ವೈರಾಣು ವೈರಾಗ್ಯ!

ಹತ್ತಾರು ತಲೆಮಾರುಗಳ ತರುವಾಯ ಅನುಭವಕ್ಕೆ ಬರಬಹುದಾದ ವಿಪರೀತ ಪರಿಸ್ಥಿತಿಯೊಂದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಜಗತ್ತಿನೆಲ್ಲೆಡೆ ಒಂಥರಾ ದುಗುಡ, ಅತಂತ್ರ, ಹತಾಶೆ, ಅಸ್ಪಷ್ಟತೆಯ ವಾತಾವರಣ. ಬದುಕಿನ ಯಾವುದೋ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬವನ್ನು ಆವರಿಸಬಹುದಾದ ಇಂತಹ ವಿಷಮ ಭಾವನೆಗಳು ಸಾರ್ವತ್ರಿಕವಾಗಿ ಇಡೀ ಮನುಕುಲವನ್ನೇ ವ್ಯಾಪಿಸಿದರೆ ಏನಾದೀತು? ಈಗ ಅದೇ ಆಗಿದೆ. ಅಂತರ್ಗತ ಆತಂಕವನ್ನು ಅದುಮಿಡುವ ಪ್ರಕ್ರಿಯೆಯ ಭಾಗವಾಗಿ ಮನುಷ್ಯ ಹಲವು ಬಗೆಯಲ್ಲಿ ಅನಾವರಣಗೊಳ್ಳುತ್ತಿದ್ದಾನೆ:

ಒಂದು ವಿಷಯವನ್ನು ಎಷ್ಟು ದೀರ್ಘಕಾಲ ಅಗಿಯಲು ಸಾಧ್ಯ ಎಂಬುದನ್ನು ರುಜುವಾತುಪಡಿಸಲು ಜಿದ್ದಿಗೆ ಬಿದ್ದಿರುವ ಸುದ್ದಿವಾಹಿನಿಗಳು ಜನಸಾಮಾನ್ಯರ ನಿದ್ದೆಗೆಡಿಸಿವೆ. ಜನಾರೋಗ್ಯ ವ್ಯವಸ್ಥೆಯ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳ ಅವಿವೇಕದ ವರ್ತನೆ ಮತ್ತು ನಿರ್ಧಾರಗಳು ಭಯ ಹುಟ್ಟಿಸಿವೆ. ಈವರೆಗೆ ತೀವ್ರ ಅಪನಂಬಿಕೆಗೆ ಈಡಾಗಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಜನಾನುರಾಗಿಗಳಾಗಿ ಹೊಮ್ಮುತ್ತಿದ್ದಾರೆ. ಹಲವು ಅಪವಾದಗಳ ಹೊರತಾಗಿಯೂ ಪೊಲೀಸ್ ಪಡೆ ಅಪರೂಪದ ಕಾರ್ಯಕ್ಷಮತೆ ಪ್ರದರ್ಶಿಸುತ್ತಿದೆ.

ತಮ್ಮ ರುಚಿಗೆ ತಕ್ಕ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅನಿಯಂತ್ರಿತವಾಗಿ ಹರಿಬಿಡುವವರು, ಮರೆತ ಬಂಧು-ಮಿತ್ರರಿಗೆ ಕರೆ ಮಾಡುವಲ್ಲಿ ನಿರತರಾದವರು, ಅಡುಗೆಮನೆಯಲ್ಲಿ ವಿವಿಧ ಪ್ರಯೋಗಗಳಲ್ಲಿ ತೊಡಗಿದ ರಸಿಕರು, ಮರೆತ ಬರವಣಿಗೆಯನ್ನು ಮುಂದುವರಿಸಿದವರು, ಕುಟುಂಬದೊAದಿಗೆ ಸಿನಿಮಾ ವೀಕ್ಷಣೆಯಲ್ಲಿ ಮುಳುಗಿದವರು, ಮದ್ಯವಿಲ್ಲದೆ ಪರಿತಪಿಸುವವರು, ಪ್ರಚಾರಪ್ರಿಯ ದಾನಿಗಳು, ನಿಜಕ್ಕೂ ಸಂತ್ರಸ್ತ ಬಡವರು, ದಿಕ್ಕೆಟ್ಟ ರೈತರು…

ಈ ಎಲ್ಲದರ ನಡುವೆ ಎಲ್ಲರಿಗೂ ಏನೋ ಭರವಸೆ. ‘ಈ ಅಪಾಯ ತಮ್ಮೊಬ್ಬರನ್ನೇ ಕಾಡುತ್ತಿಲ್ಲ; ಎಲ್ಲರಿಗೂ ವಿನಾಶ ಕಾದಿದೆ’ ಎಂಬುದೇ ಬಹುಪಾಲು ಜನರ ನೆಮ್ಮದಿ, ಸಮಾಧಾನಕ್ಕೆ ಏಕಮಾತ್ರ ಕಾರಣ!

ಇಂತಹ ವಿಚಿತ್ರವೂ ವಿಶ್ವವ್ಯಾಪಿಯೂ ಆದ, ದಿನಂಪ್ರತಿ ತಿರುವು ಪಡೆಯುತ್ತಿರುವ ಸನ್ನಿವೇಶಕ್ಕೆ ಒಂದು ಜವಾಬ್ದಾರಿಯುತ ಪತ್ರಿಕೆಯಾಗಿ ಹೇಗೆ ಪ್ರತಿಸ್ಪಂದಿಸಬೇಕು ಎಂಬ ಸಂಕೀರ್ಣ ಸವಾಲು ಸಮಾಜಮುಖಿಗೆ ಎದುರಾಯಿತು. ಜೊತೆಗೆ ಈ ಪರಿಸ್ಥಿತಿಯ ಪರಿಣಾಮವಾಗಿ ಜನರ ‘ಜೀವನದೃಷ್ಟಿ’ ಮತ್ತು ‘ಜೀವನಶೈಲಿ’ಯಲ್ಲಿ ಬುಡಮೇಲು ಬದಲಾವಣೆ ಸಂಭವಿಸಬಹುದೇ ಎಂಬ ಕುತೂಹಲವೂ ಮೂಡಿತು. ಓದುಗರ ಭೀತಿ ಹೋಗಲಾಡಿಸಿ ವಾಸ್ತವಿಕ ಚಿತ್ರಣ ನೀಡುವ ಪ್ರಾಥಮಿಕ ಕರ್ತವ್ಯವೂ ನಮ್ಮೆದುರಿಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಬಹುಮಾಧ್ಯಮಗಳ ನಿರಂತರ ಪ್ರಸಾರ, ವದಂತಿ, ಚರ್ವಿತಚರ್ವಣ ಚರ್ಚೆಗಳ ಮೂಲಕ ವಾಕರಿಕೆ ಹುಟ್ಟಿಸಿದ ವಿಷಯವನ್ನು ವಿಶೇಷ ಎಚ್ಚರಿಕೆ ಮತ್ತು ಘನತೆಯಿಂದ ನಿರ್ವಹಿಸಬೇಕಿತ್ತು.

ಈ ಹಿನ್ನೆಲೆಯಲ್ಲಿ ಈ ಸಂಚಿಕೆಯ ಮುಖ್ಯಚರ್ಚೆ ‘ಕೊರೋನಾ ನಂತರ’ ಯುಗದ ಗುಣಲಕ್ಷಣಗಳೇನು? ರೂಪುಗೊಂಡಿದೆ. ಎಂದಿನAತೆ ನಮ್ಮ ಸಮಾಜಮುಖೀ ಚಿಂತನೆಯ ಲೇಖಕರ ಬಳಗ ಚರ್ಚೆಯನ್ನು ಶ್ರೀಮಂತಗೊಳಿಸಿದೆ. ‘ಕರ್ನಾಟಕದಲ್ಲಿ ಪರಿಸರ ಸಮತೋಲನ ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆಯೇ?’ ಎಂಬ ಇನ್ನೊಂದು ಮುಖ್ಯಚರ್ಚೆಯಲ್ಲಿ ಪಾಲ್ಗೊಂಡಿರುವ ನಾಡಿನ ಖ್ಯಾತ ಪರಿಸರ ಚಿಂತಕರು ಸಮರ್ಥ ವಾದ ಮಂಡಿಸಿದ್ದಾರೆ. ಉಳಿದ ವಿಭಾಗಗಳೂ ಓದುಗರ ನಿರೀಕ್ಷೆಯ ಮಟ್ಟ ಮುಟ್ಟಿವೆ ಎಂದು ನಂಬುವೆ.

– ಸಂಪಾದಕೀಯ

Leave a Reply

Your email address will not be published.