ವೈದ್ಯರನ್ನು ಅಸಹಾಯಕರನ್ನಾಗಿಸಿದ ಸನ್ನಿವೇಶ

ಬಾರಿ ಸಾವಿನ ಪ್ರಮಾಣ ಮೊದಲನೆಯ ಅಲೆಗಿಂತ ಹೆಚ್ಚಾಗಿದ್ದಕ್ಕೆ ಸೋಂಕಿನ ಅಗಾಧತೆ, ಆಸ್ಪತ್ರೆಗೆ ಹೋಗಲು ತಡ ಮಾಡಿದ್ದು ಸೋಂಕಿತರು ವೈದ್ಯಕೀಯ ತಪಾಸಣೆಯನ್ನು ನಿಧಾನಿಸಿದ್ದು, ಆಸ್ಪತ್ರೆಯಲ್ಲಿ ಹಾಸಿಗೆ ದೊರೆಯದಿದ್ದುದು ಹೀಗೆ ಹಲವು ಕಾರಣಗಳಿವೆ.

-ಡಾ.ವಿವೇಕ್ ಜಿ.

ಭಾರತದಲ್ಲಿ 2020ರ ಪ್ರಾರಂಭದಲ್ಲಿ ಕೋವಿದ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗ ಬೇರೆ ದೇಶಗಳಲ್ಲಿ ಆಗಾಗಲೇ ಸಂಭವಿಸಿದ್ದ ಸಾವು ನೋವುಗಳನ್ನು ಕಂಡು ಎಲ್ಲರೂ ಹೆದರಿದ್ದರು. ಆರೋಗ್ಯ ಸೇವಾ ಸೌಕರ್ಯಗಳನ್ನು ಸಜ್ಜುಗೊಳಿಸಲು ಕಾರ್ಯತತ್ಪರವಾದ ಸರ್ಕಾರ ಸಾಧ್ಯವಾದಷ್ಟು ಬೇಗ ದೇಶದ ಚಟುವಟಿಕೆಗಳಿಗೆ ಬೀಗಮುದ್ರೆ ಘೋಷಿಸಿತ್ತು; ಆರೋಗ್ಯ ಸೌಕರ್ಯಗಳನ್ನು ಸಜ್ಜುಗೊಳಿಸಿಕೊಳ್ಳಲು ಇದು ಅನಿವಾರ್ಯ ಕ್ರಮವೆಂದು ನಮಗೆಲ್ಲ ಗೊತ್ತಿತ್ತು. ಸಂಪೂರ್ಣ ಯಶಸ್ವಿಯಾಗದಿದ್ದರೂ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೋವಿದ್-19ರ ಮೊದಲ ಅಲೆಯನ್ನು ಹ್ಯಾಗೋ ಎದುರಿಸಿದೆವು. ಎಡೆಬಿಡದ ಪ್ರಯತ್ನಗಳ ನಂತರ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತ ಆರೋಗ್ಯ ಸೇವಾ ಸೌಕರ್ಯಗಳ ಮೇಲಿನ ಒತ್ತಡ ತಗ್ಗಿತ್ತು.

ಮೊದಲ ಅಲೆ ತಗ್ಗಿದ ನಂತರದ್ದು ಎರಡನೆಯ ಅಲೆಯನ್ನು ಎದುರಿಸಲು ಸರ್ಕಾರ ಹೆಚ್ಚು ಕಾರ್ಯತತ್ಪರವಾಗಿ, ಚುರುಕಾಗಿ ಸೋಂಕು ತಡೆ ಚುಚ್ಚುಮದ್ದನ್ನು ಕೊಡುವ ತಂತ್ರಗಾರಿಕೆ ರೂಪಿಸಬೇಕಾದ ಕಾಲ. ಯಾಕೆಂದರೆ ಯೂರೋಪಿಯನ್ ದೇಶಗಳು ತತ್ತರಿಸಿಹೋಗಿದ್ದನ್ನು ನಾವು ಕಂಡಿದ್ದೆವು; ಎರಡನೆಯ ಅಲೆ ಮೊದಲ ಅಲೆಗಿಂತ ಭೀಕರವಾಗಿತ್ತು. ಆದರೆ ನಾವು ಮಾಡಿದ್ದೇನು? ಎದೆ ತಟ್ಟಿಕೊಳ್ಳುವ ಬೃಹತ್ ಚುನಾವಣಾ ಸಭೆಗಳು, ಧಾರ್ಮಿಕ ಆಚರಣೆ, ಮೇಳಗಳು ಇತ್ಯಾದಿ. ಹೀಗಾಗಿ ಭಾರತ ಮೊದಲ ಕೋವಿದ್ ಅಲೆಯ ಮೇಲಿನ ವಿಜಯೋತ್ಸವ ಆಚರಿಸುವ ಮೈಮರೆವಿನಲ್ಲಿ ಎರಡನೆಯ ಅಲೆಯನ್ನು ತಾನೇ ಸ್ವಾಗತಿಸಿದಂತಾಯಿತು.

ಕೋವಿದ್ ಸೋಂಕುತಡೆ ಚುಚ್ಚುಮದ್ದನ್ನೇನೊ ತಯಾರಿಸಿಕೊಂಡೆವು ಆದರೆ ಇದನ್ನು ತೆಗೆದುಕೊಳ್ಳಬೇಕಾಗಿರುವ ಅಗತ್ಯ ಕುರಿತು ಜನಸಮುದಾಯಗಳಿಗೆ ತಿಳಿವಳಿಕೆ ಕೊಡದೇ ಹೋದೆವು. ಇದನ್ನು ಯಾವ ಕಾರಣಕ್ಕಾಗಿ Novel virus ಎಂದು ಕರೆಯಲಾಯಿತೋ! ಧರ್ಮ, ಜಾತಿ ಮತ್ತು ವರ್ಣಗಳನ್ನು ಮೀರಿ ಈಗ ಸಮಸ್ತ ಮಾನವತೆ ಹಿಂದೆಂದೂ ಎದುರಿಸಿರದ ಭೀಕರ ಸ್ವರೂಪದಲ್ಲಿ ನಮಗೆ ಎದುರಾಗಿದೆ. ಎರಡನೆಯ ಕೋವಿದ್ ಅಲೆ ಹುಚ್ಚು ಪ್ರವಾಹದಂತೆ ಅಪ್ಪಳಿಸಿದಾಗ ಜನ ಪರಸ್ಪರ ದೂರುತ್ತ ಹೋದುದಷ್ಟೇ.

ಜನಸಮುದಾಯಗಳ ಬೆಂಬಲ, ಸಹಕಾರವಿಲ್ಲದೇ ಸರ್ಕಾರವೊಂದೇ ಎಲ್ಲವನ್ನೂ ನಿರ್ವಹಿಸುವುದು ಸಾಧ್ಯವಿರಲಿಲ್ಲ; ಜನರ ಬೇಜವಾಬ್ದಾರಿಯುತ ನಡವಳಿಕೆ ಮತ್ತು ಸರ್ಕಾರದ ದುರ್ಬಲ ಆಡಳಿತ ವ್ಯವಸ್ಥೆಗಳೆರಡೂ ಕಾರಣವಾಗಿ ಮಿಲಿಯಗಟ್ಟಲೆ ಜನ ಪ್ರಾಣ ಕಳೆದುಕೊಳ್ಳುವಂತಾಯಿತು. ಗ್ರಾಮೀಣ ಪ್ರದೇಶದ ಜನರು ಮುಂಜಾಗರೂಕತೆಯಿಂದ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಅರಿವು ಕಟ್ಟಿಕೊಟ್ಟಿದ್ದರೆ ಸಂಭವಿಸುತ್ತಿರುವ ಸಾವುಗಳನ್ನು ಗಣನೀಯವಾಗಿ ತಡೆಗಟ್ಟಬಹುದಿತ್ತು. ಎರಡನೆಯ ಕೋವಿಡ್ ಅಲೆಯನ್ನು ತುಂಬಾ ಕೆಟ್ಟದಾಗಿ ಅಂದಾಜು ಮಾಡಿದ್ದು ಈಗ ಸ್ಪಷ್ಟವಾಗಿ ಕಾಣುತ್ತಿದೆ.

ಪರಿವರ್ತನೆಗೊಂಡಿರುವ ವೈರಾಣು ಈಗ ಭೀಕರ ಸ್ವರೂಪ ತಾಳಿ ನಮಗೆ ಎದುರಾಗಿದೆ. ಆರೋಗ್ಯ ತಜ್ಞರು ಕೊಟ್ಟ ಎಚ್ಚರಿಕೆಯ ನಂತರವೂ ನಾವು ಯಾಕೆ ಆರೋಗ್ಯ ಸೌಕರ್ಯಗಳನ್ನು ಸಜ್ಜುಗೊಳಿಸಿಕೊಳ್ಳಲಿಲ್ಲ? ಮುಂಚಿತವಾಗಿಯೇ ಬೀಗಮುದ್ರೆ ಘೋಷಿಸಿದ್ದರೆ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿ ಯಾವುದೇ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗುವಂತೆ ಆರೋಗ್ಯ ಸೌಕರ್ಯಗಳನ್ನು ಸಜ್ಜುಗೊಳಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ಸಿಕ್ಕಂತಾಗುತ್ತಿತ್ತು. ವಾಸ್ತವಿಕವಾಗಿ ಮೊದಲ ಕೋವಿದ್ ಅಲೆ ತಗ್ಗುತ್ತಿದ್ದಂತೆ ಈ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಈ ಬಾರಿ ಸಾವಿನ ಪ್ರಮಾಣ ಮೊದಲನೆ ಅಲೆಯ ಪ್ರಮಾಣಕ್ಕಿಂತ ಹೆಚ್ಚಾಗಿದ್ದಕ್ಕೆ ಸೋಂಕಿನ ಅಗಾಧತೆ, ಆಸ್ಪತ್ರೆಗೆ ಹೋಗಲು ತಡ ಮಾಡಿದ್ದು ಸೋಂಕಿತರು ವೈದ್ಯಕೀಯ ತಪಾಸಣೆಯನ್ನು ನಿಧಾನಿಸಿದ್ದು, ಆಸ್ಪತ್ರೆಯಲ್ಲಿ ಹಾಸಿಗೆ ದೊರೆಯದಿದ್ದುದು ಹೀಗೆ ಹಲವು ಕಾರಣಗಳಿವೆ.

ವೈದ್ಯಕೀಯ ನಿಯತ್ತಿನ ತಾಕಲಾಟದ ನಾಟಕವನ್ನು ವೈಜ್ಞಾನಿಕ ಸಿನಿಮಾಗಳಲ್ಲಿ ಮಾತ್ರ ನೋಡಲು ಸಾಧ್ಯ; ನನ್ನ ವೈಯಕ್ತಿಕ ಅನುಭವದಿಂದ ಹೇಳಬೇಕೆಂದರೆ ಶರೀರದಲ್ಲಿ ಶೇ.50 ಕ್ಕಿಂತ ಕಡಿಮೆ ಆಮ್ಲಜನಕ ಪ್ರಮಾಣ ಉಳಿದಿರುವ 15 ಸೋಂಕಿತರ ಗುಂಪು ಒಂದೇ ದಿನ ಆಸ್ಪತ್ರೆಗೆ ಬಂದು ಎಲ್ಲರೂ ವೆಂಟಿಲೇಟರ್ ಬೆಡ್ ಕೇಳಿದಾಗ ಯಾರಿಗೆ ಅಂತಾ ಕೊಡುವುದು? ತುಂಬಾ ಗಂಭೀರ ಪರಿಸ್ಥಿತಿಯಲ್ಲಿರುವ ವ್ಯಕ್ತಿಗೆ ವೆಂಟಿಲೇಟರ್ ಬೆಡ್ ಕೊಟ್ಟು ಅದನ್ನು ಸರ್ಕಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆ (SAST)ಯಡಿ ಆತನ ಪರವಾಗಿ ಬ್ಲಾಕ್ ಮಾಡಿರದಿದ್ದರೆ ಮಾಧ್ಯಮಗಳ ಕಣ್ಗಾವಲಿನಡಿ, ಕೊಟ್ಟವನ ಪಾಡು ಏನಾಗಬೇಕಿತ್ತು?

ಸರ್ಕಾರ ಶಿಫಾರಸು ಮಾಡಿದ್ದ 14 ಸೋಂಕಿತರು ಉಳಿದಿದ್ದ ಒಂದೇ ವೆಂಟಿಲೇಟರ್ ಬೆಡ್ಡಿಗೆ ಸ್ಪರ್ಧಿಸುವ ಪರಿಸ್ಥಿತಿ ಉಂಟಾಯಿತು. ಇದ್ದ ಒಂದು ವೆಂಟಿಲೇಟರ್ ಬೆಡ್ಡನ್ನು ಮೊದಲು ಬಂದವರಿಗೆ ಕೊಡುವುದೋ? ಮೊದಲ ಸಲ 30 ವರ್ಷದ ಯುವಕನಿಗೆ ವೆಂಟಿಲೇಟರ್ ಬೆಡ್ ಕೊಡದೇ 73 ವರ್ಷದ ವೃದ್ಧರಿಗೆ ಕೊಟ್ಟಿದ್ದೆವು. 73 ವರ್ಷದ ಆ ವೃದ್ಧರು ಕೆಲವೇ ಗಂಟೆಗಳಲ್ಲಿ ಮೃತರಾದರು. ಆಗ ಜೀವ ಮುದುಡಿದಂತಾದ ನಾನು ಇನ್ನೂ ಬಾಳಬೇಕಿದ್ದ 30 ವರ್ಷದ ಯುವಕನಿಗೆ ವೆಂಟಿಲೇಟರ್ ಬೆಡ್ ಕೊಡಬಹುದಿತ್ತು ಎಂದುಕೊಂಡೆ. ಆದರೆ ಈ ಆಯ್ಕೆ ಮಾಡುವುದು ಹ್ಯಾಗೆ? ಅಂತಹ ಆಯ್ಕೆ ಮಾಡಲು ನಾನು ಯಾರು? ಪ್ರತಿಯೊಬ್ಬರಿಗೂ ಬದುಕಿ ಉಳಿಯುವ ಹಕ್ಕಿದೆಯಲ್ಲವೇ ಎಂಬ ಅಳುಕು ನನ್ನನ್ನು ದೀರ್ಘ ಕಾಲ ಕಾಡಿಸುತ್ತಿರುತ್ತದೆ.

ಈ ಎಲ್ಲ ಸಂಕೀರ್ಣ ಸಮಸ್ಯೆಗಳ ಫಲಿತವಾಗಿ ಕೋವಿದ್ ಎರಡನೆಯ ಅಲೆಯ ಭಾರ ತಾಳಲಾಗದೇ ಭಾರತದ ಆರೋಗ್ಯ ಸೇವಾ ಸೌಕರ್ಯ ಬಿರುಕು ಬಿಟ್ಟಂತಾಗಿದೆ. ಚುನಾವಣಾ ಮೆರವಣಿಗೆಗಳು, ಧಾರ್ಮಿಕ ಸಭೆ, ಆಚರಣೆ, ಮೇಳಗಳು ಕೇವಲ ಮೂರ್ಖತನದವಷ್ಟೇ ಅಲ್ಲ ಇದರಿಂದ ಆರೋಗ್ಯ ಸೇವಾ ಮುಂಚೂಣಿಯಲ್ಲಿದ್ದ ವೈದ್ಯರು ಮತ್ತು ಕೆಲಸಗಾರರ ನೈತಿಕ ಸ್ಥೈರ್ಯ ಕುಗ್ಗಿಸುವಂಥ ಅಪಮಾನ ಮಾಡಿದಂತಾಯಿತು.

ನೆರೆಯ ರಾಜ್ಯದ ನನ್ನ ವೈದ್ಯ ಗೆಳೆಯನಿಗೆ ತನ್ನ ತಂದೆಯ ಚಿಕಿತ್ಸೆಗಾಗಿ ವೆಂಟಿಲೇಟರ್ ಬೆಡ್ ಸಿಕ್ಕಿರಲಿಲ್ಲ, ಚಿಕಿತ್ಸೆಗಾಗಿ ಅವರು ತಂದೆಯನ್ನು ಬೆಂಗಳೂರಿಗೆ ಕರೆದು ತರಬೇಕಾಯಿತು. ಕೆಲವು ದಿನಗಳ ನಂತರ ಕೋವಿದ್ ಉಲ್ಬಣಗೊಂಡು ಅವರ ತಂದೆ ಮೃತರಾದರು. ವೈದ್ಯ ಗೆಳೆಯನಿಗೆ ತನ್ನ ಕಷ್ಟ ಕಾಲದಲ್ಲಿ ನೆರವಾದ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಹೇಳುವುದನ್ನು ಬಿಟ್ಟರೆ ಬೇರೇನು ಉಳಿದಿತ್ತು? ಯಾರೂ ಅಸಾಮಾನ್ಯರಲ್ಲ, ವೈದ್ಯರು ಮತ್ತು ಆರೋಗ್ಯ ಸೇವಾ ಮುಂದಾಳ್ತನ ವಹಿಸಿದ್ದ ಕೆಲಸಗಾರರು ಕೂಡ ಎಲ್ಲರಂತೆಯೇ ಮನುಷ್ಯರು. ಜನರು ದಯವಿಟ್ಟು ವೈದ್ಯರು ಮತ್ತು ಆರೋಗ್ಯ ಸೇವಾ ಮುಂದಾಳ್ತನದ ಹೊಣೆಗಾರಿಕೆ ಇರುವ ಕೆಲಸಗಾರರೊಂದಿಗೆ ಸಹಕರಿಸಬೇಕು.

ಯಾವುದೇ ಬಗೆಯಲ್ಲೂ ನೆರವಾಗಲಿಕ್ಕೆ ಸಾಧ್ಯವಾಗದ ಹೊಸ ಬಗೆಯ ಅಸಹಾಯಕತೆ ಮತ್ತು ಖಿನ್ನತೆ ವೈದ್ಯರು ಮತ್ತು ಮುಂಚೂಣಿ ಕೆಲಸಗಾರರನ್ನು ಆವರಿಸಿಬಿಟ್ಡಿದೆ. ನಮ್ಮನ್ನೆಲ್ಲ ತರಬೇತುಗೊಳಿಸಿರುವುದೇ ಸಾಧ್ಯವಾದಷ್ಡು ಪರಿಹಾರ ಒದಗಿಸುವುದಕ್ಕಾಗಿ. ಆದರೆ ನಾವು ಯಾವುದೇ ರೀತಿ ನೆರವಾಗದಂತೆ ಕೈ ಕಟ್ಟಿ ಹಾಕಿದ್ದು ಮಾತ್ರ ನಮ್ಮ ಹತೋಟಿ ಮೀರಿದ ಕಾರಣವಾಗಿತ್ತು. ಅಸಹಾಯಕತೆಯ ಸೋಂಕು ನಮ್ಮಲ್ಲಿ ಬಹುಪಾಲು ಜನರನ್ನು ಆವರಿಸಿಕೊಂಡಿತ್ತು. ನಮ್ಮಲ್ಲಿ ಕೆಲವರು ಫೋನುಗಳನ್ನು ಸ್ವಿಚ್ ಆಫ್ ಮಾಡಿಕೊಳ್ಲುವಂಥ, ಫೋನ್ ತೆರೆದು ಸಂದೇಶಗಳನ್ನು ನೋಡಲಾಗದಂಥ ಪರಿಸ್ಥಿತಿ ಎದುರಾಗಿತ್ತು; ಕೆಲವರು “ನಾನಿನ್ನು ಏನು ತಾನೇ ಮಾಡಲು ಸಾಧ್ಯವಿದೆ” ಎಂದು ಕೈ ಚೆಲ್ಲುವಂತಾಯಿತು.

ಈ ಸಾವುಗಳು, ಸಂಖ್ಯೆಗಳು, ಲಭ್ಯವಿರುವ ಹಾಸಿಗೆಗಳು, ಆಕ್ಸಿಜನ್ ಸಿಲಿಂಡರುಗಳು, ಔಷಧಿ ಇದೆಲ್ಲ ಕಗ್ಗಂಟಾಗಿ ಮರಗಟ್ಡಿ ಹೋಗಿದ್ದೆವು. ಈ ಅಲೆಯ ಸೋಂಕಲ್ಲಿ ಬದುಕುಳಿದ ನಮ್ಮ ಮುಂದೆ ಬಹುದೊಡ್ಡ ಸವಾಲು ಎದುರಾಗಿದೆ. ಯುದ್ಧ ಮತ್ತು ಉಪದ್ರವ ನಮ್ಮ ಮನಸಿನಲ್ಲಿ ಮಾಯದ ಗಾಯಗಳನ್ನು ಉಳಿಸಿ ಹೋಗುತ್ತವೆ; ಈ ಅಳುಕು ಅಸಹಾಯಕತೆ ಮತ್ತು ಖಿನ್ನತೆಗೆ ಬಲಿಯಾಗದೇ ಕೋವಿದ್ ಮೂರನೇ ಅಲೆಯನ್ನು ಎದುರಿಸಲು ಸಜ್ಜಾಗಬೇಕಿದೆ.

ಮೂರನೆಯ ಅಲೆಯ ಸೋಂಕು ಅನಿವಾರ್ಯ. ಇದನ್ನು ಎದುರಿಸಲು ಸರ್ಕಾರ ಎಲ್ಲ ವೈದ್ಯಕೀಯ ಸೌಕರ್ಯಗಳನ್ನು ಸಜ್ಜುಗೊಳಿಸುವಂತಾಗಲಿ. ಸೋಂಕಿನ ಅಗಾಧತೆಯನ್ನು ಸಾಧ್ಯವಾದಷ್ಟೂ ಕುಗ್ಗಿಸಲು ಸರ್ಕಾರದ ಮೇಲೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ನಮ್ಮ ಮೇಲೂ ಇದೆ.

ಈ ವೈರಾಣು ಸೋಂಕನ್ನು ತಡೆಗಟ್ಟಲು ಚುಚ್ಚುಮದ್ದು ತೆಗೆದುಕೊಳ್ಳುವುದು, ಮುಖಗವುಸು ಧರಿಸುವುದು, ಕೈಗಳ ಶುದ್ಧತೆ ಮತ್ತು ದೈಹಿಕ ಅಂತರ ಕಾದುಕೊಳ್ಳುವುದು ಬಹುಮುಖ್ಯ; ಮಾನವತೆಗೆ ಎದುರಾಗಿರುವ ಈ ಪರೀಕ್ಷೆಯ ಕಾಲದಲ್ಲಿ ಎಲ್ಲರೂ ಕೈ ಜೋಡಿಸೋಣ.

*ಲೇಖಕರು ಎಂ.ಡಿ., ಎಫ್..ಪಿ.(ಇಟಲಿ) ಪದವೀಧರರು; ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಲ್ಲಿ ಶ್ವಾಸಕೋಶಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ, ವೈದ್ಯಕೀಯ ಉಪ ಅಧೀಕ್ಷಕರಾಗಿ ಹಾಗೂ ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಶ್ವಾಸಕೋಶಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published.