ವ್ಯಕ್ತಿ ಕೇಂದ್ರಿತ ಚುನಾವಣೆ ಭಾರತಕ್ಕೆ ಹೊಸದೇ?

ಇದು ಮತ್ತೊಮ್ಮೆ ‘ಮೋದಿ ವರ್ಸಸ್ ಅದರ್ಸ್’ ಚುನಾವಣೆ. ಹೀಗೆ ವ್ಯಕ್ತಿ ಕೇಂದ್ರಿತ ಚುನಾವಣೆ ನಡೆದಾಗ, ಫಲಿತಾಂಶ ಯಾವ ಬದಿಗೆ ವಾಲಿದೆ ಎಂಬುದನ್ನು ಇತಿಹಾಸ ಸ್ಪಷ್ಟವಾಗಿ ಹೇಳುತ್ತಿದೆ.

ತ್ತೊಂದು ಚುನಾವಣೆ ಎದುರಿಗಿದೆ. ಗಡಿಯಲ್ಲಿನ ಗುಂಡಿನ ಚಕಮಕಿ, ವೈಮಾನಿಕ ದಾಳಿ-ಪ್ರತಿದಾಳಿ, ಸರ್ಜಿಕಲ್ ಸ್ಟ್ರೈಕ್ ಸುದ್ದಿಗಳು ಕೊಂಚ ತಣ್ಣಗಾಗಿ ಇದೀಗ ದೇಶದೊಳಗಿನ ರಾಜಕೀಯ ಕದನಕ್ಕೆ ವೇದಿಕೆ ಅಣಿಯಾಗುತ್ತಿದೆ. ಸತ್ಯದ ಮುಖವಾಡವಿರುವ ಸುಳ್ಳಿನ ಕೂರಂಬುಗಳು ಇನ್ನು ತಿಂಗಳೊಪ್ಪತ್ತಿನ ಕಾಲ ಅತ್ತಿಂದಿತ್ತ ಚಲಾಯಿಸಲ್ಪಡುತ್ತವೆ. ವೈಯಕ್ತಿಕ ಟೀಕೆ, ಎಲ್ಲೆ ಮೀರಿದ ನಿಂದನೆಗೆ ಪೈಪೋಟಿ ಏರ್ಪಡಲಿದೆ. ಹಣ, ಮದ್ಯ, ಆಮಿಷಗಳು ಇಲ್ಲದಿದ್ದರೆ ಅದು ಭಾರತದ ಮಟ್ಟಿಗೆ ಚುನಾವಣೆ ಹೇಗಾದೀತು ಹೇಳಿ? ಪ್ರಜಾಪ್ರಭುತ್ವದ ಘನತೆ ಹಳ್ಳ ಹಿಡಿಯುವುದನ್ನು ನೋಡಿ ಮರುಗುತ್ತಾ, ಯಾರು ಹಿತವರು ನಮಗೆ ಈ ಮೂವರೊಳಗೆ (ಯುಪಿಎ, ಎನ್.ಡಿ.ಎ, ತೃತೀಯ ರಂಗ) ಎಂದು ಲೆಕ್ಕ ಹಾಕಿ, ನೋಟ (NOTA)ದ ಕಡೆಗೊಮ್ಮೆ ನೋಡಿ ಇದ್ದವರಲ್ಲಿ ಅರ್ಹರಿಗೆ ಮತ ನೀಡುವುದಷ್ಟೇ ನಮ್ಮ ಸದ್ಯದ ಕರ್ತವ್ಯವಾಗಲಿದೆ.

ಹಾಗಂತ, ಯಾರು ಅರ್ಹರು ಎಂದು ಅಳೆದು ತೂಗಲು, ಮಾಪನಗಳನ್ನು ಯಾರೂ ಮುಂದಿಡುತ್ತಿಲ್ಲ. ಚುನಾವಣೆಗೆ ಪೂರ್ವಭಾವಿಯಾಗಿ ಈ ಒಂದು ವರ್ಷದ ಅವಧಿಯಲ್ಲಿ ನಡೆದಿರುವ ತಾಲೀಮು ಕಂಡವರಿಗೆ, ಚುನಾವಣೆಯ ಮುಖ್ಯ ವಿಷಯ ಈಗಾಗಲೇ ಮನದಟ್ಟಾಗಿದೆ. ಇದು ದೇಶದ ಆದ್ಯತೆ, ಸಮಸ್ಯೆಗಳ ಕುರಿತು ಸರಿ ತಪ್ಪು ಏನು ಎಂದು ವಿವೇಚಿಸುವ ಚುನಾವಣೆಯಂತೆ ಕಾಣುತ್ತಿಲ್ಲ. ಆಡಳಿತ ಪಕ್ಷವಾಗಲೀ, ಪ್ರತಿ ಪಕ್ಷವಾಗಲೀ ಈ ಯಾವ ಸಂಗತಿಗಳನ್ನೂ ಪ್ರಸ್ತಾಪಿಸುತ್ತಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರೆಯಬೇಕೆ? ಬೇಡವೇ? ಎಂಬ ಪ್ರಶ್ನೆಯಷ್ಟೇ ಚುನಾವಣೆಯ ಕೇಂದ್ರ ಸ್ಥಾನದಲ್ಲಿದೆ. ಚುನಾವಣೆಯ ಮೂಲಕ ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಷ್ಟೇ ಎಲ್ಲರೂ ಹಾತೊರೆಯುತ್ತಿರುವಂತೆ ಕಾಣುತ್ತಿದೆ. ಹಾಗಾಗಿ `ಮೋದಿ ಪರ ವರ್ಸಸ್ ಮೋದಿ ವಿರುದ್ಧ’ ಎಂಬ ರಾಜಕೀಯ ಧ್ರುವೀಕರಣ ದೇಶಾದ್ಯಂತ ಆರಂಭವಾಗಿದೆ.

ಸ್ವಾತಂತ್ರ್ಯಾನಂತರ ನೆಹರೂ ಜಾಗತಿಕ ಮಟ್ಟದಲ್ಲಿ ವರ್ಚಸ್ವಿ ನಾಯಕನಾಗಿ ಬಿಂಬಿತವಾದರು. ಭಾರತದ ಒಂದು ಪೀಳಿಗೆಯನ್ನು ಮುನ್ನಡೆಸಿದರು. ಜೊತೆಗೆ ಅನೇಕ ಅಪವಾದ, ಮೂದಲಿಕೆಗಳನ್ನು ಎದುರಿಸಿದರು. ಆದರೆ ಚುನಾವಣೆಯ ವಿಷಯ ಬಂದಾಗ, ನೆಹರೂ ಹೊರತಾದ ಪರ್ಯಾಯ ಆಯ್ಕೆಗಳಿರಲಿಲ್ಲ.

ಹೀಗೆ ವ್ಯಕ್ತಿ ಕೇಂದ್ರಿತವಾಗಿ ನಡೆಯುವ ಚುನಾವಣೆಯಿಂದ ಲಾಭ ಯಾರಿಗೆ? ಇತಿಹಾಸದ ಪುಟಗಳನ್ನು ಕೊಂಚ ಸರಿಸಿದರೆ ಆ ಬಗ್ಗೆ ಮಾಹಿತಿ ಸಿಗುತ್ತದೆ. ಭಾರತದ ಮಟ್ಟಿಗೆ ಅತಿಹೆಚ್ಚು ಜನಪ್ರಿಯತೆಯನ್ನು ಹೊಂದಿದವರು ಮತ್ತು ಒಂದು ಕಾಲಘಟ್ಟವನ್ನು ರಾಜಕೀಯವಾಗಿ ಪ್ರಭಾವಿಸಿದವರು ಎಂದರೆ ಮಹಾತ್ಮಾ ಗಾಂಧಿ ಮತ್ತು ಜವಾಹರಲಾಲ್ ನೆಹರೂ. ಅದರಲ್ಲೂ ಸ್ವಾತಂತ್ರ್ಯಾನಂತರ ನೆಹರೂ ಜಾಗತಿಕ ಮಟ್ಟದಲ್ಲಿ ವರ್ಚಸ್ವಿ ನಾಯಕನಾಗಿ ಬಿಂಬಿತವಾದರು. ಭಾರತದ ಒಂದು ಪೀಳಿಗೆಯನ್ನು ಮುನ್ನಡೆಸಿದರು. ಜೊತೆಗೆ ಅನೇಕ ಅಪವಾದ, ಮೂದಲಿಕೆಗಳನ್ನು ಎದುರಿಸಿದರು. ಆದರೆ ಚುನಾವಣೆಯ ವಿಷಯ ಬಂದಾಗ, ನೆಹರೂ ಹೊರತಾದ ಪರ್ಯಾಯ ಆಯ್ಕೆಗಳಿರಲಿಲ್ಲ. ಸ್ವಾತಂತ್ರ್ಯೋತ್ತರ ಭಾರತದ ಮೊದಲ ದಶಕದಲ್ಲಿ ನೆಹರೂ ಚುನಾವಣೆಗಳ ಕೇಂದ್ರ ಬಿಂದುವಾಗಿ ಇದ್ದರು. ಅವರನ್ನು ಎದುರಿಸಬಲ್ಲ, ಸರಿಸಮನಾಗಿ ನಿಲ್ಲಬಲ್ಲ ವರ್ಚಸ್ವಿ ನಾಯಕನ ಕೊರತೆ ಪ್ರತಿಪಕ್ಷಗಳಲ್ಲಿತ್ತು. ಶ್ಯಾಮಪ್ರಸಾದ್ ಮುಖರ್ಜಿಯಂತಹ ನಾಯಕರು ಸದನದಲ್ಲಿ ನೆಹರೂ ಅವರನ್ನು ತಮ್ಮ ವಾಕ್ಚಾತುರ್ಯದ ಮೂಲಕ ಎದುರಿಸುತ್ತಿದ್ದರಾದರೂ, ಜನಾಕರ್ಷಣೆಯಲ್ಲಿ ನೆಹರೂಗೆ ಸಾಟಿ ಇರಲಿಲ್ಲ. ಜವಾಹರಲಾಲ್ 16 ವರ್ಷಗಳ ಕಾಲ ಪ್ರಧಾನಿಯಾಗಿ ದೇಶ ಆಳಿದರು.

ಇಂದಿರಾರ ತರುವಾಯ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಪಕ್ವಗೊಳ್ಳುವ ಸೂಚನೆಯನ್ನು ಪ್ರಕಟಿಸಿತು. ಪ್ರಬಲ ನಾಯಕ/ನಾಯಕಿಯ ಹತೋಟಿಯಿಂದ ರಾಜಕೀಯ ಪಕ್ಷಗಳು ಹೊರಬಂದವು, ಪಕ್ಷದೊಳಗೂ ಆಂತರಿಕ ಪ್ರಜಾಪ್ರಭುತ್ವ ಇರಬೇಕು ಎಂಬ ಹೊಸ ಚರ್ಚೆ ಮುನ್ನೆಲೆಗೆ ಬಂತು. ಜನರಿಗೆ ಆಯ್ಕೆಗಳು ದೊರೆತವು.

ಆ ಕಾರಣದಿಂದಲೇ ನೆಹರೂ ಅನಾರೋಗ್ಯ ಪೀಡಿತರಾದಾಗ, ‘ನೆಹರೂ ನಂತರ ಯಾರು?’ ಎಂಬ ಪ್ರಶ್ನೆ ಹಿರಿದಾಗಿ ಕಂಡಿತು. ಕೊನೆಗೆ ನೆಹರೂ ವರ್ಚಸ್ಸನ್ನು ಮುಂದುವರಿಸುವಲ್ಲಿ ಇಂದಿರಾ ಗಾಂಧಿ ಯಶಸ್ಸು ಕಂಡರು. ಇಂದಿರಾ ಕಾಲಘಟ್ಟದಲ್ಲಿ ಚುನಾವಣೆಗಳು ವ್ಯಕ್ತಿ ಕೇಂದ್ರಿತವಾಗಿಯೇ ನಡೆದವು. ಇಂದಿರಮ್ಮನ ಪಕ್ಷದಿಂದ ಯಾರು ನಿಂತರೂ ಗೆಲ್ಲುತ್ತಾರೆ ಎಂಬ ವಾತಾವರಣವನ್ನು ಕಾಂಗ್ರೆಸ್ ಒಂದು ಪಕ್ಷವಾಗಿ ಬೆಳೆಸಿತು. ಅದರಿಂದ ಪಕ್ಷಕ್ಕೆ ಲಾಭವಿತ್ತು. ತಮ್ಮ ಸಂಪುಟದಲ್ಲಿದ್ದ ಇತರರ ಮಾತು ಗಟ್ಟಿಗೊಳ್ಳದಂತೆ ಇಂದಿರಾ ಗಾಂಧಿ ನೋಡಿಕೊಂಡರು. ತುರ್ತುಪರಿಸ್ಥಿತಿಯ ತರುವಾಯ ‘ಇಂದಿರಾ ವರ್ಸಸ್ ಅದರ್ಸ್’ ಎಂಬ ಧ್ರುವೀಕರಣ ಆರಂಭವಾಗಿ ಜನತಾಪಕ್ಷ ಹುಟ್ಟಿಕೊಂಡಿತು, ಒಂದು ಅವಧಿಗೆ ಏದುಸಿರುಬಿಟ್ಟು ಅಧಿಕಾರ ಹಿಡಿಯಿತು. ಆದರೆ ಮೊರಾರ್ಜಿ ನೇತೃತ್ವದ ಸರ್ಕಾರ ನಿರೀಕ್ಷೆ ಮುಟ್ಟುವಲ್ಲಿ ಸೋತಿತು. ಪುನಃ ಇಂದಿರಾ ಸರ್ಕಾರವೇ ಬಹುಮತದಿಂದ ಅಧಿಕಾರ ಸ್ಥಾನಕ್ಕೆ ಮರಳಿಬಂತು. ಇಂದಿರಾರ ತರುವಾಯ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಪಕ್ವಗೊಳ್ಳುವ ಸೂಚನೆಯನ್ನು ಪ್ರಕಟಿಸಿತು. ಪ್ರಬಲ ನಾಯಕ/ನಾಯಕಿಯ ಹತೋಟಿಯಿಂದ ರಾಜಕೀಯ ಪಕ್ಷಗಳು ಹೊರಬಂದವು, ಪಕ್ಷದೊಳಗೂ ಆಂತರಿಕ ಪ್ರಜಾಪ್ರಭುತ್ವ ಇರಬೇಕು ಎಂಬ ಹೊಸ ಚರ್ಚೆ ಮುನ್ನಲೆಗೆ ಬಂತು. ಜನರಿಗೆ ಆಯ್ಕೆಗಳು ದೊರೆತವು. ಹೊಸ ಪಕ್ಷ/ನಾಯಕರ ಉದಯವಾಯಿತು. ದೇಶ ಪಾರಂಪಾರಿಕ ನೀತಿ ನಿಲುವುಗಳಿಂದ ಆಚೀಚೆ ಸರಿಯುವ ಧೈರ್ಯ ಮಾಡಿತು.

ಸಾಮಾನ್ಯವಾಗಿ ವಿಷಯಾಧಾರಿತವಾಗಿ ನಡೆಯುವ ಚುನಾವಣೆಯಲ್ಲಿ ಭಿನ್ನಾಭಿಪ್ರಾಯಕ್ಕೆ ಜಾಗವಿರುತ್ತದೆ, ಸಮೂಹ ಸನ್ನಿಗೆ ಅವಕಾಶವಿರುವುದಿಲ್ಲ. ಮತಗಳು ಒಂದು ಪಕ್ಷದ ಬೊಕ್ಕಸದಲ್ಲಿ ಸಾಂದ್ರಗೊಳ್ಳುವುದಿಲ್ಲ. ಯಾವುದೇ ಪಕ್ಷಕ್ಕೆ ಬಹುಮತ ಬರುವ ಸಾಧ್ಯತೆ ಕಡಿಮೆ.

1989ರಿಂದ ಸುಮಾರು ಎರಡು ದಶಕಗಳ ಕಾಲ ಭಾರತದಲ್ಲಿ ಬಹುಮಟ್ಟಿಗೆ ವಿಷಯಾಧಾರಿತ ಚುನಾವಣೆಗಳು ನಡೆದವು. ಮಂಡಲ್ ವರದಿ ಕುರಿತ ಚರ್ಚೆಯಿಂದ ಆರಂಭಗೊಂಡು, ಅಯೋಧ್ಯೆಯ ರಥಯಾತ್ರೆ, ಪಿವಿಎನ್ ಕಾಲದ ಆರ್ಥಿಕ ಸ್ಥಿತಿಗತಿ, ವಾಜಪೇಯಿ ಮುಂದಿಟ್ಟ ಅಭಿವೃದ್ಧಿ ಕೇಂದ್ರಿತ ಚಿಂತನೆಗಳು ಚುನಾವಣೆಯ ಚರ್ಚಾ ವಿಷಯವಾದವು. ಲೋಕಸಭೆಯ ಚುನಾವಣೆಯಲ್ಲೂ, ರಾಜ್ಯವಾರು ಆದ್ಯತೆಗಳು ಚರ್ಚೆಗೊಂಡು ಜನಾದೇಶಕ್ಕೆ ಹಲವು ಆಯಾಮಗಳು ಸೇರ್ಪಡೆಯಾದವು. ಜನ ವಿಷಯಾಧಾರಿತವಾಗಿ ಮತಚಲಾಯಿಸಿದರು. ಪ್ರಾದೇಶಿಕ ಪಕ್ಷಗಳು ಬಲಗೊಂಡವು. ಕೇಂದ್ರ ಸರ್ಕಾರದಲ್ಲಿ ಭಾಗಿಯಾದವು. ಸಾಮಾನ್ಯವಾಗಿ ವಿಷಯಾಧಾರಿತವಾಗಿ ನಡೆಯುವ ಚುನಾವಣೆಯಲ್ಲಿ ಭಿನ್ನಾಭಿಪ್ರಾಯಕ್ಕೆ ಜಾಗವಿರುತ್ತದೆ, ಸಮೂಹ ಸನ್ನಿಗೆ ಅವಕಾಶವಿರುವುದಿಲ್ಲ. ಮತಗಳು ಒಂದು ಪಕ್ಷದ ಬೊಕ್ಕಸದಲ್ಲಿ ಸಾಂದ್ರಗೊಳ್ಳುವುದಿಲ್ಲ. ಯಾವುದೇ ಪಕ್ಷಕ್ಕೆ ಬಹುಮತ ಬರುವ ಸಾಧ್ಯತೆ ಕಡಿಮೆ. ಹಾಗಾಗಿ ವಿಷಯಾಧಾರಿತವಾಗಿ ಚರ್ಚೆ ನಡೆದು ಚುನಾವಣೆ ನಡೆದಾಗಲೆಲ್ಲಾ, ಸಮ್ಮಿಶ್ರ ಸರ್ಕಾರಗಳು ಅನಿವಾರ್ಯವಾದವು.

ಗಟ್ಟಿದನಿಯ, ದೃಢ ನಿಲುವು ತಳೆಯಬಲ್ಲ ನಾಯಕ ಮಾತ್ರ ಉತ್ತಮ, ಸ್ಥಿರ ಸರ್ಕಾರವನ್ನು ಮುನ್ನಡೆಸಬಲ್ಲ ಎಂಬುದು ಜನರ ಮನಸ್ಸಿಗಿಳಿಯಿತು. ನಾಯಕತ್ವದ ಕಲ್ಪನೆ, ಚರ್ಯೆ, ವ್ಯಾಖ್ಯಾನಗಳು ಬದಲಾದವು. ಚುನಾವಣೆ ಮತ್ತೊಮ್ಮೆ ವ್ಯಕ್ತಿ ಕೇಂದ್ರಿತವಾಯಿತು.

ವಿಪರ್ಯಾಸವೆಂದರೆ, ಸಮ್ಮಿಶ್ರ ಸರ್ಕಾರದ ಭಾಗವಾದ ರಾಜಕೀಯ ಪಕ್ಷಗಳು ಪ್ರೌಢಿಮೆಯನ್ನು ತೋರಲಿಲ್ಲ. ಸ್ಥಿರ ಸರ್ಕಾರ ಸಾಧ್ಯವಾಗಬೇಕಾದರೆ ಏಕ ಪಕ್ಷಕ್ಕೆ ಬಹುಮತ ಅನಿವಾರ್ಯ ಎನ್ನುವ ಸಂದೇಶ ರವಾನೆಯಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆ ಪಕ್ವಗೊಳ್ಳುವತ್ತ ಇಟ್ಟ ಹೆಜ್ಜೆಗೆ ಈ ಭಾವನೆ ತೊಡಕಾಯಿತು. ಗಟ್ಟಿದನಿಯ, ದೃಢ ನಿಲುವು ತಳೆಯಬಲ್ಲ ನಾಯಕ ಮಾತ್ರ ಉತ್ತಮ, ಸ್ಥಿರ ಸರ್ಕಾರವನ್ನು ಮುನ್ನಡೆಸಬಲ್ಲ ಎಂಬುದು ಜನರ ಮನಸ್ಸಿಗಿಳಿಯಿತು. ನಾಯಕತ್ವದ ಕಲ್ಪನೆ, ಚರ್ಯೆ, ವ್ಯಾಖ್ಯಾನಗಳು ಬದಲಾದವು. ಚುನಾವಣೆ ಮತ್ತೊಮ್ಮೆ ವ್ಯಕ್ತಿ ಕೇಂದ್ರಿತವಾಯಿತು.

ಪ್ರಥಮವಾಗಿ ಹೀಗೆ ಚುನಾವಣೆಯನ್ನು ವ್ಯಕ್ತಿ ಕೇಂದ್ರಿತವಾಗಿ ನಡೆಸಲು ಆರಂಭಿಸಿದ್ದು ಕಾಂಗ್ರೆಸ್ ಆದರೂ 2009ರ ಚುನಾವಣೆಯ ವೇಳೆಗೆ ಚುನಾವಣೆ ಅಮೆರಿಕದ ಅಧ್ಯಕ್ಷೀಯ ಮಾದರಿಗೆ ಹೊರಳಿದರೆ, ವ್ಯಕ್ತಿ ಕೇಂದ್ರಿತವಾಗಿ ನಡೆದರೆ ಮಾತ್ರ ತನಗೆ ಲಾಭ ಎಂಬ ಲೆಕ್ಕಾಚಾರಕ್ಕೆ ಭಾರತೀಯ ಜನತಾ ಪಕ್ಷ ಬಂತು. 2009ರ ಚುನಾವಣೆಯನ್ನು ಆ ದಿಕ್ಕಿನತ್ತ ಕೊಂಡೊಯ್ಯಲು ಭಾಜಪ ಸಾಕಷ್ಟು ಪ್ರಯತ್ನಿಸಿತು, ತಂತ್ರಗಳನ್ನು ಹೆಣೆಯಿತು. ಈ ತಂತ್ರದ ಭಾಗವಾಗಿ ಎಲ್.ಕೆ ಅಡ್ವಾಣಿ, ತಮ್ಮ ಎದುರಾಳಿ ಮನಮೋಹನ್ ಸಿಂಗ್ ಅವರನ್ನು ‘ದುರ್ಬಲ ಪ್ರಧಾನಿ’ ಎಂದು ದೂಷಿಸುತ್ತಾ ಬಂದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮಾದರಿಯಲ್ಲಿ ಅಭ್ಯರ್ಥಿಗಳ ನಡುವೆ ಚರ್ಚೆ ನಡೆಯಲಿ ಎಂದು ಆಹ್ವಾನವಿತ್ತರು. ಆದರೆ ಆಗ ಕಾಂಗ್ರೆಸ್ ಪ್ರತಿಕ್ರಿಯಿಸಲಿಲ್ಲ. ಅಡ್ವಾಣಿ ಅವರ ಏರಿದ ವಯಸ್ಸು, ವಿಸ್ತಾರಗೊಳ್ಳದ ರಾಜಕೀಯ ವರ್ಚಸ್ಸು, ಜಿನ್ನಾ ವಿಷಯದಲ್ಲಿ ಸೈದ್ಧಾಂತಿಕವಾಗಿ ಅವರು ರಾಜಿಯಾದಂತೆ ಕಂಡದ್ದು ಅವರಿಗೆ ಮುಳುವಾಯಿತು. ಭಾಜಪ ತಂತ್ರಗಳು ಯಶಸ್ಸು ತಂದುಕೊಡಲಿಲ್ಲ.

ಮನಮೋಹನ್ ಸಿಂಗ್ ಅವರ ಹತ್ತು ವರ್ಷಗಳ ಗಾಢಮೌನ ಮಾತಿನ ಮಹತ್ವ ಹೆಚ್ಚಿಸಿತ್ತು. ಹಾಗಾಗಿಯೇ ಚುನಾವಣೆಯುದ್ದಕ್ಕೂ ಮೌನದ ಮೇಲೆ ಮಾತು ಸವಾರಿ ಮಾಡಿತು.

ಆದರೆ ಭಾಜಪ ತನ್ನ ನಿಲುವು ಬದಲಿಸಲಿಲ್ಲ, ಗುಜರಾತ್ ಮಟ್ಟಿಗೆ ಹೊಸ ಆಡಳಿತ ಮಾದರಿಯನ್ನು ನೀಡಿದ್ದ, ಸೈದ್ಧಾಂತಿಕವಾಗಿ ಗಟ್ಟಿಗ ಎನಿಸಿದ್ದ, ನರೇಂದ್ರ ಮೋದಿ ಅವರನ್ನು 2014ರ ಚುನಾವಣೆಯಲ್ಲಿ ಮುಖ್ಯ ಭೂಮಿಕೆಗೆ ತಂದಿತು. ಕಾಂಗ್ರೆಸ್ ಮನಮೋಹನ ಸಿಂಗ್ ಅವರನ್ನು ಬದಿಗೆ ಸರಿಸಿ ರಾಹುಲ್ ಗಾಂಧಿಯನ್ನು ಮುನ್ನಲೆಗೆ ತರುವ ಪ್ರಯತ್ನದಲ್ಲಿತ್ತು. ಇದು ಭಾಜಪಕ್ಕೆ ವರವಾಗಿ ಪರಿಣಮಿಸಿತು. ಮೊದಲಿಗೆ ‘ಮೋದಿ ವರ್ಸಸ್ ರಾಹುಲ್’ ಎಂಬಂತೆ ಬಿಂಬಿತವಾದ ಚುನಾವಣೆ ಬರಬರುತ್ತಾ ‘ಮೋದಿ ವರ್ಸಸ್ ಅದರ್ಸ್’ ಎಂಬ ರೂಪ ತಾಳಿತು. ಅದಕ್ಕೆ ರಾಹುಲ್ ಗಾಂಧಿ, ಮೋದಿ ವಿರುದ್ಧ ಏಕಾಂಗಿಯಾಗಿ ಪೈಪೋಟಿಗೆ ನಿಲ್ಲಲು ಅಶಕ್ತರಂತೆ ಕಂಡದ್ದು ಕಾರಣ. ಮನಮೋಹನ್ ಸಿಂಗ್ ಅವರ ಹತ್ತು ವರ್ಷಗಳ ಗಾಢಮೌನ ಮಾತಿನ ಮಹತ್ವ ಹೆಚ್ಚಿಸಿತ್ತು. ಹಾಗಾಗಿಯೇ ಚುನಾವಣೆಯುದ್ದಕ್ಕೂ ಮೌನದ ಮೇಲೆ ಮಾತು ಸವಾರಿ ಮಾಡಿತು. ಮೋದಿ ಮಾತುಗಾರಿಕೆಯ ಓಘ ಸ್ವತಃ ಅವರದೇ ಪಕ್ಷದ ಅಡ್ವಾಣಿಯವರನ್ನು ಮಂಕು ಮಾಡಿತ್ತು. ಮನಮೋಹನ ಸಿಂಗ್ ಅವರ ಮೌನ, ರಾಹುಲ್ ಸಂವಹನ ಕೊರತೆಯಿಂದ ಸೊರಗಿದ್ದ ಕಾಂಗ್ರೆಸ್ಸಿಗೆ ಜೀವತುಂಬಲು ಪ್ರಿಯಾಂಕ ಗಾಂಧಿ ಭಾಷಣಕ್ಕೆ ನಿಲ್ಲಬೇಕಾಯಿತು. ಆದರೆ ಅದರಿಂದ ಕಾಂಗ್ರೆಸ್ಸಿಗೆ ಯಶಸ್ಸು ದೊರೆಯಲಿಲ್ಲ. ಯುಪಿಎ ಸರ್ಕಾರದ ಹತ್ತು ವರ್ಷಗಳ ಅವಧಿಯಲ್ಲಿ ಬೆಳಕಿಗೆ ಬಂದ ಹಗರಣಗಳು, ಆಡಳಿತ ವಿರೋಧಿ ಅಲೆ, ಅಣ್ಣಾ ಹಜಾರೆ ನೇತೃತ್ವದಲ್ಲಿ ಜನಲೋಕಪಾಲ್ ಕಾಯಿದೆಗಾಗಿ ಆರಂಭವಾದ ಸತ್ಯಾಗ್ರಹ ಮತ್ತು ಅದರಿಂದಾಗಿ ಟಿಸಿಲೊಡೆದ ಭ್ರಷ್ಟಾಚಾರ ವಿರುದ್ಧದ ಜನಾಕ್ರೋಶ ಎಲ್ಲವೂ ಒಟ್ಟಾಗಿ ಮೋದಿ ಪರ ಅಲೆಗೆ ಕಾರಣವಾದವು. ತಮ್ಮ ಚುರುಕಿನ ಪ್ರಚಾರ ವೈಖರಿ, ಮಾತಿನ ಮೋಡಿಯಿಂದ ಆ ಅಲೆಯನ್ನು ಮೋದಿ ದೇಶವ್ಯಾಪಿ ವಿಸ್ತರಿಸಿದರು. ಮೋದಿ ಶಕ್ತ ನಾಯಕನಂತೆ ಕಂಡರು, ಎದುರು ಪಕ್ಷದಲ್ಲಿ ನಾಯಕತ್ವದ ಕೊರತೆಯಿತ್ತು. ಭಾಜಪ ಬಹುಮತದತ್ತ ಹೆಜ್ಜೆಯಿಟ್ಟಿತು. ನೆಹರೂ, ಇಂದಿರಾ ಬಳಿಕ ವ್ಯಕ್ತಿ ಕೇಂದ್ರಿತ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂತು.

ಹತಾಶ ವಾತಾವರಣವೊಂದು ಸೃಷ್ಟಿಯಾದಾಗ, ಭರವಸೆಗಳನ್ನು ನೀಡಿ, ಜನರಲ್ಲಿ ನಿರೀಕ್ಷೆಯನ್ನು ತುಂಬಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಐದು ವರ್ಷದಲ್ಲಿ ಸಾಧಿಸಿದ್ದೇನು ಎಂದು ನೋಡಿದರೆ, ಮಾಡದೇ ಉಳಿದ ಸಂಗತಿಗಳೇ ಸಾಕಷ್ಟು ಕಾಣುತ್ತವೆ.

ಹೀಗೆ ಹತಾಶ ವಾತಾವರಣವೊಂದು ಸೃಷ್ಟಿಯಾದಾಗ, ಭರವಸೆಗಳನ್ನು ನೀಡಿ, ಜನರಲ್ಲಿ ನಿರೀಕ್ಷೆಯನ್ನು ತುಂಬಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಐದು ವರ್ಷದಲ್ಲಿ ಸಾಧಿಸಿದ್ದೇನು ಎಂದು ನೋಡಿದರೆ, ಮಾಡದೇ ಉಳಿದ ಸಂಗತಿಗಳೇ ಸಾಕಷ್ಟು ಕಾಣುತ್ತವೆ. ಮುಖ್ಯವಾಗಿ ಮೋದಿ ಸರ್ಕಾರ ತನ್ನ ಆಡಳಿತದ ಅವಧಿಯಲ್ಲಿ ತಂದ ಹೊಸತನವೇನು ಎಂದು ನೋಡಿದರೆ ಮೊದಲಿಗೆ ಕಾಣುವುದು ವಿದೇಶಾಂಗ ನೀತಿಯಲ್ಲಿನ ಬದಲಾವಣೆ. ಪ್ರಧಾನಿ ಮೋದಿ ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ಪ್ರಮುಖರನ್ನು ಆಹ್ವಾನಿಸಿದಾಗಲೇ ಭಾರತ, ತನ್ನ ವಿದೇಶಾಂಗ ನೀತಿಯನ್ನು ಮರುವ್ಯಾಖ್ಯಾನಿಸಲು ಸಜ್ಜಾಗಿದೆ, ದಕ್ಷಿಣ ಏಷ್ಯಾದ ನಾಯಕತ್ವವನ್ನು ಹೆಗಲೇರಿಸಿಕೊಳ್ಳಲು ಬಯಸುತ್ತಿದೆ ಎನ್ನುವ ಸಂದೇಶ ಹೊರಬಿತ್ತು. ಆ ನಿಟ್ಟಿನಲ್ಲಿಯೇ ಸಮ್ಮಾನ, ಸಂವಾದ, ಸಮೃದ್ಧಿ, ಸುರಕ್ಷೆ, ಮತ್ತು ಸಭ್ಯತೆ ಎಂಬ ವಿದೇಶಾಂಗ ನೀತಿಯ ಪಂಚ ಸೂತ್ರಗಳು ಸಿದ್ಧವಾದವು. ಈ ಐದು ವರ್ಷದ ಅವಧಿಯಲ್ಲಿ ಅವರು ಆದ್ಯತೆಯ ಮೇರೆಗೆ ಭೇಟಿಕೊಟ್ಟ ರಾಷ್ಟ್ರಗಳನ್ನು, ಅವರು ನೀಡಿದ ಹೇಳಿಕೆಗಳನ್ನು ಗಮನಿಸಿದರೆ ಭಾರತ ಯಾವ ದಿಕ್ಕಿನಲ್ಲಿ ಹೆಜ್ಜೆ ಇರಿಸುತ್ತಿದೆ ಎನ್ನುವುದು ಸ್ಫುಟವಾಗಿ ತೋರುತ್ತಿದೆ.

ಭಾರತ ಪಾರಂಪಾರಿಕವಾಗಿ ಕಮ್ಯುನಿಷ್ಟ್ ರಷ್ಯಾದೊಂದಿಗೆ ಗುರುತಿಸಿಕೊಂಡ ದೇಶ. ಅದಕ್ಕೆ ಕಾರಣವೂ ಇದೆ. 1944ರಲ್ಲಿ ಮಹಾರಾಷ್ಟ್ರದ ಅಹಮದ್ ನಗರದ ಕೋಟೆಯಿಂದ ಮಾತನಾಡಿದ್ದ ನೆಹರೂ ‘ಸಂಯುಕ್ತ ಸಂಸ್ಥಾನ ಮತ್ತು ಸೋವಿಯತ್ ಒಕ್ಕೂಟಗಳು ಭವಿಷ್ಯದಲ್ಲಿ ಜಾಗತಿಕವಾಗಿ ನಿರ್ಣಾಯಕ ಪಾತ್ರವಹಿಸುತ್ತವೆ. ರಾಜಕೀಯ ಪ್ರಜಾಪ್ರಭುತ್ವದ ಎಲ್ಲ ದುಷ್ಟತನಗಳೂ ಅಮೆರಿಕದಲ್ಲಿ ಗೋಚರಿಸಿದರೆ, ಪ್ರಜಾಪ್ರಭುತ್ವದ ಅನುಪಸ್ಥಿತಿಯೇ ಸೋವಿಯತ್ ಒಕ್ಕೂಟದ ಕೆಡುಕಾಗಿ ಕಾಣುತ್ತಿದೆ. ಈ ಎರಡರ ನಡುವಿನ ಆಯ್ಕೆ ಕ್ಲಿಷ್ಟಕರ’ ಎಂದಿದ್ದರು. ಆದರೆ ಸಮತಾವಾದದೆಡೆಗೆ ಆಕರ್ಷಿತರಾಗಿದ್ದ ನೆಹರೂರ ಹೃದಯದಲ್ಲಿ, ಸೋವಿಯತ್ ಬಗೆಗೆ ಹಿತವಾದ ಭಾವನೆಗಳಿದ್ದವು. ಭಾರತ ಸೋವಿಯತ್ ಪರ ಹೆಚ್ಚು ವಾಲಿತು. ವಾಶಿಂಗ್ಟನ್ ಕೂಡ ನೆಹರೂರನ್ನು ಸೋವಿಯತ್ ಕಾರ್ಯಭಾರಿ, ಮೆಲುದನಿಯ ರಾಜಕೀಯ ವಿಧ್ವಂಸಕ ಎಂಬಂತೆಯೇ ಗ್ರಹಿಸಿತು. ನೆಹರೂ ನೇತೃತ್ವದಲ್ಲಿ ಭಾರತ ಪ್ರತಿಪಾದಿಸಿದ ಅಲಿಪ್ತ ನೀತಿಯನ್ನು, ಅಮೆರಿಕ ತನ್ನ ವಿರುದ್ಧದ ಪಿತೂರಿ ಎಂದುಕೊಂಡದ್ದರ ಪರಿಣಾಮ, ಭಾರತದ ವಿರುದ್ಧ ಹಗೆ ಸಾಧಿಸುತ್ತಿದ್ದ, ಪಾಕಿಸ್ತಾನದ ಬಗಲಿಗೆ ನಿಂತಿತು.

‘ಯಾವ ವಿಷಯದಲ್ಲೂ ಸ್ಪಷ್ಟ ನಿಲುವು ತಾಳದ, ವೀಕ್ಷಕ ವಿವರಣೆ ನೀಡುವಂತೆ, ಇತರ ದೇಶಗಳ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸುವ, ನೆಹರೂ ಪ್ರಣೀತ ಭಾರತದ ವಿದೇಶಾಂಗ ನೀತಿ, ಋಣಾತ್ಮಕ ಎಂದು ಜಗತ್ತಿನಲ್ಲಿ ಹೆಸರು ಪಡೆದಿದೆ’

ಇತ್ತ ಚೀನಾದ ಬಲಿಷ್ಠ ಸೇನಾ ಶಕ್ತಿ ಮತ್ತು ಚೀನಾ ಬಗ್ಗೆ ನೆಹರೂ ಅವರಿಗಿದ್ದ ವಿಶೇಷ ಪ್ರೀತಿ, ಭಾರತ ಚೀನಾದತ್ತ ಸ್ನೇಹ ಹಸ್ತ ಚಾಚುವಂತೆ ಮಾಡಿತು. ನೆಹರೂ ಚೀನಾವನ್ನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿಸಲು ವಿಶೇಷ ಮುತುವರ್ಜಿ ವಹಿಸಿದರು. ನೆಹರೂರ ಈ ನಡೆ ಭಾರತದ ಹಿತಕ್ಕೆ ಪೂರಕವಾಗಿತ್ತಾದರೂ, ಅಮೆರಿಕದ ಅಧ್ಯಕ್ಷ ಐಸೆನ್ ಹಾವರ್ ಅವರನ್ನು ಕುಪಿತಗೊಳಿಸಿತು. ಅಮೆರಿಕದೊಂದಿಗಿನ ಭಾರತದ ಬಾಂಧವ್ಯ ಮತ್ತಷ್ಟು ಹಳಸಿತು. ಸ್ನೇಹಿತನೆಂದು ನಂಬಿದ್ದ ಚೀನಾ ಏಟುಕೊಟ್ಟಾಗ, ತಿರುಗೇಟು ನೀಡಲು ನಮಗೆ ಸಕಾಲದಲ್ಲಿ ಶಕ್ತಿತುಂಬುವವರೇ ಇಲ್ಲದ ಸ್ಥಿತಿ ಉಂಟಾಗಿತ್ತು. ‘ಯಾವ ವಿಷಯದಲ್ಲೂ ಸ್ಪಷ್ಟ ನಿಲುವು ತಾಳದ, ವೀಕ್ಷಕ ವಿವರಣೆ ನೀಡುವಂತೆ, ಇತರ ದೇಶಗಳ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸುವ, ನೆಹರೂ ಪ್ರಣೀತ ಭಾರತದ ವಿದೇಶಾಂಗ ನೀತಿ, ಋಣಾತ್ಮಕ ಎಂದು ಜಗತ್ತಿನಲ್ಲಿ ಹೆಸರು ಪಡೆದಿದೆ’ ಎಂದು ಶಶಿ ತರೂರ್ ಅವರೇ ಒಮ್ಮೆ ಹೇಳಿದ್ದರು. ಹೀಗಿದ್ದಾಗಿಯೂ ನೆಹರೂ ನಂತರ ಬಂದ ನಮ್ಮ ಪ್ರಧಾನಿಗಳಾರೂ, ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆ ತರುವ ಪ್ರಯತ್ನ ಮಾಡಲಿಲ್ಲ ಎನ್ನುವುದು ಸೋಜಿಗ.

ಮೋದಿ, ತಮ್ಮ ಮೊದಲ ಹೆಜ್ಜೆಯಾಗಿ, ನೆರೆರಾಷ್ಟ್ರಗಳ ವಿಶ್ವಾಸ ಗಳಿಸಲು ಮುಂದಾಗಿದ್ದು. ಹಿರಿಯಣ್ಣನ ಹೆಗಲ ಮೇಲೆ ಕೈಹಾಕಿ, ಸಲಿಗೆ ಬೆಳೆಸಿಕೊಂಡದ್ದು. ವಿಶ್ವಸಂಸ್ಥೆಯಲ್ಲಿ ಗಟ್ಟಿದನಿಯಲ್ಲೇ ‘ಭಯೋತ್ಪಾದನೆಯ ನೆರಳಿನಲ್ಲಿ ಮಾತುಕತೆ ಸಾಧ್ಯವಿಲ್ಲ’ ಎಂದು ಅವರು ನೀಡಿದ ಹೇಳಿಕೆ, ‘ವಿಸ್ತರಣಾ ದಾಹವನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಜಪಾನಿನಲ್ಲಿ ಅವರು ಆಡಿದ ಮಾತು, ಪಾಕಿಸ್ತಾನ ಮತ್ತು ಚೀನಾಗಳಿಗೆ, ಸೂಕ್ತ ಸಂದೇಶವನ್ನು ರವಾನಿಸಿದವು.

ಆ ಕಾರಣದಿಂದಲೇ ಮೋದಿ, ತಮ್ಮ ಮೊದಲ ಹೆಜ್ಜೆಯಾಗಿ, ನೆರೆರಾಷ್ಟ್ರಗಳ ವಿಶ್ವಾಸ ಗಳಿಸಲು ಮುಂದಾಗಿದ್ದು. ಹಿರಿಯಣ್ಣನ ಹೆಗಲ ಮೇಲೆ ಕೈಹಾಕಿ, ಸಲಿಗೆ ಬೆಳೆಸಿಕೊಂಡದ್ದು. ವಿಶ್ವಸಂಸ್ಥೆಯಲ್ಲಿ ಗಟ್ಟಿದನಿಯಲ್ಲೇ ‘ಭಯೋತ್ಪಾದನೆಯ ನೆರಳಿನಲ್ಲಿ ಮಾತುಕತೆ ಸಾಧ್ಯವಿಲ್ಲ’ ಎಂದು ಅವರು ನೀಡಿದ ಹೇಳಿಕೆ, ‘ವಿಸ್ತರಣಾ ದಾಹವನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಜಪಾನಿನಲ್ಲಿ ಅವರು ಆಡಿದ ಮಾತು, ಪಾಕಿಸ್ತಾನ ಮತ್ತು ಚೀನಾಗಳಿಗೆ, ಸೂಕ್ತ ಸಂದೇಶವನ್ನು ರವಾನಿಸಿದವು. ಈ ಮೂಲಕ ಭಾರತ ವಾಸ್ತವವನ್ನರಿತು, ಸ್ಪಷ್ಟ ನಿಲುವುಗಳೊಂದಿಗೆ, ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿತು. ಮೋದಿ ತಮ್ಮ ಸರಣಿ ವಿದೇಶ ಪ್ರವಾಸಗಳ ಮೂಲಕ ಅಮೆರಿಕ, ಇಸ್ರೇಲ್, ಯುಕೆ, ಫ್ರಾನ್ಸ್, ಜಪಾನ್ ಜೊತೆಗೆ ಭಾರತದ ಬಾಂಧವ್ಯ ಗಟ್ಟಿಗೊಳಿಸಿದ್ದು ಇದೀಗ ಪಾಕಿಸ್ತಾನದೊಂದಿಗಿನ ಹುಸಿಕದನದಲ್ಲಿ ಭಾರತದ ವಾದಕ್ಕೆ ಪುಷ್ಟಿತಂದಿದೆ.

ಉಳಿದಂತೆ, ಹಗರಣ ರಹಿತ ಆಡಳಿತ ನೀಡಿದ್ದು, ಇಂಧನ, ಆಹಾರ, ಕೈಗಾರಿಕೆ, ತೆರಿಗೆ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಜನಪ್ರಿಯ ಯೋಜನೆಗಳನ್ನು, ಸುಧಾರಣೆಯನ್ನು ತಂದಿದ್ದು ಹೆಗ್ಗಳಿಕೆಯಾದರೆ, ನಿರೀಕ್ಷೆಯ ಭಾರವನ್ನು ಹೊರುವಲ್ಲಿ ಸರ್ಕಾರ ಸೋತಿದೆ ಎಂಬುದೂ ನಿಜ. ‘ಮೇಕ್ ಇನ್ ಇಂಡಿಯಾ’ ಅಂದುಕೊಂಡ ಮಟ್ಟಿಗೆ ಯಶ ಕಾಣಲಿಲ್ಲ, ಉದ್ಯೋಗ ಸೃಷ್ಟಿಸಲಿಲ್ಲ. ಕಾಳಧನದ ಬಗ್ಗೆ ಬಹುವಾಗಿ ಮಾತನಾಡಿದ್ದ ಮೋದಿ, ಅದನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ನಾಲ್ಕು ಹೆಜ್ಜೆ ಇರಿಸಲು ಸಾಧ್ಯವಾಗಿಲ್ಲ. ನಿಜ, ನೋಟ್ ಬ್ಯಾನ್ ನಂತಹ ಕ್ಲಿಷ್ಟಕರ ಆದರೆ ಜನಪ್ರಿಯ ಯೋಜನೆಗೆ ಸರ್ಕಾರ ಕೈ ಹಾಕಿತಾದರೂ, ಅದರಿಂದ ದೇಶಕ್ಕಾದ ಲಾಭ ಸ್ಪಷ್ಟವಾಗಿ ಗೋಚರಿಸಲಿಲ್ಲ. ಬಹುಮತದ ಸರ್ಕಾರವೊಂದು ತರಬಹುದಾಗಿದ್ದ ಸಣ್ಣಪುಟ್ಟ ಆರ್ಥಿಕ, ಕಾನೂನಾತ್ಮಕ ಸುಧಾರಣೆಗಳನ್ನು ತರುವಲ್ಲಿ ಮೋದಿ ಸರ್ಕಾರ ಮನಸ್ಸು ಮಾಡಲಿಲ್ಲ. ಐದು ವರ್ಷದ ಅವಧಿಯಲ್ಲಿ ಮೋದಿ ಸರ್ಕಾರ ಬಹುತೇಕ ಏಕವ್ಯಕ್ತಿ ಪ್ರದರ್ಶನದಂತೆಯೇ ಕಂಡಿತು. ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ ಅನುಭವ ಗಳಿಸಿಕೊಂಡಿದ್ದ ಕೆಲವು ಹಿರಿಯ ಸಚಿವರು ಹೆಚ್ಚೇನನ್ನೂ ಮಾಡಲಾಗದೇ ಅಶಕ್ತರಂತೆ ಕಂಡಿದ್ದು ಸೋಜಿಗ. ಅದಕ್ಕೆ ಮೋದಿ ತಮ್ಮ ಸಂಪುಟ ಸಹೋದ್ಯೋಗಿಗಳ ಮೇಲೆ ಹೊಂದಿರುವ ಹೆಚ್ಚಿನ ಹಿಡಿತ ಕಾರಣವಿರಬಹುದು.

ಅದೇನೇ ಇರಲಿ, ಹಾಗಾದರೆ 2019ರ ಚುನಾವಣೆಯನ್ನು ಹೇಗೆ ನೋಡಬೇಕು? ಸ್ಪರ್ಧೆ ಹೇಗಿದ್ದೀತು? ಈಗಾಗಲೇ ಚುನಾವಣೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಸ್ಪಷ್ಟವಾಗಿದೆ. ಒಂದೆಡೆ ಕಾಂಗ್ರೆಸ್ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನದ ಹೆಸರಿನಲ್ಲಿ ಕೈ ಹಿಡಿದು ನಿಂತಿವೆ. ಆದರೆ ಮೋದಿ ಎದುರು ಸ್ಥಿರವಾಗಿ ನಿಂತು ಮೈತ್ರಿ ಪಕ್ಷಗಳನ್ನು ಮುನ್ನಡೆಸಬಲ್ಲ ನಾಯಕ ಕಾಣುತ್ತಿಲ್ಲ.

ಪಿ.ವಿ.ನರಸಿಂಹರಾವ್ ನಂತರ ಶರದ್ ಪವಾರ್ ನಾಯಕನ ರೀತಿ ಕಂಡಿದ್ದರು; ಈಗ ಅವರು ಬದಿಗೆ ಸರಿದಾಗಿದೆ. ನಂತರ ನಿತೀಶ್ ಕುಮಾರ್ ರಾಷ್ಟ್ರ ರಾಜಕಾರಣದ ಪರ್ಯಾಯ ಮುಖವಾಗಿ ಕಂಡಿದ್ದರು; ಇದೀಗ ಅವರು ಎನ್.ಡಿ.ಎ ಭಾಗವಾಗಿ ಮುಂದುವರೆದಿದ್ದಾರೆ. ಮಾಯಾವತಿ, ಅಖಿಲೇಶ್, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ತಮ್ಮ ರಾಜ್ಯಗಳ ಸರಹದ್ದು ದಾಟಿ ಪ್ರಭಾವಿಸುವ ಶಕ್ತಿ ಬೆಳೆಸಿಕೊಂಡಿಲ್ಲ. ಹಜಾರೆ ಚಳವಳಿಯಿಂದ ಟಿಸಿಲೊಡೆದು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ ಆಮ್ ಆದ್ಮಿ ಪಕ್ಷ ಮತ್ತು ಕೇಜ್ರೀವಾಲ್ ತಮ್ಮ ನೆಲೆಯನ್ನು ಬೇರೆಲ್ಲೂ ವಿಸ್ತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಹುಲ್ ಐದು ವರ್ಷದಲ್ಲಿ ತಮ್ಮನ್ನು ಹೆಚ್ಚೇನೂ ತಿದ್ದಿಕೊಂಡಂತೆ ಕಾಣುವುದಿಲ್ಲ. ಅವರ ಮಾತಿನಲ್ಲಿ ದೃಢತೆ ಕಾಣುವುದಿಲ್ಲ, ಆಂಗಿಕ ಕೌಶಲ ಅವರಿಗಿನ್ನೂ ಕರಗತವಾಗಿಲ್ಲ. ಏಕಾಂಗಿಯಾಗಿ ಮೋದಿ ವಿರುದ್ಧ ಪೈಪೋಟಿಗೆ ನಿಲ್ಲಲು ಅವರಿನ್ನೂ ಅಶಕ್ತರೇ. ಹಾಗಾಗಿ ಇದು ಮತ್ತೊಮ್ಮೆ ‘ಮೋದಿ ವರ್ಸಸ್ ಅದರ್ಸ್’ ಚುನಾವಣೆ. ಹೀಗೆ ವ್ಯಕ್ತಿ ಕೇಂದ್ರಿತ ಚುನಾವಣೆ ನಡೆದಾಗ, ಫಲಿತಾಂಶ ಯಾವ ಬದಿಗೆ ವಾಲಿದೆ ಎಂಬುದನ್ನು ಇತಿಹಾಸ ಸ್ಪಷ್ಟವಾಗಿ ಹೇಳುತ್ತಿದೆ.

*ಲೇಖಕರು ಮೂಲತಃ ಮಂಡ್ಯ ಜಿಲ್ಲೆ ಮದ್ದೂರಿನವರು; ಅಮೆರಿಕ ಮೂಲದ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಅಂಕಣಕಾರ, ಸಮಕಾಲೀನ ವಿದ್ಯಮಾನಗಳ ವಿಶ್ಲೇಷಕ. ಪ್ರಸ್ತುತ ಅಮೆರಿಕೆಯಲ್ಲಿ ವಾಸ.

Leave a Reply

Your email address will not be published.