ ನನ್ನೂರನ್ನೂ ಬಿಡದೇ ಕಾಡಿದ ಕೊರೋನಾ ವೈರಸ್ ಬಾಧೆ, ಕೃಷಿ ಕಾರ್ಮಿಕರಿಲ್ಲದೆ, ಉತ್ಪನ್ನಗಳ ಮಾರಾಟ ಮಾಡಲಾಗದೆ ಪಟ್ಟ ಪಡಿಪಾಟಲುಗಳು, ದೂರದಲ್ಲಿ ವ್ಯಾಸಂಗ ಮಾಡುತ್ತಿರುವ, ಉದ್ಯೋಗದಲ್ಲಿರುವವರ ಊರಿಗೆ ಬರಲಾಗದ ತೊಳಲಾಟಗಳು.. ಇಂತಹವು ಅದೆಷ್ಟೋ? ಇವೆಲ್ಲ ಸಂಕಟಗಳನ್ನ ಒಡಲೊಳಗೆ ಹುದುಗಿಸಿಕೊಂಡು ಮತ್ತೊಂದು ಹೊಸ ಬಿಸಿಲು, ಅದೇನೋ ನೆಮ್ಮದಿ ನಿರೀಕ್ಷೆಗಳನ್ನು ನನ್ನ ಕಣ್ಣ ತುದಿಗೆ ತಂದು ಪೋಣಿಸುತ್ತಿವೆ.

ನಿರೀಕ್ಷೆಗಳಿಲ್ಲದೆ ಹೇಗೆ ತಾನೇ ಬದುಕಲು ಸಾಧ್ಯ? ಅದೇ ಊರು, ಅದೇ ಮನೆ, ಅದೇ ತೋಟ, ಜನರ ಮಧ್ಯೆ ದ್ವೀಪಗಳಂತೆ ಬದುಕುತ್ತಿರುವ ನನ್ನಂತಹ ಕೃಷಿಕ ಮಹಿಳೆಗೆ ಬರಹವೊಂದು ಹೊಸ ಜಗತ್ತಿಗೆ ದೃಷ್ಟಿ ನೆಡಲು ತೆರೆದುಕೊಂಡAತಹ ಒಂದು ಬೆಳಕಿನ ಕಿಂಡಿ. ಅದೇ ಅಡುಗೆ ಮನೆ, ಬೆಂಕಿ, ಹೊಗೆ, ರಜೆಯಿಲ್ಲದ ಅನ್ನ ಸಾರುಗಳ ಏಕತಾನತೆಯ ನಡುವೆ ಸಾಹಿತ್ಯದ ಸಹಚರ್ಯವೊಂದು ಭರವಸೆಯ ಬದುಕಿಗೆ ತಂಗಾಳಿಯAತೆ ಬಂದು ನೇವರಿಸುತ್ತದೆ. ಹಾಗಾಗಿ ಈ ಹೊಸ ವರುಷದ ಆವರಣದಲ್ಲಿ ನನ್ನ ನಾಲ್ಕು ಹೊತ್ತಗೆಗಳು ಅನಾವರಣಗೊಳ್ಳುವುದು ನನ್ನನ್ನು ನಿಜಕ್ಕೂ ಮುದಗೊಳಿಸುತ್ತಿದೆ. ಮತ್ತಷ್ಟು ಗಂಭೀರವಾಗಿ ಓದು ಬರಹದಲ್ಲಿ ತೊಡಗಿಸಿಕೊಳ್ಳಬೇಕು ಆ ಮೂಲಕ ಅಕ್ಷರದ ಸಖ್ಯ ನನ್ನನ್ನು ಕೈಹಿಡಿದು ಲೋಕ ಪರ್ಯಟನೆಗೆ ಕರೆದುಕೊಂಡು ಹೋಗಬಹುದು, ಹೊಸ ಊರು, ಹೊಸ ಜನರ ಸ್ನೇಹವನ್ನ ಸಂಪಾದಿಸಿಕೊಳ್ಳಬಹುದು ಅನ್ನುವ ನನ್ನ ನಿರೀಕ್ಷೆಯೇ ಸಾಹಿತ್ಯದ ಬಗಲಿಗೆ ಮತ್ತಷ್ಟು ನನ್ನನ್ನು ಆತುಕೊಳ್ಳುವಂತೆ ಮಾಡುತ್ತಿದೆ.

ಹೊಸ ನಿರೀಕ್ಷೆಗೆ ಇಂಬುಕೊಡುವAತೆ ಮೊನ್ನೆ ಮೊನ್ನೆ ಗ್ರಾಮ ಪಂಚಾಯಿತಿಯ ಚುನಾವಣೆಗೆ ಮತ ಕೇಳಲು ನಮ್ಮ ಮನೆಗೂ ಬಂದಿದ್ದರು. ನಿಜಕ್ಕೂ ಅಚ್ಚರಿಯಾಯಿತು. ಹೆಚ್ಚಿನವರು ಮಹಿಳೆಯರೇ ಮತ ಯಾಚನೆಗೆ ಬಂದದ್ದು. ಸ್ಪರ್ಧಿಸಲು ನಿಂತವರು ಕೂಡ ಮಹಿಳೆಯರೇ. ಇದು ಹೊಸ ಆರೋಗ್ಯಪೂರ್ಣ ಬೆಳವಣಿಗೆಯಂತೆ ಗೋಚರಿಸುತ್ತದೆ. ನನ್ನ ಹಳ್ಳಿಯ ಹೆಣ್ಮಕ್ಕಳೂ ಮನೆ, ಹಟ್ಟಿ, ತೋಟ ಎಲ್ಲವನ್ನೂ ನಿಭಾಯಿಸಿಕೊಂಡು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆಂದರೆ ಇದು ಹೊಸ ವರುಷದ ಹೊಸ ನಿರೀಕ್ಷೆಗೆ ಮುನ್ನುಡಿಯೆಂದೇ ನಾನು ಭಾವಿಸುತ್ತೇನೆ. ಹೆಣ್ಣು ಮಕ್ಕಳು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿ, ಉನ್ನತ ಸ್ಥಾನವನ್ನು ಏರಿದರೆ ಭ್ರಷ್ಟಾಚಾರದ ಮಟ್ಟ ತೀರಾ ಕಡಿಮೆಯಾಗಬಹುದೆಂಬುದು ನನ್ನೊಳಗಿನ ನಂಬುಗೆ. ಆ ಮೂಲಕ ನನ್ನ ಗ್ರಾಮೀಣ ಪ್ರದೇಶದಲ್ಲಿ ಹೊಸ ಪರಿವರ್ತನೆಗಳಿಗೆ ನಾಂದಿಯಾಗ ಬಹುದೆಂಬ ಸಣ್ಣದೊಂದು ನಿರೀಕ್ಷೆ ಎದೆಯೊಳಗಿನಿಂದ ಹಾಗೇ ಮೊಳಕೆಯೊಡೆಯುತ್ತಿದೆ.

ಕೃಷಿ ಉತ್ಪನ್ನಗಳಿಗೆ ಸಿಗಬಹುದಾದ ನ್ಯಾಯ ಬೆಲೆ, ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಮಾಡುವಂತಹ ಸಣ್ಣ ಕೈಗಾರಿಕೆಯಿಂದ ಹಳ್ಳಿಯ ಜನರಿಗೆ ಉದ್ಯೋಗ ಸಿಕ್ಕು ಅವರ ಜೀವನ ಮಟ್ಟ ಸುಧಾರಿಸಬಹುದೆಂಬ ವಿಶ್ವಾಸ. ಅದರ ಜೊತೆಗೆ ನಮ್ಮ ಹಳ್ಳಿಯಲ್ಲಿ ಸಾಕಷ್ಟು ಜಲಮೂಲಗಳಿದ್ದರೂ ಬೇಸಗೆಯ ದಿನಗಳಲ್ಲಿ ಬರ ಎದುರಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜಲಮರುಪೂರಣ, ಮಳೆಕೊಯಿಲು, ಸೋಲರ್ ಅಳವಡಿಕೆಯ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ಕುರಿತು ಜನರಲ್ಲಿ ಅರಿವು ಹುಟ್ಟಿಸುವುದರ ಮೂಲಕ ಮಾದರಿ ಗ್ರಾಮದ ಕನಸಿನ ಆಕಾಂಕ್ಷೆಯಿದೆ. ಇವತ್ತು ನಮ್ಮ ಹಳ್ಳಿಗಳಲ್ಲಿರುವ ವೃದ್ಧರಿಗೆ ವೃದ್ಧಾಪ್ಯವೇತನವೇನೋ ಅದ್ಹೇಗೊ ಸಿಗುತ್ತದೆ.

ಆದರೆ ಆ ಹಿರಿ ಜೀವಗಳು ಅದಕ್ಕಾಗಿ ಪಡುವ ಪಡಿಪಾಟಲು, ಅಲ್ಲಿಂದಿಲ್ಲಿಗೆ ಎಡತಾಕಿ ನಿರಾಶರಾಗುವುದು ಕಂಡಾಗಲೆಲ್ಲಾ ಮನಸು ತಳಮಳಿಸುತ್ತದೆ. ಈ ಹೊಸ ವರುಷದಲ್ಲಿ ವೃದ್ಧರಿಗೆ ಬರುವ ಪಿಂಚಣಿ ನಿರಾಯಾಸವಾಗಿ ಅವರ ಮನೆ ಬಾಗಿಲಿಗೆ ಬಂದು ತಲುಪುವಂತಾಗಲಿ ಎಂಬುದೇ ಮತ್ತೊಂದು ನಿರೀಕ್ಷೆ.

ನನ್ನೂರಿನ ಹೋಮ್ ಸ್ಟೇಗಳು ಎಲ್ಲೆಂದರಲ್ಲಿ ಹುಟ್ಟಿಕೊಳ್ಳದಿರಲಿ, ಮಳೆಗಾಲದಲ್ಲಿ ನದಿ ಹುಚ್ಚೆದ್ದು ಕುಣಿಯದಿರಲಿ, ಬೆಟ್ಟ ಗುಡ್ಡ ಬಾಯಿ ಬಿಡದಿರಲಿ, ಕೆರೆ, ಬಾವಿ, ಕಟ್ಟೆಗಳು ಬಿರುಬೇಸಗೆಯಲ್ಲೂ ತುಂಬಿ ತುಳುಕಲಿ. ಅವರವರ ಊರಿಗೆ ಹೋದ ವಲಸೆ ಕಾರ್ಮಿಕರಿಗೆ ಕೈಯಲ್ಲೊಂದು ಕೆಲಸ, ತಲೆಮೇಲೊಂದು ಸೂರು ಭದ್ರವಾಗಲಿ. ಪ್ರತೀ ಊರಿನ ಗ್ರಾಮ ಪಂಚಾಯಿತಿಯ ಗ್ರಂಥಾಲಯಕ್ಕೆ ಬರುವ ಪುಸ್ತಕಗಳನ್ನು ಊರಿನವರು, ಅದರಲ್ಲೂ ಮಹಿಳೆಯರು ಓದುವಂತಹ ಪರಿಪಾಠ ಬೆಳೆಸಿಕೊಂಡು ಜ್ಞಾನದ ಕಿಂಡಿಯನ್ನು ವಿಸ್ತರಿಸಿಕೊಳ್ಳಲಿ, ಆ ಮೂಲಕ ಹಳ್ಳಿಗರ ಬದುಕು ಸಹ್ಯವಾಗಲಿ ಅನ್ನುವ ನಿರೀಕ್ಷೆ ಮತ್ತು ಭರವಸೆಯೊಂದಿಗೆ ಹೊಸ ವರುಷಕ್ಕೆ ಸಂಭ್ರಮದಿAದ ಹೆಜ್ಜೆ ಇಡುತ್ತಿರುವೆ.

 

Leave a Reply

Your email address will not be published.