ವೈದ್ಯರ ದೊಡ್ಡ ಬಿಲ್ಲು ಹಲ್ಲೆಗೆ ಕಾರಣ!

ನಮ್ಮ ದೇಶದಲ್ಲಿ ಮದುವೆಗೆ, ಮನೆಕಟ್ಟಲು, ಮುಂಜಿಗೆ, ನಾಮಕರಣಕ್ಕೆ, ಶಿಕ್ಷಣಕ್ಕೆ ಹೀಗೆ ಹಲವಾರು ಕಾರಣಕ್ಕೆ ಹಣ ತೆಗೆದು ಇಡುತ್ತಾರೆ. ಆದರೆ ತಮ್ಮ ಆರೋಗ್ಯಕ್ಕೆ ಅಂತ ಹಣ ತೆಗೆದಿಡುವವರು ಕಡಿಮೆ. ಆರೋಗ್ಯ ಮಾತ್ರ ಹಣವಿಲ್ಲದೆಯೇ ಆಗಬೇಕೆಂದು ಬಯಸುತ್ತಾರೆ. ವೈದ್ಯರು ಸಲಹೆ, ಚಿಕಿತ್ಸೆಗೆ ದುಡ್ಡು ಕೇಳಬಾರದು, ಕೇಳಿದರೂ ತೀರ ಕಡಿಮೆಯಿರಬೇಕೆಂಬುದು ಅನೇಕರ ವಾದ.

ಎಲ್ಲ ರಂಗಗಳ ಜೊತೆ ವೈದ್ಯಕೀಯ ರಂಗದಲ್ಲಿಯೂ ಅಪಾರ ಪ್ರಗತಿಯಾಗಿದೆ. ಈ ಪ್ರಗತಿಗೆ ಅನುಸಾರವಾಗಿ, ರೋಗ ನಿದಾನ (ಅಂದರೆ ರೋಗದ ಕಾರಣಗಳನ್ನು ಕಂಡು ಹಿಡಿಯುವ ಪರೀಕ್ಷೆಗಳು) ಅವರಿಗೆ ಕೊಡುವ ಮಾತ್ರೆಗಳು, ದೋಷಯುಕ್ತ ಅವಯವದ ಚಿಕಿತ್ಸೆಯೂ ಕೂಡ ಬದಲಾಗಿದೆ. ಇದರಿಂದ ರೋಗಿಗೆ ಮೊದಲಿಗಿಂತ ಖರ್ಚು ಹೆಚ್ಚು ಬರುತ್ತದೆ. ಖರ್ಚು ಹೆಚ್ಚಾಗಿ ರೋಗ ಗುಣವಾಗದಿದ್ದಾಗ, ಜೀವಹಾನಿಯಾದಾಗ ಸಿಟ್ಟು, ನಿರಾಸೆ, ವಿವಶತೆ ಜಾಸ್ತಿಯಾಗುತ್ತದೆ. ಇಂತಹ ಸಂದರ್ಭವನ್ನು ಕೆಳಗಿನ ಇಂಗ್ಲಿಷ್ ಸಾಲುಗಳು ಸರಿಯಾಗಿ ಬಿಂಬಿಸುತ್ತವೆ:

Doctor is God when the patient is ill
Doctor is man when the patient is well
Doctor is Devil when he gives his bill

ಈಗ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚಾಗಿವೆ. ಐಎಂಎ ಪ್ರಕಾರ 75% ವೈದ್ಯರು ಹಲ್ಲೆಗೆ ಒಳಗಾಗುತ್ತಿದ್ದಾರೆ. ಈ ಹಲ್ಲೆ ಕೇವಲ ಭಾರತದಲ್ಲಿ ಮಾತ್ರವಲ್ಲ, ಅಮೆರಿಕಾ, ಚೀನಾ, ಬಾಂಗ್ಲಾ ಮುಂತಾದ ದೇಶಗಳಲ್ಲಿಯೂ ಕಾಣಿಸಿಕೊಂಡಿದೆ. 1980-1990ರ ಅವಧಿಯಲ್ಲಿ ಅಮೆರಿಕಾದಲ್ಲಿ 100ಕ್ಕಿಂತ ಹೆಚ್ಚು ವೈದ್ಯರು ಹಲ್ಲೆಗೊಳಗಾಗಿದ್ದಾರೆ.

ಈಗ ವೈದ್ಯರಿಗೆ ತರತರದ ತೊಂದರೆಯಾಗುತ್ತಿದೆ. ಬಯ್ಯುವುದು, ಹೊಡೆಯುವುದು, ಅವರ ಆಸ್ಪತ್ರೆಯನ್ನು ಮೂರಾಬಟ್ಟೆ ಮಾಡಿ ಪಿಠೋಪಕರಣಗಳನ್ನು ಒಡೆಯುವುದು, ಗ್ಲಾಸುಗಳನ್ನು ಒಡೆಯುವುದು, ಮಶೀನುಗಳನ್ನು ನಾಶಮಾಡುವುದು, ಇವಲ್ಲದೆ ಕೋರ್ಟಿಗೆ ಹೋಗಿ ಅವರಿಗೆ ತೊಂದರೆ ಕೊಡುವುದು, ಟಿವಿಗಳಲ್ಲಿ ಅವರನ್ನು ತೋರಿಸಿ ಮಾನಹಾನಿ ಮಾಡುವುದು… ಈ ಮುಂತಾದ ತೊಂದರೆಗಳನ್ನು ಕೊಡುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವಾರು.

ವೈದ್ಯರಲ್ಲಿ ಅಪನಂಬಿಕೆ, ಅವರಿಗಾಗಿ ಸಾಲಿನಲ್ಲಿ ಬಹಳ ಹೊತ್ತು ಕಾಯುವುದು, ವೈದ್ಯರ ದೊಡ್ಡ ಬಿಲ್ಲು, ರೋಗದ ಬಗ್ಗೆ, ಅವರ ಚಿಕಿತ್ಸೆಯ ಬಗ್ಗೆ ತಿಳಿವಳಿಕೆ ಇಲ್ಲದಿರುವುದು, ತಮ್ಮವರನ್ನು ಕಳೆದುಕೊಳ್ಳುವ ಭೀತಿ ಇತ್ಯಾದಿ ಕಾರಣಗಳನ್ನು ಪಟ್ಟಿ ಮಾಡಬಹುದು. ಹಲ್ಲೆಗೆ ಬಹುಮುಖ್ಯ ಕಾರಣವೆಂದರೆ ಬೃಹದಾಕಾರದ ವೈದ್ಯರ ಬಿಲ್ಲು. ಕೆಲವು ಸಲ ಇರುವ ಮನೆಯನ್ನು ಮಾರಿದಾಗಲೂ ಬಿಲ್ಲು ತೀರಿಸಲು ಆಗದೇ ವೈದ್ಯರ ಮೇಲೆ ಹಲ್ಲೆ ಮಾಡುತ್ತಾರೆ.

ಬಸಿರಾದ ತಕ್ಷಣ, ತರತರದ ರಕ್ತ ಪರೀಕ್ಷೆಗಳು, ಮತ್ತು ಸ್ಕ್ಯಾನಿಂಗ್‍ಗಳನ್ನು ಮಾಡುತ್ತಾರೆ. ಈ ರಕ್ತಪರೀಕ್ಷೆಗಳಿಂದ ಮುಂಬರುವ ಬಸಿರಿನ ನಂಜನ್ನು ಮೊದಲೇ ಕಂಡುಹಿಡಿದು ಚಿಕಿತ್ಸೆ ಕೊಡಲಾಗುವುದು. ಪಾಂಡುರೋಗ, ಯಕೃತ್ತಿನ ಕಾಯಿಲೆಗಳು, ಲೈಂಗಿಕ ರೋಗ -ಇವೆಲ್ಲವನ್ನು ಕಂಡುಹಿಡಿದು ಗರ್ಭಿಣಿಗೆ ಚಿಕಿತ್ಸೆ ಕೊಟ್ಟು, ಆ ಕಾಯಿಲೆಗಳು ಶಿಶುವಿಗೆ ಬಾರದಂತೆ ಮಾಡಬಹುದು.

ಹಾಗಾದರೆ ವೈದ್ಯರು ಇಷ್ಟೊಂದು ದೊಡ್ಡ ಮೊತ್ತದ ಬಿಲ್ಲು ಏಕೆ ಮಾಡುತ್ತಾರೆ?

ಮೊದಲಿನ ಕಾಲದಲ್ಲಿ ಬಸುರಿ ಹೆಂಗಸು ಮನೆಯಲ್ಲಿ ಸೂಲಗಿತ್ತಿಯರ ಸಹಾಯದಿಂದ ಹಡೆಯುತ್ತಿದ್ದಳು. ವೈದ್ಯರ ಸಹಾಯವೇ ಬೇಕಿರಲಿಲ್ಲ. ಈಗ ಗರ್ಭಧರಿಸಲು, ಹಡೆಯಲು, ಹಾಲುಣಿಸಲು ವೈದ್ಯರ ಸಹಾಯ ಬೇಕು.

ಈಗಿನ ಹೆರಿಗೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಬಸಿರಾದ ತಕ್ಷಣ, ತರತರದ ರಕ್ತ ಪರೀಕ್ಷೆಗಳು, ಮತ್ತು ಸ್ಕ್ಯಾನಿಂಗ್‍ಗಳನ್ನು ಮಾಡುತ್ತಾರೆ. ಈ ರಕ್ತಪರೀಕ್ಷೆಗಳಿಂದ ಮುಂಬರುವ ಬಸಿರಿನ ನಂಜನ್ನು ಮೊದಲೇ ಕಂಡುಹಿಡಿದು ಚಿಕಿತ್ಸೆ ಕೊಡಲಾಗುವುದು. ಪಾಂಡುರೋಗ, ಯಕೃತ್ತಿನ ಕಾಯಿಲೆಗಳು, ಲೈಂಗಿಕ ರೋಗ -ಇವೆಲ್ಲವನ್ನು ಕಂಡುಹಿಡಿದು ಗರ್ಭಿಣಿಗೆ ಚಿಕಿತ್ಸೆ ಕೊಟ್ಟು, ಆ ಕಾಯಿಲೆಗಳು ಶಿಶುವಿಗೆ ಬಾರದಂತೆ ಮಾಡಬಹುದು. ಇದಲ್ಲದೆ ತಾಯಿಯ ರಕ್ತ ಆರ್.ಎಚ್.ನೆಗೆಟಿವ್ ಇದ್ದು ಶಿಶುವಿನ ರಕ್ತ ಆರ್.ಎಚ್.ಪಾಸಿಟಿವ್ ಇದ್ದಾಗ, ಅದರಿಂದ ಶಿಶುವಿಗೆ ತೊಂದರೆಯಾಗದಂತೆ ತಡೆಯಬಹುದು.

ಇನ್ನು ಸ್ಕ್ಯಾನಿಂಗ್‍ನಲ್ಲಿ ಶಿಶುವಿಗೆ ಕ್ರೊಮೊಸೋಮದ ತೊಂದರೆಯಿದೆಯೇ, ಹೃದಯದ ತೊಂದರೆಯಿದೆಯೇ, ಅದು ಸರಿಯಾಗಿ ಬೆಳೆದಿದೆಯೇ, ಬೆಳೆಯುವುದರಲ್ಲಿ ಲೋಪದೋಷವಾಗಿದೆಯೇ, ಈ ಮುಂತಾದವುಗಳನ್ನು ಕಂಡುಹಿಡಿದು, ಶಿಶುವನ್ನು ಬೆಳೆಸಬೇಕೋ, ದೋಷಯುಕ್ತ ಶಿಶುವನ್ನು ಇಳಿಸಬೇಕೋ ಎಂಬುದನ್ನು ನಿರ್ಧರಿ ಸಬಹುದು. ದೋಷಯುಕ್ತ ಶಿಶುವನ್ನು ಕಂಡುಹಿಡಿಯದಿದ್ದರೆ, 9 ತಿಂಗಳ ತನಕ ತಾಯಿಯು ಅದನ್ನು ಹೊತ್ತು, ಹೆತ್ತು, ದೇಹದ ಆರೋಗ್ಯ ಕಳೆದುಕೊಂಡು, ದುಃಖತಪ್ತಳಾಗಿ, ಮಾನಸಿಕ ವ್ಯಾಧಿಗೂ ತುತ್ತಾಗಬಹುದು. ಆದರೆ ಈ ಮೊದಲು ಹೇಳಿದ ಎಲ್ಲಾ ಕಾಯಿಲೆಗಳನ್ನು ಕಂಡುಹಿಡಿಯಲು, ಸ್ಕ್ಯಾನಿಂಗ್ ಮಾಡಲು ಬಹಳಷ್ಟು ಹಣ ಖರ್ಚಾಗುತ್ತದೆ. ಮೂತ್ರ ಪರೀಕ್ಷೆಯಿಂದ ಸಕ್ಕರೆಯ ಕಾಯಿಲೆ, ಮೂತ್ರರೋಗಗಳನ್ನು ಕೂಡ  ಮುಂಚೆಯೇ ಕಂಡುಹಿಡಿದು, ತಾಯಿ ಮತ್ತು ಶಿಶುವಿನ ಆರೋಗ್ಯ ಕಾಪಾಡಬಹುದು.

ಇದಲ್ಲದೆ ಎನ್.ಎಸ್.ಟಿ ಎಂಬ ಪರೀಕ್ಷೆಯೊಂದಿದೆ. ಇದ ರಿಂದ ಶಿಶುವು ತಾಯಿಯ ಗರ್ಭದಲ್ಲಿ ಚೆನ್ನಾಗಿದೆಯೇ ಎಂಬುದನ್ನು ತಿಳಿಯಬಹುದು. ಶಿಶುವು ಸಾಮಾನ್ಯ ಹೆರಿಗೆಯನ್ನು ತಡೆದು ಕೊಳ್ಳಬಹುದೇ, ಉಸಿರುಗಟ್ಟುತ್ತಿದೆಯೇ, ಅದಕ್ಕೆ ಸಿಸೇರಿಯನ್ ಹೆರಿಗೆ ಬೇಕೇ ಎಂಬುದನ್ನು ಕಂಡುಹಿಡಿಯಬಹುದು. ಉಸಿರುಗಟ್ಟುತ್ತಿದ್ದರೆ, ಸಿಸೇರಿಯನ್, ಇಲ್ಲವೆ ಇಕ್ಕಳದ ಹೆರಿಗೆ ಮಾಡಿ ಅದನ್ನು ಉಳಿಸಬಹುದು. ಇದರಿಂದ ತಾಯಿಗೆ ಆರೋಗ್ಯವಂತ ಶಿಶುವನ್ನು ಕೊಡಲು ಸಾಧ್ಯ. ಉಸಿರು ಬಹಳ ಹೊತ್ತು ಕಟ್ಟಿದರೆ, ಹುಟ್ಟಿದ ಶಿಶುವಿಗೆ ಫಿಟ್ಸ್ ಕಾಯಿಲೆ ಬರಬಹುದು, ಇಲ್ಲವೆ ಶಿಶು ಸತ್ತೂ ಹುಟ್ಟಬಹುದು.

ಈಗ ಗಂಡಿನ ಹಾಗೂ ಹೆಣ್ಣಿನ ವಯಸ್ಸು ಹೆಚ್ಚುತ್ತಿದೆ. ಇದರಿಂದ ಹಾಗೂ ಕಲುಷಿತ ವಾತಾವರಣದಿಂದ ಗರ್ಭಧರಿಸಲು ತೊಂದರೆಯಾಗುತ್ತಿದೆ. ಹೀಗಾಗಿ, ಗಂಡಸರಲ್ಲಿ 30-40 ವರ್ಷಗಳ ಹಿಂದೆ ಧಾತುವಿನಲ್ಲಿ 60-80 ಮಿಲಿಯನ್ ಅಷ್ಟು ಇದ್ದ ಪುಂಬೀಜಗಳ ಸಂಖ್ಯೆ ಈಗ 20 ಮಿಲಿಯನ್‍ಗೆ ಬಂದಿವೆ. 20 ಮಿಲಿಯನ್ನಲ್ಲಿ ಕೂಡ ಚೈತನ್ಯವಿರುವುದಿಲ್ಲ.

ಈ ತರಹದ ಎಲ್ಲಾ ಪರೀಕ್ಷೆಗೆ ಹಣ ಬಹಳ ಬೇಕಾಗುತ್ತದೆ. ಅದೂ ಅಲ್ಲದೆ ಎಲ್ಲ ತಾಯಂದಿರಿಗೆ ದೋಷಯುಕ್ತ ಶಿಶುವಿರುವುದಿಲ್ಲ. ಅಂತಹವರಿಗೆ ವೈದ್ಯರು ತಮ್ಮನ್ನು ಸುಮ್ಮಸುಮ್ಮನೆ ಸುಲಿಗೆ ಮಾಡುತ್ತಾರೆ ಎಂದು ಅನಿಸುತ್ತದೆ. ಏಕೆಂದರೆ ತೊಂದರೆಗೊಳಗಾದ ಶಿಶುಗಳು 100ಕ್ಕೆ 5-6ರಷ್ಟಿರಬಹುದು.

ಒಂದು ಕಾಲಕ್ಕೆ ಎಳೆಯ ವಯಸ್ಸಿನಲ್ಲಿಯೇ ಮದುವೆಯಾಗುತ್ತಿದ್ದರು. ಆಗ ಬೇಗ ಮಕ್ಕಳಾಗುತ್ತಿದ್ದರು. ಈಗ ಗಂಡಿನ ಹಾಗೂ ಹೆಣ್ಣಿನ ವಯಸ್ಸು ಹೆಚ್ಚುತ್ತಿದೆ. ಇದರಿಂದ ಹಾಗೂ ಕಲುಷಿತ ವಾತಾವರಣದಿಂದ ಗರ್ಭಧರಿಸಲು ತೊಂದರೆಯಾಗುತ್ತಿದೆ. ಹೀಗಾಗಿ, ಗಂಡಸರಲ್ಲಿ 30-40 ವರ್ಷಗಳ ಹಿಂದೆ ಧಾತುವಿನಲ್ಲಿ 60-80 ಮಿಲಿಯನ್ ಅಷ್ಟು ಇದ್ದ ಪುಂಬೀಜಗಳ ಸಂಖ್ಯೆ ಈಗ 20 ಮಿಲಿಯನ್‍ಗೆ ಬಂದಿವೆ. 20 ಮಿಲಿಯನ್ನಲ್ಲಿ ಕೂಡ ಚೈತನ್ಯವಿರುವುದಿಲ್ಲ.

ಅಂತೆಯೇ ಈಗ ಗಂಡಸರು ಮತ್ತು ಹೆಂಗಸರು ವೈದ್ಯರೆಡೆಗೆ ಮಕ್ಕಳಾಗಲಿಲ್ಲವೆಂದು ಓಡಾಡುವುದು ಜಾಸ್ತಿಯಾಗಿದೆ. ಪುಂಬೀಜಗಳ ಸಂಖ್ಯೆ ಕಡಿಮೆ ಇರುವಾಗ ಮಾತ್ರೆ ಕೊಟ್ಟು ಅವನ್ನು ಜಾಸ್ತಿ ಮಾಡುವುದು, ತದನಂತರ ಧಾತುವನ್ನು ಹಿಡಿದು ಹೆಂಡತಿಯ ಗರ್ಭದಲ್ಲಿ ಹಾಕುವುದು, ಧಾತುವಿನಲ್ಲಿಯ ಪುಂಬೀಜಕ್ಕೆ ಚೈತನ್ಯವಿಲ್ಲದಿದ್ದರೆ ಗಂಡಸರಿಗೆ ಚಿಕಿತ್ಸೆ ಮಾಡುವುದು ನಡೆಯುತ್ತಲಿದೆ.

ಪುಂಬೀಜಗಳ ಸಂಖ್ಯೆ ಇನ್ನೂ ಕಡಿಮೆಯಿದ್ದರೆ ಪುಂಬೀಜಗಳ ಹೊರಮೈ ವೀಕ್ಷಿಸಿ ಚೆನ್ನಾಗಿದ್ದರೆ ಅದನ್ನು ಅಂಡಾಣುವಿನಲ್ಲಿ ತೂರಿಸಲಾಗುತ್ತದೆ. ಈ ವಿಧಾನದಲ್ಲಿ ಟೆಸ್ಟ್ ಟ್ಯೂಬ್ ಬೇಬಿಗಿಂತ ಖಾತ್ರಿಯಾಗಿ ಅಂಡಾಣು ಫಲಿತವಾಗುತ್ತದೆ. ಐವಿಎಫ್ ಟೆಸ್ಟ್‍ಟ್ಯೂಬ್ ಬೇಬಿಯಲ್ಲಿ ಅಂಡಾಣುವಿನ ಹತ್ತಿರ ಪುಂಬೀಜಗಳನ್ನು ಬಿಟ್ಟಾಗ ಪುಂಬೀಜ ತಾನೇ ಒಳಗೆ ಹೋಗುತ್ತದೆ.  ಆದರೆ ಐಸಿಎಸ್‍ಐ ಯಲ್ಲಿ ಪುಂಬೀಜವನ್ನು ಒತ್ತಾಯದಿಂದ ತೂರಿಸ ಲಾಗುತ್ತದೆ. ಅಂಡಾಣುವಿನ ಅಗಲ 1 ಎಂ.ಎಂ. ಇರುತ್ತದೆ. ಇದರಲ್ಲಿ ಬಹಳ ಚೈತನ್ಯವಿರುವ, ನೋಡಲು ಚೆನ್ನಾಗಿರುವ ಪುಂಬೀಜವನ್ನು ತೂರಿಸಲಾಗುತ್ತದೆ. ಧಾತುವನ್ನು ಸಂಸ್ಕರಿಸಿ, ಅದರಲ್ಲಿ ಬೇಡವಾದ ಕೋಶ ತೆಗೆದು, ಒಳ್ಳೆಯ ಪುಂಬೀಜಗಳನ್ನು ಆರಿಸಲಾಗುತ್ತದೆ. 

ಯಾವುದೇ ಊರಿನ ಶ್ರೀಮಂತರ ಒಂದು ಪಟ್ಟಿಯನ್ನು ಮಾಡಿದರೆ, ಅದರಲ್ಲಿ ಯಾವ ವೈದ್ಯರ ಹೆಸರೂ ಇರುವುದಿಲ್ಲ. ವೈದ್ಯರು ಒಂದು ಒಳ್ಳೆಯ ಜೀವನ ನಡೆಸಬಹುದೇ ವಿನಾ ಶ್ರೀಮಂತರ ಸಾಲಿನಲ್ಲಿ ಸೇರಲಾಗುವುದಿಲ್ಲ.

ಇದೇ ರೀತಿ ಹೆಂಗಸರಲ್ಲಿ ಅಂಡಾಣುಗಳಿಗೆ ರಸದೂತಗಳನ್ನು ಕೊಟ್ಟು ಅನೇಕ ಅಂಡಾಣುಗಳನ್ನು ಬೆಳೆಸಲಾಗುತ್ತದೆ. ಇದನ್ನೆಲ್ಲಾ ಮಾಡಲು ಸಾಕಷ್ಟು ಪರಿಶ್ರಮ, ಅನುಭವ, ತಾಳ್ಮೆ ಬೇಕು. ಹಾಗೆಯೇ ಈ ಎಲ್ಲ ತರಹದ ಪ್ರಕ್ರಿಯೆಗಳಿಗೆ ಹಣವೂ ಬೇಕು. ಒಂದೊಂದು ಪ್ರಯತ್ನಕ್ಕೆ 1-1.5 ಲಕ್ಷ ರೂಪಾಯಿ ಖರ್ಚು ಬರುತ್ತದೆ. ವೈದ್ಯರು ಪ್ರಯತ್ನ ಮಾಡುತ್ತಾರೆ. ಆದರೆ ಫಲ ಅವರ ಕೈಯಲ್ಲಿಲ್ಲ. ಫಲ ಸಿಗದಿದ್ದಾಗ ಅಷ್ಟೊಂದು ಹಣ ಖರ್ಚು ಮಾಡಿದವರಿಂದ ವೈದ್ಯರು ಸುಲಿಗೆ ಮಾಡುತ್ತಾರೆ ಎಂಬ ಆರೋಪ ಬರುವುದು ಸಹಜ.

ನಮ್ಮ ದೇಶದಲ್ಲಿ ಮದುವೆಗೆ, ಮನೆಕಟ್ಟಲು, ಮುಂಜಿಗೆ, ನಾಮಕರಣಕ್ಕೆ, ಶಿಕ್ಷಣಕ್ಕೆ ಹೀಗೆ ಹಲವಾರು ಕಾರಣಕ್ಕೆ ಹಣ ತೆಗೆದು ಇಡುತ್ತಾರೆ. ಹಣ ಖರ್ಚಾದರೆ ಅದಕ್ಕೆ ಯಾರೂ ಏನೂ ಅನ್ನುವುದಿಲ್ಲ. ಆದರೆ ಯಾರೂ ತಮ್ಮ ಆರೋಗ್ಯಕ್ಕೆ ಅಂತ ಹಣ ತೆಗೆದಿಡುವುದಿಲ್ಲ. ಆರೋಗ್ಯ ಮಾತ್ರ ಹಣವಿಲ್ಲದೆಯೇ ಆಗಬೇಕೆಂದು ಬಯಸುತ್ತಾರೆ. ವೈದ್ಯರು ಸಲಹೆ, ಚಿಕಿತ್ಸೆಗೆ ದುಡ್ಡು ಕೇಳಬಾರದು, ಕೇಳಿದರೂ ತೀರ ಕಡಿಮೆಯಿರಬೇಕೆಂಬುದು ಅನೇಕರ ವಾದ.

ರೋಗಿಗಳು ಆಸ್ಪತ್ರೆಗೆ ಸೇರಿಕೊಳ್ಳುವಾಗ ತಮಗೆ ಎಸಿ ಇರಬೇಕು, ಟಿವಿ ಇರಬೇಕು, ಒಳ್ಳೆಯ ರೂಮ್ ಬೇಕು ಅನ್ನುತ್ತಾರೆ. ಆಸ್ಪತ್ರೆಯ ಬಿಲ್ಲು ದೊಡ್ಡ ಗಾತ್ರದ್ದು ಇದ್ದರೆ, ಅದರಲ್ಲಿ ಹೆಚ್ಚು ಹಣ ರೂಮಿಗೆ, ಉಪಕರಣಕ್ಕೆ, ಔಷಧಿಗೆ ಇರುತ್ತದೆ ವಿನಾ ವೈದ್ಯರಿಗೆ ಇರುವುದಿಲ್ಲ. ಸ್ಪೆಷಲಿಸ್ಟ್ ಆದವರು 20 ವರ್ಷ ಮತ್ತು ಸೂಪರ್ ಸ್ಪೆಷಲಿಸ್ಟ್ ಆದವರು 23 ವರ್ಷ ವಿದ್ಯಾಭ್ಯಾಸ ಮಾಡಿರುತ್ತಾರೆ. ಅವರು ರಾತ್ರಿ ಕೂಡ ಬಂದು ರೋಗಿಗಳನ್ನು ನೋಡುವುದು ಸೇವೆಯೇ ಅಲ್ಲವೇ?

ಯಾವುದೇ ಊರಿನ ಶ್ರೀಮಂತರ ಒಂದು ಪಟ್ಟಿಯನ್ನು ಮಾಡಿದರೆ, ಅದರಲ್ಲಿ ಯಾವ ವೈದ್ಯರ ಹೆಸರೂ ಇರುವುದಿಲ್ಲ. ವೈದ್ಯರು ಒಂದು ಒಳ್ಳೆಯ ಜೀವನ ನಡೆಸಬಹುದೇ ವಿನಾ ಶ್ರೀಮಂತರ ಸಾಲಿನಲ್ಲಿ ಸೇರಲಾಗುವುದಿಲ್ಲ.

ವೈದ್ಯರಿಗೆ ಹಬ್ಬದ ದಿನಗಳಲ್ಲಿ ರಜೆ ಇರುವುದಿಲ್ಲ, ರವಿವಾರದ ಸೂಟಿಯೂ ಇರುವುದಿಲ್ಲ. ಹೆಂಡತಿ ಮಕ್ಕಳೊಡನೆ ಸಿನಿಮಾ, ಪಿಕ್‍ನಿಕ್‍ಗಳಿಗೆ ಖಚಿತವಾಗಿ ಬರುತ್ತೇನೆಂದು ವಚನಕೊಟ್ಟು, ಹೋಗುವ ಸಮಯದಲ್ಲಿ ‘ನನಗೆ ಒಂದು ಪೇಷೆಂಟ್ ಬಂದಿದೆ’ ಎಂದು ನಿರಾಸೆ ಮಾಡುವುದು ಸರ್ವೇಸಾಮಾನ್ಯ. ‘ನಮ್ಮ ಯಜಮಾನರಿಗೆ ಆಸ್ಪತ್ರೆಯೇ ಮೊದಲ ಹೆಂಡತಿ, ನಾನು ಅವರ 2ನೆಯ ಹೆಂಡತಿ’ ಅಂತ ಅದೆಷ್ಟೋ ಜನ ಹೇಳುತ್ತಾರೆ. ತಾಯಿಯ ಹಾಲು ಅಮೃತ, ನಿಮ್ಮ ಶಿಶುವಿಗೆ ನಿಮ್ಮ ಹಾಲನ್ನೇ ಕೊಡಿ ಎಂದು ಹೇಳುವ ವೈದ್ಯೆ, ಹಾಲು ಕುಡಿಯುವ ತನ್ನ ಶಿಶುವನ್ನು ಬಿಟ್ಟು ರಾತ್ರಿ ಡ್ಯೂಟಿಗೆ ಹೋಗುವುದು ಸಾಮಾನ್ಯ. ಒತ್ತಡಗಳ ಕಾರಣದಿಂದ ವೈದ್ಯರಿಗೆ ಮಧುಮೇಹ, ಬಿಪಿ, ಹೃದ್ರೋಗ ಜಾಸ್ತಿಯಾಗುತ್ತಲಿವೆ.

ಈಗ ನೀವೇ ಯೋಚಿಸಿ, ವೈದ್ಯರು ಮಾಡುವುದು ಸುಲಿಗೆಯೇ ಅಥವಾ ಸೇವೆಯೇ ಅಂತ.

*ಲೇಖಕರು ಖ್ಯಾತ ಪ್ರಸೂತಿಶಾಸ್ತ್ರ ತಜ್ಞರು, ವೈದ್ಯಸಾಹಿತಿ; ಇನ್ಫೋಸಿಸ್ ಸುಧಾಮೂರ್ತಿ ಅವರ ಸಹೋದರಿ.

Leave a Reply

Your email address will not be published.