ವೈದ್ಯಕೀಯ ವೃತ್ತಿಯ ವ್ಯಾಪಾರೀಕರಣ ರೂಪಿಸಿದ ನೆಲೆಗಳು

ವೈದ್ಯಕೀಯ ಕ್ಷೇತ್ರವನ್ನು ವಿಶ್ಲೇಷಿಸುವುದೆಂದರೆ ಸಮಕಾಲೀನ ವ್ಯಾಪಾರೀಕರಣದ ಬಗೆಯನ್ನು ಅರ್ಥಮಾಡಿಕೊಳ್ಳುವುದೇ ಎಂದರ್ಥ. ಇಷ್ಟು ದಿನ ವೈದ್ಯರು ಸೇವಾ ಮನೋಭಾವನೆಯನ್ನು ಹೊಂದಿದವರಾಗಿದ್ದು, ಈಗ ಏಕಾಏಕಿ ನೈತಿಕ ಅಧಃಪತನಕ್ಕೆ ಒಳಗಾಗಿದ್ದಾರೆಂದು ತಿಳಿಯಬಾರದು. ಈ ವೃತ್ತಿಯ ರೂಪಾಂತರದ ಹಿಂದೆ ಒಂದು ಐತಿಹಾಸಿಕ ಪ್ರಕ್ರಿಯೆ ಇದೆ.

ಪತ್ರಿಕೆಗಳು ಸಮಕಾಲೀನ ಸಮಸ್ಯೆಗಳ ಮೇಲೆ ಪ್ರತಿಫಲಿಸಲು ಸಾರ್ವಜನಿಕ ವಲಯದ ಮುಂದೆ ಪ್ರಶ್ನೆಗಳನ್ನಿಡುವುದು ಉತ್ತಮವಾದ ಬೌದ್ಧಿಕ ನಡೆ. ಸಾರ್ವಜನಿಕರನ್ನು ಚಿಂತನೆಗೆ ಹಚ್ಚಿಸುವುದಲ್ಲದೆ, ಇಂತಹ ಪ್ರಯತ್ನಗಳು ನಮ್ಮ ಪ್ರಜ್ಞೆ, ಸಂವೇದನೆಗಳನ್ನು ರೂಪಿಸುತ್ತವೆಂಬುದು ಬಹುಮುಖ್ಯವಾದ ಪ್ರಯೋಜನ. ಈ ಬಾರಿ ಸಮಾಜಮುಖಿ ಪ್ರಸ್ತುತ ವೈದ್ಯಕೀಯ ಕ್ಷೇತ್ರವನ್ನು ಮುಖ್ಯ ಚರ್ಚೆಯ ವಿಷಯವನ್ನಾಗಿ ಓದುಗರ ಮುಂದೆ ಇಟ್ಟಿದೆ.

‘ಇಂದಿನ ವೈದ್ಯಕೀಯ ರಂಗ: ಸೇವೆಯೊ? ಸುಲಿಗೆಯೋ?’ ಈ ಪ್ರಶ್ನೆಯನ್ನು ಸಮಾಜಮುಖಿ ವಿವರಿಸಿರುವ ಹಿನ್ನೆಲೆ ನೋಡಿದರೆ, ವೈದ್ಯಕೀಯ ವಲಯವು ಸೇವಾ ಮನೋಭಾವವನ್ನು ಬದಿಗಿರಿಸಿ, ಸುಲಿಗೆ ಮಾಡುತ್ತಿದೆ ಎಂಬ ನಿಲುವನ್ನು ಸ್ಪಷ್ಟಪಡಿಸಿದೆ. ಈ ಕ್ಷೇತ್ರವು ದಿನದಿಂದ ದಿನಕ್ಕೆ ಆಂತರಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತ, ಅತೀ ಲಾಭಕೋರದ ವೃತ್ತಿಯಾಗುತ್ತಿರುವುದು ನಮ್ಮ ಅನುಭವಕ್ಕೆ ಬರುತ್ತಿರುವುದೇನೊ ನಿಜ. ಆದರೆ ಈ ಸಮಸ್ಯೆಯನ್ನು ಇನ್ನೂ ಸ್ಪಷ್ಟವಾಗಿ ಕಾಣಲು ನಾವು ಬೇರೆ ರೀತಿಯ ಪ್ರಶ್ನೆಗಳನ್ನೂ ಕೇಳಿಕೊಳ್ಳಬೇಕಾಗಿದೆ. ಏಕೆಂದರೆ ಇಂದು ವ್ಯಾಪಾರೀಕರಣಗೊಂಡಿದ್ದು ಕೇವಲ ವೈದ್ಯಕೀಯ ಕ್ಷೇತ್ರವಲ್ಲ.

ನಾವು ಸಾಮಾನ್ಯವಾಗಿ ಸೇವಾ ಕ್ಷೇತ್ರಗಳೆಂದು ನಂಬಿಕೊಂಡು ಬಂದಿರುವ ಶೈಕ್ಷಣಿಕ, ಧಾರ್ಮಿಕ, ರಾಜಕೀಯ ವಲಯಗಳೂ ಅತಿರೇಕದ ವ್ಯಾಪಾರೀಕರಣಕ್ಕೆ ಒಳಗಾಗಿವೆ. ಆದ್ದರಿಂದ ಒಂದು ವೃತ್ತಿ ಏಕೆ ಮತ್ತು ಹೇಗೆ ಸುಲಿಗೆಯಾಗುತ್ತದೆ? ಎನ್ನುವ ವಿಶಾಲವಾದ ಪ್ರಶ್ನೆಯನ್ನು ಕೇಳಿಕೊಳ್ಳುವುದು ಇಂತಹ ಸಮಸ್ಯೆಯನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಹೆಚ್ಚು ಉಪಯುಕ್ತವಾಗುತ್ತದೆ. ಹಾಗಾಗಿ ವೈದ್ಯಕೀಯ ಕ್ಷೇತ್ರವನ್ನು ವಿಶ್ಲೇಷಿಸುವುದೆಂದರೆ ಸಮಕಾಲೀನ ವ್ಯಾಪಾರೀಕರಣದ ಬಗೆಯನ್ನು ಅರ್ಥಮಾಡಿಕೊಳ್ಳುವುದೇ ಎಂದರ್ಥ.

ಇಲ್ಲಿ ನಾನು ಎತ್ತುತ್ತಿರುವ ಪ್ರಶ್ನೆಯೆಂದರೆ, ಯಾವ ಐತಿಹಾಸಿಕ ಬದಲಾವಣೆಗಳು, ಆರ್ಥಿಕ, ಸಾಂಸ್ಥಿಕ, ಶೈಕ್ಷಣಿಕ ಪರಿಸ್ಥಿತಿಗಳು ವೈದ್ಯಕೀಯ ಕ್ಷೇತ್ರವನ್ನು ಸುಲಿಗೆಯ ತಾಣವಾಗಿ ರೂಪಿಸಿವೆ? ಈ ಪ್ರಶ್ನೆಗೆ ಮುಖ್ಯವಾಗಿ ಮೂರು ನೆಲೆಗಳಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ:

ಇಷ್ಟು ದಿನ ವೈದ್ಯರು ಸೇವಾ ಮನೋಭಾವನೆಯನ್ನು ಹೊಂದಿದವರಾಗಿದ್ದು, ಈಗ ಏಕಾಏಕಿ ನೈತಿಕ ಅಧಃಪತನಕ್ಕೆ ಒಳಗಾಗಿದ್ದಾರೆಂದು ತಿಳಿಯಬಾರದು. ಈ ವೃತ್ತಿಯ ರೂಪಾಂತರದ ಹಿಂದೆ ಒಂದು ಐತಿಹಾಸಿಕ ಪ್ರಕ್ರಿಯೆ ಇದೆ. ಪಾಶ್ಚ್ಯಾತೀಕರಣ, ಜಾಗತೀಕರಣ, ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಹಾಗೂ ಮುಖ್ಯವಾಗಿ ತಾಂತ್ರಿಕತೆಯ ಕ್ಷಿಪ್ರ ಬೆಳವಣಿಗೆ ಇತ್ಯಾದಿ ಈ ವಲಯವನ್ನು ವ್ಯಾಪಾರೀಕರಣಗೊಳಿಸಿದ ಕೆಲವು ಐತಿಹಾಸಿಕ ಅಂಶಗಳು. ಹಾಗಾಗಿ ನಮ್ಮ ಬದಲಾದ ಹೊಸ ಜಗತ್ತು ಮತ್ತು ಸಮಕಾಲೀನ ಸಮಾಜದ ರಚನೆಯ ಭಾಗವಾಗಿ ವೈದ್ಯಕೀಯ ಜಗತ್ತಿನ ವಾಣಿಜ್ಯೀಕರಣವನ್ನು ನೋಡಬೇಕಾಗಿದೆ. ಆದಕಾರಣ ಇಲ್ಲಿ ನಾನು ಎತ್ತುತ್ತಿರುವ ಪ್ರಶ್ನೆಯೆಂದರೆ, ಯಾವ ಐತಿಹಾಸಿಕ ಬದಲಾವಣೆಗಳು, ಆರ್ಥಿಕ, ಸಾಂಸ್ಥಿಕ, ಶೈಕ್ಷಣಿಕ ಪರಿಸ್ಥಿತಿಗಳು ವೈದ್ಯಕೀಯ ಕ್ಷೇತ್ರವನ್ನು ಸುಲಿಗೆಯ ತಾಣವಾಗಿ ರೂಪಿಸಿವೆ? ಈ ಪ್ರಶ್ನೆಗೆ ಮುಖ್ಯವಾಗಿ ಮೂರು ನೆಲೆಗಳಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ: ಮನುಷ್ಯ ದೇಹವನ್ನು ನಾವು ನೋಡುವ ಕ್ರಮದಲ್ಲಿ ಉಂಟಾದ ಬದಲಾವಣೆ; ವೈದ್ಯಕೀಯ ವೃತ್ತಿಯ ಕಾರ್ಪೊರೇಟೀಕರಣ, ಅತಿಯಾದ ವೃತ್ತಿಪರತೆ ಹಾಗೂ ವೈದ್ಯಕೀಯ ಶಿಕ್ಷಣದ ವೈಭವೀಕರಣ.

ಮೊತ್ತಮೊದಲಾಗಿ, ಕಾಲದ ಲೀಲೆಯಲ್ಲಿ ಈ ವೈದ್ಯಕೀಯ ಜಗತ್ತು ‘ಜಗತ್ತ’ನ್ನು ನೋಡುವ ಕ್ರಮ ಬದಲಾಗಿದೆ. ವೈದ್ಯಕೀಯ ವೃತ್ತಿಯ ಕಾಳಜಿ ಎಂದರೆ ಮನುಷ್ಯ ದೇಹದ ಸ್ವಾಸ್ಥ್ಯ. ಇದನ್ನು ಈಗ ವೈದ್ಯಕೀಯ ಕ್ಷೇತ್ರವು ಆರ್ಥಿಕ ಹೂಡಿಕೆಯ ವಸ್ತುವಾಗಿ ನೋಡುತ್ತಿದೆ. ಮನುಷ್ಯನ ದೇಹ ಲಾಭಗಳಿಸುವ ವ್ಯಾಪಾರಿ ಸರಕಾಗಿ, ಕೊಳ್ಳೆ ಹೊಡೆಯುವ ಸಂಪನ್ಮೂಲವಾಗಿ ಗ್ರಹಿಸಲ್ಪಡುತ್ತಿದೆ. ದೇಹದ ಸ್ವಾಸ್ಥ್ಯಕ್ಕಾಗಿ ವೈಜ್ಞಾನಿಕ ಅಧ್ಯಯನಗಳು ನಡೆಯಬೇಕು. ಆದರೆ ಈಗ ವೈಜ್ಞಾನಿಕ ಬೆಳವಣಿಗೆಗಾಗಿ ದೇಹವನ್ನು ಬಳಸಿಕೊಳ್ಳಲಾಗುತ್ತಿದೆ. ಜೈವಿಕ ತಂತ್ರಜ್ಞಾನ ಎಂಬ ಅಧ್ಯಯನ ಶಾಖೆ ಹುಟ್ಟಿಕೊಂಡಿದ್ದೇ ಮನುಷ್ಯ ದೇಹವು ಮಾರುಕಟ್ಟೆಯ ಸಂಶೋಧನಾ ಸರಕಾಗಿದ್ದನ್ನು ಸೂಚಿಸುತ್ತದೆ. ಮನುಷ್ಯನ ರಕ್ತಕಣಗಳು ಜೀವವಿಜ್ಞಾನ ಹಾಗೂ ಔಷಧಿಯ ಸಂಶೋಧನೆಗೆ ಬೇಕಾದ ಪ್ರಯೋಗದ ವಸ್ತುಗಳಾಗಿವೆ. ಈ ಕಾರಣದಿಂದ ಸರಕಾರಗಳು ಮತ್ತು ದೊಡ್ಡ ಕಂಪನಿಗಳು ತಳಿಶಾಸ್ತ್ರದಲ್ಲಿ ನಡೆಯುವ ಸಂಶೋಧನೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿರುವುದು ನಮಗೆ ಗೊತ್ತಿರುವ ಸಂಗತಿ.

ನಾವು ದೇಹವನ್ನು ನೋಡುವ ಕ್ರಮ ಕಾಲದಿಂದ ಕಾಲಕ್ಕೆ, ಸಂದರ್ಭದಿಂದ ಸಂದರ್ಭಕ್ಕೆ ಬದಲಾಗಿದೆ. ಸಿನಿಮಾದಲ್ಲಿ, ವೇಶ್ಯಾವಾಟಿಕೆಯಲ್ಲಿ, ಜಿಮ್ನ್ಯಾಸ್ಟಿಕ್ ಮತ್ತಿತರ ಅಥ್ಲೆಟಿಕ್ಸ್ ಆಟಗಳಲ್ಲಿ, ಬಾಡಿಗೆ ತಾಯ್ತನ, ಸೌಂದರ್ಯ ಸ್ಪರ್ಧೆ ಇತ್ಯಾದಿಗಳಲ್ಲಿ ದೇಹವು ಮಾನವೀಯ ಅಂಶಗಳನ್ನು ಕಳೆದುಕೊಂಡು ನಿರಾಕಾರವಾಗಿದೆ;

ವೈದ್ಯಕೀಯ ವ್ಯವಸ್ಥೆಯ ಮುಂದೆ ರೋಗಿಯ ದೇಹ ಮಾನುಷಾಂಶ ರಹಿತವಾಗಿ, ವಸ್ತುವಿನಂತಾಗಿರುವುದನ್ನು ರಾಜಕುಮಾರ ಹಿರಾನಿಯವರ ಸಿನೆಮಾ ಮುನ್ನಾ ಭಾಯಿ ಎಂ.ಬಿ.ಬಿ.ಎಸ್. (2003) ನವಿರಾದ ಹಾಸ್ಯದ ಮೂಲಕ ಗೇಲಿ ಮಾಡಿದ್ದು ಇದಕ್ಕೆ ಸಾಕ್ಷಿ. ಮತ್ತೆ ಮನುಷ್ಯನ ದೇಹ ವ್ಯಾಪಾರೀಕಣಗೊಂಡಿದ್ದು ಕೇವಲ ವೈದ್ಯಕೀಯ ಲೋಕದಲ್ಲಿ ಅಲ್ಲ. ಇದಕ್ಕೆ ಒಂದು ಇತಿಹಾಸವೇ ಇದೆ. ನಾವು ದೇಹವನ್ನು ನೋಡುವ ಕ್ರಮ ಕಾಲದಿಂದ ಕಾಲಕ್ಕೆ, ಸಂದರ್ಭದಿಂದ ಸಂದರ್ಭಕ್ಕೆ ಬದಲಾಗಿದೆ. ಸಿನಿಮಾದಲ್ಲಿ, ವೇಶ್ಯಾವಾಟಿಕೆಯಲ್ಲಿ, ಜಿಮ್ನ್ಯಾಸ್ಟಿಕ್ ಮತ್ತಿತರ ಅಥ್ಲೆಟಿಕ್ಸ್ ಆಟಗಳಲ್ಲಿ, ಬಾಡಿಗೆ ತಾಯ್ತನ, ಸೌಂದರ್ಯ ಸ್ಪರ್ಧೆ ಇತ್ಯಾದಿಗಳಲ್ಲಿ ದೇಹವು ಮಾನವೀಯ ಅಂಶಗಳನ್ನು ಕಳೆದುಕೊಂಡು ನಿರಾಕಾರವಾಗಿದೆ; ರಿಯಿಫಿಕೇಶನ್‍ಗೆ ಒಳಪಟ್ಟಿದೆ. ಅಂದರೆ ‘ಜೀವ’ ‘ಭೌತಿಕ ವಸ್ತು’ ಆಗಿದೆ. ಒಟ್ಟಾರೆಯಾಗಿ ದೇಹವನ್ನು ಈ ರೀತಿ ನೋಡುವ ಪ್ರಕ್ರಿಯೆಯಲ್ಲ್ಲಿ ಸ್ವಾಸ್ಥ್ಯದ ಕಾಳಜಿ, ಸ್ಯಯಂ ಲಾಭದ ಕಾಳಜಿಯಾಗಿ ಪಲ್ಲಟಗೊಂಡಿದೆ.

ವೈದ್ಯಕೀಯ ಚಿಕಿತ್ಸೆ ಸಾಂಸ್ಥೀಕರಣಗೊಂಡಿದ್ದು ಈ ವ್ಯಾಪಾರೀ ಕರಣ ಪ್ರಕ್ರಿಯೆಯ ಇನ್ನೊಂದು ತುದಿ. ಮೊದಲು ಚಿಕಿತ್ಸೆ ರೋಗಿಯ ಮನೆಯಲ್ಲಿಯೇ ನಡೆಯುತ್ತಿತ್ತು. ಆಧುನಿಕ ಯುಗದಲ್ಲಿ ‘ಆಸ್ಪತ್ರೆ’ ಎಂಬ ಸಂಸ್ಥೆ ಹುಟ್ಟಿಕೊಂಡು, ಅದನ್ನು ನಡೆಸುವ ವ್ಯವಸ್ಥಾಪಕ ಮಂಡಳಿ ಸೇವೆಗಿಂತ ಆರ್ಥಿಕ ಲಾಭಕ್ಕೆ ಮಹತ್ವ ನೀಡುತ್ತದೆ. ಸಾಂಸ್ಥೀಕರಣದ ನಂತರ ಇನ್ನೊಂದು ಹೆಜ್ಜೆ ಮುಂದು ಹೋಗಿ, ಈಗ ವೈದ್ಯಕೀಯ ವೃತ್ತಿಯು ಕಾರ್ಪೊರೇಟೀಕರಣಕ್ಕೊಳಗಾಗಿದೆ. ಇದರಿಂದ ನಾವು ರೋಗ ಗುಣಮುಖವಾಗುವುದಕ್ಕೆ ಎಷ್ಟು ಖರ್ಚು ಮಾಡುತ್ತೇವೆಯೋ, ಅದಕ್ಕಿಂತಲೂ ಹೆಚ್ಚು ಹಣವನ್ನು ಆಸ್ಪತ್ರೆಗಳು ಒದಗಿಸುವ ಇತರೆ ಐಶಾರಾಮಿ ಸೌಲಭ್ಯಗಳಿಗೆ ಖರ್ಚು ಮಾಡುತ್ತೇವೆ. ಈ ವ್ಯವಸ್ಥೆಯು ಆರೋಗ್ಯದ ಕಾಳಜಿಗಿಂತಲೂ, ಅತಿ ಲಾಭಕ್ಕೆ ಹೆಚ್ಚು ಆದ್ಯತೆ ನೀಡುತ್ತದೆ. ಏಕೆಂದರೆ ಇದರ ಉದ್ದೇಶವೇ ಲಾಭ ಗಳಿಸುವುದು. ಆದ್ದರಿಂದ ಈ ಕ್ಷೇತ್ರ ಒಂದು ಉದ್ಯಮವಾಗಿ ಹೊರಹೊಮ್ಮಿ, ಇದಕ್ಕೆ ಪೂರಕವಾಗುವಂತೆ ಹಾಸ್ಪಿಟಲ್ ಮ್ಯಾನೇಜ್‍ಮೆಂಟ್ ಎನ್ನುವ ಜ್ಞಾನಶಾಖೆ ಕೂಡಾ ಹುಟ್ಟಿದೆ. ಹೀಗೆ ಒಂದು ವೃತ್ತಿ ಸಂಘಟನೆಯಾದಾಗ ಆರ್ಥಿಕ ಹಿತಾಸಕ್ತಿಗಳು ಮುಂದಾಗುತ್ತವೆ. ಸರಕಾರಿ ಆಸ್ಪತ್ರೆಗಳು ಈ ವಾದಕ್ಕೆ ಅಪವಾದವೆನ್ನುವುದು ನಿಜ. ಆದರೆ ಈ ಸಾಂಸ್ಥೀಕರಣದಿಂದ, ಕಾರ್ಪೋರೇಟೀಕರಣದಿಂದ ಹೆಚ್ಚಿನ ಆಸ್ಪತ್ರೆಗಳು, ವಿಶೇಷವಾಗಿ ಖಾಸಗಿ ಆಸ್ಪತ್ರೆಗಳು ಮಾರುಕಟ್ಟೆಯ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದನ್ನು ಅಲ್ಲಗಳೆಯುವಂತಿಲ್ಲ.

ವೈದ್ಯ ತನ್ನನ್ನು ತಾನು ಮೇಲು, ರೋಗಿಗಳು ಎಲ್ಲಾ ದೃಷ್ಟಿಯಿಂದ ಕೀಳು ಎನ್ನುವ ಮನೋಭಾವನೆ ಹಾಸುಹೊಕ್ಕಾಗಿರುತ್ತದೆ. ಈ ಅಸಮತೋಲನ ‘ಸೇವೆ’ ಎನ್ನುವ ಪ್ರಜ್ಞೆಗೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚು.

ಇನ್ನೂ ಈ ವ್ಯವಸ್ಥೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಒಂದು ನವ-ಅಧಿಕಾರಶಾಹಿ ವ್ಯವಸ್ಥೆಯೊಂದು ಹುಟ್ಟಿಕೊಳ್ಳುತ್ತದೆ. ಅದು ಈಗಾಗಲೆ ಕಾಡುತ್ತಿರುವ ಲಾಭದ ಭೂತದೊಡನೆ ‘ಅಧಿಕಾರ’ದ ದರ್ಪವನ್ನು ಚಲಾಯಿಸುತ್ತದೆ. ಈ ಅಧಿಕಾರ ಕೂಡಾ ಕೆಲಸ ಮಾಡುವುದು ಲಾಭಗಳಿಸುವ ಉದ್ದೇಶಕ್ಕೆ. ಆಧುನಿಕ ವೈದ್ಯಕೀಯ ಚಿಕಿತ್ಸೆ ಹುಟ್ಟಿಕೊಂಡಿದ್ದೇ ವೈದ್ಯ ಮತ್ತು ರೋಗಿಗಳ ಅಧಿಕಾರದ ಸಂಬಂಧದಲ್ಲಿ. ವೈದ್ಯ ತನ್ನನ್ನು ತಾನು ಮೇಲು, ರೋಗಿಗಳು ಎಲ್ಲಾ ದೃಷ್ಟಿಯಿಂದ ಕೀಳು ಎನ್ನುವ ಮನೋಭಾವನೆ ಹಾಸುಹೊಕ್ಕಾಗಿರುತ್ತದೆ. ಈ ಅಸಮತೋಲನ ‘ಸೇವೆ’ ಎನ್ನುವ ಪ್ರಜ್ಞೆಗೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚು. ಕೊನೆಗೂ ಲಾಭ, ಅಧಿಕಾರಗಳ ಚಕ್ರವ್ಯೂಹದಲ್ಲಿ ಹಿಂಸೆಯಾಗುವುದು ರೋಗಿಗೆ.

ಈ ಕ್ಷೇತ್ರದ ಇನ್ನೊಂದು ಸಮಸ್ಯೆಯೆಂದರೆ ಅತಿಯಾದ ವೃತ್ತಿಪರತೆ. ವ್ಯಾಪಾರೀಕರಣ, ಲಾಭಕೋರತನ, ಅಧಿಕಾರ, ವೃತ್ತಿಪರತೆಗಳ ನಡುವೆ ಒಂದು ಒಳಸಂಬಂಧವಿದೆ. ಹೆಚ್ಚು ವೃತ್ತಿಪರತೆ (ಸ್ಪೆಶಲೈಜೇಶನ್) ಆದಷ್ಟು, ಸಾರ್ವಜನಿಕ ಹಿತಾಸಕ್ತಿ, ಅವಶ್ಯಕತೆಗಳ ಬಗ್ಗೆ ಯೋಚಿಸದೇ, ನಾವು ಸಾರ್ವಜನಿಕರಿಂದ ಏನೆಲ್ಲವನ್ನು ಗಿಟ್ಟಿಸಿಕೊಳ್ಳಬೇಕೆಂಬ ಆಲೋಚನೆ ಮುಖ್ಯವಾಗುತ್ತದೆ. ಆಗ ಆರೋಗ್ಯಕ್ಕಿಂತ ಲಾಭಗಳಿಸುವುದೇ ಮುಖ್ಯ ಆದ್ಯತೆ. ಲಾಭವೇ ಬೇಡವೆಂದು ಹೇಳುವುದು ಸಮಂಜಸವಲ್ಲ. ಆದರೆ ಲಾಭಕ್ಕೂ ಒಂದು ಮಿತಿ ಇದೆ. ಸಮಸ್ಯೆ ಇರುವುದು ಮಿತಿಮೀರಿದ ಲಾಭಕೋರತನದಲ್ಲಿ. ಈ ಕ್ಷೇತ್ರದಲ್ಲಿ ರೋಗಿಯ ವಿಷಯವು ಸಾವು-ಬದುಕಿನ ಪ್ರಶ್ನೆಯಾಗಿರುವುದರಿಂದ ಇಲ್ಲಿ ಲಾಭಕ್ಕೆ ಮಿತಿಯೇ ಇಲ್ಲದಂತಾಗುತ್ತದೆ.

ಈಗಿರುವ ಎಲ್ಲ ಜ್ಞಾನಶಾಖೆಗಳಲ್ಲಿ ಇದೊಂದು ಅತ್ಯುನ್ನತ ಜ್ಞಾನವೆಂಬ ಭ್ರಮೆಯನ್ನು ನಮ್ಮ ಕಾಲ ಹುಟ್ಟುಹಾಕಿದೆ. ಈ ಜ್ಞಾನವನ್ನು ಗಳಿಸುವವರು ಜಿನಿಯಸ್ ಆಗಿರಬೇಕು. ಅವರು ವಿಜ್ಞಾನವನ್ನು ಓದಿ, ಹತ್ತನೆಯ ಮತ್ತು ಹನ್ನೆರಡನೆಯ ತರಗತಿಗಳ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬೇಕು ಇತ್ಯಾದಿ. 

ಇಂತಹ ಅಂಶಗಳ ಜೊತೆ ವೈದ್ಯಕೀಯ ವ್ಯವಸ್ಥೆ ತಂತ್ರಜ್ಞಾನ ಹಾಗೂ ದುಬಾರಿ ಯಂತ್ರಗಳ ಮೇಲೆ ಬಂಡವಾಳವನ್ನು ಹೂಡುವುದು, ಔಷಧಿ ಉದ್ಯಮದ ಜೊತೆಗಿನ ಲಾಭಾಂಶದ ನಂಟು, ದುಬಾರಿ ವೈದ್ಯಕೀಯ ಶಿಕ್ಷಣ ಇತ್ಯಾದಿ ವಿಷಯಗಳು ಈ ಜಗತ್ತನ್ನು ವಾಣಿಜ್ಯೀಕರಣಗೊಳಿಸಿವೆ. ಈ ವಿಷಯಗಳನ್ನು ಸಮಾಜಮುಖಿಯ ಜನವರಿ 2018ರ ಸಂಚಿಕೆಯ ಲೇಖನವೊಂದರಲ್ಲಿ ನಾನು ಈಗಾಗಲೆ ವಿವರಿಸಿದ್ದೇನೆ. ಆ ಕಾರಣದಿಂದ ಇಲ್ಲಿ ಅವುಗಳನ್ನು ಮತ್ತೆ ವಿವರಿಸುವ ಪ್ರಯತ್ನ ಮಾಡುತ್ತಿಲ್ಲ.

ಇನ್ನು, ಈ ಸಮಸ್ಯೆಗೆ ಸಂಬಂಧಪಟ್ಟಂತೆ ಸೈದ್ಧಾಂತಿಕ ವಿಷಯಯೊಂದನ್ನು ಚರ್ಚಿಸಬೇಕು. ಅದೇನೆಂದರೆ ನಾವು ವೈದ್ಯಕೀಯ ಜ್ಞಾನವನ್ನು ವೈಭವೀಕರಿಸಿ, ಅದರ ಸುತ್ತಲೂ ವಿಸ್ಮಯವನ್ನು ಸೃಷ್ಟಿಸಿದ ವಿದ್ಯಮಾನ. ಈಗಿರುವ ಎಲ್ಲ ಜ್ಞಾನಶಾಖೆಗಳಲ್ಲಿ ಇದೊಂದು ಅತ್ಯುನ್ನತ ಜ್ಞಾನವೆಂಬ ಭ್ರಮೆಯನ್ನು ನಮ್ಮ ಕಾಲ ಹುಟ್ಟುಹಾಕಿದೆ. ಈ ಜ್ಞಾನವನ್ನು ಗಳಿಸುವವರು ಜಿನಿಯಸ್ ಆಗಿರಬೇಕು. ಅವರು ವಿಜ್ಞಾನವನ್ನು ಓದಿ, ಹತ್ತನೆಯ ಮತ್ತು ಹನ್ನೆರಡನೆಯ ತರಗತಿಗಳ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬೇಕು ಇತ್ಯಾದಿ. 

ವೈದ್ಯಕೀಯ ಸೀಟ್‍ನ್ನು ಪಡೆದುಕೊಳ್ಳುವುದು ಎಷ್ಟು ಕಷ್ಟಕರವೆಂಬುವುದು ನಮಗೆ ಗೊತ್ತಿರುವ ಸಂಗತಿ. ವೈದ್ಯನಾಗಲು ಬೇಕಾದ ಜ್ಞಾನವನ್ನು ಪಡೆದುಕೊಳ್ಳಲು ಅಷ್ಟೊಂದು ಪರಿಶ್ರಮದ ಅವಶ್ಯಕತೆ ಇದೆಯೆ ಎಂಬುದನ್ನು ಒರೆಗೆ ಹಚ್ಚಿ ನೋಡಬೇಕಾಗಿದೆ. ಏಕೆಂದರೆ ಈ ವೈದ್ಯಕೀಯ ಜ್ಞಾನ ಹುಟ್ಟಿಬಂದ ಪಾಶ್ಚಿಮಾತ್ಯ ಸಂಸ್ಕೃತಿ ಯಲ್ಲಿ ಇದನ್ನು ಸೈದ್ಧಾಂತಿಕವಾಗಿ ಅಷ್ಟೊಂದು ಉನ್ನತ ಸ್ಥಾನದಲ್ಲಿ ನೋಡಲಾಗಿಲ್ಲ. ಅಂದರೆ ಇಂದು ನಾವು ಇದನ್ನು ಎಷ್ಟು ಕ್ಲಿಷ್ಟಕರವಾದ ವಿಷಯವೆಂದು ನೋಡುತ್ತೇವೆಯೂ ಹಾಗೆ ಇದನ್ನು ಪಶ್ಚಿಮ ಜಗತ್ತು ನೋಡಿಲ್ಲ. ಒಂದರ್ಥ ದಲ್ಲಿ ಇದು ವಿದ್ವಾಂಸರು ಹಗಲು-ರಾತ್ರಿ ಕುಳಿತು ಓದಬೇಕಾದಂತಹ ದೊಡ್ಡ ಜ್ಞಾನವೇ ಅಲ್ಲ! ಇದೊಂದು ಕುಶಲಗಾರಿಕೆಯ ಕೆಲಸ.

ಹೆಚ್ಚು ಅನುಭವ ಮತ್ತು ತರಬೇತಿಯಡಿಯಲ್ಲಿ ಪಡೆಯಬಹುದು. ಇದೊಂದು ವೃತ್ತಿ, ಕಲಿಯುತ್ತಾ ಗಿಟ್ಟಿಸಿಕೊಳ್ಳುವ ಜ್ಞಾನ. ಹಾಗೆಂದ ಮಾತ್ರಕ್ಕೆ ಇಲ್ಲಿ ಓದು ಮುಖ್ಯವಲ್ಲ ಎಂದು ಹೇಳುತ್ತಿಲ್ಲ.

ಈ ಪ್ರಮೇಯವನ್ನು ವಿವರಿಸಿ ಹೇಳುವುದಾದರೆ ಹೀಗೆ ಹೇಳಬಹುದು: ಗ್ರೀಕ್‍ರು ಬೌದ್ಧಿಕ ಚಟುವಟಿಕೆಯನ್ನು ಎರಡು ಭಾಗಗಳಾಗಿ ವಿಂಗಡಿಸುತ್ತಾರೆ; ಒಂದು ‘ಎಪಿಸ್ಟಮಿ’, ಇನ್ನೊಂದು ‘ಟೆಶ್ನಿ’. ಮೊದ¯ನೆಯದು ವೈಜ್ಞಾನಿಕವಾದ, ಸೈದ್ಧಾಂತಿಕ ಜ್ಞಾನ. ಇದು ಕಠಿಣ ಪರಿಶ್ರಮದಿಂದ ಓದಿ, ಆಲೋಚನೆ, ತರ್ಕದ ಮೂಲಕ ವಿದ್ವಾಂಸರು ಸೃಷ್ಟಿಸುವ ಜ್ಞಾನ. ಈಗಿನ ನಮ್ಮ ಸ್ವಾಭಾವಿಕ ವಿಜ್ಞಾನಗಳು, ಉನ್ನತಮಟ್ಟದ ಸೈದ್ಧಾಂತಿಕ ಜ್ಞಾನ ವ್ಯವಸ್ಥೆಗಳು ಈ ಮಾದರಿಗೆ ಸೇರುತ್ತವೆ. ಎರಡನೆಯದು, ಟೆಶ್ನಿ (ಕ್ರಾಫ್ಟ್ ಎನ್ನುವ ಅರ್ಥದಲ್ಲಿ). ಇದು ಕೌಶಲ್ಯಕ್ಕೆ ಸಂಬಂಧಪಟ್ಟಿದ್ದು. ಇದನ್ನು ಹೆಚ್ಚು ಅನುಭವ ಮತ್ತು ತರಬೇತಿಯಡಿಯಲ್ಲಿ ಪಡೆಯಬಹುದು. ಇದೊಂದು ವೃತ್ತಿ, ಕಲಿಯುತ್ತ್ತಾ ಗಿಟ್ಟಿಸಿಕೊಳ್ಳುವ ಜ್ಞಾನ. ಹಾಗೆಂದ ಮಾತ್ರಕ್ಕೆ ಇಲ್ಲಿ ಓದು ಮುಖ್ಯವಲ್ಲ ಎಂದು ಹೇಳುತ್ತಿಲ್ಲ. ಇಲ್ಲಿಯ ಓದಿನ ಸ್ವರೂಪ ಬೇರೆ. ಒಂದು ವೇಳೆ ಓದು ಇಲ್ಲದೇ, ಕೇವಲ ಅನುಭವ, ತರಬೇತಿಯಿಂದಲೂ ಇದು ಸಾಧ್ಯವಾಗುವ ಕೆಲಸ. ಹಾಗಾಗಿ, ಬಡಿಗೆ ಕೆಲಸ, ಕುಂಬಾರಿಕೆ, ಮೆಕ್ಯಾನಿಕಲ್ ತಾಂತ್ರಿಕತೆ, ಇತ್ಯಾದಿ (ಟೆಶ್ನಿ) ಕುಶಲಗಾರಿಕೆಗಳ ಸಾಲಿಗೆ ಗ್ರೀಕ್‍ರು ವೈದ್ಯಕೀಯ ವೃತ್ತಿಯನ್ನೂ ಸೇರಿಸುತ್ತಾರೆ.

ಇದೊಂದು ವಿಚಿತ್ರವಾದ ವಾದ ಎನ್ನಬಹುದು. ಏಕೆಂದರೆ ವೈದ್ಯಕೀಯ ಜ್ಞಾನ ‘ಜೀವ’ದ ಜೊತೆ ಕೆಲಸ ಮಾಡುವುದರಿಂದ ಅದನ್ನು ಇತರ ಕೌಶಲಗಾರಿಕೆ ಕಸುಬುಗಳಿಗೆ ಹೋಲಿಸುವುದು ಎಷ್ಟು ಸಮಂಜಸ ಎಂದು ಕೇಳಬಹುದು. ಹೌದು, ಅದನ್ನು ಅಲ್ಲಗಳೆಯುವಂತಿಲ್ಲ. ಬಡಿಗೆ ಕೆಲಸದಲ್ಲೂ ಸಹ ಕಟ್ಟಗೆ, ಮರದ ತುಂಡನ್ನು ‘ಜೀವ’ ಇರುವ ವಸ್ತುವೆಂದು ನೋಡಲಾಗುತ್ತದೆ. ಒಂದು ವೇಳೆ ಈ ಜೀವ-ನಿರ್ಜಿವದ ಪರಿಕಲ್ಪನೆಯ ಆಚೆಗೆ ನೋಡುವುದಾದರೆ, ವೈದ್ಯಕೀಯ ವೃತ್ತಿ ಮನುಷ್ಯ ದೇಹದ ಮೇಲೆ ಕೆಲಸ ಮಾಡಿದರೂ, ಇದೊಂದು ಮೂಲತಃ ಕೌಶಲಗಾರಿಕೆಯ ಕಸುಬು. ಈ ಜ್ಞಾನದ ಸ್ವರೂಪ ‘ಎಪಿಸ್ಟಮಿ’ ಅಲ್ಲವೇ ಅಲ್ಲ. ಇದು ಟೆಶ್ನಿ; ಬಹಳ ನಾಜೂಕಾದ ಕ್ರಾಫ್ಟ್ ಎಂದು ಕರೆಯಬಹುದು.

ವೈದ್ಯಕೀಯ ವೃತ್ತಿ ಟೆಶ್ನಿಯೇ; ಇಲ್ಲಿ ಅನುಭವ, ತರಬೇತಿ ಮುಖ್ಯ. ಆದರೆ ನಾವು ಎಪಿಸ್ಟಮಿಗೆ ಬೇಕಾಗಿರುವ ಬೌದ್ಧಿಕ ಶ್ರಮದ ಬೇಡಿಕೆಯನ್ನು ಟೆಶ್ನಿಗೆ ಮಾಡುತ್ತಿರುವುದರ ಮೂಲಕ ವೈದ್ಯಕೀಯ ಜ್ಞಾನ ಹಾಗೂ ಶಿಕ್ಷಣವನ್ನು ಹೈಪ್ ಮಾಡಿದ್ದೇವೆ.

ಇಲ್ಲಿ ಒಂದು ವ್ಯತ್ಯಾಸವನ್ನು ಕೂಡಾ ಮಾಡಬೇಕಾಗುತ್ತದೆ. ವೈದ್ಯಕೀಯ ವೃತ್ತಿಯನ್ನು ಅನುಸರಿಸುವವರು ಬೇರೆ, ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ವಿಜ್ಞಾನಿಗಳು ಬೇರೆ. ಟೆಶ್ನಿ ಎನ್ನುವುದು ಕೇವಲ ಪ್ರ್ಯಾಕ್ಟಿಸ್ ಮಾಡುವ ವೈದ್ಯರ ಕೆಲಸವನ್ನು ವಿವರಿಸುವ ಪರಿಕಲ್ಪನೆ. ಸಂಶೋಧಕರ (ವೈದ್ಯಕೀಯ ವಿಜ್ಞಾನಿಗಳು) ಕೆಲಸ ಎಪಿಸ್ಟಮಿಯಲ್ಲಿಯೇ ಬರುತ್ತದೆ.

ವೈದ್ಯಕೀಯ ವಿಜ್ಞಾನ ಎಪಿಸ್ಟಮಿಯಾಗಿ ಅಗಾಧವಾದ ಕೆಲಸವನ್ನು ಮಾಡಿದೆ. ವೈದ್ಯಕೀಯ ಸಂಶೋಧನೆ ಇತ್ತೀಚಿನ ದಿನಗಳಲ್ಲಿ ಮಾಡಿದ ಅತ್ಯದ್ಭುತ ಸಾಧನೆಗಳನ್ನು ಮರೆಯುವಂತಿಲ್ಲ. ಆದರೆ ಸಂಶೋಧನೆ ಬೇರೆ, ವೃತ್ತಿ (ಪ್ರ್ಯಾಕ್ಟೀಸ್) ಬೇರೆ. ವೈದ್ಯಕೀಯ ವೃತ್ತಿ ಟೆಶ್ನಿಯೇ; ಇಲ್ಲಿ ಅನುಭವ, ತರಬೇತಿ ಮುಖ್ಯ. ಆದರೆ ನಾವು ಎಪಿಸ್ಟಮಿಗೆ ಬೇಕಾಗಿರುವ ಬೌದ್ಧಿಕ ಶ್ರಮದ ಬೇಡಿಕೆಯನ್ನು ಟೆಶ್ನಿಗೆ ಮಾಡುತ್ತಿರುವುದರ ಮೂಲಕ ವೈದ್ಯಕೀಯ ಜ್ಞಾನ ಹಾಗೂ ಶಿಕ್ಷಣವನ್ನು ಹೈಪ್ ಮಾಡಿದ್ದೇವೆ. ಈ ಅನವಶ್ಯಕ ವೈಭವೀಕರಣವೂ ಅದರ ಆರ್ಥಿಕ ಆಯಾಮದ ಮೇಲೆ ಪರೋಕ್ಷವಾಗಿಯಾದರೂ ಪರಿಣಾಮ ಬೀರುತ್ತಿದೆ.

ಕೊನೆಯದಾಗಿ, ನಾವು ಕೇವಲ ವೈದ್ಯರನ್ನು ಅನುಮಾನದಿಂದ ನೋಡಿದರೆ ಯಾವ ಸಮಸ್ಯೆಯನ್ನು ಬಗೆಹರಿಸಲಾಗದು. ಈ ವೃತ್ತಿ ಸಿಲುಕಿ ಹಾಕಿಕೊಂಡಿರುವ ಬಂಡವಾಳಶಾಹಿಯ ಜಾಲವನ್ನು ಅರ್ಥ ಮಾಡಿಕೊಳ್ಳಬೇಕು. ಕಾರ್ಲ್ ಮಾರ್ಕ್ಸ್ ಗುರುತಿಸಿದಂತೆ ತನ್ನ ಮಿತಿಯನ್ನು ಸದಾ ಮೀರುವ ಶಕ್ತಿ ಇರುವುದು ಬಂಡವಾಳದ ಸಂಸ್ಕೃತಿಗೆ ಮಾತ್ರ. ನಾವು ವ್ಯಾಪಾರೀಕರಣವನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ. ಅದನ್ನು ಕಡಿಮೆಗೊಳಿಸಬಹುದು.

ಮನುಷ್ಯರ ದೇಹವನ್ನು ಸರಿಪಡಿಸುವ ಕೆಲಸಕ್ಕೆ ಮನುಷ್ಯನ ತಾತ್ವಿಕ ಪರಿಕಲ್ಪನೆಯನ್ನು ಪರಿಚಯಸಬೇಕು. ‘ನಮಗೆ ಅವಶ್ಯಕತೆಗಿಂತ ಹೆಚ್ಚಿನದನ್ನು ಬಯಸುವುದು ಅಪರಾಧ’ವೆಂದ ಗಾಂಧಿ ಮಾದರಿಯ ನೈತಿಕತೆಯನ್ನು ಈ ಕ್ಷೇತ್ರದ ಪಾಲುದಾರರಿಗೆ ಮುಟ್ಟಿಸಬೇಕು.

ಇದಕ್ಕೆ ಒಂದು ಉಪಾಯವೆಂದರೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಮನಃಪರಿವರ್ತನೆಯಾಗಬೇಕು. ಅಂದರೆ ನಾವು ಈ ಕ್ಷೇತ್ರವನ್ನು ನೋಡುವ ಮನೋಭಾವ ಬದಲಾಗಿ, ಆಂತರಿಕ ಮೌಲ್ಯಗಳ ಪತನವನ್ನು ತಡೆಗಟ್ಟಬೇಕು. ಸದ್ಯ ಇದನ್ನು ಅಡ್ರೆಸ್ ಮಾಡಲು ಶಿಕ್ಷಣ ಕ್ಷೇತ್ರದಿಂದ ಸ್ವಲ್ಪ ಸಾಧ್ಯವಾದಿತು. ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ (ಲಿಬರಲ್ ಆರ್ಟ್ಸ್ ಎಜುಕೇಶನ್) ಉದಾರ ಶಿಕ್ಷಣವನ್ನು ನಮ್ಮ ವೃತ್ತಿ ಶಿಕ್ಷಣ ಗಂಭೀರವಾಗಿ ತೆಗೆದುಕೊಳ್ಳಬೇಕು. ಜೀವನೋಪಾಯಕ್ಕೆ ಬೇಕಾಗುವ ವೃತ್ತಿಪರ ಶಿಕ್ಷಣದ ಜೊತೆಗೆ ಸಾರ್ಥಕ ಬದುಕನ್ನು ಹೇಗೆ ನಡೆಸಬೇಕೆಂದು ಕಲಿಸುವ ಮಾನವಿಕ ಶಿಕ್ಷಣ ಏನಾದರೂ ದಾರಿ ತೋರಿಸಬಹುದು. ಮನುಷ್ಯರ ದೇಹವನ್ನು ಸರಿಪಡಿಸುವ ಕೆಲಸಕ್ಕೆ ಮನುಷ್ಯನ ತಾತ್ವಿಕ ಪರಿಕಲ್ಪನೆಯನ್ನು ಪರಿಚಯಸಬೇಕು. ‘ನಮಗೆ ಅವಶ್ಯಕತೆಗಿಂತ ಹೆಚ್ಚಿನದನ್ನು ಬಯಸುವುದು ಅಪರಾಧ’ವೆಂದ ಗಾಂಧಿ ಮಾದರಿಯ ನೈತಿಕತೆಯನ್ನು ಈ ಕ್ಷೇತ್ರದ ಪಾಲುದಾರರಿಗೆ ಮುಟ್ಟಿಸಬೇಕು.

ಇದರಿಂದ ಎಲ್ಲವೂ ಬದಲಾಗುತ್ತದೆಂದು ಹೇಳಲಾಗದು. ಆದರೆ ವೈದ್ಯಕೀಯ ಶಿಕ್ಷಣದಲ್ಲಿ ಮಾನವಿಕ ಹಾಗೂ ಸಮಾಜ ವಿಜ್ಞಾನದ ವಿಷಯಗಳನ್ನು ಅರ್ಥಪೂರ್ಣವಾಗಿ ಅಳವಡಿಸುವುದು ಸ್ವಲ್ಪಮಟ್ಟಿಗಾದರೂ ಫಲ ಕೊಡಬಹುದು. ಬಹುಶಃ ಈ ಕಾರಣಕ್ಕಾಗಿಯೇ ಇತ್ತೀಚೆಗೆ ಬದಲಾದ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮದಲ್ಲಿ ‘ವೈದ್ಯಕೀಯ ನೀತಿಶಾಸ್ತ್ರ’ವನ್ನು (ಮೆಡಿಕಲ್ ಎಥಿಕ್ಸ್) ಪರಿಚಯಿಸಿರಬೇಕು. ಆದರೆ ಯಾವುದೂ ಈಡಾಗದ ಬಂಡವಾಳಶಾಹಿ ಸಂಸ್ಕೃತಿಗೆ ಇದೆಂತಹ ಅಸ್ತ್ರ?

*ಲೇಖಕರು ತುಮಕೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರು.

Leave a Reply

Your email address will not be published.