ವೈದ್ಯಕೀಯಲೋಕದಲ್ಲಿ ಒಳಗೊಳ್ಳುವಿಕೆಯ ಅಗತ್ಯ

ಇಂದು ಇರುವ ವ್ಯವಸ್ಥೆ ಜನಸಂಖ್ಯಾನುಸಾರವಾಗಿಲ್ಲ. ಈ ವೈಫಲ್ಯವನ್ನು ಖಾಸಗಿ ಆಸ್ಪತ್ರೆಗಳು ಬಳಸಿಕೊಳ್ಳುತ್ತಿವೆ. ಹಾಗಾಗಿ, ಸರ್ಕಾರಿ ಆಸ್ಪತ್ರೆಗಳ ಸಂಖ್ಯೆ, ಗುಣಮಟ್ಟ ಹೆಚ್ಚಬೇಕಾಗಿರುವುದು ಇಂದಿನ ತುರ್ತು ಅಗತ್ಯಗಳೊಲ್ಲೊಂದು.

ಇಂದು ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ವೈದ್ಯಕೀಯ ಜಗತ್ತು ವ್ಯಾಪಾರೀಕರಣವಾಗುತ್ತಿರುವುದು ಬಹುಮುಖ್ಯವಾದುದು. ಎಲ್ಲವೂ ವ್ಯಾಪಾರವಾಗಿರುವ ಇಂದಿನ ದಿನಮಾನದಲ್ಲಿ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಯಾಕೆ ಈ ಮಾತೆಂದರೆ ಇದು ನಮ್ಮ ದಿನನಿತ್ಯದ ಜೀವನದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಇಂದು ಕಾಯಿಲೆ ಬೀಳುವುದನ್ನು ಯೋಚಿಸಿದರೇ ಜ್ವರ ಬರುವಂತಹ ಪರಿಸ್ಥಿತಿಯಿದೆ ಎನ್ನಲಾಗುತ್ತಿದೆ.

ಈ ಕುರಿತಾಗಿ ನನ್ನ ವೈಯಕ್ತಿಕ ಅನುಭವಕ್ಕೆ ಒಂದೆರೆಡು ಪ್ರಮುಖ ವಿಚಾರದ ಎಳೆ ಸೇರಿಸಿ ನಿಮ್ಮ ಮುಂದಿಡುವುದು ಈ ಲೇಖನದ ಉದ್ದೇಶ. ನಾನು ಮಧ್ಯಮ ವರ್ಗದವನು. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕಾರಣಾಂತರಗಳಿಂದ ಮಧ್ಯಮಧ್ಯೆ ಕೆಲಸ ಬಿಡಬೇಕಾದ ಪ್ರಸಂಗ ಬಂದ ವ್ಯಕ್ತಿಯೆಂದರೆ ನನ್ನ ಆರ್ಥಿಕ ಪರಿಸ್ಥಿತಿ ಸ್ಪಷ್ಟವಾಗಬಹುದು.

‘ಈಗ ಮನೆಗೆ ಕರೆದುಕೊಂಡು ಹೋಗಿ, ವಾರದಲ್ಲಿ ಉಳಿದ ಹಣ ಕಟ್ಟಿ’ ಎಂದು ಹೇಳಿಕಳಿಸಿತು ಎಂದರೆ ನೀವು ನಂಬುವಿರಾ? ಅದೂ ಹಣ ಕಟ್ಟದೆ ಹೆಣ ಕೊಡದ ಇಂದಿನ ಸಂದರ್ಭಲ್ಲಿ! ಆದರೆ ಅದು ಸತ್ಯ! ಇದರ ಅರ್ಥ ವ್ಯವಸ್ಥೆ ಸಂಪೂರ್ಣ ಕೆಟ್ಟಿಲ್ಲ ಎಂಬುದೇ.

ನನ್ನ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿದ್ದವು. ಅವಳು ಬದುಕಿದ್ದ ಸಮಯದಲ್ಲಿ ಹದಿನಾರು ಬಾರಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಅದರಲ್ಲಿ ಐದು ಬಾರಿ ಬಹಳ ದಿನ ಆಸ್ಪತ್ರೆಯಲ್ಲಿದ್ದು ಐಸಿಯುವನ್ನೂ ಬಳಸಬೇಕಾದ ಪ್ರಸಂಗವಿತ್ತು. ಸರ್ಕಾರಿ ಆಸ್ಪತ್ರೆಗೆ ಅವಳು ಬರುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗುವುದು ಅನಿವಾರ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಖಾಸಗಿ ನೆಲೆಯ ಒಂದು ಆಸ್ಪತ್ರೆ, ಅದೂ ಎರಡು ಬಾರಿ, ‘ಈಗ ಮನೆಗೆ ಕರೆದುಕೊಂಡು ಹೋಗಿ, ವಾರದಲ್ಲಿ ಉಳಿದ ಹಣ ಕಟ್ಟಿ’ ಎಂದು ಹೇಳಿಕಳಿಸಿತು ಎಂದರೆ ನೀವು ನಂಬುವಿರಾ? ಅದೂ ಹಣ ಕಟ್ಟದೆ ಹೆಣ ಕೊಡದ ಇಂದಿನ ಸಂದರ್ಭಲ್ಲಿ! ಆದರೆ ಅದು ಸತ್ಯ! ಇದರ ಅರ್ಥ ವ್ಯವಸ್ಥೆ ಸಂಪೂರ್ಣ ಕೆಟ್ಟಿಲ್ಲ ಎಂಬುದೇ. ಜೋತೆಗೆ ನಾನು ವೈದ್ಯರ ಜೊತೆ ಪರಿಸ್ಥಿತಿಗಳನ್ನು ಕುರಿತಾಗಿ ಚರ್ಚಿಸುತ್ತಿದ್ದೆ. ನನ್ನ ಆರ್ಥಿಕ ಪರಿಸ್ಥಿತಿ ಅವರಿಗೆ ಅರ್ಥವಾಗಿತ್ತು. ಹಾಗಾಗಿ, ಇದು ಸಾಧ್ಯವಾಯಿತು. ವೈದ್ಯರಲ್ಲಿ ನನ್ನ ಬಗ್ಗೆ ನಂಬಿಕೆ ಮೂಡಿತ್ತು. ಅಂದರೆ ಜನ ವ್ಯವಸ್ಥೆಯ ಬಗ್ಗೆ ನಂಬಿಕೆಯಿರಿಸಿ, ತುಸು ವಿಷಯಗಳನ್ನು ತಿಳಿದುಕೊಂಡು ವರ್ತಿಸಿದರೆ ಸಂದರ್ಭ ವಿಪರೀತವಾಗಲಾರದು. ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯತನ ಎಲ್ಲೆಡೆಯೂ ಇದ್ದೇಯಿರುತ್ತದೆ. ಇದು ಸೊನ್ನೆಯಾಗುವುದಿಲ್ಲ.

ಇದರ ಅರ್ಥವೆಂದರೆ ಜನರೂ ಸ್ವಲ್ಪ ವಿಷಯಗಳನ್ನು ತಿಳಿದುಕೊಂಡು ವ್ಯವಸ್ಥೆಯ ಜವಾಬ್ದಾರಿಯ ಭಾಗವಾಗುವುದು, ಒಳಗೊಳ್ಳುವುದು (ಇನ್‍ಕ್ಲೂಸಿವ್). ಈಗ ವೈದ್ಯರು ತಪ್ಪೆಸಗಿದರೆ ಕೇಸು ಹಾಕಬಹುದು ಎಂಬ ಭಾಗವನ್ನು ಮಾತ್ರ ತಿಳಿದುಕೊಂಡಿರುವ ಜನ, ವೈದ್ಯವಿಜ್ಞಾನ ಎರಡು ಪ್ಲಸ್ ಎರಡು ನಾಲ್ಕು ಆಗುವಂತಹದ್ದಲ್ಲ ಎಂಬುದನ್ನು ಅರಿಯರು. ವೈದ್ಯರೂ ಕೊನೆಗೆ ಮನುಷ್ಯರು ತಾನೆ ಎಂಬುದನ್ನು ಮರೆಯುತ್ತಾರೆ. ಆದ್ದರಿಂದ ವೈದ್ಯರು ಎಚ್ಚರವಾಗಿ ತಲೆನೋವು ಎಂದು ಬಂದ ರೋಗಿಗೆ ಒಂದು ಮಾತ್ರೆ ಕೊಟ್ಟು ಎರಡು ದಿನ ಕಾದು ನೋಡುವ ಬದಲು ಒಂದು ಸಿಟಿ ಸ್ಕಾನ್‍ಮಾಡಿಸಿಕೊಂಡು ಬಂದುಬಿಡಿ ತಲೆಯಲ್ಲಿ ಗಡ್ಡೆಯಿದ್ದರೆ ಗೊತ್ತಾಗುತ್ತದೆ ಎನ್ನುವ ಅನಿವಾರ್ಯತೆಗೆ ಸಿಲುಕಿದ್ದಾರೆ. ತುರ್ತು ಚಿಕಿತ್ಸೆಗೆ ಶೇಕಡ 50 ಮಾತ್ರ ಉಳಿಯುವ ಸಾಧ್ಯತೆಯಿದ್ದಲ್ಲಿ ರಿಸ್ಕ್ ತೆಗೆದುಕೊಳ್ಳದೆ ಇಲ್ಲಾಗದು ಬೇರೆ ದೊಡ್ಡ ಆಸ್ಪತ್ರೆಗೆ ಹೋಗಿ ಎನ್ನುವ ಹಾದಿ ಹಿಡಿಯುತ್ತಾರೆ. ಎಷ್ಟೋ ಕಡೆ ಪೂರ್ವಭಾವಿಯಾಗಿ ಹತ್ತಾರು ಪರೀಕ್ಷೆಗಳನ್ನು ಮಾಡಿಸದ ಹೊರತು ವೈದ್ಯರು ರೋಗಿಯನ್ನು ‘ಮುಟ್ಟುವುದೂ ಇಲ್ಲ’. ಈ ಎಲ್ಲ ಸಂದರ್ಭಗಳಲ್ಲಿ ತೊಂದರೆಗೊಳಗಾಗುವವರು ಬಡ ರೋಗಿಗಳೇ! ಇನ್ನು ಗೂಗಲ್ ನೋಡಿಕೊಂಡು ಬಂದು ವೈದ್ಯರ ಜ್ಞಾನವನ್ನು ಅಳೆಯುವ/ಹಿಯಾಳಿಸುವ ಮಾತ್ರವಲ್ಲ ವೈದ್ಯರು ಕೊಟ್ಟ ಸಲಹೆಯನ್ನು ಪರಾಮರ್ಶಿಸಿ ಚಿಕಿತ್ಸೆ ಬದಲಿಸಿಕೊಳ್ಳುವ ದೊಡ್ಡ ಪಡೆಯೇ ಇದೆ. ಅಂಟಿಬಯಾಟಿಕ್‍ಗಳನ್ನು ಮನಸೋ ಇಚ್ಛೆ ಬಳಸುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಇಲ್ಲಿ ತೊಂದರೆಯಾದರೆ ಯಾರು ಹೊಣೆ?

ಅನೇಕ ಕಡೆಗಳಲ್ಲಿ ಕ್ಯಾನ್ಸರ್ ತಜ್ಞರ ತೀವ್ರ ಕೊರತೆಯಿದೆ. ಮನೋವೈದ್ಯರು ಮತ್ತು ಮನೋಚಿಕತ್ಸಕರ ಬಗ್ಗೆಯಂತು ಹೇಳಬೇಕಾಗಿಯೇ ಇಲ್ಲ. ಜಾಗತಿಕ ನಿಯಮಾನುಸಾರ ಜನಸಂಖ್ಯೆಗೆ ತಕ್ಕಂತ ಆಯಾ ತಜ್ಞರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

ಇದರ ನಡುವೆ ಇತರ ಸೇವಾಕ್ಷೇತ್ರ (ಇಲ್ಲಿ ಸೇವೆಯೆಂದರೆ ಜನಸೇವೆಯಲ್ಲ, ಇಂಗ್ಲಿಷಿನ ಸರ್ವಿಸ್ ಎಂಬುದುರ ಒಣ  ಅರ್ಥ) ಗಳಂತೆ ಕಾರ್ಪೊರೇಟ್ ವ್ಯವಸ್ಥೆ ನೆಲೆಯೂರಿದ್ದು ಹೆರಿಗೆಯಿಂದ ತೊಡಗಿ ಮೂತ್ರಪಿಂಡದ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆಯವರೆಗೂ ಎಲ್ಲವೂ ಪ್ಯಾಕೇಜ್‍ಗಳಾಗಿ ಲಭ್ಯವಾಗುತ್ತಿದೆ. ಇದು ಹಣವಂತರಿಗೆ, ವಿಮೆ ಮಾಡಿಸಿದವರಿಗೆ ಸಮಸ್ಯೆಯಲ್ಲ. ಅಕಸ್ಮಾತ್ತಾಗಿ ಇಂತಹ ಆಸ್ಪತ್ರೆಗೆ ದಾಖಲಾಗುವ ಸಾಮಾನ್ಯ ಅಥವಾ ಬಡಜನತೆಗೆ ಜೀವನವೇ ದುಸ್ತರವಾಗಿಬಿಡುತ್ತದೆ..

ಹಾಗಾದರೆ ಇದಕ್ಕೆ ಪರಿಹಾರವೇನು? ಕಾನೂನು ಇದೆ, ನಿಜ, ಒಂದು ಹಂತದಲ್ಲಿ ಅದು ಪರಿಣಾಮಕಾರಿ. ಆದರೆ ಅದು ಸಂಪೂರ್ಣ ಪರಿಹಾರವಾಗದು. ಅದರಲ್ಲಿಯೂ ಬಡ ಬೋರೆಗೌಡನಿಗೆ ಕಾನೂನಿಂದಲೂ ಪರಿಹಾರ ಸಿಗುತ್ತದೆ ಎಂದು ನಂಬುವುದು ಮೂರ್ಖತನದ ವಿಷಯವಾಗುವ ಸಂಭವವೇ ಹೆಚ್ಚು. ಆದ್ದರಿಂದ ಗಟ್ಟಿ ಪರಿಹಾರದ ಕಡೆ ಗಮನ ಹರಿಸುವುದು ಅತ್ಯಾವಶ್ಯಕವಾಗಿದೆ.

ಮೊಟ್ಟಮೊದಲನೆಯದಾಗಿ, ನಮ್ಮ ಸರ್ಕಾರಿ ಆಸ್ಪತ್ರೆಗಳು ಭ್ರಷ್ಟಾಚಾರ ಮುಕ್ತವಾಗಬೇಕು. ಅವುಗಳ ಸಂಖ್ಯೆ, ಭೌಗೋಳಿಕ ವ್ಯಾಪ್ತಿ ಮತ್ತು ಅಲ್ಲಿ ದೊರೆಯುವ ಚಿಕಿತ್ಸೆಯ ವ್ಯಾಪ್ತಿಯೂ ಅಗತ್ಯಕ್ಕೆ ತಕ್ಕಂತಾಗಬೇಕು. ಇಂದು ಅನೇಕ ಕಡೆಗಳಲ್ಲಿ ಕ್ಯಾನ್ಸರ್ ತಜ್ಞರ ತೀವ್ರ ಕೊರತೆಯಿದೆ. ಮನೋವೈದ್ಯರು ಮತ್ತು ಮನೋಚಿಕತ್ಸಕರ ಬಗ್ಗೆಯಂತು ಹೇಳಬೇಕಾಗಿಯೇ ಇಲ್ಲ. ಜಾಗತಿಕ ನಿಯಮಾನುಸಾರ ಜನಸಂಖ್ಯೆಗೆ ತಕ್ಕಂತ ಆಯಾ ತಜ್ಞರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕಡ್ಡಾಯ ಉಚಿತ ಶಿಕ್ಷಣದಂತೆ ಕಡ್ಡಾಯ ಉಚಿತ ಆರೋಗ್ಯ ಸೇವೆಯೂ ಲಭ್ಯವಾಗಬೇಕು.

ಒಬ್ಬ ರಾಜಕೀಯ ಪುಢಾರಿ ‘ನೋಡ್ರೀ, ನಿಮಗೆ ಪಗಾರ ಬರುತ್ತದೆ. ನಮ್ಮಲ್ಲಿ ಅನೇಕರಿಗೆ ಇಲ್ಲ. ನೀವು ಅದನ್ನು ಹೊಂದಿಸಿಕೊಡಬೇಕು. ಈ ಬಾರಿ ನಾನು ನಿಮ್ಮನ್ನು ಕೇಳುವುದು ಮೂರು ಕೋಟಿ. ಉಳಿದಿದ್ದನ್ನು ನೀವು ಏನಾದರೂ ಮಾಡಿಕೊಳ್ಳಿ’.

ಇಂದು ಇರುವ ವ್ಯವಸ್ಥೆ ಜನಸಂಖ್ಯಾನುಸಾರವಾಗಿಲ್ಲ. ಈ ವೈಫಲ್ಯವನ್ನು ಖಾಸಗಿ ಆಸ್ಪತ್ರೆಗಳು ಬಳಸಿಕೊಳ್ಳುತ್ತಿವೆ. ಹಾಗಾಗಿ, ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಹೆಚ್ಚಬೇಕಾಗಿರುವುದು ಇಂದಿನ ತುರ್ತು ಅಗತ್ಯಗಳೊಲ್ಲೊಂದು. ಜೊತೆಗೆ ಭ್ರಷ್ಟಾಚಾರ ಮುಕ್ತವೂ ಆಗಬೇಕು. ಇದು ವೈದ್ಯರ ಮೇಲಿನ ಆರೋಪವಲ್ಲ. ಒಂದು ಸರ್ಕಾರಿ ಆಸ್ಪತ್ರೆಯ ನಿರ್ದೇಶಕರಾಗಿದ್ದ ಹಿರಿಯ ವೈದ್ಯರು ತಮ್ಮ ಆತ್ಮಕತೆಯಲ್ಲಿ ಬರೆಯುತ್ತಾರೆ: ಅವರಲ್ಲಿಗೆ ಬಂದ ಒಬ್ಬ ರಾಜಕೀಯ ಪುಢಾರಿ ‘ನೋಡ್ರೀ, ನಿಮಗೆ ಪಗಾರ ಬರುತ್ತದೆ. ನಮ್ಮಲ್ಲಿ ಅನೇಕರಿಗೆ ಇಲ್ಲ. ನೀವು ಅದನ್ನು ಹೊಂದಿಸಿಕೊಡಬೇಕು. ಈ ಬಾರಿ ನಾನು ನಿಮ್ಮನ್ನು ಕೇಳುವುದು ಮೂರು ಕೋಟಿ. ಉಳಿದಿದ್ದನ್ನು ನೀವು ಏನಾದರೂ ಮಾಡಿಕೊಳ್ಳಿ’. ಇದಕ್ಕೆ ಒಪ್ಪದ ಆ ವೈದ್ಯರ ಸಂಬಳವನ್ನು ವಿನಾಕಾರಣ ತಡೆಹಿಡಿಯಲಾಗುತ್ತದೆ. ಇದಕ್ಕೆ ಬಗ್ಗದ್ದಕ್ಕೆ ಅವರ ಮೇಲೆ ಹಲ್ಲೆ ನಡೆಸಲಾಗುತ್ತದೆ. ಬಟ್ಟೆ ಹರಿದ ಘಟನೆಯೂ ನಡೆಯುತ್ತದೆ. ಕೊನೆಗೆ ವೈದ್ಯರು ಫ್ಯಾಕ್ಸ್ ಮೂಲಕ ರಾಜೀನಾಮೆ ಕೊಟ್ಟಾಗ ಸರ್ಕಾರ ತಡಮಾಡದೆ ಅದನ್ನು ಫ್ಯಾಕ್ಸ್ ಮೂಲಕವೇ ಒಪ್ಪಿಕೊಳ್ಳುತ್ತದೆ! ಸರ್ಕಾರದ ಕೆಲಸ ದೇವರ ಕೆಲಸ! ಈಗ ಯಾವ ವೈದ್ಯರನ್ನು ಬೈಯ್ಯೋಣ! ಅದ್ದರಿಂದ ಏನಾದರಾಗಲಿ ಈ ಕ್ಷೇತ್ರ ಭ್ರಷ್ಟಾಚಾರ ಮುಕ್ತವಾಗಲೇಬೇಕು. ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳು ಸರಿಯಾಗಿಬಿಟ್ಟರೆ ನಮ್ಮ ದೇಶದ ಶೇ 80ರಷ್ಟು ಸಮಸ್ಯೆಗಳು ತಾನೇ ತಾನಾಗಿ ಕಡಿಮೆಯಾಗಿಬಿಡುತ್ತವೆ.

ಇನ್ನು ವೈದ್ಯಕೀಯ ಶಿಕ್ಷಣವನ್ನು ಅರಸಿಕೊಂಡು ಬಂದವರಿಗೆ ಯುಕ್ತಬೆಲೆಯಲ್ಲಿ ಅದು ದೊರೆಯಬೇಕು. ಇದು ಆಗಬೇಕಾಗಿರುವ ಮತ್ತೊಂದು ಮಹತ್ವದ ವಿಷಯ. ಜೊತೆಗೆ ಇರುವ ಇತರ ಪರವಾನಗಿ ಪಡೆದ ವೈದ್ಯಕೀಯ ಪದ್ಧತಿಗಳನ್ನು ಔಚಿತ್ಯಪೂರ್ಣವಾಗಿ ಬಳಸಿಕೊಂಡು ಜನರ ಆರೋಗ್ಯದ ಅವಶ್ಯಕತೆಗಳನ್ನು ಪೂರೈಸುವತ್ತ ಸರ್ಕಾರ ಗಮನ ಹರಿಸಬೇಕು.

ಹತ್ತನೇ ತರಗತಿಯೊಳಗೆ ಆರೋಗ್ಯದ ಕುರಿತಾದ ಬಹಳ ಮುಖ್ಯ ಎನಿಸುವ ಮಾಹಿತಿಯನ್ನು ಸೇರಿಸಬೇಕು. ಶೈಕ್ಷಣಿಕ ಜಾಲತಾಣಗಳಲ್ಲಿ ಮೌಲಿಕ ಮಾಹಿತಿ ಹೆಚ್ಚು ಹೆಚ್ಚು ಸಿಗುವಂತಾಗಬೇಕು.

ಇನ್ನೊಂದು ಮುಖ್ಯವಾದ ಅಂಶವೆಂದರೆ ಸಾಮಾನ್ಯ ಶಿಕ್ಷಣದಲ್ಲಿ ಅಂ ದರೆ ಹತ್ತನೇ ತರಗತಿಯ ಒಳಗೆ ಆ ವಯಸ್ಸಿನ ಮಕ್ಕಳಿಗೆ ತಿಳಿಯುವಂತಹ ಭಾಷೆಯಲ್ಲಿ ಆರೋಗ್ಯ ಕುರಿತಾದ ಯುಕ್ತ ಅಧ್ಯಾಯಗಳನ್ನು ಸೇರಿಸಬೇಕು. ಹತ್ತನೇ ತರಗತಿಯಾದ ನಂತರ ವಿದ್ಯಾರ್ಥಿಗಳು ಬೇರೆ ಬೇರೆ ವಿಭಾಗಗಳಿಗೆ ಹೋಗಿಬಿಡುವುದರಿಂದ ಅಲ್ಲಿ ವಿಜ್ಞಾನದ ವಿಷಯವಾದ ವೈದ್ಯಕೀಯ ಕುರಿತ ಜಾಗೃತಿಯನ್ನು ಮೂಡಿಸುವುದು ಸಹ ಕಷ್ಟ. ಆದ್ದರಿಂದ ಹತ್ತನೇ ತರಗತಿಯೊಳಗೆ ಆರೋಗ್ಯದ ಕುರಿತಾದ ಬಹಳ ಮುಖ್ಯ ಎನಿಸುವ ಮಾಹಿತಿಯನ್ನು ಸೇರಿಸಬೇಕು. ಶೈಕ್ಷಣಿಕ ಜಾಲತಾಣಗಳಲ್ಲಿ ಮೌಲಿಕ ಮಾಹಿತಿ ಹೆಚ್ಚು ಹೆಚ್ಚು ಸಿಗುವಂತಾಗಬೇಕು.

ಹೀಗೆ ಜನರ ಪಾಲ್ಗೊಳ್ಳುವಿಕೆ, ಶಿಕ್ಷಣ, ಸರ್ಕಾರಿ ಆಸ್ಪತ್ರೆಗಳ ಸುಧಾರಣೆ, ಶಿಕ್ಷಣದಲ್ಲಿ ಯುಕ್ತ ಮಾಹಿತಿ ಈ ಮೂರು ವಿಷಯಗಳು ಬಡಜನರ ಜೀವನವನ್ನು ಸಹ್ಯವಾಗಿಸುತ್ತವೆ. ಜನಗಳು ಗ್ರಾಹಕರು, ಪಂಚತಾರಾ ಆಸ್ಪತ್ರೆಗಳು ಪೂರೈಕೆದಾರರು ಎಂಬ ಕಾರ್ಪೊರೇಟ್ ಮನೋಭಾವವನ್ನು ಯುಕ್ತ ಶಿಕ್ಷಣದಿಂದ ಸರಿಪಡಿಸಬಹುದು.

Leave a Reply

Your email address will not be published.