ಶರೀಫರ ಗೀತೆಗಳಲ್ಲಿ ಸಾಮಾಜಿಕ ತುಡಿತ

– ಡಾ.ಸಂಗಮೇಶ ತಮ್ಮನಗೌಡ್ರ

ಶರೀಫರು ಸಂತರಲ್ಲಿ ಸಂತನಾಗಿ ಮದವನ್ನು ಮೆಟ್ಟಿ ನಿಲ್ಲುವ ಹಾಗೆ ಗುಟ್ಟಿನ ಕಿವಿ ಮಾತುಗಳಂತೆ ತತ್ತ್ವಪದಗಳನ್ನು ರಚಿಸಿದರು. ಆ ಪದಗಳ ಸಾಲುಗಳಲ್ಲಿನ ಸಾಮಾಜಿಕ ತುಡಿತಗಳನ್ನು ಹೆಕ್ಕುವ ಪ್ರಯತ್ನ ಇಲ್ಲಿದೆ.

ಬಹುಧರ್ಮ ಬಹುಜನರ ನೆಲೆಯಾದ ಸಮಾಜವು ಸಾಮರಸ್ಯವಿಲ್ಲದೆ ನೆಮ್ಮದಿಯನ್ನು ಕಾಣದು. ನಿತ್ಯ ಬದುಕಿನಲ್ಲಿ ವ್ಯಕ್ತಿ, ವ್ಯಕ್ತಿಗಳ ಹೊಂದಾಣಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಡೆಯಬಾರದ್ದೆಲ್ಲಾ ನಡೆದು ಬಿಡುತ್ತವೆ. ಸೂಕ್ಷ್ಮಮತಿತ್ವದಲ್ಲಿ ಆಧ್ಯಾತ್ಮದ ಲೇಪ ಬೆರೆಸಿ ಶಿಶುನಾಳ ಶರೀಫರು ತಮ್ಮ ಗೀತೆಗಳನ್ನು ಹೊಸೆದರು.

ಡಾಂಭಿಕಭಕ್ತಿಯ ವಿಡಂಬನೆ

ವಿಡಂಬನೆಯು ಒಂದು ಶುದ್ಧ ಸಮಾಜ ನಿರ್ಮಾಣಕ್ಕೆ ಅಸ್ತ್ರವಿದ್ದಂತೆ. ‘ಬೈದು ಹೇಳಿದವರು ಬುದ್ಧಿ ಹೇಳಿದರು’ ಎಂಬ ಮಾತು ಇಂದಿಗೂ ಸಮಾಜೋಪಯಾಗಿ ನಿಂತಿವೆ. ವೇದಕಾಲದಿಂದಲೇ ಜಾತಿಯ ಜಾಡ್ಯ ಹೆಮ್ಮರವಾಗಿ ಬೆಳೆದು ನಿಂತಿತು. ಎಲ್ಲರ ಮೈರಕ್ತ ಕೆಂಪಗೇ ಇದ್ದರೂ ಕೆಲವರು ಅಮೃತ ಸಂಜೀವಿನಿ ಕುಡಿದು ದೇವಲೋಕದಿಂದ ಇಳಿದು ಬಂದವರಂತೆ ವರ್ತಿಸುತ್ತಾರೆ. ಕೆಲವರು ಪಾತಾಳಕ್ಕೆ ಕುಸಿದವರಂತೆ ಕಣ್ಣೀರಿಡುತ್ತಾರೆ. ಇಂಥ ಜಾತಿ ಗೊಡ್ಡಾಟದ ಜನರಿಗೆ ಶರೀಫರ ತತ್ತ್ವಪದಗಳ ಸಾಲು ಚಾಟಿಯೇಟಿನ ಮೊನಚು ಬಾಣದಂತಿವೆ.

ತೊಗಲ ಮಲಿಯ ಹಾಲು ಕುಡಿದು ದೊಡ್ಡವರಾಗಿ
ಶೀಲ ಮಾಡತೀರ ನಾಡೆಲ್ಲಾ !
ತೊಗಲ ಆಟ ತಿಳಿಯದೋ ತಮ್ಮಾ !!

ರಕ್ತ, ನರ ಮಾಂಸಗಳೊಂದಿಗಿನ ಚರ್ಮದ ಹೊದಿಕೆಯ ಈ ಶರೀರವು ಬದುಕು ಕಳೆಯಲು ದೀರ್ಘಾಯುಷ್ಯವನ್ನು ಪಡೆದುಕೊಂಡು ಬಂದಿಲ್ಲ. ಅಲ್ಪಾಯುಷ್ಯದ ಈ ಬದುಕಿನಲ್ಲಿಯೂ ನೆಮ್ಮದಿಯಿಲ್ಲದೆ ಸಾಯುವುದ್ಯಾಕೆ? ನಾವು ಕೀಳರಿಮೆಯನ್ನು ಬಿಟ್ಟು ವಿಶಾಲ ಹೃದಯಿಗಳಾಗಿ ಜೀವಿಸಬೇಕಾಗಿದೆ.

ಭಕ್ತಿಯ ಆಚರಣೆಯನ್ನು ಬಹುಜನರು ಮಾಡುತ್ತಾರಾದರೂ ಅಲ್ಲಿ ಡಂಭಾಚಾರ ಬಹಳ. ಗಂಧ, ವಿಭೂತಿ, ರುದ್ರಾಕ್ಷಿ ಲಿಂಗಧಾರಣೆ, ಜನಿವಾರ, ಗಂಟೆ, ಜಾಗಟೆ ಹೂವು, ಧೂಪ, ದೀಪ, ಕರ್ಪೂರ… ಒಂದೇ? ಎರಡೇ? ಏನೆಲ್ಲಾ ಮೇಳವಿಸಿಕೊಂಡು ಜೀವಿಸುವಂತಹ ಬಹುಜನರನ್ನು ಶಿಶುನಾಳ ಶರೀಫರು ಖಂಡಿಸುತ್ತಾರೆ.

ಜಪತಪ ಎಂದು ಸಂನ್ಯಾಸಿಯಾಗುತ್ತಿ
ಬೂದಿಯೆಲ್ಲಾ ಮೈಯಿಗೆ ಪೂಸಿ
ಶಿವಶಿವ ಎಂದು ಶಿವಧ್ಯಾನ ನಡಸತಿ
ತೊಗಲ ಮ್ಯಾಲ ಕೂತು ಜಪ ಎಣಿಸಿ

ಆಚರಣೆಯಿರಲಿ, ಅಜ್ಞಾನಂಧಾನುಕರಣೆ ಬೇಡ; ಭಕ್ತಿಯಿರಲಿ, ಮೌಢ್ಯ ಬೇಡ; ಜಪತಪವಿರಲಿ ಅನಿಷ್ಠ ಬೇಡವೆಂಬ ಕಿವಿಮಾತನ್ನು ಶರೀಫರು ಹೇಳುತ್ತಾರೆ.

ಮೂಢನಂಬಿಕೆ ಕುರಿತ ಸಾಲುಗಳು

ಹೆಂಡತಿಯೆಂಬುವವಳು ದುಡಿಯುವ ಗಾಣದ ಎತ್ತಲ್ಲ, ಮಕ್ಕಳನ್ನು ಹೆರುವ ಯಂತ್ರವಲ್ಲ, ಆಕೆಯಲ್ಲಿ ತ್ಯಾಗವಿದೆ, ದಿವ್ಯಶಕ್ತಿಯಿದೆಯೆಂದು ಶರೀಫರು ಹೇಳುತ್ತಾರೆ. ಆಕೆಯನ್ನು ಬರೀ ಕಾಮದ ವಸ್ತುವಾಗಿ ಬಳಸಿಕೊಳ್ಳಬೇಡಿರೆನ್ನುತ್ತಾರೆ.

ಮಗಳೆಂದೆನಿಸಿದ ನನ್ನ ಹೇಣ್ತಿ ತುತ್ತು ನೀಡಿ
ಎನ್ನೆತ್ತಿ ಆಡಿಸಿದ ಹೆತ್ತವ್ವನೆನಿಸಿದಿ ನನ್ನ ಹೆಣ್ತಿ
ಚಿಕ್ಕಮ್ಮನ ಸರೀನೀ ನನ್ನ ಹೆಣ್ತಿ ನನಗ
ತಕ್ಕವೆಳೆನಿಸಿದೆ ನನ್ನ ಹೆಣ್ತಿ

ಶರೀಫರು ತಮ್ಮ ಹೆಂಡತಿಯಲ್ಲಿ ತಾಯಿ, ಮಗಳು, ಚಿಗವ್ವನ ವಿವಿಧ ರೂಪಗಳನ್ನು ಕಾಣುತ್ತಾರೆ. ಹೆಂಡತಿಯಾದವಳು ಜೀವನದುದ್ದಕ್ಕೂ ವಿವಿಧ ಪಾತ್ರಗಳನ್ನು ನಿಭಾಯಿಸಿ ಒಂದು ಸಂಸಾರವನ್ನು ಉದ್ಧರಿಸುತ್ತಾಳೆ.

ಸಮಾಜದಲ್ಲಿರುವ ಬಹುಜನರು ಅಂಧಶೃದ್ಧೆ ಮೂಢನಂಬಿಕೆಯ ಮೇಲೆಯೇ ಬದುಕಿದ್ದಾರೆ ಅಜ್ಞಾನದಲ್ಲಿ ತೊಳಲಾಡುತ್ತಿದ್ದಾರೆ. ಶರೀಫರು ಮುಸ್ಲಿಂ ಧರ್ಮದಲ್ಲಿ ಹುಟ್ಟಿದರೂ ಮುಸ್ಲಿಂ ಧವರ್iವನ್ನು ಧಿಕ್ಕರಿಸಿ ಹೊರಬಂದ ದಿವ್ಯ ಸಂತರಾಗಿದ್ದಾರೆ.

ಬಲ್ಲವರಾದರೆ ತಿಳಿದು ಹೇಳಿರಿ
ಮುಲ್ಲಾನ ಮಸೀದಿ ಎಲ್ಲಿತ್ತೋ
ಗುಲ್ಲುಮಾಡಿ ಗುದ್ದಾಡಿ ಅಲಾವಿಗೆ
ಬೆಲ್ಲ ಓದಿಸುವುದೆಲ್ಲಿತ್ತೋ

ಮೊಹರಂ ಹಬ್ಬದಲ್ಲಿ ಸಕ್ಕರಿ ಹಂಚುತ್ತಾರೆ. ಬೆಲ್ಲದ ಸವಿಯಂತೆ ಬದುಕುವುದನ್ನು ಕಲಿತಿಲ್ಲ. ಟಗರು ಕೊಂಡು ಮಾಂಸತಿಂದು ‘ಅಲ್ಲಾ’ ಎಂದು ಹೇಳುವುದರಲ್ಲಿ ಅರ್ಥವಿಲ್ಲವೆಂದು ಶರೀಫರು ಹೇಳುತ್ತಾರೆ. ಅಂತಹ ಆಚರಣೆಯನ್ನು ಖಂಡಿಸುತ್ತಾರೆ.

ಶರೀಫರ ಗೀತೆಗಳಲ್ಲಿ ಕಾರ್ಯನಿಷ್ಠೆ

ಬೈಬಲ್ಲಿನಲ್ಲಿ ‘ನಿನ್ನ ಪಾಲಿನ ಅನ್ನವನ್ನು ನಿನ್ನ ಬೆವರಿನಲ್ಲಿ ಕಾಣು’ ಎಂಬ ಮಾತಿದೆ. ಬಸವಣ್ಣನು ತನ್ನ ವಚನದಲ್ಲಿ ‘ಕಾಯಕವೇ ಕೈಲಾಸ’ ಎಂದಿದ್ದಾನೆ. ಕಾಯಾ, ವಾಚಾ, ಮನಸಾ ಮಾನವನು ದುಡಿಯಬೇಕೆಂದು ಶಿಶುನಾಳ ಶರೀಫರು ಹೇಳುತ್ತಾರೆ. ದುಡಿದು ಸನ್ಮಾರ್ಗದಲ್ಲಿ ಬದುಕಿದರೆ ಅದೇ ದೇವರಿಗೆ ಅರ್ಪಿತವೆಂದು ಹೇಳುತ್ತಾರೆ.

ಕುಡುಗೋಲು ಹಿಡಿದು ಕೂಲಿ ಮಾಡಿ
ತುಂಬಿಸಬೇಕೋ ಈ ಚೀಲಾ
ಒಂದರ ಘಳಿಗೀ ಅನ್ನವಿಲ್ಲದಿರೆ
ಸೈಲ ಬೀಳತೈತೊ ತೂಗತಾ

ತುತ್ತಿನ ಚೀಲ ತುಂಬಿಸಬೇಕಾದರೆ ಕೂಲಿ ಕುಂಬಳಿಯನ್ನಾದರೂ ಮಾಡಬೇಕು. ಪ್ರತಿಯೊಬ್ಬರೂ ದುಡಿದೇ ಉಣ್ಣಬೇಕು. ಮತ್ತೊಬ್ಬರ ದುಡಿದ ಹಂಗಿನಕೂಳು ತಿನ್ನುವ ಪರಿಸ್ಥಿತಿಯಲ್ಲಿ ಜೀವಿಸಬಾರದು. ದುಡಿದು ಉಂಡರೆ ಬ್ರಹ್ಮನಿಗೂ ಅಂಜಬೇಕಿಲ್ಲ. ವಿಕಾರ ಮನಸ್ಸಿನಲ್ಲಿ ಜೀವಿಸುವುದು ಅಪಾಯಕಾರಿ ಪ್ರಯತ್ನ. ಮನಸ್ಸಿನ ಹತೋಟಿಯಿದ್ದಷ್ಟೂ ವ್ಯಕ್ತಿಯು ತಪ್ಪುಗಳನ್ನು ಕಡಿಮೆ ಮಾಡುತ್ತಾನೆ. ಹರಿಯುವ ಮನಸ್ಸನ್ನು ಭಕ್ತಿಯ ಓಘದತ್ತ ಹೊರಳಿಸಬೇಕಾದರೆ ಅಲ್ಲಿ ಸದ್ಭಾವನೆಯು ಸಹಜವಾಗಿ ಅರಳುತ್ತದೆ. ಶರೀಫರು ಹೀಗಾಗಿ ಮನಸ್ಸಿಗೆ ಬುದ್ಧಿ ಹೇಳುವ ಸಲುವಾಗಿಯೇ ‘ತರವಲ್ಲ ತಗೀ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ’ ಎಂದು ಹೇಳುತ್ತಾರೆ.

ಜಂಗಮ ಜಂಗುಕಟ್ಟಿ
ಹಿಂಗದೇ ತಿರುಗಲು
ಸಂಗನ ಶರಣರಿಗೇನು ಫಲ?

ಮಂಗನಂತೆ ಅರ್ಥವಿಲ್ಲದೆ ಲಿಂಗಪೂಜೆ ಮಾಡಿದರೆ ಅದರಿಂದ ಪ್ರಯೋಜನವೇನೂ ಇಲ್ಲ. ಬೋರ್ಗಲ್ಲ ಮೇಲೆ ನೀರು ಹೊಯ್ದಂತೆ ಆಗುತ್ತದೆ. ಭಕ್ತಿಶುದ್ಧಿಯಿಲ್ಲದ ಮನಸ್ಸು ಇದ್ದು ಇಲ್ಲದಂತೆ ಎಂದು ಶರೀಫರು ಹೇಳುತ್ತಾರೆ. ಹೀಗಾಗಿ ಮನಸ್ಸಿನ ಹತೋಟಿಯಲ್ಲಿ ನಮ್ಮ ನಿತ್ಯ ಬುದುಕು ಸಾಗಬೇಕೆನ್ನುತ್ತಾರೆ.

ವೇಶ್ಯಾವೃತ್ತಿ ಖಂಡನೆ

ವೇಶ್ಯಾವೃತ್ತಿಯು ಮಾನವ ಸಮಾಜಕ್ಕಂಟಿದ ಬಹುಡೊಡ್ಡ ಕಳಂಕವಾಗಿದೆ. ಇಂತಹ ಅಮಾನವೀಯ ವೃತ್ತಿಯನ್ನು ಶರೀಫರು ಖಂಡಿಸುತ್ತಾರೆ.

ನಿದ್ದೆಯೆಂಬ ನಿಜ ಹಾದರಗಿತ್ತಿ
ಬುದ್ಧಿಯಿಲ್ಲವೇ ನಿನಗೆ?
ಸೋಗ ಮಾಡುತ ಹ್ಯಾಂಗರ ಬರಲೇ !

‘ಮಾಯೆ’ಯು ಸೂಳೆಯ ಪ್ರತೀಕದಲ್ಲಿದ್ದು, ಈ ಸೂಳೆಯ ಸಂಗ ಮಾಡಬಾರದು ಎಂದು ಶಿಶುನಾಳ ಶರೀಫರು ಸೂಚ್ಯವಾಗಿ ಹೇಳುತ್ತಾರೆ. ಮನಸ್ಸಿನ ಹತೋಟಿಯಿದ್ದರೆ ಅನಾಹುತಗಳು ನಡೆಯುವುದು ತುಂಬಾ ಕಡಿಮೆ. ನಿದ್ದೆಯು ಆಯಾಸ ಕಳೆಯಲು ಇದೆ; ತೊಂದರೆ ಕೊಡುವುದರ ಮೂಲಕ ಆಲಸ್ಯ ಹುಟ್ಟಿಸಲೂ ಕಾರಣವಾಗಿದೆ.

ಹಿಂಸೆ ಮತ್ತು ಅತಿಯಾಸೆ ನಿರ್ಮೂಲನೆ

ಮಾನವ ಜಗತ್ತಿನಲ್ಲಿ ಹಿಂಸಾ ಪ್ರವೃತ್ತಿಯು ಅತ್ಯಂತ ಅಪಾಯಕಾರಿ ಧೋರಣೆಯಾಗಿದೆ. ಮನಸ್ಸನ್ನು ವ್ಯಗ್ರಗೊಳಿಸುವುದಲ್ಲದೇ ಮನೋವಿಕಾರ, ತನುವಿಕಾರಕ್ಕೆ ಕಾರಣವಾಗುತ್ತದೆ. ದೇವರಪೂಜೆಯ ಹೆಸರಿನಲ್ಲಿ ನರಬಲಿ, ಕುರಿ-ಕೋಳಿಯಂತಹ ಹಿಂಸಾರೂಪ ಕ್ರಿಯೆಗಳೂ ನಡೆದಿವೆ. ಆ ಕುರಿತು ಶರೀಫರ ತತ್ತ್ವಪದದ ಸಾಲುಗಳು ಇಂತಿವೆ.

ಕರ್ಮವ ಕುರಿಕೊಯ್ಯಿಸಿ ಅದಕೆ
ಗುರು-ಮಂತ್ರವ ಜಪಿಸಿ
ಅರಿವಿನ ಎಡೆಯನು
ಕರದೊಳು ಪಿಡಿಕೊಂಡು
ಸ್ಥಿರವಾದ ದೇವರು
ಇರುವ ಮಸೀದಿಗೆ

ಗುಡಿ, ಗೋಪುರ, ಮಸೀದಿಗಳಲ್ಲಿ ಪ್ರಾಣಿ, ಪಕ್ಷಿಗಳ ಹಿಂಸೆ ಮಾಡಿ ಬಲಿಕೊಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇಂಥ  ಕು-ಪ್ರವೃತ್ತಿಯಿಂದ ದೇವರ ಒಲುಮೆ ಸಾಧ್ಯವಿಲ್ಲ.

ವ್ಯಕ್ತಿಗೆ  ಆಸೆ ಇರಬೇಕು, ಆದರೆ ದುರಾಸೆಯು ಇರಬಾರದು. ಮಾಡಬಾರದ ಆಸೆ ಮಾಡಿ, ಅನಾಹುತದ ಕೆಲಸ ಮಾಡುತ್ತ ಚಿಂತೆಯ ಸಂತೆಯಲ್ಲಿಯೇ ದಿನ ದೂಡುವಂತಾಗುತ್ತದೆ.

ಯಾರ ಬ್ಯಾಡಂತಾರ ಮಾಡಪ್ಪ ಚಿಂತಿ
ನೀ ಮಾಡುವೆಯಾದರೆ ಮಾಡಪ್ಪ ಚಿಂತಿ!
ಮೇಲ್ ಮಾಳಿಗಿ ಕಟ್ಟಬೇಕಂತೀ
ಆನೆ ಅಂಬಾರಿ ಏರಬೇಕಂತೀ!
ಯಾರ ಬ್ಯಾಂಡಂತಾರ ಮಾಡಪ್ಪ ಚಿಂತಿ
ಕಳಕೊಂಡ ಹುಡುಕಿದರಿಲ್ಲೈತಿ
ಶಿಶುನಾಳಧೀಶ್ವರ ದಯೆಯೊಳಗೈತಿ

ಕೆಲವರು ಹಣ ಮತ್ತು ಇತರೆ ಸಂಪತ್ತನ್ನು ಮಿತಿಮೀರಿ ಗಳಿಸುತ್ತಾರೆ. ಅತಿಯಾಸೆಯ ವ್ಯಾಮೋಹಕ್ಕೆ ಬಿದ್ದು ಅರಿವಿನಿಂದ ದೂರವಿದ್ದು, ಜ್ಞಾನವನ್ನು ತೊರೆದು ಅತ್ಯಂತ ಕನಿಷ್ಠತಮ ಜೀವನ ನಡೆಸುತ್ತಾರೆ. ಅತಿಯಾಸೆ ಗತಿಗೇಡು ಎಂಬಂತೆ ನೆಮ್ಮದಿಯ ಬದಲಾಗಿ ನೋವನ್ನೇ ಹೆಚ್ಚಾಗಿ ಅನುಭವಿಸುತ್ತಾರೆ. ಬದುಕು ನೆಮ್ಮದಿಯಿಂದ ಇರಬೇಕಾದರೆ ಆಡಂಬರವಿಲ್ಲದೆ ಬದುಕಬೇಕೆಂದು ಶರೀಫರು ತಮ್ಮ ತತ್ತ್ವಪದದ ಸಾಲುಗಳಲ್ಲಿ ಹೇಳುತ್ತಾರೆ. ಆಸೆಯೆಂಬುದು ಅರಸರನ್ನೂ ಬಿಟ್ಟಿಲ್ಲ. ಮಾನವ ಜೀವನದಲ್ಲಿ ಗಳಿಸುವ ಆಸೆ ಹೆಚ್ಚಾಗಿ ನೆಮ್ಮದಿಯು ಮರೀಚಿಕೆ.

ಸ್ವಸ್ಥ ಸಮಾಜ ಕಲ್ಪನೆ

ಸಮಾಜ ಸ್ವಸ್ಥವಾಗಿದ್ದರೆ ಸರ್ವರ ಬದುಕು ನೆಮ್ಮದಿಯಿಂದ ಇರುತ್ತದೆ. ಎಂಬ ತತ್ತ್ವದ ಮೇಲೆ ಶಿಶುನಾಳ ಶರೀಫ ಚಿಂತಿಸಿದರು. ಮನಸ್ಸಿನ ಮಡಿ ಮುಖ್ಯವೆಂದು ತಿಳಿದ ಶರೀಫರು ಶುದ್ಧ ಮನಸ್ಸಿನಿಂದ ಜ್ಞಾನಿಗಳಾಗಿರೆಂಬ ಕಿವಿಮಾತು ಹೇಳಿದರು.

ಹೆಣ್ಣು’ ಕಾಮದ ವಸ್ತುವಲ್ಲ. ಸ್ತ್ರೀಕುಲ, ಅಕ್ಕ-ತಂಗಿ, ತಾಯಿ, ದೈವೀಸ್ವರೂಪವೆಂದು ಚಿಂತಿಸಿದರು. ದುಡ್ಡು ಬಲು ಕೆಟ್ಟದ್ದೆಂದು ಅದನ್ನು ಅಷ್ಟಕಷ್ಟೇ ನಂಬಿರೆಂದರು.

ಗುರುವಿನ ಮಾತು ಮೀರದ ಶರೀಫ

ಗುರುಗೋವಿಂದ ಭಟ್ಟರ ಒಂದೊಂದು ಮಾತು ಶರೀಫಗೆ ವೇದವಾಕ್ಯವಾಗಿತ್ತು. ಹೀಗಾಗಿ ಅವರು ದೇಹ ತ್ಯಜಿಸುವಾಗ ಅವರ ಕಫವನ್ನೇ ನುಂಗಿ ಅಮೃತ್ತ್ವದ ಮಹಿಮೆ ಎತ್ತಿ ಹಿಡಿಯಬೇಕಾದರೆ ಗುರುವಿನ ನಿಜಶಕ್ತಿಯು ದೊಡ್ಡದೆಂದು ಚಿಂತಿಸಿದರು. ಚಿನ್ಮಯಾನಂದದ ಚಿರನೂತನದ ಆಶಾವಾದದ ನಿತ್ಯ ಬದುಕಿನಲ್ಲಿ ಗುರುವಿನ ಒಂದೊಂದು ವಾಕ್ಯ ದಿವ್ಯಬೋಧ ಬ್ರಹ್ಮಜ್ಞಾನ ಸ್ವರೂಪವೆಂಬ ಕನಸು ಕಂಡರು. ಯೋಗಿಯ ನಿಜಸ್ವರೂಪವನ್ನು ಕಣ್ಣಾರೆ ಕಂಡು ‘ಸೈ’ ಎನಿಸುವಂತೆ ಬದುಕಿದರು. ನಾವು ಬದುಕುವುದು ಎಷ್ಟು ದಿನವೆಂಬುದು ಮುಖ್ಯವಲ್ಲ. ಅರ್ಥದಿಂದ ಬದುಕುವುದು ಅತೀ ಅವಶ್ಯವೆಂದರು. ವ್ಯರ್ಥವಾದ ಹಾದಿ ತುಳಿದು, ಆತ್ಮತತ್ತ್ವ ಮೀರಿ ನಡೆದು ಪಾಪದ ಕೂಪದಲ್ಲಿ ಬಿದ್ದು ನರಳಾಡಿ ಸಾಯಬೇಡಿರೆಂಬ ಕಿವಿಮಾತನ್ನು ಶಿಶುನಾಳ ಶರೀಫರು ಗುರುವಿನ ಅನುಸಂಧಾನದ ಜ್ಞಾನದ ಬಲದಿಂದಲೇ ಹೇಳಿದರು. ಗುರುವಿನ ಮಹಾನ್‍ಶಕ್ತಿಯ ಅಂಶದಿಂದ ಮಹಾನ್ ವ್ಯಕ್ತಿಯಾಗಿಯೇ ಜೀವಿಸಿದರು!

*ಲೇಖಕರು ಗದಗ ಜಿಲ್ಲೆಯ ನಾಗರಹಳ್ಳಿ ಶಾಲೆಯಲ್ಲಿ ಹೆಡ್ ಮಾಸ್ಟರ್. 91 ಕೃತಿಗಳ ಪ್ರಕಟಣೆ. ಬೇಂದ್ರೆ ವೇದಿಕೆಯ ಸಂಸ್ಥಾಪಕರು. ನಮ್ಮ ಮನೆಯ ಶಾರದೆ ಗ್ರಂಥ ಸಂವರ್ಧನಾ ಯೋಜನೆಯಡಿ ಮನೆಮನೆಗೆ ಗ್ರಂಥ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

One Response to " ಶರೀಫರ ಗೀತೆಗಳಲ್ಲಿ ಸಾಮಾಜಿಕ ತುಡಿತ

- ಡಾ.ಸಂಗಮೇಶ ತಮ್ಮನಗೌಡ್ರ

"

Leave a Reply

Your email address will not be published.