ವ್ಹಾಹ್! ಕಿಂಗ್!

ಮುಂಜಾನೆ-ಸಂಜೆಯ ಈ ಎಡತಾಕುವಿಕೆಗೆ ಕನ್ನಡದಲ್ಲಿ ವಾಯು ವಿಹಾರ, ತಿರುಗಾಟ ಎನ್ನುವ ಸುಂದರ ಪ್ರಯೋಗಗಳಿರುವಾಗ ವಾಕಿಂಗ್ ಎನ್ನುವ ಆಂಗ್ಲ ವ್ಯಾಮೊಹ ಏಕೆ? ಎನ್ನುವುದು ನನ್ನ ತಕರಾರು. `ವಾಕಿಂಗ್’ನಲ್ಲಿ `ಕಿಂಗ್’ ಅಡಗಿ ಕುಳಿತಿರುವುದೇ ಎಲ್ಲರೂ ಈ ವಾಕಿಂಗ್‌ನ ಆಕರ್ಷಣೆಗೊಳಗಾಗಿರುವುದಕ್ಕೆ ಕಾರಣವಿರಬಹುದು ಎಂದು ನನ್ನ ಗುಮಾನಿ.

ಜಿ.ಎನ್.ರಂಗನಾಥ ರಾವ್

ಹೊರಗೆ ಶುಭ್ರ ನೀಲ ಆಕಾಶ. ಹೊತ್ತು ಕಂತುವ ಸಮಯ. ಸೂರ್ಯನಿಗೆ ಇಳಿ ಪ್ರಾಯದ ಪ್ರಖರತೆ. ಗೇಟು ತೆಗೆದು ಇನ್ನೇನು ಬೀದಿಗಿಳಿಯ ಬೇಕು. ಮನೆ ಎದುರಿನ ಮ್ಯಾನ್ ಹೋಲ್ ಉಕ್ಕಿ ಹರಿದು ಪರಿಸರದಲ್ಲಿ ಗಬ್ಬು ನಾತ ಹೊಡೆಯುತ್ತಿದ್ದರೂ ಕಾಂಪೌಂಡಿನೊಳಗಿನ ಮಲ್ಲಿಗೆಯ ಕಂಪು ಮೂಗನ್ನು ಸೆಳೆಯದೇ ಬಿಡಲಿಲ್ಲ. ಜೊತೆಗೆ ಕಣ್ಣಿಗೂ ಆಕರ್ಷಣೆಯಾಗಿ ಗುಲಾಬಿ, ಕೆಂಪು-ನೀಲಿ ಮಿಶ್ರಿತ ಸಂಜೆಮಲ್ಲಿಗೆ. ಇಂದು ಒಂದೈದಾರು ಕಿಲೋಮೀಟರ್ ಆದರೂ ನಡೆಯಬೇಕು ಎಂದು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಾ “ಇಗೋ, ನಾನಿನ್ನು ಬರ‍್ತೇನೆ” ಎಂದು ಹಿಂಬಾಲಿಸಿ ಬಂದ ಹೆಂಡತಿಗೆ ಹೇಳಿ ಗೇಟು ತೆಗೆದೆ.

“ಬೇಗನೆ ಬನ್ನಿ. ಸಂಜೆ ಎಂಟರವರೆಗೂ ಮಾಗಿಯ ಇಬ್ಬನಿಯಲ್ಲಿ ತೊಯ್ದುಕೊಂಡು ರಾತ್ರಿಯೆಲ್ಲ ಕೆಮ್ಮುತ್ತಿರಬೇಡಿ” ಎಂದ ಹೆಂಡತಿ ನಯವಾಗಿಯೇ ಗದರಿಕೆಯ ಪ್ರೀತಿಯನ್ನು ಅರುಹಿದಳು.   

“ಹೌದು, ಮೊನ್ನೆ ತಾನೆ ಎರಡು ಪುಪ್ಪುಸಗಳಿಗೂ ಡ್ರೈ ಕ್ಲೀನ್ ಆಗಿದೆ. ಮತ್ತೆ ಧೂಳುಹತ್ತಿಸಿಕೊಂಡು ಬರಬೇಡ”

-ಮೇಲಿನಿಂದಲೇ ಮಗರಾಯ ಅಪ್ಪಣೆ ಕೊಡಿಸಿದ.

ಆದದ್ದು ಇಷ್ಟೇ. ಫಿಲ್ಮ್ ಫೆಸ್ಟಿವಲ್ ವರದಿ ಮಾಡಲು ಸಂಪಾದಕರು ಕಲ್ಕತ್ತೆಗೆ ಕಳುಹಿಸಿದ್ದರು. ಎರಡು ವಾರಗಳ ಕಾಲ ಕಲ್ಲತ್ತೆಯಲ್ಲಿದ್ದು ವಾಪಸು ಬಂದಾಗ ಎಡೆಬಿಡದ ಕೆಮ್ಮು. ರಾತ್ರಿ ಉಸಿರಾಡುವುದಕ್ಕೂ ಕಷ್ಟವಾದಾಗ ನರ್ಸಿಂಗ್ ಹೋಮಿಗೆ ದಾಖಲು ಮಾಡಿದರು. ವೈದ್ಯರು ಎಕ್ಸರೇ ನೋಡುತ್ತಾ, ಕಲ್ಕತ್ತೆಗೆ ಹೋಗಿ ಬಂದಿದ್ದನ್ನ ಕೇಳಿ, “ಎರಡು ಶ್ವಾಸ ಕೋಶಗಳಲ್ಲೂ ಎರಡೆರಡು ಕೆ.ಜಿ.ಕಲ್ಕತ್ತೆಯ ಧೂಳು ತುಂಬಿಕೊಂಡಿದೆ. ಎರಡು ದಿನ ಇದ್ದು ಡ್ರೈಕ್ಲೀನ್ ಮಾಡಿಸಿಕೊಳ್ಳಿ” ಎಂದರು. ಆ ಡಾಕ್ಟ್ರು ನಮ್ಮ ರಾಶಿಯವರ ಗೋತ್ರದವರು.

“ಮನೆಯಲ್ಲಿದ್ದುಕೊಂಡೇ ಮಾತ್ರೆ ನುಂಗಿದರೆ ಆಗದೆ” ಎಂದು ಕೇಳಿಕೊಂಡೆ. “ಇಲ್ಲ, ಮನೆಯ ವಾಷಿಂಗ್ ಮೆಷಿನ್ನಿನಿಂದ ಗುಣವಾಗದ ಕಾಯಿಲೆ ಇದು” ಎಂದರು. ಎರಡು ವರ್ಷದ ಹಿಂದಿನ ಮಾತು ಇದು. ಮಗರಾಯ ಈಗ ಅದನ್ನೇ ಹೇಳಿ ಹಂಗಿಸುತ್ತಿದ್ದಾನೆ. ಪಿಂಚಣಿ ಇತ್ಯಾದಿ ಏನೂ ಸೌಲಭ್ಯವಿಲ್ಲದ ವೃತ್ತಿಯಿಂದ ಬರಿಗೈಯ್ಯಲ್ಲಿ ನಿವೃತ್ತನಾದ ನಂತರ ಮಗನ ಆರೋಗ್ಯ ವಿಮೆಯ ರಕ್ಷಣೆಯಲ್ಲಿರುವ ನಾನು ಮರುಮಾತಾಡದೇ ರಸ್ತೆಗಿಳಿದೆ.

“ಏನಿಲ್ಲವೆಂದರೂ ಈ ದೇಶದಲ್ಲಿ ವ್ಯಂಗ್ಯಕ್ಕೆ ಬರವಿಲ್ಲ” ಎಂದು ಮನದೊಳಗೇ ಗೊಣಗಿಕೊಳ್ಳುತ್ತಾ ಬಲಕ್ಕೆ ತಿರುಗಿ ಮುಖ್ಯ ರಸ್ತೆಗೆ ಬಂದೆ. ಮ್ಯಾನ್‌ಹೋಲಿನಿಂದ ಗಲೀಜು ನೀರು ರಸ್ತೆಗೂ ಹರಿದು ಬಂದು ಒಂದು ಸಣ್ಣ ವೈತರಣಿ ಸೃಷ್ಟಿಯಾಗಿತ್ತು. ಸಣ್ಣಪುಟ್ಟ ಹೈಜಂಪ್-ಲಾಂಗ್ ಜಂಪ್‌ಗಳನ್ನು ಮಾಡಬೇಕಾಯಿತು. ಒಂದು ಕ್ಷಣ ಸಾವರಿಸಿ ನಿಂತು ನಡೆದ ದಾರಿಯ ಹಿಂದಿರುಗಿ ನೋಡಿ, “ನರಕ ದಾಟಿದ್ದಾಯಿತು. ಇನ್ನು ಅಡಿಯ ಮುಂದಿಡೆ ಸ್ವರ್ಗ” ಎಂಬ ಆಶಾಭಾವನೆಯಿಂದ ಮುಂದಕ್ಕೆ ಹೆಜ್ಜೆ ಇಟ್ಟಂತೆ ಎದುರಾದವರು ಹಾಲಿನ ಅಂಗಡಿ ಹನುಮಂತರಾಯರು.

ಪಶುಸಂಗೋನಾ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು ಆ ಇಲಾಖೆಯ ರೂಪಕವೋ ಎಂಬಂತೆ ಜೆರ್ಸಿಗೂಳಿಯ ಹಾಗೆ ಬೆಳೆದಿದ್ದ ರಾಯರು ಇಲಾಖೆಯಲ್ಲಿ ತಮ್ಮ ಸಂಗೋಪನೆಯನ್ನು ಚೆನ್ನಾಗಿಯೇ ಮಾಡಿಕೊಂಡಿದ್ದರು. ನಿವೃತ್ತಿ ವೇಳೆಗೆ ನಾಲ್ಕೈದು ಆಕಳುಗಳನ್ನು ಸಾಕಿಕೊಂಡು ಮನೆಯನ್ನು ಪುಟ್ಟ ಡೈರಿಯಾಗಿ ಪರಿವರ್ತಿಸಿದ್ದರು. ನಿವೃತ್ತಿಯ ನಂತರ ಹೈನುಗಾರಿಕೆಯೇ ಅವರಿಗೆ ಪೂರ್ಣ ವೃತ್ತಿಯಾದಂತಿತ್ತು.

ಹನುಮಂತರಾಯರು ಲಂಕೆಗೆ ಹಾರುವ ರಾಮಭಕ್ತನ ಮಾದರಿಯಲ್ಲಿ ಅಡ್ಡಪಂಚೆಯನ್ನೇ ಎತ್ತಿಕಟ್ಟಿ ನಮ್ಮ ಬಡಾವಣೆಯ ವೈತರಣಿಯ ಸೀಮೋಲ್ಲಂಘನ ಮಾಡಲು ಸಿದ್ಧವಾಗಿ ನಿಂತವರೇ ನನ್ನನ್ನು ಕಂಡು,

“ಏನು ರಾಯರು ವಾಕಿಂಗ್ ಹೊರಟದ್ದೋ” ಎಂದರು.

ನನ್ನ ಉತ್ತರಕ್ಕೂ ಕಾಯದೇ, “ನಾನಿನ್ನು ಬರುವೆ ಗೋಗ್ರಾಸ ತರುವುದಿದೆ” ಎಂದು ಒಂದು ಕೈಯ್ಯಲ್ಲಿ ಬೂಸಾ ಚೀಲವನ್ನೂ ಮತ್ತೊಂದು ಕೈಯ್ಯಲ್ಲಿ ಎತ್ತಿಕಟ್ಟಿದ ಪಂಚೆಯನ್ನೂ ಬ್ಯಾಲೆನ್ಸ್ ಮಾಡುತ್ತಾ ಚಂಗನೆ ನೆಗೆದು ದೃಷ್ಟಿಯಿಂದ ದೂರವಾದರು.

ನನ್ನ ಏಕಾಗ್ರ‍್ರತೆಗೆ ಭಂಗವುಂಟಾಗಿ ನಾನು ಒಂದೆರಡು ನಿಮಿಷ ಅವಾಕ್ಕಾಗಿ ನಿಂತೆ. ಸಂಜೆಯ ಈ ತಿರುಗಾಟ ನನಗೆ ಸ್ವರ್ಗವಿಹಾರವಲ್ಲವಾದರೂ ಒಂದು ಬಗೆಯ ಮನೋವಿಹಾರ. ವಾಕಿಂಗ್ ಎಂದು ಹೊರಬಂದ ಕೂಡಲೇ ನನ್ನ ಮನಸ್ಸು ಗರಿಗೆದರುತ್ತದೆ. ಈ ಮನೋವಿಹಾರದ ಮೊದಲ ಮೆಟ್ಟಿಲಲ್ಲಿರುವಾಗಲೇ, ಹನುಮಂತರಾಯರ `ವಾಕಿಂಗ್ ಹೊರಟದ್ದೋ’ ಎನ್ನುವ ಮಾತು ಕಿವಿಗೆ ಅಪ್ಪಳಿಸಿ ನನ್ನನ್ನು ವಿಚಲಿತನನ್ನಾಗಿಸಿತು. ವ್ಯಾಯಾಮ ಎನ್ನಿ, ವಿಹಾರ ಎನ್ನಿ, ಅದು ಏನೇ ಇರಲಿ, ಮುಂಜಾನೆ-ಸಂಜೆಯ ಈ ಎಡತಾಕುವಿಕೆಗೆ ಕನ್ನಡದಲ್ಲಿ ವಾಯು ವಿಹಾರ, ತಿರುಗಾಟ ಎನ್ನುವ ಸುಂದರ ಪ್ರಯೋಗಗಳಿರುವಾಗ ವಾಕಿಂಗ್ ಎನ್ನುವ ಆಂಗ್ಲ ವ್ಯಾಮೊಹ ಏಕೆ? ಎನ್ನುವುದು ನನ್ನ ತಕರಾರು. `ವಾಕಿಂಗ್’ನಲ್ಲಿ `ಕಿಂಗ್’ ಅಡಗಿ ಕುಳಿತಿರುವುದೇ ಎಲ್ಲರೂ ಈ ವಾಕಿಂಗ್‌ನ ಆಕರ್ಷಣೆಗೊಳಗಾಗಿರುವುದಕ್ಕೆ ಕಾರಣವಿರಬಹುದು ಎಂದು ನನ್ನ ಗುಮಾನಿ.

ನೂರಾರು ವರ್ಷಗಳಿಂದ ತುಳಿಸಿಕೊಂಡು, ಕೊನೆಗೆ ಸೂರ್ಯ ಮುಳುಗದ ಸಾಮ್ರಾಜ್ಯದ ಕಿಂಗ್‌ಗಳಿಂದ  ಸ್ವಾತಂತ್ರ್ಯ ಪಡೆದ ನಂತರವೂ ಜನಗಣ ನಾಯಕರೆಂಬ `ಮಹಾನ್ ಕಿಂಗ್’ಗಳಿಗೆ ಅಡಿಯಾಳಾಗಿ ದುಡಿಯುವ ಹಣೆಬರಹದಿಂದ ಮುಕ್ತಿ ಇಲ್ಲ ಎಂಬ ಕಟುಸತ್ಯ ತಿಳಿದೇ ಮಂದಿ ವಾಕಿಂಗ್‌ನಲ್ಲಾದರೂ `ಕಿಂಗ್’ ಆಗಿ ಮೆರೆಯುವ ಸುಪ್ತ ಕಾಮನೆಯನ್ನು ಈಡೇರಿಸಿಕೊಳ್ಳುತ್ತಿರಬಹುದೇನೋ?

ನನ್ನೊಳಗೂ ಇದ್ದ ಇಂಥ `ಕಿಂಗ್’ ಆಗುವ ಸುಪ್ತ ಬಯಕೆ ಈಡೇರದೇಹೋದದ್ದೂ ನಾನು ಈ ವಾಕಿಂಗ್ ಪ್ರಯೋಗ ವಿರೋಧಿಸಲು ಕಾರಣವಿದ್ದೀತು ಎಂದು ನನ್ನೊಳಗಣ ಮನೋವಿಹಾರಿ ವಿಮರ್ಶಕ ಆಗ ನೆನಪಿಸಿದ್ದುಂಟು. ಕಿಂಗ್ ಆಗಬೇಕೆಂಬ ನನ್ನ ಮಹದಾಕಾಂಕ್ಷೆಗೆ ಶಾಲೆಯ ದಿನಗಳಲ್ಲೇ ತಣ್ಣೀರೆರೆಚಿದವರು ನಮ್ಮ ಕನ್ನಡ ಪಂಡಿತರು. ಮುಂದಿನ ಬೆಂಚಿನಲ್ಲಿ ಕುಳಿತಿದ್ದ ನನ್ನನ್ನು ಕಂಡವರೇ,

“ಏಯ್ ಗೆಣೇಮರ ನಿನಗೇನಾಗಿದೆ ಧಾಡಿ. ಹಿಂದಿರುವವರು ಮುಂದೆ ಬರಬೇಕು” ಎಂದು ನನ್ನನ್ನು ಕೊನೆಯ ಬೆಂಚಿಗೆ ಅಟ್ಟಿದರು. ಹೀಗಾಗಿ ಆ ದಿನವೇ ಮುಂದೆ ಮೆರೆಯುವ ನನ್ನ ಬಯಕೆಯನ್ನು ಸುಪ್ತದ ಆಳಕ್ಕೆ ತಳ್ಳಿ ಬಿಟ್ಟೆ-ಬೇತಾಳವನ್ನು ಪಾಳು ಬಾವಿಗೆ ನೂಕುವಂತೆ.

ನನ್ನ ಹೈಸ್ಕೂಲ್ ಸಹಪಾಠಿ ಶಂಭುವನ್ನು ಜ್ಞಾಪಿಸಿಕೊಳ್ಳದೇ ಈ ವಾಕಿಂಗ್ ಹಿನ್ನೆಲೆ ಪೂರ್ತಿಗೊಳ್ಳುವುದಿಲ್ಲ. ಶಂಭುವಿನ ಪಾಲಿಗೆ ವಾಕಿಂಗ್ ಎಂಬುದು `ವಾಲ್ಕಿಂಗ್’. ಅದು ಸರಿಯಾದ ಉಚ್ಚಾರಣೆಯಲ್ಲ, ವಾಕಿಂಗ್ ನಲ್ಲಿ `ಎಲ್’ ಸೈಲೆಂಟ್ ಅಲ್ವೇನೋ ಅಂದರೆ ಅವನು ಒಪ್ಪುತ್ತಿರಲಿಲ್ಲ. `ಎಲ್’ ಸೈಲೆಂಟ್ ಇರಬಹುದು, ಆದರೆ ನಾವೇಕೆ ಸೈಲೆಂಟ್ ಆಗಿರಬೇಕು ಎಂಬುದು ಅವನ ವಾದ. ಅವನ ಪ್ರಕಾರ `ವಾಲ್ ಕಿಂಗ್’ ಆಗಿಯಾದರೂ ಮೆರೆಯೋಣ ಎಂದು ಒಂದು ದಿನ ಸುಪ್ತ ಪಾತಾಳ ಸೇರಿದ್ದ ನನ್ನ ಮಹದಾಕಾಂಕ್ಷೆ ಮೇಲೆ ಬಂದು ತಲೆ ಎತ್ತಿತು.

ಅಂದರೆ ನನ್ನದೊಂದು ಸುಂದರ ತಸ್ವೀರು ನನ್ನ `ಅರಮನೆಯ’ ದಿವಾನ್‌ಖಾನೆಯ ಗೋಡೆಯ ಮೇಲಾದರೂ ರಾರಾಜಿಸಬೇಕು. ಅದು ಕಪ್ಪು-ಬಿಳುಪು ಫೋಟೋ ಆಗಿಬಾರದು. ಅದು ರಾಜಮಹಾರಾಜರ ಪೈಂಟಿಂಗ್‌ಗಳಂತೆಯೇ ಬಹುವರ್ಣದ ಭವ್ಯ ಚಿತ್ರಗಾಗಿರಬೇಕು. ಕನ್ನಡ ಪಂಡಿತರು ಹೇಳಿದಂತೆ ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ರಾಜ. ಈ ಪ್ರಜಾರಾಜನ ತಸ್ವೀರು ಭವ್ಯ ಭಾರತದ ಎಲ್ಲ ಪ್ರಜಾರಾಜರ ಅರಮನೆಯ ಗೋಡೆಗಳ ಸುವರ್ಣ ಚೌಕಟ್ಟನೊಳಗೆ ಕಂಗೊಳಿಸಬೇಕು. ನೋಡಿದವರು ‘ವ್ಹಾಹ್! ಕಿಂಗ್’ ಎನ್ನುವಂತಿರಬೇಕು.

ಈ ಆಸೆಯನ್ನು ಹತ್ತಿಕ್ಕಲಾಗದೆ ಕರ್ನಾಟಕದ ರೆಂಬ್ರಾಂಟ್, ಪಿಕಾಸೋ ಎಂದೆಲ್ಲ ಚಿಕ್ಕ ವಯಸ್ಸಿಗೇ ಪ್ರಖ್ಯಾತನಾಗಿದ್ದ ಕಲಾವಿದ ಗೆಳೆಯ ಇಂದ್ರನಾಥನ ಮುಂದೆ ನನ್ನ ಮಹದಾಸೆಯನನ್ನು ತೋಡಿಕೊಂಡೆ. “ನನ್ನದೊಂದು ಪ್ರೊಟ್ರಾಯ್ಟ್ ಅನ್ನು ಪೈಂಟಿಸಿಕೊಡು ಗೆಳೆಯಾ, ನಿನಗೆ ಆಜನ್ಮ ಕೃತಜ್ಞನಾಗಿರುವೆ” ಎಂದು ಬಿನ್ನವಿಸಿಕೊಂಡೆ. ಗೆಳೆಯ ಒಪ್ಪಿಕೊಂಡ.

“ಎಂಥಾದ್ದು, ತೈಲವರ್ಣವೋ, ಜಲವರ್ಣವೋ” ಎಂದು ಇಂದ್ರನಾಥನ ಪ್ರಶ್ನೆ. ಯಾವುದೋ ಒಂದು, ಪ್ರಜಾ ರಾಜಕುಮಾರನಂತೆ (ಪ್ರಿನ್ಸ್ ಆಫ್ ರಿಪಬ್ಲಿಕ್) ಝಗಮಗಿಸುತಿರಬೇಕು ಎಂದು ನನ್ನ ಆಸೆ ಬಾಯ್ದೆರಿಯಿತು. ಅಷ್ಟರಲ್ಲಿ ಹಳೆಯ ಗೆಳೆಯ ಶಂಭು ಮೂಗು ತೂರಿಸಿದ. “ತೈಲ ವರ್ಣ ಬೇಡ. ನಿನ್ನ ಮುಖ ಯಾವಾಗಲೂ ಕೈಯ್ಯೆಣ್ಣೆ ಕುಡಿದವರಂತೆಯೇ ಇರುತ್ತದೆ. ಅದರ ಮೇಲೆ ಇನ್ನಷ್ಟು ತೈಲ ಬೇಡ. ಜಲವರ್ಣದಲ್ಲಿ ಬರೆಸು” ಎಂದು ಬಾಣ ಬಿಟ್ಟ.

ಇಂದ್ರನಾಥನ ಮುಂದೆ ಬೈಠಕ್ ಶುರುವಾಯಿತು. ಮೂರುನಾಲಕ್ಕು ತಿಂಗಳು ಬೆಳಗುಬೈಗು ತಾಸುಗಟ್ಟಲೆ ನನ್ನನ್ನು ಮುಂದೆ ಕೂಡಿಸಿಕೊಂಡು ಬಣ್ಣಗಳ ಕಲಸುಮೇಲೋಗರ ಮಾಡಿ ತಸ್ವೀರು ರಚಿಸಿದ. ನಂತರ ಒಂದು ದಿನ ದಪ್ಪರಟ್ಟಿನ ಸುರುಳಿಯೊಂದನ್ನು ನನ್ನ ಕೈಯ್ಯಲ್ಲಿಟ್ಟು, ಚಿನ್ನದ ಚೌಕಟ್ಟಿನ ಫ್ರೇಮು ಹಾಕಿಸಿಕೊ ಎಂದು ಹೇಳಿ ಮಾಯವಾದ. ಸುರುಳಿ ಬಿಡಿಸಿದರೆ, ಹಲವಾರು ದಿನಗಳಿಂದ ಅನ್ನ ಕಾಣದೆ ಹಸಿವಿನಿಂದ ಕಂಗೆಟ್ಟ ಮುಖ, ಗಂಟಿಕ್ಕಿದ ಹುಬ್ಬು, ಹಣೆಯ ಮೇಲೆ ಗೆಣಸುಗಡ್ಡೆ ಇಟ್ಟಂತೆ ದೊಡ್ಡದೊಂದು ಗಡ್ಡೆ, ಕಣ್ಣು ಮೂಗು ಎಲ್ಲ ಏರಪೇರು! ಭ್ರುಕುಟಿಗಳ ಮಧ್ಯೆ ಗುಪ್ತಾಂಗ ಆನೆಯ ಸೊಂಡಿಲಂತೆ ವಿರಾಜಮಾನವಾಗಿದೆ. ಪ್ರಜಾಪ್ರಭುತ್ವದ ರಾಜಕುವರನ ತಸ್ವೀರೆ ಇದು?

‘’ಏನಯ್ಯ’’ ಎಂದರೆ, ಇಂದ್ರನಾಥ, ‘’ರಾಜಕುಮಾರ ಇದು ನಿನ್ನ ಭಾವಚಿತ್ರ ಎನ್ನುವುದೆ?”

“ಯು ಹ್ಯಾವ್ ನೋ ವಿಷನ್ ಆಫ್ ದಿ ಕಿಂಗ್ ಆಫ್ ಡೆಮೊಕ್ರಸಿ. ಯು ಅರ್ ನಾಟೆ ಎ ವಿಷನರಿ ಆರ್ಟಿಸ್ಟ್” ಎಂದೆಲ್ಲ ನಾನು ಚೀರಾಡಿದಂತೆ, “ನೀನು, ನಿನ್ನ ಡೆಮಾಕ್ರಸಿ ಇರುವುದೇ ಹೀಗೆ” ಎಂದು ಇಂದ್ರನಾಥ ಮಂಗಮಾಯವಾದ. ಇಲ್ಲಿಗೆ `ವಾಲ್‌ಕಿಂಗ್’ ಆಗಿ ಮೆರೆಯುವ ನನ್ನ ಆಸೆಯೂ ಮಣ್ಣುಗೂಡಿಹೋಯಿತು.

ಈ ಪರಿ ಕಿಂಗ್ ಆಗುವ ಆಸೆ ಎಷ್ಟೋ ವರ್ಷಗಳ ಹಿಂದೆ ಸುಪ್ತಮನಸ್ಸಿನ ಪಾತಾಳದಲ್ಲಿ ಹೂತುಹೋದದ್ದು ಈಗ ನಿವೃತ್ತಿಯ ನಂತರ ಮತ್ತೆ ಚಿಗುರೊಡೆದಿದೆ. ಜೊತೆಗೆ ದಿನನಿತ್ಯ ಐದಾರು ಕಿಲೋಮೀಟರ್ ಆದರೂ ನಡೆಯಬೇಕು ಎಂದು ವೈದ್ಯ ಮಿತ್ರರು ನೀಡಿರುವ ಸಲಹೆ ಈ ಚಿಗುರಿಗೆ ನೀರೆರೆದಿದೆ. ಮುಂಜಾನೆ, ಸಂಜೆ ವಾಕಿಂಗ್ ವೇಳೆಯಲ್ಲಿ ನನ್ನ ಹಳೆಯ ಕನಸುಗಳೆಲ್ಲ ಒಂದೊಂದಾಗಿ ಮನೋನಂದನದಲ್ಲಿ ಅಲೆಅಲೆಯಾಗಿ, ಆಕಾಶದಲ್ಲಿ ಹಿಂಜಿದ ಬಿಳಿ ಅರಳೆಯಂತೆ ತೇಲಿ ಬರುತ್ತವೆ.

ಐ.ಎ.ಎಸ್. ಆಫೀಸರ್ ಆಗಿ ಬೆಳಿಗ್ಗೆ, ಸಂಜೆ ಕೆಂಪು ಡವಾಲಿ ಕೈಯೈಲ್ಲಿ ಸಲಾಂ ಹೊಡೆಸಿಕೊಂಡು ಕಾರುಬಾರು ಮಾಡುವ ನನ್ನ ಆಸೆ `ಪುಸ್’ ಎಂದು ಕಮರಿ ಹೋದದ್ದು…

ಪ್ರೊಫೆಸರ್ ಆಗಿ ಹಿಡಿ ಸೊಂಟದ ಬಳುಕುವ ವಯ್ಯಾರಿ ನಳಿನಾಕ್ಷಿ ಮೀನಾಕ್ಷಿ ಜಲಜಾಕ್ಷಿ ಇತ್ಯಾದಿ ಕಾಮಿನಿಯರಿಗೆ ಕನ್ನಡ ಕಾವ್ಯದಲ್ಲಿ ರಸಿಕತೆಯಂಥ ಥೀಸಿಸ್ಸುಗಳಿಗೆ ಗೈಡ್ ಆಗುವ ಹಂಬಲ ಮಣ್ಣುಗೂಡಿದ್ದು…

ಹೀಗೆ ಒಂದೇ ಎರಡೇ ಕನಸುಗಳು, ಸೋತುಸೊರಗಿದ ಕನಸುಗಳು! ವಾಕಿಂಗ್‌ನ, ಅಲ್ಲ ವ್ಹಾ!ಕಿಂಗ್‌ನ ಈ  ನೆನಪುಗಳೆಲ್ಲ ಈಗೇಕೆ ದಿನಂಪ್ರತಿ ಕನ್ನಡಿಯಲ್ಲಿ ಕಂಡಾತನಂತೆ ಹಳಹಳಿಸುತ್ತಿವೆ ಎಂದು ಅವನ್ನೆಲ್ಲ ಮನೋನಂದನದಿಂದ ಕ.ಬು.ಗೆ ಗುಡಿಸಿಹಾಕಿ ನಿರುಂಬಳವಾದೆ ಎಂದುಕೊಳ್ಳುವಷ್ಟರಲ್ಲಿ ಪ್ರತ್ಯಕ್ಷಳಾದಳು ಕಾಮಿನಿ ದೇಸಾಯಿ. ಫ್ರೆಂಚ್ ಭಾಷೆ ಕಲಿಕೆಯ ಮೊದಲ ತರಗತಿಯಲ್ಲಿ ಭೇಟಿಯಾದ ನಾನು ಕಾಮಿನಿ ದೇಸಾಯಿಯನ್ನು ನನ್ನ ಮುಂದಿನ ಕಾದಂಬರಿಯ ನಾಯಕಿಯಾಗಿ ಸಿಂಹಾಸನಾರೋಹಣ ಮಾಡಿಸಿಬಿಟ್ಟಿದ್ದೆ.

ಪ್ರಾಯದ ವರ್ಷಗಳಿಂದ ನನ್ನ ಮನೋಸಿಂಹಾಸನದಲ್ಲಿ ನನ್ನ ಮ್ಯಾಗ್ನಮೋಪಸ್ ಕಾದಂಬರಿಯ ನಾಯಕಿಯಾಗಿ ನೆಲೆಸಿ ಆಸೀನಳಾಗಿದ್ದಳು ಕಾಮಿನಿ ದೇಸಾಯಿ. ಈಗ ನಿವೃತ್ತಿಯಾಯಿತಲ್ಲ, ಈ ಕಾದಂಬರಿ ಬರೆದು ಜಗತ್ ಸಾಹಿತ್ಯದಲ್ಲಿ ಕಾಮಿನಿ ದೇಸಾಯಿಯನ್ನು ಚಿರಂಜೀವಿ ನಾಯಕಿಯನ್ನಾಗಿ ಪ್ರತಿಷ್ಠಾಪಿಸಲು ಇದು ಸುಸಮಯ ಎಂಬ ಆಸೆ, ಕುಂಡಿಲಿನಿ ಜಾಗೃತಿಗೊಂಡಂತೆ ನನ್ನ ಮನೋನಂದನದಲ್ಲಿ ಎದ್ದು ನಿಂತಿತು. ನನ್ನ ನಾಯಕಿ ಕಾಮಿನಿ ದೇಸಾಯಿ ಸುಶಿಕ್ಷಿತ ಸ್ನಾತಕೋತ್ತರ ಕನ್ನಡತಿ. ಆಧುನಿಕ ಮನೋವೃತ್ತಿಯವಳು. ಲಿಬ್ಬಿಗಳಾಗಿಯೇ, ಎಂದರೆ ಶೇ. ಮುವತ್ತು ಪ್ಲಸ್ ಮಹಿಳಾ ಪ್ರಾತಿನಿಧ್ಯಕ್ಕಾಗಿ ಹೋರಾಡುವ ಕ್ರಿಯಾವಾದಿ ಕ್ರಾಂತಿಕಾರಿ ನಾಯಕಿಯಾಗಿ ಕಾಮಿನಿಯನ್ನು ಬಿಂಬಿಸಬೇಕು ಎನ್ನುವ ಸೃಜನಶೀಲ ಆಲೋಚನೆ ಗಾಢವಾಯಿತು. ಬೇಡ, ಲಿಬ್ಬಿಗಳನ್ನಾಗಿ ಬೇಡ. ಕಬ್ಬಿಗಳನ್ನಾಗಿ ಬಿಂಬಿಸು, ನೀನು ಅವಳ ಮಹಾ ಕಾವ್ಯದ ವಿಮರ್ಶಕನಾಗು ಎಂಬ ರಮ್ಯ ಆಲೋಚನೆ ಹಿಂದಿನದನ್ನು ಹಿಂದೆ ತಳ್ಳುವಷ್ಟು ಭಾವಬಲವಾಗಿ ಮೂಡಿಬಂತು…

ಅಷ್ಟರಲ್ಲಿ ಕಿವಿತೂತು ಮಾಡುವಂಥ ಹಾರನ್ ಶಬ್ದ..

ರಿಕ್ಷಾ ರಾಕ್ಷಸನೇ ನಿಲ್ಲಿಸು ನಿನ್ನ ನಾಯ್ಸ್ ಪಲ್ಯೂಷನ್…

ನಾ ಸಹಿಸಲಾರೆ ಈ ಮಾಡರ್ನ್ ಎವಲ್ಯೂಷನ್.

-ಏನಿದು ಪ್ರಾಸದ ಆರ್ಭಟಾನ ಜಾಸ್ತಿ ಆತಲ್ರೀ ಕಾಮಿನಿ, ಅಲ್ಲ ಕಾಮಿನಿ ದಾಸಾಯಿರೇ ಎಂದು ನನ್ನೊಳಗಿನ ವಿಮರ್ಶಕ ಜಾಗೃತನಾಗುವ ವೇಳೆಗೆ ಹಾರನ್ ಶಬ್ದ ನಿಂತು ಕಬ್ಬಿಣದಂಥ ಕೈಯ್ಯೊಂದು ನನ್ನನು ದರದರ ಎಳೆಯಲಾರಂಭಿಸಿತು.

“ನಿಮಗೇನು ಕಿವುಡೇನ್ರೀ… ಎಷ್ಟು ಹಾರನ್ ಹೊಡೆದ್ರೂ ರಸ್ತೆ ಮಧ್ಯೆ ನಿಂತೇ ಇದೀರಿ. ತಲೆ ಕೂದಲು ಬೆಳ್ಳಗಾಗದೆ ಫುಟ್ಪಾತಿನಲ್ಲಿ ನಡೀಬೇಕು ಅನ್ನೋದು ತಿಳೀದ…”

ನಾನೀಗ ಫುಟ್ ಪಾತಿನಲ್ಲಿ ನಿಂತಿದ್ದೆ. ಸುತ್ತ ಒಂದಷ್ಟು ಜನ.

“ಏನಾತು, ಏನಾಯತು ಸಾರ್ ಆಟೋದೋನು ಗುದ್ದಿದನಾ? ಏಯ್ ನಿಲ್ಲಸ್ರೋ ಅವನ್ನ”

-ಎಂದು ನಾನಾ ಧ್ವನಿಗಳ ಸ್ವರಮೇಳ.

“ಇಲ್ಲಪ್ಪ ಆಟೋದೋನ ತಪ್ಪು ಏನಿಲ್ಲ್ಲ. ಈ ಮುದುಕಾನೇ ರಸ್ತೆ ಮಧ್ಯೆ ಹೋಗ್ತಾ ಇದ್ದ”

-ಒಂದು ಭಿನ್ನ ದನಿ.

ನಾನು ಯಾವ ಕುಮುಹೂರ್ತದಲ್ಲಿ ಫುಟ್‌ಪಾತಿನಿಂದ ಮಧ್ಯ ರಸ್ತೆಗೆ ಬಂದಿದ್ದೆನೋ ಗೊತ್ತಾಗಲಿಲ್ಲ. ಇಲ್ಲ, ಇನ್ನು ಮುಂದೆ ವಾಕಿಂಗ್ ಹೋಗುವಾಗ ಮನೋವಿಹಾರ ಸಲ್ಲದು. ಯಾವುದಾದರೂ ಹಸಿರು-ಹೂವುಗಳಿಂದ ಕಂಗೊಳಿಸುವ ಉದ್ಯಾನವನವೇ ಮನೋವಿಹಾರಕ್ಕೆ ಲಾಯಕ್ಕಾದ ಸ್ಥಳ ಎನ್ನಿಸಿತು. ಉದ್ಯಾನವನದಲ್ಲಿ ಕುಳಿತು ಯೋಚಿಸಿದರೆ ಕಾಮಿನಿಯ ಪಾತ್ರ ಮೈತುಂಬಿ ಬಂದು ಒಂದು ದಿವ್ಯ ಕಾದಂಬರಿಯಲ್ಲವಾದರೂ ನವ್ಯೋತ್ತರ ಭವ್ಯ ಕಾದಂಬರಿಯೊಂದು ಸೃಷ್ಟಿಯಾದೀತು ಎಂದು ಮನದೊಳಗಿನ ಮರಿ ಕನಸೊಂದು ಪಿಸುಗುಟ್ಟಿತು. ಆದರೆ ನಾನಿರೋ ಬಡಾವಣೆ ಇತ್ತೀಚೆಗೆ ಸಾಫ್ಟ್ವೇರ್ ಸೆಂಟರ್ ಎಂದು ಪ್ರಸಿದ್ಧಿಪಡೆದಿದ್ದು ಉದ್ಯಾನವನಕ್ಕೆ ಮಿಸಲಾಗಿದ್ದ ಜಾಗಗಳೆಲ್ಲ ಸಾಫ್ಟ್ ವೇರ್ ಗಳಿಗಾಗಿ ಕಾಂಕ್ರೀಟ್ ಕಟ್ಟಡಗಳಾಗಿ ರೂಪಾಂತರ ಹೊಂದಿವೆ. ಸಾಫ್ಟ್ ವೇರ್ ಗಳ ಜೊತೆ ಪಬ್ಬುಗಳು, ದೋಸೆ ಕ್ಯಾಂಪುಗಳು, ದೇಶವಿದೇಶಗಳ ಮಲ್ಟೀ ಕ್ಯುಸಿನ್ ಹೊಟೆಲುಗಳು ಧಾರಾಳವಾಗಿ ತಲೆಎತ್ತಿ ಮೆರೆಯುತ್ತಿವೆ.

ಫುಟ್‌ಪಾತಿನಲ್ಲಿ ಹೀಗೆ ಆಲೋಚನೆಗಳ ಸುಳಿಯಲ್ಲಿ ಸಿಕ್ಕಿ ದಾರಿ ಕಾಣದಂತಾಯಿತು. ಮುಂದೇನು ದಾರಿ? ಕಾರೊಂದರ ಹೆಡ್ ಲೈಟುಗಳ ಢಾಳ ಬೆಳಕು ಕಣ್ಣುಕುಕ್ಕಿ ಕಕ್ಕಾ-ಬಿಕ್ಕಿಯಾದೆ. ಕಾರೆಂಬ ನವ ಶ್ರೀಮಂತಿಕೆ ಸ್ಟೇಟಸ್ ಶನಿ ತೊಲಗಿದ ನಂತರ ಫುಟ್ ಪಾತಿನ ಮೂಲೆಗೆ ಬಂದು ನಿಂತೆ. ಕಾರು ಕಂಡ ಕೂಡಲೇ ನಮ್ಮ ದೊಡ್ಡ ವಿಮರ್ಶಕ ಜಿ.ಎಸ್.ಆಮೂರರ ಮಾತು ನೆನೆಪಿಗೆ ಬಂತು. ಇತ್ತೀಚೆಗೆ ಅವರು ಧಾರವಾಡದ ಒಂದು ರಸ್ತೇಲಿ ನಡ್ಕೋತಾ ಹೋಗ್ತಿದ್ದಾಗ ಕಾರೊಂದು ಅವರ ಪಕ್ಕದಲ್ಲಿ ಬಂದು ನಿಂತಿತಂತೆ.

ಕಾರಿನ ಕಿಟಕಿಯೊಳಗಿಂದ ತಲೆಹೊರಹಾಕಿದ ಅವರ ಶಿಷ್ಯನೊಬ್ಬ ಗುರುವಂದನಾ ಮಾಡಿ, “ಹೊಸ ಕಾರು ತಗೊಂಡೀನ್ರೀ ಸರ” ಎಂದನಂತೆ. “ಚಲೋ ಆತು ಈಗ ಎಲ್ಲಿ ಹೊಂಟೀಯ” ಎಂದು ಗುರುಗಳು ಕೇಳಿದಾಗ “ಹರ‍್ಕಟ್‌ಗ ಸರ” ಎಂದನಂತೆ. ನಡೆದು ಹೋಗಬಹುದಾದ ದೂರಕ್ಕೆ ಕಾರೇ! ಎಂದು ಆಮೂರರು ಮೂಕವಿಸ್ಮಿತರಾಗಿರಬೇಕು. ಹಜಾಮತಿಗೂ ಕಾರು ಬೇಕು. ಕಾರು ಕೊಳ್ಳಲು ಯಾರ ಹಜಾಮತಿಯೋ?

ಛೇ…ಛೇ… ಅಡ್ಡಮಾತಾಗಿ ಕಾರು ಹೀಗೆ ನನ್ನ ಕಾಮಿನಿ ಥಾಟ್‌ಗೆ ಡಿಕ್ಕಿ ಹೊಡೆದು ಕಾದಂಬರಿಯ ಫಾರಮ್ಮೇ ಡೀಫಾರಮ್ಮಾಗಿ ಹೋಯಿತಲ್ಲ! ಅದಕ್ಕೆ ಉದ್ಯಾನವನದಲ್ಲಿ ಕುಳಿತೋ ಅಡ್ಡಾಡ್ತಲೋ ಮನೋವಿಹಾರ ನಡೆಸಿದರೆ ಢೀಫಾರಮ್ ಅವಘಡಗಳಾಗುವುದಿಲ್ಲ ಎಂದು ಯೋಚಿಸುತ್ತಿರುವಾಗಲೇ ಧ್ವನಿಯೊಂದು ಎಚ್ಚರಿಸಿತು-

“ಸರ್, ಸ್ವಲ್ಪ ಈ ಕಡೆ ಸರೀತೀರ…”

“ಯಾರಪ್ಪ ನೀನೂ, ನಾನಿಲ್ಲಿ ನಿಂತಿರೋದರಿಂದ ನಿಂಗೇನು ತೊಂದರೆ…”

“ಇದು ನಾನು ಪಾನಿಪೂರಿ ಗಾಡಿ ನಿಲ್ಸೋ ಜಾಗ ಸಾರ್..”

“ಇದು ಫುಟ್ ಪಾತ್… ಇಲ್ಲಿ ಹೇಗೆ?”

“ಅದೆಲ್ಲ ಬೇಡಿ ಸಾರ್ ಮಾಮೂಲಿ ಕೊಟ್ಟು ಈ ಜಾಗ ಬಂದೋಬಸ್ತ್ ಮಾಡಿಸಿಕೊಂಡಿದೀನಿ”

-ಎಂದ ಕರಿಲುಂಗಿ ಮೇಲೆ ಬಿಳಿ ಸ್ಯಾಂಡೂ ಬನೀನು ತೊಟ್ಟಿದ್ದ ಪೊತ್ತೆ ಮೀಸೆಯ ಪಾನಿಪೂರಿವಾಲ.

ನಾನು ಇನ್ನು ಅಲ್ಲಿ ನಿಲ್ಲುವುದು ತರವಲ್ಲ ಎನ್ನಿಸಿ ರಿಸ್ಟ್ ವಾಚ್ ನೋಡಿದೆ. ಸಂಜೆ ಏಳೂವರೆ. ಹಾಫ್ ಪ್ಯಾಂಟಿನ ಹುಡುಗಿಯರು, ಜೀನ್ಸ್ ಪ್ಯಾಂಟಿನ ಪೌಗಂಡರುಗಳ `ತೇಲಿ ಬರುವ ಜಾಸ್ ಗಾನ ನಮ್ಮ ಕುಣತಕಲ್ಲವೇನ” ಎಂಬ ಉತ್ಸಾಹ ಭರಪೂರ ಹರಿಯಲಾರಂಭಿಸಿತ್ತು. ಈ ಉತ್ಸಾಹ, ಉನ್ಮಾದಕ್ಕೆ ತಿರುಗುವ ಮುನ್ನ ಮನೆ ಸೇರಿಕೊಳ್ಳುವದು ಕ್ಷೇಮ ಎಂದು ಅಲ್ಲಿಂದ ಕಾಲು ತೆಗೆಯುವ ಮುನ್ನ ಈ ಹಾಫ್ ಪ್ಯಾಂಟ್ ಪೋರಿಯರ ಮಧ್ಯೆ ನನ್ನ ಕಥಾ ನಾಯಕಿಯನ್ನು ಕಲ್ಪಿಸಿಕೊಳ್ಳತ್ತಾ ನಿಂತೆ.

*’ತಾಯಿನಾಡು’ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಲೇಖಕರ ವೃತ್ತಿ ಜೀವನದ ಆರಂಭ. ‘ಪ್ರಜಾವಾಣಿ’ ಬಳಗದಲ್ಲಿ 34 ವರ್ಷಗಳ ಸೇವೆ ನಂತರ ನಿವೃತ್ತರಾಗಿ ಬೋಧನೆ, ಅಂಕಣ ಬರಹದಲ್ಲಿ ನಿರತರು. 

 

 

Leave a Reply

Your email address will not be published.