ವೈರುಧ್ಯಗಳ ಜೊತೆಗೆ ಕುರುಡು ನಡಿಗೆ!

ಮನುಷ್ಯನ ವೈಯಕ್ತಿಕ ಬದುಕು, ಸಾಮೂಹಿಕ ನಡವಳಿಕೆ, ಆಡಳಿತದ ನಿಲುವುನಿರ್ಧಾರಗಳು ಹೊರನೋಟಕ್ಕೆ ಎಷ್ಟೇ ಸೂತ್ರಬದ್ಧ, ಸುಸಂಬದ್ಧ ಎಂಬOತೆ ಕಾಣಿಸಿದರೂ ಅವುಗಳ ಆಳದಲ್ಲಿ ವೈರುಧ್ಯದ ಬೇರುಗಳು ಹಸಿಯಾಗಿಯೇ ಇರುತ್ತವೆ. ಎಲ್ಲಾ ದೇಶ-ಕಾಲದಲ್ಲೂ ಅಸ್ತಿತ್ವ ಉಳಿಸಿಕೊಂಡ ಕೆಲವು ಸಾರ್ವಕಾಲಿಕ ವೈರುಧ್ಯಗಳು ಒಂದೆಡೆಯಾದರೆ, ನಿರ್ದಿಷ್ಟ ಸಮಯ-ಸಂದರ್ಭದ ಕೂಸುಗಳಾಗಿ ಹುಟ್ಟಿಕೊಳ್ಳುವ ಸ್ಥಳಿಯ ವೈರುಧ್ಯಗಳನ್ನು ಇನ್ನೊಂದೆಡೆ ಗುರುತಿಸಬಹುದು. ಆದರೆ ವೈರುಧ್ಯಗಳೇ ದೇಶ, ವ್ಯಕ್ತಿ ಅಥವಾ ಸನ್ನಿವೇಶವನ್ನು ಸಂಪೂರ್ಣ ಸ್ವಾಧೀನ ತೆಗೆದುಕೊಂಡುಬಿಟ್ಟರೆ…? ಕೆಲವೊಮ್ಮೆ ಸ್ವತಂತ್ರ ಚಿಂತನೆ ಮತ್ತು ಬೌದ್ಧಿಕ ಪ್ರಾಮಾಣಿಕತೆಗೆ ಕನ್ನಡಿ ಆಗುವ ವೈರುಧ್ಯಗಳು ಕುರುಡು ಅನುಕರಣೆಗೂ ಕಾರಣವಾದರೆ…?

ನಾವೀಗ ವೈರುಧ್ಯಗಳ ಜಾತ್ರೆಯಲ್ಲಿ ದಿಕ್ಕುತಪ್ಪಿ ತಿರುಗುತ್ತಿದ್ದೇವೆ; ಎಲ್ಲೆಲ್ಲೂ ಭರಾಟೆಯ ಮಾರಾಟ, ಹಾರಾಟ, ಚೀರಾಟ, ಗದ್ದಲ, ಗೊಂದಲ. ಮಾರಲು ಬಂದವರು ದುಬಾರಿ ಬೆಲೆ ಬಯಸುತ್ತಿಲ್ಲ; ಕೊಳ್ಳಲು ನೆರೆದವರು ಚೌಕಾಸಿಗೂ ಇಳಿಯುತ್ತಿಲ್ಲ. ಯಾರಿಗೂ ಜಾತ್ರೆ ಮುಗಿಸಿ ಬೇಗ ಮನೆಗೆ ಹಿಂದಿರುಗುವ ತವಕವಿಲ್ಲ; ಎಲ್ಲರಿಗೂ ಹುಸಿ ಸಂಭ್ರಮದಲ್ಲಿ ತೇಲಾಡುವ ಖುಷಿ. ಆರಿದ ಒಲೆಯ ಬೂದಿಯಲ್ಲಿ ಮೈಚೆಲ್ಲಿ ತೂಕಡಿಸುತ್ತಿರುವ ಬಾವುಗದ ಮುಚ್ಚಿದ ಕಣ್ಣುಗಳಲ್ಲಿ ಮಾತ್ರ ಉಳಿದಿರುವ ಸ್ಥಿತಪ್ರಜ್ಞೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ಕೋವಿಡ್ ಕಂಪನದಲ್ಲಿ ಲಸಿಕೆಗಾಗಿ ಕಾತರಿಸುತ್ತಿದ್ದ ಜನ, ಅದರಲ್ಲೂ ಮುಂಚೂಣಿ ಕೊರೊನಾ ಯೋಧರು ಇಂದು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿರುವ ವೈರುಧ್ಯ ನಮ್ಮೆದುರಿಗಿದೆ. ಆದ್ಯತೆಯ ಮೇಲೆ ಆಹ್ವಾನಿಸಿದವರಿಗೆÀ ಮೊದಲ ಸುತ್ತಿನಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಅರ್ಧದಷ್ಟೂ ಯಶಸ್ಸು ಕಂಡಿಲ್ಲ.

ಕೇಂದ್ರ ಸರ್ಕಾರ ರೈತಸಮುದಾಯಕ್ಕೆ ಹಿತಕರವೆಂದು ಹೇಳಿಕೊಂಡು ಕೆಲವು ಕಾಯ್ದೆಗಳನ್ನು ರೂಪಿಸಿದೆ; ಅವು ತಮಗೆ ಬೇಡವೇಬೇಡವೆಂದು ಫಲಾನುಭವಿ ರೈತರೇ ತಿರಸ್ಕರಿಸಿದ್ದಾರೆ, ಅವುಗಳನ್ನು ವಿರೋಧಿಸಿ ಬೃಹತ್ ಹೋರಾಟವನ್ನೇ ಕಟ್ಟಿದ್ದಾರೆ. ರೈತರಿಗೇ ಬೇಡವಾದ ‘ಹಿತ’ನ್ನು ಹೇಗಾದರೂ ಮಾಡಿ ಅವರಿಗೆ ಮುಟ್ಟಿಸುವ ‘ಹಟ’ ಸರ್ಕಾರದ್ದು. ಸರ್ಕಾರದ ನಿರ್ಧಾರದಲ್ಲಿ ‘ಒಳಿತು’ ಮಾಡುವ ಬದ್ಧತೆ ಇರುವುದು ಎಲ್ಲರಿಗೂ ಮನದಟ್ಟಾಗಿದೆ. ಆದರೆ ಆ ಒಳಿತು ಯಾರಿಗೆ ಎಂಬುದು ಬಹುಮುಖ್ಯ ಪ್ರಶ್ನೆ. ಒಂದು ರೀತಿಯಲ್ಲಿ ಇದು ಎಲ್ಲರಿಗೂ ಉತ್ತರ ಗೊತ್ತಿರುವ ಪ್ರಶ್ನೆ!

ಪ್ರಜೆಗಳ ಹಿತಾಸಕ್ತಿ ಕಾಪಾಡಬೇಕಾದ ವ್ಯವಸ್ಥೆ ಇದಕ್ಕಿಂತ ಹೆಚ್ಚಿನ ಅಪನಂಬಿಕೆ, ಅಪಮಾನಕ್ಕೆ ಈಡಾಗಲು ಸಾಧ್ಯವೇ?

ನ್ಯಾಯಾಲಯಗಳೇನೂ ಕಡಿಮೆಯಿಲ್ಲ; ತಮ್ಮ ವ್ಯಾಪ್ತಿ ಮೀರಿಯಾದರೂ ‘ನ್ಯಾಯ’ ಒದಗಿಸಲು ಸನ್ನದ್ಧಗೊಂಡಿವೆ. ಇನ್ನು ಕಾರ್ಯಾಂಗದ ಭ್ರಷ್ಟತೆ ಮತ್ತು ಬಾಲಬಡುಕತನ ಎಲ್ಲಾ ಮಿತಿಗಳ ಆಚೆ ಚಾಚಿವೆ. ಸಾಮಾನ್ಯ ಜನರೂ ಹಿಂದೆ ಬಿದ್ದಿಲ್ಲ; ತಪ್ಪು ಮಾಡಿದವರು ‘ತಮ್ಮವ’ರಾದರೆ ನಿರಾಯಾಸವಾಗಿ ಹೊಟ್ಟೆಗೆ ಹಾಕಿಕೊಳ್ಳುತ್ತಾರೆ. ಇತರರನ್ನು ಲೋಕಾಭಿರಾಮವಾಗಿ ಟೀಕಿಸುವುದಕ್ಕೆ ಮಾತ್ರ ಹೇಸುವುದಿಲ್ಲ. ಇಲ್ಲಿ ‘ತಮ್ಮವರ’ ಪಟ್ಟಿಯಲ್ಲಿ ಗೆಳೆತನ, ಬಂಧುತ್ವ, ಸ್ವಜಾತಿ ಸೇರಿರುತ್ತವೆ.

ಮನಸ್ಸಾಕ್ಷಿ ಮೆಲುದನಿಯಲ್ಲಿ ಮಾತನಾಡುತ್ತಾ ತನ್ನ ನಿಲುವು ಪ್ರಕಟಿಸಲು ಯತ್ನಿಸುವಾಗ ಮಧ್ಯೆ ಬಾಯಿ ಹಾಕುವ ಹೊರಗಿನ ಪ್ರಪಂಚ ಆಲೋಚನೆಯನ್ನು ಹದಗೆಡಿಸಲು ಯತ್ನಿಸುತ್ತದೆ. ವ್ಯಕ್ತಿಗಳ ನೆಲೆಯಲ್ಲಿ ಸದಾ ಏರ್ಪಡುವ ಈ ಸಂಘರ್ಷ ಸೂಕ್ಷö್ಮಮತಿಗಳ ಗಮನಕ್ಕೆ ಬಾರದಿರದು. ಆದರೂ ವೈರುಧ್ಯಗಳನ್ನು ಬಗಲುಚೀಲದಲ್ಲಿ ತುಂಬಿಸಿಕೊAಡು ಹೆಜ್ಜೆ ಹಾಕುವುದರಲ್ಲಿ ಅನಿವಾರ್ಯತೆ, ಅಸಹಾಯಕತೆ ಜೊತೆಗೆ ಪ್ರತಿರೋಧದ ಅಭಾವ ಸಾಥ್ ಕೊಡುತ್ತದೆ.

ಸಮಾಜದಲ್ಲಿ ಹಾಸುಹೊಕ್ಕಾಗಿರುವ ಜಾತೀಯತೆಯನ್ನೇ ತೆಗೆದುಕೊಳ್ಳಿ. ಒಬ್ಬ ವ್ಯಕ್ತಿಯ ‘ಹೊರಗಿನ’ ಜಾತ್ಯಾತೀತತೆ ಮತ್ತು ‘ಒಳಗಿನ’ ಜಾತೀಯತೆಯನ್ನು ಮುದ್ದಾಂ ಮುಖಾಮುಖಿ ಮಾಡಿಸದಿದ್ದರೆ ಈ ವೈರುಧ್ಯದಿಂದ ಬಿಡುಗಡೆ ಸಾಧ್ಯವಿಲ್ಲ.

Leave a Reply

Your email address will not be published.