ವೈಲ್ಡ್ ಕರ್ನಾಟಕ ರಾಜ್ಯದ ವನ್ಯಜೀವಿ ವೈವಿಧ್ಯದ ವಿಹಂಗಮ ನೋಟ

ನಿರ್ಮಾಪಕರೇ ನೀಡಿರುವ ಮಾಹಿತಿಯ ಪ್ರಕಾರ 52 ನಿಮಿಷಗಳ ಅವಧಿಯ ಸಾಕ್ಷ್ಯಚಿತ್ರದ ನಿರ್ಮಾಣಕ್ಕೆ 1500 ದಿನಗಳನ್ನು ವ್ಯಯಿಸಲಾಗಿದೆ, 15,000 ಗಂಟೆಗಳನ್ನು ಕಾಡಿನಲ್ಲಿ ಕಳೆಯಲಾಗಿದೆ, 2,400 ನಿಮಿಷಗಳಷ್ಟು ಅವಧಿಯ ಚಿತ್ರೀಕರಣ ಮಾಡಲಾಗಿದೆ ಹಾಗೂ 20 ಕ್ಯಾಮೆರಾಗಳನ್ನುಬಳಸಲಾಗಿದೆ.

‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರವನ್ನು ಭಾರತದ ಮೊದಲ ಬ್ಲೂಚಿಪ್ ನೈಸರ್ಗಿಕ ಇತಿಹಾಸ ಸಾಕ್ಷ್ಯಚಿತ್ರವೆಂದು ಬಿಂಬಿಸಲಾಗಿದೆ. ಇಂಗ್ಲಿಷ್‌ನ ಬ್ಲೂಚಿಪ್ ಪದಕ್ಕೆ ಅತ್ಯುತ್ತಮ ಗುಣಮಟ್ಟದ್ದು ಎಂಬ ಅರ್ಥವಿದೆ. ಅಂತಾರಾಷ್ಟ್ರೀಯ ನೈಸರ್ಗಿಕ ಇತಿಹಾಸ ಆಧಾರಿತ ವಾಹಿನಿಗಳಲ್ಲಿ ಪ್ರಸಾರವಾಗುವ ಸಾಕ್ಷ್ಯಚಿತ್ರಗಳನ್ನು ಇಂತಹ ಗುಣಮಟ್ಟದೊಂದಿಗೆ ಗುರುತಿಸಬಹುದು. ಅನುಭವ-ಪ್ರತಿಭೆ, ಬದ್ಧತೆ-ಶ್ರಮ ಹಾಗೂ ಐದು ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ನಿರ್ಮಾಣವಾಗಿರುವ ‘ವೈಲ್ಡ್ ಕರ್ನಾಟಕ’ ಬ್ಲೂಚಿಪ್ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆ ಹಾಗೂ ದೇಶದ ನೈಸರ್ಗಿಕ ಇತಿಹಾಸಜ್ಞರು, ವನ್ಯಜೀವಿ ತಜ್ಞರು ಹಾಗೂ ವನ್ಯಜೀವಿ ಛಾಯಾಗ್ರಾಹಕರಿಗೆ ಮೇಲ್ಪಂಕ್ತಿಯಾಗಿದೆ.

ನಮ್ಮ ಸಾಮಾನ್ಯ ಜನರಿಗೆ ನೈಸರ್ಗಿಕ ಇತಿಹಾಸ ಎಂಬುದೆಲ್ಲಾ ಹೊಸ ಪದಗಳು. ಕಾಡು ಅಂದರೆ, ಮರಗಳು ಹಾಗೂ ಒಂದಷ್ಟು ಪ್ರಾಣಿಗಳು ಎಂಬ ಕಲ್ಪನೆಯಲ್ಲೇ ಇರುವ ನಮಗೆ ನೈಸರ್ಗಿಕ ಇತಿಹಾಸ ಎಂದರೇನು ಎಂದು ವಿವರಿಸಿಯೇ ಇಲ್ಲಿ ಮುಂದುವರೆಯಬೇಕಾಗುತ್ತದೆ. ನೈಸರ್ಗಿಕ ಇತಿಹಾಸವು ಪ್ರಾಣಿಗಳು ಹಾಗೂ ಸಸ್ಯಗಳನ್ನು ಮುಖ್ಯವಾಗಿ ವೀಕ್ಷಣೆಯ (ಪ್ರಯೋಗಕ್ಕಿಂತ ಮಿಗಿಲಾಗಿ) ಮೂಲಕ ಅಧ್ಯಯನ ಮಾಡಿ ಅದನ್ನು ಜನಪ್ರಿಯ ಪ್ರಕಾರದಲ್ಲಿ ಸಾದರಪಡಿಸುವುದಾಗಿರುತ್ತದೆ.

ರಾಜ್ಯದ ವನ್ಯಜೀವಿ ಛಾಯಾಗ್ರಾಹಕರೇ ತಯಾರಿಸಿದ ಮೊದಲ ಶ್ರೇಷ್ಠ ಗುಣಮಟ್ಟದ ನೈಸರ್ಗಿಕ ಇತಿಹಾಸ ಸಾಕ್ಷ್ಯಚಿತ್ರವು ಕೃಪಾಕರ್ ಹಾಗೂ ಸೇನಾನಿ ನ್ಯಾಷನಲ್ ಜಿಯಾಗ್ರಫಿಕ್ ವಾಹಿನಿಗೆ ನಿರ್ಮಿಸಿದ ‘ವೈಲ್ಡ್ ಡಾಗ್ ಡೈಯರಿಸ್’ ಆಗಿತ್ತೆಂದು ಇಲ್ಲಿ ದಾಖಲಿಸಲು ಇಚ್ಛಿಸುತ್ತೇನೆ. ಬಂಡಿಪುರ ಹಾಗೂ ಮಧುಮಲೈ ರಾಷ್ಟ್ರೀಯ ಉದ್ಯಾನವನಗಳಲ್ಲಿ ಕಾಡುನಾಯಿಗಳ ವರ್ತನೆಯನ್ನು ಹಲವಾರು ವರ್ಷಗಳ ಕಾಲ ಆಳವಾಗಿ ಅಧ್ಯಯನ ಮಾಡಿದ ಫಲವಾಗಿ ಮೂಡಿಬಂದ ಆ ಸಾಕ್ಷ್ಯಚಿತ್ರವು ಅಪಾರ ಮೆಚ್ಚುಗೆಯನ್ನು, ಹಲವಾರು ಅಂತಾರಾಷ್ಟಿಯ ಪ್ರಶಸ್ತಿಗಳನ್ನು ಗಳಿಸಿತ್ತು.

‘ವೈಲ್ಡ್ ಕರ್ನಾಟಕ’ವು ಒಂದು ನಿರ್ದಿಷ್ಟ ಪ್ರಾಣಿಗೆ ಸಂಬಂಧಿಸಿದಂತೆ ವಿವರವಾದ ವೀಕ್ಷಣಾತ್ಮಕ ಅಧ್ಯಯನದ ಸಾಕ್ಷ್ಯಚಿತ್ರವಲ್ಲ ಅಥವಾ ಮುಂದೊಂದು ದಿನ ಯಾವುದಾದರೂ ಪ್ರಾಣಿಯ ಚರ್ಯೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಅಧ್ಯಯನ ಸೂಕ್ತ ವಸ್ತುವನ್ನು ಒದಗಿಸುವುದಿಲ್ಲ. ಆದರೆ ಈ ಸಾಕ್ಷ್ಯಚಿತ್ರ ಕರ್ನಾಟಕದ ವನ್ಯಜೀವಿ ಸಂಪತ್ತಿನ ವಿಹಂಗಮ ನೋಟವನ್ನು ಅತ್ಯುತ್ತಮ ನಿರೂಪಣೆ ಹಾಗೂ ಅದ್ಭುತ ದೃಶ್ಯಗಳೊಂದಿಗೆ 52 ನಿಮಿಷಗಳಲ್ಲಿ ನೀಡುತ್ತದೆ. ವಿವಿಧ ವನ್ಯಜೀವಿಗಳ ಚರ್ಯೆಯನ್ನು ಸೂಕ್ಷ÷್ಮವಾಗಿ ಹಾಗೂ ಆಳವಾಗಿ ಅಧ್ಯಯನ ಮಾಡಲು ಕರ್ನಾಟಕ ವಿಪುಲ ಅವಕಾಶಗಳನ್ನು ಒದಗಿಸುತ್ತದೆ ಎಂಬ ಸುಳಿವನ್ನು ಈ ಸಾಕ್ಷ್ಯಚಿತ್ರ ನೀಡುತ್ತದೆ. ಮುಂದೊಂದು ದಿನ ನಮ್ಮ ನಾಡಿನ ನೈಸರ್ಗಿಕ ಇತಿಹಾಸಜ್ಞರು ಹಾಗೂ ವನ್ಯಜೀವಿ ತಜ್ಞರು ಅಂತಹ ಕೆಲಸಗಳನ್ನು ಮಾಡುವಂತಾಗಲಿ!

‘ವೈಲ್ಡ್ ಕರ್ನಾಟಕ’ದಲ್ಲಿ ರಾಜ್ಯದ ಎಲ್ಲಾ ಪ್ರಮುಖ ಪ್ರಾಣಿ-ಪಕ್ಷಿಗಳ ಚಿತ್ರಣ ಸಿಗುವುದಿಲ್ಲ. ಆದರೆ ಏನನ್ನು ತೋರಿಸಿದ್ದಾರೋ ಅದನ್ನು ಅತ್ಯಂತ ಕಲಾತ್ಮಕವಾಗಿ ಸಾದರಪಡಿಸಿದ್ದಾರೆ. ಈ ಸಾಕ್ಷ್ಯಚಿತ್ರದ ಶಕ್ತಿ ಅದೇ ಆಗಿದೆ. ಐವತ್ತೆರಡು ನಿಮಿಷಗಳು ಕಣ್ಮಿಟುಕಿಸುವುದರಲ್ಲಿ ಕಳೆದುಹೋಗುತ್ತವೆ.

ರಾಜ್ಯದ ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕರಾದ ಅಮೋಘವರ್ಷ ಹಾಗೂ ಕಲ್ಯಾಣವರ್ಮ ನಿರ್ದೇಶಿಸಿರುವ ಈ ಸಾಕ್ಷ್ಯಚಿತ್ರಕ್ಕೆ ಹಲವಾರು ವಿದೇಶಿ ತಂತ್ರಜ್ಞರುಗಳ ನೆರವನ್ನು ಸಂಕಲನವೂ ಸೇರಿದಂತೆ ವಿವಿಧ ವಲಯಗಳಲ್ಲಿ ಪಡೆದುಕೊಳ್ಳಲಾಗಿದೆ. ಪ್ರಸಿದ್ಧ ನೈಸರ್ಗಿಕ ಇತಿಹಾಸಜ್ಞ ಹಾಗೂ ಬಿಬಿಸಿ ಖ್ಯಾತಿಯ ಡೇವಿಡ್ ಆಟೆನ್‌ಬರೋ ಅವರ ಧ್ವನಿಯನ್ನು ನಿರೂಪಣೆಗೆ ಬಳಸಿಕೊಂಡಿರುವುದು ಈ ಸಾಕ್ಷ್ಯಚಿತ್ರಕ್ಕೆ ಅಪಾರ ಮೌಲ್ಯವನ್ನು ನೀಡಿದೆ.

ಚಿತ್ರವು ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಗಾರಿನ ಅಂತ್ಯದ ಸಮಯದಿಂದ ಪ್ರಾರಂಭವಾಗಿ, ಬೇಸಿಗೆಯ ಮೂಲಕ ಸಾಗಿ, ಮುಂಗಾರಿನ ಆರಂಭಕ್ಕೆ ಬಂದು ನಿಲ್ಲುತ್ತದೆ. ಚಿತ್ರ-ಕಥೆಯು ಲಭ್ಯವಾಗುವ ದೃಶ್ಯಗಳ ಮೇಲೆ, ವನ್ಯ ಜೀವಿಗಳ ಸ್ವಾಭಾವಿಕ ನಡವಳಿಕೆಯ ಮೇಲೆ ಹಾಗೂ ಅವು ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವ ರೀತಿಯ ಮೇಲೂ ನಿಂತಿರುವುದರಿಂದ ಚಿತ್ರದ ನಿರೂಪಣೆಯಲ್ಲಿ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತದೆ. ಎಡಿಟ್ ಪ್ರೊಡ್ಯೂಸರ್ ನಿಕ್ ಗೇಟ್ಸ್ ಹಾಗೂ ಸಂಕಲನಕಾರ ಅಡಮ್ ಕರ್ಬಿಯ ಕೌಶಲ್ಯ ಮೆಚ್ಚುವಂತಹದ್ದು. ರಿಕಿ ಕೇಜ್ ಅವರ ಸಂಗೀತ ಒಂದೆರಡು ಸನ್ನಿವೇಶದಲ್ಲಿ ಲಯ ತಪ್ಪಿದಂತೆ ಕಂಡು ಬಂದರೂ ಒಟ್ಟಾರೆಯಾಗಿ ನಿರೂಪಣೆಗೆ ಪೂರಕವಾಗಿದ್ದು ಮನತಟ್ಟುತ್ತದೆ.

ದಕ್ಷಿಣದ ದಟ್ಟ ಅರಣ್ಯಗಳನ್ನು, ಪಶ್ಚಿಮ ಘಟ್ಟಗಳನ್ನು, ದಖನ್ ಪ್ರಸ್ಥಭೂಮಿಯನ್ನು (ಇದರಲ್ಲಿ ಬಳ್ಳಾರಿಯ ದರೋಜಿ ವನ್ಯಧಾಮ ಪ್ರಮುಖವಾಗಿದೆ), ಕರಾವಳಿಯನ್ನು, ಸಣ್ಣ ಝರಿಗಳನ್ನು, ಜಲಪಾತಗಳನ್ನು ಮನೋಹರವಾಗಿ ಬಿಂಬಿಸುವ ಈ ಸಾಕ್ಷ್ಯಚಿತ್ರವು ನವಿಲುಗಳು, ಕಪ್ಪೆಗಳು ಮತ್ತು ಡ್ರಾಕೋ ಹಲ್ಲಿಗಳ (ಹಾರುವ ಹಲ್ಲಿಗಳು) ಮಿಲನವನ್ನು (ಅಥವಾ ಮಿಲನದ ಸಂದರ್ಭವನ್ನು) ಅಷ್ಟೇ ಸೊಗಸಾಗಿ ತೋರಿಸುತ್ತದೆ.

ಚಿತ್ರದಲ್ಲಿ ಕೆಲವೊಂದು ಕಚಗುಳಿಯಿಡುವ ಸನ್ನಿವೇಶಗಳಿವೆ. ಮರಿ ಕಾಡುಬೆಕ್ಕೊಂದು ನಾಗರಹಾವಿನೊಡನೆ ಮುಖಾಮುಖಿಯಾಗಿ ನಂತರ ಹಿಂದೆ ಸರಿಯುವ ದೃಶ್ಯ (ಇದೊಂದು ಸನ್ನಿವೇಶ ಸಿಗಲು ಅದೃಷ್ಟ ಬೇಕು), ಮೊಟ್ಟೆಯೊಡೆದು ಹೊರಬರುವ ಮರಿ ಕಾಳಿಂಗಸರ್ಪಗಳು, ಡ್ರಾಕೋ ಹಲ್ಲಿಯು ಮಿಲನಕ್ಕಾಗಿ ಮರದಿಂದ ಮರಕ್ಕೆ ಹಾರುವುದು, ತನಗೆ ಹಾಗೂ ತನ್ನ ಮಕ್ಕಳಿಗಾಗಿ ಆಹಾರ ಹುಡುಕುತ್ತಿರುವ ಕಪ್ಪು ಕರಡಿ, ಹೆಣ್ಣು ನವಿಲನ್ನು ಆಕರ್ಷಿಸಲು ಮನೋಹರವಾಗಿ ರೆಕ್ಕೆ ಹರಡುವ ಗಂಡು ನವಿಲು, ಇತ್ಯಾದಿ ದೃಶ್ಯಗಳು ಚಿತ್ರಕ್ಕೆ ಜೀವ ತುಂಬಿವೆ.

ಬಲಶಾಲಿಗಳ ಉಳಿಯುವಿಕೆ ಕಾಡಿನ ನಿಯಮ. ಇಲ್ಲಿ ಪ್ರತಿ ಕ್ಷಣವೂ ಉಳಿವಿಗಾಗಿ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಸದೃಢವಾಗಿರುವ ಹಾಗೂ ಬೇಟೆಯಲ್ಲಿ ಚುರುಕಿರುವ ಪ್ರಾಣಿಗಳಿಗೆ ದುರ್ಬಲ ಪ್ರಾಣಿಗಳು ಆಹಾರವಾಗುತ್ತವೆ. ಕೆಲವೊಮ್ಮೆ ದುರ್ಬಲರು ಬಲಾಢ್ಯರನ್ನು ಧೈರ್ಯವನ್ನೇ ಸಾಧನವಾಗಿಟ್ಟುಕ್ಕೊಂಡು ಹಿಮ್ಮೆಟ್ಟಿಸುವುದುಂಟು. ನೀರುನಾಯಿಗಳು ಹುಲಿಯನ್ನು ಹಿಮ್ಮೆಟ್ಟಿಸುವುದು, ಸಾಂಬಾರ ಜಿಂಕೆ ತನ್ನ ಮರಿಯನ್ನು ಉಳಿಸಿಕೊಳ್ಳಲು ಕಾಡುನಾಯಿಗಳೊಡನೆ ಹೋರಾಟ ಮಾಡುವ ದೃಶ್ಯ ಹಾಗೂ ಲಂಗೂರನ್ನು ಅಟ್ಟಿಸಿಕೊಂಡು ಎಗರಿ ಮರ ಹತ್ತಿ ಮತ್ತೆ ನಿರಾಸೆಯಿಂದ ಕೆಳಗೆ ಬೀಳುವ ಚಿರತೆಯ ದೃಶ್ಯ ನಮ್ಮ ಹೃದಯದ ಬಡಿತವನ್ನು ಹೆಚ್ಚಿಸುತ್ತವೆ.

ರಾಜ್ಯದ ವನ್ಯ ಸಂಪತ್ತೆಂದರೆ, ನಮಗೆ ತಟ್ಟನೆ ನೆನಪಿಗೆ ಬರುವುದು ಹುಲಿಗಳು ಹಾಗೂ ಏಷ್ಯಾಟಿಕ್ ಆನೆಗಳು. ದೇಶದ ಶೇಕಡ 25 ರಷ್ಟು ಆನೆಗಳು ಹಾಗೂ 20 ರಷ್ಟು ಹುಲಿಗಳು ರಾಜ್ಯದಲ್ಲಿವೆ. ಇದು ಇಡೀ ವಿಶ್ವದಲ್ಲಿಯೇ ಒಂದೇ ಪ್ರದೇಶದಲ್ಲಿನ ಅತೀ ಹೆಚ್ಚಿನ ಸಂಖ್ಯೆ ಕೂಡ ಆಗಿದೆ. ಅದುದರಿಂದ ಇಂತಹದೊಂದು ಸಾಕ್ಷ್ಯಚಿತ್ರದಿಂದ ಆನೆ-ಹುಲಿಗಳ ಹೆಚ್ಚಿನ ದೃಶ್ಯಗಳ ನಿರೀಕ್ಷೆ ಸಹಜವೇ. ಈ ನಿರೀಕ್ಷೆಯನ್ನು ಹುಸಿ ಮಾಡಿ ಪ್ರೇಕ್ಷಕರಿಗೆ ಅಚ್ಚರಿ ನೀಡುವುದರಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.  ಬಹುಶಃ, ಈ ಸಾಕ್ಷ್ಯಚಿತ್ರ ನೋಡುವುದಕ್ಕೂ ಮುನ್ನ ಬಹುತೇಕ ಪ್ರೇಕ್ಷಕರಿಗೆ ರಾಜ್ಯದ ಕಾಡುಗಳಲ್ಲಿ ನೀರು ನಾಯಿಗಳಾಗಲಿ ಅಥವಾ ಕಾಡು ನಾಯಿಗಳಾಗಲಿ ಇರುವುದೆಂಬ ಕಲ್ಪನೆಯೂ ಇಲ್ಲದಿರಬಹುದು. ಅಥವಾ ನಾವು ತಿಂದರೆ ಸಾಯಬಹುದಾಂತಹ ಹಣ್ಣನ್ನು (ಕನ್ನಡದಲ್ಲಿ ಕರವೀರ ಎನ್ನುತ್ತಾರೆ) ಮಲಬಾರ್ ಗ್ರೇ ಹಾರ್ನ್ಬಿಲ್ ತಿಂದು ದಕ್ಕಿಸಿಕೊಳ್ಳಬಹುದೆಂಬ ಮಾಹಿತಿಯೂ ಇಲ್ಲದಿರಬಹುದು. ಭಟ್ಕಳ ತಾಲ್ಲೂಕಿನ ಮುರುಡೇಶ್ವರದಿಂದ 19 ಕಿ.ಮೀ. ದೂರದಲ್ಲಿರುವ ನೇತ್ರಾಣಿ ದ್ವೀಪದಲ್ಲಿರುವ ಕೋರಲ್ ರೀಫ್‌ಗಳ  (ಹವಳದ ಬಂಡೆಗಳ) ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇಂತಹದೊಂದು ಕುತೂಹಲಕರ ಲೋಕದ ಪರಿಚಯವನ್ನು ಈ ಸಾಕ್ಷ್ಯಚಿತ್ರ ಪ್ರೇಕ್ಷಕರಿಗೆ ಮಾಡುತ್ತದೆ.

ಕಾಡುಗಳಲ್ಲಿ ವರ್ಷಗಟ್ಟಲೆ ಸಮಯ ಕಳೆದು ಇಂತಹದೊಂದು ಚಿತ್ರ ಮಾಡುವುದು ಸುಲಭದ ಕೆಲಸವಲ್ಲ. ನಿರ್ಮಾಪಕರೇ ನೀಡಿರುವ ಮಾಹಿತಿಯ ಪ್ರಕಾರ 52 ನಿಮಿಷಗಳ ಅವಧಿಯ ಈ ಸಾಕ್ಷ್ಯಚಿತ್ರದ ನಿರ್ಮಾಣಕ್ಕೆ 1500 ದಿನಗಳನ್ನು ವ್ಯಯಿಸಲಾಗಿದೆ, 15,000 ಗಂಟೆಗಳನ್ನು ಕಾಡಿನಲ್ಲಿ ಕಳೆಯಲಾಗಿದೆ, 2,400 ನಿಮಿಷಗಳಷ್ಟು ಅವಧಿಯ ಚಿತ್ರೀಕರಣ ಮಾಡಲಾಗಿದೆ ಹಾಗೂ 20 ಕ್ಯಾಮೆರಾಗಳನ್ನು ಬಳಸಲಾಗಿದೆ. ಅಮೋಘವರ್ಷ ಹಾಗೂ ಕಲ್ಯಾಣವರ್ಮ ಅವರ ಜೊತೆ ಹತ್ತಾರು ಇತರೆ ಅನುಭವಿ ಛಾಯಾಗ್ರಾಹಕರು ಈ ಸಾಕ್ಷ್ಯಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಬದ್ಧತೆ, ಶ್ರದ್ಧೆ, ತಾಳ್ಮೆ ಹಾಗೂ ಪರಿಶ್ರಮಗಳ ಅಮೂಲ್ಯ ಉತ್ಪನ್ನವಾಗಿ ಈ ಚಿತ್ರ ಮೂಡಿಬಂದಿದೆ. ಈ ಸಾಕ್ಷ್ಯಚಿತ್ರದ ತಯಾರಿಕೆಯಲ್ಲಿ ಹಲವು ಮೊದಲುಗಳಿವೆ. ಇದು ಅಲ್ಟಾ ಹೆಚ್‌ಡಿ ಗುಣಮಟ್ಟದಲ್ಲಿ ತಯಾರಿಸಿರುವ ಕರ್ನಾಟಕದ ಮೊದಲ ವನ್ಯಜೀವಿ ಸಾಕ್ಷ್ಯಚಿತ್ರ. ಮೊದಲ ಬಾರಿಗೆ ಹಲವಾರು ಮಹಿಳಾ ಛಾಯಾಗ್ರಾಹಕರನ್ನು ಬಳಸಿಕೊಂಡಿರುವುದು ಈ ಚಿತ್ರದ ಮತ್ತೊಂದು ಗೆಲವು.

Leave a Reply

Your email address will not be published.