ಶಕ್ತಿಯೋತ್ಪನ್ನ ಪರ್ಯಾಯಗಳು

ಡಾ.ವೆಂಕಟಯ್ಯ ಅಪ್ಪಗೆರೆ

ಪ್ರಕೃತಿಯ ಪ್ರಕೋಪಗಳನ್ನು ಕೂಡಾ ವಿಜ್ಞಾನದ ಮೂಲಕ ವರವಾಗಿ ಪರಿವರ್ತಿಸಿಕೊಳ್ಳಬಹುದು!

1976-77 ಅವಧಿ. ನಾನು ಗ್ರಾಮೀಣ ಬ್ಯಾಂಕ್ ಅಧಿಕಾರಿಯಾಗಿ ಕಂಪ್ಲಿಯಲ್ಲಿದ್ದೆ. ಸಾಂದರ್ಭಿಕವಾಗಿ ಅಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದೆ. ಅರೆಯುವ ಯಂತ್ರಗಳಿಂದ ಹೊರಬರುವ ಬೃಹತ್ ಪ್ರಮಾಣದ ಕಬ್ಬಿನ ರಸ ಸುಮಾರು ಇಪ್ಪತ್ತು ಅಡಿ ಎತ್ತರದಿಂದ ಕೆಳಗಿನ ದೊಡ್ಡ ಹಂಡೆ (ಕಡಾಯಿ)ಗೆ ಬೀಳುವುದು ನಂತರ ಅದನ್ನು ಕಾಯಿಸಿ ಸಕ್ಕರೆಮಾಡುವ ದೃಶ್ಯ ನೋಡಿದೆ. ವೃಥಾ ಅದನ್ನು ನೇರವಾಗಿ ಸಕ್ಕರೆ ಪಾಕಕ್ಕೆ ಕಳಿಸುವ ಮುನ್ನ ಕೆಳಗೆ ಜೆನರೇಟರ್ ಅಳವಡಿಸಿ ಅದರ ಮೇಲೆ ಹೆಚ್ಚಿನ ಸಾಂದ್ರತೆಯ ಕಬ್ಬಿನರಸ ಬೀಳುವಂತೆ ಮಾಡಿ ಕರೆಂಟ್ ತಯಾರಿಸಬಹುದು. ಕೊನೇಪಕ್ಷ ಕಾರ್ಖಾನೆ ಪೂರ್ತಿಗಾದರೂ ಬಳಕೆಗಾದರೂ ಬರುತ್ತದೆಯಲ್ಲ ಎಂಬ ಸಹಜ ವೈಜ್ಞಾನಿಕ ಚಿಂತನೆಯನ್ನು ಅಲ್ಲಿನ ತಂತ್ರಜ್ಞರಲ್ಲಿ ಹಂಚಿಕೊಂಡೆ. ಅದು ನನ್ನಂತಹ 24 ವರ್ಷಗಳ ಕಿರಿಯನೊಬ್ಬನ ಬಾಲಿಶ ಅನಿಸಿಕೆಯೆಂಬ ತಾತ್ಸಾರದಲ್ಲಿ ಯಾರೂ ಕಿವಿಗೊಡಲಿಲ್ಲ.

ಮೂಲತಃ ವಿಜ್ಞಾನದ ವಿದ್ಯಾರ್ಥಿಯಾದ ನನ್ನಲ್ಲಿ ಅದು ಕಾಡುತ್ತಿತ್ತು. ಮುಂದೆ ಎರಡು ದಶಕಗಳ ನಂತರ 1997 ರಲ್ಲಿ ನಾನು ಹರಪನಹಳ್ಳಿಗೆ ಬ್ಯಾಂಕಿನ ಏರಿಯಾಮ್ಯಾನೇಜರ್ ಆಗಿ ಹೋದಾಗ ಅಲ್ಲಿನ ದುಗ್ಗಾವತಿ ಶಾಮನೂರು ಷುಗರ್ಸ್ ಕಾರ್ಖಾನೆಯನ್ನು ಸಂದರ್ಶಿಸುವ ಅವಕಾಶ ದೊರೆಯಿತು. ಅದು ಮೂರು ಉತ್ಪನ್ನಗಳ ಸಂಯುಕ್ತತೆ ಅಂದರೆ ಕರೆಂಟ್, ಸಕ್ಕರೆ ಮತ್ತು ಸಕ್ಕರೆ ತಯಾರಿಕೆ ನಂತರ ತ್ಯಾಜ್ಯವಾಗಿ ಉಳಿಯುವ ಮೊಲಾಸಿಸ್ನಿಂದ ಮದ್ಯಸಾರಗಳನ್ನು ತಯಾರಿಸುವ ತ್ರಿವಳಿ ಕೈಗಾರಿಕೋದ್ಯಮ. ನನಗೆ ಪರಮಾನಂದವಾಯಿತು. ನನ್ನ ಅನಿಸಿಕೆ ಅನುಷ್ಠಾನವಾಗಿತ್ತು.

ಇನ್ನೊಮ್ಮೆ ನಾನು ಹೊಸಪೇಟೆಯಲ್ಲಿದ್ದಾಗ ಟಿ.ಬಿ.ಡ್ಯಾಮಿನಲ್ಲಿ ಶೇಖರವಾಗಿದ್ದ ಅಗಾಧ ಹೂಳಿ(ಸಿಲ್ಟ್) ಬಗ್ಗೆ ಸಂಬಂಧಪಟ್ಟ ರೈತನಾಯಕರ ಜೊತೆ ಚರ್ಚಿಸಿದ್ದೆ. ಹಳೆಮೈಸೂರು ಭಾಗದಲ್ಲಿ ಬೇಸಿಗೆಯಲ್ಲಿ ಕೆರೆಯ ಹೂಳು (ಗೋಡುಮಣ್ಣು) ತೆಗೆದು ತಮ್ಮ ಹೊಲಗದ್ದೆಗಳಿಗೆ ಬಳಸಿಕೊಳ್ಳುವ ಪದ್ಧತಿ ಬಗ್ಗೆ ವಿವರಿಸಿ ಜಲಾಶಯದ ಹೂಳನ್ನು ರೈತರು ಬಳಸಿಕೊಳ್ಳುವ ಬಗ್ಗೆ ತಿಳಿಸಿದಾಗ ಎಲ್ಲರೂ ಅಪ್ರಯೋಗಿಕ ಸಲಹೆಯೆಂದು ಮೂದಲಿಸಿದರು. ಆದರೆ ಜಪಾನ್ ದೇಶದವರು ಸದರಿ ಹೂಳನ್ನು ತಮ್ಮ ದೇಶಕ್ಕೆ ಹಡಗಿನಲ್ಲಿ ತೆಗೆದುಕೊಂಡು ಹೋಗಿ ಬಳಸಿಕೊಳ್ಳುವ ಬಗ್ಗೆ ಆಸಕ್ತಿ ತೋರಿದರು. ಒಂದು ದೇಶದ ಫಲವತ್ತತೆಯನ್ನು ಇನ್ನೊಂದು ದೇಶಕ್ಕೆ ವರ್ಗಾಯಿಸಲಾಗದು ಎಂಬ ರಾಷ್ಟ್ರೀಯ ನೀತಿಯ ಅನುಸಾರ ಅದನ್ನು ನಿರಾಕರಿಸಲಾಯಿತು.

ಇನ್ನು ಮರದ ವಿಚಾರಕ್ಕೆ ಬರೋಣ. ಸುಮಾರು 200 ಅಡಿಗಳ ಎತ್ತರದಲ್ಲಿರುವ ಮರಕ್ಕೆ ಭೂತಳದ ಬೇರುಗಳಿಂದ ಅದ್ಹೇಗೆ ನೀರು ಪೌಷ್ಟಿಕಾಂಶಗಳು ಎಲೆಗಳಿಗೆ ಪಂಪ್ ಆಗುತ್ತವೆ? ಕೇವಲ ಇಪ್ಪತ್ತು ಅಡಿ ಆಳದಿಂದ ಬಾವಿನೀರನ್ನು ವಿದ್ಯುತ್ ಯಂತ್ರಗಳಿಂದ ಎತ್ತಬೇಕೆಂದರೆ ಎಷ್ಟು ದುಬಾರಿ ಖರ್ಚು, ಯಂತ್ರಗಳ ದುರಸ್ತಿ, ವಿದ್ಯುತ್ ಕಡಿತ ಒಂದೇ ಎರಡೆ. ನಮ್ಮ ಕಣ್ಣೆದುರೆ ನೈಸರ್ಗಿಕವಾಗಿ ಯಾವ ಯಂತ್ರಗಳಿಲ್ಲದೆ ದುಬಾರಿ ವಿದ್ಯುತ್ಬಳಕೆಯಿಲ್ಲದೆ ಅದ್ಯಾವ ಶಕ್ತಿಯಿಂದ ನೀರೆತ್ತಲಾಗುವುದು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದರೆ ಸಂಶೋಧನ ಫಲ ದೊರೆತು ಪರ್ಯಾಯ ಶಕ್ತಿಯ

ಆವಿಷ್ಕಾರವಾಗುವುದು.

ವಿಜ್ಞಾನದ ಪರಿಭಾಷೆಯಲ್ಲಿ ಮೇಲ್ಮೈ ಆಕರ್ಷಣೆ (ಸರ್ಫೇಸ್ ಟೆನ್ಸನ್); ಸೂಕ್ಷ್ಮವಾಹಿನಿ (ಕ್ಯಾಪಿಲ್ಲರಿ ಸಿಸ್ಟಂ) ಮತ್ತು ಸೂಕ್ಷ್ಮ ರಂಧ್ರ (ಪೋರ್ಸ್)ಗಳ ವೈಜ್ಞಾನಿಕ ತಂತ್ರಗಳು ಸಹಜಕ್ರಿಯೆಗಳಂತೆ ಸಂಯುಕ್ತವಾಗಿ ಜರುಗುತ್ತವೆ. ಯಾವುದೇ ಬಾಹ್ಯಶಕ್ತಿ ವಿನಿಯೋಗವಾಗದೆ ಸ್ವಯಂಭು (ಆಟೊಮೊಟೀವ್) ಉತ್ಪನ್ನವಾಗುವ ಶಕ್ತಿಯನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳಬಹುದು. ಇದರಿಂದ ಕೃಷಿ, ಕೈಗಾರಿಕೆ ಮುಂತಾದ ಅನೇಕಾನೇಕ ಕ್ಷೇತ್ರಗಳಲ್ಲಿ ವ್ಯಾಪಕ ಬಳಕೆ ಮಾಡಿಕೊಳ್ಳಬಹುದು. ದಿಶೆಯಲ್ಲಿ ಮಣ್ಣಿನಲ್ಲಿರುವ ಅಲ್ಪಪ್ರಮಾಣದ ತೇವಾಂಶವನ್ನೆ ಬೇರಿನ ಸೂಕ್ಷ್ಮ ತಂತು  ಮೂಲಕ ಹೀರಿ ದ್ವಿಗುಣ  ಗೊಳಿಸಿಕೊಳ್ಳುವ ನೈಸರ್ಗಿಕ ತಂತ್ರಜ್ಞಾನವನ್ನೇ ಮತ್ತೊಂದು ಹೆಜ್ಜೆ ಮುಂದೆಹೋಗಿ ಇಸ್ರೇಲ್ ದೇಶದವರು ವಾತಾವರಣದ ತೇವಾಂಶವನ್ನೇ ಹೀರಿಕೊಳ್ಳುವ ತೇವಾಂಶ ತಂತ್ರಗಾರಿಕೆ ಯನ್ನು ಕೃಷಿಕ್ಷೇತ್ರದಲ್ಲಿ ಆವಿಷ್ಕರಿಸಿ ಅದನ್ನು ಯಶಸ್ವಿಯಾಗಿ ಅಳವಡಿಸಿಕೊಂಡು ಅದ್ಭುತ ಸಾಧನೆಗೈದಿದ್ದಾರೆ.

ಮೇಲೆ ಉಲ್ಲೇಖಿತ ಪರ್ಯಾಯ ಶಕ್ತಿಯೋತ್ಪನ್ನಗಳಲ್ಲದೆ ಇನ್ನಿತರೆ ಪರ್ಯಾಯಗಳ ಬಗ್ಗೆ ಪರಾಂಬರಿಸೋಣ. ರಸ್ತೆ ಅದರಲ್ಲೂ ಹೆದ್ದಾರಿಗಳಲ್ಲಿ ದಿನನಿತ್ಯ ಅಸಂಖ್ಯಾತ ವಾಹನಗಳು ಎಡೆಬಿಡದೆ ಭರದಿಂದ ಸಾಗುತ್ತವೆ. ಮೇಲ್ಸೇತುವೆ ಕೆಳಸೇತುವೆಗಳಲ್ಲಿ ಚಲಿಸುವಾಗ ಮತ್ತು ಆಯ್ದ ಸ್ಥಳಗಳಲ್ಲಿ ರಸ್ತೆಕೆಳಗೆ ಜನರೇಟರ್ ಅಳವಡಿಸಿ ಚಲನೆ ಮತ್ತು ಶಬ್ದ ವೇಗದ ಶಕ್ತಿಗಳನ್ನು (iಟಿeiಛಿ ಚಿಟಿಜ oiಛಿe ಇಟಿeಡಿgಥಿ) ಸೂಕ್ತ ತಂತ್ರಜ್ಞಾನ ಬಳಸಿ ತಯಾರಿಸ ಬಹುದು. ಅಗಾಧವಾದ ಶಕ್ತಿ ಉತ್ಪತ್ತಿಯಾಗುತ್ತದೆ. ಇದಕಿಂತಲೂ ಮತ್ತೂ ಹೆಚ್ಚಿನ ಶಕ್ತಿಯನ್ನು ಸಮುದ್ರದ ಅಲೆಗಳಿಗೆ ಜನರೇಟರ್ ಅಳವಡಿಸಿ ಶಕ್ತಿಉತ್ಪಾದಿಸಬಹುದು. ಅದರಂತೆ ಗುಡುಗು ಸಿಡಿಲು ಉಲ್ಕಾಪಾತ, ಹಿಮಪಾತ, ಚಂಡಮಾರುತ/ತೂಫಾನ್ಗಳಿಂದಲೂ ಸಮುದ್ರದ ಬಾಡಾಗ್ನಿದಾವಾಗ್ನಿಯಿಂದಲೂ ಹೆಚ್ಚಿನ ಪ್ರಮಾಣದ ಶಕ್ತಿಯೋತ್ಪನ್ನವನ್ನು ಸಾಧಿಸಬಹುದು. ಮತ್ತಷ್ಟು ಅಗಾಧವಾದ ಶಕ್ತಿಯನ್ನು ಜ್ವಾಲಾಮುಖಿಅಗ್ನಿಸ್ಫೋಟಗಳಿಂದಲೂ ಸೂಕ್ತ ಗ್ರಿಡ್ ತಂತ್ರಜ್ಞಾನ ಬಳಸಿ ಪಡೆಯಬಹುದು. ಸಮಷ್ಟಿಯಲ್ಲಿ ಹೇಳುವುದಾದರೆ ಪ್ರಕೃತಿಯ ಪ್ರಕೋಪಗಳನ್ನು ವಿಜ್ಞಾನದ ಮೂಲಕ ವರವಾಗಿ ಪರಿವರ್ತಿಸಿಕೊಳ್ಳಬಹುದು.

Leave a Reply

Your email address will not be published.