ವೈದ್ಯಲೋಕದ ಲೋಪಗಳು ಚರ್ಚೆಯಾಯ್ತು: ಮುಂದೇನು?

ಸರಕಾರ ವಿವಿಧೆಡೆ ಎಲ್ಲಾ ಸಲಕರಣೆಗಳು ಇರುವಂತ ‘ಹೈಟೆಕ್’ ಸರಕಾರಿ ಆಸ್ಪತ್ರೆಗಳನ್ನು ನಿರ್ಮಿಸಿ ರೋಗಿಗಳು ಖಾಸಗಿ ಆಸ್ಪತ್ರೆಗಳ ಸುಲಿಗೆಯಿಂದ ಪಾರಾಗುವ ಹಾಗೆ ತುರ್ತಾಗಿ ಮಾಡಬೇಕಾಗಿದೆ. ಸರಕಾರ ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ ಎಂಬುದು ನನ್ನ ದೃಢ ನಂಬಿಕೆ.

ಸಮಾಜಮುಖಿ ಮಾಸಪತ್ರಿಕೆಯು ಅಖಂಡ ಕರ್ನಾಟಕದ ಜನರ ಆರೋಗ್ಯಮುಖಿಯಾಗಿ ಶ್ರಮಿಸುವುದಕ್ಕೆ ಮುಂದೆ ಬಂದಿರುವುದು ಎಲ್ಲರಿಗೂ ಸಂತೋಷ ಹಾಗೂ ಹೆಮ್ಮೆಯ ವಿಷಯವಾಗಿದೆ. ಸಾಮಾನ್ಯ ಜನರ ಆರೋಗ್ಯ ರಕ್ಷಣೆ ಹಾಗೂ ಸುಧಾರಣೆಯಲ್ಲಿ ಇಂದಿನ ವೈದ್ಯಕೀಯ ರಂಗ ಸೇವೆಯೋ ಸುಲಿಗೆಯೋ ಎಂದು ಮುಖ್ಯ ಚರ್ಚೆಯಾಗಬೇಕೆಂದು ಸಮಾಜಮುಖಿಯು ಘೋಷಿಸಿದ ಮೇಲೆ ರಾಜ್ಯದ ಅನೇಕ ಗಣ್ಯ ವೈದ್ಯ ರಿಂದ ಹಾಗೂ ಇತರರಿಂದ ಲೇಖನಗಳು ಜೂನ್ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿರುವುದು ಪತ್ರಿಕೆ ಓದುಗರಿಗೆಲ್ಲ ತಿಳಿದ ವಿಷಯ.

ನಾಡಿನ ಜನರ ಆರೋಗ್ಯದ ವಿಚಾರದಲ್ಲಿ ಇದೊಂದು ಮುಖ್ಯ ಚರ್ಚೆಯ ವಿಷಯವಾಗಬೇಕೆಂದು ಮುಂದೆ ಬಂದ “ಸಮಾಜಮುಖಿ” ಬಳಗದ ಮುಂದಾಲೋಚನೆ ಜನರಲ್ಲಿ ಇವರಿಗೆ ಇರುವ ಕಾಳಜಿ ಎತ್ತಿ ತೋರಿಸುತ್ತದೆ. ಕರ್ನಾಟಕದ ಜನರೆಲ್ಲರೂ ಈ ಬಳಗಕ್ಕೆ ತಲೆಬಾಗಿ ವಂದಿಸಬೇಕಾಗಿದೆ.

ಅಂದಹಾಗೆ 12 ಗಣ್ಯ ವ್ಯಕ್ತಿಗಳಿಂದ ಹೆಚ್ಚಿನದಾಗಿ ವೈದ್ಯರಿಂದ, ಅವರೆಲ್ಲರ ಅಭಿಪ್ರಾಯಗಳು ಪ್ರಕಟವಾಗಿ ಸಾವಿರಾರು ಜನರು ಓದಿಯೂ ಆಗಿದೆ. ಈಗ ಉಳಿದಿರುವ ವಿಷಯ- ಈ ವಿಷಯ ಇಲ್ಲಿಗೇ ಕೊನೆಗೊಳ್ಳಬೇಕೋ ಇಲ್ಲವೇ ಸಮಾಜಮುಖಿಯವರು, ಕೆಲವು ನುರಿತ ಗಣ್ಯರು ಹಾಗೂ ವೈದ್ಯರೂ ಸೇರಿದಂತೆ ಇದರ ಗುರಿ ಮುಟ್ಟುವಂತೆ ಈ ವಿಷಯವನ್ನು ಮುಂದುವರೆಸುತ್ತಾರೋ ಕಾದು ನೋಡಬೇಕಿದೆ.

  • ಈ ಚರ್ಚೆಯಲ್ಲಿ ಭಾಗವಹಿಸಿದ 12 ವ್ಯಕ್ತಿಗಳಲ್ಲಿ ನಾನೂ ಒಬ್ಬನಾಗಿದ್ದು, ನಾನೊಬ್ಬನೇ ವೈದ್ಯಕೀಯದಿಂದ ಹೊರಗಿನವನು. ನಾನು 12 ಲೇಖನಗಳನ್ನು ಒಟ್ಟಿಗೆ ಓದಿ ಅವುಗಳ ಸಾರಾಂಶವನ್ನು ಹೀರಿಕೊಂಡು ವಿಶ್ಲೇಷಣೆ ಮಾಡಿದಾಗ ಈ ಕೆಳಗಿನ ಅಂಶಗಳು ಹೊರಬಂದಿವೆ.
  • 12 ವ್ಯಕ್ತಿಗಳಲ್ಲಿ ಏಳು ಜನರು ವೈದ್ಯಕೀಯ ರಂಗ “ಸುಲಿಗೆ” ಎಂದು ಗಟ್ಟಿಯಾಗಿ ವಿವರಿಸುತ್ತಾ ಇದರ ಪರವಾಗಿ ಅನೇಕ ಉದಾಹರಣೆಗಳನ್ನು ಕೊಟ್ಟಿದ್ದಾರೆ. ಸೇವೆಗಿಂತ ಆರ್ಥಿಕ ಲಾಭಕ್ಕೇ ಈ ಕ್ಷೇತ್ರ ಮಹತ್ವ ನೀಡುತ್ತಿದೆ, ದಿನದಿಂದ ದಿನಕ್ಕೆ ಆಂತರಿಕ ಮೌಲ್ಯವನ್ನು ಕಳೆದುಕೊಳ್ಳುತ್ತಾ ಜನರ ಆರೋಗ್ಯದ ಕಾಳಜಿಗಿಂತ ಅತೀ ಲಾಭಕ್ಕೆ ಆದ್ಯತೆ ನೀಡುತ್ತಿದೆ ಎಂದು ಗಟ್ಟಿಯಾಗಿ ಸಮರ್ಥಿಸಿಕೊಂಡಿದ್ದಾರೆ.
  •  ಉಳಿದವರಲ್ಲಿ ಮೂರು ಬರಹಗಾರರು ಈ ರಂಗ ಖಂಡಿತವಾಗಿಯೂ “ಸೇವೆ” ಎಂದು ಅನೇಕಾನೇಕ ಕಾರಣಗಳನ್ನು ಕೊಡುತ್ತಾ ರೋಗಿಗಳಿಗೆ ಈ ದಿನದ ಬೆಳವಣಿಗೆಯಲ್ಲಿ ಯಾಕೆ ಹೆಚ್ಚು ಖರ್ಚಾಗುತ್ತಿದೆ, ಯಾಕಾಗಿ ಹೆಚ್ಚಿನ ಡೈಗ್ನೋಸ್ಟಿಕ್‍ಗಳನ್ನು ಮಾಡಬೇಕಾಗಿದೆ, ವೈದ್ಯರು ರೋಗಿಗಳ ಸೇವೆಯಲ್ಲಿ ಸದಾ ನಿರತರಾಗಿದ್ದುಕೊಂಡು ಅದೆಷ್ಟು ರೀತಿಯಲ್ಲಿ ಕಷ್ಟಪಡುತ್ತಿದ್ದಾರೆ ಎಂಬ ವಿವರಣೆಯನ್ನು ಕೊಡುತ್ತಾ ಬಂದಿದ್ದಾರೆ. ವೈದ್ಯರನ್ನು ಹಿಂದೆ ದೇವರೆಂದು ಕರೆಯುತ್ತಿದ್ದ ದಿನಗಳು ಮಾಯವಾಗಿ ಅವರ ಮೇಲೆ ವಿನಾಕಾರಣ ಹಲ್ಲೆಗಳು ಆಗುತ್ತಿರುವುದು ವಿನಾಶಕಾರಿ ಬೆಳವಣಿಗೆ ಎಂದು ವಾದಿಸಿದ್ದಾರೆ.
  • ಇನ್ನುಳಿದ ಇಬ್ಬರು ಬರಹಗಾರರು ‘ಸುಲಿಗೆಯೋ, ಸೇವೆಯೋ’ ಎಂಬುದನ್ನು ಸಂಶಯದಿಂದಲೇ ಕಂಡುಕೊಂಡು ಅವರ ನಿರ್ದಿಷ್ಟ ಅಭಿಪ್ರಾಯವನ್ನು ಹೊರಹಾಕುವಲ್ಲಿ ವಿಫಲರಾಗಿದ್ದಾರೆ.
    ಈ ಮೇಲಿನ ವಿಶ್ಲೇಷಣೆಯನ್ನು ನೀವು ತೂಗಿದರೆ ಇಂದು ವೈದ್ಯಕೀಯ ರಂಗ ಸುಲಿಗೆ, ಸೇವೆಯಲ್ಲ ಎಂದು ಹೇಳುತ್ತಿದೆ. ನಾನು ಮೊದಲೇ ಹೇಳಿದಂತೆ 11 ವ್ಯಕ್ತಿಗಳು ವೈದ್ಯರೇ ಆಗಿದ್ದುಕೊಂಡು, ಇದು ಸುಲಿಗೆ ಎಂದು ಹೆಚ್ಚಿನವರು ಒಪ್ಪಿಕೊಂಡಿರುವುದು ನಿಜವಾಗಿ ಆಶ್ಚರ್ಯ. ಅವರ ನಿಸ್ವಾರ್ಥ ಅಭಿಪ್ರಾಯವನ್ನು ಮೆಚ್ಚಬೇಕಾಗಿದೆ.

ಹಾಗಾದರೆ ಮುಂದೇನು? ನನ್ನ ಕೆಲವು ಸಲಹೆಗಳು ಹೀಗಿವೆ:

  • ಈ ವಿಷಯಕ್ಕೆ ಸಂಬಂಧಪಟ್ಟ ಸಮಾಜಮುಖಿ ಬಳಗದವರೆಲ್ಲರೂ ಒಟ್ಟಾಗಿ ಕೂತು ಈ ವಿಚಾರವಾಗಿ ಚರ್ಚಿಸಿ ಒಂದು ಗಟ್ಟಿಯಾದ ಅಭಿಪ್ರಾಯಕ್ಕೆ ಬರಬೇಕು.
  • ಕರ್ನಾಟಕದ ದೊಡ್ಡ ಸಂಖ್ಯೆಯ ವೈದ್ಯರಲ್ಲಿ ಕೇವಲ 11 ಜನರು ಮಾತ್ರ ಈ ವಿಷಯದಲ್ಲಿ ಅವರ ಅಭಿಪ್ರಾಯವನ್ನು ಸಮಾಜಮುಖಿಯಲ್ಲಿ ಕೊಟ್ಟಿದ್ದಾರೆ. ಅದುದರಿಂದ ಈ 11 ವೈದ್ಯರಲ್ಲಿ ಇಬ್ಬರು ಅಥವಾ ಮೂವರು ನುರಿತ ವೈದ್ಯರ ಸಹಾಯದಿಂದ ಅವರಿಗಿಂತಲೂ ಹೆಚ್ಚಿನ ಗಣ್ಯ ವೈದ್ಯರನ್ನು ಗುರುತಿಸಿ, ಸಮಾಜಮುಖಿಯ ಕೋರ್ ಗ್ರೂಪ್ ಸೇರಿದಂತೆ ಎಲ್ಲರೂ ದೀರ್ಘವಾಗಿ ಈ ವಿಷಯವನ್ನು ಚರ್ಚಿಸಿ ಒಂದು ಅಂತಿಮ ಅಭಿಪ್ರಾಯಕ್ಕೆ ಬರಬೇಕು.
  • ತದನಂತರ ಈ ವಿಷಯದ ಚರ್ಚೆಯಲ್ಲಿ ಅಂತಿಮವಾಗಿ ಕಂಡು¨ಂದ ವಿಚಾರವನ್ನು ಸರಕಾರದ ಮುಂದೆ ಮಂಡಿಸಿ, ಸರಕಾರದ ಹಿಂದೆ ಬಿದ್ದು ಈ ಕ್ಷೇತ್ರದಲ್ಲಿ ಹೆಚ್ಚಿನದಾಗಿ ಬಡ ರೋಗಿಗಳ ಘೋರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಮಾಡಬೇಕು.

ಈ ಕುರಿತು ನನ್ನ ಸ್ವಂತ ಅಭಿಪ್ರಾಯವೆಂದರೆ, ಈ ವಿಷಯದಲ್ಲಿ ಯಾರದು ಹೆಚ್ಚು ತಪ್ಪಿದೆ ಎಂದು ತೀರ್ಮಾನಿಸುವುದು ಕಷ್ಟದ ಕೆಲಸ. ಒಂದಂತೂ ಖಂಡಿತ. ಈಗಿನ ಸರಕಾರಗಳು ಸರಕಾರಿ ಆಸ್ಪತ್ರೆಗಳನ್ನು ನಿರ್ಲಕ್ಷಿಸಿ, ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿವೆ. ಸರಕಾರಿ ಆಸ್ಪತ್ರೆಗಳಲ್ಲಿ ಸುಧಾರಿತ ಸಲಕರಣೆಗಳು ಇದ್ದರೂ ಅವುಗಳನ್ನು ಕೆಲವೊಮ್ಮೆ ಉಪಯೋಗಿಸದೇ ಬಿದ್ದಿರುವ ಕಾರಣದಿಂದ ಹೆಚ್ಚಿನ ರೋಗಿಗಳು ಖಾಸಗಿ ಆಸ್ಪತ್ರೆಗಳ ಕಡೆಗೆ ಓಡಿ ಅವರಿಂದ ಸುಲಿಗೆಗೆ ಸಿಕ್ಕಿಕೊಂಡು ನಿರ್ಗತಿಕರಾಗುತ್ತಿದ್ದಾರೆ. ಕೆಲವರು ಈ ಕಷ್ಟಗಳನ್ನು ತಡೆಯಲಾರದೆ ಆತ್ಮಹತ್ಯೆ ಮಾಡಿಕೊಳ್ಳುವವರೂ ಇದ್ದಾರೆ.

Leave a Reply

Your email address will not be published.